Tag: Food Department

  • ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ

    ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ

    ವಿಜಯಪುರ: ಬಡವರ ಪಾಲಾಗಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಿಜಯಪುರ ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಿಡಗುಂದಿ ರಸ್ತೆ ಬಳಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮನಗೂಳಿ ಪೊಲೀಸರು ಹಾಗೂ ಜಿಲ್ಲಾ ಆಹಾರ ಅಧಿಕಾರಿಗಳು ದಾಳಿ ನಡೆಸಿದ್ದರು. ಲಾರಿ ಸಮೇತ ಅಕ್ರಮ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದಾರೆ.

    ವಾಹನ ಸಂಖ್ಯೆ ಏಂ-29 ಃ-8299 ಮೂಖಾಂತರ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆಕಡೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿ ಲಾರಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು ಅಕ್ಕಿ ಅಂದಾಜು 296 ಕ್ವಿಂಟಲ್ ಇದ್ದು, ಅಂದಾಜು 7,99,000 ರೂ ಮೌಲ್ಯದ್ದಾಗಿದೆ. ಲಾರಿ ಚಾಲಕ ಸದ್ದಾಂ ಜಂಗಿಯನ್ನ ಪೊಲೀಸರು ವಶಕ್ಕೆ ಪಡೆಸಿದ್ದು, ಸದ್ದಾಂ ಮೂಲತಃ ಬಾಗಲಕೋಟ ಜಿಲ್ಲೆಯ ಗದ್ದನಕೇರಿ ನಿವಾಸಿ ತಿಳಿದು ಬಂದಿದೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಗಮನಿಸಿ: ರೇಷನ್ ಕಾರ್ಡಿಗೆ ಆಧಾರ್ ಜೋಡಿಸಲು ಮಾರ್ಚ್ ಅಂತ್ಯದವರೆಗೆ ಗಡುವು ವಿಸ್ತರಣೆ

    ಗಮನಿಸಿ: ರೇಷನ್ ಕಾರ್ಡಿಗೆ ಆಧಾರ್ ಜೋಡಿಸಲು ಮಾರ್ಚ್ ಅಂತ್ಯದವರೆಗೆ ಗಡುವು ವಿಸ್ತರಣೆ

    ಬೆಂಗಳೂರು: ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು ಈ ಹಿಂದೆ ನಿಗದಿ ಪಡಿಸಿದ್ದ (ಇ-ಕೆವೈಸಿ) ಅಂತಿಮ ಅವಧಿಯನ್ನು ವಿಸ್ತರಣೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಚ್ ಅಂತ್ಯದವರೆಗೆ ಹೊಸ ಗಡುವು ನೀಡಿ ಆದೇಶ ನೀಡಿದೆ.

    ಪಡಿತರ ಚೀಟಿಗೆ ಇದುವರೆಗೂ ಆಧಾರ್ ಸಂಖ್ಯೆ ಜೋಡಣೆ ಮಾಡದಿರುವ ಎಲ್ಲಾ ನ್ಯಾಯಬೆಲೆ ಅಂಗಡಿ ವರ್ತಕರು ಅಂಗಡಿಗಳನ್ನು ತೆರೆದು ಇ-ಕೆವೈಸಿಯನ್ನು ಕಡ್ಡಾಯವಾಗಿ ಜ.01 ರಿಂದ 31ರವರೆಗೂ ನಿರ್ವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇ-ಕೆವೈಸಿ ನಿರ್ವಹಿಸಲು ಹೆಚ್ಚುವರಿ ಸರ್ವರ್ ಅವಶ್ಯಕತೆ ಇರುವುದರಿಂದ ತಾತ್ಕಾಲಿಕವಾಗಿ ಜ.7ರವರೆಗೂ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಜ.8ರ ಬಳಿಕ ಮಾರ್ಚ್ ತಿಂಗಳ ಅಂತ್ಯದವರೆಗೂ ಇ-ಕೆವೈಸಿ ಮಾಡಲು ಅವಕಾಶ ನೀಡಿ ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಕಳೆದ 4 ವರ್ಷಗಳ ಹಿಂದೆ ಬೋಗಸ್ ಪಡಿತರ ಚೀಟಿ ತಡೆಯುವ ಸಲುವಾಗಿ ಪರಿಶೀಲನಾ ಕಾರ್ಯವನ್ನು ಸರ್ಕಾರ ನಡೆಸಿತ್ತು. ಆದರೆ ಆಧಾರ್ ಜೋಡಣೆ ನಿಯಮ ಜಾರಿಗೊಂಡ ಬಳಿಕ ಪಡಿತರ ಚೀಟಿ ಪರಿಶೀಲನೆ ಕಾರ್ಯ ಕೈಗೊಂಡಿರಲಿಲ್ಲ. ಸದ್ಯ ಮೃತರ ಹೆಸರಿನಲ್ಲೇ ಇರುವ ಪಡಿತರ ಚೀಟಿಯನ್ನು ಮುಂದುವರಿಸುತ್ತಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ನಿಯಮ ಜಾರಿ ಮಾಡಲಾಗಿದೆ.

    ಪ್ರಕ್ರಿಯೆ ಹೇಗೆ?
    ಇ-ಕೆವೈಸಿ ದೃಢೀಕರಣ ವೇಳೆ ಎಸ್‍ಟಿ ಮತ್ತು ಎಸ್‍ಸಿ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಿದೆ. ಎಲ್ಲಾ ಫಲಾನುಭವಿಗಳು ಗ್ಯಾಸ್ ಸಂಪರ್ಕದ ಕುರಿತು ಮಾಹಿತಿ ನೀಡಬೇಕು. ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ ಮಾಡಿಸಬೇಕು. ಸರ್ಕಾರ ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ.ನಂತೆ, ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇ-ಕೆವೈಸಿ ಮಾಡಿಸಬೇಕು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು.

  • ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ಶಿವಮೊಗ್ಗ: ತಂಪು ಪಾನೀಯದ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದರಲ್ಲಿ ನಡೆದಿದೆ.

    ಇಂದು ಸಂಜೆಯ ವೇಳೆಗೆ ಮೂರು ಮಂದಿ ಗ್ರಾಹಕರ ಗುಂಪೊಂದು ಹೋಟೆಲ್ ಗೆ ತೆರಳಿ ತಂಪು ಪಾನೀಯ ಕುಡಿಯಲು ಹೋಗಿದ್ದಾರೆ. ಹೋಟೆಲ್ ನವರು ತಂಪು ಪಾನೀಯವನ್ನು ನೀಡಿದ್ದಾರೆ. ಈ ವೇಳೆ ಗ್ರಾಹಕ ಸುರೇಂದ್ರ ಎಂಬುವರು ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿದ್ದು ತಂಪು ಪಾನೀಯ ಕುಡಿಯುತ್ತಿದ್ದ ಗ್ರಾಹಕನಿಗೆ ಶಾಕ್ ಆಗಿದೆ.

    ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು.

    ಗ್ರಾಹಕರು ನೀಡಿದ ದೂರಿನ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಅಧಿಕಾರಿ ಡಾ. ಶಮಾ ತಿಳಿಸಿದ್ದಾರೆ.

  • ಸರ್ಕಾರದ ಖಡಕ್ ಎಚ್ಚರಿಕೆಯ ಬೆನ್ನಲ್ಲೇ 2 ಸಾವಿರ ಅಕ್ರಮ ಬಿಪಿಎಲ್ ಕಾರ್ಡ್ ವಾಪಸ್

    ಸರ್ಕಾರದ ಖಡಕ್ ಎಚ್ಚರಿಕೆಯ ಬೆನ್ನಲ್ಲೇ 2 ಸಾವಿರ ಅಕ್ರಮ ಬಿಪಿಎಲ್ ಕಾರ್ಡ್ ವಾಪಸ್

    ಚಿತ್ರದುರ್ಗ: ಸರ್ಕಾರದಿಂದ ಕಡು ಬಡವರಿಗೆ ಎಂದು ನೀಡುತ್ತಿರುವ ಬಿಪಿಎಲ್ ಕಾರ್ಡ್ ಪಡೆದು ಅಕ್ಕಿ, ಬೇಳೆ ಪಡೆಯುತಿದ್ದ ಸಾವಿರಾರು ಜನ ಅಕ್ರಮ ಫಲಾನುಭವಿಗಳು ತಮ್ಮ ಪಡಿತರ ಕಾರ್ಡ್ ಗಳನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ. ಸರ್ಕಾರ ನೀಡಿದ ಖಡಕ್ ಎಚ್ಚರಿಕೆಗೆ ಹೆದರಿದ ಫಲಾನುಭಾವಿಗಳು ಅನಿವಾರ್ಯವಾಗಿ ಆಹಾರ ಇಲಾಖೆಗೆ ಬಂದು ಪಡಿತರ ಚೀಟಿಗಳನ್ನು ವಾಪಸ್ ಮಾಡಿದ್ದಾರೆ.

    ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿ ಪಡೆದ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಸರ್ಕಾರಕ್ಕೆ ಮರಳಿಸಿದರೆ ಉತ್ತಮ. ಇಲ್ಲದೇ ಹೋದಲ್ಲಿ ತಾವು ಪಡಿತರ ಚೀಟಿ ಪಡೆದ ದಿನದಿಂದ ಇಲ್ಲಿಯವರೆಗೂ ಪಡೆದ ಪಡಿತರವನ್ನು, ಹಣದ ರೂಪದಲ್ಲಿ ವಾಪಸ್ ಮರಳಿಸುವುದಲ್ಲದೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ ಎಂದು ಆಹಾರ ಇಲಾಖೆ ಎಚ್ಚರಿಸಿತ್ತು.

    ಈ ಆದೇಶದಿಂದ ಎಚ್ಚತ್ತುಕೊಂಡ ಅಕ್ರಮ ಪಡಿತರ ಕಾರ್ಡ್ ಹೊಂದಿದ್ದ ಚಿತ್ರದುರ್ಗ ಜಿಲ್ಲೆಯ ಹಲವಾರು ಕುಟುಂಬಗಳು ಸುಮಾರು 2,321 ಕಾರ್ಡ್ ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಅದರಲ್ಲಿ 265 ಕಾರ್ಡಗಳನ್ನು ಸ್ವಯಂಪ್ರೇರಿತರಾಗಿ ಕಚೇರಿಗೆ ಬಂದು ಹಿಂತಿರುಗಿಸಿದ್ದು, ಅವರಲ್ಲಿ 148 ಸರ್ಕಾರಿ ನೌಕರರು ಹಾಗೂ ಇತರ ಕಾರಣಗಳಿಂದ ಕಾರ್ಡ್ ಪಡೆದಿದ್ದ 105 ಸೇರಿದಂತೆ ಒಟ್ಟು 265 ಅಕ್ರಮ ಫಲಾನುಭವಿಗಳು ತಮ್ಮ ಪಡಿತರ ಚೀಟಿಯನ್ನು ಸ್ವಯಂ ಪ್ರೇರಣೆಯಿಂದ ವಾಪಸ್ ಮಾಡಿದ್ದಾರೆ.

    ಹಲವು ಜನರ ಬಳಿ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‍ಗಳಿವೆ. ಆದರೆ ಅವು ಇನ್ನು ವಾಪಸಾಗಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಹ ಸುಮ್ಮನೆ ಕುಳಿತಿಲ್ಲ. ಸ್ವಯಂಪ್ರೇರಣೆಯಿಂದ ವಾಪಸ್ ಮಾಡದೇ ಹೋದಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಇಲಾಖೆ ಈಗ ಸಿದ್ಧತೆ ನಡೆಸುತ್ತಿದೆ.

    ಜೊತೆಗೆ ಇ-ಕೆವೈಸಿ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರ ಬಯೋ ಅಥೆಂಟಿಕೇಶನ್ ಮಾಡಲಾಗುತ್ತಿದೆ. ಸದ್ಯಕ್ಕೆ 3,54,143 ಜನಸಂಖ್ಯೆಯಿದ್ದು, 4,11,439 ಒಟ್ಟು ಕಾರ್ಡ್‍ಗಳಿವೆ. ಅದರಲ್ಲಿ 1,24,004 ಇ-ಕೆವೈಸಿ ಬಿಪಿಎಲ್ ಕಾರ್ಡ್‍ಗಳು ಮತ್ತು 6,942 ಎಪಿಎಲ್ ಕಾರ್ಡ್ ಗಳಿವೆ. 1,30,946 ಒಟ್ಟು ಇ-ಕೆವೈಸಿಯಾದ ಕಾರ್ಡ್ ಗಳು ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಅದಷ್ಟು ಬೇಗ ಸಂಬಂಧ ಪಟ್ಟ ಇಲಾಖೆ ಹಿಂತಿರುಗಿಸಬೇಕು. ಇಲ್ಲವಾದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

  • ನಂಜನಗೂಡಿನ ಗೋದಾಮಿಯಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ನಾಪತ್ತೆ

    ನಂಜನಗೂಡಿನ ಗೋದಾಮಿಯಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ನಾಪತ್ತೆ

    ಮೈಸೂರು: ನಂಜನಗೂಡಿನ ಆಹಾರ ಇಲಾಖೆಯ ಗೊದಾಮಿನಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನ ಭಾಗ್ಯ ಅಕ್ಕಿ ನಾಪತ್ತೆಯಾಗಿದೆ.

    ಬೆಂಗಳೂರಿನಿಂದ ಆಹಾರ ಇಲಾಖೆಯ ಗೋದಾಮಿನ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 50 ಕೆ.ಜಿ.ತೂಕದ 2000 ಮೂಟೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ನಂಜನಗೂಡಿನ ಎ.ಪಿ.ಎಂ.ಸಿ. ಆವರಣದಲ್ಲಿರುವ 5 ನೇ ಗೋದಾಮಿನಲ್ಲಿ ಅಕ್ಕಿ ಮೂಟೆ ನಾಪತ್ತೆಯಾಗಿವೆ.

    ನಂಜನಗೂಡು ತಾಲೂಕಿಗೆ ತಿಂಗಳಿಗೆ 22 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಿಡುಗಡೆಯಾಗುತ್ತದೆ. ತಾಲೂಕಿನಲ್ಲಿ ಅಂತ್ಯೋದಯ, ಎಪಿಎಲ್ ಹಾಗೂ ಬಿಪಿಎಲ್ ಸೇರಿದಂತೆ ಒಟ್ಟು 1,06,385 ಪಡಿತರ ಚೀಟಿದಾರರು ಇದ್ದಾರೆ. ಬೆಂಗಳೂರಿನ ಗೊದಾಮಿನಿಂದ ನಂಜನಗೂಡು ಗೊದಾಮಿಗೆ ಬಂದಿರುವ ದಾಖಲೆ ಇದೆ.

    ನಂಜನಗೂಡು ಗೊದಾಮಿನಿಂದ ಎಲ್ಲಿಗೆ ವಿತರಣೆ ಆಗಿದೆ ಎಂಬ ದಾಖಲೆಗಳು ಪರಿಶೀಲನೆ ವೇಳೆ ಸಿಕ್ಕಿಲ್ಲ. ನಾಪತ್ತೆಯಾದ ಅಕ್ಕಿ ಮೂಟೆ ಕುರಿತಂತೆ ಮಾಹಿತಿ ನೀಡುವಲ್ಲಿ ವ್ಯವಸ್ಥಾಪಕ ಮೈಲಾರಯ್ಯ ವಿಫಲರಾಗಿದ್ದಾರೆ. ನಾಪತ್ತೆಯಾದ ಅನ್ನಭಾಗ್ಯ ಅಕ್ಕಿ ಬಗ್ಗೆ ಅಧಿಕಾರಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಸರ್ಕಾರಿ ನೌಕರರೇ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಬೀಳುತ್ತೆ ಭಾರಿ ದಂಡ!

    ಸರ್ಕಾರಿ ನೌಕರರೇ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಬೀಳುತ್ತೆ ಭಾರಿ ದಂಡ!

    ಕಲಬುರಗಿ: ಆಹಾರ ಇಲಾಖೆಯು ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಸರ್ಕಾರಿ ನೌಕರರ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ದಂಡ ವಸೂಲಿ ಮಾಡಿದೆ.

    ಸರ್ಕಾರಿ ನೌಕರರು ವಾಮಮಾರ್ಗ ಬಳಸಿ ಬಿಪಿಎಲ್ ಪಡಿತರ ಪಡೆದುಕೊಂಡರೇ ಎಚ್ಚರದಿಂದಿರಿ. ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರಿಗೆ ಎಚ್ಚರಿಕೆ ಗಂಟೆಯೊಂದನ್ನ ಹೊಡೆದಿತ್ತು. ಇದೀಗ ಇಂತಹ ಪ್ರಕರಣಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರ ಮೇಲೆ ಬ್ರಹ್ಮಾಸ್ತ್ರ ಬೀಸಿದೆ.

    ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಯೋಜನೆಯನ್ನ ಜಾರಿಗೆ ತಂದಿತ್ತು. ಆದರೆ ಈ ಯೋಜನೆ ಅಂದುಕೊಂಡಂತೆ ಜಾರಿಯಾಗಲೇ ಇಲ್ಲ. ನಿಜವಾದ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದೇ, ಸರ್ಕಾರಿ ನೌಕರರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಸರ್ಕಾರಿ ನೌಕರರು ನಕಲಿ ದಾಖಲೆಗಳನ್ನು ಆಹಾರ ಇಲಾಖೆಗೆ ಸಲ್ಲಿಸಿ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು. ರಾಜ್ಯಾದ್ಯಂತ ಸುಮಾರು 5,160 ಸರ್ಕಾರಿ ನೌಕರರು, ವಾಮಮಾರ್ಗವಾಗಿ ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು.

    ಸರ್ಕಾರಿ ನೌಕರರ ಮೇಲೆ ವ್ಯಾಪಕವಾಗಿ ದೂರು ಬಂದ ಹಿನ್ನಲೆಯಲ್ಲಿ ನಿಸ್ಪಕ್ಷವಾಗಿ ಕಾರ್ಯಾಚರಣೆಗಿಳಿದ ಆಹಾರ ಇಲಾಖೆ, ರಾಜ್ಯಾದ್ಯಂತ 5,160 ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್  ಕಾರ್ಡ್ ಗಳನ್ನ  ಹೊಂದಿರುವುದನ್ನು ಪತ್ತೆಮಾಡಿದೆ. ಇಂತಹ ನೌಕರರ ವಿರುದ್ಧ ಕ್ರಮ ಕೈಗೊಂಡು ಸುಮಾರು 1.73 ಕೋಟಿ ರೂಪಾಯಿಗೂ ಅಧಿಕ ದಂಡವನ್ನ ವಸೂಲಿ ಮಾಡಿ, ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನ  ವಶಪಡಿಸಿಕೊಂಡಿದೆ.

    ಆಹಾರ ಇಲಾಖೆಯ ನಿಯಮದ ಪ್ರಕಾರ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಗಳನ್ನ ಹೊಂದಿರಬಾರದು. ಆದರೆ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ, ಬಿಪಿಎಲ್ ಕಾರ್ಡ್ ಗಳನ್ನ ಪಡೆದಿದ್ದರು. ಇದು ಆಹಾರ ಇಲಾಖೆಯ ಗಮನಕ್ಕೆ ಬಂದ ತಕ್ಷಣ ಆಹಾರ ಇಲಾಖೆ ತುರ್ತಾಗಿ ಪ್ರಕಟಣೆ ನೀಡಿ, ಸರ್ಕಾರಿ ನೌಕರರು ತಾವು ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನ ವಾಪಾಸ್ ಮಾಡಿ, ಇಲ್ಲವಾದಲ್ಲಿ ಪರಿಣಾಮ ಎದುರಿಸಿ ಅಂತಾ ಎಚ್ಚರಿಕೆಯನ್ನ ನೀಡಿತ್ತು.

    ಆಹಾರ ಇಲಾಖೆಯ ಎಚ್ಚರಿಕೆ ಮಧ್ಯೆಯೂ ನೌಕರರು, ಕಾರ್ಡ್ ಗಳನ್ನ ಮರಳಿಸದೆ ಹಾಗೆ ಇಟ್ಟುಕೊಂಡಿದ್ದರು. ಇದೀಗ ಆಹಾರ ಇಲಾಖೆ ಅಂತವರನ್ನೆಲ್ಲಾ ಪತ್ತೆ ಹಚ್ಚಿ ದಾಖಲೆಯ ಪ್ರಮಾಣದಲ್ಲಿ ದಂಡ ವಸೂಲಿ ಮಾಡಿದೆ.

    ದಾಳಿ ಕುರಿತು ಜಿಲ್ಲಾ ಆಹಾರ ಆಯೋಗದ ಸದಸ್ಯರಾದ ವಿ ವಿ ಪಾಟೀಲ್ ಮಾತನಾಡಿ, ಬಡವರಿಗಾಗಿ ಜಾರಿಗೆ ಬಂದ ಬಿಪಿಎಲ್ ಕಾರ್ಡ್ ನ್ನು ಸರ್ಕಾರಿ ನೌಕರರು ತಪ್ಪು ಮಾಹಿತಿ ಸಲ್ಲಿಸಿ ದುರುಪಯೋಗಡಿಸಿಕೊಂಡು, ಇದೀಗ ದಂಡ ತೆತ್ತಿದ್ದಾರೆ. ಆದರೆ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಂಡಲ್ಲಿ ಮಾತ್ರ, ಇಂಥಹ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ತಿಳಿಸಿದ್ದಾರೆ.