Tag: Food Delivery

  • ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

    ಕೆಲಸದಿಂದ ತೆಗೆದಿದ್ದಕ್ಕೆ ಸಿಟ್ಟು; ಫುಡ್ ಡೆಲಿವರಿ ನೆಪದಲ್ಲಿ ವೃದ್ಧೆ ಕೈ-ಕಾಲು ಕಟ್ಟಿಹಾಕಿ 8 ಲಕ್ಷ ದರೋಡೆ

    ಬೆಂಗಳೂರು: ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

    ಆರೋಪಿಗಳು ಫುಡ್ ಡೆಲಿವರಿ ಇದೆ ಅಂತಾ ಬಾಗಿಲ ಬೆಲ್ ಮಾಡಿದ್ದಾರೆ. ಡೋರ್ ಓಪನ್ ಮಾಡುತ್ತಿದ್ದಂತೆ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ತಳ್ಳಿಕೊಂಡು ಒಳಗಡೆ ನುಗ್ಗಿದ್ದಾರೆ. ವೃದ್ಧೆಗೆ ಚಾಕು ತೋರಿಸಿ, ಕೈ-ಕಾಲು ಕಟ್ಟಿ ಹಾಕಿ ಎಂಟು ಲಕ್ಷ ದರೋಡೆ ಮಾಡಿದ್ದಾರೆ.

    ಕೆಲಸದಿಂದ ತೆಗೆದಿದ್ದಕ್ಕೆ ಕೃತ್ಯ
    ಮನೆ ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ಈ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ವೃದ್ಧೆ ಕನಕಪುಷ್ಪ ಎಂಬವರ ಮಗ ರಾಹುಲ್ ಬಳಿ ಮಡಿವಾಳ ಎಂಬಾತ ನಾಲ್ಕು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಆತನ ಸಂಬಳ ಕ್ಲಿಯರ್ ಮಾಡಿ ಡ್ರೈವರ್ ಕೆಲಸದಿಂದ ತೆಗೆದು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಮಡಿವಾಳ, ವೃದ್ಧೆಯ ಮಗ ಹೊರಗೆ ಹೋಗೋದನ್ನೆ ಕಾದಿದ್ದ.

    ರಾಹುಲ್ ಹೊರಗೆ ಹೋಗ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಬಳಿ ಬಂದಿದ್ದ. ಡೆಲಿವರಿ ಬಾಯ್ ಅಂತಾ ಡೋರ್ ಬೆಲ್ ಮಾಡಿದ್ದಾರೆ. ಮೊದಲಿಗೆ ವೃದ್ಧೆ ಬಾಗಿಲು ತೆರೆಯುವುದಿಲ್ಲ. ನಾವು ಯಾವುದೇ ಆರ್ಡರ್ ಮಾಡಿಲ್ಲ ಅಂತ ಹೇಳುತ್ತಾರೆ. ಈ ವೇಳೆ ನಿಮ್ಮ ಮಗ ರಾಹುಲ್ ಅನ್ನೋರು ಆರ್ಡರ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಮಡಿವಾಳ ಸೇರಿ ನಾಲ್ವರು ಮನೆ ಒಳಗೆ ನುಗ್ಗಿದ್ದಾರೆ. ವೃದ್ಧೆ ಕನಕಪುಷ್ಪ ಕೈ-ಕಾಲು ಕಟ್ಟಿ ಕುತ್ತಿಗೆಗೆ ಚಾಕು ಇರಿದಿದ್ದಾರೆ. ನಂತರ ಎಂಟು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.

    ಸದ್ಯ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫುಡ್ ಡೆಲಿವರಿಗೂ ಕಾಲಿಡ್ತಿದೆ Rapido – ಸ್ವಿಗ್ಗಿ, ಝೊಮ್ಯಾಟೋಗಿಂತಲೂ ಕಡಿಮೆ ಕಮಿಷನ್

    ಫುಡ್ ಡೆಲಿವರಿಗೂ ಕಾಲಿಡ್ತಿದೆ Rapido – ಸ್ವಿಗ್ಗಿ, ಝೊಮ್ಯಾಟೋಗಿಂತಲೂ ಕಡಿಮೆ ಕಮಿಷನ್

    – ಸ್ವಿಗ್ಗಿ, ಝೊಮ್ಯಾಟೋ ಷೇರುಗಳ ಮೌಲ್ಯ ಇಳಿಕೆ
    – ಬೆಂಗಳೂರಿನಲ್ಲಿ ಪ್ರಾಯೋಗಿಕ ಪರೀಕ್ಷೆ

    ನವದೆಹಲಿ: ಆಟೋ, ಬೈಕ್ ಟ್ಯಾಕ್ಸಿ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ (Rapido) ಇದೀಗ ಫುಡ್ ಡೆಲಿವರಿ (Food Delivery) ಸೇವೆಯನ್ನು ಒದಗಿಸಲು ಮುಂದಾಗಿದೆ.

    ಹೌದು, ಬೈಕ್ ಟ್ಯಾಕ್ಸಿಗೆ ಹೆಸರಾಗಿರುವ ರ‍್ಯಾಪಿಡೋ ಇದೀಗ ಫುಡ್ ಡೆಲಿವರಿ ಮಾಡಲು ಸಜ್ಜಾಗುತ್ತಿದೆ. ಈ ಮೂಲಕ ಸ್ವಿಗ್ಗಿ ಹಾಗೂ ಝ್ಯೊಮ್ಯಾಟೋಗೆ ಕಠಿಣ ಸ್ಪರ್ಧೆ ನೀಡಲಿದ್ದು, ಕಡಿಮೆ ಕಮಿಷನ್‌ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಈಗಾಗಲೇ ರಾಷ್ಟ್ರೀಯ ಹೋಟೆಲ್ ಒಕ್ಕೂಟಗಳ (NRAI) ಜೊತೆ ಒಪ್ಪಂದದ ಕುರಿತಾಗಿ ರ‍್ಯಾಪಿಡೋ ಮಾತುಕತೆ ನಡೆಸಿದ್ದು, ರೆಸ್ಟೋರೆಂಟ್‌ಗಳೊಂದಿಗಿನ ನಿಯಮಗಳಿಗೆ ಒಪ್ಪಿಗೆ ಸೂಚಿಸಿದೆ ಹಾಗೂ ರೆಸ್ಟೋರೆಂಟ್‌ಗಳಿಗೆ ಕಡಿಮೆ ಕಮಿಷನ್ ದರ ನೀಡುವ ಮೂಲಕ ಹೊಸ ಹೆಜ್ಜೆಹಾಕಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: DCET ಜೂ.10ರಿಂದ 13ರವರೆಗೆ ದಾಖಲಾತಿ ಪರಿಶೀಲನೆ – KEA

    NRAI ಮಾಹಿತಿ ಪ್ರಕಾರ, ರ‍್ಯಾಪಿಡೋ ಈ ಮೂಲಕ ಸಣ್ಣ ಮಟ್ಟದ ರೆಸ್ಟೋರೆಂಟ್‌ಗಳಿಗೆ ಸಹಾಯ ಮಾಡಲಿದ್ದು, ಆರ್ಡರ್‌ನ ಬೆಲೆಯ ಆಧಾರದ ಮೇಲೆ ರೆಸ್ಟೋರೆಂಟ್‌ಗಳಿಂದ 8-15% ಕಮಿಷನ್ ವಿಧಿಸುವ ನಿರೀಕ್ಷೆಯಿದೆ. ಝ್ಯೊಮ್ಯಾಟೋ ಮತ್ತು ಸ್ವಿಗ್ಗಿಗೆ ಹೋಲಿಸಿದರೆ ಈ ಕಮಿಷನ್ ದರ ಕಡಿಮೆಯಾಗಿದ್ದು, ಅವುಗಳು 16-30% ಶುಲ್ಕ ವಿಧಿಸುತ್ತವೆ. ರ‍್ಯಾಪಿಡೋ 400 ರೂ.ಗಿಂತ ಕಡಿಮೆಯಿರುವ ಆರ್ಡರ್‌ಗಳಿಗೆ 25 ರೂ. ಮತ್ತು 400 ರೂ.ಗಿಂತ ಹೆಚ್ಚಿನ ಆರ್ಡರ್‌ಗಳಿಗೆ 50 ರೂ. ನಿಗದಿತ ಶುಲ್ಕವನ್ನು ವಿಧಿಸುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಮೊದಲು 2015ರಲ್ಲಿ ಓಲಾ ಕಂಪನಿ ಓಲಾ ಕೆಫೆಯನ್ನು (Ola Cafe) ಪ್ರಾರಂಭಿಸಿತು. ಅದಾದ ಬಳಿಕ 2017ರಲ್ಲಿ ಉಬರ್ ಕಂಪನಿಯು ಉಬರ್ ಈಟ್ಸ್ (Uber Eats) ಎಂಬುವುದನ್ನು ಪ್ರಾರಂಭಿಸಿತು. ಬಳಿಕ 2020ರಲ್ಲಿ ಉಬರ್ ಝ್ಯೊಮ್ಯಾಟೋ ಜೊತೆಗೆ ಒಪ್ಪಂದ ಮಾಡಿಕೊಂಡು 10% ಪಾಲನ್ನು ಪಡೆಯುತ್ತಿತ್ತು. ಆದರೆ 2022ರಲ್ಲಿ ಉಬರ್ ತನ್ನ ಸಂಪೂರ್ಣ ವ್ಯವಹಾರವನ್ನು ಝ್ಯೊಮ್ಯಾಟೋಗೆ ಮಾರಾಟ ಮಾಡಿತು.

    ಸದ್ಯ ಬೈಕ್, ಆಟೋ, ಪಾರ್ಸೆಲ್, ಕ್ಯಾಬ್ ಎಕಾನಮಿ ಮತ್ತು ಕ್ಯಾಬ್ ಪ್ರೀಮಿಯಂ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸುತ್ತಿರುವ ರ‍್ಯಾಪಿಡೋ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಫುಡ್ ಡೆಲಿವರಿ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ತ್ವರಿತವಾಗಿ ಸಿಗುತ್ತದೆ ಸೇವೆಯನ್ನು ನೀಡಲಿದೆ ಎಂದು ತಿಳಿಸಿದೆ.

    ಇನ್ನೂ ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೋ (Zomato) ಷೇರುಗಳ ಮೌಲ್ಯದಲ್ಲಿ (Share Price) ಇಳಿಕೆಯಾಗಿದ್ದು, ಸ್ವಿಗ್ಗಿ ಷೇರು ಮೌಲ್ಯ 2.79% (10.45 ರೂ.) ಕುಸಿದು 364.10ರೂ.ನಲ್ಲಿ ವ್ಯವಹಾರ ಮುಗಿಸಿದರೆ, ಝೋಮ್ಯಾಟೋ ಮೌಲ್ಯ 1.92% (4.87 ರೂ.) ಕುಸಿದು 256.84 ರೂ.ನಲ್ಲಿ ವ್ಯವಹಾರ ಮುಗಿಸಿದೆ.ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

  • ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಕೊರೊನಾ ಭೀತಿ- ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದ ಎಫೆಕ್ಟ್

    ಬೆಂಗಳೂರು: ಕೊರೊನಾ ಭೀತಿ ಆನ್‍ಲೈನ್ ಫುಡ್ ಡೆಲಿವರಿ ಬಾಯ್‍ಗಳಿಗೂ ತಟ್ಟಿದೆ. ನಿತ್ಯ ನೂರಾರು ಮನೆಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುವ ಡೆಲಿವರಿ ಬಾಯ್‍ಗಳಲ್ಲಿ ಆತಂಕ ಶುರುವಾಗಿದ್ದು, ಬೆಂಗಳೂರು ಬಿಟ್ಟು ತಮ್ಮ ಊರುಗಳತ್ತ ತೆರಳಿದ್ದಾರೆ.

    ಮನೆ ಮನೆಗಳಿಗೆ ಫುಡ್ ಆರ್ಡರ್ ಕೊಟ್ಟು ಬರುವ ಸಮಯದಲ್ಲಿ ಎಲ್ಲಿ ಸೋಂಕು ನಮಗೆ ಹರಡುತ್ತೋ ಎನ್ನುವ ಭಯದಿಂದ ಬೆಂಗಳೂರು ತೊರೆದಿದ್ದಾರೆ. ನಿತ್ಯ ನೂರಾರು ಡೆಲಿವರಿ ಬಾಯ್‍ಗಳು ಅಪಾರ್ಟ್‌ಮೆಂಟ್‌, ಮನೆ ಇತರೆ ಜಣದಟ್ಟಣೆ ಸ್ಥಳಗಳಿಗೆ ಹೋಗಿ ಆರ್ಡರ್ ಕೊಟ್ಟು ಬರುತ್ತಾರೆ.

    ಈಗಾಗಲೇ ಹೋಟೆಲ್‍ಗಳಲ್ಲಿ ವ್ಯಾಪಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಆನ್‍ಲೈನ್‍ನಲ್ಲಿಯೂ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಒಂದೆಡೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಗ್ರಾಹಕರಿಗೆ ಆರ್ಡರ್ ತಲುಪಿಸುವ ಫುಡ್ ಡೆಲವರಿ ಬಾಯ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ.

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡಿದರೆ ಡೆಲಿವರಿ ಬಾಯ್‍ಗಳು ಬಾಕ್ಸ್ ಅನ್ನು ಗ್ರಾಹಕರ ಕೈಗೆ ಕೊಡುವ ಬದಲು ಮನೆಯ ಡೋರ್ ಬಳಿಯೇ ಇಟ್ಟು ಹೋಗುತ್ತಾರೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಗ್ರಾಹಕರ ಕೈಗೆ ಫುಡ್ ಬಾಕ್ಸ್ ನೀಡದಿರಲು ಡೆಲಿವರಿ ಬಾಯ್ಸ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ವಿಗ್ಗಿ ಕಂಪನಿಯಿಂದ ಗ್ರಾಹಕರ ಕೈಗೆ ಪಾರ್ಸೆಲ್ ಬಾಕ್ಸ್ ನೀಡದಂತೆ ತನ್ನ ಸಿಬ್ಬಂದಿಗೆ ಸೂಚಿಸಿದೆ.

  • ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಕೊಲ್ಕತ್ತಾ: ಝೊಮೆಟೊ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಇತ್ತೀಚಿಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ. ಕಳೆದ ತಿಂಗಳಷ್ಟೇ ಹಿಂದೂ ಗ್ರಾಹಕರೊಬ್ಬರು ಮುಸ್ಲಿಂ ಯುವಕ ಆಹಾರ ತಂದಿದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಇದು ಧಾರ್ಮಿಕ ವಿವಾದವಾಗಿ ದೇಶದೆಲ್ಲೆಡೆ ಭಾರೀ ಚರ್ಚೆಯಾಗಿತ್ತು.

    ಈಗ ಮತ್ತೆ ಇದೇ ರೀತಿಯ ಧಾರ್ಮಿಕ ವಿಚಾರದಲ್ಲೇ ಝೊಮೆಟೊ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿಂದೂ ಮತ್ತು ಮುಸ್ಲಿಂ ಸಿಬ್ಬಂದಿ ನಾವು ನಮ್ಮ ಧರ್ಮಕ್ಕೆ ವಿರುದ್ಧವಾದ ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

    ಸೋಮವಾರದಿಂದ ಆಚರಣೆ ಮಾಡುವ ಬಕ್ರಿದ್ ಹಬ್ಬಕ್ಕೆ ನಾವು ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಝೊಮೆಟೊ ಸಂಸ್ಥೆ ನಮ್ಮ ಉದ್ಯೋಗ ಮತ್ತು ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ಸೋಮವಾರ ಹಿಂದೂ ಮತ್ತು ಮುಸ್ಲಿಂ ಹುಡುಗರು ಝೊಮೆಟೊ ವಿರುದ್ಧ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿಂದೂ ಆಹಾರ ವಿತರಣಾ ಸಿಬ್ಬಂದಿ ಬಜರಾಜ್ ನಾಥ್ ಬ್ರಹ್ಮ, ನಾನು ಹಿಂದೂ. ಇಲ್ಲಿ ಮುಸ್ಲಿಂ ಡೆಲಿವರಿ ಹುಡುಗರೂ ಇದ್ದಾರೆ. ಒಟ್ಟಿಗೆ ಕೆಲಸ ಮಾಡುವಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಝೊಮೆಟೊ ಪ್ರಸ್ತುತ ಕೆಲವು ಹೊಸ ರೆಸ್ಟೋರೆಂಟ್‍ಗಳೊಂದಿಗೆ ಸಂಬಂಧ ಹೊಂದಿದ್ದು, ಗೋಮಾಂಸ ಮತ್ತು ಹಂದಿ ಮಾಂಸವನ್ನು ವಿತರಣೆ ಮಾಡುತ್ತಿದೆ. ಇದರಿಂದ ಹಿಂದೂ ವಿತರಣಾ ಸಿಬ್ಬಂದಿ ಮತ್ತು ಮುಸ್ಲಿಂ ವಿತರಣಾ ಸಿಬ್ಬಂದಿ ಇಬ್ಬರಿಗೂ ಸಮಸ್ಯೆಯಾಗುತ್ತಿದೆ. ನಮ್ಮ ಧಾರ್ಮಿಕ ಭಾವನೆಗೆ ನೋವಾಗುತ್ತಿದೆ. ಇದ್ದರಿಂದ ತಕ್ಷಣವೇ ಈ ಯೋಜನೆಯನ್ನು ಸಂಸ್ಥೆ ನಿಲ್ಲಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ನಾವು ಸೋಮವಾರ ಕೆಲಸ ಮಾಡದೇ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಮುಸ್ಲಿಂ ಆಹಾರ ವಿತರಣಾ ಸಿಬ್ಬಂದಿ ಮೌಸಿರ್ ಅಖ್ತರ್ “ನಾವು ಈ ಸಮಸ್ಯೆಯ ಬಗ್ಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕೆಲ ಮುಸ್ಲಿಂ ಹೋಟೆಲ್‍ಗಳನ್ನು ಝೊಮೆಟೊ ತನ್ನ ವಿತರಣಾ ಅಪ್ಲಿಕೇಶನ್‍ಗೆ ಸೇರಿಸಿಕೊಂಡಿದೆ. ಅಲ್ಲಿ ಮಾಡುವ ಗೋಮಾಂಸವನ್ನು ಕೆಲ ಹಿಂದೂ ಹುಡುಗರು ವಿತರಣೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಹಾಗೆಯೇ ನಾವು ಕೂಡ ಹಂದಿ ಮಾಂಸವನ್ನು ವಿತರಣೆ ಮಾಡುವುದಿಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಈ ವಿಚಾರದ ಬಗ್ಗೆ ಕಂಪನಿಗೆ ಎಲ್ಲ ತಿಳಿದಿದ್ದರು. ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರದಲ್ಲಿ ಝೊಮೆಟೊ ಹುಡುಗರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ಶಾಸಕರ ಹೌರಾ ರಾಜೀಬ್ ಬ್ಯಾನರ್ಜಿ, ಈ ರೀತಿಯ ಯೋಚನೆಗಳನ್ನು ಸಂಸ್ಥೆ ಜಾರಿಗೆ ತರುವಾಗ ಸ್ವಲ್ಪ ಯೋಚಿಸಬೇಕು. ಯಾವ ವ್ಯಕ್ತಿಯನ್ನು ಅವರ ಧಾರ್ಮಿಕ ಭಾವನೆಗಳ ವಿರುದ್ಧ ನಡೆಸಿಕೊಳ್ಳಬಾರದು. ಇದು ತಪ್ಪು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ ನಾನು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.