Tag: followers

  • ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    – ರಾಜಕೀಯಕ್ಕೆ ಬಂದ್ರೆ ಖಂಡಿತ ಬೆಂಬಲ

    ಧಾರವಾಡ: ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಇದೀಗ ಅವರ ಕುಟುಂಬದಿಂದ ಸುಮಲತಾ ಅವರು ರಾಜಕೀಯಕ್ಕೆ ಬರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಹಾಗೂ ನಾನು ಆತ್ಮೀಯ ಹಾಗೂ ಬಹಳ ವರ್ಷದಿಂದ ಸ್ನೇಹಿತರಾಗಿದ್ದೆವು. ಅವರ ಧರ್ಮ ಪತ್ನಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಿದ್ದಾರೆ. ಯಾಕಂದ್ರೆ ಮಂಡ್ಯದಲ್ಲಿ ಅವರ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ ಎಂದರು.

    ಸುಮಲತಾ ಅವರು ನಮ್ಮ ಸಹೋದರಿ ಇದ್ದಂತೆ. ಅವರಿಗೂ ಅಭಿಮಾನಿಗಳು ಬಹಳಷ್ಟು ಇದ್ದಾರೆ. ಅಂಬರೀಶ್ ಅವರ ನಿಧನದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಯ ಕೇಳಿಬರುತ್ತದೆ. ಆದ್ರೆ ಸುಮಲತಾ ಅವರು ಇನ್ನೂ ಕೂಡ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂದರೆ ನಮ್ಮ ಪಕ್ಷ ಖಂಡಿತವಾಗಿ ಬೆಂಬಲ ಸೂಚಿಸುತ್ತದೆ. ವೈಯಕ್ತಿಕವಾಗಿ ಹೇಳಬೇಕಂದ್ರೆ ನಾನು ಅಂಬರೀಶ್ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ ಎಂದು ಹೇಳಿದ್ರು.

    ಇತ್ತ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದು, ಆ ಬಳಿಕ ಮಂಡ್ಯ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಂಡ್ಯದ ನಿಜವಾದ ಮನೆ ಮಗಳು ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ದರ್ಶನ್ ಹುಟ್ಟುಹಬ್ಬಕ್ಕೆ ಬಂತು ವಿಶೇಷ ಫೋಟೋ

    ದರ್ಶನ್ ಹುಟ್ಟುಹಬ್ಬಕ್ಕೆ ಬಂತು ವಿಶೇಷ ಫೋಟೋ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆ.16 ರಂದು ಹುಟ್ಟುಹಬ್ಬವನ್ನು ಆಚರಿಸಲಿದ್ದು, ದಾಸನ ಹುಟ್ಟುಹಬ್ಬಕ್ಕೆಂದೇ ವಿಶೇಷ ಫೋಟೋವೊಂದು ಹರಿದಾಡುತ್ತಿದೆ.

    ದರ್ಶನ್ ಹುಟ್ಟುಹಬ್ಬವಿರುವ ಕಾರಣ ಅಭಿಮಾನಿಗಳೆಲ್ಲ ಸೇರಿ ತಮ್ಮ ನೆಚ್ಚಿನ ನಟನ ಕಾಮನ್ ಡಿಪಿ ಮಾಡಿದ್ದಾರೆ. ಈ ಕಾಮನ್ ಡಿಪಿಯನ್ನು ದರ್ಶನ್ ಹುಟ್ಟುಹಬ್ಬದ ದಿನ ಎಲ್ಲ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳಲಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳಲ್ಲ ಡಿ ಬಾಸ್!

    ದರ್ಶನ್ ಅವರ ಕಾಮನ್ ಡಿಪಿಯನ್ನು ‘ಯಜಮಾನ’ ಚಿತ್ರದ ಫೋಟೋ ಬಳಸಿ ಮಾಡಿದ್ದಾರೆ. ಯಜಮಾನದ ಫೋಟೋ ಜೊತೆಗೆ ದರ್ಶನ್ ಅವರ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ದುರ್ಯೋಧನ ಪಾತ್ರದ ಫೋಟೋ ಕೂಡ ಬ್ಯಾಕ್‍ಗ್ರೌಂಡ್‍ನಲ್ಲಿ ಬಳಸಿದ್ದಾರೆ. ದರ್ಶನ್ ಹುಟ್ಟುಹಬ್ಬ ಎಂದರೆ ಅವರ ಅಭಿಮಾನಿಗಳಿಗೆ ಹಬ್ಬದ ವಾತವರಣ ಸೃಷ್ಟಿ ಆಗಲಿದೆ. ಹಾಗಾಗಿ ಅವರು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ‘ಬಾಸ್ ಪರ್ವ… ಸುಲ್ತಾನ್ ಸಂಭ್ರಮ’ ಎಂದು ಹೆಸರಿಟ್ಟು ಆಚರಿಸುತ್ತಿದ್ದಾರೆ. ಇದನ್ನೂ ಓದಿ: ಸರಳವಾಗಿ ಬರ್ತ್ ಡೇ ಆಚರಿಸಿ- ದರ್ಶನ್ ಹೇಳಿಕೆಯ ಹಿಂದಿದೆ ಮತ್ತೊಂದು ಕಾರಣ

    ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬಿ ಅಪ್ಪಾಜಿ ತಮ್ಮಿಂದ ದೂರವಾದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಭ್ರಮಾಚಾರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆ ಕೊಡುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂ ಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು, ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ಈಡೇರಿಸುತ್ತೀರಾ ಎನ್ನವ ನಂಬಿಕೆ ಇದೆ ಎಂದು ಪೋಸ್ಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಇಂದು 200ಕ್ಕೂ ಹೆಚ್ಚು ಅಭಿಮಾನಿಗಳು ನಗರದ ಗಾಲ್ಫ್ ಕೋರ್ಸ್ ಬಳಿಯ ನಿವಾಸದಲ್ಲಿ ಸುಮಲತಾ ಅವರ ಭೇಟಿಗೆ ಆಗಮಿಸಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ.

    ಪಕ್ಷದ ಮುಖಂಡರು ಸುಮಲತಾ ಅವರ ಬಳಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳಲ್ಲೆ ಗೊಂದಲವುಂಟಾಗಿದ್ದು, ಕೆಲ ಅಭಿಮಾನಿಗಳು ಪಕ್ಷೇತರರಾಗಿಯಾದರು ನಿಲ್ಲಿ ನಾವು ನಿಮ್ಮನ್ನು ಗೆಲ್ಲಿಸ್ತೀವಿ ಎಂದು ಕೂಗುತ್ತಿದ್ದರು. ದೇವೇಗೌಡರು ಅಂಬರೀಶಣ್ಣನ ಮಗ ಎಂದು ಹೇಳುತ್ತಿದ್ದರು. ಮೈತ್ರಿಕೂಟದ ಅಭ್ಯರ್ಥಿಯಾಗಿ ಅಂಬರೀಶ್ ಕುಟುಂಬದವರನ್ನೆ ಕಣಕ್ಕೆ ಇಳಿಸಬೇಕು. ದೇವೇಗೌಡರು ಈ ಬಾರಿ ಸಹಕಾರ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡರು. ಈ ವೇಳೆ ರಾಕ್‍ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಉಪಸ್ಥಿತರಿದ್ದರು.

    ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕ್ಕಾಗಲ್ಲ:
    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, “ಅಂಬರೀಶ್ ಅವರನ್ನು ಕಳೆದುಕೊಂಡಾಗ ನಮಗೆ ಆದ ನೋವಿಗಿಂತ 100 ಪಟ್ಟು ಹೆಚ್ಚು ನೋವು ನಿಮಗಾಗಿದೆ. ಅಭಿಮಾನಿಗಳೆಲ್ಲ ಸಂಬಂಧವನ್ನು ಬಿಟ್ಟುಕೊಡಬಾರದು ಎಂದು ಅಭಿಮಾನ ಇಟ್ಟುಕೊಂಡು ಬಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನನಗೆ ಇದೇ ರೀತಿಯ ಒತ್ತಡ ಬರುತ್ತಿದೆ. ಈ ಪ್ರೀತಿಯೇ ಅಂಬಿ ಅವರು ಸಂಪಾದಿಸಿದ ಆಸ್ತಿ. ನನಗೆ ಇದನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಅವರು ಇದ್ದಾಗ ಇದೇ ಪ್ರೀತಿ ಇತ್ತು. ಅವರು ಇಲ್ಲದಾಗಲು ಇಷ್ಟು ಪ್ರೀತಿ ಇದೆ ಅಂದರೆ ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ” ಎಂದು ಹೇಳಿದ್ದಾರೆ.

    ಚರ್ಚಿಸಿ, ತೀರ್ಮಾನಕ್ಕೆ ಬರುವೆ:
    ನನಗೆ ಎಂದಿಗೂ ಪದವಿ ಅಥವಾ ರಾಜಕೀಯದ ಆಸೆ ಇರಲಿಲ್ಲ. ಹಾಗಾಗಿ ನಾನು ಸ್ವಲ್ಪ ಯೋಚಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ನಾನು ದುಡುಕಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಅಂಬರೀಶ್ ಅವರು ಇದ್ದಾಗ ಶಕ್ತಿ ಬೇರೆ, ನೀವು ಇರುವಾಗ ನಿಮ್ಮ ಶಕ್ತಿನೇ ಬೇರೆ. ರಾಜಕೀಯ ಚುನಾವಣೆ ಅಷ್ಟು ಸುಲಭ ಅಲ್ಲ. ಹಾಗಾಗಿ ನಾನು ಎಲ್ಲವನ್ನು ಚರ್ಚೆ ಮಾಡಿ ಒಂದೊಳ್ಳೆ ತೀರ್ಮಾನ ಕೈಗೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿಯನ್ನು ನಾನು ಕಳೆದುಕೊಳ್ಳುವುದಿಲ್ಲ. ಈ ಜನ್ಮ ಇರೂವವರೆಗೆ ನಮ್ಮ ಸೇವೆ ಮಂಡ್ಯಕ್ಕೆ ಇರುತ್ತದೆ. ನಾನು ಹಾಗೂ ಅಭಿಷೇಕ್ ಮಂಡ್ಯವನ್ನು ಮರಿಯೋಕೆ ಸಾಧ್ಯವೇ ಇಲ್ಲ ಎಂದರು.

    ಮಂಡ್ಯದಿಂದ್ಲೇ ಸ್ಪರ್ಧೆ:
    ನನಗೆ ರಾಜಕೀಯಕ್ಕೆ ಬರುವ ಯೋಚನೆ ಮೊದಲಿಂದ ಇರಲಿಲ್ಲ. ಆಕಸ್ಮಾತ್ ನಾನು ರಾಜಕೀಯಕ್ಕೆ ಬಂದರೆ ಅದು ಮಂಡ್ಯದಿಂದ ಬರುತ್ತೇನೆ. ನಾನು ಯಾವುದೇ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ ಹಾಗೂ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ. ಅಂಬರೀಶ್ ಅವರು ಕಾಂಗ್ರೆಸ್ ನಲ್ಲಿ ಇದ್ದರು. ಹಾಗಾಗಿ ನಾವು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಬೇಕು. ನಾನು ಏನೋ ಮಾತನಾಡಿ ವಿವಾದ ಮಾಡಿಕೊಳ್ಳಲು ಇಷ್ಟಪಡಲ್ಲ. ನಾವು ಇಲ್ಲಿ ಯಾರಿಗೂ ಚಾಲೆಂಜ್ ಮಾಡುವುದಿಲ್ಲ ಹಾಗೂ ಯಾರ ವಿರುದ್ಧವೂ ನಾವು ಹೋಗಲ್ಲ. ಆದರೆ ಅಭಿಮಾನಿಗಳ ಪ್ರೀತಿಗೆ ಖಂಡಿತ ಬೆಲೆ ಕೊಡುತ್ತೇನೆ. ಈ ಪ್ರೀತಿ ಕಳೆದುಕೊಳ್ಳುವುದಕ್ಕೆ ಇಷ್ಟಪಡಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ದಾಳಿ – ರಾತ್ರೋರಾತ್ರಿ ಊರು ಬಿಟ್ಟ ಶಾಸಕರ ಆಪ್ತರು

    ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ದಾಳಿ – ರಾತ್ರೋರಾತ್ರಿ ಊರು ಬಿಟ್ಟ ಶಾಸಕರ ಆಪ್ತರು

    ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದ್ದು, ಗೋಕಾಕ್ ಕ್ಷೇತ್ರದ ಗ್ರಾಮಗಳಲ್ಲಿ ಐಟಿ ದಾಳಿ ನಡೆಸಿದೆ.

    9 ಗ್ರಾಮಗಳಲ್ಲಿ 165 ಜನರಿಗೆ ಐಟಿ ನೋಟಿಸ್ ಜಾರಿ ಮಾಡಿದ್ದು, ರಾತ್ರೋರಾತ್ರಿ ಸ್ಥಳೀಯ ಮುಖಂಡರು ಊರು ಬಿಟ್ಟು ಪರಾರಿಯಾಗಿದ್ದಾರೆ. ಗುಜನಾಳ, ಅಕ್ಕತಂಗೇರಹಾಳ್, ಅಂಕಲಗಿ, ಮದವಾಲ್, ದಾಸನಟ್ಟಿ, ಕುಂದರಗಿ, ಮಲ್ಲಾಪೂರ ಗ್ರಾಮದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಶಾಸಕರ ಬೆಂಬಲಿಗರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 1500 ಎಕರೆ ಜಮೀನು, 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಸೇರಿದಂತೆ ಆಸ್ತಿ ದಾಖಲಾತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ರಮೇಶ್ ಜಾರಕಿಹೊಳಿ ಅವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಮೇಶ್ ಜಾರಕಿಹೊಳಿ ಅಜ್ಞಾತವಾಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್ ಭೇಟಿಗೆ ಅವಕಾಶ ಸಿಗದ್ದಕ್ಕೆ ಮನೆ ಮುಂದೆ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

    ಯಶ್ ಭೇಟಿಗೆ ಅವಕಾಶ ಸಿಗದ್ದಕ್ಕೆ ಮನೆ ಮುಂದೆ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಬಿಡದ್ದಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ರವಿ ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಇಂದು ತನ್ನ ನೆಚ್ಚಿನ ನಟನ ಹುಟ್ಟುಹಬ್ಬ ಇರುವ ಕಾರಣ ಯಶ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದ.

    ಮನೆಗೆ ಆಗಮಿಸಿದರೂ ಭೇಟಿಗೆ ಅವಕಾಶ ಸಿಗದಕ್ಕೆ ಯಶ್ ನಿವಾಸದ ಮುಂಭಾಗದಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಯಶ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅಂಬರೀಶ್ ಅವರು ನಿಧನರಾದ ಹಿನ್ನೆಲೆಯಲ್ಲಿ ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.

    ಯಶ್ ಅವರು ತಂದೆಯಾದ ಬಳಿಕ ಇದು ಅವರ ಮೊದಲನೇ ಹುಟ್ಟುಹಬ್ಬವಾಗಿದ್ದು, ಭಾನುವಾರ ಯಶ್ ಟ್ವಿಟ್ಟರಿನಲ್ಲಿ ಲೈವ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ಈ ವರ್ಷ ಜನ್ಮದಿನ ಆಚರಿಸುತ್ತಿಲ್ಲ. ಅಭಿಮಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಸ್ಯಾಂಡಲ್‍ವುಡ್ ನಟರು

    ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಸ್ಯಾಂಡಲ್‍ವುಡ್ ನಟರು

    ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಸ್ಯಾಂಡಲ್‍ವುಡ್ ನಟರು ಕೂಡ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

    ಹೊಸ ವರ್ಷಕ್ಕೆ ನಟ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ “ನೀವು ಎಲ್ಲರೂ ಸೆಲೆಬ್ರೇಶನ್ ಮೂಡಿಗೆ ಹೋಗುವ ಮೊದಲು ನಿಮ್ಮ ಆತ್ಮೀಯರ ಬಳಿ ಹೋಗಿ ಕ್ಷೇಮವಾಗಿ ಆಚರಿಸಿ. ಈ ಹೊಸ ವರ್ಷ ಎಲ್ಲರಿಗೂ ಸ್ಪಿರಿಟ್ ಸಿಗಲಿ. ಎಲ್ಲರಿಗೂ ಹಾಗೂ ಕನ್ನಡ ಚಿತ್ರರಂಗದವರಿಗೂ ನನ್ನ ಕಡೆಯಿಂದ ಹೊಸ ವರ್ಷದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಕಿಚ್ಚ ಸುದೀಪ್, “2018ರಲ್ಲಿ ನನಗೆ ಪ್ರೀತಿ ತೋರಿಸಿ ಪ್ರೋತ್ಸಾಹಿಸಿದ ಎಲ್ಲ ನನ್ನ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಜನವರಿ 31ರಂದು ನಾನು ಚಿತ್ರರಂಗಕ್ಕೆ ಬಂದು 23 ವರ್ಷಗಳಾಗುತ್ತದೆ. ನೀವು ನನ್ನ ಮೇಲೆಯಿಟ್ಟ ವಿಶ್ವಾಸದಿಂದ ನನ್ನ ಈ ಪ್ರಯಾಣ ನಡೆಯಿತು. ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಪೋಸ್ಟರ್ ಹಾಕಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

    ನವರಸನಾಯಕ ಜಗ್ಗೇಶ್ ಅವರು ತಮ್ಮ ಕುಟುಂಬದ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ನನ್ನ ಕುಟುಂಬದಿಂದ ಆತ್ಮೀಯ ಕನ್ನಡದ ಬಂಧುಗಳಿಗೆ ಹೊಸ ವರ್ಷದ ಶುಭಾಶಯಗಳು. 2018ರ ಕಹಿ ನೆನಪು ಮರೆತು 2019ರ ಹೊಸ ವರ್ಷದ ಹೊಸತನಕ್ಕೆ ಯತ್ನಿಸಿ. ಮನುಜನ್ಮ ಶ್ರೇಷ್ಟ ನಗುತ್ತಾ ನಗಿಸುತ್ತಾ ನೆನಪಲ್ಲಿ ಉಳಿಯುವಂತೆ ಬಾಳಿ. ನನ್ನ ಬೆಳಸಿದ ಕನ್ನಡಕುಲಕೋಟಿ, ಮಾಧ್ಯಮಮಿತ್ರರಿಗೆ, ಬಂಧುಗಳಿಗೆ ಹೃದಯದ ಅಂತರಾಳದಿಂದ ಕೂಗಿ ಹೇಳುವೆ ಐ ಲವ್ ಯೂ ಆಲ್” ಎಂದು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

    ನಟ ರಮೇಶ್ ಅರವಿಂದ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಾಕಿ ಅದಕ್ಕೆ, “ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಿಮ್ಮ ಸಂಬಂಧಗಳಲ್ಲಿ, ನಿಮ್ಮ ಕೆಲಸಗಳಲ್ಲಿ, ನಿಮ್ಮ ಹಣಕಾಸಿನ ವಿಚಾರದಲ್ಲಿ, ನಿಮ್ಮ ಆರೋಗ್ಯದಲ್ಲಿ ಹಾಗೂ ಜೀವನದ ಎಲ್ಲ ಕಡೆಯಿಂದ ಈ ವರ್ಷ ನಿಮಗೆ ಚೆನ್ನಾಗಿರಲಿ ಹಾಗೂ ಯಾವಾಗಲೂ ಖುಷಿಯಾಗಿರಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ವಿಡಿಯೋ ಮೂಲಕ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ ‘ಗೀತಾ’ ಚಿತ್ರದ ಎರಡು ಪೋಸ್ಟರ್ ಹಾಕಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಇತ್ತ ನಟ ಶ್ರೀಮುರಳಿ ಟ್ವಿಟ್ಟರಿನಲ್ಲಿ ತಮ್ಮ ಫೋಟೋ ಹಾಕಿ, “2018 ಮುಗಿದಿದೆ. ಈಗ ಪಾರ್ಟಿ ಟೈಂ. ಎಲ್ಲರಿಗೂ ಮನೆಗೆ ಹೋಗುವಾಗ ಸುರಕ್ಷಿತವಾಗಿ ವಾಹನವನ್ನು ಚಲಾಯಿಸಿ. ಕ್ಷೇಮವಾಗಿರಿ. ಖುಷಿಯಿಂದ 2019ರನ್ನು ವೆಲಕಂ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯತಿಥಿ- 9 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ

    ಇಂದು ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯತಿಥಿ- 9 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ

    – ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಬೆಂಗಳೂರು: ಇಂದು ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್‍ರ 9ನೇ ಪುಣ್ಯತಿಥಿ. ಬೆಳಗ್ಗೆ ವಿಷ್ಣು ಕುಟುಂಬ ಅಭಿಮಾನ್ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

    ವಿಷ್ಣು ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾದೆ. ಕೇವಲ ಅಭಿಮಾನ್ ಸ್ಟುಡಿಯೋ ಮಾತ್ರವಲ್ಲ. ಆಟೋ ರಿಕ್ಷಾಗಳಲ್ಲೂ ಸಾಹಸ ಸಿಂಹನ ಭಾವಚಿತ್ರ ಹಾಕಿ, ಪೂಜೆ ಸಲ್ಲಿಸಲಾಗುತ್ತಿದೆ.

    ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲವಾದರೂ ಕೋಟ್ಯಾನುಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೇ ಕುಳಿತಿದ್ದಾರೆ. ಪ್ರತಿದಿನ ಪ್ರತಿ ಕ್ಷಣನೂ ವಿಷ್ಣುನಾ ಆರಾಧಿಸೋ ಭಕ್ತವಲಯ ಪ್ರತಿವರ್ಷ ದಾದಾ ಪುಣ್ಯಭೂಮಿಗೆ ಬಂದು ನಮಿಸುತ್ತಾರೆ. ಈ ವರ್ಷವೂ ರಾಜ್ಯದ ಮೂಲೆಮೂಲೆಯಿಂದ ಭಕ್ತರು ವಿಷ್ಣು ಪುಣ್ಯತಿಥಿಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್

    ಒಂಬತ್ತು ವರ್ಷ ಕಳೆದರೂ ಕರ್ಣನ ಪುಣ್ಯ ಭೂಮಿ ನಿರ್ಮಾಣಗೊಂಡಿಲ್ಲ ಅನ್ನೋ ಕೊರಗು ಇದ್ದೇ ಇದೆ. ಇತ್ತೀಚೆಗಷ್ಟೇ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ರು. ದಾದಾ ಪುಣ್ಯ ಭೂಮಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಸಿಂಹಗಳನ್ನ ಬಡಿದೆಬ್ಬಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು. ಆ ಡೆಡ್‍ಲೈನ್ ಇಂದಿಗೆ ಮುಗಿಯಲಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಕೆಂಡಾಮಂಡಲ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಜೊತೆ ಕೆಜಿಎಫ್ ವೀಕ್ಷಿಸಿದ ರಾಕಿಂಗ್ ಸ್ಟಾರ್

    ಅಭಿಮಾನಿಗಳ ಜೊತೆ ಕೆಜಿಎಫ್ ವೀಕ್ಷಿಸಿದ ರಾಕಿಂಗ್ ಸ್ಟಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಧೂಳೆಬ್ಬಿಸಿದ್ದ ‘ಕೆಜಿಎಫ್’ ಸಿನಿಮಾ ರಿಲೀಸ್, ಪ್ರಮೋಶನ್, ಸಕ್ಸಸ್ ಟೂರ್ ಅಂತ ಬ್ಯುಸಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಕೊಂಚ ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

    ಓರಾಯನ್ ಮಾಲ್‍ನಲ್ಲಿ ಏರ್ಪಡಿಸಲಾಗಿದ್ದ ಸ್ಪೆಷಲ್ ಶೋನಲ್ಲಿ ಯಶ್ ಸಿನಿಮಾ ವೀಕ್ಷಿಸಿದರು. ಈ ವೇಳೆ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಹೆಣ್ಮಕ್ಳು ಮುಗಿಬಿದ್ದರು. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಫುಲ್ ಖುಷಿಯಾದ ಯಶ್, ಸಿನಿಮಾ ಇಷ್ಟ ಆಯ್ತಾ ಎಲ್ಲರಿಗೂ ಅಂತ ಸ್ಟೇಜ್ ಮೇಲೆ ನಿಂತು ಕೂಗಿದರು.

    ಯಶ್ ಹೀಗಂದಿದ್ದೇ ತಡ ಸೂಪರ್ ಅಣ್ತಮ್ಮ ಅಂತ ಅಭಿಮಾನಿಗಳು ಸಾರಿಸಾರಿ ಹೇಳಿದರು. ಕನ್ನಡ ಸಿನಿಮಾ 100 ಕೋಟಿ ಮಾಡಬಹುದು ಎನ್ನುವುದು ಈ ಚಿತ್ರ ಮಾಡಿ ತೋರಿಸಿದೆ. ಚಿತ್ರಮಂದಿರಗಳ ಸಂಖ್ಯೆ ಡಬಲ್ ಆಗಿದೆ. ಕನ್ನಡ ಚಿತ್ರರಂಗ ಬಿಟ್ಟು ಎಲ್ಲೂ ಹೋಗಲ್ಲ. ರವಿ ಬಸ್ರೂರು ಸಿನಿಮಾ ಮುಗಿದ ಮೇಲೂ ಮತ್ತೆ ಸ್ಪೆಷಲ್ ಸೌಂಡ್ ಎಫೆಕ್ಟ್ ಕೊಟ್ಟು ಸಿನಿಮಾ ರಿಲೀಸ್ ಮಾಡಿದರು. ಅದಕ್ಕೆ ಮತ್ತೆ ನೋಡಲು ಬಂದಿದ್ದೇನೆ ಅಂತಾ ನಟ ಯಶ್ ಹೇಳಿದರು.

    ಕೆಜಿಎಫ್‍ನಲ್ಲಿ ರಾಕಿ ಭಾಯ್ ಆರ್ಭಟಕ್ಕೆ ಬಾಕ್ಸ್ ಆಫೀಸ್ ಉಡೀಸ್ ಆಗಿದೆ. ಇಲ್ಲಿಯವರೆಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ನೂರು ಕೋಟಿ ಕ್ಲಬ್ ಲಿಸ್ಟ್ ಅನ್ನುವುದು ಮರೀಚಿಕೆಯಾಗಿತ್ತು. ಆದರೆ `ಕೆಜಿಎಫ್’ ಸಿನಿಮಾ ಐದೇ ದಿನಕ್ಕೆ ನೂರು ಕೋಟಿ ಕ್ಲಬ್ ಲಿಸ್ಟ್ ಸೇರಿದ ಕನ್ನಡದ ಮೊದಲ ಚಿತ್ರವಾಗುವುದರ ಮೂಲಕ ಸ್ಯಾಂಡಲ್‍ವುಡ್ ಅನ್ನು ಹೊಸ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ.

    `ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ. ಆಗಿದ್ದು, ಎರಡನೇ ದಿನದ ಕೆಜಿಎಫ್ ಟೋಟಲ್ ಸುಮಾರು 40 ಕೋಟಿ ರೂ. ಕಲೆಕ್ಷನ್ ಆಗಿತ್ತು. ಮೂರನೇ ದಿನಕ್ಕೆ ಕೆಜಿಎಫ್ ಒಟ್ಟಾರೆ 58 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನಕ್ಕೆ 77 ಕೋಟಿ ರೂ. ದಾಟಿತ್ತು. ಅಲ್ಲದೇ ಐದನೇ ದಿನ ನೂರು ಕೋಟಿ ರೂ. ಗಡಿಯೂ ದಾಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗದಗ ನಗರಕ್ಕೆ ಭೇಟಿ ನೀಡಿದ ರವಿಶಂಕರ್

    ಗದಗ ನಗರಕ್ಕೆ ಭೇಟಿ ನೀಡಿದ ರವಿಶಂಕರ್

    ಗದಗ: ಸ್ಯಾಂಡಲ್‍ವುಡ್ ನಟ ರವಿಶಂಕರ್ ಗದಗ ನಗರಕ್ಕೆ ಭೇಟಿ ನೀಡಿದ್ದು, ನೆಚ್ಚಿನ ನಟನಿಗೆ ಕೈಕುಲುಕಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಗದಗ ನಗರದ ಬೆಟಗೇರಿ ಬಸ್ ನಿಲ್ದಾಣದ ಬಳಿ ಅಭಿಮಾನಿಗಳು ಜಮಾಯಿಸಿದ್ದಾರೆ. ಕನ್ನಡ ಚಿತ್ರದ ಡೈಲಾಗ್ ಹೇಳುವ ಮೂಲಕ ನಟ ರವಿಶಂಕರ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟ ರವಿಶಂಕರ್ ಗದಗ ಜಿಲ್ಲೆ ಗಜೇಂದ್ರಗಡಕ್ಕೆ ಫಿಲ್ಮ್ ಶೂಟಿಂಗ್ ಹೊರಟಿದ್ದರು.

    ರವಿಶಂಕರ್ ಫಿಲ್ಮ್ ಶೂಟಿಂಗ್‍ಗೆ ಎಂದು ಗಜೇಂದ್ರಗಡಕ್ಕೆ ಹೊರಟ್ಟಿದ್ದ ವೇಳೆ ಅವರ ಕಾರಿಗೆ ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ರವಿಶಂಕರ್ ಕೆಲ ಹೊತ್ತು ಅಭಿಮಾನಿಗಳ ಜೊತೆ ಕಾಲ ಕಳೆದು ಸೆಲ್ಫಿ ತೆಗೆದುಕೊಂಡಿದ್ದಾರೆ.

    ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಮೈಸೂರು ಪೇಠ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ್ದ ‘ಕೆಂಪೇಗೌಡ’ ಚಿತ್ರದ ಮೂಲಕ ರವಿಶಂಕರ್ ಖಳನಟನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದರು. ರವಿಶಂಕರ್ ಸ್ಯಾಂಡಲ್‍ವುಡ್‍ನಲ್ಲಿ ಖಳನಟ ಮಾತ್ರವಲ್ಲದೇ ಹಾಸ್ಯನಟ, ಪೋಷಕ ನಟರಾಗಿಯೂ ಮಿಂಚುತ್ತಿದ್ದಾರೆ.

    https://www.youtube.com/watch?v=lmUE0srGZyI&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ರೇಂಜ್ ರೋವರ್ ಕೊಟ್ಟಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿನ ಡಾಲಿ ಪಾತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತರಾಗಿರುವ ನಟ ಧನಂಜಯ್ ರೇಂಜ್ ರೋವರ್ ಖರೀದಿಸಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

    ಇತ್ತೀಚೆಗೆ ಧನಂಜಯ್ ಅವರು ಕೆಂಪು ಬಣ್ಣದ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಆ ಹೊಸ ಕಾರಿಗೆ ಪೂಜೆ ಮಾಡಿಸುತ್ತಿರುವ ಫೋಟೋವನ್ನು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ರೇಂಜ್ ರೋವರ್ ಕಾರ್ ಜೊತೆ ಧನಂಜಯ್ ಟಿವಿಎಸ್ ಎಕ್ಸ್ ಎಲ್ ಸೂಪರ್ ದ್ವಿಚಕ್ರ ವಾಹನವನ್ನು ಪೂಜೆ ಮಾಡಿಸಿದ್ದಾರೆ. ಈ ಫೋಟೋವನ್ನು ಧನಂಜಯ್ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, “ಒಂದು ಅಪ್ಪ ಕೊಡಿಸಿದ್ದು, ಟಿವಿಎಸ್ ಎಕ್ಸ್ ಎಲ್, ಇನ್ನೊಂದು ನೀವು ಕೊಟ್ಟಿದ್ದು ರೇಂಜ್ ರೋವರ್. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ” ಎಂದು ಪೋಸ್ಟ್ ಮಾಡಿದ್ದಾರೆ.

    ಧನಂಜಯ್ ಅವರು ತಮ್ಮ ಹೊಸ ಕಾರನ್ನು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಈ ಕಾರಿನ ನಂಬರ್ ಕೆಎ 05 ಟಿಎಸ್ 8241 ಆಗಿದ್ದು, ಧನಂಜಯ್ ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರು.

    ಧನಂಜಯ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ಯಜಮಾನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಾಯಕನಾಗಿ ಕಾಣಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv