Tag: followers

  • ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡೋದಾದ್ರೆ ಕತ್ತಿಗೆ ನೀಡಿ – ಅಭಿಮಾನಿಗಳ ಆಗ್ರಹ

    ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡೋದಾದ್ರೆ ಕತ್ತಿಗೆ ನೀಡಿ – ಅಭಿಮಾನಿಗಳ ಆಗ್ರಹ

    ಚಿಕ್ಕೋಡಿ(ಬೆಳಗಾವಿ): ಇತ್ತಿಚೆಗೆ ನಿಧನರಾದ ಬೆಳಗಾವಿ ಸಂಸದ ಹಾಗೂ ರಾಜ್ಯ ರೇಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ನಿಧನದ ಬೆನ್ನಲ್ಲೇ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಈಗಾಗಲೇ ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ನಳಿನ್ ಕುಮಾರ್ ಭೇಟಿ ನೀಡಿ ಟಿಕೆಟ್ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮುಂಬರುವ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗಾಗಿ ಕಮಲ ನಾಯಕರಲ್ಲಿ ಪೈಪೋಟಿ ಶುರುವಾಗಿದ್ದು, ಈ ಪೈಕಿ ಹಲವು ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.

    ಉಪ ಚುನಾವಣಾಯಲ್ಲಿ ಅಂಗಡಿ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡುವುದಾದರೆ ರಮೇಶ್ ಕತ್ತಿ ಅವರನ್ನೇ ಪರಿಗಣಿಸಬೇಕು. ಮಾಜಿ ಸಂಸದರಾಗಿ ಕಾರ್ಯ ನಿರ್ವಹಿಸಿರುವ ರಮೇಶ್ ಕತ್ತಿಯವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭಿಮಾನಿಗಳಿದ್ದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿಲ್ಲೆಯಾದ್ಯಂತ ಹಿಡಿತ ಹೊಂದಿದ್ದಾರೆ.

    ಕಳೆದ ಲೋಕಸಭೆ ಹಾಗೂ ರಾಜ್ಯಸಭೆ ಟಿಕೆಟ್ ವಂಚಿತರಾಗಿದ್ದಾರೆ. ರಮೇಶ್ ಕತ್ತಿ ಅವರಿಗೆ ಸಿಎಂ ಯಡಿಯೂರಪ್ಪ ಒಳ್ಳೆಯ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಕತ್ತಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿಗಳು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಂಸದ ಅಂಗಡಿಗೆ ಸಿಎಂ ಪಟ್ಟ ಕಟ್ಟಲು ದೆಹಲಿಯಲ್ಲಿ ನಡೆದಿತ್ತು ಸಭೆ

  • ‘ಕಿಚ್ಚ’ ಅನ್ನೋ ಗುರುತು ನೀವು ಕೊಟ್ಟ ಗಿಫ್ಟ್, ಕೊನೆವರೆಗೂ ಕಾಪಾಡಿಕೊಳ್ತೀನಿ: ಸುದೀಪ್

    ‘ಕಿಚ್ಚ’ ಅನ್ನೋ ಗುರುತು ನೀವು ಕೊಟ್ಟ ಗಿಫ್ಟ್, ಕೊನೆವರೆಗೂ ಕಾಪಾಡಿಕೊಳ್ತೀನಿ: ಸುದೀಪ್

    – ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅವರು ಇಂದು ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ನಟನ ಅಭಿಮಾನಿಯೊಬ್ಬರು, ಸುದೀಪ್ ಅವರ ಫೋಟೋವೊಂದನ್ನು ಬ್ಲ್ಯಾಕ್ ಆ್ಯಂಡ್ ವೈಟ್ ಮಾಡಿ ಅದರ ಮೇಲೆ ‘ಕಿಚ್ಚ ಫಾರೆವರ್’ ಎಂದು ಇಂಗ್ಲಿಷ್ ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಅಭಿಮಾನಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿಕೊಂಡು ಕಿಚ್ಚ ಸುದೀಪ್ ಅವರ ಹೊಸ ಪ್ರೊಫೈಲ್ ಫೋಟೋ ಎಂದು ಬರೆದುಕೊಂಡಿದ್ದಾನೆ.

    https://twitter.com/SpreadSudeepism/status/1289442438285672448

    ಈ ಟ್ವೀಟ್ ಅನ್ನು ಸಂತಸದಿಂದಲೇ ಶೇರ್ ಮಾಡಿಕೊಂಡಿರುವ ಸುದೀಪ್, ”ಹೌದು. ಕಿಚ್ಚ ಎನ್ನುವುದು ನನ್ನ ಗುರುತಾಗಿದ್ದು, ಈ ಗುರುತನ್ನು ನೀವೇ ನನಗೆ ಕೊಟ್ಟಿದ್ದೀರಿ. ಈ ಗಿಫ್ಟ್ ಅನ್ನು ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ. ನೀವೆಲ್ಲ ನನ್ನನ್ನು ಕಿಚ್ಚ ಎಂದು ಪ್ರೀತಿಯಿಂದ ಕರೆಯುತ್ತಿದ್ದೀರಿ. ಹಾಗಾಗಿ ನಾನು ಕೂಡ ಕಿಚ್ಚನಾಗಿಯೇ ನಿಮ್ಮಲ್ಲರನ್ನೂ ಪ್ರೀತಿಸುತ್ತೇನೆ. ಹಾಗೆಯೇ ಈ ಪೋಸ್ಟರ್ ಡಿಸೈನ್ ಮಾಡಿದವರಿಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅದೇ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಫೋಟೋ ಆಗಿ ಮಾಡಿಕೊಂಡಿದ್ದಾರೆ.

    ಸುದೀಪ್ ಅವರಿಗೆ ‘ಹುಚ್ಚ’ ಚಿತ್ರದ ‘ಕಿಚ್ಚ’ ಪಾತ್ರ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆ ಬಳಿಕ ‘ಕಿಚ್ಚ’ ಎಂಬ ಹೆಸರಿನ ಚಿತ್ರ ಕೂಡ ನಿರ್ಮಾಣವಾಯಿತು. ಬಳಿಕದಿಂದ ಸುದೀಪ್ ಕಿಚ್ಚ ಎಂಬ ಹೆಸರಿನಿಂದಲೇ ಪ್ರಸಿದ್ಧಿಯಾದರು. ಸದ್ಯ ಸುದೀಪ್ ತಮ್ಮ ‘ಫ್ಯಾಂಟಮ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.

  • ನಿಯಮ ಉಲ್ಲಂಘಿಸಿ ರಮೇಶ್ ಬಾಬು ಬಂಡಿಸಿದ್ದೇಗೌಡ್ರಿಂದ ಸಂಭ್ರಮಾಚರಣೆ

    ನಿಯಮ ಉಲ್ಲಂಘಿಸಿ ರಮೇಶ್ ಬಾಬು ಬಂಡಿಸಿದ್ದೇಗೌಡ್ರಿಂದ ಸಂಭ್ರಮಾಚರಣೆ

    ಮಂಡ್ಯ: ಷರತ್ತು ಬದ್ಧ ಜಾಮೀನು ಪಡೆದ ಬಳಿಕ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಬೆಂಬಲಿಗರೊಂದಿಗೆ ಗುಂಪು ಕಟ್ಟಿಕೊಂಡು ಸಂಭ್ರಮಾಚರಣೆ ಮಾಡುವ ಮೂಲಕ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾಮಗಾರಿಗೆ ಅಡ್ಡಿ ಪಡಿಸಿ, ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಶ್ರೀರಂಗಪಟ್ಟಣದ ಜೆಎಂಎಫ್‍ಸಿ ಕೋರ್ಟಿನ ನ್ಯಾಯಾಧೀಶರ ಮುಂದೆ ನಿಲ್ಲಿಸಿದ್ರು.

    ನಂತರ ನ್ಯಾಯಾಧೀಶರು ರಮೇಶ್ ಬಾಬು ಬಂಡಿಸಿದ್ದೇಗೌಡ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದ್ದರು. ಬಳಿಕ ಹೊರಗೆ ಬಂದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಗುಂಪು ಕಟ್ಟಿಕೊಂಡು ಸಂಭ್ರಮಾಚರಣೆ ನಡೆಸಿದ್ರು. ಈ ವೇಳೆ ಯಾರು ಕೂಡ ಮಾಸ್ಕ್ ಧರಿಸಿರಲಿಲ್ಲ ಅಲ್ಲದೇ ಸಾಮಾಜಿಕ ಅಂತರವು ಇರಲಿಲ್ಲ. ಕೊರೊನಾ ಅಟ್ಟಹಾಸದ ನಡುವೆ ಈ ರೀತಿಯ ವರ್ತನೆ ವಿಪರ್ಯಾಸದ ಸಂಗತಿಯಾಗಿದೆ.

  • ಬಿಗ್ ಬಿ, ಸಲ್ಮಾನ್ ಮಧ್ಯೆ ಪೈಪೋಟಿ

    ಬಿಗ್ ಬಿ, ಸಲ್ಮಾನ್ ಮಧ್ಯೆ ಪೈಪೋಟಿ

    ನವದೆಹಲಿ: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಹಾಗೂ ಸಲ್ಮಾನ್ ಖಾನ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಬಿಗ್ ಬಿಯನ್ನು ಸಲ್ಲು ಹಿಂದಿಕ್ಕುತ್ತಾರಾ ಎಂಬ ಚರ್ಚೆ ಶುರುವಾಗಿದೆ.

    ಸ್ಟಾರ್ ಗಳಿಗೆ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಇರುವ ಏಕೈಕ ಮಾರ್ಗ ಎಂದರೆ ಅದು ಸಾಮಾಜಿಕ ಜಾಲತಾಣ. ಜಾಲತಾಣಗಳ ಮೂಲಕ ಎಲ್ಲ ನಟ ನಟಿಯರು ತಮ್ಮ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಸಹ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ತಮ್ಮ ನೆಚ್ಚಿನ ನಟರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುವ ಮೂಲಕ ಸಂಪರ್ಕದಲ್ಲಿರುತ್ತಾರೆ.

    ಇದೆಲ್ಲರ ಮಧ್ಯೆ ಯಾರಿಗೆ ಎಷ್ಟು ಜನ ಫಾಲೋವರ್ಸ್ ಇದ್ದಾರೆ, ಯಾವ ನಟ ಜನಪ್ರಿಯ ಎಂಬುದರ ಕುರಿತು ಚರ್ಚೆ ನಡೆಯುತ್ತಿರುತ್ತದೆ. ನಟರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಫಾಲೋವರ್ಸ್‍ಗಳನ್ನು ಆಧರಿಸಿ ಸಹ ಇದನ್ನು ಅಳೆಯಲಾಗುತ್ತದೆ. ಹೀಗಾಗಿ ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಆಗಾಗ ಅಭಿಮಾನಿಗಳಿಗಾಗಿ ಸುದ್ದಿ ನೀಡುತ್ತಿರುತ್ತಾರೆ. ಇದೇ ವಿಷಯಕ್ಕೆ ಇದೀಗ ಬಾಲಿವುಡ್ ಬಿಗ್ ಬಿ ಹಾಗೂ ಸಲ್ಮಾನ್ ನಡುವೆ ಪೈಪೋಟಿ ನಡೆಯುತ್ತಿದೆ.

    ಹೌದು ಟ್ವಿಟ್ಟರ್ ನಲ್ಲಿ 5.56 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರದ್ದು. ನಂತರದ ಸ್ಥಾನದಲ್ಲಿ ಅಬಿತಾಭ್ ಬಚ್ಚನ್ ಇದ್ದಾರೆ. ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವುದು ಬಿಗ್ ಬಿ, ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 4.15 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಇದೀಗ ಸಲ್ಮಾನ್ ಖಾನ್ ಸಹ 4 ಕೋಟಿಗೆ ಬಂದು ತಲುಪಿದ್ದಾರೆ. ಈ ಮೂಲಕ ನಟರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ, ದೇಶದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಬುಧವಾರ ಅವರು 40 ಮಿಲಿಯನ್ ಫಾಲೋವರ್ಸ್ ಮುಟ್ಟಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

    ಈ ಕುರಿತು ದಬಾಂಗ್ ಬಾಯ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಅತಿ ಹೆಚ್ಚು ಫಾಲೋವರ್ಸ್ ಪಡೆಯುತ್ತಿರುವ ಸಲ್ಮಾನ್ ಬಿಗ್ ಬಿಯನ್ನು ಹಿಂದಿಕ್ಕಲಿದ್ದಾರಾ ಎಂದು ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಸಲ್ಲು ಸದ್ಯ ಪ್ರಭುದೇವ್ ನಿರ್ದೇಶನದ ‘ರಾಧೆ: ದಿ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಚಿತ್ರದಲ್ಲಿ ಬಹು ತಾರಾಗಣವೇ ಇದ್ದು, ದಿಶಾ ಪಟಾನಿ, ಜಾಕಿ ಶ್ರಾಫ್, ರಣದೀಪ್ ಹೂಡಾ ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದಾರೆ.

  • ಟ್ವಿಟ್ಟರ್‌ನಲ್ಲಿ ಮಹೇಶ್ ಬಾಬು ಹೊಸ ಮೈಲುಗಲ್ಲು – ದಕ್ಷಿಣ ಭಾರತದಲ್ಲೇ ನಂ.1

    ಟ್ವಿಟ್ಟರ್‌ನಲ್ಲಿ ಮಹೇಶ್ ಬಾಬು ಹೊಸ ಮೈಲುಗಲ್ಲು – ದಕ್ಷಿಣ ಭಾರತದಲ್ಲೇ ನಂ.1

    ಬೆಂಗಳೂರು: ಟ್ವಿಟ್ಟರ್‌ನಲ್ಲಿ ತೆಲುಗಿನ ಫ್ರಿನ್ಸ್ ಮಹೇಶ್ ಬಾಬು ಅವರು ಹೊಸ ದಾಖಲೆಯನ್ನು ಮಾಡಿದ್ದಾರೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಟ್ವಿಟ್ಟರ್ ನಲ್ಲಿ ದಕ್ಷಿಣ ಭಾರತದ ದಿಗ್ಗಜ ನಟರಾದ ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್, ಮೋಹನ್‍ಲಾಲ್ ಮತ್ತು ಪ್ರಭಾಸ್ ಈ ಎಲ್ಲಾ ನಟರನ್ನು ಹಿಂದಿಕ್ಕಿದ ಮಹೇಶ್, ದಕ್ಷಿಣ ಭಾರತದ ನಟರಲ್ಲೇ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮಹೇಶ್ ಬಾಬು ಅವರಿಗೆ 9 ಮಿಲಿಯನ್ (90 ಲಕ್ಷ) ಟ್ವಿಟ್ಟರ್ ಹಿಂಬಾಲಕರು ಇದ್ದಾರೆ.

    ತಮಗೆ 9 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಆಗಿರುವ ಸಂತಸವನ್ನು ಟ್ವಿಟ್ಟರನಲ್ಲೇ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿರುವ ಮಹೇಶ್ ಬಾಬು, 9 ಮಿಲಿಯನ್ ಫಾಲೋವರ್ಸ್, ನನ್ನ ಹಿಂಬಾಲಕರಿಗೆ ಧನ್ಯವಾದಗಳು. ನನ್ನ ಅದ್ಭುತ ಪಯಾಣದಲ್ಲಿ ನನ್ನ ಜೊತೆ ಇದ್ದು, ಪ್ರೀತಿ ಮತ್ತು ಅಭಿಮಾನವನ್ನು ತೋರಿದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

    ಮಹೇಶ್ ಬಾಬು ಅವರನ್ನು ಬಿಟ್ಟರೆ, ಕಾಲಿವುಡ್ ಸೂಪರ್ ಸ್ಟಾರ್ ಧನುಶ್ ಅವರಿಗೆ 8.9 ಮಿಲಿಯನ್, ಸಮಂತಾ ಅಕ್ಕಿನೇನಿ ಅವರಿಗೆ 7.8 ಮಿಲಿಯನ್, ಮೋಹನ್ ಲಾಲ್ ಅವರಿಗೆ 5.9 ಮಿಲಿಯನ್, ರಜನಿಕಾಂತ್ ಅವರಿಗೆ 5.7 ಮಿಲಿಯನ್, ಕಮಲ್ ಹಾಸನ್ ಅವರಿಗೆ 5.8 ಮಿಲಿಯನ್, ತ್ರಿಶಾ ಅವರಿಗೆ 5.1 ಮಿಲಿಯನ್, ಅಲ್ಲು ಅರ್ಜುನ್ ಅವರಿಗೆ 3.8 ಮಿಲಿಯನ್, ಸೂರ್ಯ ಅವರಿಗೆ 5.5 ಮಿಲಿಯನ್, ಶ್ರುತಿ ಹಾಸನ್ ಅವರಿಗೆ 7.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿರುವ ನಟ ಎಂದರೆ ಅದು ಕಿಚ್ಚ ಸುದೀಪ್ ಆಗಿದ್ದು, ಅವರು 2.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು, 3.98 ಲಕ್ಷ, ಡಿ ಬಾಸ್ ದರ್ಶನ್ ಅವರು 7.35 ಲಕ್ಷ ಮತ್ತು ಪುನಿತ್ ರಾಜ್ ಕುಮಾರ್ ಅವರು, ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇನ್ನೂ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಅವರಿಗೆ, 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.

  • ಡಾ.ರಾಜ್‌ಕುಮಾರ್‌ಗೆ ಭಾರತ ರತ್ನಕ್ಕೆ ಶಿಫಾರಸು ಮಾಡುವಂತೆ ಸಿಎಂಗೆ ಮನವಿ

    ಡಾ.ರಾಜ್‌ಕುಮಾರ್‌ಗೆ ಭಾರತ ರತ್ನಕ್ಕೆ ಶಿಫಾರಸು ಮಾಡುವಂತೆ ಸಿಎಂಗೆ ಮನವಿ

    ಬೆಂಗಳೂರು: ನಟ ಸಾರ್ವಭೌಮ, ರಸಿಕರ ರಾಜ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್‌ಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

    ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ಅಖಿಲ ಕರ್ನಾಟಕ ರಾಜರತ್ನ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಇದೇ ವೇಳೆ ಚಾಮರಾಜನಗರ ತಾಲೂಕಿಗೆ ಡಾ. ರಾಜ್ ಕುಮಾರ್ ತಾಲೂಕು ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

    ಅಷ್ಟೇ ಅಲ್ಲದೆ ಚಲನಚಿತ್ರ ರಂಗದಲ್ಲಿ 34 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಇದೇ ಸಂದರ್ಭದಲ್ಲಿ ಅಭಿಮಾನಿಗಳ ಸಂಘ ಸಿಎಂಗೆ ಮನವಿ ಸಲ್ಲಿಸಲಾಗಿದೆ.

  • ಬಾಲಿವುಡ್ ಬಿಗ್- ಬಿ ಅಮಿತಾಬ್ ಆಸ್ಪತ್ರೆಗೆ ದಾಖಲು

    ಬಾಲಿವುಡ್ ಬಿಗ್- ಬಿ ಅಮಿತಾಬ್ ಆಸ್ಪತ್ರೆಗೆ ದಾಖಲು

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಅಮಿತಾಬ್ ಅವರು ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಮಿತಾಬ್ ರೂಟಿನ್ ಚೆಕಪ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಅಮಿತಾಬ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

    ಗುರುವಾರ ಕರ್ವಾ ಚೌತ್ ಹಬ್ಬವಿದ್ದ ಕಾರಣ ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ ಜಯಾ ಬಚ್ಚನ್ ಜೊತೆಯಿರುವ ಕಪ್ಪು-ಬಿಳಿ ಬಣ್ಣದ ಫೋಟೋವನ್ನು ಟ್ವೀಟ್ ಮಾಡಿದ್ದರು. ಅಕ್ಟೋಬರ್ 11ರಂದು ಅಮಿತಾಬ್ ತಮ್ಮ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿಂದಿನ ದಿನ ಅಮಿತಾಬ್, ನಾನು ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ ಎಂದಿದ್ದರು.

    ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ,”ಆಚರಿಸಲು ಏನಿದೆ? ಇದು ಸಾಮಾನ್ಯ ದಿನದಂತೆ. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ” ಎಂದು ಮನವಿ ಮಾಡಿದ್ದರು.

    ಅಮಿತಾಬ್ `ಬದ್ಲಾ’ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು `ಗುಲಾಬೋ ಸಿತಾಬೋ’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಚಿತ್ರಗಳನ್ನು ಹೊರತುಪಡಿಸಿ ಅಮಿತಾಬ್, `ಬ್ರಹ್ಮಾಸ್ತ್ರ’, `ಚೆಹರೆ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ವಿನಯ್ ಗುರೂಜಿ ಬೆಂಬಲಿಗರ ಮೇಲೆ ಕೊಲೆ ಯತ್ನ ಪ್ರಕರಣ: ಎಸ್‍ಪಿ ನಿಶಾ ಜೇಮ್ಸ್

    ವಿನಯ್ ಗುರೂಜಿ ಬೆಂಬಲಿಗರ ಮೇಲೆ ಕೊಲೆ ಯತ್ನ ಪ್ರಕರಣ: ಎಸ್‍ಪಿ ನಿಶಾ ಜೇಮ್ಸ್

    ಉಡುಪಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿ ಮೇಲೆ ಅವಧೂತ ವಿನಯ್ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಕೇಸ್ ದಾಖಲಾಗಿದೆ.

    ಉಡುಪಿ ಜಿಲ್ಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಿಸಿ ನಾಲ್ವರನ್ನು ದಸ್ತಗಿರಿ ಮಾಡಿದ್ದೇವೆ. ರತ್ನಾಕರ್ ಪೂಜಾರಿ, ತಾನು ನಟ ಸುದೀಪ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ವಿನಯ್ ಗುರೂಜಿ, ಸುದೀಪ್ ಅವರ ಬಗ್ಗೆ ಲೂಸ್ ಟಾಕ್ ಮಾಡಿದ್ದಾರೆ ಎಂಬುದು ರತ್ನಾಕರ ಅವರ ಆರೋಪ. ಇದರಿಂದ ಕೊಪಗೊಂಡ ಅವರು, ಗುರೂಜಿ ವಿರುದ್ಧ ಪೋಸ್ಟ್ ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ. ರತ್ನಾಕರ್ ಪೂಜಾರಿಯ ಕೈ, ಕಾಲು ಮುರಿದಿದೆ ಎಂದು ಎಂದು ಎಸ್‍ಪಿ ಮಾಹಿತಿ ನೀಡಿದರು. ಇದನ್ನೂ ಓದಿ: ವಿನಯ್ ಗುರೂಜಿ ಬೆಂಬಲಿಗರ ಗೂಂಡಾಗಿರಿ- ಕಿಚ್ಚನ ಅಭಿಮಾನಿ ಮೇಲೆ ಹಲ್ಲೆ

    ನಾಲ್ವರು ಆರೋಪಿಗಳಾದ ಗುರುರಾಜ್, ಸಂತೋಷ್, ರವಿರಾಜ್, ಪ್ರದೀಪ್ ದಸ್ತಗಿರಿ ಮಾಡಿದ್ದೇವೆ. ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ. ಘಟನೆಯಲ್ಲಿ 8 ರಿಂದ 10 ಆರೋಪಿಗಳು ಇದ್ದಾರೆ ಎಂದು ದೂರುದಾರ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರ 2 ತಂಡ ರಚನೆ ಮಾಡಿ ಹುಡುಕಾಟ ಮಾಡುತ್ತಿದ್ದೇವೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಹೇಳಿದ್ದಾರೆ. ರತ್ನಾಕರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನನ್ನ ಮೇಲೆ 15 ಮಂದಿ ರಾಡ್‌ನಿಂದ ಹಲ್ಲೆ ಮಾಡಿದ್ರು- ಸುದೀಪ್ ಅಭಿಮಾನಿ

    ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಚಾರ ಚರ್ಚೆಯಾದರೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಸ್ಕ್ರಾಲ್ ಮಾಡಿ ಮುಂದಕ್ಕೆ ಹೋಗಬೇಕು. ಈ ಘಟನೆಯಲ್ಲಿ ಯುವಕರೇ ಶಾಮೀಲಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ನಿಶಾ ಅವರು ಕಿವಿಮಾತು ಹೇಳಿದ್ದಾರೆ.

  • ಇನ್‍ಸ್ಟಾಗ್ರಂನಲ್ಲೂ ಮೋದಿ ನಂ.1- ಟ್ರಂಪ್, ಒಬಾಮಾರನ್ನು ಹಿಂದಿಕ್ಕಿದ ನಮೋ

    ಇನ್‍ಸ್ಟಾಗ್ರಂನಲ್ಲೂ ಮೋದಿ ನಂ.1- ಟ್ರಂಪ್, ಒಬಾಮಾರನ್ನು ಹಿಂದಿಕ್ಕಿದ ನಮೋ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಟ್ವಿಟ್ಟರ್ ಬಳಿಕ ಈಗ ಇನ್‍ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಬರೋಬ್ಬರಿ 3 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಇನ್‍ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ನಂಬರ್ 1 ರಾಜಕಾರಣಿಯಾಗಿದ್ದಾರೆ.

    ಹೌದು. ಕ್ರಿಕೆಟ್ ಆಟಗಾರರು, ಸಿನಿಮಾ ತಾರೆಯರು, ಕ್ರೀಡಾಪಟುಗಳಂತೆ ಪ್ರಧಾನಿ ಮೋದಿ ನವ ಪೀಳಿಗೆ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್‍ಸ್ಟಾದಲ್ಲಿ 30 ಮಿಲಿಯನ್(3 ಕೋಟಿ) ಫಾಲೋವರ್ಸ್ ಹೊಂದಿರುವ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಾಜಿ ಅಧ್ಯಕ್ಷ ಒಬಾಮಾ ಅವರನ್ನೂ ಹಿಂದಿಕ್ಕಿ ನಂ. 1 ಸ್ಥಾನವನ್ನು ಅಲಂಕರಿಸಿದ್ದಾರೆ. ಪ್ರಸ್ತುತವಾಗಿ ಇನ್‍ಸ್ಟಾದಲ್ಲಿ ಒಬಾಮಾ 2.48 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಇತ್ತ ಟ್ರಂಪ್ ಅವರನ್ನು 1.49 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. 

    ಈ ಬಗ್ಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಟ್ವೀಟ್ ಮಾಡಿ, ಇನ್‍ಸ್ಟಾಗ್ರಾಂನಲ್ಲಿ ಟ್ರಂಪ್‍ಗಿಂತಲೂ ನಮೋ ಫೇಮಸ್, ಈ ದಾಖಲೆಯು ಮೋದಿ ಜನಪ್ರಿಯತೆಗೆ ಮತ್ತೊಂದು ಸಾಕ್ಷಿ. ಯುವ ಜನತೆಯೊಂದಿಗೆ ಮೋದಿ ಅವರ ನಂಟನ್ನು ಇದು ನಿರೂಪಿಸಿದೆ ಎಂದು ಹಾಡಿ, ಹೊಗಳಿದ್ದಾರೆ.

    ಟ್ವಿಟ್ಟರ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತು ಯೂಟ್ಯೂಬ್ ಈ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಸಕ್ರಿಯವಾಗಿದ್ದು ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಟ್ವಿಟ್ಟರ್‌ನಲ್ಲಿ ಪ್ರಸ್ತುತ 5.7 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಹಾಗೆಯೇ ಮೋದಿ ಅವರ ಅಧಿಕೃತ ಫೇಸ್‍ಬುಕ್ ಪೇಜ್ ಅನ್ನು 4.44 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ.

    ಮೋದಿ ಅವರು 2009ರಲ್ಲಿ ಗುಜರಾತಿನ ಸಿಎಂ ಆಗಿದ್ದಾಗ ಟ್ವಿಟರ್ ಅಕೌಂಟ್ ಹೊಂದುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾದ ಜನಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಬಳಿಕವಂತೂ ಮೋದಿ ಟ್ವಿಟ್ಟರ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ತಮ್ಮ ನಿರಂತರವಾದ ಟ್ವೀಟ್‍ಗಳ ಮೂಲಕ ಸಕ್ರಿಯವಾಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾರೆ. ಈಗ ಇನ್‍ಸ್ಟಾಗ್ರಾಂನಲ್ಲಿ ಮೋದಿ ಮಿಂಚುತ್ತಿದ್ದಾರೆ.

    ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಟ್ವಿಟ್ಟರ್‌ನಲ್ಲಿ 10.94 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 6.77 ಕೋಟಿ ಫಾಲೋವರ್ಸ್ ಇದ್ದಾರೆ. ಮೋದಿ ಟ್ವಿಟ್ಟರ್‌ನಲ್ಲಿ 5.7 ಕೋಟಿ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ರಾಜಕಾರಣಿಯಾಗಿ ಹೊರಹೊಮ್ಮಿದ್ದರು.