Tag: followers

  • ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

    ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamu Murder Case) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‍ವುಡ್ ನಟ ದರ್ಶನ್ (Challenging Star Darshan) ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯ ಎಡ ಹಾಗೂ ಬಲಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಗಾವಹಿಸಿದ್ದಾರೆ. ಅಲ್ಲದೇ ದರ್ಶನ್ ಮನೆಯ ಅಕ್ಕಪಕ್ಕದ ಮನೆಗೆ ಹೋಗುವ ಹಾಗೂ ಬರುವವರನ್ನು ಕೂಡ ಪೊಲೀಸರು ವಿಚಾರಿಸಿ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: Exclusive – ಪವಿತ್ರಾ ಗೌಡ ಒಬ್ಬರನ್ನ ಕೊಲೆ ಮಾಡ್ತಾಳೆ ಅಂದ್ರೆ ಅದು ಸುಳ್ಳು: ಮಾಜಿ ಪತಿ ಸಂಜಯ್‌ ಸಿಂಗ್‌

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರನ್ನು ಬಂಧಿಸಲಾಗಿದೆ. ದರ್ಶನ್ ಬಂಧನವಾಗುತ್ತಿದ್ದಂತೆಯೇ ಅಭಿಮಾನಿಗಳು ನಟನ ಪರ ನಿಂತಿದ್ದಾರೆ. ಮೊನ್ನೆ ದರ್ಶನ್ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆಯೇ ಠಾಣೆ ಮುಂಭಾಗ ಅಭಿಮಾನಿಗಳ ದಂಡೇ ನೆರೆದಿತ್ತು.

    ಡಿ ಬಾಸ್‍ಗೆ ಜೈಕಾರ ಹಾಕಿದ್ದಾರೆ. ನಾವು ಯಾರು ಹೇಳಿ ದರ್ಶನ್ ಅಭಿಮಾನಿಗಳಾಗಿಲ್ಲ. ನಾವು ಅವರ ಒಳ್ಳೆಯ ಸಮಯದಲ್ಲಿ ಜೊತೆಗಿದ್ದೆವು, ಈಗಲೂ ಜೊತೆಗಿರುತ್ತೇವೆ ಎಂದು ರೊಚ್ಚಿಗೆದ್ದಿದ್ದಾರೆ. ಅಲ್ಲದೇ ತಡರಾತ್ರಿಯಾದರೂ ಠಾಣೆ ಮುಂಭಾಗವೇ ಜಮಾಯಿಸಿದ್ದರು. ಇನ್ನು ಕೊಲೆ ಪ್ರಕರಣ ಸಂಬಂಧ ಬುಧವಾರ ಸುಮ್ಮನಹಳ್ಲಿ ಮೋರಿ ಬಳಿ ಆರೋಪಿಗಳ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆಯೂ ಅಭಿಮಾನಿಗಳು ದರ್ಶನ್ ನೋಡಲು ಬಂದಿದ್ದರು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಕೊನೆಗೆ ಲಾಠಿ ಪ್ರಹಾರ ನಡೆಸಬೇಕಾಯಿತು.

  • ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಲಿ- ಅಭಿಮಾನಿಗಳಿಂದ ಶಬರಿಮಲೆಗೆ ಹರಕೆ

    ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಲಿ- ಅಭಿಮಾನಿಗಳಿಂದ ಶಬರಿಮಲೆಗೆ ಹರಕೆ

    ಯಾದಗಿರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.

    ಈ ಬಾರಿ ಕಾಂಗ್ರೆಸ್ ಪಕ್ಷ (Congress Party) ಅಧಿಕಾರಕ್ಕೆ ಬರಲಿ, ಸಿದ್ದು ಸಿಎಂ ಆಗಲಿ ಯಾದಗಿರಿಯ ಶಹಪುರ ಕ್ಷೇತ್ರದಲ್ಲಿ ಶರಣಬಸಪ್ಪಗೌಡ ದರ್ಶನಾಪುರ (Sharanabasappa Gouda Darshanapur) ಮತ್ತೊಮ್ಮೆ ಶಾಸಕರಾಗಲಿ ಎಂದು ತಲೆ ಮೇಲೆ ಇರುಮುಡಿ ಹೊತ್ತು, ಕೈಯಲ್ಲಿ ಸಿದ್ದರಾಮಯ್ಯ, ದರ್ಶನಾಪೂರ ಭಾವಚಿತ್ರ ಹಿಡಿದು ಅಭಿಮಾನಿಗಳು ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಯಾದಗಿರಿ ಜಿಲ್ಲೆಯ ಶಹಾಪುರದ ಉದ್ಯಮಿ ಗುರು ಮಣಿಕಂಠ ಹಾಗೂ ಸ್ನೇಹಿತರು ಹರಕೆ ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಉಚಿತ ಪ್ರವೇಶಕ್ಕೆ PM ಕಚೇರಿ ಅಧಿಕಾರಿಯ ಸಂಬಂಧಿಯಂತೆ ಪೋಸ್ ಕೊಟ್ಟ

  • ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

    ಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಅಭಿಮಾನಿಗಳ ದಂಡು ಸಮಾಧಿಯತ್ತ ಹರಿದುಬರುತ್ತಿದ್ದು, ಕಣ್ಣೀರಾಕುತ್ತಿದ್ದಾರೆ.

    ಕಂಠೀರವ ಸ್ಟುಡಿಯೋ (Kanteerava Studio) ಮುಂಭಾಗದಲ್ಲಿ ಅಭಿಮಾನಿಗಳು ನೆರೆದಿದ್ದು, ಅಪ್ಪು ಫೋಟೋ ನೋಡಿಕೊಂಡು ಮಹಿಳಾ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಂತೆಯೇ ಶಿವಮೊಗ್ಗದಿಂದ ಬಂದಿರುವ ವೃದ್ಧೆಯೊಬ್ಬರು ಮತ್ತೊಮ್ಮೆ ಹುಟ್ಟಿ ಬನ್ನಿ. ಯಾರ ಹೊಟ್ಟೆಯಲ್ಲಾದರೂ ಸರಿ ಮತ್ತೊಮ್ಮೆ ಹುಟ್ಟಿ ಬಾರಪ್ಪ ಅಂತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ

    ಇತ್ತ ಗುಬ್ಬಿಯಿಂದ ಬಂದಿರುವ ವೃದ್ಧೆ ಸುಮಿತ್ರಾ ಬಾಯಿ ಕಡ್ಲೆಪುರಿ ಹಾಗೂ ಬತ್ತಾಸು ಹಾರ ತಂದಿದ್ದಾರೆ. 20 ದಿನಗಳ ಕಾಲ ಸೂಕ್ಷ್ಮವಾಗಿ ಕಡ್ಲೆಪುರಿಗಳನ್ನು ಪೋಣಿಸಿ ಇದರ ಮಧ್ಯೆ ಬತ್ತಾಸು ಸೇರಿಸಿ ಅಜ್ಜಿ ಹಾರ ತಯಾರಿಸಿದ್ದಾರೆ. ಇದೀಗ ಈ ಹಾರದೊಂದಿಗೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದು, ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರಿಂದ ಸಮಾಧಿಗೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಅಸೌಇನಿ ಅವರ ಬರುವಿಕೆಗಾಗಿ ಅಜ್ಜಿ ಕಾಯುತ್ತಾ ಕುಳಿತಿದ್ದಾರೆ.

    ಇನ್ನೊಂದೆಡೆ ಬೆಣ್ಣೆಯಲ್ಲಿ ಅಪ್ಪು ಪುತ್ಥಳಿ ಕೆತ್ತನೆ ಮಾಡಿ ಕಲಾವಿದರು ಸಮಾಧಿ ಬಳಿ ತಂದಿದ್ದಾರೆ. ಬೆಂಗಳೂರಿನ ಚೆನ್ನೈಸ್ ಅಮೃತಾ ಕಲಾ ಸಂಸ್ಥೆಯ ಕಲಾವಿದರ ಕೈ ಚಳಕದಿಂದ 46 ಕೆಜಿ ಬೆಣ್ಣೆಯಲ್ಲಿ ಪುನೀತ್ ಫೋಟೋ ಅರಳಿದೆ. ಬೆಣ್ಣೆಯ ಪುತ್ಥಳಿಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಇಂದು ಕರ್ನಾಟಕ ರತ್ನಿಗೆ ಗೌರವ ಸಲ್ಲಿಸುತ್ತಿದ್ದಾರೆ.

    ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಟ ಡಾಲಿ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು!

    ನಟ ಡಾಲಿ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು!

    ಬಳ್ಳಾರಿ: ನಟ ಡಾಲಿ ಧನಂಜಯ್ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೌದು. ಬಡವ ರಾಸ್ಕಲ್ ಚಿತ್ರದ ಪ್ರಮೋಷನ್ ಗೆಂದು ನಟ ಬಳ್ಳಾರಿಯ ನಟರಾಜ ಥಿಯೇಟರ್ ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ಜನ ಸಾಗರವೇ ಹರಿದುಬಂತು. ಅಲ್ಲದೆ ತಮ್ಮ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. ಮಾಸ್ಕ್, ಸಾಮಾಜಿಕ ಅಂತರ ಮರೆತು ನಟನನ್ನ ನೋಡಿ ಅಭಿಮಾನಿಗಳು ಕಣ್ಣು ತುಂಬಿಕೊಂಡರು. ನೆರೆದ ಸುಮಾರು ಸಾವಿರಕ್ಕೂ ಅಧಿಕ ಮಂದಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಥಿಯೇಟರ್ ಸಿಬ್ಬಂದಿ ಹರಸಾಹಸವೇ ಪಡಬೇಕಾಯಿತು.

    ಇದೇ ವೇಳೆ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಹೊಸಪೇಟೆಯ ಪುನೀತ್ ಸರ್ಕಲ್ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗೂ ಮುನ್ನ ಡಾಲಿ, ಪುನೀತ್ ರಾಜ್‍ಕುಮಾರ್ ಸರ್ಕಲ್ ಗೆ ಬಂದಿದ್ದಾರೆ. ಈ ವೇಳೆಯೂ ಡಾಲಿ ನೋಡಲು ನೂಕು ನುಗ್ಗಲು ಏರ್ಪಟ್ಟಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇದನ್ನೂ ಓದಿ: ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದ ‘ಕಾಕ್ಟೈಲ್’ ಚಿತ್ರತಂಡ

    ಪುನೀತ್ ರಾಜಕುಮಾರ್ ವೃತ್ತದಿಂದ ಲಕ್ಷ್ಮೀ ಟಾಕೀಸ್ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಓಪನ್ ಜೀಪ್ ನಲ್ಲಿ ಭರ್ಜರಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಅಭಿಮಾನಿಗಳು ಓಡೋಡಿ ಬಂದರು. ನಂತರ ಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಡಾಲಿ ಬೆಂಗಳೂರಿನತ್ತ ಹೊರಟರು.

  • 13 ದಿನದಲ್ಲಿ 2 ಲಕ್ಷದ 26 ಸಾವಿರ ಮಂದಿಯಿಂದ ಅಪ್ಪು ಸಮಾಧಿ ದರ್ಶನ!

    13 ದಿನದಲ್ಲಿ 2 ಲಕ್ಷದ 26 ಸಾವಿರ ಮಂದಿಯಿಂದ ಅಪ್ಪು ಸಮಾಧಿ ದರ್ಶನ!

    ಬೆಂಗಳೂರು: ನಮ್ಮ ಪ್ರೀತಿಯ ಅಪ್ಪು ಪುನೀತ್ ರಾಜ್‍ಕುಮಾರ್ ನಿಧನರಾಗಿ 2 ವಾರಗಳೇ ಕಳೆದ್ರೂ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರನ ಸಮಾಧಿ ದರ್ಶನಕ್ಕೆ ಜನಸಾಗರವೇ ಹರಿದು ಬರ್ತಿದೆ. ಮಳೆ ಇರಲಿ, ಚಳಿ ಇರಲಿ ಯಾವುದನ್ನು ಲೆಕ್ಕಿಸದೇ ಹಿರಿಯರು, ಕಿರಿಯರು, ಅಂಗವಿಕಲರು ಸೇರಿದಂತೆ ಜನ ಗುಂಪು ಗುಂಪಾಗಿ ಆಗಮಿಸ್ತಿದ್ದಾರೆ.

    ರಾಜ್ಯ ಅಂತಾರಾಜ್ಯ ಸೇರಿದಂತೆ ಪ್ರತಿನಿತ್ಯ ನಾನಾ ಭಾಗಗಳಿಂದ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕಳೆದ 13 ದಿನದಲ್ಲಿ 2 ಲಕ್ಷದ 26 ಸಾವಿರ ಜನರಿಂದ ಅಪ್ಪು ಸಮಾಧಿ ದರ್ಶನ ಪಡೆದ್ರು. ಒಟ್ಟಿನಲ್ಲಿ ಅಪ್ಪು ನಿಧನವಾಗಿ ವಾರಗಳು ಉರುಳಿದರೂ ಸಮಾಧಿ ದರ್ಶನ ಪಡೆಯುವವರ ಸಂಖ್ಯೆ ಇನ್ನೂ ತಗ್ಗಿಲ್ಲ. ಲಕ್ಷಾಂತರ ಜನರಿಂದ ಅಂತಿಮ ದರ್ಶನದ ಬಳಿಕವೂ ಜನ ಸಾಗರ ತಗ್ಗಿಲ್ಲ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ

    ಯಾವ್ಯಾವ ದಿನ ಎಷ್ಟೆಷ್ಟು ಅಭಿಮಾನಿಗಳಿಂದ ದರ್ಶನ..?
    ನವೆಂಬರ್ 2 ರಂದು 1 ಸಾವಿರ, ನವೆಂಬರ್ 3 ರಂದು 25 ಸಾವಿರ, ನವೆಂಬರ್ 4 ರಂದು 25 ಸಾವಿರ, ನವೆಂಬರ್ 5 ರಂದು 35 ಸಾವಿರ, ನವೆಂಬರ್ 6 ರಂದು 22 ಸಾವಿರ, ನವೆಂಬರ್ 7 ರಂದು 36 ಸಾವಿರ, ನವೆಂಬರ್ 8 ರಂದು 14 ಸಾವಿರ, ನವೆಂಬರ್ 9 ರಂದು 14 ಸಾವಿರ, ನವೆಂಬರ್ 10 ರಂದು 8 ಸಾವಿರ, ನವೆಂಬರ್ 11 ರಂದು 5 ಸಾವಿರ, ನವೆಂಬರ್ 12 ರಂದು 8 ಸಾವಿರ, ನವೆಂಬರ್ 13 ರಂದು 10 ಸಾವಿರ, ನವೆಂಬರ್ 14 ರಂದು 23 ಸಾವಿರ ಮಂದಿ ದರ್ಶನ ಪಡೆದಿದ್ದಾರೆ.

    ಅಕ್ಟೋಬರ್ 29ರ ಶುಕ್ರವಾರದಮದು ಬೆಳಗ್ಗೆ ಅಪ್ಪು ಆಯಾಸಗೊಂಡಿದ್ದರು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೇ ನಿಧನರಾಗಿದ್ದರು.

  • ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    ಪುನೀತ್ ಸಮಾಧಿ ಬಳಿ 3 ಅಡಿ ಪುತ್ಥಳಿ ನಿರ್ಮಾಣ – ಪಾರಿವಾಳ ಸಮೇತ ಅಂತಿಮ ಸ್ಪರ್ಶ

    – ರಾಜಕುಮಾರನ ಸ್ಮರಣಿಕೆಗಳಿಗೆ ಸಿಕ್ಕಾಪಟ್ಟೆ ಬೇಡಿಕೆ

    ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದ ನೋವು ಇನ್ನೂ ಮಾಸಿಲ್ಲ. ಇದೀಗ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿ ಬಳಿ ಇಡಲು ಅಪ್ಪು 3 ಅಡಿ ಎತ್ತರದ ಪುತ್ಥಳಿ ನಿರ್ಮಾಣವಾಗ್ತಿದೆ.

    ಡಾ.ರಾಜ್ ಪುತ್ಥಳ ತಯಾರಿಸಿದ್ದ ಶಿಲ್ಪಿ ಶಿವದತ್ತ ಅವರೇ ಪುನೀತ್ ಪುತ್ಥಳಿ ತಯಾರು ಮಾಡ್ತಿದ್ದಾರೆ. ‘ನಾನೇ ರಾಜಕುಮಾರ’ ಹಾಡಿನಲ್ಲಿ ಬಂದು ಕೂರುವ ಪಾರಿವಾಳ ಸಮೇತ ಈ ಪುತ್ಥಳಿ ತಯಾರಾಗ್ತಿರೋದು ವಿಶೇಷವಾಗಿದೆ. ಮನೆಯಲ್ಲಿಡಲು ಅಭಿಮಾನಿಗಳಿಂದ ಅಪ್ಪು ಪುಟ್ಟ ಶಿಲ್ಪ ಸ್ಮರಣಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 400 ಶಿಲ್ಪ ಸ್ಮರಣಿಕೆಗೆ ಬೇಡಿಕೆ ಬಂದಿದ್ದು, ಅದರ ತಯಾರಿಕಾ ಕೆಲಸವೂ ನಡೆಯುತ್ತಿದೆ ಅಂತ ಶಿವದತ್ತ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅತ್ತೆ ನಾಗಮ್ಮಗೆ ಸುದ್ದಿ ಇನ್ನೂ ಗೊತ್ತೇ ಇಲ್ಲ- ಗಾಜನೂರಿನ ಪ್ರತಿ ಮನೆಯಲ್ಲೂ ನೀರವ ಮೌನ!

    ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಅನೇಕ ಮಾನವೀಯ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಹಲವರು ನೇತ್ರದಾನ, ದೇಹದಾನಕ್ಕೆ ಸಹಿ ಮಾಡಿದ್ದರೆ, ಇನ್ನೂ ಕೆಲವರು ಅವರ ಫೋಟೋಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇದೀಗ ಅವರ ಈ ಕೆಲಸಗಳನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ.

  • ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ

    ಅಪ್ಪುವಿನಂತೆ ಆದರ್ಶರಾದ ಅಭಿಮಾನಿ ದೇವರುಗಳು- 12 ದಿನಗಳ ಕಾರ್ಯ ನಿರ್ವಿಘ್ನ, ಎಲ್ಲವೂ ಶಾಂತ

    ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೆ ಅವರ ಅಭಿಮಾನಿ ದೇವರುಗಳು ಕೂಡ ಆದರ್ಶರಾಗಿದ್ದಾರೆ. ಅಪ್ಪು 12 ದಿನಗಳ ಕಾರ್ಯ ನಿರ್ವಿಘ್ನ. ಈ ಮೂಲಕ ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಅಪ್ಪು ಸಾವಿನ ಸುದ್ದಿ, ಅಂತಿಮ ದರ್ಶನ, ಅಂತ್ಯಕ್ರಿಯೆ, ಪುಣ್ಯಾರಾಧನೆ, ಅನ್ನ ಸಂತರ್ಪಣೆವರೆಗೂ ಅಭಿಮಾನಿಗಳು ಶಾಂತಚಿತ್ತದಿಂದ ವರ್ತಿಸಿದ್ದಾರೆ. ಈ ಮೂಲಕ ‘ಅಭಿ’ಮಾನಿ ಸಾಗರ ಅಪ್ಪುವನ್ನು ಶಾಂತಿಯುತವಾಗಿ ಬೀಳ್ಕೊಟ್ಟಿದೆ.

    * ಅ.29 – ಅಪ್ಪುಗೆ ಹೃದಯಾಘಾತ, ನಿಧನ:
    ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಅಪ್ಪುಗೆ ಗಂಟೆ ದೊಡ್ಮನೆ ಭಕ್ತರ ಹೃದಯ ಘಾಸಿಯಾದ ದಿನ. ಹೃದಯ ಚುಚ್ಚುತ್ತಿದ್ದರೂ ಹೊರತು ಅಭಿಮಾನಿಗಳು ಸಂಯಮ, ತಾಳ್ಮೆ ಬಿಟ್ಟುಕೊಡ್ತಿಲ್ಲ. ವಿಕ್ರಂ ಆಸ್ಪತ್ರೆ ಬಳಿ ಕಣ್ಣೀರು ಹಾಕಿ,ಬಿದ್ದು ಒದ್ದಾಡಿದರು. ಆದರೆ ಕಾನೂನು ಕಟ್ಟಳೆ ಮೀರಲಿಲ್ಲ. ಮಧ್ಯಾಹ್ನ 3 ಗಂಟೆ ಸದಾಶಿವನಗರದ ನಿವಾಸದಲ್ಲಿ ಪುನೀತ್ ಪಾರ್ಥೀವ ಶರೀರ ಇದ್ದಾಗಲೂ ವಿನಯತೆ – ತಾಳ್ಮೆಯಲ್ಲೂ ಅಭಿಮಾನಿಗಳು ‘ರಾಜಕುಮಾರ’ನ ಹಿಂಬಾಲಿಸಿದರು.

    * ಅ.29 – ಅಂತಿಮ ದರ್ಶನ:
    ಅಕ್ಟೋಬರ್ 7ರ ಸಂಜೆ 7 ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಭರ್ತಿ 35 ಗಂಟೆಗಳು ಅಪ್ಪು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 25 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಮಳೆ, ಚಳಿ, ಹಗಲು ರಾತ್ರಿ ನಿಂತರೂ ದೊಡ್ಮನೆ ಅಭಿಮಾನಿ ದೇವರುಗಳು ವಿಚಲಿತರಾಗಿರಲಿಲ್ಲ.

    * ಅ. 31. – ಅಪ್ಪು ಅಂತ್ಯಕ್ರಿಯೆ:
    ಅಕ್ಟೋಬರ್ 31 ರ ಬೆಳಗ್ಗೆ 5 ಗಂಟೆ ಅಪ್ಪು ಅಂತಿಮ ಯಾತ್ರೆಯ ವೇಳೆ ತಮ್ಮ ಆರಾಧ್ಯ ದೈವದ ಧ್ಯೇಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರು. ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆ 8.30ಕ್ಕೆ ಪ್ರೀತಿಯ ಅಪ್ಪು ಅಂತ್ಯಕ್ರಿಯೆ ನಡೆದಿದ್ದು, ಅಂತಿಮ ವಿದಾಯ ಹೇಳುವಾಗಲೂ ದೊಡ್ಮನೆ ಫ್ಯಾನ್ಸ್ ದೊಡ್ಡತನ ಮೆರೆದಿದ್ದಾರೆ. ಇದನ್ನೂ ಓದಿ: ಸೌದೆ ಹಿಡಿದು ದೇವಿರಮ್ಮನ ದರ್ಶನ – ಅಪ್ಪು ಅಭಿಮಾನಿಯ ವಿಶೇಷ ಹರಕೆ!

    * ನ.2 – ಹಾಲು-ತುಪ್ಪ:
    ನವೆಂಬರ್ 2 ಬೆಳಗ್ಗೆ 11.30 ಅಪ್ಪು ಹಾಲು- ತುಪ್ಪ ಈ ವೇಳೆಯೂ ಅಭಿಮಾನಿ ದೇವರುಗಳ ದೊಡ್ಡತನ ಕರುನಾಡಲ್ಲಿ ಆದರ್ಶವಾಯಿತು.

    * ನ.3 – ಸಮಾಧಿ ದರ್ಶನ:
    ನವೆಂಬರ್ 3ರ ಬೆಳಗ್ಗೆ 9 ಗಂಟೆಯಿಂದ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಯಿತು. ಅತ್ತು ಅತ್ತು ಗೋಳಾಡಿದರು ಹೊರತು ಅಭಿಮಾನಿಗಳೂ ಕಾನೂನು ವ್ಯಾಪ್ತಿಯ ಗಡಿ ದಾಟಲಿಲ್ಲ.

    * ನ.8 – ಪುಣ್ಯತಿಥಿ
    ನವೆಂಬರ್ 8 ಅಪ್ಪು ಪುಣ್ಯತಿಥಿ ಕಾರ್ಯಕ್ರಮವಿತ್ತು. ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಭಿಮಾನಿಗಳು ಜಗತ್ತಿಗೇ ಆದರ್ಶಪ್ರಾಯವಾದರು. ಈ ಮೂಲಕ ರಾಜಮಾರ್ಗಕ್ಕೆ ಚ್ಯುತಿ ತರಲಿಲ್ಲ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!

    *ನ. 9 – ಅನ್ನಸಂತರ್ಪಣೆ
    ನವೆಂಬರ್ 9 ಅಪ್ಪು ಹೆಸರಲ್ಲಿ ಅನ್ನಸಂತರ್ಪಣೆಯಲ್ಲಿ ದಾಖಲೆ ಸೃಷ್ಟಿಯಾಯ್ತು. 40 ಸಾವಿರ ಅಭಿಮಾನಿಗಳಿಗೆ ಬಾಳೆ ಎಲೆಊಟ. ಕಣ್ಣೀರ ಲೇಪನ ಮಾಡಿ ಅಭಿಮಾನಿಗಳು ಊಟ ಸೇವಿಸಿದರು. ಹೀಗೆ 12 ದಿನವೂ ಅಪ್ಪು ಅಭಿಮಾನಿ ದೇವರುಗಳ ತಾಳ್ಮೆ ಕೈಮೀರಲಿಲ್ಲ. ಅಭಿಮಾನಿಗಳನೇ ನಮ್ಮನೆ ದೇವರು ಅಂತ ಹಾಡಿದ್ದ ಅಪ್ಪುಗೆ ಅಪ್ಪುಗೆಯ ವಿದಾಯ ತಿಳಿಸಲಾಯಿತು.

  • ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಕಲಾವಿದರ ಬದುಕು ಹೇಗೆ ಅಂತ ಹೇಳೋಕಾಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತಿದ್ರು: ಚಿಕ್ಕಣ್ಣ

    ಬೆಂಗಳೂರು: ಕಲಾವಿದರ ಬದುಕು ಹೇಗೆ ಅಂತ ಹೇಳೋಕೆ ಆಗಲ್ಲ. ಹೀಗಾಗಿ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪುನೀತ್ ರಾಜ್ ಕುಮಾರ್ ಅವರು ಹೇಳುತ್ತಿದ್ದರು ಎಂದು ನಟ ಚಿಕ್ಕಣ್ಣ ಗದ್ಗದಿತರಾದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಪ್ಪು ನೆನೆದು ಭಾವುಕರಾದರು. 5 ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದೆ ಎಂದು ಹೇಳುತ್ತಾ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭೇಟಿಯಾದ ಮೊದಲ ಪರಿಚಯದ ದಿನಗಳನ್ನ ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕಿದರು.

    ಜೇಮ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಹಲವು ದಿನಗಳು ಜೊತೆಯಾಗಿ ಕೆಲಸ ಮಾಡಿದ್ದೆವು. ಸದಾಶಿವನಗರದ ಸುತ್ತಮುತ್ತ ಶೂಟಿಂಗ್ ಮಾಡಿದ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವರ್ಷ 4 ಸಿನಿಮಾ ನಿರ್ಮಾಣ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು ಎಂದು ಚಿಕ್ಕಣ್ಣ ಹೇಳಿದರು. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ನನಗೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿದ್ದರು. ಮೂರು ದಿನ ಕಥೆ ಬಗ್ಗೆ ಕೂಡ ಮಾತಾಡಿದ್ದೆವು. ಕಲಾವಿದರ ಬದುಕು ಹೇಗೆ ಅಂತ ಹೇಳಕ್ಕೆ ಆಗಲ್ಲ ದುಡಿಯುವಾಗ ಸೇವಿಂಗ್ಸ್ ಮಾಡು ಅಂತ ಪ್ರತಿ ಬಾರಿಯೂ ಹೇಳುತ್ತಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು.

    ಫಿಟ್ ನೆಸ್ ಬಗ್ಗೆ ಅಪ್ಪು ಬಹಳ ಚರ್ಚೆ ಮಾಡುತ್ತಿದ್ದರು. ಈಗ ಅವರಿಲ್ಲ ಅನ್ನೋದನ್ನ ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ಅತ್ತುಬಿಟ್ಟರು. ಇದನ್ನೂ ಓದಿ: ನವೆಂಬರ್ 16ರಂದು ಪವರ್ ಸ್ಟಾರ್‌ಗೆ ಸ್ಯಾಂಡಲ್‍ವುಡ್ ನುಡಿನಮನ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 10 ದಿನಗಳೇ ಕಳೆದಿವೆ. ಆದರೂ ಇಂದಿಗೂ ಅವರ ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳ ಸಾಗರವೇ ಹರಿದಬರುತ್ತಿದೆ. ಈ ಮಧ್ಯೆ ಇಂದು ರಾಜ್ಯದ ಎಲ್ಲಾ ಥಿಯೇಟರ್ ಗಳಲ್ಲಿಯೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ 11 ದಿನದ ಕಾರ್ಯಕ್ರಮವನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ.

  • ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಪವರ್ ಸ್ಟಾರ್ ಸಮಾಧಿ ಬಳಿ ಅಭಿಮಾನಿಗಳ ಕಣ್ಣೀರಧಾರೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ 6 ದಿನ ಕಳೆಯುತ್ತಾ ಬಂತು. ನೆಚ್ಚಿನ ಸ್ಟಾರ್ ಇಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 25 ಲಕ್ಷದವರೆಗೆ ಅಭಿಮಾನಿಗಳು ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ ಕಣ್ಣೀರಿಟ್ಟಿದ್ದರು. ಇದೀಗ ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿ ಸಾಗರ ಹರಿದು ಬರ್ತಿದೆ.

    ಮಂಗಳವಾರ ಸಂಜೆಯೇ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಇಂದು 9 ಗಂಟೆಯಿಂದ ದರ್ಶನಕ್ಕೆ ಬಿಡಲಾಗಿತ್ತು. ಆದರೆ ಓರ್ವ ಅಜ್ಜಿ ಬೆಳಗ್ಗೆ 5 ಗಂಟೆಗೇ ಬಂದು ಕಾದು ಕುಳಿತಿದ್ದರು. ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ಹಿರಿಯರು ಎಲ್ಲರೂ ಅಪ್ಪು ಸಮಾಧಿಗೆ ನಮಿಸಿ ಕಣ್ಣೀರು ಹಾಕಿದ್ರು. ಅದರಲ್ಲೂ ಮಹಿಳೆಯರಂತೂ ದುಃಖ ತಡೆಯದೆ ಗೋಳಾಡಿದರು.

    ಎರಡು ದಿನ ಊಟ ಬಿಟ್ಟಿದ್ದೆ ಅಂತ ಸಂಕಟ ವ್ಯಕ್ತಪಡಿಸಿದ್ರು. ಮಕ್ಕಳೇ ಇರೋ ನಾಟ್ಯಲೋಕ ತಂಡ ಪುನೀತ್ ಸಮಾಧಿಯ ಎದುರು ಡ್ಯಾನ್ಸ್ ಮಾಡಿ ನಮನ ಸಲ್ಲಿಸಿತು. ಈ ಹಿಂದೆ ಈ ಮಕ್ಕಳ ನೃತ್ಯಕ್ಕೆ ಪುನೀತ್ ಭೇಷ್ ಅಂದಿದ್ದರು. ಧಾರಾವಾಹಿ ಕಲಾವಿದರು ಕೂಡ ಕಂಬನಿ ಮಿಡಿದರು. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ

    ಪಾವಗಡದ ಅಪ್ಪು ಅಭಿಮಾನಿ ದಯಾನಂದ್ ಅನ್ನೋರು ಎತ್ತಿನಗಾಡಿಯಲ್ಲೇ ಸಮಾಧಿ ದರ್ಶನಕ್ಕೆ ಬಂದಿದ್ರು. ಬಳಿಕ ಅಪ್ಪು ಮನೆಗೆ ಹೋಗಿ ಶಿವಣ್ಣ ಕಾಲಿಗೆ ಬಿದ್ದು ನಮಸ್ಕರಿಸಿ, ಅಪ್ಪುನಾ ನಿಮ್ಮಲ್ಲಿ ನೋಡ್ತೇವೆ ಅಂದ್ರು. ರಾಘಣ್ಣ ಕೂಡ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು. ಈ ಮಧ್ಯೆ ಅಪ್ಪು ಕಂಚಿನ ಪುತ್ಥಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

  • ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ

    ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ

    – ಕಾಲ್ತುಳಿತಕ್ಕೆ ಮೂವರಿಗೆ ಗಾಯ

    ಬೆಂಗಳೂರು: ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು ಅಕಾಲಿಕ ನಿಧನ ಇಡೀ ಚಿತ್ರರಂಗ, ಅಭಿಮಾನಿಗಳು ಹಾಗೂ ರಾಜ್ಯಕ್ಕೆ ಆಘಾತ ತಂದಿದೆ. ನಗರದ ಕಂಠೀರವ ಸ್ಟೇಡಿಯಂನಲ್ಲಿ ನಟನ ಅಂತಿಮ ದರ್ಶನ ನಡೆಯುತ್ತಿದ್ದು, ಅಭಿಮಾನಿಗಳ ಸಾಗರವೇ ನೆರೆದಿದೆ.

    ರಾಜ್ಯದ ವಿವಿಧ ಜಿಲ್ಲೆಗಳಿಂದ ಪುನೀತ್ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ರಾತ್ರಿಯಿಡೀ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೂ ಜನಸಾಗರ ಇನ್ನೂಕರಗಿಲ್ಲ. ಬೆಳಗ್ಗಿನ ಜಾವ ಆಗ್ತಿದ್ರೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪೊಲೀಸರು ಕೂಡ ಜನರನ್ನ ತಾಳ್ಮೆಯಿಂದ ನಿಯಂತ್ರಿಸುತ್ತಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಕೊನೆಯದಾಗಿ ವಿಶೇಷ ಪೋಸ್ಟ್ ಮಾಡಿದ್ದ ಅಪ್ಪು

    ಉತ್ತರ ಕರ್ನಾಟಕ ಭಾಗದಿಂದ ಬಸ್ ಗಳನ್ನು ಮಾಡಿಕೊಂಡು ಅಭಿಮಾನಿಗಳು ಅಪ್ಪು ಅಂತಿಮ ದರ್ಶನ ಪಡೆಯಲು ಬಂದಿದ್ದಾರೆ. ಮಕ್ಕಳು, ಯುವಕರು, ವಯೋವೃದ್ಧರು ಕೂಡ ಅಂತಿಮ ದರ್ಶನ ಪಡೆಯುತ್ತಿದ್ದು, ಬೆಳಗ್ಗೆ ಗಂಟೆ ಐದಾದ್ರು ಅಭಿಮಾನಿ ಸಮೂಹ ಮುಗಿಯಲಿಲ್ಲ. ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕೆ ರಾತ್ರಿಯಿಡೀ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಬ್ಯಾರಿಕೇಡ್ ಗಳನ್ನು ತಳ್ಳಿ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನು ಅಂತಿಮ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೂವರು ಗಾಯಗೊಂಡಿರುವ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: 2 ಗಂಟೆ ವ್ಯಾಯಾಮ, ಮೂರು ಗಂಟೆ ಐಸಿಯುನಲ್ಲಿ ಚಿಕಿತ್ಸೆ – ಪುನೀತ್ ಕೊನೆಕ್ಷಣ ಹೀಗಿತ್ತು

    ಸಮಯ ಕಳೆದಂತೆ ಅಭಿಮಾನಿಗಳು ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗುತ್ತಿದೆ. ಬೆಳಗಾಗುತ್ತಿದ್ದಂತೆ ಮತ್ತಷ್ಟು ಜನ ಕಂಠೀರವ ಸ್ಟೂಡಿಯೋ ನತ್ತ ಆಗಮಿಸುತ್ತಿದ್ದಾರೆ. ರಾಜ್ಯ ಮತ್ತು ಅಂತರಾಜ್ಯಗಳಿಂದ ಜನ ಬರುತ್ತಿದ್ದಾರೆ. ಸೂರ್ಯೋದಯ ಬಳಿಕ ಮತ್ತಷ್ಟು ಜನ ಹೆಚ್ಚಾಗೋ ಸಾಧ್ಯತೆ ಇದ್ದು, ಬೆಳಗಾಗುತ್ತಿದ್ದಂತೆ ಪೊಲೀಸರು ಮತ್ತಷ್ಟು ಅಲರ್ಟ್ ಆಗುತ್ತಿದ್ದಾರೆ. ಇದನ್ನೂ ಓದಿ: ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ನಿನ್ನೆ ಬೆಳಗ್ಗೆ ಅಪ್ಪುಗೆ ಹೃದಯಾಘಾತವಾಗಿತ್ತು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪುನೀತ್ ಪುತ್ರಿ ಅಮೆರಿಕದಲ್ಲಿದ್ದು, ಅವರ ಬರುವಿಕೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ.