Tag: Folk Style

  • ಉತ್ತರ ಕರ್ನಾಟಕದಲ್ಲಿ ಶುರುವಾಯಿತು ಜೋಕುಮಾರನ ಆರಾಧನೆ

    ಉತ್ತರ ಕರ್ನಾಟಕದಲ್ಲಿ ಶುರುವಾಯಿತು ಜೋಕುಮಾರನ ಆರಾಧನೆ

    – ಜಾನಪದ ಶೈಲಿಯಲ್ಲಿ ಹಾಡುತ್ತಾ ಗಮನಸೆಳೆದ ಮಹಿಳೆಯರು

    ಬಾಗಲಕೋಟೆ: ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಜೋಕುಮಾರನನ್ನು ಕೂರಿಸಿಕೊಂಡು ಆರಾಧನೆ ಮಾಡುತ್ತಿದ್ದಾರೆ.

    ಉತ್ತರ ಕರ್ನಾಟಕದ ಪ್ರಮುಖ ಜಾನಪದ ದೇವರು ಜೋಕುಮಾರನ ಕುರಿತು ಅನೇಕ ಕಥೆಗಳಿವೆ. ಬೆನಕನ ಅಮಾವಾಸ್ಯೆಯ ನಂತರ ಏಳನೇ ದಿನ ಜೋಕುಮಾರನ ಹಬ್ಬ ಆರಂಭವಾಗುತ್ತದೆ. ಈ ಭಾಗದ ಜನರು ಉತ್ತಮ ಮಳೆ, ಬೆಳೆ ಮತ್ತು ಸಮೃದ್ಧಿಯ ನಿಮಿತ್ತ ಜೋಕುಮಾರನನ್ನು ಪೂಜಿಸುತ್ತಾರೆ. ಇದನ್ನೂ ಓದಿ:  ಫೋನಿನಲ್ಲಿ ಮಾತಾಡ್ಕೊಂಡು ಒನ್ ವೇನಲ್ಲಿ ಬಂದು ಮತ್ತೊಬ್ಬನ ಕೈ ಕಟ್ ಮಾಡಿದ!

    ಗಣೇಶನನ್ನು ಪ್ರತಿಷ್ಠಾಪಿಸಿದ ನಾಲ್ಕನೆಯ ದಿನಕ್ಕೆ ಜನ್ಮ ತಾಳುವ ಜೋಕುಮಾರನನ್ನು ಮಹಿಳೆಯರು ಮಣ್ಣಿನ ಮೂರ್ತಿಯಾಗಿ ರೂಪಿಸುತ್ತಾರೆ. ನಂತರ ಹೊಸ ಬಿದಿರಿನ ಬುಟ್ಟಿಯಲ್ಲಿ ಜೋಕುಮಾರನ ಪ್ರತಿಷ್ಠಾಪಿಸುತ್ತಾರೆ. ಬೇವಿನ ಎಲೆಗಳಿಂದ ಶೃಂಗರಿಸುತ್ತಾರೆ. ನಂತರ ಮಹಿಳೆಯರು ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಊರಿನ ಪ್ರಮುಖ ಗಲ್ಲಿಗಳಿಗೆ ಹೊತ್ತುಕೊಂಡು ಹೋಗುತ್ತಾರೆ. ಮನೆಯ ಕಟ್ಟೆಯ ಮೇಲಿಟ್ಟು ಜೋಕುಮಾರನ ಹಾಡುಗಳ ಹಾಡುತ್ತಾರೆ.

    ಈ ಜೋಕುಮಾರನ ಹಾಡುಗಳು ಜಾನಪದ ಶೈಲಿಯಲ್ಲಿವೆ. ಈ ಎಲ್ಲ ಹಾಡುಗಳನ್ನು ಓದಲು ಬರೆಯಲು ಬಾರದ ಮಹಿಳೆಯರು ಸಹ ಹಾಡುತ್ತಾರೆ. ಈ ಹಾಡುಗಳಿಗೆ ಅದರದೇ ಆದ ಪದ್ಧತಿ ಇದೆ. ಈ ಹಾಡುಗಳು ಕೂಡ ಅತ್ಯಂತ ವಿಶಿಷ್ಠವಾಗಿವೆ. ಇದನ್ನೂ ಓದಿ:  6 ಎಕರೆ ಜಮೀನಿನ ಆಸೆಗಾಗಿ ತಮ್ಮನನ್ನೇ ಕೊಂದ ಪಾಪಿ ಅಣ್ಣ

    ‘ಅಡ್ಡಡ್ಡ ಮಳೆ ಬಂದ, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನ ಜೋಕುಮಾರ ಮುಡಿ ತುಂಬ ಹೂವ ಮುಡಿದಂತೆ ಚೆಲುವಿ ತನ್ನ ಮಡದಿಯಾಗೆಂದ ಸುಕುಮಾರ’- ಈ ರೀತಿಯ ವಿಶೇಷವಾದ ಹತ್ತಾರು ಹಾಡುಗಳನ್ನು ಹಾಡುತ್ತಾರೆ. ನಂತರ ಮೊರದಲ್ಲಿ ಅಕ್ಕಿ, ಜೋಳ, ಸಜ್ಜಿ, ಗೋಧಿ ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೈವೇದ್ಯ ರೂಪದಲ್ಲಿ ನೀಡುತ್ತಾರೆ. ಜೋಕುಮಾರನ ತುಟಿಗೆ ಹಚ್ಚಲಾದ ಬೆಣ್ಣೆಯನ್ನು ಕಪ್ಪು ಮಣ್ಣಲ್ಲಿ ಮುಚ್ಚಿ ಬೇವಿನ ಎಲೆಗೆ ಹಚ್ಚಿ ಮೊರದಲ್ಲಿ ಪ್ರಸಾದದ ಜೊತೆಗೆ ನೀಡುತ್ತಾರೆ.

  • ಜನಪದ ಶೈಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ – ಸಾಹಿತಿ ಶಂಭು ಬಳೆಗಾರ

    ಜನಪದ ಶೈಲಿ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ – ಸಾಹಿತಿ ಶಂಭು ಬಳೆಗಾರ

    ಕೊಪ್ಪಳ: ನಮ್ಮ ಗ್ರಾಮೀಣ ಸೊಗಡಿನ ಜನಪದ ಶೈಲಿಯು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಸಾಹಿತಿ ಡಾ. ಶಂಭು ಬಳೆಗಾರ ಅಭಿಪ್ರಾಯಪಟ್ಟರು.

    ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಶಾಲೆಯ 26ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಚಿಣ್ಣರ ಜನಪದ ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿಯು ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ. ನಮ್ಮ ಆಚಾರ ವಿಚಾರ, ಉಡುಗೆ ತೊಡುಗೆ, ಊಟ ಉಪಚಾರ ಸೇರಿದಂತೆ ಸಂಸ್ಕೃತಿಯನ್ನು ಬಿಂಬಿಸುವ ನಾನಾ ಬಗೆಯ ಕಾಯಕಗಳ ಶೈಲಿಗಳು ವಿಭಿನ್ನವಾಗಿ ಕಾಣುತ್ತದೆ. ಆದರೆ ಇಂದು ಆ ಜನಪದ ಶೈಲಿಯು ಮರೆಯಾಗುವ ಹಂತಕ್ಕೆ ತಲುಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೇವಲ ಬೆರಳೆಣಿಕೆಯಷ್ಟು ಗ್ರಾಮೀಣ ಭಾಗಗಳಲ್ಲಿ ಮಾತ್ರ ನಾವು ಜನಪದ ಶೈಲಿಯನ್ನು ಕಾಣವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧುನಿಕತೆಗೆ ಮಾರು ಹೋಗಿ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಜನಪದ ಶೈಲಿ, ಜನಪದ ಕಲೆ ಮರೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಜನಪದದ ಬಗ್ಗೆ ತಿಳಿಸುವ ಉದ್ದೇಶದಿಂದ ಚಿಣ್ಣರ ಜನಪದ ಜಾತ್ರೆ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

    ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಗ್ರಾಮೀಣ ಭಾಗಗಳಿಂದ ದೇಶ ಬದಲಾವಣೆ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ನಾವು ಗ್ರಾಮೀಣ ಭಾಗದ ಶೈಲಿಯನ್ನು ಕಡೆಗಣಿಸುವಂತಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಂಗವಾಗಿ ಶಾಲೆಯ ಆವರಣದಲ್ಲಿ ಜನಪದ ಶೈಲಿಯಲ್ಲಿ ತಾತ್ಕಾಲಿನ ಗ್ರಾಮಗಳನ್ನು ನಿರ್ಮಾಣ ಮಾಡಲಾಗಿತ್ತು. ಒಂದೊಂದು ಮನೆಯಲ್ಲಿ ಕೂಡ ಕಮ್ಮಾರರು, ನೇಕಾರರು, ಕುಂಬಾರರು ಸೇರಿದಂತೆ ನಾನಾ ರೀತಿಯ ಕಸುಬುಗಳ ಆಧಾರ ಮೇಲೆ ಮನೆಗಳನ್ನು ವಿಂಗಡಣೆ ಮಾಡಿ, ಯಾರು ಯಾವ ಕೆಲಸವನ್ನು ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಮಕ್ಕಳಿಗೆ ಪ್ರಯೋಗಿಕವಾಗಿ ನೀಡಲಾಯಿತು.