Tag: Folk artist

  • ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಉಳಿಸಲು ಪಣತೊಟ್ಟ ಕಲಾವಿದ!

    ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಉಳಿಸಲು ಪಣತೊಟ್ಟ ಕಲಾವಿದ!

    ಗದಗ: ಆಧುನಿಕ ತಂತ್ರಜ್ಞಾನ ಮುಂದುವರೆದಂತೆಲ್ಲಾ ಇತ್ತೀಚೆಗೆ ದೇಶಿ ಸೊಗಡಿನ ಜನಪದ ಮರೆಮಾಚುತ್ತಿದೆ. ಅದು ಉಳಿಬೇಕು, ಬೆಳೆಯಬೇಕು, ಮುಂದಿನ ಪೀಳಿಗೆಗೂ ನಮ್ಮಯ ದೇಶಿಯಸೊಗಡಿನ ಕೊಡುಗೆ ಇರಬೇಕೆಂದು ಅನಕ್ಷರಸ್ಥ ಜನಪದ ಕಲಾವಿದನೋರ್ವ ಪಣತೊಟ್ಟಿದ್ದಾರೆ.

    ಸುಶ್ರಾವ್ಯವಾಗಿ ಹಾಡಿ ಜನರನ್ನ ನಿಬ್ಬೆರಾಗಿಸುತ್ತಿರುವ ಕಲಾವಿದ, ಇವರ ಹಾಡಿಗೆ ಫಿದಾ ಆಗುತ್ತಿರುವ ಜನಸ್ತೋಮ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿ ನಿಂಗಣ್ಣ. ಓದಿರೋದು ಬರೀ 3ನೇ ಕ್ಲಾಸ್, ಕುರಿ ಕಾಯುತ್ತಾ ಜೀವನ ಕಟ್ಟಿಕೊಂಡಿದ್ದಾರೆ. ಇದರ ಮಧ್ಯೆ ಜಾನಪದ, ಗೀಗಿ ಪದ, ಡೊಳ್ಳಿನ ಪದ, ಭಜನಾಪದ, ರಾಶಿಪದ, ಸೋಬಾನೆ ಪದಗಳನ್ನು ರಚಿಸಿ ರಾಗ ತಾಳದೊಂದಿಗೆ ಸ್ವತಃ ಧ್ವನಿಗೂಡಿಸುತ್ತಾ ಪ್ರಸಿದ್ಧ ಜಾನಪದ ಕಲಾವಿದನಾಗಿದ್ದಾರೆ.

    ತನ್ನ ಕಂಠ ಸಿರಿ ಪ್ರತಿಭೆಯಿಂದಲೇ ಅಪಾರ ಜನ ಮನ್ನಣೆ ಪಡೆದಿರೋ ನಿಂಗಪ್ಪ. ತನ್ನ ಹಾಡಿನಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ, ನಮ್ಮ ಹಿಂದಿನ ಸಂಪ್ರದಾಯ, ರಾಜಕೀಯ ವಿಡಂಬಣೆ, ಜನರ ಸಮಸ್ಯೆ, ಭಯೋತ್ಪಾದನೆ, ರೈತರ ಬವಣೆಯನ್ನು ವಿಭಿನ್ನ ರೀತಿಯಲ್ಲಿ ಹಾಡಿನ ಮೂಲಕ ಜನರ ಕಣ್ಣೆದುರೆ ಕಟ್ಟಿಕೊಡುತ್ತಿದ್ದಾರೆ.

    ಜಾನಪದ ಸಾಹಿತ್ಯ ಕಣ್ಮರೆಯಾಗ್ತಿರೋ ಈ ಕಾಲದಲ್ಲಿ ಜಾನಪದ ಸಾಹಿತ್ಯ ರಕ್ಷಣೆಗೆ ಸತತ ಪ್ರಯತ್ನಿಸುತ್ತಿರುವ ಕಲಾವಿದ ನಿಂಗಪ್ಪ. ಸ್ವತಃ 500ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ತಾನು ಬರೆದ ಹಾಡು ಈ ಪೀಳಿಗೆಯಲ್ಲಿ ನಶಿಸಬಾರದು, ಮುಂದಿನ ಪೀಳಿಗೆಗೂ ಉಳಿಯುವಂತಾಗಬೇಕೆಂದು ಪುಸ್ತಕ ರೂಪದಲ್ಲಿ ಕೃತಿ ಹೊರತರಲು ಶ್ರಮಿಸುತ್ತಿದ್ದಾರೆ. ಆದರೆ ಆರ್ಥಿಕ ಸ್ಥಿತಿ ಗಂಭೀರ ಇರುವುದರಿಂದ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಮೊರೆ ಬಂದಿದ್ದಾರೆ.

    ಕಲಾವಿದ ನಿಂಗಪ್ಪ ಬಡ ಕುರಿಗಾಯಿಯಾಗಿದ್ದು, ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರೆ. ಈ ಮಧ್ಯೆ ಬರೆದ ಪದಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಕಷ್ಟಪಡುತ್ತಿದ್ದು. ನಶಿಸುತ್ತಿರುವ ಜಾನಪದ ಸಾಹಿತ್ಯ ಕಲೆಯನ್ನು ಉಳಿಸಲು ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕುರಿಗಾಯಿ ನಿಂಗಪ್ಪನ ಪ್ರತಿಭೆ ಮತ್ತು ಕಾಳಜಿಗೆ ಕಲಾಭಿಮಾನಿಗಳು ಸಹಾಯ ಮಾಡಲಿ ಎಂಬುದು ನಮ್ಮ ಆಶಯ.

    https://youtu.be/6n1UZ-lF8kU

  • 60 ವರ್ಷದ ಅಂಧ ಕಲಾವಿದ ಬಾಳಲ್ಲಿ ಬೇಕಾಗಿದೆ ಚಿಕ್ಕ ಸೂರಿನ ಬೆಳಕು

    60 ವರ್ಷದ ಅಂಧ ಕಲಾವಿದ ಬಾಳಲ್ಲಿ ಬೇಕಾಗಿದೆ ಚಿಕ್ಕ ಸೂರಿನ ಬೆಳಕು

    ಬೀದರ್: ಸುಮಾರು 60 ವರ್ಷಗಳಿಂದ ಜನಪದ ಸಂಸ್ಕೃತಿಯನ್ನು ಎಲ್ಲಡೆ ಪಸರಿಸುತ್ತಿರುವ ನಮ್ಮ ಪಬ್ಲಿಕ್ ಹೀರೋ ಕೃಷ್ಣಪ್ಪ ತಿಪ್ಪಣ್ಣ ಧರ್ಗೆ ಅವರು ಇಂದಿಗೂ ಬೀಳುವ ಹಂತದಲ್ಲಿರುವ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ಈ ಗುಡಿಸಲು ಇಂದೋ ನಾಳೆ ಬೀಳುವ ಹಂತದಲ್ಲಿದ್ದು, ಮನೆಯ ಸದಸ್ಯರೆಲ್ಲರೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಸವಾಗಿದ್ದಾರೆ.

    ಕೃಷ್ಣಪ್ಪ ಅವರು ಮೂಲತಃ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಮ್ಮಸನೂರು ಗ್ರಾಮದ ನಿವಾಸಿ. ಹೊಟ್ಟೆ ಪಾಡಿಗಾಗಿ ಬೆಳಗ್ಗೆ 6 ರಿಂದ ರಾತ್ರಿ ವರೆಗೆ ಜಿಲ್ಲದ್ಯಾಂತ ಸುತ್ತಿ ತಮ್ಮ ಕಲೆಯಿಂದ ಬಿಡುಗಾಸು ಸಂಪಾದನೆ ಮಾಡತ್ತಾರೆ. ಪುಟ್ಟ ಗುಡಿಸಲಿನಲ್ಲಿ ವಾಸ ಮಾಡಲು ಯಾತನೆಪಡುತ್ತಿದ್ದು ಯಾರಾದ್ರು ಸೂರು ನೀಡುತ್ತಾರೆ ಎಂದು ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಭೇಟಿಯಾದರೂ ಯಾವುದೆ ಪ್ರಯೋಜನವಾಗಿಲ್ಲ.

    ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳಿಗೆ ಬಾಜನರಾಗಿರುವ ಕೃಷ್ಣಪ್ಪರಿಗೆ ಸರ್ಕಾರ ವಾಸಿಸಲು ಒಂದು ಮನೆಯನ್ನು ನೀಡದೇ ಅಗೌರವವನ್ನು ತೋರಿಸಿದೆ. ಈ ಕುಟುಂಬದಲ್ಲಿ ಒಟ್ಟು 5 ಜನವಿದ್ದು ಸರಿಯಾದ ಮನೆ ಇಲ್ಲದೆ, ಹಗಲು ರಾತ್ರಿ ಏನ್ನದೆ ಭಯದಲ್ಲಿ ವಾಸ ಮಾಡುತ್ತಿದ್ದಾರೆ. ಒಂದೆ ಬಾರಿಗೆ 4 ಪರಿಕರಗಳನ್ನು ಬಳಿಸಿಕೊಂಡು ಸಂಗೀತ ನುಡಿಸುವ ಜೊತೆಗೆ ಜನಪದ ಹಾಡುಳಗ ಮೂಲಕ ಸಾಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಾ ಬಂದಿದ್ದಾರೆ. ಆದರೆ ಇಂದು ಕೃಷ್ಣಪ್ಪರ ಬದುಕು ಕಷ್ಟವಾಗಿದೆ.

    ಏಕತ್ತರಿ, ತಾಳ, ದಮ್ಮನಿ, ಗೆಜ್ಜೆ ಮತ್ತು ಹಾಡನ್ನು ಏಕ ಕಾಲಕ್ಕೆ ಹಾಡುವ ವಿಶೇಷ ಕಲೆಯನ್ನು ಕೃಷ್ಣಪ್ಪ ಮೈಗೂಡಿಸಿಕೊಂಡಿದ್ದಾರೆ. ಈ ಕಲೆಯನ್ನು ಪರಿಶ್ರಮದಿಂದ ಮೈಗೂಡಿಸಿಕೊಂಡಿದ್ದೆ ಹೊರೆತು ಯಾವ ಗುರುವಿನ ಮಾರ್ಗದರ್ಶನವನ್ನು ಪಡೆದಿಲ್ಲ. ಯಾವುದೇ ನಿರೀಕ್ಷೆಗಳಿಲ್ಲದೇ ಎಲ್ಲ ಕಾರ್ಯಗಳಿಗೆ ಮತ್ತು ದೇವಸ್ಥಾನಗಳ ಮುಂದೆ ತಮ್ಮ ಕಲೆಯನ್ನು ಅರ್ಪಿಸುತ್ತಾ ಬಂದಿದ್ದಾರೆ. ಈ ಕಲೆಗೆ ಪತ್ನಿ ಲಕ್ಷ್ಮಿಬಾಯಿ ಕೂಡಾ ಸಾಥ್ ನೀಡುತ್ತಿದ್ದು ಪತಿಯನ್ನು ಹಳ್ಳಿ ಹಳ್ಳಿಗೆ ಕರೆದುಕೊಂಡು ಹೋಗತ್ತಾರೆ.

    ಹುಟ್ಟಿದಾಗಿನಿಂದಲೂ ತಮ್ಮ ವಿಶೇಷ ಕಲೆಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತಾ ಬಂದಿರುವ ಈ ಕಲಾವಿದನ ಬದಕು ಇಂದು ಅಕ್ಷರ ಸಹ ನರಕ ಸದೃಶವಾಗಿದ್ದು ಒಂದು ಸೂರಿನ ನಿರೀಕ್ಷೆಯಲ್ಲಿದ್ದಾರೆ.