Tag: flyover

  • ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

    ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಚಿವ ಸಿ.ಸಿ.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಚಿವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್‍ನವರು ಮೊದಲು ತಿಳಿಯಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತೆ ಯಾವೋಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ಸಿಗರಿಗೆ ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ್ ಅವರು ಗೊತ್ತಿಲ್ಲಾ. ವೀರ ಸಾವರ್ಕರ್ ಬಿಜೆಪಿಯವರಾ? ಅವಾಗ ಬಿಜೆಪಿ ಇತ್ತಾ ಅಂತ ಪ್ರಶ್ನಿಸಿದರು.

    ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ರೋಡ್, ಆಯೋಜನೆ ಈ ಯೋಜನೆ ಅಂತೆಲ್ಲಾ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.

    ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಬಾಧಿತ, ಸುಭದ್ರವಿದೆ. ಹಲವಾರು ಹಿರಿಯ ಶಾಸಕರು ನಮ್ಮಲ್ಲಿ ಭಿನ್ನಮತ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ನಾಯಕರು ಸಹ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ. ನಮ್ಮ ಬಗ್ಗೆ ಯಾರು ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ಅವಧಿಗೆ ಪಕ್ಷವನ್ನು ಬಿಎಸ್‍ವೈ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

    ಕಪ್ಪತ್ತಗುಡ್ಡದಲ್ಲಿ ಸರ್ಕಾರ ಮೈನಿಂಗ್ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಕಪ್ಪತ್ತಗುಡ್ಡ ರಕ್ಷಣೆ ಸರ್ಕಾರದ ಹೊಣೆ. ನಾನು ಮೂಲತಃ ಬೆಳಗಾವಿ ಜಿಲ್ಲೆಯವನು. ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸತೀಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡಿದರೆ ಅವರ ಮೇಲೆ ಬ್ಲಾಕ್ ಆಂಡ್ ವೈಟ್ ಅಲಿಗೇಷನ್ ಸಾಕಷ್ಟಿವೆ. ಸಮಯ ಸಂದರ್ಭ ಬಂದಾಗ ಮುಂದಿನ ದಿನಗಳಲ್ಲಿ ಎಲ್ಲಾ ಪುಟಗಳನ್ನ ತೆರೆದಿಡುತ್ತೇನೆ ಎಂದು ಟಾಂಗ್ ಕೊಟ್ಟರು.

    ಮುಂಬೈ-ಗದಗ ಎಕ್ಸ್‍ಪ್ರೆಸ್ ರೈಲು ಬರಲಿದೆ. ರಾಜ್ಯದ ಜನ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಮುಂಬೈ ಕನ್ನಡಿಗರನ್ನ ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ. ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ನಂತರ 7 ದಿನ ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

    ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಸಾಲದಿದ್ದರೆ, ಕೊರತೆ ಕಂಡುಬಂದರೆ ಮುಂದೆ ತಾಲೂಕ ಕೇಂದ್ರಗಳಿಗೂ ಕಳಿಸುತ್ತೆವೆ ಎಂದು ತಿಳಿಸಿದರು.

  • ಬೈಕಿಗೆ ಇನ್ನೋವಾ ಕಾರು ಡಿಕ್ಕಿ – 40 ಅಡಿ ಫ್ಲೈಓವರ್ ರಸ್ತೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

    ಬೈಕಿಗೆ ಇನ್ನೋವಾ ಕಾರು ಡಿಕ್ಕಿ – 40 ಅಡಿ ಫ್ಲೈಓವರ್ ರಸ್ತೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

    ಬೆಂಗಳೂರು: ಬೈಕಿಗೆ ಹಿಂಬದಿಯಿಂದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸುಮಾರು 40 ಅಡಿ ಎತ್ತರದ ಫ್ಲೈಓವರ್ ರಸ್ತೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಬಳಿ ನಡೆದಿದೆ.

    ಬೆಂಗಳೂರಿನಿಂದ ತುಮಕೂರು ಕಡೆ ಬರುವ ವೇಳೆ ವೇಗವಾಗಿ ಬಂದ ಇನ್ನೋವಾ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕಿನಲ್ಲಿದ್ದ ಆಂಧ್ರ ಮೂಲದ 25 ವರ್ಷದ ಸಂಜಯ್ ಕುಮಾರ್ ಫ್ಲೈಓವರ್ ರಸ್ತೆಯಿಂದ 40 ಅಡಿ ಕೆಳಗೆ ಬಿದ್ದ ವೇಳೆ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ನರಳಾಡಿ ಸಾವನ್ನಪ್ಪಿದ್ದಾನೆ.

    ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತ ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದ್ದು, ಬೈಕ್ ಸವಾರ ಸಂಜಯ್ ಕುಮಾರ್ ಕೆಳಗೆ ಬೀಳುವ ವೇಳೆ ಆತನ ಹೆಲ್ಮೆಟ್ ಕೆಳಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಪಘಾತದ ವೇಳೆ ಜನರು ಧಾವಿಸುವ ದೃಶ್ಯ ಕೂಡ ಸೆರೆಯಾಗಿದೆ. ಸದ್ಯ ಇನ್ನೋವಾ ಕಾರು ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಿನ ಮೇಲ್ಸೇತುವೆ ಕೆಳಗೆ ಪ್ರತ್ಯಕ್ಷವಾದ ಕಾಡಾನೆ, ಹುಲಿರಾಯ

    ಬೆಂಗ್ಳೂರಿನ ಮೇಲ್ಸೇತುವೆ ಕೆಳಗೆ ಪ್ರತ್ಯಕ್ಷವಾದ ಕಾಡಾನೆ, ಹುಲಿರಾಯ

    ಬೆಂಗಳೂರು: ಹುಲಿರಾಯನ ಗಂಭೀರ ನೋಟ, ಮರಿ ಆನೆಯೊಂದಿಗೆ ದೃಢವಾಗಿ ನಿಂತಿರುವ ಬೃಹತ್ ತಾಯಿ ಆನೆ, ಪೊದೆಯಿಂದ ಹೊರಬರುತ್ತಿರುವ ಹುಲಿ ಇದೆಲ್ಲಾ ಬೆಂಗಳೂರಲ್ಲೇ ನೀವು ಕಾಣಬಹುದು.

    ಹೌದು. ಸಿಲಿಕಾನ್ ಸಿಟಿಯಲ್ಲಿ ರಾಜ್ಯ ವನ್ಯ ಸಂಪತ್ತಿನ ಅನಾವರಣವಾಗಿದೆ. ರಾಜ್ಯದ ಹೆಮ್ಮೆಯ ವನ್ಯಜೀವಿಗಳಾದ ಹುಲಿ, ಆನೆಯ ಬೃಹತ್ ಪ್ರತಿಕೃತಿಗಳನ್ನು ತಯಾರಿಸಿ, ನಗರದ ಮೇಲ್ಸೇತುವೆಯ ಅಡಿಭಾಗವನ್ನು ಸುಂದರವಾದ ವನ್ಯಜೀವಿ ತಾಣವಾಗಿ ಬದಲಾಯಿಸಲಾಗಿದೆ. ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಬರುವ ವೀರನಪಾಳ್ಯ ಸರ್ಕಲ್‍ನಲ್ಲಿ ಸುಮಾರು ಐದು ಸಾವಿರ ಕೆ.ಜಿ ಕಬ್ಬಿಣ ಬಳಸಿ ಈ ಪ್ರಾಣಿ ಪ್ರತಿಕೃತಿಗಳನ್ನು ಮಾಡಲಾಗಿದೆ.

    ವಾಹನ ಸವಾರರಿಗೆ ಚಲಿಸುವ ರೀತಿಯಲ್ಲಿ ಕಾಣುವಂತೆ, ಬಳಿಕ ಮಾಯವಾಗುವಂತೆ ಭಾಸವಾಗುವ ರೀತಿಯ ವಿಶಿಷ್ಟ ವಿನ್ಯಾಸದಲ್ಲಿ ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಫ್ಲೈಓವರ್ ಮೇಲ್ಭಾಗವನ್ನು ಸಹ ಕಂದು ಬಿಳಿ ಬಣ್ಣದ ಡಿಸೈನ್ ಮಾಡಲಾಗಿದೆ. ವೈಲ್ಡ್ ಕರ್ನಾಟಕ ಸಿನಿಮಾದಿಂದ ಪ್ರೇರೇಪಿತರಾಗಿ, ಎಲ್ ಆಂಡ್ ಟಿ ಟೆಕ್ನಾಲಜಿ ಸಂಸ್ಥೆ, ಇಂಡಿಯಾ ರೈಸಿಂಗ್ ಟ್ರಸ್ಟ್, ಅಗ್ಲಿ ಇಂಡಿಯನ್ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಈ ವೃತ್ತವನ್ನು ಅಭಿವೃದ್ಧಿ ಮಾಡಲಾಗಿದೆ.

    ಎಲ್ಲಾ ಮೇಲ್ಸೇತುವೆಯಂತೆ ಧೂಳು, ಕಸದ ರಾಶಿಯಿಂದ ತುಂಬಿ ಹೋಗಿದ್ದ ಈ ರಸ್ತೆಯನ್ನು ಸ್ವಚ್ಛ ಮಾಡಿ, ಬಣ್ಣ ಮಾಡಲಾಗಿದೆ. ಪ್ಲಾಸ್ಟಿಕ್ ಮರುಬಳಕೆಯಿಂದ ಮಾಡಿದ ಕುರ್ಚಿಗಳು, ಕಾರ್ಬನ್ ಸ್ಟೋನ್‍ಗಳನ್ನು ಬಳಸಿ ಪ್ರಯಾಣಿಕರು, ಪಾದಾಚಾರಿಗಳು ಕುಳಿತು ಮಾತನಾಡಲು, ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರಾಜ್ಯದ ವನ್ಯ ಸಂಪತ್ತಿನ ವಿವರಣೆಯನ್ನೂ ಅಲ್ಲಲ್ಲಿ ಬರೆಯಲಾಗಿದೆ. ಒಟ್ಟು 17 ತಿಂಗಳಲ್ಲಿ ಈ ಪ್ರಾಜೆಕ್ಟ್ ತಯಾರಿಸಲಾಗಿದ್ದು, ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು.

    ಇದೊಂದೆ ಅಲ್ಲ ನಗರದ 36 ಮೇಲ್ಸೆತುವೆಗಳ ಅಡಿಭಾಗವನ್ನು ಈ ರೀತಿಯಲ್ಲಿ ಅಭಿವೃದ್ಧಿ ಮಾಡಲು ಪಾಲಿಕೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಚಿಂತನೆ ನಡೆಸಿವೆ. ಸದ್ಯ ಅದ್ಧೂರಿಯಾಗಿ ಕಂಗೊಳಿಸ್ತಿರೋ ವೀರನಪಾಳ್ಯ ವೃತ್ತ ಪ್ರಯಾಣಿಕರನ್ನು ತಿರುಗಿ ನೋಡುವಂತೆ ಕಣ್ಮನ ಸೆಳೆಯುತ್ತಿದೆ.

  • ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಹೆಬ್ಬಾಳ ಫ್ಲೈ ಓವರ್ ಸ್ವಚ್ಛತೆ

    ವಾಷಿಂಗ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಹೆಬ್ಬಾಳ ಫ್ಲೈ ಓವರ್ ಸ್ವಚ್ಛತೆ

    ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿ, ಉದ್ಯಾನನಗರಿ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ದೇಶ ವಿದೇಶಗಳಿಂದ ವಿದ್ಯಾಭ್ಯಾಸಕ್ಕೆ ಎಂದು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಂತಹ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಗಾಗ ಕಸದ ಸಮಸ್ಯೆ ಕಾಣಿಸಿಕೊಂಡು ಗಾರ್ಬೇಜ್ ಸಿಟಿ ಆಗುತ್ತಿದೆ ಎಂದು ಟೀಕೆಗಳು ಕೇಳಿ ಬರುತ್ತಾನೆ ಇರುತ್ತೆ. ಅದಕ್ಕೆ ತಕ್ಕಂತೆ ಬಿಬಿಎಂಪಿ ಕೂಡ ಸ್ಪಂದಿಸದೇ ಛೀಮಾರಿ ಹಾಕಿಸಿಕೊಳ್ಳುತ್ತಿರುತ್ತೆ. ಅತಂಹದ್ದೆ ಒಂದು ಘಟನೆ ಈಗ ನಡೆದಿದೆ.

    ಬಿಬಿಎಂಪಿ ಮಾಡಬೇಕಾದ ಕಾರ್ಯವನ್ನು ವಿದೇಶದಿಂದ ವಿದ್ಯಾಭ್ಯಾಸಕ್ಕೆ ಎಂದು ಬಂದ ವಿದ್ಯಾರ್ಥಿಗಳು ಮಾಡಿದ್ದಾರೆ. ದಿನಬೆಳಗಾದ್ರೆ ಹೆಬ್ಬಾಳ ಫ್ಲೈಓವರ್ ಆಧಾರ ಸ್ತಂಭಗಳ ಮೇಲೆ ಧೂಳು ಬಿದ್ದು ಹಾಳಾಗುತ್ತಾ ಬಂದಿದೆ. ಬಿಬಿಎಂಪಿ ಸ್ವಚ್ಛತೆ ಮಾಡುವಂತ ಕೆಲಸ ಮುಂದಾಗಲಿಲ್ಲ. ಬದಲಾಗಿ ವಾಷಿಂಗ್ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅಂಗವಾಗಿ ಇಂಟರ್ನ್‍ಶಿಪ್ ಮಾಡಲು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಆ ವಿದ್ಯಾರ್ಥಿಗಳು ಹೆಬ್ಬಾಳ ಫ್ಲೈಓವರ್ ಅನ್ನು ಸ್ವಚ್ಛ ಮಾಡಿದ್ದಾರೆ.

    “ದಿ ಅಗ್ಲಿ ಇಂಡಿಯನ್” ಸಹಯೋಗದಲ್ಲಿ ಹೆಬ್ಬಾಳ ಮೇಲ್ಸೇತುವೆಯ ಆಧಾರ ಸ್ತಂಭ(ಪಿಲ್ಲರ್)ಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕೆಲ ಸಂಘಟನೆಗಳು ಪಾಲಿಕೆ ಜೊತೆ ಕೈ ಜೋಡಿಸಿ ಕಾರ್ಯನಿರ್ವಹಿಸುತ್ತಿವೆ. 3 ಗಂಟೆಗಳಲ್ಲಿ ಮೇಲ್ಸೇತುವೆಗೆ ಬಣ್ಣ ಬಳಿದು ಅವುಗಳಿಗೆ ಹೊಸ ಮೆರಗು ನೀಡಿ ಸುಂದರಗೊಳಿಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಮೇಯರ್ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಅಯ್ಯಪ್ಪನ ಭಕ್ತರು

    ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಅಯ್ಯಪ್ಪನ ಭಕ್ತರು

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಫ್ಲೈಓವರ್ ಹತ್ತಿದ ವ್ಯಕ್ತಿಯೊಬ್ಬನನ್ನು ಅಯ್ಯಪ್ಪ ಸ್ವಾಮಿ ಭಕ್ತರು ರಕ್ಷಣೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ನಗರದ ಹೊಸಕೆರೆಹಳ್ಳಿಯ ನೈಸ್ ರೋಡ್ ಬಳಿ ಈ ಘಟನೆ ನಡೆದಿದ್ದು, 45 ವರ್ಷದ ಅಪರಿಚಿತ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಗಿರಿನಗರದ ಸುಮಾರು ಮೂವತ್ತುಕ್ಕೂ ಹೆಚ್ಚು ಜನರು ಇಂದು ಶಬರಿಮಲೆಗೆ ಹೊರಟಿದ್ದರು. ಹೊಸಕೆರೆಹಳ್ಳಿ ಮಾರ್ಗವಾಗಿ ನೈಸ್ ರೋಡ್‍ಗೆ ಎಂಟ್ರಿಯಾದ ವೇಳೆ ನೈಸ್ ರೋಡ್‍ನ ಫ್ಲೈಓವರ್ ಮೇಲೆ ವ್ಯಕ್ತಿವೊಬ್ಬ ರಸ್ತೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದೆ.

    ತಕ್ಷಣ ವಾಹನ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಅಯ್ಯಪ್ಪ ಸ್ವಾಮಿ ಭಕ್ತರು, ರಸ್ತೆಯ ಎರಡು ಕಡೆಯ ವಾಹನಗಳನ್ನು ನಿಲ್ಲಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಭಕ್ತರ ಕೈಗೆ ಸಿಗದೆ ಸುಮಾರು ಅರ್ಧ ಗಂಟೆಗಳ ಕಾಲ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ಕಡೆಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಆ ವ್ಯಕ್ತಿಯನ್ನು ಸುತ್ತುವರೆದು ಕೊನೆಗೆ ಆತನನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.

    ಇಷ್ಟೇಲ್ಲಾ ನಡೆಯೋ ಹೊತ್ತಿಗೆ ಹೊಯ್ಸಳ ಪೊಲೀಸರು ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಆತ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ. ಆ ವ್ಯಕ್ತಿ ಯಾರು? ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

  • 10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    10 ವರ್ಷಗಳಲ್ಲಿ 5 ಡೆಡ್ ಲೈನ್- ಇನ್ನೂ ಪೂರ್ಣಗೊಳ್ಳದ ಪಂಪ್‍ವೆಲ್ ಸೇತುವೆ ಕಾಮಗಾರಿ

    – ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್
    – ಸಾಮಾಜಿಕ ಜಾಲತಾಣಗಳಲ್ಲಿ ಕಟೀಲ್ ವಿರುದ್ಧ ಆಕ್ರೋಶ

    ಮಂಗಳೂರು: ನಗರದ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ಪಂಪ್‍ವೆಲ್ ವೃತ್ತ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಪಂಪ್‍ವೆಲ್ ಮೇಲ್ಸೆತುವೆ ಪೂರ್ಣಗೊಳ್ಳದ್ದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಒಂದು ವೃತ್ತದ ಸೇತುವೆ ಈ ಪರಿ ಸುದ್ದಿಯಾಗಿದ್ದು, ಅದಕ್ಕೆ ಬಲವಾದ ಕಾರಣವೂ ಇದೆ. ಮಂಗಳೂರಿನ ಪಂಪ್ ವೆಲ್ ವೃತ್ತಕ್ಕೂ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಗಾಢ ನಂಟಿದೆ. ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆ ಕಾಮಗಾರಿ ಡಿಸೆಂಬರ್ ಕೊನೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ ಡಿಸೆಂಬರ್ ಮುಗಿದು ಹೊಸ ವರ್ಷ ಬಂದ್ರೂ ಕಾಮಗಾರಿ ಮುಗಿದೇ ಇಲ್ಲ.

    ಸಂಸದ ನಳಿನ್ ಕುಮಾರ್ ಹೀಗೆ ಡೆಡ್ ಲೈನ್ ನೀಡುವುದು, ಉದ್ಘಾಟನೆಗೆ ದಿನ ನಿಗದಿ ಮಾಡುವುದು ಮೊದಲೇನಲ್ಲ. ಒಂದು ವರ್ಷದಲ್ಲಿ ನಳಿನ್ ಕುಮಾರ್, ಹೀಗೆ ಐದು ಬಾರಿ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ನಳಿನ್ ಭರವಸೆ ಈ ಬಾರಿ ಭಾರೀ ಪ್ರಮಾಣದ ಟ್ರೋಲಿಗೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿಗೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭಾರೀ ಟ್ರೋಲಿಗೆ ಒಳಗಾಗಿದ್ದು, ಜನರ ಟೀಕೆಗೆ ಗುರಿಯಾಗಿದ್ದಾರೆ.

    ಟ್ರೋಲ್‍ಗಳಿಗೆ ಸಿಕ್ಕಾಪಟ್ಟೆ ಆಹಾರವಾಗಿರುವ ಪಂಪ್ ವೆಲ್ ಫ್ಲೈ ಓವರ್ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ಸದ್ಯಕ್ಕೆ ಮುಕ್ತಿ ಸಿಗುವ ಸಾಧ್ಯತೆಗಳು ಕಡಿಮೆ. ಕೇವಲ ಒಂದೂವರೆ ಕಿಲೋಮೀಟರ್ ಉದ್ದದ ಫ್ಲೈ ಓವರ್ ಕಾರ್ಯ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ನವಯುಗ ಕಂಪನಿ 2009 ರಿಂದ ಪಂಪ್ವೆಲ್ ಫ್ಲೈ ಓವರ್ ಕೆಲಸ ಮಾಡುತ್ತಿದ್ದು, ಕಾಮಗಾರಿ ಇನ್ನೂ ಮುಗಿದಿಲ್ಲ. ದೇಶದಲ್ಲೇ ಅತೀ ನಿಧಾನಗತಿಯ ಕಾಮಗಾರಿ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಆಗಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಟ್ರೋಲ್ ಗಳಿಗೆ ಆಹಾರವಾಗುತ್ತಿದ್ದಾರೆ.

    ಕುಂದಾಪುರದಿಂದ ತಲಪಾಡಿಯವರೆಗೆ 91 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪಥಗೊಳಿಸುವ ಸುಮಾರು 1,300 ಕೋಟಿ ರೂ. ಯೋಜನೆಯಲ್ಲಿ ಈ ಪಂಪ್ ವೆಲ್ ಫ್ಲೈ ಓವರ್ ಕೂಡ ಒಂದು. ಆದರೆ ಕಂಪನಿ ನಷ್ಟದಲ್ಲಿ ಮುಳುಗಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. 6-7 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಸಾಲ ಪಡೆದು ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯದಿರುವ ಕಾರಣ ಫ್ಲೈ ಓವರ್ ಕೆಲಸ ಪೂರ್ಣಗೊಂಡಿಲ್ಲ. 8 ಪಿಲ್ಲರ್ ಗಳು ಎದ್ದು ನಿಂತಿದ್ದು, ಕಾಂಕ್ರೀಟ್ ಹಾಕುವುದು ಸೇರಿದಂತೆ ಇನ್ನೂ ಪ್ರಮುಖ ಕೆಲಸಗಳು ಬಾಕಿ ಇವೆ.

    ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಳಿನ್ ಕುಮಾರ್ ಕಟೀಲ್, ಮತ್ತೆ ಜನವರಿ ಅಂತ್ಯಕ್ಕೆ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕರಾವಳಿ ಜನ ಕಾತುರದಿಂದ ಕಾಯುತ್ತಿದ್ದ ಪಂಪ್ವೆಲ್ ಫ್ಲೈ ಓವರ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದ್ದು, ಪಂಪ್ ವೆಲ್ ಫ್ಲೈ ಓವರ್ ಕರಾಳ ಇತಿಹಾಸದಲ್ಲಿ ಹುದುಗಿಹೋಗಲಿದೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  • ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಬೆಂಗಳೂರು: ಸಿಎಂ ಬೆಂಗಾವಲು ವಾಹನವನ್ನು ಫಾಲೋ ಮಾಡುತ್ತಿದ್ದ ಕಾರೊಂದು ಅತಿವೇಗವಾಗಿ ಬಂದು ಮತ್ತೊಂದು ಬದಿಯ ರಸ್ತೆಗೆ ನುಗ್ಗಿದ ಘಟನೆ ಯಶವಂತಪುರ ಫ್ಲೈ ಓವರ್ ಮೇಲೆ ನಡೆದಿದೆ.

    ಕಾರ್ಯಕ್ರಮದ ನಿಮಿತ್ತ ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ತುಮಕೂರಿಗೆ ಹೊರಟ್ಟಿದ್ದರು. ಆ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಸೆಲ್ವಕುಮಾರ್ ಅವರು ಕೂಡ ಸಿಎಂ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಅವರ ಕಾರು ಬೆಂಗಾವಲು ವಾಹನವನ್ನು ಫಾಲೋ ಮಾಡುತಿತ್ತು.

    ಸಿಎಂ ಬೆಂಗವಾಲು ವಾಹನ ಅತಿವೇಗವಾಗಿ ಹೋಗುವಾಗ ಕಾರ್ಯದರ್ಶಿ ಅವರ ಕಾರು ಚಾಲಕ ಅದೇ ವೇಗವನ್ನು ಪಾಲನೆ ಮಾಡಲು ಹೋಗಿದ್ದಾನೆ. ಆದರೆ ಫ್ಲೈ ಓವರ್ ಮೇಲೆ ಗಾಡಿ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೆ ಒಳಗಾಗಿದೆ. ಚಾಲಕ ವಿನಯ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ರಭಸಕ್ಕೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳಾದ ಕ್ಯಾಂಟರ್ ಮತ್ತು ಆಟೋ ಜಖಂ ಆಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸುಮನಹಳ್ಳಿ, ಸಿರ್ಸಿ ಸರ್ಕಲ್ ಆಯ್ತು, ಈಗ ಗೊರಗುಂಟೆಪಾಳ್ಯ ಮೇಲ್ಸೇತುವೆ ಸರದಿ

    ಸುಮನಹಳ್ಳಿ, ಸಿರ್ಸಿ ಸರ್ಕಲ್ ಆಯ್ತು, ಈಗ ಗೊರಗುಂಟೆಪಾಳ್ಯ ಮೇಲ್ಸೇತುವೆ ಸರದಿ

    ಬೆಂಗಳೂರು: ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್ ಗುಂಡಿ ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈಗಲೂ ಸಹ ಆ ಬ್ರೀಡ್ಜ್ ಮೇಲೆ ಭಾರೀ ವಾಹನಗಳನ್ನ ಬಿಡುತ್ತಿಲ್ಲ. ಅದೇ ಹಂತಕ್ಕೆ ಬೆಂಗಳೂರಿನ ಗೊರಗುಂಟೆಪಾಳ್ಯದ ಫ್ಲೈಓವರ್ ಬಂದಿದೆ.

    ಹೌದು…ಇದು ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ವಾಹನಗಳಿಂದ ರೋಡ್ 24 ಗಂಟೆ ಜ್ಯಾಮ್ ಆಗಿರುತ್ತೆ. ಇದು ತುಮಕೂರು, ಹಾಸನ, ಮೈಸೂರು, ಮುಖ್ಯ ರಸ್ತೆಯಿಂದ ಹೊಸೂರು, ತಮಿಳುನಾಡು, ತಿರುಪತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೊದಕ್ಕೆ ಇರೋ ಮಾರ್ಗ ಇದಾಗಿದೆ. ಇಲ್ಲಿ ಯಾವಾಗಲೂ ಟ್ರಾಫಿಕ್ ಜಾಸ್ತಿಯೇ ಇರುತ್ತೆ.

    ಗೊರಗುಂಟೆಪಾಳ್ಯದಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ರೈಲ್ವೇ ಟ್ರಾಕ್‍ನಿಂದ ಆಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಫ್ಲೈಓವರ್ ನಿರ್ಮಾಣ ಮಾಡಿದ್ದಾರೆ. ಆದರೆ ಈ ಫ್ಲೈಓವರ್ ನ ನಿರ್ವಹಣೆ ಮಾಡದೇ ಇಂದು ಫ್ಲೈಓವರ್ ಯಾವಾಗ ಬಿದ್ದೋಗುತ್ತೋ ಅನ್ನೋ ಆಗಿದೆ. ಗುಂಡಿಗಳಿಂದ ತುಂಬಿರೋ ಈ ರೋಡ್‍ನಲ್ಲಿ ಕೆಲ ಗುಂಡಿಗಳಿಂದ ಕಬ್ಬಿಣದ ರಾಡ್‍ಗಳು ಹೊರಬಂದಿವೆ. ಭಾರೀ ವಾಹನಗಳು ಇದೇ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ. ಹೀಗಾಗಿ ಇಲ್ಲಿ ವಾಹನ ಚಾಲನೆ ಮಾಡುವುದು ಕಷ್ಟವಾಗಿದೆ. ಸೇತುವೆ ಮೇಲೆ ಟ್ರಾಫಿಕ್ ಜ್ಯಾಮ್ ಆಗಿ ವಾಹನಗಳು ನಿಂತರೆ ಸೇತುವೆ ಶೇಕ್ ಕೂಡ ಆಗುತ್ತಿದೆ.

    ಈ ಮೇಲ್ಸೇತುವೆಯ ಬಗ್ಗೆ ಬಿಬಿಎಂಪಿ ಕಮಿಷನರ್ ಅವರನ್ನು ಕೇಳಿದರೆ, ಇದು ನಮ್ಮ ಗಮನಕ್ಕೆ ಬಂದಿದೆ. ಸರಿಯಾದ ಕ್ರಮಕೈಗೊಳ್ಳುವುದಕ್ಕೆ ಯೋಚನೆ ಮಾಡುತ್ತಿದ್ದೇನೆ. ಯೋಚನೆಯಾದ ಮೇಲೆ ಯೋಜನೆ ತಂದು ರಸ್ತೆ ಸರಿ ಮಾಡುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹೇಳಿದ್ದಾರೆ.

    ಈ ಮೇಲ್ಸೇತುವೆಯಿಂದ ಯಾವುದಾದರೂ ದೊಡ್ಡ ಅನಾಹುತ ಆಗೋವರೆಗೆ ಕಾಯದೇ ಆದಷ್ಟು ಬೇಗ ದುರಸ್ತಿ ಕಾರ್ಯ ಮಾಡಬೇಕು. ಇಲ್ಲವಾದರೆ ಇಲ್ಲಿ ದೊಡ್ಡ ಅನಾಹುತ ಆಗೋದಂತು ಪಕ್ಕ. ಬೆಂಗಳೂರಿನ ಮೇಲ್ಸೇತುವೆಗಳ ಕಳಪೆ ಕಾಮಗಾರಿಯ ಕರ್ಮಕಾಂಡಗಳು ಒಂದರ ಒಂದರಂತೆ ಹೊರ ಬರತ್ತಲೇ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

  • ಬಡವಾಯ್ತಾ ಬಿಬಿಎಂಪಿ – ಮೇಲ್ಸೇತುವೆಗಳನ್ನು ದತ್ತು ನೀಡಲು ಪಾಲಿಕೆಯಿಂದ ಯೋಜನೆ

    ಬಡವಾಯ್ತಾ ಬಿಬಿಎಂಪಿ – ಮೇಲ್ಸೇತುವೆಗಳನ್ನು ದತ್ತು ನೀಡಲು ಪಾಲಿಕೆಯಿಂದ ಯೋಜನೆ

    ಬೆಂಗಳೂರು: ನಗರದ ರಸ್ತೆ, ಮೇಲ್ಸೇತುವೆಗಳ ಅಭಿವೃದ್ಧಿಗೆ ಸರ್ಕಾರದಿಂದ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತೆ. ಆದರೆ ಪಾಲಿಕೆ ಮಾತ್ರ ರಸ್ತೆ ದತ್ತು ಮಾದರಿಯಲ್ಲಿ, ಮೇಲ್ಸೇತುವೆಗಳನ್ನು ದತ್ತು ನೀಡಲು ಯೋಜನೆ ರೂಪಿಸುತ್ತಿದೆ.

    ಬಿಬಿಎಂಪಿ ರಸ್ತೆ ದತ್ತು ಮಾದರಿಯಂತೆ, ಮೇಲ್ಸೇತುವೆ ಯೋಜನೆ ಜಾರಿಗೊಳಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಸ್ತೆ ದತ್ತು ಯೋಜನೆಯಡಿ, ಸಂಘ-ಸಂಸ್ಥೆಗಳಿಗೆ ದತ್ತು ಪಡೆದು ನಿರ್ವಹಣೆ ಮಾಡುವ ಯೋಜನೆಯಡಿ ಈಗಾಗಲೇ ನಗರದಲ್ಲಿ 13 ರಸ್ತೆಗಳನ್ನು ವಿವಿಧ ಸಂಘ-ಸಂಸ್ಥೆಗಳು ದತ್ತು ಪಡೆದು ನಿರ್ವಹಿಸುತ್ತಿವೆ. ಇದರ ಮಾದರಿಯಲ್ಲಿಯೇ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳನ್ನು ಸೌಂದರ್ಯಿಕರಣ ಅಡಾಪ್ಟ್ – ಎ ಫ್ಲೈ ಓವರ್ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ಸಂಘ, ಸಂಸ್ಥೆಗಳಿಗೇ ರಸ್ತೆಗಳ ಸ್ವಚ್ಛ, ಸಂಪೂರ್ಣ ನಿರ್ವಹಣೆ ಹೊಣೆ

    ಫ್ಲೈಓವರ್ ಮತ್ತು ಅಂಡರ್ ಪಾಸ್‍ಗಳನ್ನು ದತ್ತು ಪಡೆದು ನಿರ್ವಹಣೆ ಮಾಡುವುದಕ್ಕೆ ಮುಂದೆ ಬರುವ ಸಂಘ-ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು ಎಂದು ಪಾಲಿಕೆಯ ಆಯುಕ್ತ ಅನೀಲ್ ಕುಮಾರ್ ಹೇಳಿದ್ದಾರೆ.

    ದತ್ತು ಯೋಜನೆಯಡಿ ಪಡೆದುಕೊಂಡ ನಿರ್ವಹಣೆಗೆ ಬಿಬಿಎಂಪಿಯಿಂದ ಯಾವುದೇ ಅನುದಾನ ನೀಡಲ್ಲ. ಸಂಸ್ಥೆಗಳೆ ಸಾಮಾಜಿಕ ಜವಾಬ್ದಾರಿಯಡಿ ಹೂಡಿಕೆ ಮಾಡಬೇಕಾಗಲಿದೆ. ಈಗಾಗಲೇ 25 ಸಂಸ್ಥೆಗಳು, ನಗರದ 30 ರಸ್ತೆಗಳನ್ನು ದತ್ತು ಪಡೆದು ನಿರ್ವಹಣೆಗೆ ಮುಂದೆ ಬಂದಿವೆ. ಇನ್ನೂ ಸರ್ಕಾರದಿಂದ ಪಾಲಿಕೆಗೆ ಬಂದ ಅನುದಾನದಲ್ಲಿ ಏನು ಅಭಿವೃದ್ಧಿ ಕೆಲಸಗಳನ್ನು ಬಿಬಿಎಂಪಿ ಮಾಡಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ನೆಲಮಂಗಲ ಫ್ಲೈಓವರ್‌ನಿಂದ ಕೆಳಗೆ ಬಿತ್ತು ಲಾರಿ – ಚಾಲಕ ಪಾರು

    ನೆಲಮಂಗಲ ಫ್ಲೈಓವರ್‌ನಿಂದ ಕೆಳಗೆ ಬಿತ್ತು ಲಾರಿ – ಚಾಲಕ ಪಾರು

    ಬೆಂಗಳೂರು: ಬೆಳ್ಳಂಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆಯ ಫ್ಲೈಓವರ್ ನಿಂದ ಲಾರಿ ಕೆಳಗೆ ಬಿದ್ದಿದೆ. ಬೆಳಗ್ಗಿನ ಜಾವದಲ್ಲಿ ಈ ಸ್ಥಳದಲ್ಲಿ ಯಾರೂ ಇರದ ಕಾರಣ ದೊಡ್ಡ ದುರಂತ ತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

    ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿಯೇ ಈ ಅಪಘಾತ ನಡೆದಿದೆ. ಸದ್ಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.