Tag: Flowers

  • ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ

    ಬೆಂಗಳೂರು: ನಾಡಿನಾದ್ಯಂತ ದೀಪಗಳ ಹಬ್ಬ ದೀಪಾವಳಿ (Diwali) ಸಂಭ್ರಮ ಜೋರಾಗಿದೆ. ದೀಪಾವಳಿ ಹಿನ್ನೆಲೆ ಬೆಂಗಳೂರಿನ (Bengaluru) ಕೆಆರ್ ಮಾರ್ಕೆಟ್‌ನಲ್ಲಿ (KR Market) ಬೆಳ್ಳಂಬೆಳಗ್ಗೆ ಹೂ, ಹಣ್ಣು ಖರೀದಿಗೆ ಜನ ಮುಗಿಬಿದ್ದಿದ್ದಾರೆ.

    ಕೆಆರ್ ಮಾರ್ಕೆಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದು, ವಿವಿಧ ಬಗೆಯ ಹೂ, ಹಣ್ಣುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಅವೆನ್ಯೂ ರಸ್ತೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜನಮಯವಾಗಿದೆ. ಭಾರೀ ಜನಸಂಖ್ಯೆ ಹಿನ್ನೆಲೆ ಕೆಆರ್ ಮಾರ್ಕೆಟ್, ಹೂವಿನ ಮಾರ್ಕೆಟ್, ಅವೆನ್ಯೂ ರಸ್ತೆ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೂ ಕಿ.ಮೀ.ಗಟ್ಟಲೇ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ:  ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ಸತತ ಮಳೆ ಹಿನ್ನೆಲೆ ಹೂಗಳ ಬೆಲೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಚೆಂಡು ಹೂಗಳ ಖರೀದಿ ಜೋರಾಗಿದೆ. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

    ಯಾವ ಹೂವಿಗೆ ಎಷ್ಟು ದರ?
    ಕನಕಾಂಬರ – 1,300-1,600 ರೂ.
    ಮಲ್ಲಿಗೆ, ಮಳ್ಳೆ ಹೂವು – 700-900 ರೂ.
    ಕಾಕಡ ಹೂವು – 700-800 ರೂ.
    ಸೇವಂತಿಗೆ – 800 ರೂ.
    ಗುಲಾಬಿ – 500 ರೂ.
    ಕಣಗಲೆ – 500 ರೂ.
    ಸುಗಂಧರಾಜ – 500 ರೂ.
    ತಾವರೆ ಹೂವು (ಜೋಡಿ) – 150 ರೂ.
    ಬಾಳೆಕಂದು – 150 ರೂ.

  • ಅಂಗಳದಲ್ಲಿ ಅರಳುತ್ತಿರುವ ʻಬೆಟ್ಟದ ಹೂವಿಗೂʼ ಒಂದು ದಿನ!

    ಅಂಗಳದಲ್ಲಿ ಅರಳುತ್ತಿರುವ ʻಬೆಟ್ಟದ ಹೂವಿಗೂʼ ಒಂದು ದಿನ!

    ಬೆಟ್ಟದಲ್ಲಿ ಸುಂದರವಾಗಿ ಅರಳುವ ಆರ್ಕಿಡ್‌ಗಳಿಗೆ (Orchid) ಮನಸೋಲದವರಿಲ್ಲ. ಸೀತಾ ಮಾತೆ ವನವಾಸದಲ್ಲಿದ್ದಾಗ ಈ ಆರ್ಕಿಡ್‌ಗಳಿಗೆ ಮನಸೋತಿದ್ದು ನಮಗೆಲ್ಲ ಗೊತ್ತೇ ಇದೆ. ಅಂತಹ ಸೌಂದರ್ಯ ಈ ಆರ್ಕಿಡ್‌ಗಳದ್ದು.

    ದಟ್ಟ ಕಾನನದೊಳಗೆ ತನ್ನಪಾಡಿಗೆ ಅರಳಿ ಒಂದಷ್ಟು ದಿನಗಳ ಕಾಲ ಇದ್ದು ಉದುರಿ ಹೋಗುವ ಅದೆಷ್ಟೋ ಆರ್ಕಿಡ್‌ಗಳನ್ನು ಇಂದು ಮನೆಯಂಗಳದಲ್ಲೂ ಬೆಳೆಯಲಾಗುತ್ತಿದೆ. ಹೀಗಾಗಿ ಕೆಲವು ಆರ್ಕಿಡ್ ತಳಿಗಳು ವಿವಿಧ ಬಗೆಯ ಹೂ ಬಿಟ್ಟು, ಮನೆ ಮನದ ಅಂದವನ್ನು ಹೆಚ್ಚಿಸುತ್ತಿವೆ. ಮೊದಲೆಲ್ಲ ಆರ್ಕಿಡ್ ಬೆಳೆಯುವುದು ದೊಡ್ಡ ಸಾಹಸ ಎಂಬಂತೆ ಆಗಿತ್ತು. ಆದರೆ ಎಷ್ಟೋ ಕಡೆಗಳಲ್ಲಿ ಪುಷ್ಪ ಪ್ರೇಮಿಗಳು ಕಾಡಿನಿಂದ ತಂದು ಮನೆಯ ಅಂಗಳದಲ್ಲಿ ಬೆಳೆಯುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ಇನ್ನೂ ಮಲೆನಾಡಿನ ಭಾಗಗಳಲ್ಲಿ ಮಲೆಗಾಲದ ಸಮಯದಲ್ಲಿ ಕಾಣ ಸಿಗುವ ಆರ್ಕಿಡ್‌ ಜಾತಿಯ ಸೀತಾಳೆ ಹೂವಿಗೂ ಹಿಂದೂ ಧರ್ಮಕ್ಕೂ ವಿಶೇಷ ಸಂಬಂಧವಿದೆ. ವನವಾಸದಲ್ಲಿದ್ದಾಗ ಈ ಹೂವು ಸೀತೆಗೆ ಬಹಳ ಇಷ್ಟವಾಗಿತ್ತಂತೆ. ಹೀಗಾಗಿ ಕೆಲವರು ಇವತ್ತಿಗೂ ಈ ಹೂವನ್ನು ಸೀತಾಳೆ ದಂಡೆ ಎಂದೇ ಕರೆಯುತ್ತಾರೆ.

    ಆರ್ಕಿಡ್‌ಗಳನ್ನು ವೈಜ್ಞಾನಿಕವಾಗಿ ನೋಡುವುದಾದರೆ ಆರ್ಕಿಡೇಸಿಯ ಕುಟುಂಬಕ್ಕೆ ಸೇರಿದ ಗಿಡವಾಗಿದೆ. ಆರ್ಕಿಡ್ ಕುಟುಂಬದಲ್ಲಿ ಸುಮಾರು 56 ಸಾವಿರಕ್ಕೂ ಹೆಚ್ಚು ಹೂ ಬಿಡುವಂತಹ ಸಸ್ಯಗಳಿವೆ. ಅಲ್ಲದೇ 30 ಸಾವಿರ ಪ್ರಭೇಧಗಳಿವೆ. ಈ ಪೈಕಿ ಕಾಡಿನಲ್ಲಿ ಬೆಳೆಯುವ ಜಾತಿಯ ಸಸ್ಯಗಳ ಸಂಖ್ಯೆ 32 ಸಾವಿರವಂತೆ. ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ ಭಾರತದಲ್ಲಿ ಸುಮಾರು 1,256 ಜಾತಿಯ ಆರ್ಕಿಡ್‌ಗಳಿವೆ. ಆರ್ಕಿಡ್‌ ಬಗ್ಗೆ ಹೇಳಬೇಕೆಂದರೆ ಇವು ಎಲ್ಲಾ ವಲಯಗಳಲ್ಲಿ ಬೆಳೆಯುತ್ತವೆಯಾದರೂ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.

    ಆರ್ಕಿಡ್‌ ದಿನಾಚರಣೆ ಯಾಕೆ ಆಚರಿಸಲಾಗುತ್ತೆ?
    ಪ್ರತಿ ವರ್ಷ ಏ.16 ರಂದು ಅಮೆರಿಕದಲ್ಲಿ ಆರ್ಕಿಡ್ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಆರ್ಕಿಡ್‌ಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಾರಿಗೆ ತರಲಾಗಿದೆ.

    ಆರ್ಕಿಡ್‌ ದಿನದ ಇತಿಹಾಸ
    ದಕ್ಷಿಣ ಕೆರೊಲಿನಾದ ದಂಪತಿಯಾದ ಮೈಕ್ ಮತ್ತು ಫೇಯ್ತ್ ಯಂಗ್ ಎಂಬವರು ಮೆಕ್ಸಿಕೋದ ಅಭಯಾರಣ್ಯದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ ಆರ್ಕಿಡ್‌ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ದಂಪತಿ ಆರ್ಕಿಡ್‌ಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರಿಗೆ ಎಂದಾದರೂ ಮಗು ಜನಿಸಿದರೆ ಅದಕ್ಕೆ ‘ಆರ್ಕಿಡ್’ ಎಂದು ಹೆಸರಿಡಬೇಕೆಂದು ಅವರು ನಿರ್ಧರಿಸಿದ್ದರು. ಆದರೆ, ದುರದೃಷ್ಟವಶಾತ್, ಹೆರಿಗೆಯ ಸಮಯದಲ್ಲಿ ಅವರ ಹೆಣ್ಣು ಮಗು ಸಾವನ್ನಪ್ಪುತ್ತದೆ. ಇದೇ ನೆನಪಿನಲ್ಲಿ ಅವರು 2015 ರಲ್ಲಿ ರಾಷ್ಟ್ರೀಯ ಆರ್ಕಿಡ್ ದಿನವನ್ನು ಆಚರಣೆಗೆ ನಿರ್ಧರಿಸಿ, ಫಂಡ್ ಸಂಗ್ರಹಿಸಿ, ಆರ್ಕಿಡ್‌ಗಳ ಅಧ್ಯಯನಕ್ಕೆ ಮುಂದಾದರು.

    ಆರ್ಕಿಡ್ ಹೂವುಗಳ ವಿವಿಧ ಬಣ್ಣಗಳ ಮಹತ್ವ
    ಆರ್ಕಿಡ್ ಹೂವುಗಳು ವಿಶೇಷವಾಗಿ ಶಕ್ತಿ ಮತ್ತು ಸೌಂದರ್ಯವನ್ನು ಪ್ರತಿನಿಧಿಸುತ್ತವೆ. ಇಷ್ಟೇ ಅಲ್ಲದೇ ಗುಲಾಬಿಯಂತೆ ಪ್ರೀತಿಯನ್ನು ಸಹ ಪ್ರತಿನಿಧಿಸುತ್ತವೆ.

    ಪರ್ಪಲ್ ಆರ್ಕಿಡ್: ಅಧಿಕಾರ ಮತ್ತು ಘನತೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ಈ ಬಣ್ಣದ ಆರ್ಕಿಡ್ ಮೆಚ್ಚುಗೆ ಮತ್ತು ಗೌರವದ ಸಂಕೇತವಾಗಿದೆ.

    ನೀಲಿ ಆರ್ಕಿಡ್: ನೀಲಿ ಆರ್ಕಿಡ್‌ಗಳು ಬಹಳ ಸುಂದರವಾಗಿರುತ್ತವೆ. ಈ ಬಣ್ಣದ ಆರ್ಕಿಡ್‌ಗಳನ್ನು ಮನಸ್ಸಿಗೆ ಹತ್ತಿರವಿರುವರಿಗೆ ಗಿಫ್ಟ್‌ ಆಗಿ ಕೊಡಲಾಗುತ್ತದೆ.

    ಬಿಳಿ ಆರ್ಕಿಡ್ ಹೂವು: ಬಿಳಿ ಆರ್ಕಿಡ್‌ಗಳು ಆಧ್ಯಾತ್ಮದ ಸಂಬಂಧ ಹೊಂದಿವೆ, ಶುದ್ಧತೆ, ಮುಗ್ಧತೆ, ನಂಬಿಕೆ ಇತ್ಯಾದಿಗಳನ್ನು ಸೂಚಿಸುತ್ತವೆ. ಈ ಆರ್ಕಿಡ್‌ಗಳು ಮದುವೆ ಅಲಂಕಾರ, ಪ್ರಾರ್ಥನೆ ಮಾಡುವ ಸ್ಥಳದಲ್ಲಿ ಇರಿಸಲಾಗುತ್ತದೆ.

    ಪಿಂಕ್ ಆರ್ಕಿಡ್‌ಗಳು: ಈ ಬಣ್ಣದ ಆರ್ಕಿಡ್‌ಗಳು ಸೌಮ್ಯತೆ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತವೆ.

    ಮದುವೆಗಳು ಮತ್ತು ಸೀಮಂತದಲ್ಲಿ ಆರ್ಕಿಡ್‌ಗಳನ್ನು ಉಡುಗೊರೆಯಾಗಿ ನೀಡುವುದು ಅದೃಷ್ಟದ ಸಂಕೇತ ಎನ್ನಲಾಗುತ್ತದೆ. ಆರ್ಕಿಡ್ ಸಸ್ಯವನ್ನು ಕೋಣೆಯ ನೈಋತ್ಯ ದಿಕ್ಕಿನಲ್ಲಿ ಇರಿಸುವುದರಿಂದ ಎಲ್ಲಾ ರೀತಿಯ ಯಶಸ್ಸು, ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.

    ಆರ್ಕಿಡ್ ಬೆಳೆಸೋದು ಹೇಗೆ?
    ಕುಂಡದಲ್ಲಿ ತೆಂಗಿನನಾರು ಅಥವಾ ಒಣಗಿದ ಪಾಚಿಯನ್ನು ಹಾಕಿ, ಎರಡು ಸಣ್ಣ ಇಟ್ಟಿಗೆ ಚೂರು, ಒಂದು ಭಾಗ ಗೋಡು ಮಣ್ಣು, ಒಂದು ಭಾಗ ಇದ್ದಿಲು ಪುಡಿ, ಒಂದು ಭಾಗ ಎಲೆಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಬೇಕು. ನಂತರ ಗಿಡನೆಟ್ಟು ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಆರ್ಕಿಡ್‌ಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಬೆಳವಣಿಗೆಯನ್ನು ಆರಂಭಿಸುತ್ತವೆ. ಎರಡನೆಯ ಹಂತದಲ್ಲಿ ನವೆಂಬರ್-ಮಾರ್ಚ್ ತಿಂಗಳಲ್ಲಿ ಸುಪ್ತಾವಸ್ಥೆಯನ್ನು ತಲುಪುತ್ತವೆ. ಕೊನೆಯ ಹಂತದಲ್ಲಿ ಸುಪ್ತಾವಸ್ಥೆ ದಾಟಿ ಹೂ ಬಿಡಲು ಪ್ರಾರಂಭಿಸುತ್ತವೆ.

    ಗಿಡಗಳನ್ನು ಕುಂಡದಿಂದ ವರ್ಷಕ್ಕೊಮ್ಮೆ ಬದಲಾಯಿಸಬೇಕು. ಕೆಲವು ಆರ್ಕಿಡ್‌ಗಳು ಸರಾಗವಾದ ಬಿಸಿಲು ಗಾಳಿಯನ್ನು ಹೊಂದಿಕೊಂಡು ಬೆಳೆಯುತ್ತವೆಯಾದರೂ ಮತ್ತೆ ಕೆಲವು ನೇರ ಬಿಸಿಲನ್ನು ಸಹಿಸುವುದಿಲ್ಲ. ಆರ್ಕಿಡ್‌ಗಳಿಗೆ ಅಂತಹ ರೋಗ ಏನು ಬರೋದಿಲ್ಲ. ಆದರೆ ಹೂಗಳಿಗೆ ನುಸಿ, ಜೇಡರ ಹುಳ, ಗೊಂಡೆ ಹುಳ, ಬಸವನ ಹುಳು, ಬಿಳಿ ತಿಗಣೆ ಮುಂತಾದವುಗಳು ತೊಂದರೆ ನೀಡುತ್ತವೆ. ಇವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ರಕ್ಷಿಸಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆರ್ಕಿಡ್ ಕೃಷಿ ಜನಪ್ರಿಯವಾಗುತ್ತಿದ್ದು, ಕೇವಲ ಮನೆಯ ಅಲಂಕಾರ ಮಾತ್ರವಲ್ಲದೆ, ಗಿಡಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾರೆ.

  • ನಾಳೆ ವರಮಹಾಲಕ್ಷ್ಮೀ ಹಬ್ಬ: ಗ್ರಾಹಕರಿಗೆ ಹೂ-ಹಣ್ಣು ಬೆಲೆ ಏರಿಕೆಯ ಬಿಸಿ

    ನಾಳೆ ವರಮಹಾಲಕ್ಷ್ಮೀ ಹಬ್ಬ: ಗ್ರಾಹಕರಿಗೆ ಹೂ-ಹಣ್ಣು ಬೆಲೆ ಏರಿಕೆಯ ಬಿಸಿ

    ಬೆಂಗಳೂರು: ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ನಮಗೆ ಎದುರಾಗುತ್ತವೆ. ತಿಂಗಳ ಆರಂಭದಿಂದಲೇ ಶುರುವಾಗುವ ತಯಾರಿ ಶ್ರಾವಣ ಮುಗಿಯುವವರೆಗೂ ನಿಲ್ಲುವುದಿಲ್ಲ. ಪ್ರತಿ ಶುಕ್ರವಾರ ಮನೆಯಲ್ಲಿ ವಿಜೃಂಭಿಸುವ ಲಕ್ಷ್ಮೀ ಪೂಜೆಯ ಸಿದ್ಧತೆಯಂತೂ ಸಂಭ್ರಮದಿಂದ ಕೂಡಿರುತ್ತದೆ. ಹಬ್ಬದಲ್ಲಿ ಗಡಿಬಿಡಿಯೂ ಇರುತ್ತದೆ.

    ನಾಳೆ ಶಾವ್ರಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ (Varamahalakshmi festival) ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ (Flowers, Fruits) ಬೆಲೆ ಗಗನಕ್ಕೇರಿದೆ. ಹಬ್ಬದ ಹಿಂದಿನ ದಿನ ಮಾರುಕಟ್ಟೆಗೆ ಇಳಿಯುವ ಜನರು ಹೂವು ಹಣ್ಣಿನ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಹೂವು ಹಣ್ಣುಗಳಿಲ್ಲದೇ ಹಬ್ಬ ಮಾಡುವುದು ಅಸಾಧ್ಯ. ಹೀಗಾಗಿ ದರ ಹೆಚ್ಚಿದ್ದರೂ ಜನರಿಗೆ ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ.

    ಸಾಮಾನ್ಯ ದಿನ ಮಾರಾಟವಾಗುವ ದರಕ್ಕಿಂತ ಹೂವು ಹಣ್ಣಿನ ದರ ದುಪ್ಪಟ್ಟಾಗಿದೆ. ಹಾಗಾದರೆ ಯಾವುದರ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

    ಹೂವಿನ ಬೆಲೆ ಎಷ್ಟಿದೆ?
    ಮಲ್ಲಿಗೆ ಕೆಜಿಗೆ 1,600 ರೂಪಾಯಿ, ಸೇವಂತಿ 80-300 ರೂ., ಗುಲಾಬಿ 200-250 ರೂ., ಚೆಂಡು ಹೂವು 50-80 ರೂ., ಸುಗಂಧರಾಜ 300 ರೂ., ಕನಕಾಂಬರ 2,000 ರೂ., ಸೇವಂತಿಗೆ ಮಾರು 80-200 ರೂ., ಮಲ್ಲಿಗೆ ಹಾರ 1,500-2,000 ರೂ. ಹಾಗೂ ಬಾಳೆಕಂದು ಜೋಡಿ 100-150 ರೂ. ಇದೆ.

    ಯಾವ ಹಣ್ಣಿಗೆ ಎಷ್ಟು ಬೆಲೆ?
    ಮಿಕ್ಸ್ ಹಣ್ಣು ಕೆಜಿಗೆ 450 ರೂಪಾಯಿ, ಸೇಬು 300 ರೂ., ದಾಳಿಂಬೆ 250 ರೂ., ಅನಾನಸ್ 150-200 ರೂ. ಇದೆ.

  • ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು

    ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು

    ಬೆಂಗಳೂರು: ನಾಡಿನಾದ್ಯಂತ ಯುಗಾದಿ (Ugadi) ಸಂಭ್ರಮ ಮನೆ ಮಾಡಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಕಾತುರದಲ್ಲಿದ್ದ ಸಿಟಿಜನ ಹೂವು (Flowers), ಹಣ್ಣು (Fruits) ಖರೀದಿಗೆ ಮುಗಿಬಿದ್ದಿದ್ದಾರೆ. ಹಬ್ಬದ ಜೋಶ್‍ನಲ್ಲಿ ಮಾರುಕಟ್ಟೆಗೆ ಹೋದ ಜನರಿಗೆ ಬೆಲೆ ಏರಿಕೆ ಶಾಕ್ ತಟ್ಟುತ್ತಿದೆ.

    ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುಗಾದಿ ಹಬ್ಬಕ್ಕೆ ಭರದ ಸಿದ್ಧತೆ ನಡೆಸಿದ್ದರು. ಹೊಸ ದಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿಯು ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ. ನಗರದ ಕೆ.ಆರ್. ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಗಾಂಧಿ ಬಜಾರ್, ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಜೋಶ್‍ನಲ್ಲಿದ್ದ ಜನಕ್ಕೆ ಬೆಲೆ ಏರಿಕೆಯ ಶಾಕ್ ತಟ್ಟಿದೆ.

    ಯುಗಾದಿ ಹಬ್ಬಕ್ಕೆ ಹೂವು, ಹಣ್ಣು, ಮಾವಿನಸೊಪ್ಪು, ಬೇವಿನಸೊಪ್ಪು ಬೇಕೇ ಬೇಕಾಗುತ್ತದೆ. ಹಾಗಾದರೆ ಯಾವುದೆಲ್ಲ ಎಷ್ಟು ದರ ಹೆಚ್ಚಾಗಿದೆ ಎನ್ನುವುದು ಈ ರೀತಿಯಿದೆ.

    ಬೇವಿನಸೊಪ್ಪು 1 ಕಟ್ಟಿಗೆ 20 ರೂ.ಯಿದ್ದು, ಮಾವಿನಸೊಪ್ಪು 1 ಕಟ್ಟಿಗೆ 30 ರೂ., ಚಂಡೆ ಹೂವು 1 ಮಾರಿಗೆ 80 ರೂ. ಇದೆ. ಇನ್ನೂಳಿದಂತೆ ಹೂವಿನಲ್ಲಿ ಸೇವಂತಿಗೆ 1 ಮಾರಿಗೆ 120 ರೂ., ಗುಲಾಬಿ ಒಂದು ಕೆಜಿಗೆ 300 ರೂ., ಸೇವಂತಿಗೆ ಒಂದು ಕೆಜಿಗೆ 250 -300 ರೂ., ಮಲ್ಲಿಗೆ 1 ಕೆಜಿಗೆ 700 ರೂ., ಕನಕಾಂಬರ 1 ಕೆಜಿಗೆ 800 ರೂ., ಸುಗಂಧರಾಜ 1 ಕೆಜಿಗೆ 160 ರೂ., ಚೆಂಡು ಹೂ 1ಕೆಜಿಗೆ 80 ರೂ., ತುಳಸಿ ಹಾರಗೆ 1 ಕೆಜಿ 70 ರೂ. ದರವಿದೆ. ಹಣ್ಣುಗಳಾದ ದಾಳಿಂಬೆಗೆ 1 ಕೆಜಿಗೆ 120 ರೂ., ಆಪಲ್ 1 ಕೆಜಿಗೆ 180 ರೂ., ಮೊಸಂಬಿ 1 ಕೆಜಿಗೆ 120 ರೂ., ಕಿತ್ತಳೆ 1 ಕೆಜಿಗೆ 150 ರೂ., ಮರಸೇಬು 1 ಕೆಜಿಗೆ 250 ರೂ., ಬಟರ್ ಫ್ರೂಟ್ 1 ಕೆಜಿಗೆ 350 ರೂ.ನಷ್ಟು ದರ ಏರಿಕೆ ಆಗಿದೆ. ಇದನ್ನೂ ಓದಿ: ವರುಣಾದಲ್ಲಿ ಸ್ಪರ್ಧಿಸಿದ್ರೂ ಸಿದ್ದರಾಮಯ್ಯ ವಿರುದ್ಧ ಪದ್ಮವ್ಯೂಹ- ಬೆಂಗ್ಳೂರಲ್ಲಿ ಕೋಲಾರ ಕೈಪಡೆ ಹೈಡ್ರಾಮಾ

    ಯುಗಾದಿ ಹಬ್ಬದ ಪ್ರಯುಕ್ತ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರೀ ಹೊಡೆತ ಬಿದ್ದಿದೆ. ಆದರೂ ಹಬ್ಬವನ್ನು ಆಚರಣೆ ಮಾಡ್ಲೇಬೇಕಲ್ವಾ ಅಂತಾ ಅಗತ್ಯ ವಸ್ತುಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಖರೀದಿ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವ್ಯಾಪಾರ ಡಲ್ ಅಂತಾ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿ ಮನೆಯಿಂದಾಚೆ ಓಡಿಬಂದ ಜನ

  • ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಬೆಂಗಳೂರು: ದೇಶಕ್ಕಾಗಿ ಕೊರೊನಾ ತೊಲಗಿಸಲು ನಾವು ಸೇವೆ ಮಾಡಿದ್ದಕ್ಕೂ ಸಾರ್ಥಕವಾಯಿತು. ನಮ್ಮ ಸೇವೆಯನ್ನು ಗುರುತಿಸಿ ಇಂದು ಭಾರತೀಯ ವಾಯು ಸೇನೆ ಗೌರವ ಸರ್ಮಪಿಸಿದೆ. ನಿಜಕ್ಕೂ ಇದು ಹೆಮ್ಮೆಯ ವಿಚಾರವಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ನರ್ಸ್ ಮತ್ತು ವೈದ್ಯರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನರ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫಿಸರ್ ಆಗಿ ಕೆಲಸ ಮಾಡಿದ್ದು, ಈ ವೃತ್ತಿಗೆ ಬಂದಿದ್ದಕ್ಕೂ ಹೆಮ್ಮೆಯಾಗುತ್ತದೆ. ನರ್ಸಿಂಗ್ ತುಂಬಾ ಜವಾಬ್ದಾರಿಯುತ ಕೆಲಸವಾಗಿದೆ. ಇಡೀ ದೇಶವೇ ಕೊರೊನಾ ಸಮಸ್ಯೆ ಬಗೆಹರಿಸಲು ಕಷ್ಟಪಡುತ್ತಿದೆ. ಈ ವೇಳೆ ನಾವು ಕೊರೊನಾ ವಿರುದ್ಧ ಹೋರಾಡಲು ಸೇವೆ ಸಲ್ಲಿಸುತ್ತಿದ್ದೀವಿ ಅನ್ನೋದು ತುಂಬಾ ಸಂತಸವಾಗುತ್ತಿದೆ ಎಂದರು.

    ಇಂದು ಕಮಾಂಡರ್ ಕೂಡ ಈ ರೀತಿ ನಮಗೆ ಗೌರವ ಸಲ್ಲಿಸಿದ್ದಾರೆ. ನಿಜಕ್ಕೂ ಇದು ತುಂಬಾ ಖುಷಿಯಾದ ವಿಚಾರ. ಸಾಮಾನ್ಯ ದಿನ ಕೆಲಸ ಮಾಡುವುದು ಬೇರೆ, ಆದರೆ ಕೊರೊನಾ ರೋಗಿಗಳನ್ನು ನೋಡಿಕೊಳ್ಳುವ ಮೂಲಕ ಇನ್ನೂ ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಪೊಲೀಸರು, ವೈದ್ಯರು ಮತ್ತು ಮಾಧ್ಯಮದವರಿಗೆ ನರ್ಸ್ ಧನ್ಯವಾದ ತಿಳಿಸಿದರು.

    ಇತರೆ ನರ್ಸ್, ವೈದ್ಯರು ಮಾತನಾಡಿ, ಭಾರತೀಯ ವಾಯು ಸೇನೆ ನಮ್ಮ ಸೇವೆಯನ್ನು ಗುರುತಿಸಿ ಇಂದು ಗೌರವ ಸಲ್ಲಿಸಿದೆ. ಈ ಮೂಲಕ ನಾವು ಇಂತಹ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತಿದೆ ಎಂದರು.

    ನಾನು ಒಂದೂವರೆ ತಿಂಗಳಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂದು ಭಾರತೀಯ ಸೇನೆ ಗೌರವ ಸಲ್ಲಿಸಿದ್ದರಿಂದ ನಮಗೆ ಸ್ಫೂರ್ತಿ ಸಿಕ್ಕಿದಂತಾಗಿದೆ. ಇನ್ನೂ ಹೆಚ್ಚಾಗಿ ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತಾಗಿದೆ ಎಂದು ಸಂತಸಪಟ್ಟರು.

    ನಾವು ನಮ್ಮ ಮಕ್ಕಳು, ಪತಿ ಎಲ್ಲರನ್ನೂ ಬಿಟ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ರೀತಿ ನಾವು ಕೊರೊನಾ ಕ್ವಾರಂಟೈನ್‍ನಲ್ಲಿದ್ದೇವೆ. ನನ್ನ ಸೇವೆಯನ್ನು ಗುರುತಿಸಿ ಭಾರತೀಯ ವಾಯು ಸೇನೆ ಗೌರವ ಸಲ್ಲಿಸಿದ್ದು, ತುಂಬಾ ಹೆಮ್ಮೆಯಾಗುತ್ತಿದೆ ಎಂದು ನರ್ಸ್ ಮತ್ತು ವೈದ್ಯರು ಹರ್ಷ ವ್ಯಕ್ತಪಡಿಸಿದರು.

  • ಲಾಕ್‍ಡೌನ್‍ನಿಂದ ತೋಟದಲ್ಲೇ ಬಾಡುತ್ತಿರುವ ಹೂವನ್ನು ಕಂಡು ಕಣ್ಣೀರಿಟ್ಟ ರೈತ ಮಹಿಳೆ

    ಲಾಕ್‍ಡೌನ್‍ನಿಂದ ತೋಟದಲ್ಲೇ ಬಾಡುತ್ತಿರುವ ಹೂವನ್ನು ಕಂಡು ಕಣ್ಣೀರಿಟ್ಟ ರೈತ ಮಹಿಳೆ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಹೂವುಗಳ ದರ ಮಾರುಕಟ್ಟೆಯಲ್ಲಿ ಕುಸಿತವಾಗಿದ್ದು, ಬಟಾನ್ಸ್ ಹೂವುಗಳನ್ನು ಬೆಳೆದ ರೈತ ಮಹಿಳೆಯೊಬ್ಬರು ತೋಟದಲ್ಲಿ ಬಾಡಿಹೋಗುತ್ತಿರುವ ಹೂವುಗಳನ್ನು ಕಂಡು ಕಂಗಾಲಾಗಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಸವಪಟ್ಟಣ ಗ್ರಾಮದ ರೈತ ಮಹಿಳೆಯೊಬ್ಬರು ನಷ್ಟ ಅನುಭವಿಸುತ್ತಿದ್ದಾರೆ. ಅತ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇತ್ತ ತೋಟದಲ್ಲಿಯೇ ಹೂವುಗಳು ಒಣಗುತ್ತಿರೋದನ್ನ ಕಂಡು ರೈತ ಮಹಿಳೆ ಲಕ್ಷ್ಮೀದೇವಮ್ಮ ಕಂಗಾಲಾಗಿದ್ದಾರೆ. ತಮ್ಮ ಜಮೀನಿನಲ್ಲಿ ಬಟಾನ್ಸ್ ಹೂವುಗಳನ್ನು ಲಕ್ಷ್ಮೀದೇವಮ್ಮ ಬೆಳೆದಿದ್ದರು. ಐದು ಲಕ್ಷ ರೂ. ಸಾಲ ಮಾಡಿ ಕಷ್ಟ ಪಟ್ಟು ಹೂವುಗಳನ್ನು ಬೆಳೆದಿದ್ದರು. ಹೂವುಗಳು ಕೂಡ ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ಲಾಕ್‍ಡೌನ್ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂವಿನ ದರ ಕುಸಿತಕಂಡಿದ್ದು, ಹೂವುಗಳನ್ನು ಮಾರಾಟ ಮಾಡಿದರೆ ಹಾಕಿದ ಅರ್ಧದಷ್ಟು ಹಣ ಸಿಗೋದಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

    ಒಂದೆಡೆ ಬೆಳೆ ನಷ್ಟವಾದರೆ, ಇನ್ನೊಂದೆಡೆ ಸಾಲಗಾರನ ಕಾಟದಿಂದ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬ ಕಾಲ ಕಳೆಯುತ್ತಿದೆ. ಮಾರುಕಟ್ಟೆಗೆ ಸಾಗಿಸಲು ಪೊಲೀಸರ ಭಯ, ಬಾಡಿಗೆ ವಾಹನಗಳು ಸಿಗುತ್ತಿಲ್ಲ. ಇತ್ತ ಹೂವು ಕಟಾವು ಮಾಡಲು ಕೂಲಿ ಆಳುಗಳು ಕೆಲಸಕ್ಕೆ ಬರದಿರೋದು ತೊಂದರೆಯಾಗಿದೆ ಎಂದು ರೈತ ಮಹಿಳೆ ಕಣ್ಣೀರಿಡುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.

  • ಹಬ್ಬಕ್ಕೆ ಹೂವು, ಹಣ್ಣು ರೇಟ್ ಹೈಕ್ – ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್

    ಹಬ್ಬಕ್ಕೆ ಹೂವು, ಹಣ್ಣು ರೇಟ್ ಹೈಕ್ – ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್

    ಬೆಂಗಳೂರು: ದಸರಾ ಹಬ್ಬಕ್ಕೆ ಈಗಾಗಲೇ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಸೋಮವಾರ ಹಾಗೂ ಮಂಗಳವಾರ ನಡೆಯುವ ಹಬ್ಬಕ್ಕೆ ಈಗಾಗಲೇ, ಭರ್ಜರಿ ಪ್ರಿಪರೇಷನ್ ನಡೆಸಲಾಗುತ್ತಿದೆ. ಇದರ ನಡುವೆ ಬೆಲೆ ಏರಿಕೆಯ ಬಿಸಿ ಜನರನ್ನು ಕಾಡುತ್ತಿದ್ದು, ದುಬಾರಿ ರೇಟ್ ಗೆ ಜನರು ಹೈರಾಣಾಗಿದ್ದಾರೆ.

    ಸೋಮವಾರ ಆಯುಧ ಪೂಜೆ ಇದ್ದು, ಮಂಗಳವಾರ ವಿಜಯದಶಮಿ ಇದೆ. ಇವೆರಡು ದಿನ ನವದುರ್ಗೆಯರ ಅರ್ಚನೆ ಮಾಡಿ, ವಾಹನಗಳಿಗೆ ಪೂಜೆ ಮಾಡುವ ಉತ್ಸಾಹದಲ್ಲಿ ಜನರಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ವಾಹನಗಳಿಗೆ, ಆಯುಧಗಳಿಗೆ ದೃಷ್ಟಿ ತೆಗೆಯಲು ಕುಂಬಳಕಾಯಿ ವ್ಯಾಪಾರ ದುಪ್ಪಟ್ಟಾಗಿದ್ದು, ಕೆ.ಜಿಗೆ 150ರೂ ಆಗಿದೆ. ನವದುರ್ಗೆಯರ ಪೂಜೆಗೆ ಬೇಕಾಗುವ ಹೂವು ಹಾಗೂ ಹಣ್ಣುಗಳ ಬೆಲೆ ದುಬಾರಿಯಾಗಿದೆ.

    ಗಗನಕ್ಕೇರಿದ ಹೂವುಗಳ ಬೆಲೆ;
    ಕನಕಾಂಬರ ಹಿಂದಿನ ದರ ಕೆ.ಜಿಗೆ 600 ರೂ. ಇದ್ದು, ಈಗಿನ ದರ 1500 ರೂ. ಆಗಿದೆ. ದುಂಡುಮಲ್ಲಿಗೆ ಮೊದಲು ಕೆಜಿಗೆ 400ರೂ. ಇತ್ತು, ಆದರೆ ಈಗ 1,000ರೂ. ಆಗಿದೆ. ಕಾಕಡ ಹಿಂದಿನ ದರ 200ರೂ, ಈಗ 500ರೂ. ಆಗಿದೆ. ಜಾಜಿ ಮಲ್ಲಿಗೆ 150 ರೂ. ಆಗಿದ್ದು, ಈಗ 200ರೂ. ಆಗಿದೆ. ಸೇವಂತಿಗೆ 40 ರೂ. ಇತ್ತು, ಆದರೆ ಈಗ 150 ರೂ. ಆಗಿದೆ. ಸುಗಂಧರಾಜ ಮೊದಲು 100ರೂ. ಇತ್ತು, ಆದರೆ ಈಗ 300ರೂ. ಆಗಿದೆ. ಗುಲಾಬಿ ಹೂವಿನ ಹಿಂದಿನ ದರ 150 ಇದ್ದು, ಈಗಿನ ದರ 200ರೂ. ಆಗಿದೆ. ತುಳಸಿ ಒಂದು ಮಾರಿಗೆ 50ರೂ. ಆಗಿದ್ದು, ಮಾವಿನ ಎಲೆ ಒಂದು ಕಟ್ಟಿಗೆ 40ರೂ. ಆಗಿದೆ.

    ಹಣ್ಣುಗಳ ಬೆಲೆಗಳನ್ನು ನೋಡೋದಾದರೆ;
    ಸೇಬುಹಣ್ಣು ಮೊದಲು 80ರೂ. ಇದ್ದು, ಈಗಿನ ಬೆಲೆ 120ರೂ. ಆಗಿದೆ. ಕಿತ್ತಳೆ ಹಿಂದಿನ ದರ 60 ರೂ. ಇದ್ದು, ಈಗ 80ರೂ. ಆಗಿದೆ. ಮೊಸಂಬಿ ಮೊದಲು 70ರೂ. ಇದ್ದು, ಈಗ 100ರೂ. ಹೆಚ್ಚಾಗಿದೆ. ಬಾಳೆಹಣ್ಣಿನ ಹಿಂದಿನ ದರ 50ರೂ, ಆದರೆ ಈಗ 80ರೂ. ಆಗಿದೆ. ಅನಾನಸ್ ಮೊದಲು 30ರೂ. ಇದ್ದು, ಈಗ 60 ರೂ. ಆಗಿದೆ. ದ್ರಾಕ್ಷಿ ಹಣ್ಣಿನ ಹಿಂದಿನ ದರ 90ರೂ. ಇದ್ದು, ಈಗ 120ರೂ. ಆಗಿದೆ. ಅಲ್ಲದೆ ದಾಳಿಂಬೆ ಮೊದಲು 80 ರೂ. ಇತ್ತು, ಆದರೆ ಈಗ 100ರೂ. ಆಗಿದೆ.

    ಬೆಲೆ ಏರಿಕೆಗೆ ಕಾರಣಗಳು;
    * ಅತಿಯಾದ ಮಳೆ
    * ಹೂವು-ಹಣ್ಣುಗಳ ಇಳುವರಿ ಕಡಿಮೆಯಾಗಿರುವುದು
    * ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಸಪ್ಲೈ ಆಗದೇ ಇರುವುದು

  • ಸಚಿವರ ಆಗಮನಕ್ಕೆ ಮುನ್ನವೇ ಗಜ ಪಯಣಕ್ಕೆ ಪುಷ್ಪಾರ್ಚನೆ

    ಸಚಿವರ ಆಗಮನಕ್ಕೆ ಮುನ್ನವೇ ಗಜ ಪಯಣಕ್ಕೆ ಪುಷ್ಪಾರ್ಚನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಅನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ.

    ಇಂದು ಈ ಗಜ ಪಡೆಯ ಸ್ವಾಗತಕ್ಕೆ ಡೊಳ್ಳು, ಕಂಸಾಳೆ ವಿವಿಧ ಜನಪದ ಕಲಾ ತಂಡಗಳ ಮೆರುಗು ತುಂಬಿದವು. ಇದರ ಜೊತೆಗೆ ಕಲಶ ಹೊತ್ತು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ ಆನೆಗಳು ಮೈಸೂರಿಗೆ ಪ್ರಯಣ ಮಾಡಿದವು.

    ಮೊದಲ ತಂಡವಾಗಿ ಐದು ಅನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರಬೇಕಾದ ನೂತನ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಬರುವುದನ್ನು ಒಂದು ನಿಮಿಷವೂ ಕಾಯದೇ ಪುಷ್ಪಾರ್ಚನೆ ಮಾಡಿದ ಶಾಸಕ ಎಸ್.ಎ ರಾಮದಾಸ್, ಯಾರನ್ನು ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿ ಪುಷ್ಪಾರ್ಚನೆ ಮಾಡಿದರು.

    ಎಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ತಡವಾಗಿ ಬಂದ ಸಚಿವಾರದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಅವರು ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

  • ಅಂಬೇಡ್ಕರ್ ಪ್ರತಿಮೆಗೆ ಬೇಕಾಬಿಟ್ಟಿ ಪುಷ್ಪಾರ್ಚನೆ – ಬಿಜೆಪಿ ಶಾಸಕನ ವಿರುದ್ಧ ದಲಿತ ಸಂಘಟನೆಗಳು ಗರಂ

    ಅಂಬೇಡ್ಕರ್ ಪ್ರತಿಮೆಗೆ ಬೇಕಾಬಿಟ್ಟಿ ಪುಷ್ಪಾರ್ಚನೆ – ಬಿಜೆಪಿ ಶಾಸಕನ ವಿರುದ್ಧ ದಲಿತ ಸಂಘಟನೆಗಳು ಗರಂ

    ಮೈಸೂರು: ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅಳಿಯ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಅಂಬೇಡ್ಕರ್ ಪುತ್ಥಳಿಗೆ ಬೇಕಾಬಿಟ್ಟಿ ಪುಷ್ಪಾರ್ಚನೆ ಮಾಡಿದ್ದಾರೆ. ಈ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಶಾಸಕರ ವಿರುದ್ಧ ಗರಂ ಆಗಿದಾರೆ.

    ಮಾವ ಅಂಬೇಡ್ಕರ್ ಅನುಯಾಯಿ ಆದ್ರೆ ಅಳಿಯನಿಂದ ಅಂಬೇಡ್ಕರ್‍ಗೆ ಅವಮಾನವಾಗಿದೆ ಎಂದು ಹರ್ಷವರ್ಧನ್ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

    ಶನಿವಾರ ಮೊರಾರ್ಜಿ ದೇಸಾಯಿ ವಸತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಹರ್ಷವರ್ಧನ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಆಗಮಿಸಿದ್ದರು. ಈ ವೇಳೆ ಅಂಬೇಡ್ಕರ್ ಪುತ್ಥಳಿಗೆ ಎಲ್ಲಾ ನಾಯಕರು ಪುಷ್ಪರ್ಚನೆ ಮಾಡಿದ್ದಾರೆ. ಆದ್ರೆ ಶಾಸಕ ಹರ್ಷವರ್ಧನ್ ಮಾತ್ರ ಬೇಕಾಬಿಟ್ಟಿಯಾಗಿ ಪುಷ್ಪರ್ಚನೆ ಮಾಡಿದ್ದಾರೆ.

    ಅಂಬೇಡ್ಕರ್ ಪುತ್ಥಳಿಯನ್ನೆ ನೋಡದೇ ಪುಷ್ಪರ್ಚನೆ ಮಾಡಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಸಿಟ್ಟಿಗೆದ್ದಿದ್ದು, ಹರ್ಷವರ್ಧನ್ ಅವರು ಪುತ್ಥಳಿಗೆ ಬೇಕಾಬಿಟ್ಟಿ ಪುಷ್ಪಾರ್ಚನೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಪುಷ್ಪಾರ್ಚನೆ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಮಾತಿಗಿಳಿದಿದ್ದ ಹರ್ಷವರ್ಧನ್ ಅವರು, ಮಾತನಾಡುತ್ತಲೇ ಹೂವುಗಳನ್ನ ಪುತ್ಥಳಿಗೆ ಎಸೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರ್ಷವರ್ಧನ್ ಕ್ಷಮೆಯಾಚಿಸಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ- ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

    ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ- ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

    ಬೆಂಗಳೂರು: ಇಂದು ಮಹಾಶಿವರಾತ್ರಿ ಹಬ್ಬ. ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

    ನಗರದ ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಯಶವಂತರಪುರ ಸೇರಿದಂತೆ ಎಲ್ಲಾ ಕಡೆ ಖರೀದಿ ಭರಾಟೆ ಜೋರಾಗಿದೆ. ಶಿವನ ಆರಾಧನೆ ವೇಳೆ ಬಿಲ್ವ ಪತ್ರೆ, ಮಲ್ಲಿಗೆ ಹೂವಿನದರ ಮಾತ್ರ ಏರಿಕೆ ಕಂಡಿದೆ. ಈ ಹಬ್ಬದಲ್ಲಿ ಬಹುತೇಕ ಎಲ್ಲರೂ ಉಪವಾಸ ವ್ರತ ಆಚರಣೆ ಹಿನ್ನೆಲೆಯಲ್ಲಿ ಹೂವಿಗಿಂತ, ಹಣ್ಣು, ತರಕಾರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಪರಿಣಾಮ ಹಣ್ಣು, ತರಕಾರಿ ಬೆಲೆ ಕೊಂಚ ಏರಿಕೆ ಕಂಡಿದೆ.

    ಹೂವಿನ ದರ ಎಷ್ಟು?
    ಮಲ್ಲಿಗೆ ಕೆಜಿಗೆ 300 ರೂ. ಇದ್ದರೆ 500 ರೂ. ಏರಿಕೆಯಾಗಿದೆ. ಸೇವಂತಿ 200 ರೂ.ನಿಂದ 250ಕ್ಕೆ ಏರಿಕೆಯಾಗಿದ್ದರೆ ಗುಲಾಬಿ 100 ರೂ. ನಿಂದ 150 ರೂ.ಗೆ ಏರಿಕೆಯಾಗಿದೆ. ಬಿಲ್ವಪತ್ರೆ ಒಂದು ಕಟ್ಟಿಗೆ 10 ರೂ. ಇದ್ದರೆ ಈಗ 20 ರೂ. ಆಗಿದೆ.

    ಹಣ್ಣಿನ ದರ ಎಷ್ಟು?
    ಸೇಬು ಕೆಜಿಗೆ 80 ರೂ. ಇದ್ದರೆ 100 ರೂ. ಏರಿಕೆಯಾಗಿದೆ. ಕರ್ಬೂಜ ಕೆಜಿಗೆ 30 ರೂ.ಯಿಂದ 35 ರೂ.ಕ್ಕೆ ಹೆಚ್ಚಾಗಿದೆ. ಕಲ್ಲಂಗಡಿ ಕೆಜಿಗೆ 10 ರೂ.ಯಿಂದ 15 ರೂ. ಏರಿಕೆಯಾಗಿದೆ. ದಾಳಿಂಬೆ ಕೆಜಿಗೆ 80 ರೂ.ಯಿಂದ 100 ರೂ. ಹೆಚ್ಚಾಗಿದೆ.

    ತರಕಾರಿ ದರ ಎಷ್ಟು?
    ಹುರುಳಿಕಾಯಿ ಕೆಜಿಗೆ 40 ರೂ. ಇದ್ದರೆ 45 ರೂ. ಏರಿಕೆಯಾಗಿದೆ. ಅವರೇಕಾಯಿ ಕೆಜಿಗೆ 40 ರೂ.ಯಿಂದ 45 ರೂ. ಹೆಚ್ಚಾಗಿದೆ. ಕ್ಯಾರೆಟ್ ಕೆಜಿಗೆ 20 ರೂ.ಯಿಂದ ಕೆಜಿ 25 ರೂ. ಏರಿಕೆಯಾಗಿದ್ದರೆ, ಬೆಂಡೆಕಾಯಿ ಕೆಜಿಗೆ 60 ರೂಯಿಂದ 65 ರೂ. ಹೆಚ್ಚಾಗಿದೆ.

    ಪೂಜಾ ಸಾಮಾಗ್ರಿಗಳ ದರದ ವಿವರ: ಶಿವಧಾರ ಒಂದಕ್ಕೆ 2 ರೂ ಇದ್ದರೆ, ವಿಭೂತಿ ಗಟ್ಟಿ- ಒಂದಕ್ಕೆ 30 ರೂ. ಇದೆ ಹಾಗೂ ವಸ್ತ್ರ ಒಂದಕ್ಕೆ 10 ರೂ. ಆಗಿದೆ.

    ಹಬ್ಬದ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕೆಲ ಗ್ರಾಹಕರು ಹೇಳಿದರೆ ಮತ್ತೆ ಕೆಲವೆಡೆ ಸಂಕ್ರಾಂತಿ, ಲಕ್ಷ್ಮೀ ಹಬ್ಬಕ್ಕಿಂತ ಬೆಲೆ ಏರಿಕೆ ಕಡಿಮೆ ಇದೆ. ಖರೀದಿಗೆ ಅಡ್ಡಿ ಇಲ್ಲ ಎಂದು ಹೇಳಿದ್ದಾರೆ. ದೇಗುಲಗಳಲ್ಲಿ ಇಂದು ವಿಶೇಷ ಪೂಜೆ ನಡೆಯುತ್ತಿದೆ. ಶಿವ ದೇಗುಲ ಮುರುಡೇಶ್ವರ, ಕೊಯಮತ್ತೂರಿನ ಶಿವ ದೇಗುಲದಲ್ಲೂ ವಿಶೇಷ ಪೂಜೆ ಪುನಸ್ಕಾರ ಜರುಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv