Tag: flower

  • 208ನೇ ಫ್ಲವರ್ ಶೋ- ಒಂದೇ ದಿನದಲ್ಲಿ ಲಕ್ಷಕ್ಕಿಂತ್ಲೂ ಅಧಿಕ ಜನ ಭೇಟಿ

    208ನೇ ಫ್ಲವರ್ ಶೋ- ಒಂದೇ ದಿನದಲ್ಲಿ ಲಕ್ಷಕ್ಕಿಂತ್ಲೂ ಅಧಿಕ ಜನ ಭೇಟಿ

    ಬೆಂಗಳೂರು: ಬಹುನೀರಿಕ್ಷಿತ 208 ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಈ ಹೂಮೇಳ ನೋಡಲು ಜನರು ಸಾಗರದಂತೆ ಹರಿದು ಬಂದಿದ್ದು, ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನರು ಭೇಟಿ ನೀಡಿದ್ದಾರೆ.

    ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ 208ನೇ ಫ್ಲವರ್ ಶೋ ಎಲ್ಲರ ಮನಸೂರೆಗೊಳಿಸಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸೂಚಿಸುವ ಯೋಜನೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಯುದ್ಧ ವಾಹನಗಳು, ಹಿಮಾಲಯದ ಬೆಟ್ಟ ಗುಡ್ಡಗಳು, ಸಿಯಾಚಿನ್‍ನ ಹಿಮ, ಟ್ಯಾಂಕರ್, ನೌಕಾದಳದ ಹಡಗನ್ನು ಹೂವಿನ ಮಾದರಿಯಲ್ಲಿ ರಚಿಸಲಾಗಿದ್ದು, ಜನ ಆಸಕ್ತಿಯಿಂದ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.

    ಲಾಲ್‍ಬಾಗ್ ಹೂಮೇಳದಿಂದಾಗಿ ಸಿಂಗಾರಗೊಂಡ ನವ ವಧುವಿನಂತೆ ಕಂಗೊಳಿಸುತ್ತಿತ್ತು. ಶನಿವಾರ ಮೊದಲ ದಿನವಾದ್ದರಿಂದ ಫ್ಲವರ್ ಶೋಗೆ 15 ಸಾವಿರ ಜನ ಭೇಟಿ ನೀಡಿದ್ದರು. ಭಾನುವಾರ ಆಗಿದ್ದರಿಂದ ಹೆಚ್ಚು ಜನ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಭೇಟಿ ಕೊಟ್ಟಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಲಾಲ್‍ಬಾಗ್‍ಗೆ ಭೇಟಿ ಕೊಟ್ಟಿದ್ದಾರೆ ಎಂದು ಪ್ರವಾಸಿ ಆರತಿ ಹೇಳಿದ್ದಾರೆ.

    ಗಾಜಿನ ಮನೆ ಪ್ರವೇಶ ಮಾಡುತ್ತಿದ್ದಂತೆಯೇ ನವದೆಹಲಿಯಲ್ಲಿರುವ ಸ್ಮಾರಕ ಅಮರ್ ಜವಾನ್ ಜ್ಯೋತಿಯ ಮಾದರಿಯನ್ನ ನಿರ್ಮಿಸಲಾಗಿದೆ. ಫಲಪುಷ್ಪಗಳ ಜೊತೆ ಸೈನಿಕರ ತ್ಯಾಗ ಬಲಿದಾನ ಕುರಿತು ಮೂಡಿಸುವ ಜಾಗೃತಿಗೆ ಸಾರ್ವಜನಿಕರು ಭೇಷ್ ಅನ್ನುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವ ರೀಲ್ ಚಿತ್ರವೂ ಕೂಡ ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ. ಈ ಫಲಪುಷ್ಪ ಪ್ರದರ್ಶನದ ಸೊಬಗು ಆಗಸ್ಟ್ 15 ರವರೆಗೆ ಆಯೋಜನೆಗೊಂಡಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 10 ವರ್ಷಗಳ ಹಿಂದೆ ಸೈಕಲ್ ಕೂಡ ಇರ್ಲಿಲ್ಲ, ಈಗ ಕೋಟಿ ಒಡೆಯ – 5 ವರ್ಷಗಳಿಂದ ಹೂವಿನ ಅಲಂಕಾರ ಸೇವೆ

    10 ವರ್ಷಗಳ ಹಿಂದೆ ಸೈಕಲ್ ಕೂಡ ಇರ್ಲಿಲ್ಲ, ಈಗ ಕೋಟಿ ಒಡೆಯ – 5 ವರ್ಷಗಳಿಂದ ಹೂವಿನ ಅಲಂಕಾರ ಸೇವೆ

    ಉಡುಪಿ: ವ್ಯಕ್ತಿಯೊಬ್ಬರು ದೇವರಿಗೆ ಹರಕೆ ಹೊತ್ತು ಕಳೆದ 5 ವರ್ಷದಿಂದ ಉಡುಪಿಯ ಅಂಬಲ್ಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಗಳಿಗೆ ಹೂವಿನ ಅಲಂಕಾರದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

    ರಮೇಶ್ ಬಾಬು ಅವರು ವಿಭಿನ್ನ ಹರಕೆ ಹೊತ್ತು, ಪ್ರತೀ ವರ್ಷ ದೇವರನ್ನು ನಂದನವನದಲ್ಲಿ ಕುಳ್ಳಿರಿಸುತ್ತಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದವರಾದ ರಮೇಶ್, 10 ವರ್ಷದ ಹಿಂದೆ ಇವರ ಬಳಿಯಲ್ಲಿ ಒಂದು ಸೈಕಲೂ ಇರಲಿಲ್ಲ. ಆದರೆ ಇವತ್ತಿಗೆ ಕೋಟಿಗಳ ಒಡೆಯರಾಗಿದ್ದಾರೆ. ಈ ಬೆಳವಣಿಗೆಗೆ ಉಡುಪಿಯ ಜನಾರ್ದನ ದೇವರು ಮತ್ತು ಮಹಾಕಾಳಿ ದೇವಿ ಕಾರಣ. ಆದ್ದರಿಂದ ಕಷ್ಟದಲ್ಲಿದ್ದಾಗ ಕೈ ಹಿಡಿದ ದೇವರನ್ನು ನಾನು ಪ್ರತೀ ವರ್ಷ ಹೂವಿನ ತೊಟ್ಟಿಲಿನಲ್ಲಿಟ್ಟು ಹರಕೆ ತೀರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಆಷಾಢ ಶುಕ್ರವಾರದಂದು ತಮ್ಮ 50 ಮಂದಿ ಯುವಕರ ತಂಡದ ಜೊತೆ ರಮೇಶ್ ಉಡುಪಿಗೆ ಬರುತ್ತಾರೆ. ಜೊತೆಗೆ ಲಕ್ಷಾಂತರ ರೂಪಾಯಿ ಹೂವುಗಳನ್ನು ಹೊತ್ತು ತರುತ್ತಾರೆ. ಅಂಬಲ್ಪಾಡಿ ಜನಾರ್ದನ- ಮಹಾಕಾಳಿ ದೇವಸ್ಥಾನಕ್ಕೆ ಬಂದು ಇಡೀ ದೇವಸ್ಥಾನವನ್ನು ಪುಷ್ಪಮಯ ಮಾಡುತ್ತಾರೆ. ಸಂಪೂರ್ಣ ದೇವಸ್ಥಾನವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿಸುತ್ತಾರೆ. ಶಿಲಾಮಯ ಕೆತ್ತನೆಗಳುಳ್ಳ ದೇವಸ್ಥಾನ ಹೂವಿನ ದೇವಳವಾಗಿ ಇಂದು ಪರಿವರ್ತನೆಗೊಂಡಿದೆ. ಈ ರೀತಿಯ ಹರಕೆ ನೀಡುತ್ತಿರುವುದು ಐದನೇ ಬಾರಿಯಾಗಿದೆ ಎಂದು ಭಕ್ತರಾದ ಮಂಜುಳಾ ಮತ್ತು ಶರಣ್ಯ ಹೇಳಿದ್ದಾರೆ.

    ಸುಮಾರು 3 ಲಕ್ಷ ರೂಪಾಯಿಯ ಹೂವಿನಿಂದ ದೇವಸ್ಥಾನವನ್ನು ಸಿಂಗಾರ ಮಾಡಲಾಗಿದೆ. 50 ಮಂದಿ ಯುವಕರು ಉಚಿತವಾಗಿ ಸಿಂಗಾರ ಸೇವೆಯನ್ನು ಮಾಡಿದ್ದರು.

  • ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಕಣ್ಮನವನ್ನ ಸೆಳೆಯುತ್ತಿವೆ ಹೂಗಳಿಂದ ಅರಳಿದ ರಂಗೋಲಿ!

    ಭುವನೇಶ್ವರ: ಸಾಮಾನ್ಯವಾಗಿ ಎಲ್ಲರೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಮನೆಗಳಲ್ಲಿ ಬಣ್ಣ-ಬಣ್ಣದ ರಂಗೋಲಿಯನ್ನು ಹಾಕುತ್ತಾರೆ. ಆದರೆ ಒಡಿಶಾದಲ್ಲಿ ಪುಷ್ಪಾಲಂಕರಗಳ ಮೂಲಕ ವಿವಿಧ ರೀತಿಯ ವಿನ್ಯಾಸಗಳಲ್ಲಿ ರಂಗೋಲಿಯನ್ನು ಬಿಡಿಸಲಾಗಿದೆ. ಅವು ನೋಡುಗರ ಗಮನವನ್ನು ಸೆಳೆಯುತ್ತಿದೆ.

    ಲಲಿತ್ ಕಲಾ ಅಕಾಡೆಮಿ (ಆರ್ಟ್ ಗ್ಯಾಲರಿ) ಕಳೆದ ವಾರ ನಗರದ ಪ್ರಸಿದ್ಧ ಒಡಿಸ್ಸಿ ನರ್ತಕಿ ಜನ್ಹಾಬಿ ಬೆಹೆರಾರಿಂದ ಹೂವುಗಳಿಂದ ಮಾಡಿದ ರಂಗೋಲಿಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಪ್ರದರ್ಶನ ಕಂಡ ಹೂ ರಂಗೋಲಿಗಳು ತುಂಬಾ ಆಕರ್ಷಕವಾಗಿದ್ದವು.

    ಲಿಲ್ಲಿಗಳು, ಜಾಸ್ಮಿನ್, ಗುಲಾಬಿ ದಳಗಳು, ಚೆಂಡು ಹೂ (ಮಾರಿಗೋಲ್ಡ್) ಸುಗಂಧರಾಜ ಮತ್ತು ಒಣಗಿದ ಎಲೆಗಳನ್ನು ಈ ಚಿತ್ತಾರವಾದ ರಂಗೋಲಿಗಳಿಗಾಗಿ ಬಳಸಿಕೊಳ್ಳಲಾಗಿದೆ. ಇವುಗಳೆಲ್ಲವನ್ನು ಬಳಸಿಕೊಂಡು ವರ್ಣರಂಜಿತವಾದ ಮಾದರಿಗಳಲ್ಲಿ ರಂಗೋಲಿ ಬಿಡಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾವಿದೆ, “ನಾನು ಯಾವಾಗಲೂ ಹೂವುಗಳಿಗೆ ಆಕರ್ಷಿತನಾಗಿದ್ದೇನೆ. ಅವು ಪ್ರಕೃತಿಯ ಸೌಂದರ್ಯದ ಅಭಿವ್ಯಕ್ತಿಗಳು. ನಾನು ಗಿಡದಿಂದ ಹೂವುಗಳನ್ನು ಕೀಳುವುದನ್ನು ಇಷ್ಟ ಪಡುವುದಿಲ್ಲ. ಆದರೂ ನಮಗೆ ಯಾವಾಗಲೂ ಪ್ರದರ್ಶನದ ನಂತರ ಹೂವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ನಾನು ಈ ಹೂವುಗಳನ್ನು ಮನೆಗೆ ತರುತ್ತೇನೆ. ಬಳಿಕ ಆ ಹೂವುಗಳಿಂದಲೇ ರಂಗೋಲಿ ಬಿಡಿಸುತ್ತೇನೆ. ಆದ್ದರಿಂದ ಹೂ ವ್ಯರ್ಥವಾಗಲ್ಲ ಎಂದು ಹೇಳಿದ್ದಾರೆ.

    ಈ ರೀತಿ ಉಡುಗೊರೆಯಾಗಿ ಬಂದಂತ ಹೂಗಳಿಂದ ರಂಗೋಲಿ ಬಿಡಿಸುತ್ತಿದ್ದರು. ಬಳಿಕ ಜನರು ಕೂಡ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದು, ಕಾಲಕ್ರಮೇಣ ಸಾಮಾಜಿಕ ಜಾಲತಾಣಗಲ್ಲಿ ಸರಳವಾದ ಹೂವಿನ ರಂಗೋಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಆರಂಭಿಸಿದರು. ನಂತರ ವಿಡಿಯೋ ನೋಡಿ ಅವರ ಸ್ನೇಹಿತರು ಮತ್ತು ಹಲವಾರು ಪ್ರೋತ್ಸಾಹಿಸಿದರು. ಜನರ ಪ್ರೋತ್ಸಾಹದಿಂದ  ಜನ್ಹಾಬಿ ಬೆಹೆರಾ ಅವರು ” Phula Re Phula Re: A Story in Flowers”ಎಂಬ ಶೀರ್ಷಿಕೆಯಡಿಯಲ್ಲಿ ಹೂ ರಂಗೋಲಿ ಪ್ರದರ್ಶನಗಳನ್ನು ಪ್ರದರ್ಶಿಸಲು ನಿರ್ಧರಿಸಿದ್ದರು.

    ಹೀಗೆ ಅಭಿವೃದ್ಧಿ ಪಡೆದ ಹೂ ರಂಗೋಲಿ ಒಡಿಶಾದ ಕೆಲವು ಶ್ರೇಷ್ಠ ಕೈಮಗ್ಗದಿಂದ ಸ್ಫೂರ್ತಿ ಪಡೆದ ಪ್ರಸಿದ್ಧ ಪಸಾಪಾಲಿ ಮಾದರಿಯನ್ನು ಬಿಡಿಸುತ್ತಿದ್ದರು. ಸಾಮಾನ್ಯವಾಗಿ ಒಂದು ವಿನ್ಯಾಸವನ್ನು ಪೂರ್ಣಗೊಳಿಸಲು ಸುಮಾರು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ನಾನು ಪ್ರಮುಖವಾಗಿ ಮಾರಿಗೋಲ್ಡ್ ಹೂವುಗಳ ಮೂಲಕ ಅಧಿಕವಾಗಿ ರಂಗೋಲಿಯನ್ನು ಬಿಡಿಸುತ್ತಿದ್ದೇನೆ ಎಂದು ಜನ್ಹಾಬಿ ಬೆಹೆರಾ ಹೇಳಿದ್ದಾರೆ.

  • ಉತ್ತರ ಭಾರತ ಮೂಲದ ಯುವತಿಯರಿಂದ ಫ್ಲವರ್ ಡೆಕೋರೇಟರ್‌ಗೆ ಥಳಿತ

    ಉತ್ತರ ಭಾರತ ಮೂಲದ ಯುವತಿಯರಿಂದ ಫ್ಲವರ್ ಡೆಕೋರೇಟರ್‌ಗೆ ಥಳಿತ

    ಬೆಂಗಳೂರು: ಉತ್ತರ ಭಾರತ ಮೂಲದ ಯುವತಿಯರು ನಾಗರಬಾವಿ ರಿಂಗ್ ರಸ್ತೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್ ಬಳಿ ರಂಪಾಟ ನಡೆಸಿದ್ದಾರೆ. ಹೋಟೆಲ್ ಬಳಿ ಇದ್ದ ಫ್ಲವರ್ ಡೆಕೋರೇಟರ್ ಅಂಗಡಿ ಮಾಲೀಕನನ್ನು ಹಿಡಿದು ಥಳಿಸಿದ್ದಾರೆ.

    ಫ್ಲವರ್ ಡೆಕೋರೇಟರ್ ಅಂಗಡಿಗೆ ನಾಲ್ವರು ಯುವತಿಯರು ಮತ್ತು ಒಬ್ಬ ಯುವಕ ವ್ಯಾಪರಕ್ಕಾಗಿ ಆಗಮಿಸಿ ಅಂಗಡಿ ಮಾಲೀಕನ ಜೊತೆ ಗಲಾಟೆಗೆ ಇಳಿದಿದ್ದಾರೆ. ಮೂವರು ಹುಡುಗಿಯರು ಫ್ಲವರ್ ಡೆಕೋರೇಟರ್ ನನ್ನ ಹಿಡಿದು ಥಳಿಸಿದ್ದಾರೆ.

    ಇದನ್ನು ಗಮನಿಸಿದ ಸ್ಥಳೀಯರು ಅಂಗಡಿ ಬಳಿ ಜಮಾಯಿಸಿದ್ದಾರೆ. ವಿಡಿಯೋ ಮಾಡಲು ಮುಂದಾದ ಜನರ ಮೇಲೂ ಹುಡುಗಿಯರು ರಂಪಾಟ ಮಾಡಿದ್ದಾರೆ. ಜನ ಸೇರುತ್ತಿದ್ದಂತೆ ಒಬ್ಬಾಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಸ್ಥಳೀಯರಿಂದ ಯುವತಿಯರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಯುವತಿಯರ ರಂಪಾಟದಿಂದ ರೊಚ್ಚಿಗೆದ್ದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮೂವರು ಯುವತಿಯರು ಮತ್ತು ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಅಂಗಡಿ ಮಾಲೀಕನಿಂದ ಮತ್ತು ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    https://www.youtube.com/watch?v=romlKVTH408