Tag: Flower Show

  • ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಕೋಟೆನಾಡಿನಲ್ಲಿ ಸೃಷ್ಟಿಯಾಗಿದೆ ಅದ್ಭುತ ಲೋಕ- ಭಕ್ತರನ್ನು ಆಕರ್ಷಿಸ್ತಿದ್ದಾರೆ ಸಿದ್ದಗಂಗಾ ಶ್ರೀಗಳು

    ಚಿತ್ರದುರ್ಗ: ವಿವಿಧ ತರಕಾರಿಗಳು ಹಾಗು ಹಣ್ಣುಗಳಲ್ಲಿ ಕಣ್ಮನ ತಣಿಸುವ ಹೂಗಳ ಉದ್ಯಾನವನದಲ್ಲಿ, ಭಕ್ತರನ್ನು ಆಕರ್ಷಿಸುತ್ತಿರೋ ಸಿದ್ದಗಂಗಾ ಶ್ರೀಗಳು ಹಾಗು ಭೂಮಿತಾಯಿಯ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥದ್ದೊಂದು ಅದ್ಭುತ ಲೋಕ ಕೋಟೆನಾಡು ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ.

    ಹೌದು. ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 28ನೇ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಬಗೆಬಗೆಯ ಕಲರ್ ಫುಲ್ ಹೂಗಳ ಲೋಕವೇ ಇಲ್ಲಿ ಅನಾವರಣಗೊಂಡಿದೆ. ಇಂತಹ ಬರಗಾಲದಲ್ಲೂ ಎಲ್ಲಿಂದ ಇಷ್ಟೊಂದು ಹೂವು, ಹಣ್ಣುಗಳನ್ನು ಬೆಳೆದರು ಎಂಬಂತೆ ಎಲ್ಲರನ್ನು ಅಚ್ಚರಿಗೊಳಿಸುವ ಸುಮಾರು 1ಲಕ್ಷಕ್ಕೂ ಅಧಿಕ ಕಲರ್‍ಫುಲ್ ಹೂವಿನ ಗಿಡಗಳಲ್ಲಿವೆ.

    ವಿಶೇಷ ಕುಬ್ಜ ಗಿಡಗಳು, ವಿವಿಧ ಬಗೆಯ ತರಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಅದ್ಭುತವಾದ ದೀಪಾಲಂಕಾರ ಹಾಗೂ ಅಪರೂಪದ ಚಿತ್ರಕಲೆ ಪ್ರದರ್ಶನ ಜನಸಾಗರವನ್ನೇ ಕೈಬೀಸಿ ಕರೆಯುತ್ತಿದ್ದು, ವಿಶೇಷ ಆಕರ್ಷಣೆಯಾಗಿ ತ್ರಿವಿಧ ಧಾಸೋಹಿ ಡಾ. ಶಿವಕುಮಾರ ಶ್ರೀಗಳ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡ್ತಿರೋ ನಡೆದಾಡುವ ದೇವರ ಆಶೀರ್ವಾದ ಇಲ್ಲಿ ಲಭಿಸುವಂತೆ ಭಾಸವಾಗುವ ವಿಶೇಷ ಪ್ರದರ್ಶನ ಇಲ್ಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಹೇಳಿದ್ದಾರೆ.

    ಈ ಜಿಲ್ಲೆಯ ಪ್ರಗತಿಪರ ರೈತರು ಬೆಳೆದ ಅಪರೂಪದ ಹಣ್ಣು, ತರಕಾರಿ, ತೋಟದ ಬೆಳೆಗಳ ಆಕರ್ಷಕ ಪ್ರದರ್ಶಿಕೆಯೂ ಇಲ್ಲಿ ಇದೆ. ಅಲ್ಲದೆ ಬರದನಾಡಲ್ಲಿ ಬೆಳೆಯಬಹುದಾದ ಅಣಬೆ ಹಾಗು ಹುಲ್ಲು ಬೆಳೆಯ ಮಾಹಿತಿ ಕೂಡ ಇಲ್ಲಿ ಲಭ್ಯವಾಗುತ್ತಿದ್ದು, ಶೈಕ್ಷಣಿಕವಾಗಿಯೂ ಉಪಯುಕ್ತವೆನಿಸಿ, ಝಗಝಗಿಸೋ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಿನುಗುತ್ತಿರೋ ಕಲಾಕೃತಿಗಳು ಹಾಗೂ ಫಲಪುಷ್ಪಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಯಶಸ್ವಿಯತ್ತ ಹೆಜ್ಜೆ ಹಾಕ್ತಿದೆ ಎಂದು ಸ್ಥಳೀಯರಾದ ರಶ್ಮಿ ಹೇಳುತ್ತಾರೆ.

    ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ದುರ್ಗದ ಜನರ ಕಣ್ಮನ ತಣಿಸುತ್ತಿದೆ. ಮಳೆಯಿಲ್ಲದೆ ಬಿಸಿಲಿನಿಂದ ಬಸವಳಿದ ಬರದನಾಡಿನ ಜನರಿಗೆ ಫಲ ಪುಷ್ಪದ ರಸದೌತಣ ನೀಡುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸ್ಫೂರ್ತಿ ತುಂಬ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನೇ ದಿನೇ ಕಳೆಗಟ್ಟುತ್ತಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ ಎಲ್ಲರ ಕಣ್ಮನಸೆಳೆಯುತ್ತಿದೆ.

    ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಗುಲಾಬಿ ರಂಗಿನಲ್ಲಿ ಅನಾವರಣಗೊಂಡಿರುವ ಬಲರಾಮ ದ್ವಾರ, ಕೈ ಬೀಸಿ ಕರೀತಿರುವ ಆನೆ ಗಾಡಿ, ಕಣ್ಣುಕುಕ್ಕುತ್ತಿರುವ ಡಾಲ್ಫಿನ್ ಗೆ ಸಾಥ್ ನೀಡಿರುವ ಮಶ್ರೂಮ್ ಕಲಾಕೃತಿ, ಪುಷ್ಪನಮನ ಸ್ವೀಕರಿಸುತ್ತಾ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಇವುಗಳ ನಡುವೆ ಚೆಲುವಿನ ನಗೆ ಬೀರುತ್ತಿರುವ ಗ್ಲಾಸ್ ಹೌಸ್, ಗಾಜಿನ ಮನೆಗೆ ಕಳೆ ತುಂಬಿರುವ ದೆಹಲಿಯ ಲೋಟಸ್ ಟೆಂಪಲ್ ಕಲಾಕೃತಿ ಇದೆಲ್ಲವನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

    ದಸರಾ ಹಿನ್ನೆಲೆಯಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಶೋನಲ್ಲಿ ಡಿಫರೆಂಟ್ ಟೈಪ್ ಆಫ್ ಫ್ಲವರ್ಸ್ ಲಗ್ಗೆ ಇಟ್ಟಿದ್ದು, ಉದ್ಯಾನವನಕ್ಕೆ ಕಳೆ ತುಂಬಿದ್ದಾರೆ. ಡಿಫರೆಂಟ್ ಡಿಫರೆಂಟ್ ಕಲಾಕೃತಿಗಳಿಗೆ ಸಿಟಿ ಮಂದಿ ಫಿದಾ ಆಗಿದ್ದಾರೆ. ಇಡೀ ಉದ್ಯಾನವನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫಿದಾ ಆಗಿರೋದಾಗಿ ಪ್ರವಾಸಿಗರು ಹೇಳಿದ್ದಾರೆ.

    ಬಣ್ಣ ಬಣ್ಣದ ದೇಶ-ವಿದೇಶಿಯ ಹೂಗಳಿಂದ ಕುಪ್ಪಣ್ಣ ಪಾರ್ಕ್ ಸಿಂಗಾರಗೊಂಡಿದೆ. ಅಮರ್ ಜವಾನ್, ರೊಮಿಯೋ ಜೂಲಿಯಟ್ ಸೇರಿದಂತೆ ವಿಭಿನ್ನ ಕಲಾಕೃತಿ ಪ್ರವಾಸಿಗರ ಮನಸೊರೆಗೊಳಿಸುತ್ತಿವೆ. 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಎಲ್ಲರ ಗಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಲಾಲ್ ಬಾಗ್ ಫ್ಲವರ್ ಶೋ ವೀಕ್ಷಣೆಗೆ ನಮ್ಮ ಮೆಟ್ರೋನಿಂದ ಬಂಪರ್ ಆಫರ್!

    ಬೆಂಗಳೂರು: ವೀಕೆಂಡ್ ನಲ್ಲಿ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುವವರಿಗೆ ನಮ್ಮ ಮೆಟ್ರೋ ಬಂಪರ್ ಆಫರ್  ವೊಂದನ್ನು ನೀಡಿದೆ.

    ನಮ್ಮ ಮೆಟ್ರೋ ಕೇವಲ 30 ರೂಪಾಯಿಯಲ್ಲಿ ಎರಡು ಬದಿಯ ಪ್ರಯಾಣಕ್ಕೆ ಅವಕಾಶ ನೀಡಿದೆ. 30 ರೂ. ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ಗೆ ಹೋಗಿ ವಾಪಸ್ ಬರಬಹುದು. ಅಷ್ಟೇ ಅಲ್ಲದೇ ಲಾಲ್ ಬಾಗ್ ನಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋಗಿ ವಾಪಸ್ ಆಗಬಹುದು.

    ಈ ಆಫರ್ ವೀಕೆಂಡ್ ನಲ್ಲಿ ಅಂದ್ರೆ ದಿನಾಂಕ 11, 12, 15 ರಂದು ಮಾತ್ರ ಅನ್ವಯವಾಗುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು 30 ರೂ. ನಲ್ಲಿ ಲಾಲ್ ಬಾಗ್ ಹೋಗಿ ವಾಪಸ್ ಬರಬಹುದು. ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವರಿಗೂ ಸಾಮಾನ್ಯ ದರ ಅನ್ವಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಾಫಿನಾಡಿನಲ್ಲಿ ಅತ್ಯದ್ಭುತ ಫಲಪುಷ್ಪ ಪ್ರದರ್ಶನ- ಕಣ್ಮನ ಸೆಳೆಯುತ್ತಿದೆ ನಾಟ್ಯ ಮಯೂರಿ

    ಕಾಫಿನಾಡಿನಲ್ಲಿ ಅತ್ಯದ್ಭುತ ಫಲಪುಷ್ಪ ಪ್ರದರ್ಶನ- ಕಣ್ಮನ ಸೆಳೆಯುತ್ತಿದೆ ನಾಟ್ಯ ಮಯೂರಿ

    ಚಿಕ್ಕಮಗಳೂರು: ಕಾಫಿಯ ಸುವಾಸನೆಯಲ್ಲೇ ಕಳೆದೋಗಿದ್ದ ಮಲೆನಾಡಿಗರು ವಿವಿಧ ಹೂಗಳ ಸುವಾಸನೆಯಲ್ಲಿ ಮುಳುಗಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರನ್ನ ಕೈಬೀಸಿ ಕರೆಯುತ್ತಿದೆ.

    ಮೂರು ದಿನಗಳ ಕಾಲ ವಿವಿಧ ಜಾತಿ ಹಾಗೂ ಬಣ್ಣದ ಹೂಗಳನ್ನು ಒಂದೆಡೆ ಸೇರಿಸಿ ಪ್ರದರ್ಶನಕ್ಕಿಟ್ಟಿರೋದು ಮಲೆನಾಡಿಗರನ್ನ ಮಂತ್ರಮುಗ್ಧರನ್ನಾಗಿಸಿದ್ದು, ಕಣ್ಮನ ಸೆಳೆಯೋ ಹೂಗಳ ರಾಶಿ, ಮೈಮರೆಸೋ ಸುವಾಸನೆ ನೋಡುಗರ ಮನ ಸೂರೆಗೊಳಿಸುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹೂಗಳ ಚಿತ್ತಾರ. ತರಕಾರಿಗಳಿಂದ್ಲೇ ಮೂಡಿರುವ ಸುಂದರ ಕಲಾಕೃತಿ. ಗುಲಾಬಿ, ಲಿಲ್ಲಿ, ಸೇವಂತಿಯಿಂದಲೇ ಶೃಂಗಾರಗೊಂಡಿರುವ ಬೆಡಗಿ ನಾಟ್ಯ ಮಯೂರಿ, ಜಿಲ್ಲೆಯ ಪ್ರವಾಸಿಗರ ನೆಚ್ಚಿನ ತಾಣ ದೇವಿರಮ್ಮ ಬೆಟ್ಟ, ಬಿಂಡಿಗ ದೇವೀರಮ್ಮ, ಸಂಗೀತದ ಪರಿಕರಗಳು ಹಾಗೂ ತರಕಾರಿ ಹಣ್ಣುಗಳಲ್ಲಿ ಮೂಡಿರುವ ಸುಂದರ ಕಲಾಕೃತಿಗಳು ನೋಡುಗರಿಗೆ ಮತ್ತಷ್ಟು ಖುಷಿ ತಂದಿದೆ.

    ಈ ಬಾರಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವತಿಯಿಂದ ವಿಶೇಷವಾಗಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಧುನಿಕ ಕೃಷಿಯ ಬಗ್ಗೆ ರೈತರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ತರಕಾರಿಗಳಿಂದ ತಯಾರಾಗಿರೋ ಈಶ್ವರನ ದೇವಾಲಯ ಎಲ್ಲರ ಗಮನ ಸೆಳೆಯಿತು. ಈ ಬಾರಿ ಲಿಲ್ಲಿ, ಗುಲಾಬಿ, ಸೇವಂತಿ, ಆಂಥೋರಿಯಂ, ಆಸ್ಟ್ರೋ, ಪಿಟೋನೊಯಾ, ದೈನಥನ್, ಜೀನಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶಿಯ ಪುಷ್ಪಗಳು ಪುಷ್ಪಪ್ರಿಯರನ್ನ ಮಂತ್ರಮುಗ್ಧರನ್ನಾಗಿಸಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ ವಿದ್ಯಾರ್ಥಿಗಳು, ಮಹಿಳೆಯರು, ಸಣ್ಣಮಕ್ಕಳು ಸೇರಿದಂತೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪುಷ್ಪ ಪ್ರೀಯರು ಹೂಗಳ ಅಂದಕಂಡು ಪುಳಕಿತರಾಗೋದಲ್ಲದೆ ಫ್ರೆಂಡ್ಸ್ ಜೊತೆ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಿಬ್ಬಂದಿ ಪೂಜಿತಾ ಹೇಳಿದ್ದಾರೆ.

    30ಕ್ಕೂ ಅಧಿಕ ಬಗೆಯ ಸ್ಟಾಲ್‍ಗಳಲ್ಲಿನ ಸುಂದರ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದಿದೆ. ತರಕಾರಿಯಲ್ಲಿ ಅರಳಿರೋ ಕಲಾಕೃತಿ ಅತ್ಯದ್ಭುತವಾಗಿತ್ತು. ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ಹೋಗಿ ಫಲಪುಷ್ಪ ಪ್ರದರ್ಶನ ನೋಡುತ್ತಿದ್ದ ಚಿಕ್ಕಮಗಳೂರಿಗರಿಗೆ ಇದೀಗ ತಮ್ಮೂರಲ್ಲೇ ಬಗೆಬಗೆಯ ಫಲಪುಷ್ಪಗಳ ಜೊತೆ ಬಣ್ಣ ಬಣ್ಣದ ಹೂಗಳ ಪ್ರದರ್ಶನ ನೋಡಿ ಖುಷಿಪಡುತ್ತಿದ್ದಾರೆ. ಜಿಲ್ಲಾದ್ಯಂತ ಎಲ್ಲಾ ಊರುಗಳಿಂದಲೂ ಬಂದು ಈ ಸೌಂದರ್ಯವನ್ನ ನೋಡಿ ಖುಷಿ ಪಡುತ್ತಿದ್ದಾರೆ.

  • ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ತೋಟಗಾರಿಕೆ ಇಲಾಖೆ ಕನಕೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನ ಹಮ್ಮಿಕೊಂಡಿದೆ. ಕನಕೋತ್ಸವದ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.

    ನಗರದ ಮುನ್ಸಿಪಾಲ್ ಕಾಲೇಜು ಬಳಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ ಸುರೇಶ್ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 30 ಸಾವಿರ ವಿವಿಧ ಬಗೆಯ ಪುಷ್ಪಗಳಿಂದ ತಾಲೂಕಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಅತ್ಯಂತ ಆಕರ್ಷಣಿಯವಾಗಿ ನೋಡುಗರ ಮನ ಸೆಳೆದಿದೆ.

    ರೈತರ ಕ್ಯಾಪ್ಸಿಕಂ ನಿಂದ ಮಾಡಿದ ಗೋಪುರದಾಕಾರದ ಮಾದರಿ, ಜೊತೆಗೆ ಹಸು ಹಾಗೂ ಕರುವಿನ ಪುಷ್ಪಗಳಿಂದಾದ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದಲ್ಲದೇ ಪುಷ್ಪದಲ್ಲಿ ವಿವಿಧ ಆಕಾರಗಳು, ರೈತರ ತರಕಾರಿ ಬೆಳೆಗಳ ವಸ್ತು ಪ್ರದರ್ಶನ, ತಾರಸಿ ಕೈ ತೋಟ, ಮಾದರಿ ತೋಟ ನೋಡುಗರಿಗೆ ಮುದ ನೀಡಿತು. ವಿಶೇಷವಾಗಿ ರೈತ ಉತ್ಪಾದಕರ ಸಂಸ್ಥೆಯ ಮಾದರಿಯನ್ನು ರೈತರಿಗಾಗಿ ಸಿದ್ಧಪಡಿಸಿ ಮಾಹಿತಿಯನ್ನು ನೀಡಲಾಯಿತು.

    ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಅಲಂಕಾರಿಕ ವಸ್ತುಗಳಿಗೆ ಆದ್ಯತೆ ನೀಡದೆ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಸಲುವಾಗಿ ರೈತರು ಬೆಳೆದ ಬೆಳೆಗಳ ಪ್ರದರ್ಶನ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಾಗಿರುವ ಹೊಸ ಆವಿಷ್ಕಾರಗಳು, ತಾಂತ್ರಿಕತೆಯ ಸದ್ಬಳಕೆ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ಜೊತೆಗೆ ಮಾರ್ಗದರ್ಶನ ನೀಡಿ ಸವಾಲನ್ನ ಎದುರಿಸುವ ಅರಿವನ್ನು ಪ್ರದರ್ಶನದಲ್ಲಿ ಅಧಿಕಾರಿಗಳು ನೀಡಿದ್ದಾರೆ. ರೇಷ್ಮೆ ಚಾಕಿ ಸಾಕಾಣಿಕೆಯಲ್ಲಿ ಹಂತಕ್ಕೊಂದು ಸೊಪ್ಪು ಪದ್ದತಿ ರೈತರ ಮನ ಮುಟ್ಟುವಂತಿದ್ದವು. ಫಲಪುಷ್ಪ ಪ್ರದರ್ಶನ ಕೇವಲ ಅಲಂಕಾರಿಕೆ ವಸ್ತುಗಳಿಗೆ ಸೀಮಿತವಾಗದೆ ರೈತಾಪಿ ವರ್ಗಕ್ಕೆ ಅರಿವು ಮೂಡಿಸುವ ಕಾರ್ಯಾಗಾರವಾಗಿತ್ತು.

    ಅಧಿಕ ಸಾಂದ್ರತೆಯಲ್ಲಿ ಮಾವು, ಹಸಿರು ಮನೆ ತಂತ್ರಜ್ಞಾನ, ಎರೆಹುಳು ಘಟಕ, ಅಂಗಾಂಶ ಕೃಷಿ, ಅಣಬೆ ಬೇಸಾಯ, ತೋಟಗಾರಿಕೆಯಲ್ಲಿ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಈ ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿದ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಹಾಗೂ ವಿವಿಧ ಪಕ್ಷಿಗಳ ಕಲಾಕೃತಿಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.

  • ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

    ಕೊಪ್ಪಳ: ಜಿಲ್ಲೆಯ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಿದ್ದು, ಕಲರ್ ಫುಲ್ ಹೂವುಗಳು ಕಣ್ಮನ ಸೆಳೆದಿವೆ.

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರತಿವರ್ಷ ಜಾತ್ರೆಯಲ್ಲಿ ವಿಭಿನ್ನವಾಗಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿಯೂ ಫಲಪುಷ್ಪ ಪ್ರದರ್ಶನ ಜನರ ಗಮನ ಸೆಳೆಯಿತು.

    ತೆಪೋತ್ಸವ ಮಾದರಿ, ತಾಜ್‍ಮಹಲ್, ಅಣಬೆ ಕೃಷಿ, ಜೊತೆಗೆ ತೋಟಗಾರಿಕೆ ಇಲಾಖೆಯ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಾಮಫಲಕ ಅಳವಡಿಸಲಾಗಿತ್ತು. ಹಣ್ಣುಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೆತ್ತನೆ ಗಮನಸೆಳೆಯಿತು. ಜೊತೆಗೆ ಬಗೆಬಗೆಯ ಹೂವಿನ ಕಲಾಕೃತಿ ಕಣ್ಮನ ಸೆಳೆಯಿತು.

    ಪ್ರತಿ ವರ್ಷ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಮೂರುದಿನ ನಡೆಯುತ್ತಿತ್ತು. ಆದರೆ ಈ ಬಾರಿ ಜನರ ರೆಸ್ಪಾನ್ಸ್ ಉತ್ತಮವಾಗಿರುವುದರಿಂದ ಐದು ದಿನ ಪ್ರದರ್ಶನ ನಡೆಯುತ್ತದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ತೋಟಗಾರಿಕೆ ಇಲಾಖೆ ಯೋಜನೆ ಮಾಹಿತಿ ನೀಡಲು ಅನುಕೂಲವಾಗಿದೆ. ಇದರಿಂದ ಪ್ರೇರಿತರಾದ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ. ಈ ಮೇಳದಲ್ಲಿ ರೈತರಿಗೆ ಅಧಿಕಾರಿಗಳು ತಾಂತ್ರಿಕ ಮಾಹಿತಿ ಕೂಡ ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ನಜೀರ್ ಅಹ್ಮದ್ ಹೇಳಿದ್ದಾರೆ.

    ಗವಿಸಿದ್ದೇಶ್ವರ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಭಕ್ತರನ್ನ ಆಕರ್ಷಿಸುತ್ತಿದ್ದು, ಪ್ರದರ್ಶನ ನೋಡಿರುವ ಭಕ್ತರು ತುಂಬಾ ಖುಷಿಪಡುತ್ತಿದ್ದಾರೆ.

     

  • ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    -ಬಣ್ಣ ಬಣ್ಣದ ಗುಲಾಬಿಗಳಲ್ಲಿ ಅರಳಿ ನಿಂತ ಭೋಗನಂಧೀಶ್ವರ ದೇಗುಲ

    ಚಿಕ್ಕಬಳ್ಳಾಪುರ: ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯೊದ್ರಲ್ಲಿ ಜಿಲ್ಲೆಯ ರೈತರು ಫೇಮಸ್. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ ಹಾಗೂ ನಂದಿ ಉದ್ಯಾನ ಕಲಾ ಸಂಘದಿಂದ ಫಲಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.

    ಇಂದಿನಿಂದ ಮೂರು ದಿನಗಳ ಕಾಲ ಈ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಸುಂದರ ಹೂಗಳ ರಾಶಿ ಒಂದಡೆಯಾದ್ರೆ, ಮತ್ತೊಂದೆಡೆ ಅಡುಗೆಗೆ ಬಳಸುವ ವಿವಿಧ ತರಕಾರಿಗಳ ಕಲರ್ ಕಲರ್ ಚಿತ್ತಾರ ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.

    ಬಣ್ಣ ಬಣ್ಣದ ಗುಲಾಬಿಗಳಿಂದ ಇತಿಹಾಸ ಪ್ರಸಿದ್ಧ ಶ್ರೀ ಬೋಗನಂದೀಶ್ವರ ದೇವಾಲಯ ನಿರ್ಮಾಣ ಮಾಡಲಾಗಿದೆ. ಮರಳಿನ ಕಲಾಕೃತಿಯಲ್ಲಿ ವಿಶ್ವ ವಿಖ್ಯಾತ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿತ್ರಣ ಮೂಡಿಬಂದಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲ-ಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳವನ್ನ ಆಯೋಜಿಸಲಾಗಿದೆ.

    ತರಕಾರಿಗಳಲ್ಲಿ ಮೂಡಿ ಬಂದಿರುವ ಮೊಸಳೆ, ನವಿಲು ಹೀಗೆ ಹತ್ತು ಹಲವು ಪ್ರಾಣಿಗಳ ಕಲಾಕೃತಿಗಳು ಕಣ್ಣಿಗೆ ಮುದ ನೀಡುತ್ತಿದೆ. ಇನ್ನೂ ಮೇಳದಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದು ಮೇಳದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಮೇಳದಲ್ಲಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ಸಿಕ್ಕಿದ್ದು, ರೈತರಿಗೆ ಸಂತಸದ ಜೊತೆ ಲಾಭದಾಯಕವೂ ಆಗಿದೆ.