Tag: floos

  • ಬಂಟ್ವಾಳದ ಹಲವು ಪ್ರದೇಶಗಳು ಜಲಾವೃತ

    ಬಂಟ್ವಾಳದ ಹಲವು ಪ್ರದೇಶಗಳು ಜಲಾವೃತ

    -ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬಂಟ್ವಾಳದ ಅಜ್ಜಿಬೆಟ್ಟು ಗ್ರಾಮದ ದಂಬೆದಾರ್ ಜಯ ಶೆಟ್ಟಿ ಎಂಬವರ ತೋಟಕ್ಕೆ ನೀರು ನುಗ್ಗಿ ಅಡಿಕೆ ಮರಗಳಿಗೆ ಹಾನಿಯಾಗಿದೆ.

    ನೇತ್ರಾವತಿ ನದಿಯ ತಡೆಗೋಡೆ ಕುಸಿದು ತೋಟಕ್ಕೆ ನೀರು ನುಗ್ಗಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಪರಿಶೀಲಿಸಿದರು.ಹಾನಿಯಾದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಸೂಕ್ತ ಪರಿಹಾರ ಕ್ಲಪಿಸುವ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ, ತಹಶೀಲ್ದಾರರಾದ ರಶ್ಮಿ ಎಸ್.ಆರ್ ,ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ,ಪ್ರಮುಖರಾದ ಗಣೇಶ್ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ದಂಬೆದಾರ್, ವಿಜಯ ರೈ,ಗೋಪಾಲಕೃಷ್ಣ ಚೌಟ, ಶ್ಯಾಮ್ ಪ್ರಸಾದ್ ಪೂಂಜಾ, ರವಿರಾಮ ಕಂಚಾರು, ಜಗದೀಶ್ ಉಳಗುಡ್ಡೆ, ವಿಶ್ವನಾಥ, ಗ್ರಾಮ ಕರಣಿಕರರಾದ ಸ್ವಾತಿ, ಕಂದಾಯ ನಿರೀಕ್ಷಕ ನವೀನ್, ನಾಗೇಶ್ ಶೆಟ್ಟಿ, ದೇವಿಪ್ರಸಾದ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

  • ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ಕೇರಳ, ಕೊಡಗಿಗೆ ತಲಾ 10ಲಕ್ಷ ರೂ. ಪರಿಹಾರ

    ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ಕೇರಳ, ಕೊಡಗಿಗೆ ತಲಾ 10ಲಕ್ಷ ರೂ. ಪರಿಹಾರ

    – ಶಿರೂರು ಬಗ್ಗೆ ಬಹಳ ಪ್ರೀತಿಯಿತ್ತು

    ಬೆಂಗಳೂರು: ಕೊಡಗು ಮತ್ತು ಕೇರಳ ರಾಜ್ಯಕ್ಕೆ ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಅಂತ ಪೇಜಾವರ ವಿಶ್ವೇಶ ತೀರ್ಥ ಶ್ರೀ ಘೋಷಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶೀಘ್ರದಲ್ಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು ಅಂದ ಅವರು, ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ರು. ಪರಿಸರ ಕಾಳಜಿ ಇಲ್ಲದ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕೇರಳ, ಕೊಡಗಿನಲ್ಲಿ ಇಂತಹ ಅನಾಹುತಗಳು ಆಗಿದೆ. ಈ ಬಗ್ಗೆ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಸಲಹೆಯಿತ್ತರು.

    ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಉಡುಪಿಯ ಪಾಜಕದಲದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗ್ತಿದೆ. ಹುಬ್ಬಳ್ಳಿ, ರಾಯಚೂರು, ಕೊಪ್ಪಳ ವಿದ್ಯಾನಂದ ಗುರುಕುಲ ವಸತಿ ಶಾಲೆ ಕಾಲೇಜು ಆರಂಭಿಸಲಾಗುವುದು. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಅಲ್ಲಿನ ಜನರ ಅಭಿಪ್ರಾಯ ಪಡೆಯಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಅಂದ್ರು.

    ಎತ್ತಿನ ಹೊಳೆ ಯೋಜನೆಯೇ ಕೊಡಗಿನ ಸ್ಥಿತಿಗೆ ಕಾರಣ ಅನ್ನುವ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ, ನಾನು ವಿಜ್ಞಾನಿ ಅಲ್ಲ. ಎತ್ತಿನ ಹೊಳೆ ಯೋಜನೆಯಲ್ಲಿ ರಾಜಕೀಯ ಮಾಡಲಾಗ್ತಿದೆ. ನಾನು ಎತ್ತಿನ ಹೊಳೆ ಯೋಜನೆ ವಿರೋಧಿ ಅಲ್ಲ. ಎತ್ತಿನ ಹೊಳೆ ಯೋಜನೆ ಉತ್ತಮ ಯೋಜನೆಯಾಗಿದೆ. ಸರ್ಕಾರ ಪರಿಶೀಲಿಸಿ, ವಿಚಾರ ಮಾಡಿ ಯೋಜನೆ ಮುಂದುವರಿಸಿ. ನಾನು ಪರಿಸರ ಪ್ರೇಮಿ. ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ವಿಜ್ಞಾನಿಗಳ ಜತೆ ಚರ್ಚಿಸಿ ಪರಿಶೀಲನೆ ನಡೆಸಿ, ಪಕ್ಷಾತೀತವಾಗಿ ಚರ್ಚೆ ನಡೆಸಿ, ನಂತರ ತೀರ್ಮಾನ ಕೈಗೊಳ್ಳಲಿ ಅಂತ ಹೇಳಿದ್ರು.

    ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ವಿಚಾರದ ಕುರಿತು ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳು ನನಗೆ ಬೇಸರ ತರಿಸಿದೆ. ಮೂರು ರಾಜಕೀಯ ಪಕ್ಷಗಳ ಬಗ್ಗೆ ಬೇಸರ ಇದೆ. ಒಬ್ಬರು ಮತ್ತೊಬ್ಬರನ್ನ ಟೀಕೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮೂರು ಪಕ್ಷಗಳೂ ದ್ವೇಷ ಬಿಟ್ಟು ರಾಜ್ಯದ ಅಭಿವೃದ್ಧಿ ಕೈ ಜೋಡಿಸಲಿ ಎಂದು ಸಲಹೆ ನೀಡಿದ್ರು.

    ಶಿರೂರು ಬಗ್ಗೆ ಪ್ರೀತಿಯಿತ್ತು:
    ಶಿರೂರು ಶ್ರೀಗಳ ಬಗ್ಗೆ ಬಹಳ ಪ್ರೀತಿ ಇತ್ತು. ನಾನು ಮರಣೋತ್ತರ ದಲ್ಲಿ ಟೀಕೆ ಮಾಡಿದ್ದೆ ಎಂದು ಬಿಂಬಿಸಲಾಗಿತ್ತು. ನಾನು ಹಾಗೆ ಮಾತನಾಡಲಿಲ್ಲ. ಮದ್ಯ, ಮಾನಿನಿ ಸಹವಾಸ ಇದ್ದ ಕಾರಣ ಪಟ್ಟದ ದೇವರನ್ನ ಕೊಟ್ಟಿಲ್ಲ. ನನಗೆ ಶಿರೂರು ಶ್ರೀಗಳ ಮೇಲೆ ವೈಯುಕ್ತಿಕ ದ್ವೇಷ ಇಲ್ಲ. ಅವರಿಗೆ ಎಷ್ಟೋ ಸಲ ತೊಂದರೆ ಆದಾಗ ನಾನೇ ಅವರನ್ನ ಕಾಪಾಡಿದ್ದೇನೆ. ನನ್ನ ಮೇಲೆ ಅನೈತಿಕ ಆರೋಪ ಮಾಡಲಾಗ್ತಿದೆ. ಇದು ನನಗೆ ಬೇಸರ ತರಿಸಿದೆ. ಒಟ್ಟಿನಲ್ಲಿ ಸತ್ಯ ಏನು ಅನ್ನೋದು ಎಲ್ಲರಿಗೂ ಗೊತ್ತು. ನಾನು ನನ್ನ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡ್ತಿನಿ. ಶಿರೂರುವ ಶ್ರೀಗಳ ವಿಚಾರದಲ್ಲಿ ಮೊದಲಿನಿಂದಲೂ ಟೀಕೆ ಮಾಡ್ತಿದ್ದೆ. ಈಗಲೂ ಅದನ್ನೇ ಮಾಡ್ತಾ ಇದ್ದೀನಿ ಅಂತ ತಿಳಿಸಿದ್ರು.

    ಉತ್ತರ ಭಾರತದಲ್ಲಿ ಹಿಂದೂ ನ್ಯಾಯಾಲಯ ಆರಂಭಿಸುವ ವಿಚಾರದ ಕುರಿತು ಹೆಚ್ಚಿಗೆ ಮಾತನಾಡಲ್ಲ. ಗೋಕರ್ಣ ಮಠ ಸರ್ಕಾರ ಅಧೀನಕ್ಕೆ ಪಡೆಯುವ ವಿಚಾರದ ಕುರಿತೂ ಹೆಚ್ಚು ಮಾತನಾಡೋಲ್ಲ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ನಿರಾಶ್ರಿತರಿಗೆ ಹೊದಿಕೆ ಕೊಟ್ಟು ಹೀರೋ ಆದ ಮಧ್ಯಪ್ರದೇಶದ ಬಡವ್ಯಾಪಾರಿ

    ಕೇರಳ ನಿರಾಶ್ರಿತರಿಗೆ ಹೊದಿಕೆ ಕೊಟ್ಟು ಹೀರೋ ಆದ ಮಧ್ಯಪ್ರದೇಶದ ಬಡವ್ಯಾಪಾರಿ

    ತಿರುವನಂತಪುರಂ: ಕಂಡು ಕೇಳರಿಯದ ಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದ್ದು, ತನ್ನ ಪ್ರಾಣದ ಹಂಗು ತೊರೆದು ಪುಟ್ಟ ಕಂದಮ್ಮನನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ರಕ್ಷಿಸಿ ಸುದ್ದಿಯಾದ ಬೆನ್ನಲ್ಲೇ ಇದೀಗ ಬಡ ವ್ಯಾಪಾರಿಯೊಬ್ಬರು ಮಾನವೀಯತೆ ಮೆರೆದು ಹೀರೋ ಆಗಿದ್ದಾರೆ.

    ಹೌದು. ಮಧ್ಯಪ್ರದೇಶ ಮೂಲದ ಬಡ ವ್ಯಾಪಾರಿ ವಿಷ್ಣು ಕಚ್ಚಾವ ಅಲ್ಲಿನ ನಿರಾಶ್ರಿತರಿಗೆ ಹೊದಿಕೆಗಳನ್ನು ನೀಡುವ ಮೂಲಕ ಹೀರೋ ಆಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಷ್ಣು ಕೇರಳದಲ್ಲಿ ಕೆಲದಿನಗಳಿಂದ ಬ್ಲಾಂಕೆಟ್ ಮಾರಾಟ ಮಾಡುತ್ತಿದ್ದರು. ಹಾಗೆಯೇ ಬ್ಲಾಂಕೆಟ್ ಗಳನ್ನು ಮಾರಿ ಜೀವನ ನಡೆಸುತ್ತಿದ್ದ ಇವರು, ಕೇರಳದ ಭಾರೀ ಮಳೆಯನ್ನು ಕಂಡು ಆತಂಕಕ್ಕೀಡಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ಕಣ್ಣಾರೆ ಕಂಡಿದ್ದರು. ಇದರಿಂದ ಜನರ ಕಷ್ಟವನ್ನು ಅರಿತ ವಿಷ್ಣು ತನ್ನಲ್ಲಿರುವ 50 ಬ್ಲಾಂಕೆಟ್ ಗಳನ್ನು ನಿರಾಶ್ರಿತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ತನ್ನ ಬಳಿಯಿರುವ ಎಲ್ಲಾ ಹೊದಿಕೆಗಳನ್ನು ಕಣ್ಣೂರು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಡಿಸಿ ಅದನ್ನು ನಿರಾಶ್ರಿತರಿಗೆ ನೀಡಿದ್ದಾರೆ. ಇದನ್ನೂ ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ

    ಮೂಲತಃ ಮಧ್ಯಪ್ರದೇಶದವರಾಗಿರೋ ವಿಷ್ಣು ಕಳೆದ 12 ವರ್ಷಗಳಿಂದ ಕೇರಳದಲ್ಲಿ ನೆಲೆಸಿದ್ದಾರೆ. ಅಲ್ಲದೇ ಕೇರಳ ನನ್ನ ಎರಡನೆಯ ಮನೆ ಅಂತ ಹೇಳುತ್ತಿದ್ದಾರೆ. ಇಲ್ಲಿ ಬಂದು ವಾಸ ಮಾಡಿದ ಬಳಿಕ ಕೇರಳದಲ್ಲಿ ಇಂತಹ ಘಟನೆ ನೋಡಿರಲಿಲ್ಲ. ನೆರೆ ಪ್ರವಾಹದಿಂದ ಇಲ್ಲಿನ ಜನರ ಸ್ಥಿತಿಯನ್ನು ನನ್ನಿಂದ ನೋಡಲಾಗಿಲ್ಲ. ಹೀಗಾಗಿ ನನ್ನಲ್ಲಿ ಏನಿದೆಯೋ ಅದನ್ನು ದಾನ ಮಾಡಿದ್ದೇನೆ ಅಂತ ಹೇಳಿದ್ದಾರೆ.

    ಸದ್ಯ ವಿಷ್ಣು ರಾತ್ರೋರಾತ್ರಿ ಬಡ ವ್ಯಾಪಾರಿ ಸ್ಟಾರ್ ಆಗಿದ್ದಾರೆ. ಅಲ್ಲದೇ ತಾನು ಮಾನವೀಯತೆ ಮೆರೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರೋದನ್ನು ಕಂಡು ಅವರು ಹೌಹಾರಿದ್ದಾರೆ. ಈ ವಿಡಿಯೋ ನೋಡಿದ್ರೆ ನನ್ನ ಪತ್ನಿ ತುಂಬಾ ಖುಷಿ ಪಡುತ್ತಾಳೆ ಅಂತಾನೂ ಹೇಳಿದ್ದಾರೆ.

    ಈ ಮೊದಲು ಎನ್‍ಡಿಆರ್‍ಎಫ್ ತಂಡ ಕೇರಳದ ಇಡುಕ್ಕಿ, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಇಡುಕ್ಕಿ ಪ್ರದೇಶದ ಸೇತುವೆಯೊಂದರ ಬಳಿ ಪುಟ್ಟ ಮಗುವಿನೊಂದಿಗೆ ವ್ಯಕ್ತಿಯೊಬ್ಬರು ರಕ್ಷಣೆಗಾಗಿ ಕಾದು ಕುಳೀತಿದ್ದರು. ಇದನ್ನು ಕಂಡ ಸಿಬ್ಬಂದಿ ಹರಿಯುತ್ತಿದ್ದ ರಭಸದ ನೀರನ್ನು ಲೆಕ್ಕಿಸದೇ ಸೇತುವೆ ದಾಟಿ ಮಗುವಿನೊಂದಿಗೆ ಓಡಿ ಬಂದಿದ್ದಾರೆ. ಈ ವೇಳೆ ಮಗುವಿನ ತಂದೆಯೂ ಕೂಡ ಸಿಬ್ಬಂದಿ ಹಿಂದೆಯೇ ಓಡಿ ಹೋಗಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಯೊಬ್ಬರು ಪ್ರವಾಹದ ಮಧ್ಯೆಯೇ ಮಗುವನ್ನು ಕಾಪಾಡಿದ್ದು ಭಾರೀ ಸುದ್ದಿಯಾಗಿತ್ತು. ಅಧಿಕಾರಿಯ ಈ ಮಹಾನ್ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಅಲ್ಲದೇ ಆ ವಿಡಿಯೋ ಕೂಡ ವೈರಲ್ ಆಗಿತ್ತು.

    ಒಟ್ಟಿನಲ್ಲಿ ಹಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಿನ ಜನಜೀವನ ಅಕ್ಷರಶಃ ನಲುಗಿ ಹೋಗಿದೆ. ಆಹಾರ, ನೀರಿಗೂ ಅಲ್ಲಿನ ಜನ ಪರದಾಡುವಂತಜಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಅಲ್ಲಲ್ಲಿ ಕೆಲವೊಂದು ಮಾನವೀಯತೆ ಮೆರೆದ ಘಟನೆಗಳು ಬೆಳಕಿಗೆ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv