Tag: floortest

  • ನಂಬರ್ ಗೇಮ್‍ನಲ್ಲಿ ಯಡಿಯೂರಪ್ಪ ಸರ್ಕಾರ ಸೇಫ್

    ನಂಬರ್ ಗೇಮ್‍ನಲ್ಲಿ ಯಡಿಯೂರಪ್ಪ ಸರ್ಕಾರ ಸೇಫ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು 14 ಮಂದಿ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಸಾಬೀತುಪಡಿಸುವಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಯಶಸ್ವಿಯಾಗುತ್ತಾರೆ.

    ಗುರುವಾರ 3 ಮಂದಿ ಹಾಗೂ ಇಂದು 14 ಮಂದಿ ಶಾಸಕರು ಒಟ್ಟು 17 ಮಂದಿ ಶಾಸಕರು ಅನರ್ಹತೆಯಿಂದಾಗಿ ಇದೀಗ ವಿಧಾನ ಸಭೆಯ ಸಂಖ್ಯಾಬಲ ಕುಸಿದಿದೆ. 224ರಿಂದ 207ಕ್ಕೆ ವಿಧಾನಸಭೆ ಬಲಾಬಲ ಕುಸಿದಿದೆ. ಹೀಗಾಗಿ ಈಗಾಗಲೇ ಬಿಜೆಪಿ ಸಂಖ್ಯಾಬಲ 105 ಇದ್ದು, ಪಕ್ಷೇತರ ಶಾಸರ ಆರ್ ಶಂಕರ್ ಬೆಂಬಲದಿಂದಾಗಿ 106 ಆಗಿದೆ. ಇತ್ತ ದೋಸ್ತಿ ಸಂಖ್ಯಾಬಲ 100 ಇದೆ. ಬಹುಮತ ಸಾಬೀತು ಪಡಿಸಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 104 ಆಗಿದೆ. ಬಹುಮತ ಸಾಬೀತಿಗೆ ಅಗತ್ಯವಾದ ಮ್ಯಾಜಿಕ್ ನಂಬರ್ ಕುಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ನಾಳೆ ಸದನಸದಲ್ಲಿ ವಿಶ್ವಾಸಮತ ಸಾಬೀತು ಪಡಿಸಲಿದ್ದಾರೆ.

    ಗುರುವಾರದಂದು ಸಂಜೆ ಸುದ್ದಿಗೋಷ್ಠಿ ಕರೆದಿದ್ದ ಸ್ಪೀಕರ್ ಅವರು ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ಅನರ್ಹ ಗೊಳಿಸಿದ್ದರು. ಆ ಬಳಿಕ ಇಂದು ಮತ್ತೆ ಸುದ್ದಿಗೋಷ್ಠಿ ಕರೆದು, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಹೀಗೆ ಎಲ್ಲ 14 ಶಾಸಕರನ್ನೂ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗಿ ಈ ಆದೇಶ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ 14 ಮತ್ತು 3 ಒಟ್ಟು 17 ಮಂದಿ ಶಾಸಕರು ಅನರ್ಹಗೊಂಡಿದ್ದು, ಇದರಲ್ಲಿ ಮೂವರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಮತ್ತೆ 14 ಮಂದಿ ನಾಳೆ ಸುಪ್ರೀಂ ಕದ ತಟ್ಟಲಿದ್ದಾರೆ. ಹೀಗಾಗಿ ಕೋರ್ಟ್ 17 ಮಂದಿಯ ಕೇಸನ್ನು ಒಟ್ಟಿಗೆ ತೆಗೆದುಕೊಂಡು ಏನ್ ತೀರ್ಪು ಕೊಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.

  • ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತು ಹಿನ್ನೆಲೆಯಲ್ಲಿ ಡಿಜಿ ನೀಲಮಣಿರಾಜು ಅವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

    ಕುಮಾರಸ್ವಾಮಿ ಮನೆಗೆ ಡಿಜಿ ನೀಲಮಣಿರಾಜು ಭೇಟಿ ನೀಡಿ ಚರ್ಚೆ ನಡೆಸಿದ್ದು, ಭದ್ರತೆಯ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸಿಎಂ ಅವರು, ಯಾವುದೇ ಕಾರಣಕ್ಕೂ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಗೊಂದಲ, ಗಲಾಟೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಶಾಸಕರು ವಿಧಾನಸೌಧಕ್ಕೆ ಬರುವ ಸಮಯದಲ್ಲಿ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ಸಿಎಂ ಜೊತೆ ಚರ್ಚೆ ನಡೆಸಿ ಡಿಜಿ ನೀಲಮಣಿ ರಾಜು ಹೊರಟ ಬಳಿಕ ಇಂಟಲಿಜೆನ್ಸ್ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರ ಬಳಿಯೂ ಸಿಎಂ ಮಾಹಿತಿ ಪಡೆದಿದ್ದಾರೆ.

    ಸದ್ಯ ವಿಧಾನಸೌಧದ ಸುತ್ತಾಮುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.