Tag: floor test

  • ಶಿವಸೇನೆ ಅರ್ಜಿ ವಜಾ – ಗುರುವಾರ ವಿಶ್ವಾಸ ಮತಯಾಚನೆಗೆ ಸುಪ್ರೀಂ ಆದೇಶ

    ಶಿವಸೇನೆ ಅರ್ಜಿ ವಜಾ – ಗುರುವಾರ ವಿಶ್ವಾಸ ಮತಯಾಚನೆಗೆ ಸುಪ್ರೀಂ ಆದೇಶ

    ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ವಿಶ್ವಾಸ ಮತಯಾಚನೆಯನ್ನು ಗುರುವಾರ ನಡೆಸಬೇಕು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಪ್ರಕಟಿಸಿದೆ.

    ಅಘಾಡಿ ಸರ್ಕಾರಕ್ಕೆ ಈಗ ಬಲಪರೀಕ್ಷೆ ಸಮಯ. ಗುರುವಾರ ಬೆಳಗ್ಗೆ 11 ಗಂಟೆಗೆ ಉದ್ಧವ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆದೇಶ ನೀಡಿದ್ದರು. ವಿಶೇಷ ಅಧಿವೇಶನ ಕರೆದು ಸಂಜೆ ಐದು ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ವಿಧಾನಸಭೆ ಕಾರ್ಯದರ್ಶಿಗೆ ಖಡಕ್ಕಾಗಿ ಆರ್ಡರ್ ಮಾಡಿದ್ದರು. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದೇ ಬಲಪರೀಕ್ಷೆಗೆ ಹೇಗೆ ಅವಕಾಶ ನೀಡಲಾಗ್ತಿದೆ ಎಂದು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

    ಇಂದು ಈ ಅರ್ಜಿ ವಿಚಾರಣೆಯ ವಿಚಾರಣೆ ಸತತ ಮೂರುವರೆ ಗಂಟೆಗಳಿಂದ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ. ಅನರ್ಹತೆ ಪ್ರಕರಣ ಇತ್ಯರ್ಥವಾಗುವವರೆಗೆ ಸದನದಲ್ಲಿ ವಿಶ್ವಾಸ ಪರೀಕ್ಷೆಗೆ ಅವಕಾಶ ನೀಡಬಾರದು ಎಂದು ಉದ್ಧವ್ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದರು.

    ಸರ್ಕಾರದ ಅರ್ಜಿ ಮಾನ್ಯ ಮಾಡಬೇಡಿ. ಶಿವಸೇನೆಯಲ್ಲಿ ಈಗ 16 ಶಾಸಕರಷ್ಟೇ ಉಳಿದುಕೊಂಡಿದ್ದಾರೆ. ನಾಳೆ ವಿಶ್ವಾಸ ಪರೀಕ್ಷೆಯನ್ನು ತಡೆಯಬೇಡಿ ಎಂದು ರೆಬೆಲ್ ಶಾಸಕರ ಪರ ವಕೀಲರು ಪ್ರತಿವಾದ ಮಂಡಿಸಿದ್ದರು.

    ರಾಜ್ಯಪಾಲರ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್, ರಾಜ್ಯಪಾಲರ ಆದೇಶವನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ವಾದ ಮಾಡಿದ್ದಾರೆ. 8.30ಕ್ಕೆ ವಿಚಾರಣೆ ಮುಗಿಸಿದ್ದ ಸುಪ್ರೀಂಕೋರ್ಟ್ ರಾತ್ರಿ 9ಕ್ಕೆ ತನ್ನ ತೀರ್ಪು ಪ್ರಕಟಿಸಿ ಶಿವಸೇನೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಬಲಪರೀಕ್ಷೆಯಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಜೈಲಿನಲ್ಲಿರುವ ಎನ್‍ಸಿಪಿ ಮುಖಂಡರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಸಹ ಕೋರ್ಟ್ ಮೆಟ್ಟಿಲೇರಿದ್ದರು. ಇವರ ಅರ್ಜಿ ವಿಚಾರಣೆ ಕೋರ್ಟ್‌ ಇಡಿ ರಕ್ಷಣೆಯಲ್ಲಿ  ಮತದಾನಕ್ಕೆ ಅನುಮತಿ ನೀಡಿದೆ.

    ಈ ಬೆಳವಣಿಗೆಗಳ ನಡ್ವೆ ರೆಬೆಲ್ ಟೀಂ ಗುವಾಹಟಿಯಿಂದ ಗೋವಾಗೆ ಶಿಫ್ಟ್ ಆಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ನೇರವಾಗಿ ವಿಧಾನಸಭೆಗೆ ಬರಲು ಶಿಂಧೆ ಸೇನೆ ಪ್ಲಾನ್ ಮಾಡಿದೆ. ನಮಗೆ 50 ಶಾಸಕರ ಬೆಂಬಲ ಇದ್ದು, ಈ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲೋದು ನಾವೇ ಎಂದು ರೆಬೆಲ್ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ. ಇತ್ತ ಬಿಜೆಪಿಯೂ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

    `ಮಹಾ’ ಲೆಕ್ಕ..
    * ಸದನದ ಒಟ್ಟು ಸ್ಥಾನ – 288 (ಒಬ್ಬರು ಸಾವನ್ನಪ್ಪಿದ್ದಾರೆ)
    * ಮ್ಯಾಜಿಕ್ ಫಿಗರ್ – 144
    * ಅಘಡಿ ಕೂಟದ ಬಲ – 168
    * ಬಂಡಾಯದ ನಂತರ – 118
    * ಉದ್ಧವ್ ಬಣದ ಬಲ – 16
    * ಶಿಂಧೆಸೇನೆ ಬಲ – 50
    * ಬಿಜೆಪಿ ಕೂಟದ ಬಲ – 113
    * ಶಿಂಧೆಸೇನೆ ಬಂಬಲಿಸಿದರೆ – 163

    Live Tv

  • ‘ಮಹಾ’ ಬಹುಮತ ಸಾಬೀತು- ಉದ್ಧವ್ ಸರ್ಕಾರಕ್ಕೆ 169 ಶಾಸಕರ ಬೆಂಬಲ

    ‘ಮಹಾ’ ಬಹುಮತ ಸಾಬೀತು- ಉದ್ಧವ್ ಸರ್ಕಾರಕ್ಕೆ 169 ಶಾಸಕರ ಬೆಂಬಲ

    ಮುಂಬೈ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀರಿಸಿದ ನಂತರ ವಿಶ್ವಾಸ ಮತವೆಂಬ ಅಗ್ನಿ ಪರೀಕ್ಷೆಯನ್ನು ಮಹಾ ಮೈತ್ರಿ ಗೆದ್ದಿದೆ.

    ಮಹಾರಾಷ್ಟ್ರ ರಾಜಕಾರಣದ ಕುರಿತು ಇಡೀ ದೇಶವೇ ಚರ್ಚೆಯಲ್ಲಿ ಮುಳುಗಿತ್ತು. ಈ ಎಲ್ಲ ಚರ್ಚೆಗಳ ಮಧ್ಯೆ ಉದ್ಧವ್ ಠಾಕ್ರೆ ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸದನದಲ್ಲಿಯೂ ಭಾರೀ ಗದ್ದಲ ಹಾಗೂ ಬಿಜೆಪಿಯ ಸಭಾತ್ಯಾಗದ ಮಧ್ಯೆ ಠಾಕ್ರೆ ವಿಶ್ವಾಸ ಮತ ಸಾಬೀತು ಪಡಿಸಿದ್ದಾರೆ. ಈ ಮೂಲಕ ಉದ್ಧವ್ ನೇತೃತ್ವದ ಮೈತ್ರಿ ಸರ್ಕಾರ ಅಗ್ನಿ ಪರೀಕ್ಷೆಯನ್ನು ಗೆದ್ದಂತಾಗಿದೆ.

    ಹಂಗಾಮಿ ಸ್ಪೀಕರ್ ದಿಲೀಪ್ ವಾಸ್ಲೆ ಪಾಟೀಲ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಹುಮತ ಸಾಬೀತುಪಡಿಸಿದರು. ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದರು. ಇನ್ನು 1 ಎಂಎನ್‍ಎಸ್, 2ಎಐಎಂಐಎಂ, 1 ಸಿಪಿಐಎಂ ಶಾಸಕರು ತಮ್ಮ ಬೆಂಬಲವನ್ನು ಸೂಚಿಸದೇ ತಟಸ್ಥವಾಗಿದ್ದರು.

    ಸ್ಪೀಕರ್ ಅವರನ್ನು ನಿಯಮಬದ್ಧವಾಗಿ ಆಯ್ಕೆ ಮಾಡಲಾಗಿಲ್ಲ, ಈ ರೀತಿಯ ಪರಿಸ್ಥಿತಿ ಹಿಂದೆಂದೂ ಆಗಿರಲಿಲ್ಲ. ಉದ್ಧವ್ ಠಾಕ್ರೆ ಸಹ ಅಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿತು. ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ. ಸ್ಪೀಕರ್ ವಿಶ್ವಾಸ ಮತಯಾಚನೆ ಮಾಡುವಂತೆ ಸೂಚಿಸಿದರು. ನಂತರ ಬಿಜೆಪಿಯ 105 ಶಾಸಕರು ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಸಭಾತ್ಯಾಗ ಮಾಡಿ ಹೊರ ನಡೆದರು.

    ಬಹುಮತ ಸಾಬೀತಿಗೆ 145 ಸ್ಥಾನಗಳ ಅಗತ್ಯವಿತ್ತು. ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಮೂರು ಪಕ್ಷದ ಒಟ್ಟು 169 ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದ ಕಾರಣ ಸಹಜವಾಗಿಯೇ ಠಾಕ್ರೆಯವರು ಬಹುಮತ ಸಾಬೀತು ಪಡಿಸಿದರು. ಈ ಮೂಲಕ 105 ಸ್ಥಾನಗಳನ್ನು ಗಳಿಸಿದ್ದರೂ ಸಹ ಬಿಜೆಪಿ ಅಧಿಕಾರದಿಂದ ದೂರ ಉಳಿಯುವಂತಾಯಿತು.

    ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ `ಮಹಾವಿಕಾಸ್ ಅಘಾಡಿ’ ಸರ್ಕಾರ ರಚನೆಯಾಗಿದೆ. ಮುಂಬೈನ ಶಿವಾಜಿ ಪಾರ್ಕಿನಲ್ಲಿ ಸಂಜೆ 6.30ಕ್ಕೆ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಿವಾಜಿ ಸಾಕ್ಷಿಯಾಗಿ, ಸಾವಿರಾರು ಶಿವಸೈನಿಕರ ಸಮ್ಮುಖದಲ್ಲಿ ಮಹಾರಾಷ್ಟ್ರದ 19ನೇ ಸಿಎಂ ಆಗಿ ಉದ್ಧವ್ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ಸುಮಾರು 40 ವರ್ಷಗಳ ಶಿವಸೇನೆಯ ರಾಜಕೀಯ ಇತಿಹಾಸದಲ್ಲಿ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿ ಉದ್ಧವ್ ಮುಖ್ಯಮಂತ್ರಿ ಸ್ಥಾನವನ್ನು ಏರಿದ್ದಾರೆ.

    ಉದ್ಧವ್ ಠಾಕ್ರೆ ಅವರೊಂದಿಗೆ ಮೂರು ಪಕ್ಷಗಳ ಹಿರಿಯ, ಅನುಭವಸ್ಥರಾದ ಶಿವಸೇನೆಯ ಏಕನಾಥ್ ಶಿಂಧೆ, ಸುಭಾಶ್ ದೇಸಾಯಿ, ಎನ್‍ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ಬಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ದಲಿತ ನಾಯಕ ನಿತಿನ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿಯಾಗಿ ಯಾರೊಬ್ಬರೂ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

  • ‘ದ್ವೇಷದ ರಾಜಕಾರಣ ಮಾಡಲ್ಲ’ – ಬಹುಮತ ಸಾಬೀತು ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್

    ‘ದ್ವೇಷದ ರಾಜಕಾರಣ ಮಾಡಲ್ಲ’ – ಬಹುಮತ ಸಾಬೀತು ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್

    ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. 105 ಶಾಸಕರು ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಕರ್ನಾಟಕದ ಚುಕ್ಕಾಣಿ ಹಿಡಿದಿದೆ.

    ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ಆಗಿದ್ದು 17 ಮಂದಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. 105 ಶಾಸಕರ ಬೆಂಬಲ ಹೊಂದಿದ್ದರಿಂದ ಬಿಎಸ್‍ವೈ ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿತ್ತು. ಧ್ವನಿಮತದ ಮೂಲಕ ಯಡಿಯೂರಪ್ಪ ಸರ್ಕಾರ ಪಾಸ್ ಆಗಿದ್ದು ಮುಂದಿನ 6 ತಿಂಗಳು ಯಾವುದೇ ಸಮಸ್ಯೆ ಇಲ್ಲದೇ ಅಧಿಕಾರ ನಡೆಸಬಹುದು.

    ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದೇನೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸರ್ಕಾರಕ್ಕೆ ವಿರೋಧ ಪಕ್ಷಗಳ ಸಹ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು. ನನ್ನನ್ನು ವಿರೋಧಿಸಿದರೂ ನಾನು ದ್ವೇಷ ಮಾಡುವುದಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ ಮಾತನಾಡಿ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ದೀರ್ಘ ಕಾಲ ಚರ್ಚೆ ನಡೆದಿದೆ. ಹೀಗಾಗಿ ಜಾಸ್ತಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿ,  ನಾನು ನಾಯಕರ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಜಾಸ್ತಿ ಮಾತನಾಡುವುದಿಲ್ಲ. ಮಾತೇ ಸಾಧನೆಯಾಗಬಾರದು. ಸಾಧನೆ ಮಾತನಾಡಬೇಕು ಎಂದರು.

  • ಸಿಎಂ ಗಾದಿಗೇರಿದ್ರೂ ಬಿಎಸ್‍ವೈಗೆ ತಪ್ಪಿಲ್ಲ ಟೆನ್ಶನ್

    ಸಿಎಂ ಗಾದಿಗೇರಿದ್ರೂ ಬಿಎಸ್‍ವೈಗೆ ತಪ್ಪಿಲ್ಲ ಟೆನ್ಶನ್

    ಬೆಂಗಳೂರು: ಮೈತ್ರಿ ಸರ್ಕಾರ ಬೀಳಿಸಿದ್ದಾಯ್ತು, ಸಿಎಂ ಆಗಿದ್ದೂ ಆಯ್ತು. ಆದರೆ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತು ಮಾಡುವ ತನಕ ಆತಂಕ ತಪ್ಪಿಲ್ಲ.

    ಹೌದು. ಬಿಎಸ್‍ವೈ ಅವರಿಗೆ ರಿವರ್ಸ್ ಆಪರೇಷನ್ ನದ್ದೇ ಭಯವಂತೆ. ಹೀಗಾಗಿ ಅವರು ಸೂಪರ್ ಪ್ಲಾನ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ಸದನದಲ್ಲಿ ಬಹುಮತ ತೋರಿಸಲು ಬಿಎಸ್‍ವೈ ಪ್ಲಾನ್ ರೂಪಿಸಿದ್ದಾರೆ. ತಮ್ಮದೇ ಪಕ್ಷದ ಶಾಸಕರ ಕಾವಲಿಗೆ ಕಾವಲುಗಾರರನ್ನು ನೇಮಿಸಿದ್ದಾರೆ. 105 ಜನ ಶಾಸಕರ ಮೇಲೆ ಕಣ್ಗಾವಲಿಡಲು ಕಾವಲುಗಾರರನ್ನು ನೇಮಕ ಮಾಡಿದ್ದಾರೆ ಎನ್ನಲಾಗಿದೆ.

    ತಲಾ 10 ಶಾಸಕರಿಗೆ ಒಬ್ಬ ಕಾವಲುಗಾರ ಮುಖಂಡನನ್ನು ನೇಮಿಸುವ ಮೂಲಕ ನಂಬಿಕಸ್ತ ಆಪ್ತರನ್ನೇ ಕಾವಲುಗಾರರಾಗಿ ನೇಮಿಸಿದ್ದಾರೆ. ಶಾಸಕರು ಈ ಕಾವಲುಗಾರರ ಕಣ್ಣಳತೆಯಲ್ಲೇ ಇರಬೇಕೆಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ಸೋಮವಾರ ಬಹುಮತ ಸಾಬೀತು ಪಡಿಸೋವರೆಗೂ ಕಾವಲುಗಾರ ಮುಖಂಡರ ಸುಪರ್ದಿಯಲ್ಲೇ ಇರುತ್ತಾರಂತೆ. ಅಲ್ಲದೆ ಮೈತ್ರಿ ಪಕ್ಷಗಳ ಯಾವ ನಾಯಕನಿಗೂ ಪಕ್ಷದ ಶಾಸಕರು ಸಿಗದಂತೆಯೂ ಎಚ್ಚರಿಕೆ ವಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ವಿಶ್ವನಾಥ್ ವಿರುದ್ಧ ಕಿಡಿ – ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದ ಸ್ಪೀಕರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ಮಂಗಳವಾರ ವಿಧಾನಸಭಾ ಕಲಾಪದಲ್ಲಿ ನಡೆಯಿತು.

    ಸಿಎಂ ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಭಾಷಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಲಹರಣ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಎಚ್.ವಿಶ್ವನಾಥ್ ಅವರು ನಮ್ಮ ಕಚೇರಿಗೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅವರು ಬರುತ್ತಿದ್ದೇವೆ ಅಂತ ಮೊದಲು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸಂಬಂಧಿಕರನ್ನು ನೋಡಲು ಜಯದೇವ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿದ್ದ ಕಚೇರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡುವಂತೆ ಸೂಚನೆ ನೀಡಿದೆ. ಆದರೆ ಅವರು ನೇರವಾಗಿ ಸುಪ್ರೀಂಕೋರ್ಟಿಗೆ ಹೋದರು ಎಂದು ಕಿಡಿಕಾರಿದರು.

    ಸುಪ್ರೀಂಕೋರ್ಟ್ ಆದೇಶದ ಬಳಿಕ ಎಚ್.ವಿಶ್ವನಾಥ್ ಅವರು ಬಂದು ರಾಜೀನಾಮೆ ನೀಡಿದರು. ಈ ದೃಶ್ಯವನ್ನು ನಾನು ವಿಡಿಯೋ ಕೂಡ ಮಾಡಿಸಿದ್ದೇನೆ. ರಾಜೀನಾಮೆ ಪತ್ರದ ಹೇಗಿರಬೇಕು ಅಂತ ತಿಳಿ ಹೇಳಿದ್ದೇನೆ. ಆದರೂ ಅವರು ಉದ್ದೇಶ ಅದೇ ಎಂದು ಸರಳವಾಗಿ ಹೇಳಿಬಿಟ್ಟರು ಎಂದು ಅಸಮಾಧಾನ ಹೊರ ಹಾಕಿದರು.

    ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ, ವಿಧಾನಸಭಾ ಸದಸ್ಯ ಸೇರಿದಂತೆ ಅನೇಕ ಸ್ಥಾನಗಳನ್ನ ಅಲಂಕರಿಸಿದ್ದಾರೆ. ಆದರೂ ಅವರಿಗೆ ರಾಜೀನಾಮೆ ನೀಡುವುದು ಗೊತ್ತಿಲ್ಲವೇ? ಒಂದು ವೇಳೆ ರಾಜೀನಾಮೆ ಕೊಡುವ ನಿಯಮ ತಿಳಿದಿದ್ದರೆ ಯಾವ ಉದ್ದೇಶಕ್ಕಾಗಿ ಹಾಗೆ ಮಾಡಿದರು ಎನ್ನುವ ಅನುಮಾನ ಬರುತ್ತದೆ. ಇಂತಹ ವ್ಯಕ್ತಿ ಈಗ ಸ್ಪೀಕರ್ ಕುಮ್ಮಕ್ಕು ಕೊಡುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ನನ್ನಂತೆ ಬದುಕಲು ಅವರು ನೂರು ಜನ್ಮ ಪಡೆಯಬೇಕು ಎಂದು ವಿಶ್ವನಾಥ್ ಅವರ ವಿರುದ್ಧ ಚಾಟಿ ಬೀಸಿದರು.

    ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅನುಗ್ರಹದಿಂದ ನಾವು ವಿಧಾನಸಭೆಗೆ ಕಾಲಿಟ್ಟಿದ್ದೇವು. ನನ್ನ ಕ್ಷೇತ್ರದಲ್ಲಿ ನನಗೆ ಜಾತಿಯ ಬೆಂಬಲವಿಲ್ಲ. ಹಣ ಎಷ್ಟಿದೆ ಅಂತ ದೇಶದ ಜನರಿಗೆ ಗೊತ್ತಿದೆ. ಅವಕಾಶ ಸಿಕ್ಕಾಗ ಡಿ.ದೇವರಾಜು ಅರಸು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಹಾಕಿದ ಮಾರ್ಗದಲ್ಲಿಯೇ ನಡೆಯುತ್ತಿದ್ದೇನೆ ಎಂದು ಹೇಳಿದರು.

    ರಾಜೀನಾಮೆ ಕೊಡುವ ನಿಯಮದ ಬಗ್ಗೆ ಗೊತ್ತಿಲ್ಲದವರು ನನ್ನ ಬಗ್ಗೆ ಮಾತನಾಡುತ್ತಾರೆ. ಮುಂದಿನ ದಿನಗಳಲ್ಲಿ ನಾನು ಈ ಸ್ಥಾನದಲ್ಲಿ ಇರುತ್ತೇನೆ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಬಗ್ಗೆ ಮಾತನಾಡಿರುವುದು ಸಭಾ ನಿಂದನೆ ಎಂದು ಗುಡುಗಿದರು.

    ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಕೊಂಡಿದ್ದೇನೆ ಎಂದು ಹೇಳಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಪತ್ರವನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡುವಂತೆ ಸಿಬ್ಬಂದಿಯನ್ನು ಕರೆದರು. ಬಳಿಕ ಮಾತು ಮುಂದುವರಿಸಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಒಂದೇ ಕ್ಷಣವೂ ಇರಲ್ಲ. ಅದಕ್ಕಾಗಿಯೇ ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಕೆ.ಎಚ್.ರಂಗನಾಥ್ ಅವರ ಕೈಯಲ್ಲಿ ಬೆಳೆದಿದ್ದೇನೆ. ಅವರು ನನಗೆ ರಾಜಕೀಯ ಸಂಸ್ಕಾರ ನೀಡಿದ್ದಾರೆ ಎಂದರು.

  • ನನ್ನ ಅಧಿಕಾರ ಸ್ಪಷ್ಟ ಆಗೋವರೆಗೂ ವಿಶ್ವಾಸಮತ ಮುಂದೂಡಿಕೆ: ಸಿದ್ದರಾಮಯ್ಯ

    ನನ್ನ ಅಧಿಕಾರ ಸ್ಪಷ್ಟ ಆಗೋವರೆಗೂ ವಿಶ್ವಾಸಮತ ಮುಂದೂಡಿಕೆ: ಸಿದ್ದರಾಮಯ್ಯ

    ಬೆಂಗಳೂರು: ಸುಪ್ರೀಂಕೋರ್ಟ್ ನಲ್ಲಿ ನನ್ನ ಅಧಿಕಾರ ಸ್ಪಷ್ಟ ಆಗುವವರೆಗೂ ಮುಖ್ಯಮಂತ್ರಿಗಳು ವಿಶ್ವಾಸಮತ ಮುಂದೂಡಬೇಕು ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರ. ಈ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಗೊಂದಲವಿದೆ. ಇದು ಸ್ಪಷ್ಟವಾಗುವವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.

    ವಿಪ್ ನೀಡಿಕೆಯ ಹಕ್ಕು ಸೇರಿದಂತೆ ಶಾಸಕಾಂಗ ಪಕ್ಷದ ನಾಯಕನ ಅಧಿಕಾರಕ್ಕೆ ರಕ್ಷಣೆ ನೀಡಿದ ಸಭಾಧ್ಯಕ್ಷರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ ಈಡೇರಬೇಕಾದರೆ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕು ಎಂದು ತಿಳಿಸಿದ್ದಾರೆ.

    ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಅಧಿಕಾರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಈ ಪ್ರಕರಣದಲ್ಲಿ ನಾನು ಪ್ರತಿವಾದಿ ಆಗದೆ ಇರುವ ಕಾರಣ ನನ್ನ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ರಾಜ್ಯದ 15 ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದರೆ ಈ ಆದೇಶದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ನಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡುವ ನನ್ನ ಹಕ್ಕನ್ನು ಹತ್ತಿಕ್ಕಿದಂತೆ ಕಾಣುತ್ತಿದೆ. ಈ ಬಗ್ಗೆ ಸಭಾಧ್ಯಕ್ಷರು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

  • ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

    ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

    ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕಪ್ ಅನ್ನು ಕುಮಾರಸ್ವಾಮಿ ಗೆದ್ದುಕೊಂಡರೂ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಹೊರ ಹೊಮ್ಮಿದ್ದಾರೆ.

    ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

    ಶನಿವಾರ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಮಧ್ಯಾಹ್ನ ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ಬೇಕಿದ್ರೆ ಬೆಟ್ ಕಟ್ತೀನಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ: ಡಿಕೆ ಶಿವಕುಮಾರ್

    ಬಿಜೆಪಿ ಮ್ಯಾಜಿಕ್ ಸಂಖ್ಯೆಗೆ ತಲುಪುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಫಲಿತಾಂಶ ಬಂದ ದಿನವೇ ಖುದ್ದಾಗಿ ತೆರಳಿ ಮುಳುಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರ ಜೊತೆ ಮಾತನಾಡಿ ನಮ್ಮ ಸರ್ಕಾರಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು.

    ರಾಜ್ಯಪಾಲರು ಬಿಎಸ್‍ವೈಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ 15 ದಿನ ಸಮಯ ನೀಡಿದ ಕೂಡಲೇ ಜೆಡಿಎಸ್ ಶಾಸಕರಿಗಿಂತ ಕಾಂಗ್ರೆಸ್ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಗೊತ್ತಾಯಿತು. ಹೀಗಾಗಿ ರಾಜ್ಯದ ಕೈ ಶಾಸಕರು ಕಮಲಕ್ಕೆ ಹೋಗದಂತೆ ತಡೆಯಲು ಡಿಕೆ ಶಿವಕುಮಾರ್ ಸಹೋದರರ ಹೆಗಲಿಗೆ ಹೈಕಮಾಂಡ್ ಜವಾಬ್ದಾರಿಯನ್ನು ಹಾಕಿತ್ತು.  ಬಹುಮತ ಸಾಬೀತು ಪಡಿಸುವ ದಿನ ಯಾರಾದರೂ ಅಡ್ಡ ಮತದಾನ ಮಾಡಬಹುದು ಎನ್ನುವ ಶಂಕೆ ಇತ್ತು. ಆದರೆ ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರು ಬಿಜೆಪಿಯ ತೆಕ್ಕೆಗೆ ಬೀಳಲೇ ಇಲ್ಲ. ಈ ಮೂಲಕ ಡಿಕೆಶಿ  ಹೈ ಕಮಾಂಡ್ ಗೆ ನೀಡಿದ ಮಾತನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾದರು.

    ಈಗಲ್ ಟನ್ ರೆಸಾರ್ಟ್ ಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಾಗ ಕನಕಪುರದ ಕಾರ್ಯಕರ್ತರನ್ನು ಕರೆಸಿ ರೆಸಾರ್ಟ್ ಸುತ್ತ ಭದ್ರ ಕಾವಲು ಹಾಕಿಸಿದ್ದರು. ಈ ಹಿಂದೆ ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಕೈ ಶಾಸಕರನ್ನು ಇದೇ ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದು ಅಹ್ಮದ್ ಪಟೇಲ್ ಜಯಗಳಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆಶಿ ವಹಿಸಿದ್ದರು.

  • ಅನರ್ಹತೆ ಭೀತಿಯಿಂದ ಜೆಡಿಎಸ್ ರೆಬೆಲ್ ಶಾಸಕರು ಪಾರು

    ಅನರ್ಹತೆ ಭೀತಿಯಿಂದ ಜೆಡಿಎಸ್ ರೆಬೆಲ್ ಶಾಸಕರು ಪಾರು

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಶಾಸಕರ ಅನರ್ಹತೆ ಕೋರಿ ಅಂದು ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಧಾನಸಭಾ ಸ್ಪೀಕರ್ ಕೋಳಿವಾಡ ವಜಾ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು, 14 ನೇ ವಿಧಾನಸಭೆ ಮೇ 17 ರಂದು ವಿಸರ್ಜನೆ ಆಗಿದೆ. ಹೀಗಾಗಿ ಅನರ್ಹತೆ ಪ್ರಕರಣದ ಅರ್ಜಿಯನ್ನು ಸ್ಪೀಕರ್ ಕೋಳಿವಾಡ ಶುಕ್ರವಾರ ವಜಾ ಮಾಡಿದ್ದಾರೆ. ಹಂಗಾಮಿ ಸ್ಪೀಕರ್ ಅಧಿಕಾರ ವಹಿಸುವವರೆಗೂ ಕೋಳಿವಾಡ ಸ್ಪೀಕರ್ ಆಗಿರುತ್ತಾರೆ. ಹೀಗಾಗಿ ಇಂದು ಶಾಸಕರ ಅನರ್ಹತೆ ಅರ್ಜಿಯನ್ನ ವಜಾ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇಂದು ಹಂಗಾಮಿ ಸ್ಪೀಕರ್ ಆಗಿ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು. ಬಿಜೆಪಿ ಶಾಸಕರಾಗಿದ್ದ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿರುವುದರಿಂದ ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಈ ವೇಳೆ ಕೋಳಿವಾಡ ಅವರು ಅರ್ಜಿಯನ್ನು ವಜಾ ಮಾಡಿರುವುದರಿಂದ ಜೆಡಿಎಸ್ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಹಂಗಾಮಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇಲ್ಲ. ಅಷ್ಟೇ ಅಲ್ಲದೇ ಇವರು ವಿಚಾರಣೆಯೇ ನಡೆಸಿಲ್ಲ. ವಿಚಾರಣೆ ನಡೆಸದೇ ಅನರ್ಹಗೊಳಿಸಲು ಸಾಧ್ಯವಿಲ್ಲ. ಆದದ್ದು ಆಗಲಿ ಮುಂದೆ ಏನಾಗುತ್ತದೋ? ಎಂದು ಭಾವಿಸಿ ಧೈರ್ಯ ಮಾಡಿ ಅನರ್ಹ ಮಾಡಿದರೆ ಸದನದಲ್ಲಿ ಸಂಖ್ಯಾಬಲ ಕಡಿಮೆಯಾಗುತ್ತದೆ. ಈಗ ಅನರ್ಹ ಮಾಡಿದರೂ ಸ್ಪೀಕರ್ ನಿರ್ಧಾರವನ್ನು ಮುಂದೆ ಪ್ರಶ್ನಿಸಬಹುದು ಎಂದು ತಿಳಿಸಿದರು.

    ಏನಿದು ಪ್ರಕರಣ?
    ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಭೀಮಾ ನಾಯ್ಕ್, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ್ ಮೂರ್ತಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನು ಪ್ರಶ್ನಿಸಿ ಜೆಡಿಎಸ್ ಸ್ಪೀಕರ್ ಗೆ ದೂರು ನೀಡಿತ್ತು. ಸ್ಪೀಕರ್ ಕೋಳಿವಾಡ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಚುನಾವಣೆ ದಿನಾಂಕ ಪ್ರಕಟವಾದರೂ ತನ್ನ ತೀರ್ಪನ್ನು ಪ್ರಕಟಿಸದ ಕಾರಣ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 7ರ ಒಳಗಡೆ ತೀರ್ಪು ನೀಡುವಂತೆ ಆದೇಶಿಸಿತ್ತು. ಜೆಡಿಎಸ್ ರೆಬೆಲ್ ಶಾಸಕರಾಗಿ ಬಳಿಕ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆದ್ದ ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ ಮತ್ತು ಜಮೀರ್ ಅಹ್ಮದ್ ಅವರನ್ನು ಬಹುಮತ ಸಾಬೀತಿಗೂ ಮುನ್ನ ಸ್ಪೀಕರ್ ಅನರ್ಹಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತಿತ್ತು.