Tag: floodrelief funds

  • ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಬೆಳಗಾವಿ: ರಾಜ್ಯದ ಪ್ರವಾಹ ಪರಿಹಾರದ ವರದಿಯನ್ನು ಕೇಂದ್ರ ತಿರಸ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಪ್ರಸ್ತಾಪ ಹಾಗೂ ಕೇಂದ್ರ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣಕ್ಕೆ ಪರಿಶೀಲಿಸಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ನಮ್ಮ ಇಬ್ಬರು ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ ಎಂದರು.

    ಈ ದೇಶದಲ್ಲಿ ಅನೆಕ ರಾಜ್ಯಗಳ ಪರಿಸ್ಥಿತಿ ಹೀಗೆ ಇದೆ. ನಾವೂ ಬಜೆಟ್ ನಲ್ಲಿ ಹಣ ನೀಡುವ ಮೂಲಕ ಎಲ್ಲ ಇಲಾಖೆಯಿಂದ ಪರಿಹಾರ ಕೊಡಲಾಗುವುದು. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್ ಎಪ್‍) ನಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದು ಸುಳ್ಳು. ಈಗಾಗಲೇ ಕೇಂದ್ರದ ಎಲ್ಲ ಸಚಿವರೊಂದಿಗೆ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

    ದೇಶದ ಯಾವ ಪ್ರವಾಹಪೀಡಿತ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಆಗುವ ವಿಶ್ವಾಸ ಇದೆ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ. ಖಾಲಿ ಆಗಿದ್ದರೆ ಪ್ರವಾಹ ಪರಿಹಾರಕ್ಕೆ ಇಷ್ಟೊಂದು ಹಣ ನೀಡಲು ಆಗುತ್ತಿರಲಿಲ್ಲ. ಮುಂದಿನ ಬಜೆಟ್ ನಲ್ಲಿ ಪ್ರವಾಹ ಪುನರ್ವಸತಿಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ ಎಂದರು.

    ಇದೇ ವೇಳೆ ಮಧ್ಯಂತರ ಚುನಾವಣೆಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ರಾಜ್ಯ ಸರ್ಕಾರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎಲ್ಲಿ ಕೆಲಸ ನಿಂತಿದೆ ಅದನ್ನ ತೋರಿಸಲಿ. ಲೂಟಿ ಮಾಡುವವರ ವಿರುದ್ಧ ಕ್ರಮ ತೆಗೆದುಕ್ಕೊಳ್ಳಲಾಗುತ್ತಿದೆ ಎಂದರು.

    ಕೇಂದ್ರ ತಿರಸ್ಕಾರ:
    ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ. ರಾಜ್ಯ ಸರ್ಕಾರ ಇಷ್ಟು ದಿನ ಸಮಯ ತೆಗೆದುಕೊಂಡ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ಅಲ್ಲದೇ ಕೇಂದ್ರ ತಿರಸ್ಕಾರ ಮಾಡಿದೆ ಎಂದು ಕಾಂಗ್ರೆಸ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

  • ಸೂಲಿಬೆಲೆಗೆ ಮೋದಿ ಪರ ನಿಂತು ಸಾಕಾಗಿರಬಹುದು- ರಮಾನಾಥ ರೈ

    ಸೂಲಿಬೆಲೆಗೆ ಮೋದಿ ಪರ ನಿಂತು ಸಾಕಾಗಿರಬಹುದು- ರಮಾನಾಥ ರೈ

    ಮಂಗಳೂರು: ಚಿಂತಕ ಚಕ್ರವರ್ತಿ ಸೂಲಿಬೆಲೆಗೆ ಪ್ರಧಾನಿ ನರೇಂದ್ರ ಮೋದಿ ಪರ ನಿಂತು ಸಾಕಾಗಿರಬಹುದು ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ಸಂಸದರ ವಿರುದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವಿಚಾರ ಸಂಬಂಧ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಈ ಹಿಂದೆ ಹೇಳಿದ ಯಾವುದೇ ಮಾತು ಅನುಷ್ಠಾನ ಆಗಿಲ್ಲ. ಕಪ್ಪು ಹಣ ಸೇರಿದಂತೆ ಇತರ ಯೋಜನೆಗಳು ಸುಳ್ಳಾಗಿದೆ. ಸೂಲಿಬೆಲೆ ಹೇಳೋದೆಲ್ಲಾ ಸುಳ್ಳು ಎಂದು ಜನರಿಗೆ ಆಗಿದೆ. ಹೀಗಾಗಿ ತಾನು ಹೇಳಿದ್ದು ಸುಳ್ಳಾಯ್ತು ಎಂದು ಸೂಲಿಬೆಲೆ ಆತ್ಮಸಾಕ್ಷಿಗೆ ಅರ್ಥವಾಗಿರಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ವ್ಯಕ್ತಪಡಿಸಿರಬಹುದು ಎಂದು ತಿಳಿಸಿದ್ದಾರೆ.

    ಬಿಜೆಪಿ ಸಂದರ ವಿರುದ್ಧ ಚಕ್ರವರ್ತಿ ಕಿಡಿ:
    ಸೆ.30 ರಂದು ಈ ಸಂಬಂಧ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿರುವ ಸೂಲಿಬೆಲೆ, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಬೇಸರ ವ್ಯಕ್ತಪಡಿಸಿದ್ದರು.

    ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದಿದ್ದರು. ಇದನ್ನೂ ಓದಿ: ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಅನಂತ್‍ಕುಮಾರ್ ಇದ್ದಾಗ ಕೇಂದ್ರದ ಇತರೆ ಮಂತ್ರಿಗಳೊಂದಿಗೆ ಅವರು ಬೆಳೆಸಿಕೊಂಡಿದ್ದ ಸಂಬಂಧ ಅವರ ಮಾತಿಗೆ ಗೌರವ ತಂದುಕೊಡುವಂತಿತ್ತು. ಅವರಷ್ಟೇ ಬಾರಿ ಸಂಸದರಾಗಿದ್ದರೂ ಅಂಥದ್ದೊಂದು ಬಾಂಧವ್ಯವನ್ನೇ ಬೆಳೆಸಿಕೊಳ್ಳದ ಅನೇಕರನ್ನು ಕಂಡಾಗ ಸಂಕಟವೆನಿಸುತ್ತದೆ. ಕರ್ನಾಟಕದಿಂದಲೇ ಮಂತ್ರಿಗಳಾದವರು ಎಷ್ಟೋ ಜನರಿದ್ದಾರೆ. ಆದರೆ ಪ್ರತ್ಯಕ್ಷ ಕೇಂದ್ರದಲ್ಲಿ ಪ್ರಭಾವ ಬೀರುವ ವಿಚಾರ ಬಂದಾಗ ಕೆಲಸಕ್ಕೆ ಬಾರದವರಾಗಿ ಬಿಡುತ್ತಾರಲ್ಲಾ ಎಂಬುದೇ ನೋವಿನ ಸಂಗತಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

    ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ಅವರು ಹಠಕ್ಕೆ ಬಿದ್ದಾದರೂ ಕೊನೆಗೆ ರಾಜಿನಾಮೆ ಕೊಟ್ಟಾದರೂ ತಮ್ಮ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಕೇಂದ್ರದ ಸಹಕಾರವನ್ನು ತರುತ್ತಾರೆ. ನಾಡಿನ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಬಲಿಕೊಡಲು ಅವರೆಂದಿಗೂ ಸಿದ್ಧರಾಗುವುದಿಲ್ಲ. ಮೋದಿಯವರ ಪ್ರತಿಯೊಂದು ನಡೆಯಲ್ಲಿಯೂ ಭವಿಷ್ಯದ ದೃಷ್ಟಿಕೋನ ಇದ್ದೇ ಇರುತ್ತದೆ ಎಂಬುದನ್ನು ನಂಬಿಕೊಂಡಿರುವ ಅನೇಕರಿಗೆ ಈ ನಿರ್ಲಕ್ಷ್ಯದ ಹಿಂದಿನ ದೃಷ್ಟಿ ಖಂಡಿತ ಅರಿವಾಗುತ್ತಿಲ್ಲ. ಗೊತ್ತಿದ್ದವರು ತಿಳಿಸಿಕೊಡಬೇಕು. ಒಂದೋ ಕರ್ನಾಟಕದ ಜನತೆಗೆ, ಇಲ್ಲವೇ ಸ್ವತಃ ಮೋದಿಗೆ ಎಂದು ನೇರವಾಗಿ ಬರೆದು ಚಾಟಿ ಬೀಸಿದ್ದರು.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ನರೇಂದ್ರ ಮೋದಿ ಅವರ ಪರವಾಗಿ ರಾಜ್ಯವಾಪಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಹತ್ತಿರ ಬಂದಾಗ ಸಮಸ್ಯೆ ಇದೆ ಎಂದು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವುದಲ್ಲ. ಮತವನ್ನು ಚಲಾಯಿಸಿ ಮೌನವಾಗಿ ಕುಳಿತುಕೊಳ್ಳುವುದಲ್ಲ. ಆರಂಭದಿಂದಲೇ ಸಮಸ್ಯೆಯ ಬಗ್ಗೆ ಒತ್ತಡ ಹೇರಿ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದರು.