Tag: Flood Relief

  • ನೆರೆ ಪರಿಹಾರಕ್ಕೆ ಹಣವಿಲ್ಲ ಎಂದು ಒಪ್ಪಿಕೊಂಡ ಸಿಎಂ ಬಿಎಸ್‍ವೈ

    ನೆರೆ ಪರಿಹಾರಕ್ಕೆ ಹಣವಿಲ್ಲ ಎಂದು ಒಪ್ಪಿಕೊಂಡ ಸಿಎಂ ಬಿಎಸ್‍ವೈ

    ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದು 2 ತಿಂಗಳೇ ಕಳೆದಿದೆ. ಆದರೂ ಕೇಂದ್ರದಿಂದ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕೆ ಹಣವಿಲ್ಲ ಅಂತ ಒಪ್ಪಿಕೊಂಡಿದ್ದಾರೆ.

    ಚಿತ್ರದುರ್ಗದ ಸಿರಿಗೆರೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಮುಖ್ಯಮಂತ್ರಿ ಆದಾಗಲೆಲ್ಲ ಒಂದು ರೀತಿ ಅಗ್ನಿ ಪರೀಕ್ಷೆ ನಡೆಯುತ್ತದೆ. ಕಳೆದ 100 ವರ್ಷಗಳಿಂದ ಆಗದಂತಹ ಪ್ರವಾಹ ಈ ಬಾರಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದ್ದು, ಅದಕ್ಕೆ ಸ್ಪಂದಿಸುತ್ತಿದ್ದೇವೆ. ನಾವು ಸರ್ಕಾರ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡನ್ನೂ ಎದುರಿಸುತ್ತಿದ್ದೇವೆ ಎಂದು ಅಸಹಾಯಕತೆ ಹೊರಹಾಕಿದ್ದಾರೆ.

    ಕೇಂದ್ರ ಸರ್ಕಾರವು ಮುಂದಿನ ನಾಲ್ಕೈದು ದಿನಗಳಲ್ಲಿ ನೆರೆ ಪರಿಹಾರ ಹಣವನ್ನು ನೀಡುತ್ತದೆ ಎನ್ನುವ ಭರವಸೆ ಇದೆ. ರಾಜ್ಯ ಸರ್ಕಾರದ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಚಿಂತನೆ ನಡೆದಿದೆ. ಈ ಹಿಂದೆಂದೂ ನೀಡದಷ್ಟು ಹಣವನ್ನು ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ ನೀಡಲಾಗುತ್ತದೆ. ಒಟ್ಟು 5 ಲಕ್ಷ ರೂ. ಪೈಕಿ ಈಗಾಗಲೇ 1 ಲಕ್ಷ ರೂ.ಯನ್ನು ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ತಿಳಿಸಿದರು.

    ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ರಸ್ತೆ, ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಯಾವ ಇಲಾಖೆಯಲ್ಲಿ ಹಣ ಖರ್ಚು ಆಗದೆ ಉಳಿದಿದೆ ಎಂದು ಮಾಹಿತಿ ಕಲೆ ಹಾಕಿದ್ದೇವೆ. ಆ ಹಣವನ್ನು ಈಗ ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಜೊತೆಗೆ ಹಿಂದಿನ ಮೈತ್ರಿ ಸರ್ಕಾರ ರೈತರ ಕೃಷಿ ಸಾಲಮನ್ನಾ ಮಾಡಿತ್ತು. ಆ ಹಣವನ್ನೂ ಕೂಡ ಹಂತ ಹಂತವಾಗಿ ಬ್ಯಾಂಕ್‍ಗಳಿಗೆ ಪಾವತಿಸುತ್ತೇವೆ ಎಂದು ತಿಳಿಸಿದರು.

  • ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

    ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ ಮಾಡಿದೆ.

    ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ 13 ಜಿಲ್ಲೆಗಳಿಗೆ 1,000 ಕೋಟಿ ರೂ.ವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗಷ್ಟೇ 500 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಉಡುಪಿ ಜಿಲ್ಲೆಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೂ ಪರಿಹಾರ ನೀಡಲಾಗಿದೆ.

    ಜಿಲ್ಲಾಧಿಕಾರಿಗಳ ಅನುಮೋದನೆ ಪ್ರಕಾರ ಪ್ರವಾಹದಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ 8,586 ಮನೆಗಳು ಹಾನಿಗೊಳಗಾಗಿವೆ. ಉಳಿದಂತೆ 23,942 ಮನೆಗಳು ಭಾಗಶಃ ಹಾಗೂ 59,344 ಮನೆಗಳು ಅಲ್ಪ ಸ್ವಲ್ಪ ಹಾನಿಗೊಳಗಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 91,872 ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಆದರೆ ಆನ್‍ಲೈನ್ ನಮೂದಾಗಿರುವ ಪ್ರಕಾರ ಒಟ್ಟು 1,08,643 ಮನೆಗಳು ಪ್ರವಾಹದ ಹಾನಿಗೆ ಒಳಗಾಗಿವೆ.

    ಯಾವ ಜಿಲ್ಲೆ ಎಷ್ಟು?:
    ಬೆಳಗಾವಿಗೆ 500 ಕೋಟಿ ರೂ., ಬಾಗಲಕೋಟೆಗೆ 135 ಕೋಟಿ ರೂ., ಹಾವೇರಿಗೆ 70 ಕೋಟಿ ರೂ, ಧಾರವಾಡಕ್ಕೆ 55 ಕೋಟಿ, ಚಿಕ್ಕಮಗಳೂರಿಗೆ 25 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಗೆ 15 ಕೋಟಿ ರೂ., ಗದಗ ಜಿಲ್ಲೆಗೆ 30 ಕೋಟಿ ರೂ., ಹಾಸನಕ್ಕೆ 20 ಕೋಟಿ ರೂ., ಕೊಡಗು 25 ಕೋಟಿ ರೂ., ಮೈಸೂರು ಜಿಲ್ಲೆಗೆ 30 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 30 ಕೋಟಿ ರೂ. ಹಾಗೂ ಉಡುಪಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

  • ಪ್ರವಾಹ ಚರ್ಚೆ ಸಭೆಗೂ ಬಾರದ ಉಮೇಶ್ ಕತ್ತಿ- ದೊಡ್ಡವರೆಲ್ಲಾ ಜಾಣರಲ್ಲ ಎಂದ್ರು ಆರ್.ಅಶೋಕ್

    ಪ್ರವಾಹ ಚರ್ಚೆ ಸಭೆಗೂ ಬಾರದ ಉಮೇಶ್ ಕತ್ತಿ- ದೊಡ್ಡವರೆಲ್ಲಾ ಜಾಣರಲ್ಲ ಎಂದ್ರು ಆರ್.ಅಶೋಕ್

    ಬೆಂಗಳೂರು: ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆಯುವ, ಪರಿಹಾರಕ್ಕಾಗಿ ಸಿಎಂ ಯಡಿಯೂರಪ್ಪ ಕರೆದಿದ್ದ ಜಿಲ್ಲಾವಾರು ಬಿಜೆಪಿ ಶಾಸಕರ ಸಭೆಗೆ ಕತ್ತಿ ಗೈರಾಗಿದ್ದಾರೆ.

    ಸಿಎಂ ಅವರ ಈ ಪ್ರಮುಖ ಸಭೆಗೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಉಮೇಶ್ ಕತ್ತಿ ಗೈರಾಗಿದ್ದು ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ಬೆಳಗಾವಿ ಜಿಲ್ಲಾ ನೆರೆಪೀಡಿದ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದ್ದ ವೇಳೆಯೂ ಉಮೇಶ್ ಕತ್ತಿ ಗೈರಾಗಿದ್ದರು. ಆದರೆ ಸಭೆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಸಿಎಂ ಬಿಎಸ್‍ವೈ ಅವರು, ಇವತ್ತಿನ ಸಭೆಗೆ ಕೆಲವರು ಬಾರದಿರುವುದಕ್ಕೆ ಅಸಮಾಧಾನ ಕಾರಣ ಅಲ್ಲ. ಯಾವ ಶಾಸಕರಲ್ಲೂ ಅಸಮಾಧಾನ ಇಲ್ಲ. ಉಮೇಶ್ ಕತ್ತಿ ಅವರು ಬೆಳಗ್ಗೆ ಮನೆಗೆ ಬಂದು ಮಾತಾಡಿಕೊಂಡು ಹೋದರು ಎಂದು ಹೇಳಿದರು.

    ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ನೆರೆಯಿಂದ ಸಮಸ್ಯೆಗೆ ಸಿಲುಕಿರುವ ಕ್ಷೇತ್ರಗಳ ಶೇ.90 ರಷ್ಟು ಶಾಸಕರು ಹಾಜರಾಗಿದ್ದರು. ನೆರೆ ಪರಿಹಾರ ಬಗ್ಗೆ ಚರ್ಚೆ ನಡೆಸಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಶಾಸಕರಿಂದ ಮಾಹಿತಿ ಪಡೆದಿದ್ದೇವೆ. ಇದುವರೆಗೂ ರಾಜ್ಯ ಸರ್ಕಾರದ ಪರಿಹಾರ ಕುರಿತ ಅಂಕಿ ಅಂಶ ಬಗ್ಗೆ ಹೇಳಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಂದು ಬಿಜೆಪಿ ಶಾಸಕರ ಸಭೆಯನ್ನು ಸಿಎಂ ಕರೆದಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಕರೆಯುತ್ತಾರೆ ಎಂದರು. ಅಲ್ಲದೇ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೊಡ್ಡವರೆಲ್ಲಾ ಜಾಣರಲ್ಲ ಎನ್ನುತ್ತಾರೆ. ಆದೇ ರೀತಿ ನಮಗೂ ಆಗಿದೆ ಅಷ್ಟೇ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.

    ರಾಜ್ಯ ಸರ್ಕಾರ ರಚನೆ ಬಳಿಕ ಮೊದಲ ಬಾರಿಗೆ ಸಿಎಂ ಬಿಎಸ್‍ವೈ ಅವರು ಶಾಸಕರ ಸರಣಿ ಸಭೆ ನಡೆಸಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರಿನ ಬಿಜೆಪಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕಾಗವಾಡದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಕೂಡ ಭೇಟಿ ನೀಡಿದ್ದರು.

    ಸಭೆಯಲ್ಲಿ ಶಾಸಕರು ಕೇಂದ್ರದಿಂದ ಪರಿಹಾರ ವಿಳಂಬವಾಗಿರುವ ಕುರಿತು ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ತಾತ್ಕಾಲಿಕವಾಗಿ ಶೆಡ್ ನಿರ್ಮಾಣಕ್ಕಾದರೂ ಹಣ ಕೊಡಿ ಎಂದು ಶಾಸಕರು ಮನವಿ ಮಾಡಿದ್ದಾರೆ. ಶಾಸಕರ ಬೇಡಿಕೆಗೆ ಸ್ಪಧಿಸಿರುವ ಸಿಎಂ 10 ಜಿಲ್ಲೆಗಳ ತುರ್ತು ಕಾಮಗಾರಿಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇತ್ತ ಮೂಡಿಗೆರೆಯಲ್ಲಿ 5 ಎಕರೆ ಕಾಫಿತೋಟ ಕಳೆದುಕೊಂಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾ ಚನ್ನಪ್ಪಗೌಡ ಕುಟುಂಬಕ್ಕೆ ಸಿಎಂ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

  • ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ಡಿಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ: ಲಕ್ಷ್ಮಣ ಸವದಿ

    ವಿಜಯಪುರ: ಉಪಮುಖ್ಯಮಂತ್ರಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನನ್ನನ್ನು ಗುರುತಿಸಿ ಪಕ್ಷ ಸಾರಿಗೆ ಇಲಾಖೆ ಜೊತೆಗೆ ಡಿಸಿಎಂ ಹುದ್ದೆ ನೀಡಿದೆ. 2023ರ ವಿಭಾನಸಭಾ ಚುನಾವಣೆಯಲ್ಲಿ ಬಿಜೆಪಿಯು 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ರಾಜ್ಯದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ಶ್ರಮಿಸಲಿದ್ದೇವೆ. ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಇನ್ನೂ ಎರಡು ಅಥವಾ ಮೂರು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ತಿಳಿಸಿದರು.

    ಮುಂಬರುವ ಉಪಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಮುಂದಿನ 20 ವರ್ಷ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಕಲ್ಯಾಣ ಕರ್ನಾಟಕ ಮಾಡುತ್ತೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಉದ್ದೇಶದಿಂದ ನನಗೆ ಹಾಗೂ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ ಎಂದು ಹೇಳಿದರು.

    ಉತ್ತರ ಕರ್ನಾಟಕದ ಪ್ರವಾಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ಅವರು, ಪ್ರವಾಹದಿಂದ ಸುಮಾರು 30 ಸಾವಿರ ಕೋಟಿ ರೂ. ನಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇದು ಪ್ರಾಥಮಿಕ ಅಂದಾಜು ಅಷ್ಟೇ. ಕೇಂದ್ರ ಸರ್ಕಾರದ ತಂಡಗಳು ಈಗಾಗಲೇ ಭೇಟಿ ನೀಡಿ ದೆಹಲಿಗೆ ತೆರಳಿವೆ. ಶೇ.90 ರಷ್ಟು ಪ್ರವಾಹ ಸಂತ್ರಸ್ತರಿಗೆ ಈಗಾಗಲೇ ಪ್ರಾಥಮಿಕ ಹಂತದಲ್ಲಿ ಪರಿಹಾರದ ಹಣ ನೀಡಲಾಗಿದೆ. ಬೆಳೆಹಾನಿ ಸಮೀಕ್ಷೆ ಈಗ ಆರಂಭವಾಗಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಭೇಟಿಯಾಗಿ ಹೆಚ್ಚಿನ ಪರಿಹಾರ ಹಣಕ್ಕೆ ಮನವಿ ಸಲ್ಲಿಸುತ್ತೇವೆ. ಆದರೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಯೋಚನೆ ಇಲ್ಲ ಎಂದರು.

  • ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ನೆರೆ ಪರಿಹಾರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 1 ಕೋಟಿ ರೂ. ದೇಣಿಗೆ

    ಉಡುಪಿ: ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಉತ್ತರ ಕರ್ನಾಟಕ ಭಾಗ ಹಾಗೂ ಕರವಾಳಿ ಭಾಗದ ಜಿಲ್ಲೆಗಳು ತತ್ತರಿಸಿವೆ. ಈಗಾಗಲೇ ಕರುನಾಡಿನ ನೋವಿಗೆ ಹಲವು ಜನರು, ಸಂಘ ಸಂಸ್ಥೆಗಳು ಜನರ ನೋವಿಗೆ ಸ್ಪಂಧಿಸಿವೆ. ಸದ್ಯ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲದಿಂದ ಪರಿಹಾರ ದೇಣಿಗೆಯಾಗಿ ಒಂದು ಕೋಟಿ ರೂ. ಘೋಷಣೆಯಾಗಿದೆ.

    ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಇಂದು ಸಂಜೆ ಸಭೆ ಸೇರಿ ಈ ಮಾನವೀಯ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆಯನ್ನು ನೀಡಲು ಎಲ್ಲರೂ ಒಪ್ಪಿದ್ದಾರೆ. ಈ ಬಗ್ಗೆ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.

    ಪಬ್ಲಿಕ್ ಟಿವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಭಕ್ತರು ದೇವರಿಗೆ ಹರಕೆ ರೂಪದಲ್ಲಿ ಧನ ಸಹಾಯ ಮಾಡುತ್ತಾರೆ. ಜನ ಕಷ್ಟದಲ್ಲಿರುವಾಗ ಸೂರು ಕಳೆದುಕೊಂಡಿರುವಾಗ ದೇಗುಲ ಸಹಾಯ ಮಾಡುವುದು ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ನೆರೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳಿದರು.