Tag: Flood Relief

  • ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ಹುಬ್ಬಳ್ಳಿ: ಒಂದೆಡೆ ನೆರೆ ಪರಿಹಾರ ಸರಿಯಾಗಿ ಸಿಗತ್ತಿಲ್ಲ ಎಂದು ಸಂತ್ರಸ್ತರು ಪರದಾಡುತ್ತಿದ್ದರೆ, ಇತ್ತ ಅಧಿಕಾರಿಗಳು ಪರಿಹಾರಕ್ಕಾಗಿ ದಾಖಲೆ ನೀಡಲು ಬರುವ ರೈತರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ.

    ಹೌದು. ಸಂತ್ರಸ್ತರಿಗೆ ಪರಿಹಾರ ಕೊಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುಂದಗೋಳದಲ್ಲಿ ಬಯಲಿಗೆ ಬಂದಿದೆ. ಪರಿಹಾರಕ್ಕಾಗಿ ದಾಖಲೆಗಳ ಸಲ್ಲಿಕೆ ಮಾಡಲು ರೈತರು ಬಂದಾಗ ಅವರ ಬಳಿ ಗ್ರಾಮ ಲೆಕ್ಕಾಧಿಕಾರಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ ಪಡೆಯುವುದರ ಜೊತೆಗೆ ಲಂಚ ಪಡೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸುಬ್ಬಣ್ಣ ಪ್ರತಿಯೋರ್ವ ರೈತರಿಂದ 20 ರೂ. ಲಂಚ ಪಡೆಯುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಳೆ ಪರಿಹಾರ ಪಡೆಯಲು ಪ್ರತಿ ವರ್ಷ ಲಂಚ ಕೊಡುತ್ತಿರಲ್ಲ, ಹಾಗೆಯೇ ಈ ಬಾರಿಯೂ ಲಂಚ ಕೊಡಲೇಬೇಕೆಂದು ಗ್ರಾಮ ಲೆಕ್ಕಾಧಿಕಾರಿ ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಹಣ ಕೊಡದಿದ್ದರೆ ನಾನು ದಾಖಲೆಗಳನ್ನ ಮೇಲಾಧಿಕಾರಿಗಳಿಗೆ ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿ ರೈತರಿಂದ ಹಣ ಪೀಕುತ್ತಿದ್ದಾರೆ.

    ಮೊದಲೇ ಭೀಕರ ಪ್ರವಾಹಕ್ಕೆ ರೈತರು ಬೆಳೆ ಹಾನಿಯಾಗಿದೆ ಎಂದು ಕಂಗಾಲಾಗಿದ್ದಾರೆ. ಈ ನಡುವೆ ನೆರೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿರುವುದು ತಪ್ಪು. ಕೇವಲ 20 ರೂ. ತಾನೇ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಎಂದು ವಿಧಿ ಇಲ್ಲದೆ ರೈತರು ಅಧಿಕಾರಿಗಳಿಗೆ ಹಣ ಕೊಡುತ್ತಿದ್ದಾರೆ. ಆದರೆ ಕೆಲವೊಬ್ಬರ ಬಳಿ ಲಂಚ ನೀಡಲು 20 ರೂ. ಕೂಡ ಇರುವುದಿಲ್ಲ. ಅಂಥವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ನೆರೆ ಪರಿಹಾರಕ್ಕಾಗಿ ಪ್ರತಿಭಟನೆಗೆ ಇಳಿದ ಸಂತ್ರಸ್ತರಿಗೆ ಜೈಲಿಗಟ್ಟುವ ಬೆದರಿಕೆ

    ನೆರೆ ಪರಿಹಾರಕ್ಕಾಗಿ ಪ್ರತಿಭಟನೆಗೆ ಇಳಿದ ಸಂತ್ರಸ್ತರಿಗೆ ಜೈಲಿಗಟ್ಟುವ ಬೆದರಿಕೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ನೆರೆ ಪರಿಹಾರ ತಾರತಮ್ಯ ಖಂಡಿಸಿ ಪ್ರತಿಭಟನೆಗೆ ಇಳಿದ ಸಂತ್ರಸ್ತರಿಗೆ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಲಾಗಿದೆ.

    ಹಿರೇಪಡಸಲಗಿ ಗ್ರಾಮದಲ್ಲಿ ಉಂಟಾಗಿದ್ದ ಪ್ರವಾಹದ ನಷ್ಟಕ್ಕೆ ಇನ್ನೂ ನೆರೆ ಪರಿಹಾರ ನೀಡಿಲ್ಲ. ಆದ್ದರಿಂದ ನೆರೆ ಪರಿಹಾರ ತಾರತಮ್ಯ ಖಂಡಿಸಿ ಸಂತ್ರಸ್ತರು ಗ್ರಾಮದಲ್ಲಿ ಪ್ರತಿಭಟನೆಗೆ ಇಳಿದಿದ್ದರು. ನೆರೆಗೆ ಬಿದ್ದ ಮನೆಯ ಪರಿಹಾರ ಆಯ್ಕೆ ಪಟ್ಟಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಆರೋಪಿಸಿ, ಸಂತ್ರಸ್ತರು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಜೈಲಿಗೆ ಕಳಿಸುವುದಾಗಿ ಬೆದರಿಕೆ ಹಾಕಿ, ಹಿರೇಪಡಸಲಗಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಸಾವಳಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಗ್ರಾಪಂ ಅಧ್ಯಕ್ಷ ಮಲ್ಲೇಶ್ ಹುಟಗಿ ಹಾಗೂ ಪಿಡಿಓ ಸಂಗಮೇಶ್ ಸೋರಗಾವಿ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತರಿಗೆ ಜೈಲಿಗೆ ಕಳಿಸುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನೆರೆಗೆ ಬಿದ್ದ ಮನೆಯ ಪರಿಹಾರ ಆಯ್ಕೆ ಪಟ್ಟಿಯಲ್ಲಿ ಅಕ್ರಮ ಮಾಡಲಾಗಿದೆ. ಪರಿಹಾರ ಆಯ್ಕೆಯಲ್ಲಿ ಅಧಿಕಾರಿಗಳು ಗೋಲ್ಮಾಲ್ ಮಾಡಿದ್ದಾರೆ ಎಂದು ಸಂತ್ರಸ್ತರು ಪ್ರತಿಭಟನೆಗೆ ಇಳಿದಿದ್ದರು. ಇದರಿಂದ ಎಲ್ಲಿ ತಮ್ಮ ಬಣ್ಣ ಬಯಲಾಗುತ್ತೋ ಎಂದು ಹೆದರಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಓ ಪೊಲೀಸರಿಗೆ ದೂರು ನೀಡಿ, ನಮಗೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

  • ಕೇಂದ್ರದ ಪರಿಹಾರ ಹೆಚ್‍ಡಿಕೆ ಅವಧಿಯಲ್ಲಾದ ನೆರೆ ನಷ್ಟಕ್ಕೆ ಹೊರತು ಈಗಿನ ನಷ್ಟಕ್ಕಲ್ಲ: ಹೆಚ್‍ಡಿಡಿ ಕಿಡಿ

    ಕೇಂದ್ರದ ಪರಿಹಾರ ಹೆಚ್‍ಡಿಕೆ ಅವಧಿಯಲ್ಲಾದ ನೆರೆ ನಷ್ಟಕ್ಕೆ ಹೊರತು ಈಗಿನ ನಷ್ಟಕ್ಕಲ್ಲ: ಹೆಚ್‍ಡಿಡಿ ಕಿಡಿ

    ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ನೆರೆ ಪರಿಹಾರ ಹೆಸರಿನಲ್ಲಿ ಬಿಡುಗಡೆ ಮಾಡಿರೋದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಾದ ನೆರಯ ನಷ್ಟದ ಪರಿಹಾರ. ಈಗಿನ ನೆರೆ ನಷ್ಟಕ್ಕೆ ಕೇಂದ್ರ ನಯಾಪೈಸೆ ಕೂಡ ಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಿಡಿಕಾರಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕು ಶ್ರೀ ಕ್ಷೇತ್ರ ಕೈವಾರದಲ್ಲಿ ಚಿಂತಾಮಣಿ ಜೆಡಿಎಸ್ ಶಾಸಕ ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಜೆ.ಕೆ ಕೃಷ್ಣಾರೆಡ್ಡಿ ಅವರ 25ನೇ ವರ್ಷದ ವಾರ್ಷಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿ ಸುಮಾರು 38,000 ಸಾವಿರ ಕೋಟಿ ನಷ್ಟ ಉಂಟಾಗಿದ್ದದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ಈಗ ನೀಡಿರೋ 1,200 ಕೋಟಿ ರೂಪಾಯಿ ಪರಿಹಾರ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಕೊಡಗು, ಶಿವಮೊಗ್ಗ ಮತ್ತಿತರ ಕಡೆ ಉಂಟಾಗಿದ್ದ ನೆರೆ ಪರಿಹಾರದ ನಷ್ಟದ ಪರಿಹಾರವೇ ಹೊರತು ಈಗಿನ 38,000 ಸಾವಿರ ಕೋಟಿ ನಷ್ಟದ ಪರಿಹಾರ ಅಲ್ಲ ಎಂದು ಕಿಡಿಕಾರಿದರು. ಹಾಗೆಯೇ ಕೇಂದ್ರದ ಸಮರ್ಪಕ ಅನುದಾನಕ್ಕಾಗಿ ಇದೇ ತಿಂಗಳ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕಿನವರೆಗೆ ಸಾಂವಿಧಾನಿಕವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಇದೇ ವೇಳೆ ತಮ್ಮ ಗತಕಾಲದ ರಾಜಕೀಯ ಜೀವನವನ್ನ ಮೆಲುಕು ಹಾಕಿದ ದೇವೇಗೌಡರು, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಪಕ್ಷದಿಂದ ಹೊರಗೆ ಹಾಕಿದಾಗ, ಕೈವಾರ ಪುಣ್ಯಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂ.ಎಸ್.ರಾಮಯ್ಯ ಅವರು ರಾಜಕೀಯ ಅಭಿವೃದ್ಧಿಗೆ ಮಾಡಿದ ಆರ್ಥಿಕ ನೆರವನ್ನು ನೆನಸಿಕೊಂಡರು.

  • ನನ್ನಂತೆ ಸೂಲಿಬೆಲೆಯನ್ನೂ ಮೂಲೆಗುಂಪು ಮಾಡಬೇಡಿ: ಮುತಾಲಿಕ್

    ನನ್ನಂತೆ ಸೂಲಿಬೆಲೆಯನ್ನೂ ಮೂಲೆಗುಂಪು ಮಾಡಬೇಡಿ: ಮುತಾಲಿಕ್

    ಉಡುಪಿ: ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬಿಜೆಪಿಗರಿಗೆ ಚಾಟಿ ಬೀಸಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೇಶದ್ರೋಹಿ ಅಂದದ್ದು ತಪ್ಪು, ದೇಶದ್ರೋಹಿ ಪಟ್ಟ ಕಟ್ಟಿದ್ದು ಮೂರ್ಖತನ. ಚಕ್ರವರ್ತಿ ಸೂಲಿಬೆಲೆಯವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದ್ದರಿಂದ ಮಾತನಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯನ್ನು ನಾನು ಬೆಂಬಲಿಸುತ್ತೇನೆ ಎಂದರು.

    ಕರ್ನಾಟಕದ ಸಂಸದರ ಗೆಲುವಿನ ಹಿಂದೆ ಸೂಲಿಬೆಲೆ ಪರಿಶ್ರಮ ಇದೆ. ನಾನು ಕೂಡಾ 2000ನೇ ಇಸವಿಯಿಂದ ಮೋದಿ ಪರ ಭಾಷಣ ಮಾಡಿದವನು. ಆದರೆ ನನ್ನನ್ನೇ ಮೂಲೆಗುಂಪು ಮಾಡುವ ಪ್ರಯತ್ನ ನಡೆದಿತ್ತು. ಇದೀಗ ಸೂಲಿಬೆಲೆಯನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಸರಿಯಲ್ಲ. ವಾಗ್ಮಿ, ಚಿಂತಕ, ಪರಿಸರ ಪರ ಹೋರಾಟಗಾರನಿಗೆ ನೋವು ಕೊಡುವುದು ಸರಿಯಲ್ಲ. ರಾಜಕೀಯದವರು ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಸಂಘ ಪರಿವಾರ ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

    ನೆರೆ ಪರಿಹಾರ ತಡ ಆಯಿತು, ಕಡಿಮೆ ಆಯಿತು ಎಂಬುದು ಸಾಮಾನ್ಯ ಜನರಿಗೂ ಗಮನಕ್ಕೆ ಬರುತ್ತಿದೆ. ಯಡಿಯೂರಪ್ಪನವರಿಗೆ ಆ ನೋವು ಇದ್ದೆ ಇದೆ. 1,200 ಕೋಟಿ ರೂ. ಪರಿಹಾರ ಎಲ್ಲಿಗೂ ಸಾಕಾಗುವುದಿಲ್ಲ ಮುಂದೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

    ದತ್ತಪೀಠಕ್ಕೆ ರಾಹುಲ್ ಕೌಲ್
    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೂರಕ್ಕೆ ನೂರು ನಮಗೆ ವಿಶ್ವಾಸವಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭರವಸೆ ವ್ಯಕ್ತಪಡಿಸಿದರು.

    70 ವರ್ಷ ಕಾಂಗ್ರೆಸ್ ವ್ಯವಸ್ಥಿತವಾಗಿ ಕೇಸನ್ನು ಮುಚ್ಚಿ ಹಾಕಿತ್ತು. ಮುಸ್ಲಿಮರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡಿತ್ತು. ಈಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸರಿಯಾದ ವಿಚಾರಣೆ ನಡೆಸುತ್ತಿದ್ದಾರೆ. ದೇವಸ್ಥಾನ ಅಲ್ಲಿ ಇತ್ತು, ಮತ್ತೆ ನಮಗೆ ಜಮೀನು ವಾಪಾಸ್ ಸಿಗುತ್ತೆ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದರು.

    ಅಕ್ಟೋಬರ್ 13 ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. 5 ಸಾವಿರ ಜನ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ 1990ರ ಗಲಭೆಯಲ್ಲಿ ತಪ್ಪಿಸಿಕೊಂಡ ಜಮ್ಮು ಕಾಶ್ಮೀರದ ಹೋರಾಟಗಾರ, ರಾಹುಲ್ ಕೌಲ್ ದತ್ತಪೀಠಕ್ಕೆ ಆಗಮಿಸುತ್ತಾರೆ. 370ನೇ ವಿಧಿ ರದ್ದು ಮಾಡಿದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರಕ್ಕೆ ದತ್ತಪೀಠದಿಂದ ಅಭಿನಂದನೆ ಸಲ್ಲಿಸಲಿದ್ದಾರೆ. ಸ್ವತಃ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

  • ಹೈಕಮಾಂಡ್ ಸಂದೇಶಕ್ಕೆ ಬಿಎಸ್‍ವೈ ಬೇಸರ!

    ಹೈಕಮಾಂಡ್ ಸಂದೇಶಕ್ಕೆ ಬಿಎಸ್‍ವೈ ಬೇಸರ!

    ಬೆಂಗಳೂರು: ಹೈಕಮಾಂಡ್ ಕಳುಹಿಸಿರುವ ಸಂದೇಶಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ಕರ್ನಾಟಕ ಪ್ರವಾಹ ಪರಿಹಾರವಾಗಿ ಕೇಂದ್ರ ಸರ್ಕಾರ ಕೊನೆಗೂ ಮಧ್ಯಂತರ ಅನುದಾನವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವಾಗಿ 3,200 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಕೇಳಿ ಕೊಂಡಿತ್ತು. ಆದರೆ ಕೇಂದ್ರ 1,200 ಕೋಟಿ ರೂ. ನೀಡಿ ತೊಳೆದುಕೊಂಡಿದೆ. ಅನುದಾನ ನೀಡಿದ ಬಳಿಕ ಮಧ್ಯಂತರ ಪರಿಹಾರ ಕೊಟ್ಟಿದ್ದೇವೆ, ಉಳಿದ ಹಣ ಸದ್ಯಕ್ಕಿಲ್ಲ. ಇನ್ನಷ್ಟು ಪರಿಹಾರ ಹಣಕ್ಕೆ ಸ್ವಲ್ಪ ದಿನ ಕಾಯಲೇಬೇಕು ಎಂದು ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಈಗಲಾದರೂ ಎಚ್ಚೆತ್ತುಕೊಳ್ಳಲಿ’- ರಾಜ್ಯ ಸರ್ಕಾರ ವಿರುದ್ಧ ಎಚ್‍ಡಿಕೆ ಲೇವಡಿ

    ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ನೆರೆ ಇದೆ. ಎಲ್ಲ ರಾಜ್ಯಗಳಿಗೂ ಅಧ್ಯಯನ ತಂಡ ಕಳುಹಿಸಿ ವರದಿ ತರಿಸಿಕೊಳ್ಳಲಾಗುತ್ತಿದೆ. ಎಲ್ಲ ರಾಜ್ಯಗಳ ಜೊತೆ ಕರ್ನಾಟಕಕ್ಕೂ ಸಿಗುತ್ತೆ ಪರಿಹಾರ ಸಿಗಲಿದೆ. ಅಲ್ಲಿವರೆಗೂ ಎಲ್ಲವನ್ನು ನೀವೇ ನಿಭಾಯಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರೈತರ ಬಳಿಕ ಜಿಲ್ಲಾಧಿಕಾರಿ ಮೇಲೆ ಸಿಎಂ ಬಿಎಸ್‍ವೈ ಗರಂ

    ಸಂದೇಶದಿಂದ ಬೇಸರಗೊಂಡಿರುವ ಸಿಎಂ, ನಾನು ಕೇಂದ್ರದ ಜೊತೆ ಮಾತನಾಡಲ್ಲ, ನೀವೇ ಮಾತನಾಡಿಕೊಳ್ಳಿ. ಅಮಿತ್ ಶಾ ವಹಿಸಿರುವ ಜವಾಬ್ದಾರಿ ನೀವೇ ನಿಭಾಯಿಸಿಕೊಳ್ಳಿ. ನನಗೆ ನಿಭಾಯಿಸಿ ಸಾಕಾಗಿದೆ. ಇನ್ನು ನನ್ನಿಂದ ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು, ಪ್ರಧಾನಿ ಭೇಟಿಗೆ ಅವಕಾಶ ಕೇಳಿದೆ ಕೊಟ್ಟಿಲ್ಲ ಎಂದು ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರ ಮೇಲೆ ಪರಿಹಾರದ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಪ್ರತಿಭಟನೆಯ ಬಳಿಕ ಎಚ್ಚೆತ್ತ ಕೇಂದ್ರ – ಕರ್ನಾಟಕಕ್ಕೆ 1200 ಕೋಟಿ ಮಧ್ಯಂತರ ಪರಿಹಾರ

  • ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಿಡಿದ ಯತ್ನಾಳ್

    ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಿಡಿದ ಯತ್ನಾಳ್

    ವಿಜಯಪುರ: ವರದಿ ತಿರಸ್ಕಾರ ಹಾಗೂ ಮಿಕ್ಕ ವಿಷಯವನ್ನು ಆಮೇಲೆ ಪರಿಶೀಲಿಸಿ. ಮೊದಲು ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಅಧಿಕಾರಿಗಳ ತಂಡದ ವರದಿ ತೆಗೆದುಕೊಂಡು ಏನು ಮಾಡುವುದು? ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಜನರ ಪರದಾಟವನ್ನ, ಕಷ್ಟವನ್ನ ಕಣ್ಣಾರೆ ನೋಡಿದ್ದಾರೆ. ಇಷ್ಟು ಸಾಕು ನಂತರ ರಾಜ್ಯದ ವರದಿ ಹಾಗೂ ಕೇಂದ್ರದ ವರದಿ ತರಿಸಿ ತಾಳೆ ಹಾಕಿ. ಮೊದಲು ಜನರಿಗೆ 5 ಸಾವಿರ ಕೋಟಿ ರೂ. ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಇದನ್ನೂ ಓದಿ:6 ವರ್ಷ ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು – ಸಿದ್ದುಗೆ ರವಿ ತಿರುಗೇಟು

    ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ದಿವಾಳಿ ಎದ್ದಿಲ್ಲ. ಸಿಎಂ ಯಡ್ಡಿಯೂರಪ್ಪ ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ, ನೆರೆ ಪರಿಹಾರಕ್ಕೆ ಕೊಡುವಷ್ಟು ಹಣ ಇಲ್ಲ. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ನಮ್ಮ ಕ್ಷೇತ್ರಕ್ಕೆ 300 ಕೋಟಿ ಅನುದಾನ ಹೇಗೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು. ಹಾಗೆಯೇ ಬಿಎಸ್‍ವೈ ಅವರಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಹಿಂದಿನವರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ. 54 ಸಾವಿರ ಕೋಟಿ ರೂ. ಸಾಲ ಮನ್ನಾ ಎಂದು ಹೇಳಿ ಎಚ್‍ಡಿಕೆ ಓಡಿ ಹೋಗಿದ್ದಾರೆ. ಈಗ ಬಿಜೆಪಿ ಸರ್ಕಾರ ದಿವಾಳಿ ಮಾಡಿದೆ ಎಂದು ಸಿದ್ಧರಾಮಯ್ಯ ಹೇಳ್ತಾರೆ. ಅವರೆಲ್ಲ 6 ವರ್ಷ ಸೇರಿ ದಿವಾಳಿ ಮಾಡಿದ್ದಾರೆ. ಈಗ ಯಡಿಯೂರಪ್ಪ ಅವರು ಜಾದು, ಮಂತ್ರ ಮಾಡಲು ಬರಲ್ಲ ಎಂದು ಎಚ್‍ಡಿಕೆ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ:ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ

    ರಾಜ್ಯ ಸರ್ಕಾರಕ್ಕೆ ತನ್ನ ಸೀಮಿತ ಕೆಲಸ ಮಾಡಲು ಹಣ ಇದೆ. ಪ್ರವಾಹದ ಒಟ್ಟು ಪರಿಹಾರ ಹಣ ಭರಿಸಲು ಆಗಲ್ಲ ಎನ್ನುವ ಭಾವನೆಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ನೆರೆ ಪೀಡಿತ ಪ್ರದೇಶದ ಶಾಸಕರ ಮೇಲೆ ಜನರ ಒತ್ತಡವಿದೆ. ಶಾಸಕ ಆನಂದ ಮಾಮನಿ ಕೇಳಿದ್ದಕ್ಕೆ ಹಣದ ಕೊರತೆ ಇದೆ, ವ್ಯವಸ್ಥೆ ಮಾಡೋದಾಗಿ ಹೇಳಿದ್ದಾರಷ್ಟೇ ಎಂದು ಸಿಎಂ ಹೇಳಿಕೆಯನ್ನು ಯತ್ನಾಳ್ ಸಮರ್ಥಿಸಿಕೊಂಡರು. ಜೊತೆಗೆ ಕೇಂದ್ರ ಸರ್ಕಾರ ಕರ್ನಾಟಕದ ಜನರ ನೋವಿಗೆ ಸ್ಪಂದಿಸಿ ನೆರವಾಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

  • ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ – ಸೂಲಿಬೆಲೆಗೆ ಸಿಂಹ ಟಾಂಗ್

    ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ – ಸೂಲಿಬೆಲೆಗೆ ಸಿಂಹ ಟಾಂಗ್

    ಮೈಸೂರು: ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರಿಗೆ ಮೋದಿಯೇ ಬಂಡವಾಳ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲಿ ವಿರುದ್ಧ ಕಿಡಿಕಾರಿದ್ದಾರೆ.

    ಮೋದಿ ಹೆಸರನ್ನು ಹೇಳಿಕೊಂಡು ಕೆಲ ಸಂಸದರು ಗೆದ್ದಿದ್ದಾರೆ ಎಂಬ ಟೀಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೋದಿ ಅವರ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಮೋದಿ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆಯವರ ಹೆಸರನ್ನು ನೇರವಾಗಿ ಹೇಳದೇ ಟಾಂಗ್ ಕೊಟ್ಟಿದ್ದಾರೆ.

    ಅವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯವರ ಆತ್ಮಕಥೆ ಬರೆದಿದ್ದೆ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ಇವರ ಟೀಕೆ ವಿವೇಚನ ರಹಿತವಾಗಿದೆ. ನಾನಾಗಲಿ ಕೆಲ ಸಂಸದರಾಗಲಿ ಗೆದ್ದಿದ್ದು ಮೋದಿಯವರ ಹೆಸರಿನಿಂದಲೇ. ಆದರೆ ಸದಾನಂದಗೌಡ, ರಮೇಶ್ ಜಿಗಜಣಗಿ, ನಳಿನ್ ಕುಮಾರ್ ಕಟೀಲ್ ಮತ್ತಿತರರು ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮೊದಲೇ ಸಂಸದರಾಗಿದ್ದಾರೆ. ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

    ಮೋದಿಯವರನ್ನು ಟೀಕೆ ಮಾಡಬಾರದು ಎಂದು ನಾನು ಹೇಳಿಲ್ಲ. ವಿಚಾರಗಳನ್ನು ಇಟ್ಟುಕೊಂಡು ಟೀಕೆ ಮಾಡಿ ಎಂದಷ್ಟೆ ಹೇಳಿದ್ದೇನೆ. ಕೇಂದ್ರದ ನೆರೆ ಪರಿಹಾರ ನಿಧಿ ಕರ್ನಾಟಕ ಮಾತ್ರವಲ್ಲದೆ ಉಳಿದ ರಾಜ್ಯಗಳಿಗೂ ಬಂದಿಲ್ಲ. ಮಹಾರಾಷ್ಟ್ರದಲ್ಲಿ 377 ಜನ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 225 ಜನ ಸಾವನ್ನಪ್ಪಿದ್ದಾರೆ ಯಾವ ರಾಜ್ಯಗಳಿಗೂ ಕೇಂದ್ರ ನೆರೆ ಪರಿಹಾರ ನೀಡಿಲ್ಲ. ಅದ್ದರಿಂದ ಮೋದಿಯನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

    ಆ ರಾಜ್ಯಗಳಿಗೆ ಬಿಡುಗಡೆಯಾಗಿ ನಮ್ಮ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಅಂದರೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಬೇಕಿತ್ತು. ಈಗ ನಿಯಮದ ಪ್ರಕಾರವೇ ಎಲ್ಲ ನಡೆಯುತ್ತಿದೆ. ಕಲವೇ ದಿನಗಳಲ್ಲಿ ಪರಿಹಾರದ ಹಣ ಬರುತ್ತದೆ ಎಂದು ಭರವಸೆ ನೀಡಿದರು. ಮೋದಿ ಸರ್ಕಾರ ಕರ್ನಾಟಕ್ಕೆ ಯಾವ ವಿಚಾರದಲ್ಲೂ ಅನ್ಯಾಯ ಮಾಡಿಲ್ಲ. ಕಾವೇರಿ, ಮೇಕೆದಾಟು ಎಲ್ಲಾ ವಿಚಾರದಲ್ಲೂ ಮೋದಿ ಕರ್ನಾಟಕದ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

  • ಸಂಸದರ ಶಕ್ತಿಯನ್ನ ಪ್ರಶ್ನೆ ಮಾಡುವ ಹಾಗಿಲ್ಲ: ಉಮೇಶ್ ಜಾಧವ್

    ಸಂಸದರ ಶಕ್ತಿಯನ್ನ ಪ್ರಶ್ನೆ ಮಾಡುವ ಹಾಗಿಲ್ಲ: ಉಮೇಶ್ ಜಾಧವ್

    ನವದೆಹಲಿ: ನಮ್ಮ ಸಂಸದರ ಶಕ್ತಿಯನ್ನು ಪ್ರಶ್ನೆ ಮಾಡುವ ಹಾಗಿಲ್ಲ. ನಮ್ಮ ಶಕ್ತಿ ಏನು ಎಂಬುದನ್ನು ಜನರು ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ದೆಹಲಿಯ ನಾಯಕರಿಗೆ ಏನು ಮಾಡಬೇಕು ಎಂಬ ವಿಚಾರ ಗೊತ್ತಿದೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನೆರೆ ಪರಿಹಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಉಮೇಶ್ ಜಾಧವ್, ಕೆಲಸ ಮಾಡಿ ಜನರಿಗೆ ಸಂಸದರ ಶಕ್ತಿಯನ್ನು ತೋರಿಸುತ್ತೇವೆ. ಪರಿಹಾರ ನೀಡುವುದರಲ್ಲಿ ಯಾವುದೇ ವಿಳಂಬವಾಗಿಲ್ಲ. ರಾಜ್ಯ ಸರ್ಕಾರದಿಂದ ವರದಿಯನ್ನು ತರಿಸಿಕೊಂಡು ದೆಹಲಿ ನಾಯಕರು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಟ್ವೀಟ್ ಸಹ ಮಾಡಿದ್ದಾರೆ. ನಾನು ಇಂದು ಹಳ್ಳಿಯಿಂದ ದೆಹಲಿಗೆ ಬಂದಿದ್ದು ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

    ಇಷ್ಟು ದಿನ ನಾನು ಕ್ಷೇತ್ರದಲ್ಲಿ ಇದ್ದಿದ್ದರಿಂದ ಇಲ್ಲಿ ಏನಾಗಿದೆ ಎಂಬುವುದು ಗೊತ್ತಿಲ್ಲ. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿಯವರ ಜೊತೆ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಉಮೇಶ್ ಜಾಧವ್ ಹಾರಿಕೆ ಉತ್ತರ ನೀಡಿದರು. ಇದನ್ನೂ ಓದಿ: ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ: ಬಿಎಸ್‍ವೈ ಕಿಡಿ

  • ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ

    ಚಿಕ್ಕಮಗಳೂರು: ಸರ್ಕಾರ ಸಂತ್ರಸ್ತರಿಗೆ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆ ಮಲೆನಾಡಿನಲ್ಲಿ ನಿರಾಶ್ರಿತ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೂಡಿಗೆರೆ ತಾಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ವಿಷ ಸೇವಿಸಿ ಚಂದ್ರೇಗೌಡ(55) ಸಾವಿಗೆ ಶರಣಾಗಿದ್ದಾರೆ. ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಚಂದ್ರೆ ಗೌಡರ ಒಂದು ಎಕ್ರೆ ಗದ್ದೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಯಿಂದ ಹಾನಿಯಾಗಿದ್ದ ಗದ್ದೆ-ತೋಟವನ್ನು ಸರಿ ಮಾಡಲು ರೈತ ಕೈ ಸಾಲ ಕೂಡ ಮಾಡಿಕೊಂಡಿದ್ದರು.

    ಇತ್ತ ಸರ್ಕಾರ ಇಂದು ನೆರೆ ಪರಿಹಾರ ಕೊಡುತ್ತೆ ನಾಳೆ ಪರಿಹಾರ ನೀಡುತ್ತೆ ಎಂದು ಕಾದು ಕುಳಿತಿದ್ದ ಚಂದ್ರೇಗೌಡರು, ಸರ್ಕಾರ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಸಾಕಷ್ಟು ಬೇಸತ್ತು ಹೋಗಿದ್ದರು. ಅತ್ತ ಬೆಳೆ ಹಾನಿಯಾಗಿ ನಷ್ಟವಾಗಿ, ಇತ್ತ ಸಾಲ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದರು. ಹೀಗಾಗಿ ಸಾಲಕ್ಕೆ ಹೆದರಿ, ಪರಿಹಾರ ಹಣ ಬರದಿದ್ದಕ್ಕೆ ನೊಂದು ಚಂದ್ರೆ ಗೌಡರು ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ: ಬಿಎಸ್‍ವೈ ಕಿಡಿ

    ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ: ಬಿಎಸ್‍ವೈ ಕಿಡಿ

    ಮೈಸೂರು: ನೆರೆ ಪರಿಹಾರಕ್ಕೆ ಯಾರ ಶಿಫಾರಸ್ಸು ಬೇಕಾಗಿಲ್ಲ, ಯಾವ ಪಕ್ಷದವರು ಗೊಂದಲ ಉಂಟುಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಟೀಕೆಗಳಿಗೆ ತೀರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇಲ್ಲಿಯವರೆಗೂ ದೇಶದ ಯಾವ ರಾಜ್ಯಕ್ಕೂ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಈಗಷ್ಟೆ ದೇಶಕ್ಕೆ ವಾಪಸ್ಸಾಗಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಘೋಷಣೆಯಾಗುವ ಭರವಸೆ ಇದೆ. ಯಾವ ಪಕ್ಷದವರು ಗೊಂದಲ ಉಂಟು ಮಾಡುವ ಅಗತ್ಯವಿಲ್ಲ. ಯಾರು ದೆಹಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಬುದ್ದಿವಂತರಾಗಿದ್ದು, ಅವರಿಗೆ ಎಲ್ಲಾ ರಾಜ್ಯದ ಪರಿಸ್ಥಿತಿ ಗೊತ್ತಿದೆ. ಶೀಘ್ರದಲ್ಲಿ ಪರಿಹಾರ ಘೋಷಣೆ ಮಾಡುತ್ತಾರೆ ಎಂದು ಮಾತಿನ ಚಾಟಿ ಬೀಸಿದರು.

    ಇದೇ ವೇಳೆ ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿ, ಯಾರ ಫೋನ್ ಕದ್ದಾಲಿಕೆ ಆಗಿದ್ದರು ಸತ್ಯ ಹೊರಬರಲಿದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ನಂತರ ಆ ಬಗ್ಗೆ ಮಾತನಾಡುತ್ತೇನೆ. ಸುತ್ತೂರು ಶ್ರೀಗಳ ಫೋನ್ ಕದ್ದಾಲಿಕೆ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ಹಾಗೆಯೇ ಬಂಡೀಪುರ ರಾತ್ರಿ ಸಂಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಕೋರ್ಟ್ ಮೀರಿ ನಡೆಯೋಕಾಗೋಲ್ಲ. ಈಗಾಗಲೇ ಕೋರ್ಟ್ ರಾತ್ರಿ ಸಂಚಾರ ಬೇಡ ಎಂದು ಆದೇಶ ಹೊರಡಿಸಿದೆ. ಹಾಗಾಗಿ ಕೋರ್ಟ್ ಆದೇಶ ರಾಹುಲ್ ಗಾಂಧಿಯವರಿಗೆ ಗೊತ್ತಿದೆ ಅಂದುಕೊಳ್ಳುತ್ತೇನೆ. ಬಂಡಿಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.