Tag: Flood Relief

  • ನೆರೆ ನಷ್ಟ 1 ಲಕ್ಷ ಕೋಟಿ, ಬಂದಿದ್ದು 3,069 ಕೋಟಿ ಉಳಿದದ್ದು ಯಾವಾಗ- ಸಿದ್ದರಾಮಯ್ಯ ಪ್ರಶ್ನೆ

    ನೆರೆ ನಷ್ಟ 1 ಲಕ್ಷ ಕೋಟಿ, ಬಂದಿದ್ದು 3,069 ಕೋಟಿ ಉಳಿದದ್ದು ಯಾವಾಗ- ಸಿದ್ದರಾಮಯ್ಯ ಪ್ರಶ್ನೆ

    -ಸಿಎಂ ಕೇಳಿದ್ದು 38 ಸಾವಿರ ಕೋಟಿ

    ಬೆಂಗಳೂರು: ರಾಜ್ಯದಲ್ಲಿ ನೆರೆ ನಷ್ಟ ಅಂದಾಜು 1 ಲಕ್ಷ ಕೋಟಿ ರೂ. ಮೋದಿ ಸರ್ಕಾರ ಎರಡು ಕಂತಗಳಲ್ಲಿ 3,069 ಕೋಟಿ ರೂ. ನೀಡಿದೆ. ಉಳಿದ ಪರಿಹಾರವನ್ನು ಯಾವಾಗ ನೀಡಲಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಎರಡನೇ ಕಂತಿನಲ್ಲಿ 1869.85 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿ, ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್: ನೆರೆ ಪರಿಹಾರಕ್ಕಾಗಿ ರೂ.1869 ಕೋಟಿ ಪರಿಹಾರ ನೀಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ಅಂದಾಜು ನೆರೆ ನಷ್ಟ ರೂ.1 ಲಕ್ಷ ಕೋಟಿ. ಸಿಎಂ ಯಡಿಯೂರಪ್ಪ ಸರ್ಕಾರ ಕೇಳಿದ್ದು ರೂ.38 ಸಾವಿರ ಕೋಟಿ ಎರಡು ಕಂತುಗಳಲ್ಲಿ ಕೇಂದ್ರ ನೀಡಿರುವುದು ರೂ.3,069 ಕೋಟಿ. ಉಳಿದದ್ದು ಯಾವಾಗ?

    https://twitter.com/siddaramaiah/status/1214448430170329088

    ಆಗಸ್ಟ್ ತಿಂಗಳ ನೆರೆಹಾವಳಿಯ ಸಮೀಕ್ಷಾ ವರದಿ ಆಧಾರದಲ್ಲಿ ಸಿಎಂ ಯಡಿಯೂರಪ್ಪನವರು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ಸಮೀಕ್ಷೆ ಇನ್ನೂ ನಡೆದಿಲ್ಲ. ಅದನ್ನು ತಕ್ಷಣ ಪೂರ್ಣಗೊಳಿಸಿ. ಆ ಸಮೀಕ್ಷಾ ವರದಿಯ ಜೊತೆ ಪರಿಹಾರಕ್ಕಾಗಿ ಪೂರಕ ಬೇಡಿಕೆ ಸಲ್ಲಿಸಬೇಕೆಂದು ಆಗ್ರಹಿಸುತ್ತೇನೆ.

    ಸೋಮವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಒಟ್ಟು ಏಳು ರಾಜ್ಯಗಳಿಗೆ ನೆರೆ ಪರಿಹಾರ 5908.56 ಕೋಟಿ ಬಿಡುಗಡೆ ಮಾಡಲಾಗಿದೆ. ಎನ್‍ಡಿಆರ್‍ಎಫ್ ಅಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡನೇ ಹಂತದಲ್ಲಿ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ 1200 ಕೋಟಿ ಮಾಡಲಾಗಿತ್ತು. ಒಟ್ಟು ಈವರೆಗೂ 3069.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದಂತಾಗಿದೆ.

    https://twitter.com/siddaramaiah/status/1214449566793134081

    ಈ ಪೈಕಿ ಅಸ್ಸಾಂಗೆ 616.63 ಕೋಟಿ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ, ಕರ್ನಾಟಕಕ್ಕೆ 1869.85 ಕೋಟಿ, ಮಧ್ಯಪ್ರದೇಶಕ್ಕೆ 1749.73 ಕೋಟಿ, ಮಹಾರಾಷ್ಟ್ರಕ್ಕೆ 956.93 ಕೋಟಿ ಮತ್ತು ತ್ರಿಪುರಕ್ಕೆ 63.32 ಕೋಟಿ ಉತ್ತರ ಪ್ರದೇಶಕ್ಕೆ 367.17 ಕೋಟಿ ಬಿಡುಗಡೆ ಮಾಡಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಿಸಿದ ರೇಣುಕಾಚಾರ್ಯ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಿಸಿದ ರೇಣುಕಾಚಾರ್ಯ

    ಧಾರವಾಡ: ಹೊನ್ನಾಳಿ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಪತ್ತೆಯಾಗಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ವರದಿಯನ್ನು ಬಿತ್ತರಿಸಿತ್ತು. ಈ ಹಿನ್ನೆಲೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಈ ಸಾಮಾಗ್ರಿಗಳನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ನೆರೆ ಸಂತ್ರಸ್ತರಿಗೆ ಕೊಡುವ ಕೆಲಸ ಮಾಡಿದ್ದಾರೆ.

    ಇಂದು ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರು, ಸಾಂಕೇತಿಕವಾಗಿ ಸಾಮಾಗ್ರಿಗಳನ್ನು 5 ಮಂದಿ ನೆರೆ ಸಂತ್ರಸ್ತರಿಗೆ ನೀಡಿದರು. ನಂತರ ಮಾತನಾಡಿದ ಅವರು, ಅದು ನನ್ನ ಕಚೇರಿಯಲ್ಲಿ ಇಟ್ಟಿರಲಿಲ್ಲ ಬದಲಾಗಿ ಶಾಸಕರ ಕಚೇರಿ ಎಂದು ಬರೆದಿದ್ದ ಕಚೇರಿಯಲ್ಲಿ ಪರಿಹಾರ ಸಾಮಗ್ರಿ ಇದ್ದವು ಎಂದರು. ಹಾಗೆಯೇ ಎಲ್ಲಾ ಸಾಮಾಗ್ರಿಗಳನ್ನು ಪಾರದರ್ಶಕವಾಗಿಯೇ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಗಳ ತಪ್ಪಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

    ಹೊನ್ನಾಳಿ ತಾಲೂಕಿನ ಜನರೆಲ್ಲಾ ಸೇರಿ ಈ ಸಾಮಗ್ರಿಗಳನ್ನ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ್ದಾರೆ. ಅಧಿಕೃತವಾಗಿ ನಾವು ಸಂಗ್ರಹಣೆ ಮಾಡಿ ಪಾರದರ್ಶಕವಾಗಿ ಕೊಡಲು ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದೇವೆ. ನಾನು ಉಪಚುನಾವಣೆಯ ಕೆಲಸದಲ್ಲಿ ಇದ್ದ ಕಾರಣ ನೇರೆ ಸಾಮಗ್ರಿ ವಿತರಣೆ ತಡವಾಗಿದೆ ಎಂದು ತಿಳಿಸಿದರು.

  • ರಾಜ್ಯಕ್ಕೆ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ

    ರಾಜ್ಯಕ್ಕೆ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ

    ನವದೆಹಲಿ : NDRF ಅಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡನೇ ಹಂತದಲ್ಲಿ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ 1200 ಕೋಟಿ ಮಾಡಲಾಗಿತ್ತು. ಒಟ್ಟು ಈವರೆಗೂ 3069.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದಂತಾಗಿದೆ.

    ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಟ್ಟು ಏಳು ರಾಜ್ಯಗಳಿಗೆ ನೆರೆ ಪರಿಹಾರ ಬಿಡುಗಡೆ ಮಾಡಿದ್ದು 5908.56 ಕೋಟಿ ಬಿಡುಗಡೆ ಮಾಡಿದೆ.

    ಈ ಪೈಕಿ ಅಸ್ಸಾಂ ಗೆ 616.63 ಕೋಟಿ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ, ಕರ್ನಾಟಕಕ್ಕೆ 1869.85 ಕೋಟಿ, ಮಧ್ಯಪ್ರದೇಶಕ್ಕೆ 1749.73 ಕೋಟಿ, ಮಹಾರಾಷ್ಟ್ರಕ್ಕೆ 956.93 ಕೋಟಿ ಮತ್ತು ತ್ರಿಪುರಕ್ಕೆ 63.32 ಕೋಟಿ ಉತ್ತರ ಪ್ರದೇಶಕ್ಕೆ 367.17 ಕೋಟಿ ಬಿಡುಗಡೆ ಮಾಡಿದೆ.

  • ಪ್ರಧಾನಿ ಮೋದಿ ವಿರುದ್ಧ ಕಾಗೋಡು ವಾಗ್ದಾಳಿ

    ಪ್ರಧಾನಿ ಮೋದಿ ವಿರುದ್ಧ ಕಾಗೋಡು ವಾಗ್ದಾಳಿ

    ಶಿವಮೊಗ್ಗ : ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಅನ್ಯಾಯ ಎಸಗಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿ ಉಂಟಾಗಿದ್ದರೂ ಒಂದು ಪೈಸೆ ಕೊಡುವುದಕ್ಕು ಅವರು ಬಾಯಿ ಬಿಡಲಿಲ್ಲ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪ್ರಧಾನಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೋದಿ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಪರಿಹಾರ ಕೇಳಿದರೂ ಮೋದಿ ಸಾರ್ವಜನಿಕವಾಗಿ ಒಂದೇ ಒಂದು ಉತ್ತರ ನೀಡಲಿಲ್ಲ. ರಾಜ್ಯದ ಬಗ್ಗೆ ಮೋದಿಗೆ ಗೌರವವಿಲ್ಲ, ಮಮತೆ ಇಲ್ಲ, ವಿಶ್ವಾಸವಿಲ್ಲ. ಇಂತಹ ಒಬ್ಬ ಪ್ರಧಾನಿ ಹೊಂದಿರುವುದು ನಮ್ಮ ರಾಷ್ಟ್ರದ ದೌರ್ಭಾಗ್ಯ. ಹೀಗಾಗಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ತಿಳಿಸಿದರು.

    ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಸಾರ್ವಜನಿಕರ ಎದುರಿಗೆ ಪರಿಹಾರ ಕೇಳಿದರೂ ಕೊಡದೇ ಇಲ್ಲಿನ ಸರ್ಕಾರವನ್ನು ಮೋದಿ ಲಘುವಾಗಿ ಕಂಡಿದ್ದಾರೆ. ಈ ಸರ್ಕಾರದ ಬಗ್ಗೆ ಅವರಿಗೆ ಗೌರವವಿಲ್ಲ. ಹೀಗಾಗಿ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿ ಕೊಳೆಯುತ್ತ ಬಿದ್ದಿದ್ದಾರೆ ಎಂದು ಕಾಗೋಡು ಆಕ್ರೋಶ ವ್ಯಕ್ತಪಡಿಸಿದ್ದರು.

  • ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಸಿದ್ದರಾಮಯ್ಯ ಮಾತು ಕೇಳಿದ್ರೆ ಮನೆಗೆ ಕಳಿಸ್ಬೇಕಾಗುತ್ತೆ – ಅಧಿಕಾರಿಗಳಿಗೆ ಸೋಮಣ್ಣ ಸೂಚನೆ

    ಬಾಗಲಕೋಟೆ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದ್ದಾರೆ.

    ಬಾಗಲಕೋಟೆ ಪ್ರವಾಸದಲ್ಲಿ ಸಂದರ್ಭದಲ್ಲಿ ತೋಟಗಾರಿಕೆ ವಿವಿಯಲ್ಲಿ ಸಭೆಯಲ್ಲಿದ್ದಾಗ ಸಚಿವರಿಗೆ ಮೈಸೂರಿನಿಂದ ಅಧಿಕಾರಿಗಳ ಕರೆ ಬಂದಿದೆ. ಈ ವೇಳೆ ಫೋನಿನಲ್ಲೇ ಅಧಿಕಾರಿಗಳನ್ನು ಸಚಿವ ವಿ ಸೋಮಣ್ಣ ಗದರಿದ್ದಾರೆ.

    ಸರ್ಕಾರದ ಆದೇಶ ಹೇಗಿದೆಯೋ ಹಾಗೆ ಮಾಡಿ. ಮತ್ತೆ ನೀವು ಹಳೆ ಆದೇಶ ಎಂದು ಸಿದ್ದರಾಮಯ್ಯ ಮಾತು ಕೇಳಿದರೆ ಮನೆಗೆ ಹೋಗ್ತಾಯಿರಿ ರಜೆಹಾಕಿ ಹೋಗಿ ಎಂದು ತರಾಟೆ ತೆಗೆದುಕೊಂಡಿದ್ದಾರೆ.

    ಸರ್ಕಾರದ ಆದೇಶ ಏನಿದೆಯೋ ಅದನ್ನು ಗಂಭೀರವಾಗಿ ಪಾಲನೆ ಮಾಡಿ. ನಾನು ಪೊಲೀಸರಿಗೆ ಈ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇಬ್ಬರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಫೋನಿನಲ್ಲಿ ಅಧಿಕಾರಿಗಳಿಗೆ ಸೋಮಣ್ಣ ಸೂಚಿಸಿದ್ದಾರೆ.

    ಇದೇ ವೇಳೆ ನೆರೆ ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಂಡ ಅಧಿಕಾರಿ ವಿರುದ್ಧ ಸಹ ಸಚಿವರು ಕೆಂಡಾಮಂಡಲರಾಗಿದ್ದಾರೆ. ಕೊಡಗು ಲೋಕೋಪಯೋಗಿ ಎಕ್ಸಿಕ್ಯುಟಿವ್ ಎಂಜಿನಿಯರ್‌ರಿಂದ ಸರ್ಕಾರಿ ಹಣ ದುರುಪಯೋಗ ವಿಚಾರಕ್ಕೆ ಶ್ರೀಕಂಠಯ್ಯ ಅನ್ನೋನು ಯಾವ ವಿಭಾಗದಲ್ಲಿದ್ದಾನೆ? ತಕ್ಷಣವೇ ಅವನಿಗೆ ಶೋಕಾಸ್ ನೋಟೀಸ್ ನೀಡಿ ಎಂದು ಆದೇಶಿಸಿದ್ದಾರೆ.

    ತಕ್ಷಣದಿಂದಲೇ ಆತನನ್ನು ರೀಲೀವ್ ಮಾಡಿ. ಅವನ ಮೇಲೆ ಕ್ರಮ ಕೈಗೊಳ್ಳಿ, ರಿಲೀವ್ ಮಾಡಿ ನನಗೆ ತಕ್ಷಣ ಅದರ ಪ್ರತಿ ಕಳುಹಿಸಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಫೋನ್ ಮೂಲಕ ಸೂಚನೆ ನೀಡಿದ್ದಾರೆ.

    ಪ್ರಕೃತಿ ವಿಕೋಪದಡಿ ಸರ್ಕಾರದಿಂದ ನೀಡಿದ್ದ 21 ಕೋಟಿ ರೂ. ಹಣವನ್ನು ಅಧಿಕಾರಿ ಶ್ರೀಕಂಠಯ್ಯ ಖಾಸಗಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಖಾಸಗಿ ಬ್ಯಾಂಕ್ ನಲ್ಲಿ ದುಡ್ಡು ಜಮೆ ಮಾಡಿದ್ದು ತಪ್ಪು, ನಿಯಮಗಳನ್ನು ಮೀರಿದ್ದಾನೆ. ಹೀಗಾಗಿ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ನಾನು ಬರುವುದಕ್ಕಿಂತ ಮೊದಲು ಆಗಿರುವ ಪ್ರಕರಣ ಇದು. ನಾನು ಬಂದು ಒಂದೂವರೆ ತಿಂಗಳಾಗಿದೆ. ಹಾಗಾಗಿ ಇದನ್ನು ತೀಕ್ಷ್ಣವಾಗಿ ತೆಗೆದುಕೊಳ್ಳುತ್ತೇವೆ. ಎಷ್ಟೇ ದೊಡ್ಡವರಾಗಲಿ, ಎಲ್ಲೂ ಈ ರೀತಿ ಆಗಬಾರದು. ಇಂತಹ ಪಾಪಿಗಳು ಇರುವುದರಿಂದಲೇ, ಪ್ರಕೃತಿ ತಾಯಿ ತೊಂದರೆ ಕೊಡುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ನೆರೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ-ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ

    ನೆರೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ-ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ

    ಯಾದಗಿರಿ: ನೆರೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಸ್ಥಳೀಯ ರಾಜಕೀಯ ಮುಖಂಡರೊಂದಿಗೆ ಸೇರಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

    ಭಾರೀ ಮಳೆಯಿಂದಾಗಿ ತತ್ತರಿಸಿದ್ದ ಜನ ಈಗ ತಾನೇ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಯಾದಗಿರಿಯಲ್ಲಿ ಪ್ರವಾಹ ಕಡಿಮೆಯಾದರೂ ಕೆಲ ಗ್ರಾಮಗಳ ಸಂತ್ರಸ್ತರ ಪಾಲಿಗೆ ಸ್ಥಳೀಯ ರಾಜಕೀಯವೇ ಮುಳುವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.

    ಉತ್ತರ ಕರ್ನಾಟಕ ರಣಭೀಕರ ಪ್ರವಾಹದಿಂದ ಇನ್ನೂ ಹೊರ ಬರಲಾಗುತ್ತಿಲ್ಲ. ನೆರೆ ನಿಂತರು ಅದರಿಂದ ಆಗಿರುವ ಅನಾಹುತದ ನೆರಳು ಜನರನ್ನು ಇನ್ನು ಆವರಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ನದಿ ಪಾತ್ರದ ಗ್ರಾಮಗಳದ್ದೂ ಅದೇ ಪರಿಸ್ಥಿತಿ ಇತ್ತು. ಒಂದೇ ತಿಂಗಳ ಅಂತರದಲ್ಲಿ ಸುಮಾರು ಮೂರು ಬಾರಿ ಪ್ರವಾಹ ಉಂಟಾಗಿ, ಜಿಲ್ಲೆಯ ಗೌಡೂರು, ಯಕ್ಷಚಿಂತಿ, ಕೊಳ್ಳೂರು, ನೀಲಕಂಠರಾಯನ ಗಡ್ಡಿ ಗ್ರಾಮಸ್ಥರ ಬದುಕು ಹೇಳತೀರದಾಗಿದೆ.

    ಜನ ಇಷ್ಟೆಲ್ಲಾ ಅನುಭವಿಸುತ್ತಿದ್ದರೆ, ರಾಜಕಾರಣಿಗಳು ಜಿಲ್ಲೆಗೆ ಸಾಕಷ್ಟು ಪರಿಹಾರ ನೀಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಜಿಲ್ಲೆಯ ಗೌಡೂರು ಗ್ರಾಮದ ಕೆಲ ಗ್ರಾಮಸ್ಥರಿಗೆ ಪರಿಹಾರ ಇರಲಿ ಮಾನವೀಯತೆಗಾಗಿ ಯಾವ ಅಧಿಕಾರಿಯೂ ಧೈರ್ಯ ತುಂಬಿಲ್ಲ. ಕೇವಲ ಕಾಟಾಚಾರಕ್ಕೆ ನೆರೆ ವೀಕ್ಷಣೆ ಮಾಡಿ ವರದಿ ತಯಾರಿಸಿದ್ದಾರೆ. ಇದರ ನಡುವೆ ಗ್ರಾಮದ ಕೆಲ ಮುಖಂಡರು ಅರ್ಹ ಸಂತ್ರಸ್ತರನ್ನು ಬಿಟ್ಟು ಅನರ್ಹ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದ್ದು, ಇದಕ್ಕೆ ಸ್ಥಳೀಯ ಮಟ್ಟದ ಅಧಿಕಾರಿಗಳೂ ಕುಮ್ಮಕ್ಕು ನೀಡುತ್ತಿದ್ದಾರೆ. ಒಂದೇ ವಾರ್ಡ್ ನಲ್ಲಿ ಒಂದು ಮನೆಗೆ ಪರಿಹಾರ ಕೊಟ್ಟು ಮತ್ತೊಂದು ಮನೆಗೆ ಕೊಡದಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ಮುನ್ಸೂಚನೆ ಇಲ್ಲದೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿಯ ಕೂಗಳತೆಯಲ್ಲಿ ಗೌಡೂರು ಗ್ರಾಮ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಯಾವ ಸಮಯದಲ್ಲಿ ನೀರು ನುಗ್ಗುತ್ತೆ ಅನ್ನೋ ಭಯದಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಸದ್ಯ ಪ್ರವಾಹ ತಗ್ಗಿದ್ದು, ಸೊಳ್ಳೆ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಸೃಷ್ಠಿಯಾಗುತ್ತಿವೆ. ಇದು ಸಹ ಗ್ರಾಮಸ್ಥರ ಆತಂಕವನ್ನು ಹೆಚ್ಚಿಸಿದೆ. ಅಲ್ಲದೆ ನದಿಯ ಅಂಚಿನಲ್ಲಿ ಇರುವುದರಿಂದ ಗ್ರಾಮವನ್ನು ಸ್ಥಳಾಂತರ ಮಾಡಬೇಕು ಅನ್ನೋದು ಇಲ್ಲಿನ ಗ್ರಾಮಸ್ಥರ ಬಹುದಿನದ ಬೇಡಿಕೆ. ಈ ಬಗ್ಗೆ ಜಿಲ್ಲಾಡಳಿತ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

    ಒಟ್ಟಿನಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಗೌಡೂರು ಗ್ರಾಮದ ಜನರ ಬದುಕು ಕೊಚ್ಚಿಹೋಗುತ್ತಿದೆ. ಮತ್ತೊಂದು ಕಡೆ ನಮ್ಮವರೇ ನಮಗೆ ವೈರಿ ಎನ್ನುವಂತೆ, ಗ್ರಾಮದ ಕೆಲ ಅಮಾನವೀಯ ಮುಖಂಡರ ಸ್ಥಳೀಯ ರಾಜಕೀಯ, ಇಲ್ಲಿನ ಸಂತ್ರಸ್ತರನ್ನು ನರಳುವಂತೆ ಮಾಡಿದೆ.

  • 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ: ಈಶ್ವರ್ ಖಂಡ್ರೆ

    -ಬಿಜೆಪಿ ನೂರು ಸಲ ಸುಳ್ಳು ಹೇಳಿ ಸತ್ಯ ಎನ್ನುತ್ತೆ

    ಬೀದರ್: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಹಿನ್ನೆಲೆ ಬೀದರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೆರೆ ಬಂದು ಇಷ್ಟು ದಿನ ಆದರೂ ಕೇಂದ್ರ ಸರ್ಕಾರ ನೈಯಾ ಪೈಸೆ ಪರಿಹಾರ ಕೊಟ್ಟಿಲ್ಲಾ. ಕೇಂದ್ರ ಸರ್ಕಾರ ಬರಿ ಹೇಳಿಕೆ ಕೋಡೋದೆ ಆಯ್ತು. ಕೊನೆಗೂ ಅತ್ತು ಕರೆದು ತುಟಿಗೆ ತುಪ್ಪ ಹಚ್ಚುವ ಹಾಗೆ 1,200 ಕೋಟಿ ರೂ. ಪರಿಹಾರ ನೀಡಿದೆ ಎಂದು ಹರಿಹಾಯ್ದರು. ಜೊತೆಗೆ ಮೋದಿ ಅವರ ಭೇಟಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅನುಮತಿ ಕೊಟ್ಟಿಲ್ಲ. ಈ ಮೂಲಕ 7 ಕೋಟಿ ಕನ್ನಡಿಗರಿಗೆ ಮೋದಿ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಬಿಜೆಪಿಯವರು ನೂರು ಸಲ ಸುಳ್ಳನ್ನು ಹೇಳಿ ಸತ್ಯ ಎಂಬಂತೆ ಬಿಂಬಿಸುತ್ತಾರೆ. ಹೀಗಾಗಿ ಉಪ ಚುನಾವಣೆಯಲ್ಲಿ 15 ಸೀಟು ನಮಗೆ ಕೊಡುವ ಮೂಲಕ ಜನರು ತಕ್ಕ ಪಾಠ ಕಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ನೆರೆ ಸಂತ್ರಸ್ತರೇನು ಭಿಕ್ಷುಕರಲ್ಲ- ಮತ್ತೆ ಸಿಡಿದೆದ್ದ ಯತ್ನಾಳ್

    ನೆರೆ ಸಂತ್ರಸ್ತರೇನು ಭಿಕ್ಷುಕರಲ್ಲ- ಮತ್ತೆ ಸಿಡಿದೆದ್ದ ಯತ್ನಾಳ್

    ಬಾಗಲಕೋಟೆ: ಉತ್ತರ ಕರ್ನಾಟಕದ ನೆರೆ ಪರಿಹಾರ ವಿಳಂಬ ಪ್ರಶ್ನಿಸಿ ಗುಡುಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಬಾಗಲಕೋಟೆಯ ಬನಹಟ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತರೇನು ಭಿಕ್ಷೆ ಬೇಡುತ್ತಿಲ್ಲ. ಸಂತ್ರಸ್ತರು ಎಲ್ಲರೂ ಅನುಕೂಲವಾಗಿದ್ದವರು. ಏನೋ ದುರ್ದೈವದಿಂದ ಇಂತಹ ಕಷ್ಟ ಬಂದಿದೆ. ನಾವು ಸಂತ್ರಸ್ತರನ್ನು ಭಿಕ್ಷುಕರಂತೆ ನೋಡಬಾರದು. ಹಾಗೆ ನೋಡಿದರೆ ಚುನಾವಣೆಯಲ್ಲಿ ನಮಗೂ ಭಿಕ್ಷೆ ಬೇಡೋ ಪರಿಸ್ಥಿತಿ ಬರುತ್ತೆ ಎಂದು ಕೇಂದ್ರದ ನಾಯಕರಿಗೆ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ:ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಸಿಡಿದ ಯತ್ನಾಳ್

    ಎಲ್ಲಿ ಜನ ಕಷ್ಟದಲ್ಲಿದ್ದಾರೋ, ಎಲ್ಲಿ ಪ್ರವಾಹ ಪೀಡಿತರಿದ್ದಾರೋ ಅವರಿಗೆ ಸೂಕ್ತ ಪರಿಹಾರ ಕೊಡಬೇಕು. ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಕೊಡದಿರೋದೇ ಜನರನ್ನು ಸಿಟ್ಟಿಗೇಳಿಸಿದೆ. ನಾಲ್ಕುನೂರು ಕೋಟಿ ರೂಪಾಯಿಯನ್ನು ನಾಲಕ್ಕೇ ದಿನಕ್ಕೆ ಬಿಹಾರಕ್ಕೆ ಕೊಡುತ್ತೀರಿ. ಆದರೆ 25 ಸಂಸದರನ್ನು ಕೊಟ್ಟ ಕರ್ನಾಟಕಕ್ಕೆ 65 ದಿನ ಆದರೂ ಪರಿಹಾರ ಕೊಡೋದಿಲ್ಲ. ಪ್ರವಾಹದ ನಿರ್ಲಕ್ಷ್ಯದ ಬಗೆಗಿನ ತಮ್ಮೊಳಗಿನ ಭೇಗುದಿಯನ್ನು ಕೊಲ್ಹಾಪುರ ಸಾಂಗ್ಲಿ ಚುನಾವಣೆಯಲ್ಲಿ ಜನ ಹೊರಹಾಕಿದ್ದಾರೆ. ಆ ಪರಿಸ್ಥಿತಿ ಕರ್ನಾಟಕದಲ್ಲಿ ಮುಂದುವರಿಯಬಾರದು ಅಂದರೆ ರಾಜ್ಯ ಪ್ರವಾಹ ಪರಿಸ್ಥಿತಿ ಉಸ್ತುವಾರಿಗಾಗಿ ಕೇಂದ್ರದ ಒಬ್ಬ ಮಂತ್ರಿಯನ್ನು ನೇಮಿಸಬೇಕು. ಆ ಮೂಲಕ ಪ್ರವಾಹ ಪೀಡಿತರಿಗೆ ಯೋಗ್ಯ ಪರಿಹಾರ, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
    ಇದನ್ನೂ ಓದಿ:ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ

    ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ವಿಚಾರವಾಗಿ ಮಾತನಾಡಿ, ಒಟ್ಟಾರೆ ಜನರ ಭಾವನೆಯೆ ಬೇರೆ ಇದೆ. ಜನ ಏನು ತೀರ್ಪು ಕೊಟ್ಟಿದ್ದಾರೆ ಇದರ ಮೇಲೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ಭಾವನೆ ಏನಿದೆ ಎಂದು ತಿಳಿದುಕೊಳ್ಳಬೇಕು. ಯಡಿಯೂರಪ್ಪ ನಾಯಕತ್ವದಿಂದಲೇ ನಾವು 104 ಸ್ಥಾನ ಗೆದ್ದಿದ್ದೇವೆ. ಮಹಾರಾಷ್ಟ್ರದಲ್ಲಿ ನಾವೆಷ್ಟು ಸ್ಥಾನದಲ್ಲಿ ಗೆದ್ದಿದ್ದೇವೆ? ಶಿವಸೇನೆ ಎಷ್ಟು ಗೆದ್ದಿದೆ ಎಂದು ತಿಳಿದುಕೊಳ್ಳಬೇಕು. ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಬೇಕು. ಹೇಗೆ ದೇಶಕ್ಕೆ ಮೋದಿ, ಅಮಿತ್ ಶಾ ಇದ್ದಾರೆಯೋ, ಅದೇ ರೀತಿ ರಾಜ್ಯಕ್ಕೂ, ಜಿಲ್ಲೆಗೂ ಸ್ಥಳೀಯ ನಾಯಕತ್ವ ಬೇಕು. ಅದರ ಮೇಲೆ ನಾವು ಚುನಾವಣೆಗೆ ಹೋಗಬೇಕು ಎಂದರು. ಇದನ್ನೂ ಓದಿ: ನನ್ನ ಹೇಳಿಕೆಯಿಂದ ಪಕ್ಷದ ಘನತೆ ಹೆಚ್ಚಿದೆಯೇ ಹೊರತು ಧಕ್ಕೆ ಆಗಿಲ್ಲ: ಯತ್ನಾಳ್

    ಹಾಗೆಯೇ ನಾವು ನಮಗೆ ಬೇಕಾದ ನಿರ್ಣಯ ಕೈಗೊಂಡರೆ ಜನ ಅದನ್ನು ಒಪ್ಪಬೇಕು ಅಂತೇನಿಲ್ಲ. ಎರಡು ರಾಜ್ಯದ ಚುನಾವಣೆ ನೋಡಿಕೊಂಡು ರಾಜ್ಯ ಬಿಜೆಪಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉಪಚುನಾವಣೆಯೊಳಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಬಿಜೆಪಿಯನ್ನು ಎಚ್ಚರಿಸಿದರು.

  • ‘ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಬರೆದುಕೊ’- ತಹಶೀಲ್ದಾರ್ ಮೇಲೆ ಸಿದ್ದು ಗರಂ

    ‘ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಬರೆದುಕೊ’- ತಹಶೀಲ್ದಾರ್ ಮೇಲೆ ಸಿದ್ದು ಗರಂ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿಗೆ ಆಗಮಿಸಿದ್ದು, ಮೊದಲಿಗೆ ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿರುವ ಕರ್ಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

    ಸಿದ್ದರಾಮಯ್ಯ ಅವರು ಆಗಮಿಸುತ್ತಿದಂತೆ ಕರ್ಲಕೊಪ್ಪ ಗ್ರಾಮದಲ್ಲಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಇದ್ದ ದೇವಸ್ಥಾನದೊಳಗೆ ಸಿದ್ದರಾಮಯ್ಯ ತೆರಳಿದರು. ಆ ಬಳಿಕ ಅಲ್ಲಿಯೇ ಕುಳಿತು, ನೆರೆ ಸಂತ್ರಸ್ತರ ಅಹವಾಲು ಆಲಿಸಿದರು.

    ಸಿದ್ದರಾಮಯ್ಯ ಅವರ ಎದುರು ತಮ್ಮ ಅಳಲು ತೊಡಿಕೊಂಡ ಗ್ರಾಮಸ್ಥರು, ಮಳೆಯಿಂದ ನೆಲಕ್ಕೆ ಉರುಳಿದ ಮನೆಗಳ ಸರ್ವೆಯಲ್ಲಿ ಲೋಪವಾಗಿದೆ. ಅಲ್ಲದೇ ತಾತ್ಕಾಲಿಕ ಪರಿಹಾರದಲ್ಲಿ ದೋಷದ ಉಂಟಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ ಅವರು, ತಾತ್ಕಾಲಿಕ ಪರಿಹಾರ ಪಡಿತರ ಚೀಟಿ ಆಧರಿಸಿ ವಿತರಿಸಬೇಕು ಎಂದರು. ಈ ವೇಳೆ ಸಿದ್ದರಾಮಯ್ಯರ ಸೂಚನೆಗಳನ್ನು ಪಡೆದ ಅಧಿಕಾರಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಆದರೆ ಅಧಿಕಾರಿಯ ಉತ್ತರದಿಂದ ಸಂತೃಪ್ತರಾಗದ ಅವರು, ನಾನು ಹೇಳೋದನ್ನ ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಅದನ್ನು ಬರೆದುಕೊ. ಸರ್ವೆ ಆದ ಮೇಲೂ ಹಲವರ ಮನೆ ಬಿದ್ದಿವೆ. ಆದ್ದರಿಂದ ರೀ ಸರ್ವೆ ಆಗಬೇಕು. ಒಂದೇ ಮನೆಯಲ್ಲಿ ಅಣ್ಣ-ತಮ್ಮ ಇದ್ದರೆ ಪರಿಹಾರ ಹಂಚಿ, ಒಬ್ಬರಿಗೆ ಪರಿಹಾರ ಕೊಟ್ಟರೆ ಮನೆಯಲ್ಲಿ ಉಳಿದವರು ನಾಮ ಹಾಕಿಕೊಳ್ಳಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.

    ಬಿದ್ದ ಮನೆಯಲ್ಲಿ ಎರಡು ಹಂತದ ಪರಿಹಾರ ನೀಡಿ, ಶೇ. 25ಕ್ಕಿಂತ ಕಡಿಮೆ ಬಿದ್ದಿದ್ದರೆ 50 ಸಾವಿರ ರೂ. ಹಾಗೂ ಶೇ.25 ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಎಲ್ಲಾ ಮನೆಗಳಿಗೂ ಐದು ಲಕ್ಷ ರೂ. ಪರಿಹಾರ ನೀಡಿ. ಇದಕ್ಕೆ ವಿಧಾನಸೌಧದಲ್ಲಿ ಸರ್ಕಾರವೂ ಒಪ್ಪಿಗೆ ನೀಡಿದೆ. ಆ ಪ್ರಕಾರವೇ ಸರ್ವೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

  • 13 ವರ್ಷದ ಬಾಲಕಿ ಗ್ರಾಮದ ಲೆಕ್ಕಾಧಿಕಾರಿ? – ಬಾಲಕಿಗೆ ಕೆಲಸ ಕೊಟ್ಟು ವಿಎ ಚಕ್ಕರ್

    13 ವರ್ಷದ ಬಾಲಕಿ ಗ್ರಾಮದ ಲೆಕ್ಕಾಧಿಕಾರಿ? – ಬಾಲಕಿಗೆ ಕೆಲಸ ಕೊಟ್ಟು ವಿಎ ಚಕ್ಕರ್

    ಬೆಳಗಾವಿ: ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಬಿದ್ದಿರುವ ಮನೆ, ಹಾನಿಯಾದ ಜಮೀನಿನ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕಿದ್ದ ಗ್ರಾಮ ಲೆಕ್ಕಾಧಿಕಾರಿ ಸೇವೆಗೆ ಗೈರು ಹಾಜರಿಯಾಗಿದ್ದು, ಈ ಸ್ಥಾನದಲ್ಲಿ 13 ವರ್ಷದ ಬಾಲಕಿಯನ್ನು ತಂದು ಕೂರಿಸಿ ಕೆಲಸ ಮಾಡಿಸಿಕೊಳ್ಳುತ್ತಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ನಡೆದಿದೆ.

    ದೊಡವಾಡ ಪಂಚಾಯಿತಿ ಕಚೇರಿಯಲ್ಲಿ ಕುಳಿತ ಬಾಲಕಿ ಗ್ರಾಮಸ್ಥರಿಂದ ಕಾಗದ ಪಾತ್ರಗಳನ್ನು ಪಡೆದು, ಮಳೆಯಿಂದ ಉಂಟಾಗಿದ್ದ ನಷ್ಟ ಪ್ರಮಾಣವನ್ನು ಸರ್ಕಾರಿ ಕಚೇರಿ ಪುಸ್ತಕದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಳು. ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದ ವೇಳೆ ನಮ್ಮ ಮಾವನವರಿಗೆ ಅನಾರೋಗ್ಯವಾಗಿದ್ದು, ಅವರ ಸಲುವಾಗಿ ಕಚೇರಿಗೆ ಬಂದಿದ್ದೇನೆ. ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಆದರೆ ಯಾವುದೋ ಮೀಟಿಂಗ್ ಇದೇ ಎಂದು ತೆರಳಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ.

    ಮಾಧ್ಯಮಗಳಲ್ಲಿ ಈ ಕುರಿತ ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಗ್ರಾಮಪಂಚಾಯಿತಿ ಅಧಿಕಾರಿಗಳು ಬಾಲಕಿಯನ್ನು ಕಚೇರಿಯಿಂದ ಹೊರ ಕಳುಹಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಆದರೆ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ಬಾಲಕಿ ಯಾರು? ಆಕೆಗೆ ಯಾರು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದರು. ಅಲ್ಲದೇ ಬಾಲಕಿ ಹೇಳಿದ್ದ ಆಕೆಯ ಮಾವ ಯಾರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.

    ಸರ್ಕಾರಿ ಅಧಿಕಾರಿಗಳು ನೆರೆಯಿಂದ ಸಮಸ್ಯೆ ಎದುರಿಸಿದ್ದ ಜನರಿಂದ ಸೂಕ್ತ ಮಾಹಿತಿ ಪಡೆದು ತ್ವರಿತ ಪರಿಹಾರ ನೀಡುವಂತಹ ಕಾರ್ಯ ಮಾಡಬೇಕಿದೆ. ಆದರೆ ಅಧಿಕಾರಿಗಳೇ ಮಾಹಿತಿ ಸಂಗ್ರಹಿಸಲು ಅಸಡ್ಡೆ ತೋರಿಸಿ ಬಾಲಕಿ ಕೈಯಿಂದ ಇಂತಹ ಕೆಲಸ ಮಾಡಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.