Tag: Flood Relief Funds

  • ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

    ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

    – ಸಂತ್ರಸ್ತರಾದ ರೈತರಿಗಿಲ್ಲ ಪರಿಹಾರ
    – ಬೇರೆ ರೈತರ ಖಾತೆಗೆ ಸರ್ಕಾರದ ದುಡ್ಡು

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮುಷ್ಟಳ್ಳಿ ಗ್ರಾಮದ ನೂರಾರು ಎಕರೆ ಜಮೀನು ಕೃಷ್ಣಾ ನದಿಯ ನಿರಿನಿಂದ ಸಂಪೂರ್ಣ ಮುಳುಗಡೆಯಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ನೀಡಿತ್ತು. ಈಗಾಗಲೇ ಒಂದಿಷ್ಟು ರೈತರ ಖಾತೆಗೆ ಪರಿಹಾರ ಹಣ ಬಂದಿದ್ದು, ಇನ್ನುಳಿದ ರೈತರಿಗೆ ಬಂದಿಲ್ಲ. ಇದಕ್ಕೆ ಕಾರಣ ರೈತರ ಹೆಸರಲ್ಲಿ ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸೀವ್ ದಾಖಲೆಗಳು ದೊರೆತಿವೆ.

    ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾನಿಯಾದ ಸ್ಥಳಗಳಲ್ಲಿ ವಾರಗಟ್ಟಲೆ ಬೀಡುಬಿಟ್ಟು ಸಮೀಕ್ಷೆ ನಡೆಸಿ ಹಾನಿಯಾದ ಪ್ರದೇಶಗಳ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ನೀಡಿತ್ತು. ರೈತರ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಭರ್ತಿ ಮಾಡಲು ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ದೇಶಪಾಂಡೆಗೆ ಜವಾಬ್ದಾರಿ ನೀಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಲೆಕ್ಕಾಧಿಕಾರಿ, ಇಲ್ಲಿ ರೈತರ ಹೆಸರಿನಲ್ಲಿರುವ ಜಮೀನುಗಳ ಪರಿಹಾರದ ಹಣ ಬೆರೆಯವರ ಖಾತೆಗೆ ಜಮಾ ಮಾಡಿದ್ದಾನೆ. ಅಲ್ಲದೆ ಜಮೀನಿನ ಮಾಲೀಕನಿಗೆ ಗೊತ್ತಿಲ್ಲದ ಹಾಗೆ ಹಣ ಲಪಟಾಯಿಸಿದ್ದಾನಂತೆ. ಇನ್ನೂ ಕೆಲ ರೈತರಿಂದ ಲಂಚಪಡೆದು ಹಾನಿಗೊಳಗಾದ ರೈತರ ಜಮೀನಿಗೂ ಸಹ ಪರಿಹಾರ ನೀಡಿದ್ದಾನೆ. ಇದರಿಂದ ಅರ್ಹ ರೈತರನ್ನು ಬಿಟ್ಟು ಸಂಬಂಧವೇ ಇಲ್ಲದ ರೈತರ ಖಾತೆಗೆ ಸಾವಿರಾರು ರೂಪಾಯಿ ಜಮಾ ಆಗಿದೆ. ನದಿ ದಡದ ಜಮೀನು ಹೊಂದಿರುವ ರೈತರಿಗೆ ಪರಿಹಾರದ ಹಣವೇ ಬಂದಿಲ್ಲ. ಆದರೆ ನದಿಯಿಂದ ಸುಮಾರು 2 ರಿಂದ 3 ಕಿ. ಮೀ ದೂರದಲ್ಲಿ ಜಮೀನು ಹೊಂದಿರುವ ರೈತರಿಗೆ ಪರಿಹಾರ ಹಣ ಜಮಾ ಆಗಿದೆ.

    ಅಕ್ರಮವಾಗಿ ಹಣ ಪಡೆದ ರೈತರ ಸರ್ವೆ ನಂಬರ್ ಹಾಗೂ ಸಿಕ್ಕಿದ ಪರಿಹಾರ ಇಂತಿದೆ:
    * 18-46,9995
    * 52-46998
    * 42-20,159
    * 43/5-19738
    * 53/1-18797
    * 22-18798

    ಅರ್ಹ ರೈತನ ಜಮೀನು ಇನ್ಯಾರದ್ದೋ ಖಾತೆ:
    ಸರ್ವೆ 18/2- 46998 ಇವರಿಗೆ ಸೇರಬೇಕಿದ್ದ ಹಣ ಇವರಿಗೆ ಸಂಬಂಧವೇ ಇಲ್ಲ ಶಾಮಲಾಬಾಯಿ ಎಂಬುವವರ ಖಾತೆಗೆ 46,998 ರೂ ಜಮಾ ಆಗಿದೆ.

    ಹಾನಿಗೊಳಗಾದ್ರೂ ಪರಿಹಾರ ಸಿಕ್ಕಿಲ್ಲ:
    ಸರ್ವೆ ನಂಬರ್ 97 ರ ಯಂಕಪ್ಪ ಭೀಮಣ್ಣ, ಸರ್ವೆ ನಂಬರ್ 87ರ ವಿರೂಪಾಕ್ಷ ಬಸವರಾಜ್, ಸರ್ವೆ ನಂಬರ್ 101/1ರ ಮಲ್ಲನಗೌಡ, ಸರ್ವೆ ನಂಬರ್ 62 ರ ಗೌಸ್ ಹಾಗೂ ಸರ್ವೆ ನಂಬರ್. 72ರ ಮಲ್ಲಿಕಾರ್ಜುನರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.

    ಹೀಗೆ ಈ ಗ್ರಾಮದಲ್ಲಿ ಒಟ್ಟು 65 ಜನ ರೈತರಿಗೆ ಪ್ರವಾಹದ ಬೆಳೆ ಪರಿಹಾರ ಬಂದಿದೆ. ಆದರೆ ಇದರಲ್ಲಿ ಶೇ.50 ರಷ್ಟು ಅರ್ಹರಲ್ಲದ ರೈತರಿಗೆ ಹಣ ಜಮಾವಣೆ ಆಗಿದ್ದು, ಇದರಲ್ಲಿ ಗ್ರಾಮ ಲೆಕ್ಕಿಗ ಶ್ರೀನಿವಾಸ್ ದೇಶಪಾಂಡೆ ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತದೆ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ದರೂ ತಹಶೀಲ್ದಾರರು ಏನು ಮಾಡುತ್ತಿದ್ದರು ಎಂಬ ಅನುಮಾನ ಎದ್ದಿದೆ.

  • ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು – ಯತ್ನಾಳ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು – ಯತ್ನಾಳ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

    ನವದೆಹಲಿ: ಪ್ರವಾಹಕ್ಕೆ ಅನುದಾನ ಪ್ರಕಟಿಸದ್ದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸಂಸದರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.

    ನೆರೆ ಪರಿಹಾರವನ್ನು ಪ್ರಶ್ನಿಸಿ ರಾಜ್ಯ ಸಂಸದರ ಹೇಳಿಕೆಗಳನ್ನು ಯತ್ನಾಳ್ ಅವರು ಟೀಕೆ ಮಾಡಿದ್ದರು. ಅಲ್ಲದೇ ಸಂಸದ ಈ ನಡೆಯಿಂದ ಮೋದಿ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದಿದ್ದರು.

     

    ಯತ್ನಾಳ್ ಅವರ ಈ ಹೇಳಿಕೆಯಿಂದ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು, ಕೇಂದ್ರ ಶಿಸ್ತು ಸಮಿತಿಯ ಓಂ ಪಾಠಕ್ ಅವರು ನೋಟಿಸ್ ನೀಡಿದ್ದಾರೆ. ನೆರೆ ಪರಿಹಾರ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೇ ಈ ಹೇಳಿಕೆಯ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಪಕ್ಷ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂಬುವುದರ ಕುರಿತು ವಿವರಣೆಯನ್ನು 10 ದಿನಗಳ ಒಳಗೆ ನೀಡಲು ಸೂಚನೆ ನೀಡಿದ್ದಾರೆ. ನೋಟಿಸ್ ವಿವರಣೆ ನೀಡದಿದ್ದರೆ ಪಕ್ಷದ ನಿಯಮಗಳ ಅನ್ವಯ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ನೋಟಿಸ್‍ನಲ್ಲೇನಿದೆ?
    ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ಓಂ ಪಾಠಕ್ ಅವರಿಂದ ನೋಟಿಸ್ ಜಾರಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪಕ್ಷದ ನಾಯಕರಾಗಿ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕರ್ನಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂಬ ಆರೋಪವನ್ನು ಮಾಡಿ ಸರ್ಕಾರ ಮೇಲೆ ಜನರಿಗೆ ಋಣಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಿದ್ದೀರಿ. ಈ ಬಗ್ಗೆ ಪಕ್ಷದ ನಾಯಕರಾಗಿ ವಿವರಣೆ ನೀಡಿ ಎಂದು ಸೂಚಿಸಲಾಗಿದೆ.

    ಯತ್ನಾಳ್ ಹೇಳಿದ್ದೇನು?
    ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಅಂತ ನಮೋ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದರು. ಸೂಲಿಬೆಲೆ ಅವರ ಈ ಹೇಳಿಕೆ ಬೆಂಬಲ ನೀಡಿದ್ದ, ಬಿಜೆಪಿ ಶಾಸಕ ಯತ್ನಾಳ್ ಅವರು, ಸೂಲಿಬೆಲೆಗೆ ಬೈಯ್ದು, ಪ್ರಧಾನಿ ಮೋದಿಗೆ ಅವಮಾನ ಮಾಡಬೇಡಿ. ರಾಜ್ಯದ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಹುಬ್ಬಳ್ಳಿ- ಬೆಂಗಳೂರಿನಲ್ಲಿ ಇರುವ ಬದಲು ಮೊದಲು ದೆಹಲಿಗೆ ಹೋಗಿ ಕೆಲಸ ಮಾಡಿ. ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

  • ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ಸೂಲಿಬೆಲೆ ದೇಶದ್ರೋಹಿನಾ? – ಡಿವಿಎಸ್ ಪರೋಕ್ಷ ಕಿಡಿ

    ಬೆಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಪರೋಕ್ಷವಾಗಿ ದೇಶದ್ರೋಹಿ ಎಂದು ಕರೆದಿದ್ದಾರೆ. ಅವರ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಯಾರೋ ಕುಳಿತುಕೊಂಡು ಟ್ವೀಟ್ ಮಾಡುತ್ತಾರೆ. ಮಂತ್ರಿಗಿರಿ ಭಿಕ್ಷೆ ಅಂತ ನಮಗೆ ಹೇಳುವವರು, ಚಪ್ಪಾಳೆ ಗಿಟ್ಟಿಸಿಕೊಂಡು ದೇಶ ಕಟ್ಟುವವರು ಎಂದು ಹೇಳಿಕೊಳ್ಳುವವರು. ಈ ರೀತಿಯ ಮಾತುಗಳು ಸರಿಯಲ್ಲ. ಹಾರಿಕೆ ಸುದ್ದಿ ಹರಡುವವರು ದೇಶ ದ್ರೋಹಿಗಳು ಎಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲಾ ಅದೇ ಬ್ರಾಂಡ್‍ಗೆ ಸೇರುತ್ತಾರೆ. ಭಾಷಣಗಳಿಂದ, ಟ್ವೀಟ್‍ನಿಂದ ಜನರನ್ನು ಪ್ರಚೋದನೆ ಮಾಡುವುದಲ್ಲ. ಇಂತಹ ಮಾತುಗಳು ಹಾಗೂ ಜನರ ಬಗ್ಗೆ ಬಹಳ ನೋವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ಅಮೆರಿಕಗೆ ಹೋದ್ರೆ ಇಲ್ಲಿ ಯಾರೂ ಊಟ, ತಿಂಡಿ ಮಾಡಲ್ವಾ – ಸಂಸದರಿಗೆ ಸೂಲಿಬೆಲೆ ಪ್ರಶ್ನೆ

    ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಗುರುವಾರ ಕ್ಯಾಬಿನೆಟ್ ಸಭೆ ಇದೆ. ನಾನು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇಬ್ಬರು ಸೇರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ, ರಾಜ್ಯಕ್ಕೆ ಆದಷ್ಟು ಬೇಗ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

    ಈ ಹಿಂದೆ ನೆರೆ ಪರಿಹಾರದ ಹಣ ಹೇಗೆ ದುರುಪಯೋಗ ಆಗುತ್ತಿತ್ತು ಅಂತ ಗೊತ್ತಿದೆ. ಇದನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಎನ್‍ಡಿಆರ್ ಎಫ್ ಫಂಡ್ ಬಿಡುಗಡೆ ಮಾಡಲಾಗಿದೆ. ಮಂಗಳವಾರ ಸಹೃದಯದಿಂದ ಬಿಹಾರ ನೆರೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಆದರೆ ಅದನ್ನೇ ದೊಡ್ಡ ವಿಷಯ ಮಾಡುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಪ್ರಧಾನಿ ಅಮೆರಿಕಕ್ಕೆ ಹೋಗಿದ್ದರಿಂದ ನೆರೆ ಪರಿಹಾರ ಪ್ರಕಟಿಸಲು ತಡವಾಗಿದೆ – ಪ್ರಹ್ಲಾದ್ ಜೋಷಿ

    ಕೇಂದ್ರ ತಂಡವು ಬಂದು ನೆರೆ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಿದೆ. ಮಳೆ ನಿಲ್ಲದೇ ಮನೆ ಕಟ್ಟಲು ಸಾಧ್ಯವಾಗುತ್ತಾ? ಹಿಂದೆಲ್ಲಾ ದುಡ್ಡು ನುಂಗಿ ಹಾಕುವವರೇ ಜಾಸ್ತಿ ಇದ್ದರು. ಹಣ ತರಬೇಕು, ಇಲ್ಲಿ ಅದನ್ನು ಕೊಳ್ಳೆ ಹೊಡೆಯಬೇಕು ಅಂತ ಕಾಯುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶ ಇಲ್ಲ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡುವ ಕೆಲಸ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡಲಿವೆ ಎಂದು ಹೇಳಿದರು. ಇದನ್ನೂ ಓದಿ:  ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

    ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ ಕೇಂದ್ರ ಸಚಿವರು, ಎಲ್ಲರಿಗೂ ಆಯ್ತಲ್ಲಾ, ಮತ್ತೆ ಅವರಿಗೆ ಏನು ಸ್ಪೆಷಲ್ ಎಂದು ಗುಡುಗಿದರು. ಇದನ್ನೂ ಓದಿ: ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ