Tag: Flood affected area

  • ಕಲಬುರಗಿ | ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ

    ಕಲಬುರಗಿ | ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ

    – ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿ ಹೋದ ನಿರ್ಮಾಣ ಹಂತದ ಸೇತುವೆ

    ಕಲಬುರಗಿ: ಮಳೆ ನಿಂತ್ರೂ ಮಳೆ ಹನಿ ನಿಂತಿಲ್ಲ ಎನ್ನೋ ಮಾತಿನಂತೆ ಸದ್ಯ ಭೀಮಾತೀರದಲ್ಲಿ ಪ್ರವಾಹವೇನೋ ಕಡಿಮೆಯಾಗಿದೆ. ಆದ್ರೆ ಪ್ರವಾಹ ತಂದಿಟ್ಟ ಆತಂಕಗಳು ಮಾತ್ರ ಇನ್ನು ಬೆಂಬಿಡದೇ ಅಲ್ಲಿನ ಅನ್ನದಾತರನ್ನು ಕಾಡುತ್ತಿದೆ. ಇದೀಗ ಜೆಡಿಎಸ್ ನಿಯೋಗವು (JDS delegation) ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

    ಹೀಗೆ ಒಂದೆಡೆ ಕಿತ್ತು ಹೋಗಿರುವ ಸೇತುವೆ ಸ್ಲ್ಯಾಬ್‌ಗಳು, ಇನ್ನೊಂದೆಡೆ ಮಳೆ ಹೊಡೆತಕ್ಕೆ ಮಣ್ಣು ಪಾಲಾಗಿರೋ ಪಪ್ಪಾಯ ಹಾಗೂ ಕಲ್ಲಂಗಡಿ ಬೆಳೆಗಳು. ಕಲಬುರಗಿ (Kalaburagi) ಜಿಲ್ಲೆ ಜೇವರ್ಗಿಯಲ್ಲಿ ಈ ಬಾರಿ ಸುರಿದ ಭಾರೀ ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ಜಿಲ್ಲೆಯ ಜನರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಈಗಾಗಲೇ ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟರ್‌ಗಿಂತ ಬೆಳೆ ನಾಶವಾಗಿದೆ. ಇದನ್ನೂ ಓದಿ: ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

    ಜೇವರ್ಗಿ ಪಟ್ಟಣದ ರೈತ ವಿಷ್ಣು ಮಹೇಂದ್ರಕರ್ಇ ಲಕ್ಷಾಂತರ ರೂ. ಹಣ ಸಾಲ ಮಾಡಿ, 5 ಎಕ್ರೆ ಜಮೀನಿನಲ್ಲಿ ಪಪ್ಪಾಯ ಹಾಗೂ ಕಲ್ಲಂಗಡಿ ಹಣ್ಣು ಬೆಳೆದಿದ್ದು ಫಲ ಕೈಗೆ ಸಿಗುವ ಮೊದಲೇ ನಾಶವಾಗಿದೆ ಎಂದು ಗೋಳಾಡಿದ್ದಾರೆ.

    ಈ ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶ ಹಾಗು ಗ್ರಾಮಗಳು ಜಲಾವೃತದ ಜೊತೆಗೆ, ಜೇವರ್ಗಿಯ ನರಿಬೋಳ ಗ್ರಾಮದಿಂದ ಚಿತ್ತಾಪುರದ ಚಾಮನೂರ ಗ್ರಾಮದ ಮಧ್ಯ ಸಂಪರ್ಕ ಕಲ್ಪಿಸಲು ನಿರ್ಮಾಣವಾಗುತ್ತಿದ್ದ ಬೃಹತ್ ಸೇತುವೆಯ ಸಿಮೆಂಟ್ ಸ್ಲ್ಯಾಬ್ ಸಹ ಭೀಮಾ ನದಿ ನೀರಿನ ಹೊಡೆತಕ್ಕೆ ನೀರು ಪಾಲಾಗಿದೆ. ಸುಮಾರು 36 ಬೃಹತ್ ಸಿಮೆಂಟ್ ಸ್ಲ್ಯಾಬ್‌ಗಳು ಭೀಮಾ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಸೇತುವೆಯ ಕನಸ್ಸು ಕಂಡ ಈ ಎರಡು ತಾಲೂಕಿನ ಜನರ ಆಸೆಗಳಿಗೆ ಭೀಮಾ ಪ್ರವಾಹ ತಣ್ಣೀರೆರೆಚಿದೆ.

    ಇನ್ನೂ ಭೀಮಾ ನದಿ ಪ್ರವಾಹದ ಬಗ್ಗೆ ಸಮೀಕ್ಷಾ ವರದಿ ತರಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಸೂಚನೆ ಮೇರೆಗೆ ಜೆಡಿಎಸ್ ನಿಯೋಗ ಸಹ ಇದೀಗ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದೆ. ಹೆಚ್‌ಡಿಡಿ ಮೂಲಕ ಕೇಂದ್ರಕ್ಕೂ ಸಹ ನೆರವಿಗೆ ಮನವಿ ಹಾಕಲು ಜೆಡಿಎಸ್ ಪಕ್ಷ ಮುಂದಾಗಿದೆ..

  • ಕಾಂಗ್ರೆಸ್ ಸೋಲಿಸಲು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ: ದಿನೇಶ್ ಗುಂಡೂರಾವ್

    ಕಾಂಗ್ರೆಸ್ ಸೋಲಿಸಲು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ: ದಿನೇಶ್ ಗುಂಡೂರಾವ್

    – ಡಿಕೆಶಿ ಜೈಲಿಂದ ಹೊರಗೆ ಬಂದಿರೋದು ನಮಗೆ ಬಲ ಬಂದಿದೆ

    ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ಧಾರವಾಡ ಜಿಲ್ಲೆ ಕುಂದಗೋಳ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯ ಅಂಚಟಗೇರಿ, ಚನ್ನಪುರ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಸಂತ್ರಸ್ತರಿಗೆ ದಿನೇಶ್ ಗುಂಡೂರಾವ್ ಪರಿಹಾರ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಅವರಿಗೆ ಕುಂದಗೋಳ ಕೈ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಕಾಂಗ್ರೆಸ್ ಮುಖಂಡರು ಸಾಥ್ ಕೊಟ್ಟರು. ಬಳಿಕ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬಿಜೆಪಿಯಿಂದ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು. ಕಾಂಗ್ರೆಸ್ ಧೂಳಿಪಟ ಆಗುತ್ತೆ ಎಂದು ಹೇಳಿದ್ದರು. ಆದ್ರೆ ಹರ್ಯಾಣದಲ್ಲಿ ಇನ್ನು ಯಾರು ಸರ್ಕಾರ ರಚನೆ ಮಾಡುತ್ತಾರೆ ಎನ್ನೋದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡೋಕೆ ಪ್ರಯತ್ನ ಮಾಡಿದ್ದರು. ಆದ್ರೆ ಅದು ಸಾಧ್ಯವಿಲ್ಲ, ಅದಕ್ಕೆ ಉದಾಹರಣೆ ಇಂದಿನ ರಿಸಲ್ಟ್ ಎಂದು ವಾಗ್ದಾಳಿ ನಡೆಸಿದರು.

    ಎರಡೂ ರಾಜ್ಯಗಳಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹೆಚ್ಚು ರ್ಯಾಲಿ ಮಾಡಿದ್ದಾರೆ. ಆದರೆ ಜನ ಅವರಿಂದ ನಿರಾಶರಾಗಿದ್ದಾರೆ ಎನ್ನೋದು ಗೊತ್ತಾಗಿದೆ. ಎಲ್ಲಾ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಂಡರು, ಹೀಗಾಗಿ ಅವರಿಗೆ ಜನ ಸರಿಯಾಗಿ ಸ್ಪಂದಿಸಿಲ್ಲ. ಇದೆಲ್ಲಾ ನೋಡಿದರೆ ನಾವು ಇನ್ನಷ್ಟು ಗಟ್ಟಿಯಾಗಬೇಕಿದೆ, ನಾವು ಪಕ್ಷವನ್ನ ಇನ್ನಷ್ಟು ಸದೃಡ ಮಾಡಬೇಕೆಂದು ಹೇಳಿದರು.

    ರಾಜ್ಯದಲ್ಲೂ ಕೂಡಾ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ದೀಪಾವಳಿ ನಂತರ ಪಾದಯಾತ್ರೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ನೆರೆ ಪೀಡಿತರಿಗೆ ಇನ್ನೂ ಒಂದು ಪೈಸೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯವನ್ನ ಕಡೆಗಣಿಸಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನ ಎಬ್ಬಿಸಲು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಾಗೆಯೇ ಉಪಚುನಾವಣೆ ಬಗ್ಗೆ ಮಾತನಾಡಿ, ಉಪಚುನಾವಣೆ ಬೇಗ ಆಗಬೇಕೆಂಬುದೇ ನಮ್ಮ ಆಶಯ. ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ತೀರ್ಮಾನ ಮಾಡುತ್ತೆ ನೋಡಬೇಕು. ಡಿಕೆಶಿ ಜೈಲಿಂದ ಹೊರಗೆ ಬಂದಿರೋದು ನಮಗೆ ಬಲ ಬಂದಿದೆ. ಬಿಜೆಪಿಯವರ ರಾಜಕೀಯ ಸಂಚಿಗೆ ಡಿಕೆಶಿ ಬಲಿಯಾಗಿಲ್ಲ. ಹೀಗಾಗಿ ಅವರ ಮೇಲೆ ಐಟಿ, ಇಡಿ ದಾಳಿ ಮಾಡಿಸಿದರು ಎಂದು ಕಿಡಿಕಾರಿದರು.

    ಇದೇ ವೇಳೆ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾನು, ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಎಲ್ಲಾ ಒಗ್ಗಟ್ಟಾಗಿ ಪಕ್ಷಕ್ಕೆ ಬಂದ ಕಷ್ಟಗಳನ್ನು ಎದುರಿಸುತ್ತೇವೆಂದು ತಿಳಿಸಿದರು.