Tag: FKCCI

  • ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI

    – ಸೂಕ್ಷ್ಮ-ಸಣ್ಣ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ನೀತಿ ರೂಪಿಸುವಂತೆ ಮನವಿ ಸಲ್ಲಿಸಲು ನಿರ್ಧಾರ
    – 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ

    ಮಡಿಕೇರಿ: ಉದ್ಯಮ ವಲಯವನ್ನು (Industry sector) ಕಾಡುತ್ತಿರುವ ಸಮಸ್ಯೆಗಳನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಮೂಲಸೌಕರ್ಯಗಳ ಕೊರತೆಯೂ ಸೇರಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI)ಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.

    ತಮ್ಮ ‘ವಿಷನ್ ಸ್ಟೇಟ್‌ಮೆಂಟ್ 2025–26’ನ್ನು ಇಲ್ಲಿನ ಕ್ಲಬ್ ಮಹೀಂದ್ರ ಹೋಟೆಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಫ್‌ಕೆಸಿಸಿಐ ಸಂಸ್ಥೆಯು ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ರಸ್ತೆಗುಂಡಿ ಸಮಸ್ಯೆಗಳನ್ನ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಅವರು ಉನ್ನತಮಟ್ಟದ ಸಭೆ ನಡೆಸಿದರು. ಹೀಗೆ, ಅನೇಕ ಸಮಸ್ಯೆಗಳನ್ನ ಗಮನಕ್ಕೆ ತರಲಾಗುತ್ತಿದೆ ಎಂದರು.

    ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

    10 ಲಕ್ಷ ಉದ್ಯಮಿಗಳನ್ನ ರೂಪಿಸುವ ಗುರಿ
    ರಾಜ್ಯದಲ್ಲಿ 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲು ವಿದ್ಯಾರ್ಥಿಗಳಿಂದ ‘ಬಿಸಿನೆಸ್‌ ಪ್ಲ್ಯಾನ್‌’ ಅನ್ನು ಆಹ್ವಾನಿಸಿ, ಅದರಲ್ಲಿ ಉತ್ತಮ ಯೋಜನೆಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುವುದು. ಇದರಿಂದ ಉದ್ಯಮ ವಲಯಕ್ಕೆ ಯುವ ಸಮುದಾಯ ಸೆಳೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

    ನ.19ರಂದು ಮಹಿಳಾ ಉದ್ಯಮಿಗಳ ದಿನಾಚರಣೆ
    ನ.19ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸರ್‌ಎಂವಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ ಏರ್ಪಡಿಸಲಾಗಿದೆ. ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿರುವ ಉದ್ಯಮಿಗಳ ಪೈಕಿ ಶೇ.90ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯದವರೇ ಇದ್ದಾರೆ. ಇವರಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರೀಶ್ ಗಣಪತಿ ಭಾಗವಹಿಸಿದ್ದರು.

  • ನಾಳಿನ ಎಲ್ಲಾ ರೀತಿಯ ಪ್ರತಿಭಟನೆ ರದ್ದು – FKCCI

    ನಾಳಿನ ಎಲ್ಲಾ ರೀತಿಯ ಪ್ರತಿಭಟನೆ ರದ್ದು – FKCCI

    ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಕರೆ ನೀಡಿದ್ದ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ತಿಳಿಸಿದೆ.

    ಇಂದು (ಜು.23) ಸಿಎಂ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ಸಂಸ್ಥೆ ಮತ್ತು ವ್ಯಾಪಾರ ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿದರು. ಯುಪಿಐ ವಹಿವಾಟುಗಳ ಆಧಾರದ ಮೇಲೆ ಇತ್ತೀಚೆಗೆ ಹೊರಡಿಸಲಾದ ಜಿಎಸ್‌ಟಿ ಸೂಚನೆಗಳ ಕುರಿತು ಸಣ್ಣ ವ್ಯಾಪಾರಿಗಳ ಆತಂಕವನ್ನು ಪರಿಹರಿಸುವಲ್ಲಿ ಸಿದ್ದರಾಮಯ್ಯ ಅವರು ತೆಗೆದುಕೊಂಡ ನಿರ್ಧಾರವನ್ನು ಎಫ್‌ಕೆಸಿಸಿಐ ಸ್ವಾಗತಿಸಿದೆ. ಈ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಯಾವುದೇ ಬಂದ್‌ಗೆ ಬೆಂಬಲ ನೀಡಿರುವುದಿಲ್ಲ ಎಂದಿದೆ.

    ಈ ವೇಳೆ ಎಫ್‌ಕೆಸಿಸಿಐ ಅಧ್ಯಕ್ಷರು ಮಾತನಾಡಿ, ಸಣ್ಣ ವ್ಯಾಪಾರಗಳಲ್ಲಿ ಹಲವರು ಹಾಲು, ತರಕಾರಿ ಮತ್ತು ಹೂವು ವ್ಯಾಪಾರಗಳಂತಹ ಅಗತ್ಯ ಮತ್ತು ವಿನಾಯಿತಿ ಪಡೆದ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ. ಜಿಎಸ್‌ಟಿ ನೋಟಿಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪಾವತಿಸಲು ಅವಕಾಶ ನೀಡಬೇಕು. ಹೀಗಾಗಿ ವ್ಯಾಪಾರಿಗಳು ನೇರವಾಗಿ ವಾಣಿಜ್ಯ ತೆರಿಗೆ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಜಿಎಸ್‌ಟಿ ಕುರಿತು ಸರಿಯಾಗಿ ಜಾಗೃತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಈ ಸಲುವಾಗಿ ಎಫ್‌ಕೆಸಿಸಿಐ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ನಂತರ ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕೆಂದು ಮನವಿ ಮಾಡಿಕೊಂಡರು.

    ಬಳಿಕ ಸಿಎಂ ಮಾತನಾಡಿ, ಯುಪಿಐ ಅಡಿ 40 ಲಕ್ಷ ರೂ.ಗೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್‌ಟಿ ನೋಟಿಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿತ್ತು. ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ನಂತರ ನೋಟಿಸ್ ನೀಡಲಾಗಿರುವ ಹಳೆಯ ತೆರಿಗೆ ಮನ್ನಾ ಮಾಡಲಾಗುವುದು, ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕೆಂದು ಸ್ಪಷ್ಟಪಡಿಸಿದರು.

    ಸಿಎಂ ಮಾತಿಗೆ ಎಫ್‌ಕೆಸಿಸಿಐ ಅಧ್ಯಕ್ಷರು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರ ನಿರ್ಣಾಯಕ ಮತ್ತು ಪಾರದರ್ಶಕ ತೀರ್ಮಾನವನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ವಿನಾಯಿತಿ ಪಡೆದ ಸರಕು ವ್ಯಾಪಾರಿಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ ಮತ್ತು ನೋಂದಣಿಯ ನಂತರ ಬಾಕಿಗಳನ್ನು ಮನ್ನಾ ಮಾಡಲಾಗುವುದು ಎಂಬ ಸರ್ಕಾರದ ಭರವಸೆಯು ವ್ಯಾಪಾರಿಗಳ ವಿಶ್ವಾಸವನ್ನು ಗಳಿಸಲಿದೆ. ವ್ಯಾಪಾರ ವಹಿವಾಟುಗಳನ್ನು ಕಾನೂನು ಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಉದ್ಯಮಿಗಳ ಮತ್ತು ಸಣ್ಣ ವ್ಯಾಪಾರಿಗಳ ಪರವಾಗಿದೆ ಎಂದರು.

    ಈ ನಿಟ್ಟಿನಲ್ಲಿ ಎಫ್‌ಕೆಸಿಸಿಐ ಯಾವುದೇ ಬಂದ್‌ಗೆ ಬೆಂಬಲ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಯವರ ಭರವಸೆಯ ನಂತರ, ನಾಳಿನ ಎಲ್ಲಾ ವ್ಯಾಪಾರ ಸಂಸ್ಥೆಗಳು ಮತ್ತು ಬೀದಿ ವ್ಯಾಪಾರಿ ಸಂಘಗಳು ಉದ್ದೇಶಿತ ಪ್ರತಿಭಟನೆಗಳನ್ನು ಹಿಂತೆಗೆದುಕೊಂಡಿದ್ದೇವೆ. ಅನುಸರಣೆ ಹಂಚಿಕೆಯ ಜವಾಬ್ದಾರಿಯಾಗಿದ್ದರೂ, ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಸಹಾನುಭೂತಿ ಮಾರ್ಗದರ್ಶಿ ತತ್ವಗಳಾಗಿ ಉಳಿಯಬೇಕು ಎಂದು ಎಫ್‌ಕೆಸಿಸಿಐ ಪುನರುಚ್ಚರಿಸುತ್ತದೆ ಎಂದು ಹೇಳಿದರು.

  • ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

    ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

    ಬೆಂಗಳೂರು: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಮೂಲಕ ಸ್ವಾವಲಂಬಿ ಭಾರತವನ್ನು ಕಟ್ಟಲು ಭಾರತೀಯರು ಮುಂದಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

    ಭಾರತದ ಸ್ವಾತಂತ್ರ‍್ಯದ 75 ವರ್ಷಗಳ ಸ್ಮರಣಾರ್ಥ `ಆಜಾದಿ ಕಾ ಅಮೃತ್ ಮಹೋತ್ಸವ’ದ ವಿಶೇಷ ಅಂಚೆ ಕವರ್ ಅನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವಕ್ಕೆ ಡಬಲ್ ಸೌಂಡ್ ಹಚ್ಚಿ ಮೆರವಣಿಗೆ ಮಾಡಿ, ಏನ್ ಮಾಡ್ತಾರೆ ನೋಡೋಣ: ಪ್ರಮೋದ್ ಮುತಾಲಿಕ್

    ಅಮೃತ ಮಹೋತ್ಸವ ಹಬ್ಬವನ್ನು ಭಾರತದ ಜನತೆಗೆ ಸಮರ್ಪಿಸಲಾಗಿದೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಫ್‌ಕೆಸಿಸಿಐ ಮತ್ತು ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಕವರ್ ಬಿಡುಗಡೆ ಮಾಡಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.

    ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಎಫ್‌ಕೆಸಿಸಿಐ ಸಂಸ್ಥೆಗೆ 106 ವರ್ಷ. ಎಫ್‌ಕೆಸಿಸಿಐ ಕರ್ನಾಟಕ ರಾಜ್ಯದಲ್ಲಿ ಉದ್ಯಮ, ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಸಕ್ರಿಯ ಮತ್ತು ಸಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳಾದ ಸಂದರ್ಭದಲ್ಲಿ ಎಫ್‌ಕೆಸಿಸಿಐ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಶ್ರಮಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಸಿನಿ ಪಯಣಕ್ಕೆ 62ನೇ ಸಂಭ್ರಮ: ವಾಣಿಜ್ಯ ಮಂಡಳಿಯಿಂದ ಅಭಿನಂದನಾ ಕಾರ್ಯಕ್ರಮ

    ಸ್ವಾತಂತ್ರ‍್ಯ ಚಳವಳಿಯ ಇತಿಹಾಸದಂತೆ, 75 ವರ್ಷಗಳ ಪ್ರಯಾಣವು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ, ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ. ಇಂದು ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ. ಭಾರತದ ಸಾಮರ್ಥ್ಯ ಮತ್ತು ಭಾರತದ ಪ್ರತಿಭೆ ಪ್ರಪಂಚದ ಪ್ರತಿಯೊಂದು ಹಂತದಲ್ಲೂ ಪ್ರತಿಧ್ವನಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆದಾಯ, ವಸತಿ ಮತ್ತು ನೀರು, ಆರೋಗ್ಯ ಸೌಲಭ್ಯಗಳು ಇತ್ಯಾದಿಗಳಿಗೆ ವಿವಿಧ ವಿನೂತನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಮೂಲ ಸೇವೆಗಳನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕರ್ನಾಟಕ ರಾಜ್ಯವು ದೇಶದ ಜಿಡಿಪಿಗೆ ಶೇ.8.8 ರಷ್ಟು ಕೊಡುಗೆ ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಕೈಗಾರಿಕೆ, ಸೇವಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದೆ. ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದ 2ನೇ ಅತಿದೊಡ್ಡ ರಾಜ್ಯವಾಗಿದೆ. 2024ರ ವೇಳೆಗೆ ದೇಶವು 5 ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಮಗೆ ಸ್ವಾತಂತ್ರ‍್ಯ ನೀಡಿದ ಎಲ್ಲ ಮಹಾಪುರುಷರಿಗೆ ನನ್ನ ನಮನ. ಈ ವಿಶೇಷ ಸಂದರ್ಭದಲ್ಲಿ ನಾವು ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಸ್ವಾತಂತ್ರ‍್ಯವನ್ನು ಅಖಂಡವಾಗಿ ಉಳಿಸಿಕೊಳ್ಳಲು ಮತ್ತು ದೇಶಭಕ್ತಿಯ ವಾತಾವರಣ ಸೃಷ್ಟಿಸಲು ಒಗ್ಗೂಡಿ ಮುನ್ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

    ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಸಿ.ಎ.ಐ.ಎಸ್ ಪ್ರಸಾದ್ ಹಾಗೂ ಅಂಚೆ ಇಲಾಖೆಯ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಜಧಾನಿಯಲ್ಲಿ ಕನ್ನಡ ನಾಮಫಲಕದ ಕುರಿತು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ

    ರಾಜಧಾನಿಯಲ್ಲಿ ಕನ್ನಡ ನಾಮಫಲಕದ ಕುರಿತು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ

    ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವ ವಿಚಾರವಾಗಿ ಎಫ್‍ಕೆಸಿಸಿಐ(ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಬಿಬಿಎಂಪಿಗೆ ಪತ್ರ ಬರೆದಿದೆ.

    ಸದ್ಯ ಸಿಲಿಕಾನ್ ಸಿಟಿಯಲ್ಲಿ 10 ಸಾವಿರ ಕೈಗಾರಿಕೋದ್ಯಮ ಮತ್ತು 20 ಸಾವಿರ ವ್ಯಾಪಾರೋದ್ಯಮಿಗಳು ಈ ನಿಯಮಕ್ಕೆ ಒಳಪಡಲಿದ್ದಾರೆ. ಹೀಗಾಗಿ ವಾಣಿಜ್ಯ ಮಳಿಗೆಗಳು ಕನ್ನಡದಲ್ಲಿ ನಾಮಫಲಕ ಅಳವಡಿಕೆಗೆ ಏಪ್ರಿಲ್ 30ರವರೆಗೂ ಸಮಯಾವಕಾಶ ಬೇಕಾಗಿದೆ ಎಂದು ಬಿಬಿಎಂಪಿಗೆ ಎಫ್‍ಕೆಸಿಸಿಐ ಪತ್ರ ಬರೆದಿದೆ.

    ಈ ಪತ್ರದಲ್ಲಿ ಸಮಯಾವಕಾಶದ ಜೊತೆಗೆ ಬಿಬಿಎಂಪಿಗೆ ಚುರುಕು ಸಹ ಮುಟ್ಟಿಸಿದೆ. ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ, ಕಳಪೆ ಕಾಮಗಾರಿ ಒತ್ತಡ, ಮಳೆ ನೀರು ನಿರ್ವಹಣೆ ಹೀಗೆ ಸಮಸ್ಯೆಗಳ ಪಟ್ಟಿ ಮಾಡಿ, ಇದನ್ನು ಬಿಬಿಎಂಪಿ ಸೂಕ್ತವಾಗಿ ನಿರ್ವಹಿಸ ಬೇಕಾಗಿದೆ. ಅಲ್ಲದೆ ಬಿಬಿಎಂಪಿ ಕನ್ನಡ ನಾಮಫಲಕ ಅಳವಡಿಕೆ ಹೆಸರಲ್ಲಿ ಕಿರುಕುಳ ಸೃಷ್ಟಿಸಬಾರದೆಂದು ಎಫ್‍ಕೆಸಿಸಿಐ ಪತ್ರದಲ್ಲಿ ಉಲ್ಲೇಖಿಸಿದೆ.