Tag: fitness test

  • ಬಿಸಿಸಿಐ ಹೊಸ ಫಿಟ್ನೆಸ್ ಟೆಸ್ಟ್ ನಲ್ಲಿ 6 ಆಟಗಾರರು ಫೇಲ್

    ಬಿಸಿಸಿಐ ಹೊಸ ಫಿಟ್ನೆಸ್ ಟೆಸ್ಟ್ ನಲ್ಲಿ 6 ಆಟಗಾರರು ಫೇಲ್

    ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಚಯಿಸಿರುವ ಹೊಸ ಫಿಟ್ನೆಸ್ ಟೆಸ್ಟ್ ಎಂಟೂವರೆ ನಿಮಿಷದಲ್ಲಿ 2 ಕಿ.ಮೀ. ಓಟದ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ಸೇರಿದಂತೆ ಆರು ಸ್ಟಾರ್ ಆಟಗಾರರು ಮೊದಲ ಯತ್ನದಲ್ಲಿ ಫೇಲ್ ಆಗಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು. ಸುಮಾರು 20 ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಸ್ಯಾಮ್ಸನ್, ಇಶಾನ್ ಕಿಶನ್, ನಿತೀಶ್ ರಾಣಾ, ರಾಹುಲ್ ತೆವಾಟಿಯಾ, ಸಿದ್ದಾರ್ಥ್ ಕೌಲ್ ಹಾಗೂ ಜಯ್‍ದೇವ್ ಉನಾದ್ಥತ್ ಮೊದಲ ಯತ್ನದಲ್ಲಿ ಫೇಲ್ ಆಗಿದ್ದಾರೆ.

    ಬ್ಯಾಟ್ಸ್‌ಮ್ಯಾನ್, ವಿಕೆಟ್ ಕೀಪರ್ ಹಾಗೂ ಸ್ಪಿನ್ನರ್ ಗಳು ಎಂಟೂವರೆ ನಿಮಿಷದಲ್ಲಿ 2 ಕಿ.ಮೀ ಓಟ ಮುಗಿಸಬೇಕು. ವೇಗದ ಬೌಲರ್‍ ಗಳು 8.15 ಸೆಕೆಂಡ್‍ಗಳಲ್ಲಿ ಓಟ ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಬೇಕು ಎಂಬುದು ಬಿಸಿಸಿಐನ ಹೊಸ ನಿಯಮವಾಗಿದೆ.

    ಹೊಸ ನಿಯಮದ ಪ್ರಕಾರ ಓಡಲು ಪ್ರಾರಂಭಿಸಿದ ಆಟಗಾರರಲ್ಲಿ ಕೆಲ ಆಟಗಾರರು ಕೆಲವೇ ಸೆಕೆಂಡ್‍ಗಳ ಅಂತರದಲ್ಲಿ ಓಟ ಮುಗಿಸಿ ಉತ್ತೀರ್ಣರಾದರೆ. 6 ಜನ ತಾರಾ ಆಟಗಾರರು ಮತ್ತೊಮ್ಮೆ ಪರೀಕ್ಷೆಗೆ ತಯಾರಾಗುವಂತಾಗಿತ್ತು. ನಂತರ ಎರಡನೇ ಹಂತದಲ್ಲಿ ಮತ್ತೆ ಪರೀಕ್ಷೆಗೆ ಒಳಗಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸಿದ್ಧಾರ್ಥ್ ಕೌಲ್ ಹಾಗೂ ಜಯ್‍ದೇವ್ ಉನಾದ್ಥತ್ ತೇರ್ಗಡೆ ಗೊಂಡಿದ್ದಾರೆ. ಇನ್ನೂ ಮುಂದೆ ಈ ಪರೀಕ್ಷೆಯಲ್ಲಿ ಪಾಸ್ ಆಗದೇ ಇದ್ದರೆ ಅಂತಹ ಕ್ರಿಕೆಟಿಗರಿಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ ಎಂಬ ಸುದ್ದಿಯು ಹರಿದಾಡುತ್ತಿದೆ.

    ಯೋಯೋ ಟೆಸ್ಟ್ ಜೊತೆಗೆ ಇದೀಗ ಹೊಸದಾಗಿ ಜಾರಿಗೆ ಬಂದಿರುವ 2 ಕಿ.ಮೀ ಓಟವನ್ನು ನಾಯಕ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸಲಹೆ ಮೇರೆಗೆ ಬಿಸಿಸಿಐ ಈ ನೂತನ ಫಿಟ್ನೆಸ್ ಟೆಸ್ಟ್ ಪರಿಚಯಿಸಿದೆ.

  • ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಕುಸಿದು ಬಿದ್ದು ಯುವತಿ ದುರ್ಮರಣ

    ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ಕುಸಿದು ಬಿದ್ದು ಯುವತಿ ದುರ್ಮರಣ

    ಹೈದರಾಬಾದ್: ಪೊಲೀಸ್ ಕಾನ್ಸ್ ಟೇಬಲ್ ಫಿಟ್ನೆಸ್ ಪರೀಕ್ಷೆಯ 100 ಮೀಟರ್ ಓಟದಲ್ಲಿ 20 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ಕರಿಂನಗರದಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ಮಮತಾ(20) ಮೃತ ಯುವತಿ. ಪೊಲೀಸ್ ತರಬೇತಿ ಕೇಂದ್ರದಲ್ಲಿ ವದ್ಲಕೊಂಡ ಮಮತಾ ಅವರು ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಮಮತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಕರೀಂನಗರ ಪಟ್ಟಣದಲ್ಲಿ ಸೋಮವಾರ ಪೋಲಿಸ್ ತರಬೇತಿ ಕೇಂದ್ರದಲ್ಲಿ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಗಾಗಿ ಮಮತಾ ಭಾಗವಹಿಸಿದ್ದರು. ಅವರು 100 ಮೀ ಓಟದಲ್ಲಿ ಭಾಗವಹಿಸಿ ತಮ್ಮ ಗೋಲ್ ತಲುಪಿದ್ದು, ತಕ್ಷಣ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಮೃತಪಟ್ಟಿದ್ದಾರೆ ಎಂದು ಕರೀಂನಗರ ಕಮೀಷನರ್ ವಿ.ಬಿ ಕಮಲಸಾನ್ ರೆಡ್ಡಿ ತಿಳಿಸಿದ್ದಾರೆ.

    ಮೃತ ಮಮತಾ ರಾಮದುಗು ಮಂಡಲ್ ನ ವೇಲಿಚಾಳ ಗ್ರಾಮದವರಾಗಿದ್ದು, ಎರಡು ತಿಂಗಳು ಪೊಲೀಸ್ ತರಬೇತಿ ಪಡೆದಿದ್ದರು. ಲಿಖಿತ ಪರೀಕ್ಷೆಯ ನಂತರ ಸೋಮವಾರ ಫಿಟ್ನೆಸ್ ಪರೀಕ್ಷೆಗೆಂದು ಬಂದಿದ್ದರು. ಈ ತರಬೇತಿಯಲ್ಲಿ ಮತ್ತಿಬ್ಬರು ನಿಶ್ಯಕ್ತರಾಗಿ ಕುಸಿದು ಬಿದ್ದಿದ್ದರು. ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಸದ್ಯ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಮತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರ ಯುವತಿ ಸಾವಿಗೆ ನಿಖರ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv