Tag: fishermen

  • ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಉಡುಪಿ: ಇಲ್ಲಿನ ಮಲ್ಪೆಯಿಂದ ಹೊರಟ ಬೋಟ್ ಸಮೇತ ಏಳು ಮಂದಿ ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀ ಪತ್ರ ಬರೆದಿದ್ದಾರೆ. ಇತ್ತ 3 ರಾಜ್ಯಕ್ಕೆ 6 ಮಂದಿಯ ಪೊಲೀಸ್ ಟೀಂ ನಿಯೋಜಿಸಲಾಗಿದೆ.

    ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಪೇಜಾವರ ಶ್ರೀಗಳು ಪ್ರಧಾನಿಗೆ ಒತ್ತಾಯಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸುವಂತೆ ಪತ್ರದಲ್ಲಿ ಪೇಜಾವರಶ್ರೀ ಒತ್ತಾಯಿಸಿದ್ದಾರೆ.

    ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ.  ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಪೊಲೀಸ್ ಟೀಂ:
    ಅರಬ್ಬೀ ಸಮುದ್ರದಲ್ಲಿ ಏನಾದರೂ ಅವಘಡ ಸಂಭವಿಸಿ ಮೀನುಗಾರರು ನಾಪತ್ತೆಯಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಕೇರಳಕ್ಕೆ ಎರಡು ತಂಡಗಳನ್ನು ರವಾನಿಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಾಲ್ಕು ಟೀಂ ತೆರಳಿದ್ದು ಕಣ್ಮರೆಯಾದವರ ತನಿಖೆ ಮಾಡುತ್ತಿದೆ.

    ಮಹಾರಾಷ್ಟ್ರದ ಮರಾಠಿ ಪತ್ರಿಕೆಯೊಂದರಲ್ಲಿ ಆಚ್ರಾ ಮತ್ತು ಮೆಲ್ವಾನ್ ನಲ್ಲಿ ಬೋಟಿನ ಟ್ರೇಗಳು ದೊರಕಿವೆ ಎಂದು ವರದಿಯಾಗಿತ್ತು. ಇವು ಸುವರ್ಣ ತ್ರಿಭುಜ ಬೋಟಿಗೆ ಸೇರಿದ ಟ್ರೇಗಳಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿದ್ದು ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ಒತ್ತಡದಲ್ಲಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಗೋವಾ ಮೀನುಗಾರನದ್ದು ಎನ್ನಲಾದ ವಾಯ್ಸ್ ನೋಟ್ ನ ಜಾಡು ಹಿಡಿದಿರುವ ಪೊಲೀಸರು ಗೋವಾದಲ್ಲೂ ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ದಾಟಿ ಗೋವಾ ಗಡಿ ಕಡೆ ಸುವರ್ಣ ತ್ರಿಭುಜ ಬೋಟ್ ಹೋಗಿದ್ಯಾ? ಪಾಕ್ ಗಡಿಯಲ್ಲಿ ಬೋಟ್ ಅಪಹರಣವಾಯ್ತಾ ಆನ್ನೋ ಸಂಶಯವೂ ಮೀನುಗಾರರಿಂದ ಬಂದಿದ್ದು ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಶುರುಮಾಡಿದೆ.

    ಡಿಸೆಂಬರ್13 ಕ್ಕೆ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಡಿ. 15 ರಿಂದ ಜಿಪಿಎಸ್- ಫೋನ್ ಸಂಪರ್ಕ ಕಡಿತಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಉಡುಪಿ: ಮಲ್ಪೆ ಬಂದರಿನಿಂದ ಹೋರಾಟ 7 ಮೀನುಗಾರರು ಕಣ್ಮರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಡಿಯೋ ಒಂದು ವೈರಲಾಗಿದೆ.

    ಗೋವಾ ರಾಜ್ಯದ ಕೊಂಕಣಿ ಮಾತನಾಡುವ ಮೀನುಗಾರನ ಧ್ವನಿ ಎನ್ನಲಾಗಿದ್ದು, ಮೀನುಗಾರನ ಆಡಿಯೋದಲ್ಲಿ ಮಹತ್ವದ ಮಾಹಿತಿಯಿದೆ. ನಾಪತ್ತೆಯಾದ 8ನೇ ದಿನಕ್ಕೆ ಬೋಟು ನಾನು ನೋಡಿದ್ದೇನೆ. ಮಹಾರಾಷ್ಟ್ರ ಬಂದರಿನಿಂದ ಕೆಲವೇ ದೂರದಲ್ಲಿ ಕಣ್ಣಿಗೆ ಬಿತ್ತು. ಸಮುದ್ರದಲ್ಲಿ ನಿಂತಿದ್ದ ಬೋಟಿನ ಮೇಲೆ ನಾನು ಟಾರ್ಚ್ ಲೈಟ್ ಹಾಯಿಸಿದ್ದೆ. ಮೀನುಗಾರರು ಕಳ್ಳರಂತೆ ತಲೆತಗ್ಗಿಸಿ ಕುಳಿತಿದ್ದರು ಎಂದು ಮಾತನಾಡಿರುವುದು ದಾಖಲಾಗಿದೆ.

    ಬೋಟಿನಲ್ಲಿದ್ದ ಒಬ್ಬ ಯುವಕನನ್ನು ಸರಿಯಾಗಿ ನೋಡಿದ್ದು, ಬೋಟ್ ಹೆಸರು ಸುವರ್ಣ ತ್ರಿಭುಜ ಅಂತ ಇತ್ತು. ಬೋಟಿನಲ್ಲಿ ಯುವಕ ಅಡಗಿ ಕೂತಿದ್ದ. ಬೋಟ್ ಹೊರ ಭಾಗದಲ್ಲಿ ಕೆಂಪು ಬಣ್ಣದ ಹನುಮಂತನ ಬಾವುಟ ನೋಡಿದ್ದೇನೆ ಹೇಳಿದ್ದಾನೆ. ವ್ಯಕ್ತಿ ಗೋವಾ ರಾಜ್ಯದ ಕೊಂಕಣಿಯಲ್ಲಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಾಯ್ಸ್ ನೋಟ್ ಹರಿದಾಡುತ್ತಿದೆ. ಆದರೆ ಪ್ರಕರಣ ತನಿಖೆ ಮಾಡುತ್ತಿರುವ ಪೊಲೀಸರು ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಈ ಆಡಿಯೋದ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

    ಮಲ್ಪೆ ಮೀನುಗಾರಿಕಾ ಬಂದರಿನಿಂದ ಗೋವಾ, ಮಹಾರಾಷ್ಟ್ರ ಗಡಿಭಾಗಕ್ಕೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿದ ಬಳಿಕ ಮೀನುಗಾರ ಮಹಿಳೆಯರು ಬಂದರಿನಲ್ಲಿ ಮೀನುಗಾರಿಕಾ ಕೆಲಸಕ್ಕೆ ತೆರಳಿಲ್ಲ. ಆತಂಕದಲ್ಲಿರುವ ಮೊಗವೀರ ಮಹಿಳೆಯರು ಸರ್ಕಾರದ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಬಂದರಿಗೆ ಇಳಿಯಲು ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಣೆಯಾದ ಮೀನುಗಾರರು ಉತ್ತರಭಾಗದಲ್ಲಿದ್ದಾರೆ- ಬೊಬ್ಬರ್ಯ ದೈವದ ಪಾತ್ರಿ ನುಡಿ

    ಕಾಣೆಯಾದ ಮೀನುಗಾರರು ಉತ್ತರಭಾಗದಲ್ಲಿದ್ದಾರೆ- ಬೊಬ್ಬರ್ಯ ದೈವದ ಪಾತ್ರಿ ನುಡಿ

    ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಬೋಟ್ ಸಮೇತ ನಾಪತ್ತೆಯಾಗಿದ್ದು, ಇವರೆಲ್ಲರೂ ಉತ್ತರ ಭಾಗದಲ್ಲಿದ್ದಾರೆ ಎಂದು ಬೊಬ್ಬರ್ಯ ದೈವ ಪಾತ್ರಿ ನುಡಿದಿದ್ದಾರೆ.

    ಡಿಸೆಂಬರ್ 13 ರಿಂದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್, ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.

    ದೈವದ ನುಡಿಯೇನು..?
    ಉಡುಪಿಯ ಮಲ್ಪೆ ಸಮೀಪದ ಬಡನಿಡಿಯೂರಿನಲ್ಲಿರುವ ದೈವಸ್ಥಾನದಲ್ಲಿ ದರ್ಶನ ಸೇವೆಯ ಸಂದರ್ಭದಲ್ಲಿ, ಕಣ್ಮರೆಯಾದವರು ದೇಶದ ಉತ್ತರ ಭಾಗದಲ್ಲಿದ್ದಾರೆ. ಮೀನುಗಾರರಿಂದ ನಾಪತ್ತೆಯಾದವರ ಪತ್ತೆ ಅಸಾಧ್ಯವಾಗಿದೆ. ಪೊಲೀಸರು, ಸೈನ್ಯದಿಂದ ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ದಟ್ಟ ಪೊದೆಗಳ ಮಧ್ಯೆ ಕಣ್ಮರೆಯಾಗಿದ್ದಾರೆ. 6-7 ದಿನದೊಳಗೆ ಅವರ ಕುರುಹು ಪತ್ತೆಯಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕು ಎಂದು ದೈವ ಬೊಬ್ಬರ್ಯ ಪಾತ್ರಿ ನುಡಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಎಲ್ಲಾ ಪ್ರಯತ್ನ ವಿಫಲ:
    ಕಳೆದ 28 ದಿನಗಳಿಂದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಬೋಟ್ ಮಲ್ಪೆಗೆ ಸೇರಿದ್ದಾಗಿದ್ದು, ಅದರಲ್ಲಿ 5 ಮಂದಿ ಉತ್ತರ ಕನ್ನಡ ಹಾಗೂ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ಇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದರೂ ಅವರನ್ನು ಪತ್ತೆಹಚ್ಚಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಅಲ್ಲದೇ ಸ್ವತಃ ಮೀನುಗಾರರೇ 15-20 ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ನಾಪತ್ತೆಯಾದವರ ಕುರುಹು ಸಿಗಲಿಲ್ಲ. ಹೀಗಾಗಿ ಮೀನುಗಾರರು ಇಂದು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.

    ಮೀನುಗಾರರು ತಾವು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಮೊದಲು ಬೊಬ್ಬರ್ಯ ದೈವಕ್ಕೆ ಕೈ ಮುಗಿಯುತ್ತಾರೆ. ಹೀಗಾಗಿ ಬೊಬ್ಬರ್ಯ ದೈವ ಕೊಟ್ಟ ನುಡಿಯನ್ನು ಪಾಲಿಸುತ್ತಾ, ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡುತ್ತಾರೆ.

    ಬುಧವಾರ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ನಾಪತ್ತೆಯಾದವರ ಮನೆಗೆ ಭೇಟಿ ನೀಡಿ ಭರವಸೆ ನೀಡಿದ್ದಾರೆ. ಆದ್ರೆ 28 ದಿನಗಳ ಬಳಿಕ ಸಚಿವರು ಭೇಟಿ ಕೊಟ್ಟಿರುವುದಕ್ಕೆ ಮೀನುಗಾರರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಕಾರವಾರ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೋ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ವೀನುಗಾರಿಕೆ ಬೋಟ್ ನಲ್ಲಿದ್ದ ಕುಮಟಾ ತಾಲೂಕು ಮಾದನಗೆರೆ ಸತೀಶ್, ಈಶ್ವರ, ಹರಿಕಂತ್ರ ಮನೆಗೆ ಸಚಿವರು ಇಂದು ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿಸೆಂಬರ್ 13ರಂದು ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಏಳು ಮೀನುಗಾರರಿದ್ದ ಬೋಟ್ 2018ರ ಡಿ.15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು, ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ಸಂಬಂಧ ಉಪಗ್ರಹ ಮೂಲಕ ಪತ್ತೆಗೆ ಇಸ್ರೋಗೂ ಮನವಿ ಮಾಡಲಾಗಿದೆ” ಎಂದು ಹೇಳಿದರು.

    ಈ ಪ್ರಕರಣ ಸಂಬಂಧ ಡಿ. 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು.  ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

    ಈಗಾಗಲೇ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ನೌಕಾದಳವನ್ನು ಬಳಸಿಕೊಳ್ಳಲು ಕೋರಲಾಗಿದೆ. ಅಲ್ಲದೇ ಗೂಗಲ್ ಸೇರಿದಂತೆ ಉಪಗ್ರಹ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು. ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸುವ ಸಾಧ್ಯತೆ ಕಡಿಮೆ ಇದೆ. ಬೋಟ್ ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

    ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದು, ಶೀಘ್ರವೇ ನಿರೀಕ್ಷಿತ ಫಲಶೃತಿಗೆ ಎದುರು ನೋಡುತ್ತಿದ್ದೇವೆ ಅಂದ್ರು. ಸಚಿವರಿಗೆ ಸ್ಥಳೀಯ ಶಾಸಕ ದಿನಕರ್ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಎಸ್. ಪಾಟೀಲ್ ಸೇರಿದಂತೆ ವಿವಿಧ ಪ್ರಮುಖರು ಈ ಸಂದರ್ಭದಲ್ಲಿ ಸಾಥ್ ನೀಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

    ನಾಪತ್ತೆಯಾದ ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಹಾರ್ಬೇಕಾ- ಸಚಿವ ನಾಡಗೌಡ ಪ್ರಶ್ನೆ

    ರಾಯಚೂರು: ಉಡುಪಿಯ ಮಲ್ಪೆಯಿಂದ ಹೊರಟಿರುವ ಮೀನುಗಾರರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಅಗತ್ಯ ಕ್ರಮಗಳನ್ನೆಲ್ಲ ತೆಗೆದುಕೊಂಡಿದ್ದೇವೆ. ಆದರೂ ಹೋರಾಟ ಮಾಡುತ್ತಿದ್ದಾರೆ ಮೀನುಗಾರರನ್ನ ಹುಡುಕಲು ನಾವೇನು ಸಮುದ್ರಕ್ಕೆ ಹಾರಬೇಕೇ ಎಂದು ಪಶುಸಂಗೋಪನಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಪ್ರಶ್ನಿಸಿದ್ದಾರೆ.

    ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವೆಂಕಟರಾವ್, ನಮ್ಮಲ್ಲಿ ಯಾವ ಫೋರ್ಸ್ ಗಳಿವೆ. ನಮ್ಮಲ್ಲಿರುವ ಜ್ಞಾನದಿಂದ ಅವರನ್ನು ವಾಪಸ್ ಕರೆತರುವ ಪ್ರಯತ್ನವನ್ನು ಅವರು ನಾಪತ್ತೆಯಾದ ಮೊದಲ ದಿನದಿಂದಲೇ ಮಾಡಿದ್ದೇವೆ ಅಂದ್ರು.

    ಮೀನುಗಗಾರರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವುದು ಬಿಟ್ಟರೆ ನಮ್ಮಲ್ಲಿ ಬೇರೆ ದಾರಿಗಳಿಲ್ಲ. ಪ್ರತಿಭಟನೆ ಮಾಡಲಿ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ. ನಾವು ತೆರೆದ ಮನಸ್ಸಿನಿಂದ ಎಲ್ಲದಕ್ಕೂ ತಯಾರಿದ್ದೇವೆ. ಹೀಗಾಗಿ ಅಲ್ಲಿಯ ಮುಖಂಡರಾದ್ರು ನೀವು ಈ ರೀತಿ ಮಾಡಿದ್ರೆ ಹುಡುಕಬಹುದು, ಪತ್ತೆ ಮಾಡಬಹುದೆಂದು ಹೇಳಬೇಕು ಅಲ್ವಾ ಎಂದು ಅವರು ಪ್ರಶ್ನಿಸಿದ್ರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಬರೀ ಪ್ರತಿಭಟನೆ ಮಾಡುತ್ತೇವೆ ಅಂದ್ರೆ ನಾವೇನು ಮಾಡಬೇಕು. ಸಮುದ್ರದಕ್ಕೆ ಎಗರಬೇಕಾ ಎಂದು ಪ್ರಶ್ನಿಸಿದ ಸಚಿವರು, ಅವರು ಸಲಹೆಗಳನ್ನು ನೀಡಲಿ. ಈ ಬಗ್ಗೆ ನಾವು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದೇವೆ. ಅವರು ಏನು ಮಾಡಬೇಕು? ನಮ್ಮಿಂದ ಏನ್ ನಿರೀಕ್ಷೆ ಮಾಡ್ತಾರೆ? ಎನ್ನುವುದನ್ನು ಹೇಳಿದ್ರೆ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ರು. ಇದನ್ನೂ ಓದಿ: ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

    ಹೋರಾಟ ಮಾಡೋದಾದ್ರೆ ಅದಕ್ಕೊಂದು ಅರ್ಥ ಹಾಗೂ ಪರಿಹಾರ ಇರಲೇಬೇಕಲ್ವ. ನಮಗೂ ಅವರ ಬಗ್ಗೆ ಆತಂಕ ಇದೆ. ಹೀಗಾಗಿ ನಾವು ಎಲ್ಲಾ ವಿಧಗಳಿಂದ ಪ್ರಯತ್ನ ಮಾಡಿದ್ದೇವೆ. ಯಾವುದೇ ಕುರುಹುಗಳು ಈವರೆಗೆ ಸಿಕ್ಕಿಲ್ಲ. ಬೋಟ್ ಮುಳುಗಿದ್ರೆ ಡಿಸೇಲ್ ಆದ್ರೂ ಸಮುದ್ರದಲ್ಲಿ ತೇಲಬೇಕಿತ್ತು. ಒಟ್ಟಿನಲ್ಲಿ ನಮಗೆ ಮಾಹಿತಿ ಬಂದ 1 ಗಂಟೆಯಲ್ಲಿ ನಾವು ಅಲರ್ಟ್ ಆಗಿದ್ದೇವೆ. ಹೆಲಿಕಾಪ್ಟರ್ ಗಳನ್ನು ಕಳುಹಿಸಿದ್ದೇವೆ ಎಂದು ಅವರು ಹೇಳಿದ್ರು.

    ಇದೇ ವೇಳೆ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಹಣ ಪತ್ತೆ ಪ್ರಕರಣ ತನಿಖೆಯಿಂದ ಬಯಲಾಗಿದೆ. ಈ ಹಿಂದೆ ಯಡಿಯೂರಪ್ಪ ಹಿಂಬಾಲಕರ ಬಳಿ ಹಣ ಸಿಕ್ಕಿದೆ ಆಗ ರಾಜೀನಾಮೆಯನ್ನು ಬಿಜೆಪಿ ಕೇಳಬೇಕಿತ್ತು. ವಿಧಾನಸೌಧಕ್ಕೆ ಯಾರು ಯಾರೋ ಬರುತ್ತಾರೆ. ಅಲ್ಲಿ ನಡೆದ ಹಣಕಾಸಿನ ವ್ಯವಹಾರ ತನಿಖೆಯಿಂದ ಗೊತ್ತಾಗಲಿದೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಷ್ಟ್ರೀಯ ಹೆದ್ದಾರಿ 4 ಗಂಟೆ ಬಂದ್- ಉಡುಪಿಯಲ್ಲಿ ಬೀದಿಗಿಳಿದ ಕಡಲ ಮಕ್ಕಳು

    ರಾಷ್ಟ್ರೀಯ ಹೆದ್ದಾರಿ 4 ಗಂಟೆ ಬಂದ್- ಉಡುಪಿಯಲ್ಲಿ ಬೀದಿಗಿಳಿದ ಕಡಲ ಮಕ್ಕಳು

    ಉಡುಪಿ: ಮಲ್ಪೆಯಿಂದ ಹೊರಟ ಮೀನುಗಾರಿಕಾ ಬೋಟ್ ನಾಪತ್ತೆಯಾಗಿ 25 ದಿನಗಳೇ ಕಳೆದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹುಡುಕಾಟ ನಡೆಸಿದರೂ ರಿಸಲ್ಟ್ ಬಂದಿಲ್ಲ. ಹೀಗಾಗಿ ಕಾದು-ಕಾದು ಸುಸ್ತಾದ ಕರಾವಳಿ ಮೂರು ಜಿಲ್ಲೆಯ ಸುಮಾರು 50 ಸಾವಿರ ಮೀನುಗಾರರು ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಗಂಟೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.

    ಕರಾವಳಿ ಜಿಲ್ಲೆ ಉಡುಪಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಮೀನುಗಾರರು ಇಷ್ಟು ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ಡಿಸೆಂಬರ್ 13ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಇನ್ನೂ ಪತ್ತೆಯಾಗಿಲ್ಲ. ಬೋಟ್ ನಲ್ಲಿದ್ದ 7 ಮೀನುಗಾರರ ಸುಳಿವೂ ಇಲ್ಲ. ನೌಕಾಸೇನೆ- ವಾಯುಸೇನೆ- ಪೊಲೀಸರು- ಕೋಸ್ಟ್ ಗಾರ್ಡ್ , ಮೀನುಗಾರರು ಎಷ್ಟು ಹುಡುಕಾಟ ನಡೆಸಿದರೂ ಪತ್ತೆ ಕಾರ್ಯ ಆಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಮೀನುಗಾರರು ಬೃಹತ್ ಜನಜಾಥಾ ಮಾಡಿದರು. ಸುಮಾರು 50 ಸಾವಿರ ಮೀನುಗಾರರು ಬೀದಿಗಿಳಿದು ಅಸಮಾಧಾನ ವ್ಯಕ್ತಗೊಳಿಸಿದರು. ಮಲ್ಪೆಯಿಂದ ಉಡುಪಿಯ ಅಂಬಲ್ಪಾಡಿಯವರೆಗೆ ಸುಮಾರು 8 ಕಿಲೋಮೀಟರ್ ಪಾದಯಾತ್ರೆ ಮಾಡಿ ಎರಡು ಹೈವೇಗಳನ್ನು ತಡೆದರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಆಳಸಮುದ್ರ ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ನಮ್ಮ ನೋವನ್ನು ಇಂದು ವ್ಯಕ್ತ ಮಾಡಿದ್ದೇವೆ. ಸರ್ಕಾರ ಬಗ್ಗದಿದ್ದರೆ ಆಲ್ ಇಂಡಿಯಾ ಫಿಶರ್ ಮೆನ್ ಅಸೋಸಿಯೇಶನ್ ಸಂಪರ್ಕಿಸುವುದಾಗಿ ಎಚ್ಚರಿಕೆ ನೀಡಿದರು.

    ಪ್ರತಿಭಟನೆ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ ಬಂದರು ಸಂಪೂರ್ಣ ಸ್ತಬ್ಧವಾಗಿತ್ತು. ಉಡುಪಿಯ ಸುಮಾರು 2 ಸಾವಿರ ಆಳಸಮುದ್ರದ ಬೋಟುಗಳು ಲಂಗರು ಹಾಕಿದ್ದವು. ನಾಡದೋಣಿಗಳು ಕಡಲಿಗಿಳಿಯಲಿಲ್ಲ. ಮಲ್ಪೆ ವ್ಯಾಪ್ತಿಯ ಎಲ್ಲಾ ಅಂಗಡಿಗಳು ಇಂದು ಬಾಗಿಲು ತೆಗೆಯಲೇ ಇಲ್ಲ. ಮೀನುಗಾರರ ಪಾದಯಾತ್ರೆಗೆ ಮಲ್ಪೆ- ತೀರ್ಥಹಳ್ಳಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವೇ ಇರಲಿಲ್ಲ. ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ಇದ್ದರೂ ಉಡುಪಿ-ದಕ್ಷಿಣ ಕನ್ನಡದ ಬಿಜೆಪಿ ಶಾಸಕರು, ಮಾಜಿ ಸಚಿವರು, ಸಂಸದೆ ಶೋಭಾ ಕರಂದ್ಲಾಜೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

    ಪ್ರತಿಭಟನೆಯ ಕೊನೆಗೆ ಆಗಮಿಸಿ ಮನವಿ ಸ್ವೀಕರಿಸಿದ ಉಸ್ತುವಾರಿ ಸಚಿವೆ ಜಯಮಾಲಾ ಅವರ ಮಾತಿಗೆ ಮೀನುಗಾರರು ಆಕ್ರೋಶಗೊಂಡರು. ರೈತರಿಗಿಂತ ಹೆಚ್ಚು ಪರಿಹಾರ ಮೊಗವೀರರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿದೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದರು. ಪರಿಹಾರ ಬೇಡ, ಏಳು ಮೀನುಗಾರರನ್ನು ಹುಡುಕಿಕೊಡಿ ಎಂದು ಒತ್ತಡ ಹಾಕಿದರು.

    ಸುಮಾರು ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿದ್ದರಿಂದ ಪೊಲೀಸರು ಡೈವರ್ಶನ್ ಗೆ ಹರಸಾಹಸಪಟ್ಟರು. ಕೆಎಸ್‍ಆರ್ ಪಿ, ಡಿಎಆರ್, ಕ್ಷಿಪ್ರ ಕಾರ್ಯಾಚರಣಾ ತುಕಡಿ, ಡ್ರೋನ್ ಕ್ಯಾಮೆರಾ ಬಳಸಿ ಪರಿಸ್ಥಿತಿ ಕೈಮೀರದಂತೆ ಎಚ್ಚರ ವಹಿಸಿರುವದಾಗಿ ಎಸ್ ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತಷ್ಟು ಶ್ರಮವಹಿಸಿ ಕಣ್ಮರೆಯಾದವರ ಹುಡುಕಾಟ ನಡೆಸದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾಗಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನವದೆಹಲಿ: ಉಡುಪಿಯಿಂದ ಸುವರ್ಣ ತ್ರಿಭುಜ ಅನ್ನೋ ದೋಣಿ 2018ರ ಡಿ.13ರಿಂದ ಉಡುಪಿಯಿಂದ ಹೊರಟಿದ್ದು, ನಾಪತ್ತೆಯಾಗಿದೆ. ಇದೂವರೆಗೂ ದೋಣಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀನುಗಾರರು ಮೀನು ಹಿಡಿಯಲು ಹೋಗುವ ಸಂದರ್ಭದಲ್ಲಿ 8-10 ದೋಣಿಗಳು ಒಟ್ಟಿಗೆ ಸಾಗುತ್ತವೆ. 15ನೇ ತಾರೀಕಿನಂದು ರಾತ್ರಿ 1 ಗಂಟೆಯವರೆಗೆ ಈ ಎಲ್ಲಾ ದೋಣಿಗಳಲ್ಲಿದ್ದ ಮೀನುಗಾರರು ಪರಸ್ಪರ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರದ ಸಿಂಧುದುರ್ಗದಿಂದ ಕೊನೆಯ ವಯರ್ ಲೆಸ್ ಮೆಸೇಜ್ ಮತ್ತು ಮೊಬೈಲ್ ಮೆಸೇಜ್ ಸುವರ್ಣ ತ್ರಿಭುಜ ಅನ್ನೋ ದೋಣಿಯಲ್ಲಿದ್ದ ಮೀನುಗಾರರಿಂದಲೂ ಮೆಸೇಜ್ ಗಳು ಬಂದಿತ್ತು. ಅದರಲ್ಲಿ 7 ಮೀನುಗಾರರಿದ್ದರು. ಅದಾದ ಬಳಿಕ ಇದುವರೆಗೂ ಮೀನುಗಾರರ ದೋಣಿ ನಾಪತ್ತೆಯಾಗಿದೆ. ಎಲ್ಲಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ ಅಂದ್ರು.

    ಕೋಸ್ಟಲ್ ಗಾರ್ಡ್ ಅವರಲ್ಲಿ ವಿನಂತಿ ಮಾಡಿಕೊಂಡ ಬಳಿಕ ಕರಾವಳಿಯ ಎಲ್ಲಾ ಪ್ರದೇಶದಲ್ಲಿಯೂ ಹುಡುಕಾಡಿದ್ದಾರೆ. ಸಾಮಾನ್ಯವಾಗಿ ದೋಣಿ ಮುಳುಗಡೆಯಾದ್ರೆ ಅದರ ಡೀಸೆಲ್ ನೀರಿನಲ್ಲಿ ತೇಲುತ್ತದೆ. ಅಲ್ಲದೇ ಮೀನುಗಾರಿಕೆಗೆ ಬೇಕಾದ ಪ್ಲಾಸ್ಟಿಕ್ ಡಬ್ಬಗಳು ತೇಲುತ್ತವೆ. ಆದ್ರೆ ಆ ರೀತಿಯ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ ಅಂತ ಮೀನುಗಾರರು ಹೇಳುತ್ತಿದ್ದಾರೆ.

    ಈ 7 ಜನ ಮೀನುಗಾರರ ಕುಟುಂಬ ಇಂದು ತುಂಬಾ ನೊಂದಿದ್ದು, ದುಃಖದಲ್ಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಮಹಾರಾಷ್ಟ್ರ ಸರ್ಕಾರದ ಗೃಹಸಚಿವ, ಡಿಜಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಇವರಿಗೆ ಎಲ್ಲಾ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಪತ್ರನೂ ಬರೆದಿದ್ದೇನೆ ಅಂದ್ರು.

    ಕರ್ನಾಟಕ ರಾಜ್ಯ ಸರ್ಕಾರ ಮೀನುಗಾರಿಕಾ ಇಲಾಖೆ ಯಾವ ಕ್ರಮವನ್ನು ಕೈಗೊಳ್ಳಬೇಕಾಗಿತ್ತೋ ಅದನ್ನು ಇಂದಿನವರೆಗೆ ತೆಗೆದುಕೊಂಡಿಲ್ಲ. ಸಹಜವಾಗಿ ನಾವು ಒಬ್ಬರು ತೀರಿಕೊಂಡರೆ ಆತಂಕ ಪಡುತ್ತೇವೆ. ಆದ್ರೆ 7 ಜನ ನಾಪತ್ತೆಯಾದ್ರೂ ಕೂಡ ಇಂದಿನವರೆಗೆ ಯಾವುದೇ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

    ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಾನು ಮಾತನಾಡಿದ ಬಳಿಕ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಒಂದು ಪತ್ರದ ಹೊರತಾಗಿ ಮೀನುಗಾರರನ್ನು ಹುಡುಕೋದ್ರಲ್ಲಿ ಯಾವುದೇ ರೀತಿಯ ಪ್ರಯತ್ನಗಳು ಕಾಣಿಸುತ್ತಿಲ್ಲ ಅಂತ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ಅವರು, ಈ ಹಿಂದೆ ಕೂಡ ಸಿಂಧುದುರ್ಗದಿಂದ ನಮ್ಮ ದೋಣಿಯನ್ನು ತಗೊಂಡೋಗಲಾಗಿತ್ತು. ಬಳಿಕ ಅವರನ್ನು ಒತ್ತೆಯಾಳಗಿರಿಸಿಕೊಳ್ಳಲಾಗಿತ್ತು. ಈ ಕಾರಣದಿಂದ ಇಂದು ಈ ದೋಣಿ ಕೂಡ ಮುಳುಗಡೆ ಆಗಿಲ್ಲ ಅಂತಂದ್ರೆ ಎಲ್ಲಿ ಹೋಯಿತು ಅನ್ನೋ ಪ್ರಶ್ನೆ ಅವರಲ್ಲಿ ಮೂಡಿದೆ. ಯಾರು ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಾರು ಅವರನ್ನು ಒತ್ತೆಯಾಳಾಗಿರಸಿಕೊಂಡಿದ್ದಾರೆ. ಯಾವುದಾದರೂ ಡ್ರಗ್ ಮಾಫಿಯಾದ ಕೈವಾಡವಿದೆಯಾ ಅನ್ನೋವಂತದ್ದನ್ನು ಪತ್ತೆ ಹಚ್ಚುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ರಾಜ್ಯ ಸರ್ಕಾರ ಮುತುವರ್ಜಿವಹಿಸಿ ಕ್ರಮ ಕೈಗೊಳ್ಳಬೇಕು ಅಂತ ಅವರು ಆಗ್ರಹಿಸಿದ್ರು. ಇದನ್ನೂ ಓದಿ: ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ಇಂದು ಕೇವಲ ಒಂದು ದೋಣಿಯ ಪ್ರಶ್ನೆಯಲ್ಲ. ಇಡೀ ಉಡುಪಿ ಜಿಲ್ಲೆಯ, ಉತ್ತರ ಕನ್ನಡ ಹಾಗೂ ದಕ್ಷಿಣ ಕ್ನನಡದ ವಿಚಾರವಾಗಿದೆ. ಇಲ್ಲಿ ಮೀನುಗಾರಿಕೆ ಕಳೆದ 10 ದಿನಗಳಿಂದ ಬಂದ್ ಆಗಿದೆ. ಯಾಕಂದ್ರೆ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ತಕ್ಷಣ ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಮಾತನಾಡಬೇಕು. ಕೇಂದ್ರ ಸರ್ಕಾರದ ಸಹಾಯವನ್ನೂ ಕೂಡ ಪಡೆದುಕೊಂಡು ತಕ್ಷಣ ಮೀನುಗಾರರನ್ನು ಹಾಗೂ ದೋಣಿಯನ್ನು ಹುಡುಕುವ ಕೆಲಸವನ್ನು ಮಾಡಬೇಕು ಅಂತ ಅವರು ಒತ್ತಾಯಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಉಡುಪಿ: ಆ ಏಳು ಜನ ಜೀವವನ್ನು ಪಣಕ್ಕಿಟ್ಟು ಅರಬ್ಬೀ ಸಮುದ್ರಕ್ಕಿಳಿದ ಕಡಲ ಮಕ್ಕಳು. ಬೋಟು ಹತ್ತುವಾಗ ಹಾಕಿದ ಲೆಕ್ಕಾಚಾರದ ಪ್ರಕಾರ ಅವರು 10 ದಿನದಲ್ಲಿ ಮತ್ತೆ ದಡಕ್ಕೆ ಬರಬೇಕಿತ್ತು. ಅದೇನಾಯ್ತೋ ಏನೋ ಕಸುಬಿಗೆ ತೆರಳಿದ ಎರಡೇ ದಿನಕ್ಕೆ ಏಳು ಜೀವಗಳು, ಕೋಟಿ ವೆಚ್ಚದ ಬೋಟ್ ಕುರುಹೇ ಇಲ್ಲದೆ ಕಣ್ಮರೆಯಾಗಿದೆ. ಇದೊಂಥರಾ ಮಿಸ್ಸಿಂಗ್ ಸೆವೆನ್ ಮಿಸ್ಟರಿಯಾಗಿ ಎಲ್ಲರ ನಿದ್ದೆಗೆಡಿಸಿದೆ.

    ಪ್ರಾಣವನ್ನೇ ಪಣವಾಗಿಟ್ಟು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಕಡಲಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಡಿಸೆಂಬರ್ 17ರಂದು ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ 7 ಮೀನುಗಾರರು ಕಳೆದ 17 ದಿನಗಳಿಂದ ಕಣ್ಮರೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಡಿಸೆಂಬರ್ 13ರ ರಾತ್ರಿ ಉಡುಪಿಯ ಮಲ್ಪೆಯಿಂದ `ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೋವಾ – ಮಹಾರಾಷ್ಟ್ರ ಗಡಿ ಕಡೆ ಕಸುಬು ಮಾಡಲು ತೆರಳಿತ್ತು. ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆ ನಂತರ ಬೋಟ್ ನ ಜಿಪಿಎಸ್ ಮತ್ತು ಫೋನ್ ಸಂಪರ್ಕ ಕಡಿತವಾಗಿದೆ. ಸಮುದ್ರದಲ್ಲಿ ಎಲ್ಲಿ ಹುಡುಕಾಟ ನಡೆಸಿದ್ರೂ ಬೋಟ್, ಮೀನುಗಾರರು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನೌಕಾದಳ, ಏರ್ ಫೋರ್ಸ್ ಅಧಿಕಾರಿಗಳು ಹುಡುಕಾಟ ಮಾಡಿದ್ರೂ ಉಪಯೋಗವಾಗಿಲ್ಲ. ಜನಪ್ರತಿನಿಧಿಗಳು- ರಾಜ್ಯ ಸರ್ಕಾರ- ಕೇಂದ್ರ ಸರ್ಕಾರ ಸಂಪರ್ಕ ಮಾಡಿದರೂ ಏನೂ ರಿಸಲ್ಟ್ ಇಲ್ಲ. ಸ್ವತಃ ಮೀನುಗಾರರೇ ಕರಾವಳಿ ಕಾವಲು ಪಡೆಯ ಸ್ಪೀಡ್ ಬೋಟ್ ಹತ್ತಿ ಮಹಾರಾಷ್ಟ್ರ, ಗೋವಾದ ಗಡಿಯಲ್ಲಿ, ರಾಜ್ಯದೊಳಗೆ ನದಿ- ಹಿನ್ನೀರು ಪ್ರದೇಶದಲ್ಲಿ ಹುಡುಕಾಟ ಮಾಡಿದ್ರೂ ಕಣ್ಮರೆಯಾದವರ ಸುಳಿವಿಲ್ಲ. ಅಷ್ಟು ದೊಡ್ಡ ಬೋಟ್ ಎಲ್ಲೂ ಕಾಣಿಸುತ್ತಿಲ್ಲ. ಸಮುದ್ರದಲ್ಲಿ ಮುಳುಗಿರಲು ಸಾಧ್ಯವೇ ಇಲ್ಲದ ಬೋಟ್ ಎಲ್ಲಿ ಹೋಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

    ಮೀನುಗಾರರ ಮುಖಂಡ ಗುಂಡು ಅಮೀನ್ ಮಾತನಾಡಿ, ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಕಡಲ್ಗಳ್ಳರು, ಮಹಾರಾಷ್ಟ್ರ ಗೋವಾದ ಮೀನುಗಾರರು ಬೋಟ್ ಅಪಹರಿಸಿ ಅದರ ಬಣ್ಣ ಬದಲಿಸಿ, ನಮ್ಮವರನ್ನು ಕೂಡಿಹಾಕಿ ಚಿತ್ರಹಿಂಸೆ ಕೊಡುತ್ತಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರದ ದೇವಘಡ, ಗೋವಾ – ಮಹಾರಾಷ್ಟ್ರ ಗಡಿಯ ಮಾಲ್ವಾನ್ ಎಂಬಲ್ಲಿ ಕಡಲ್ಗಳ್ಳರ ಹಾವಳಿ ಸಿಕ್ಕಾಪಟ್ಟೆ ಜಾಸ್ತಿ. ಉತ್ತರದ ಕಡೆ ಮೀನುಗಾರಿಕೆಗೆ ತೆರಳುವಾಗ ಗುಂಪಿನ ಕೊನೆಯಲ್ಲಿದ್ದ ಬೋಟ್ ಕಣ್ಮರೆಯಾಗಿದೆ. ಒಂಟಿಯಾದ ಬೋಟ್ ಮೇಲೆ ಆಗಂತುಕರು ದಾಳಿ ಮಾಡಿ ಕಿಡ್ನಾಪ್ ಮಾಡಿದ್ರಾ ಎಂಬ ಸಂಶಯ ದಟ್ಟವಾಗಿದೆ. ಕೇವಲ ಏಳು ಕುಟುಂಬಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಮೂರು ಜಿಲ್ಲೆಯ ಲಕ್ಷಾಂತರ ಮೀನುಗಾರರ ಜೊತೆ ತಮಿಳುನಾಡು, ಕೇರಳದ ಮೀನುಗಾರರಿಗೂ ಈ ಘಟನೆ ದಂಗುಬಡಿಸಿದೆ. ಪಾಕಿಸ್ತಾನ ಗಡಿಯಾಚೆ ಬೋಟ್ ಅಪಹರಣವಾಯ್ತಾ ಎಂಬ ಭಯವೂ ಕಡಲಮಕ್ಕಳನ್ನು ಕಾಡುತ್ತಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೋಸ್ಟ್ ಗಾರ್ಡ್, ಪೊಲೀಸರೂ ಕೇಸು ದಾಖಲಿಸಿಕೊಂಡು ಹುಡುಕಾಟ ನಡೆಸಿದರೂ 7 ಮಂದಿ ಮೀನುಗಾರರು – ಎರಡು ಕೋಟಿ ರೂಪಾಯಿಯ ದೊಡ್ಡ ಬೋಟ್, ದಿನಸಿ, ಡೀಸೆಲ್- ಬಲೆ- ಕಂಟೈನರ್ ಬಗ್ಗೆಯೂ ಸುಳಿವಿಲ್ಲ. ಇಷ್ಟೆಲ್ಲ ಆದರೂ ಸರ್ಕಾರ ಮಾತ್ರ ಯಾವ ಗೋಜಿಗೇ ಹೋಗಿಲ್ಲ.

    ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಅಮೀನ್ ಮಾತನಾಡಿ, ಮೀನುಗಾರಿಕಾ ಇಲಾಖೆ- ಪೊಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರಾವಳಿ ಮೂರು ಜಿಲ್ಲೆಯ ಮೀನುಗಾರರು ಎರಡು ದಿನದ ಗಡುವು ನೀಡುತ್ತಿದ್ದೇವೆ. ಕಣ್ಮರೆಯಾದ ಏಳು ಮೀನುಗಾರರ ಸುಳಿವು ಸಿಗದೇ ಇದ್ದಲ್ಲಿ ಇಡೀ ರಾಜ್ಯದ ಬಂದರನ್ನು ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಮೀನುಗಾರರ ಸಂಪರ್ಕಕ್ಕೆ ಪ್ರಯತ್ನ ನಡೆಸುತ್ತಿದೆ.

    ಚಂದ್ರ ಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿದ್ದಾರೆ.

    ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟ್ ಮೂಲಕ ಡಿ.13 ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದ ಇವರು, ಡಿ.15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದವರು. ಆದರೆ ಆ ಬಳಿಕ ಬೋಟ್‍ನಲ್ಲಿದ್ದ ಜಿಪಿಎಸ್ ಸಂಪರ್ಕವೂ ಕಳೆದುಕೊಂಡಿದೆ.

    ಸದ್ಯ ನಾಪತ್ತೆ ಆಗಿರುವ ಮೀನುಗಾರರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕರಾವಳಿ ಕಾವಲು ಪಡೆಯಿಂದ ಮೀನುಗಾರರ ಸಂಪರ್ಕಕ್ಕೆ ಯತ್ನ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂಮಿಯತ್ತ ಹಾರಿಕೊಂಡು ಬಂದ್ವು ರಾಶಿ ರಾಶಿ ಮೀನುಗಳು- ಉಡುಪಿಯಲ್ಲಿ ನಡೆದ ಕೌತುಕದ ವಿಡಿಯೋ ವೈರಲ್

    ಭೂಮಿಯತ್ತ ಹಾರಿಕೊಂಡು ಬಂದ್ವು ರಾಶಿ ರಾಶಿ ಮೀನುಗಳು- ಉಡುಪಿಯಲ್ಲಿ ನಡೆದ ಕೌತುಕದ ವಿಡಿಯೋ ವೈರಲ್

    ಉಡುಪಿ: ಹಾರಾಡುವ ಹಕ್ಕಿಗಳನ್ನು ಎಲ್ಲರೂ ನೋಡಿರ್ತಿರಿ. ಆದ್ರೆ ಉಡುಪಿಯ ಕುಂದಾಪುರದ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜಾಡುವ ಮೀನುಗಳು ಗಾಳಿಯಲ್ಲಿ ಹಾರಾಡಿಕೊಂಡು ಭೂಮಿಯತ್ತ ಬಂದು ಜನರಲ್ಲಿ ಕೌತುಕ ಹುಟ್ಟಿಸಿವೆ. ಈ ಮೂಲಕ ನೀರಿನತ್ತ ಓಡೋ ಮೀನು ಭೂಮಿಯತ್ತ ತೂರಿ ಬಂದು ಮೀನುಗಾರರಿಗೆ ಸುಗ್ಗಿಯ ವಾತಾವರಣ ಸೃಷ್ಟಿಮಾಡಿದೆ.

    ಉಡುಪಿ ಜಿಲ್ಲೆ ಕುಂದಾಪುರದ ಕೋಡಿ ಬೀಚಲ್ಲಿ ಈ ಘಟನೆ ನಡೆದಿದೆ. ಕೋಡಿಯ ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಎಂಬ ಬಲೆ ಹಾಕಿದ್ದರು. ಎಲ್ಲಾ ಮೀನುಗಾರರು ಸಾಲಾಗಿ ನಿಂತು ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆ ಮೀರಿ ನೂರು ಪಟ್ಟು ಹೆಚ್ಚು ಮೀನು ಬಲೆಗೆ ಬಿದ್ದಿದೆ.

    ಸಮುದ್ರ ತೀರದಲ್ಲಿ ಮೀನುಗಾರರು ಎರಡು ನಾಡದೋಣಿಗಳಿಗೆ ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು ವೀಡಿಯೋ ಬಹಳ ಕುತೂಹಲ ಹುಟ್ಟಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿದೆ. ಕರಾವಳಿ ಫ್ರೆಂಡ್ಸ್ ಬಲೆಗೆ ಮೂರು ಸಾವಿರ ಕೆಜಿಯಷ್ಟು ಬೂತಾಯಿ ಸಿಕ್ಕಿದೆ. ಮೀನುಗಳು ಒದ್ದಾಡುವ ರಭಸಕ್ಕೆ ಬಲೆಯೇ ಹರಿದು 10 ಸಾವಿರ ಕೆಜಿಯಷ್ಟು ಮೀನು ಮತ್ತೆ ಸಮುದ್ರ ಪಾಲಾಗಿದೆ ಅಂತ ಸ್ಥಳೀಯರು ಹೇಳಿದ್ದಾರೆ.

    ಕೈರಂಪಣಿ ಬಲೆಯಲ್ಲಿ 16 ಮಂದಿ ಮೊದಲು ಬಲೆ ಬೀಸಿದ್ದು, ಮೀನಿನ ರಾಶಿಯನ್ನು ಕಂಡು ಸ್ಥಳೀಯ 50ಕ್ಕು ಹೆಚ್ಚು ಯುವಕರನ್ನು ಕರೆಸಲಾಯ್ತು. ಸ್ಥಳೀಯರಂತೂ ಬಲೆಯಿಂದ ಜಿಗಿದು ದಡ ಸೇರಿದ್ದ ಮೀನನ್ನು ಹಿಡಿಯಲು ಬೀಚ್ ಬದಿ ಮುಗಿಬಿದ್ದರು.

    https://www.youtube.com/watch?v=Y5dBeTbnTLw&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews