Tag: fishering

  • ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ- ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

    ಅರಬ್ಬೀಸಮುದ್ರದಲ್ಲಿ ವಾಯುಭಾರ ಕುಸಿತ- ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

    – ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ

    ಮಂಗಳೂರು/ಉಡುಪಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆ ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಜಿಲ್ಲಾಡಳಿತ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಇತ್ತ ರಾಜ್ಯದ ಹಲವೆಡೆ ಮಳೆಯಾಗಿದೆ.

    ಕಳೆದ ತಿಂಗಳು ಸುರಿದ ಭಾರೀ ಮಳೆಗೆ ದಕ್ಷಿಣ ಕರ್ನಾಟಕ ತತ್ತರಿಸಿತ್ತು. ಇಂದಿನಿಂದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಇತ್ತ ಹವಾಮಾನ ಎಚ್ಚರಿಕೆ ನಡುವೆಯೇ ಕರಾವಳಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇನ್ನು ಅರಬ್ಬೀ ಸಮುದ್ರ ಪಕ್ಷಕ್ಷುಬ್ಧಗೊಳ್ಳಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ 5 ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್‍ಗಳನ್ನು ದಡಕ್ಕೆ ಕರೆಸಿಕೊಳ್ಳಲಾಗಿದೆ. ಮೀನುಗಾರರಿಗೆ ಮೈಕ್ ಮೂಲಕ ಸೂಚನೆ ನೀಡಲಾಗಿದ್ದು, ಬೋಟ್‍ಗಳೆಲ್ಲ ಬಂದರಿನಲ್ಲೇ ಲಂಗರು ಹಾಕಿದೆ.

    ಇನ್ನೆರಡು ದಿನದಲ್ಲಿ ವರ್ಷಧಾರೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಗಳಲ್ಲಿ ಹಿಂಗಾರು ಮಳೆ 140ರಿಂದ 180 ಮಿಲಿ ಮೀಟರ್ ಮಳೆಯಾಗಲಿದೆ ಅಂತ ರಾಜ್ಯ ಪ್ರಕೃತಿ ಪ್ರಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಳೆಯಾಗ್ತಿದ್ದು, ಕಸ್ಕೆಮನೆ ಗ್ರಾಮದ ದೇವದಾನ ಎಸ್ಟೇಟ್‍ನಲ್ಲಿ ಬಳ್ಳಾರಿ ಮೂಲದ ಕಾರ್ಮಿಕ ಶಿವಪ್ಪ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಳು ಬಿದ್ದು ನಾಲ್ಕು ಕಾರುಗಳ ಗಾಜು ಪುಡಿಪುಡಿಯಾಗಿದೆ. ಬಯಲುಸೀಮೆ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಯ್ತು. ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಇತ್ತ ಬೆಂಗಳೂರು ಸುತ್ತಮುತ್ತಲಿನ ಆನೇಕಲ್, ಎಲೆಕ್ಟ್ರಾನಿಕ್ಸ್ ಸಿಟಿ, ಬನ್ನೇರುಘಟ್ಟ ರಸ್ತೆ ಮತ್ತು ಕೆ.ಆರ್.ಪುರಂ ಭಾಗಗಳಲ್ಲಿ ಮಳೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆನೋವಾದ ಲೈಟ್ ಫಿಶಿಂಗ್- ಮೀನುಗಾರರ ಒಗ್ಗಟ್ಟು ಒಡೆಯುತ್ತಿದ್ದಾರೆ ಅಂತ ಸಚಿವರ ವಿರುದ್ಧ ಆರೋಪ

    ತಲೆನೋವಾದ ಲೈಟ್ ಫಿಶಿಂಗ್- ಮೀನುಗಾರರ ಒಗ್ಗಟ್ಟು ಒಡೆಯುತ್ತಿದ್ದಾರೆ ಅಂತ ಸಚಿವರ ವಿರುದ್ಧ ಆರೋಪ

    ಉಡುಪಿ: ಮೀನುಗಾರಿಕಾ ಸಚಿವರ ಕ್ಷೇತ್ರದಲ್ಲೇ ಇಂದು ಮೀನುಗಾರರು ಸಿಡಿದೆದ್ದಿದ್ದಾರೆ. ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರಿಕಾ ಇಲಾಖೆ ಕಚೇರಿಗೆ ಬೀಗ ಜಡಿದು ಅಧಿಕಾರಿಗಳು ಕಚೇರಿ ಪ್ರವೇಶ ಮಾಡದಂತೆ ಮೀನುಗಾರರು ಮುತ್ತಿಗೆ ಹಾಕಿದ್ದಾರೆ.

    ಹೌದು. ಈ ತರ ಜನ ಜಮಾಯಿಸಿ ಪ್ರತಿಭಟನೆ ನಡೆದದ್ದು ಲೈಟ್ ಫಿಶಿಂಗ್ ವಿರುದ್ಧ. ಅರಬ್ಬೀ ಸಮುದ್ರದಲ್ಲಿ ರಾತ್ರಿ ವೇಳೆ ಭಾರೀ ವೋಲ್ಟೇಜ್ ಲೈಕ್ ಹಾಕಿ ಮೀನುಗಾರಿಕೆ ಮಾಡ್ತಾರೆ. ಲೈಟ್ ಪ್ರಖರತೆಗೆ ಮೀನುಗಳು ಮೇಲೆ ಬರುತ್ತದೆ. ಅದನ್ನು ಮೀನುಗಾರರು ಬಲೆ ಬೀಸಿ ಹಿಡಿಯುತ್ತಾರೆ. ಇದರಿಂದ ಸಮುದ್ರದಲ್ಲಿ ಮೀನಿನ ಸಂತತಿ ನಾಶವಾಗುತ್ತಾ ಬಂದಿದೆ. ಇದರ ವಿರುದ್ಧ ಡೀಪ್ ಸೀ ಬೋಟ್ ಚಾಲಕ- ಮಾಲೀಕರ ಪ್ರತಿಭಟನೆ ನಡೆಸಿದರು.

    ಇದೇ ವೇಳೆ ಮೀನುಗಾರಿಕಾ ಇಲಾಖೆ, ಪೊಲೀಸ್ ಇಲಾಖೆ, ಕರಾವಳಿ ಕಾವಲುಪಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲೈಟ್ ಫಿಶಿಂಗ್ ಗೆ ಬೆಂಗಾವಲಾಗಿದ್ದ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದ ಪ್ರತಿಭಟನಾಕಾರರು ಸಚಿವ ಅವರ ಆಜ್ಞೆಯಂತೆ ಎಲ್ಲ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪರ್ಸಿನ್ ಬೋಟ್ ಮೀನುಗಾರರು ಲೈಟ್ ಹಾಕಿ ಫಿಶಿಂಗ್ ಮಾಡುವುದು ಅವ್ಯಾಹತವಾಗಿ ನಡೆಯುತ್ತಿದೆ. ಅಸ್ಸಾಮ್, ಕೇರಳ, ಗೋವಾ ಮೀನುಗಾರರು ಕರಾವಳಿ ಕಾರ್ಮಿಕರಾಗಿ ಬಂದು ಇಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಕುಲಗೆಡಿಸಿದ್ದಾರೆ ಎಂಂದು ಮಲ್ಪೆ ಮೀನುಗಾರರು ಆರೋಪಿಸಿದ್ದಾರೆ.

    ಇನ್ನು ಡೀಪ್ ಸೀ ಫಿಶಿಂಗ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಚಿವರು ಮೀನುಗಾರರ ಒಗ್ಗಟ್ಟು ಒಡೆದಿದ್ದಾರೆ. ಪರ್ಸಿನ್ ಮೀನುಗಾರರು ಮಾತ್ರ ಮೀನುಗಾರರು ಅಂತ ನಿರ್ಧರಿಸಿದಂತಿದೆ. ಕೇವಲ 10% ಜನರಿಗೆ ಇದರಿಂದ ಉಪಯೋಗವಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಕಸುಬು ಇಲ್ಲದಂತಾಗಿದೆ. ನಾವು ಮಾಧ್ಯಮದ ಮುಂದೆ ಬಂದು ಸಮಸ್ಯೆ ಹೇಳಿಕೊಂಡ್ರೆ, ನಮ್ಮನ್ನು ಮೀನುಗಾರರೇ ಅಲ್ಲ ಅಂತ ಆರೋಪಿಸ್ತಾರೆ. ನಮಗೆ ರಾಜಕೀಯ ಬೇಡ. ರಾಜಕಾರಣಕ್ಕೂ ಬರುವ ಅವಶ್ಯತಕೆಯಿಲ್ಲ. ಸಮಸ್ಯೆ ಬಗೆಹರಿಸಿ ಅಂತ ಮನವಿಗಳ ಮೇಲೆ ಮನವಿ ಕೊಡ್ತಾಯಿದ್ದರೆ, ಸಚಿವರು ಲೈಟ್ ಫಿಶಿಂಗ್ ಪರವಾಗಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ.

  • ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಓಖಿಗೆ ಕಡಲ ಒಡಲು ನಲುಗಿತು-ಸಮುದ್ರದ ನೀರು ರಸ್ತೆಗೆ ಬಂತು!

    ಉಡುಪಿ: ಕಡಲ ಒಡಲು ಓಖಿಗೆ ಸಿಲುಕಿ ಪ್ರಕ್ಷುಬ್ಧ ಆಗಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‍ಗಳು ಮತ್ತೆ ವಾಪಸ್ ಬಂದು ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉಡುಪಿಯ ಮಲ್ಪೆ ಬೀಚ್‍ನಲ್ಲಿ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಹೋಗುವ ಪ್ರವಾಸಿ ಬೋಟ್ ಸಂಚಾರ ನಿಷೇಧಿಸಲಾಗಿದೆ. ಕಳೆದ ರಾತ್ರಿಯಿಂದ ರಸ್ತೆಗೆ ಕಡಲ ಅಲೆಗಳು ಅಪ್ಪಳಿಸುತ್ತಿದ್ದು ತೀರದ ಜನ ಆತಂಕಕ್ಕೀಡಾಗಿದ್ದಾರೆ.

    ಓಖಿ ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಓಖೀ ಚಂಡಮಾರುತ ರಾಜ್ಯದ ಕರಾವಳಿಯಲ್ಲಿ ಹಾದು ಹೋಗುತ್ತಿರುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಬದಲಾವಣೆಯಾಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಇನ್ನೆರಡು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ರಾತ್ರಿ ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಮೀನುಗಾರಿಕ ಬೋಟ್‍ಗಳು ಮತ್ತೆ ಬಂದರು ಸೇರುತ್ತಿದೆ. ಕೇರಳ, ತಮಿಳುನಾಡಿನ ಬೋಟ್‍ಗಳು, ಮೀನುಗಾರರು ಆಶ್ರಯಕ್ಕಾಗಿ ಉಡುಪಿಯ ಮಲ್ಪೆ ಬಂದರಿನತ್ತ ಧಾವಿಸಿ ಬರುತ್ತಿದ್ದಾರೆ. ಮಲ್ಪೆ ಬೀಚ್‍ನಲ್ಲಿಯೂ ಪ್ರವಾಸಿಗರು ಸಮುದ್ರದಲ್ಲಿ ಬಹುದೂರ ಹೋಗಿ ನೀರಿನಲ್ಲಿ ನೀರಾಟ ಆಡದಂತೆ ಎಚ್ಚರಿಕೆ ನೀಡಲಾಗುತ್ತಿದೆ.

    ಜಾಗ್ರತೆ, ಜೀವದ ಜೊತೆ ಚೆಲ್ಲಾಟ ಬೇಡ: ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆಯ ಲೈಫ್ ಗಾರ್ಡ್ ಮೋಹನ್, ಹೊರ ಜಿಲ್ಲೆಯ ಪ್ರವಾಸಿಗರನ್ನು ನಿಯಂತ್ರಿಸೋದೇ ಸವಾಲು. ಹೇಳಿದರೂ ಸಮುದ್ರಕ್ಕೆ ಇಳಿದು ಬಿಡುತ್ತಾರೆ. ಅಪಾಯ ಎಂದು ಬೋರ್ಡ್ ಹಾಕಿದ್ರೂ ಅದನ್ನು ಜನ ಗಣನೆಗೆ ತೆಗೆದುಕೊಳ್ಳಲ್ಲ ಅಂತ ಅಸಮಾಧಾನಗೊಂಡರು.

    ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವುದರಿಂದ ಕಸಗಳು ದಡ ಸೇರುತ್ತಿದೆ. ಮಲ್ಪೆಯ ಸೈಂಟ್ ಮೇರಿಸ್ ಐಲ್ಯಾಂಡ್‍ಗೆ ತೆರಳುವ ಪ್ರವಾಸಿ ಬೋಟ್‍ಗಳ ಸಂಚಾರ ನಿಷೇಧಿಸಲಾಗಿದೆ. ಇಂದು ಪ್ರವಾಸಿಗರಿಗೆ ಐಲ್ಯಾಂಡ್ ನೋಡುವ ಭಾಗ್ಯ ಸಿಗುವುದಿಲ್ಲ. ನಾಳೆ ಮಧ್ಯ ರಾತ್ರಿವರೆಗೂ ಹವಾಮಾನ ಏರುಪೇರಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹವಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವುದಕ್ಕೆ ಸೂಚಿಸಲಾಗಿದೆ. ಬೀಚ್‍ನಲ್ಲಿರುವ ಲೈಫ್ ಗಾರ್ಡ್‍ಗಳು ಪ್ರವಾಸಿಗರ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಮೈಕ್ ಮೂಲಕ ಓಖಿ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.

    ಓಖಿ ಚಂಡಮಾರುತ ರಾಜ್ಯ ಕರಾವಳಿಯಿಂದ ಬಹುದೂರದಲ್ಲಿ ಸಾಗುತ್ತಿದ್ದು, ಲಕ್ಷದ್ವೀಪದಿಂದ ಗುಜರಾತ್ ಕಡೆಗೆ ಪಯಣಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮ್ಯಾಪ್ ಸಿದ್ಧಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಟ್ಟು ಗೊಂದಲ ನಿವಾರಣೆಗೆ ಯತ್ನಿಸುತ್ತಿದೆ. ಒಟ್ಟಿನಲ್ಲಿ ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

     

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

    https://www.youtube.com/watch?v=QC37Q2pdg9w