Tag: Fisheries

  • ಆಪರೇಷನ್‌ ಸಿಂಧೂರ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್‌ – ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ

    ಆಪರೇಷನ್‌ ಸಿಂಧೂರ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್‌ – ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ

    – ಮಂಗಳೂರು, ಕಾರವಾರ, ಉಡುಪಿ ಕಡಲತೀರದಲ್ಲಿ ತೀವ್ರ ನಿಗಾ

    ಮಂಗಳೂರು/ಕಾರವಾರ/ಉಡುಪಿ: ಪಾಕಿಸ್ತಾನದ (Pakistan) ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ಕಾರವಾರದಲ್ಲಿ ಕದಂಬ ನೌಕಾ ನೆಲೆ (Karwar Naval Base) ಹಾಗೂ ಬಂದರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿ ಕಾವಲುಪಡೆ, ಭಾರತೀಯ ತಟರಕ್ಷಕ ದಳದಿಂದ ತಪಾಸಣೆ ಹೆಚ್ಚಿಸಲಾಗಿದೆ. ಕಾರವಾರದ ಬಂದರಿಗೆ ಬರುವ ಅನ್ಯ ದೇಶದ ಹಡುಗುಗಳಲ್ಲಿ ಚೀನಾ, ಪಾಕಿಸ್ತಾನದ ಸಿಬ್ಬಂದಿಯಿದ್ದರೂ ನಿರ್ಬಂಧ ವಿಧಿಸಲಾಗಿದೆ. ಬಂದರಿಗೆ ಬಂದ ಹಡಗಿನಲ್ಲಿ ತೀವ್ರ ತಪಾಸಣೆ, ಮೀನುಗಾರಿಕಾ ಬೋಟ್‌ಗಳನ್ನು ಸಹ ತಪಾಸಣೆ ನಡೆಸಲಾಗುತ್ತಿದೆ. 12 ನಾಟಿಕನ್ ಮೈಲೂ ದೂರದಿಂದ ಹೊರ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದ್ದು, ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

    ಮಂಗಳೂರು:
    ಇನ್ನೂ ಮಂಗಳೂರಿನ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿರುವ ಕರಾವಳಿ ಕಾವಲು ಪಡೆ ಪೊಲೀಸರು ಮಂಗಳೂರಿನ ಬಂದರು ಕಡಲ ತೀರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್‌ಗಳನ್ನ ತಪಾಸಣೆ ನಡೆಸಿ ಮೀನುಗಾರರ ದಾಖಲೆ ಪರಿಶಿಲಿಸಿದ್ರು. ಸದ್ಯ ಅನುಮಾನಾಸ್ಪದ ಬೋಟ್‌ಗಳ ಮೇಲೆ ನಿಗಾ ಇಟ್ಟಿರುವ ಪೊಲೀಸರು ತಪಾಸಣೆ ಮುಂದುವರಿಸಿದ್ದಾರೆ.

    ಉಡುಪಿ:
    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧದ ಪ್ರಕರಣ ಬೆನ್ನಲ್ಲೇ ಉಡುಪಿಯಲ್ಲೂ ಹೈಅಲರ್ಟ್ ಮುಂದುವರಿದಿದೆ. ಕರಾವಳಿ ಕಾವಲು ಪೊಲೀಸರಿಗೆ 22 ಕಿ.ಮೀ ಆಳ ಸಮುದ್ರದಲ್ಲಿ 320 ಕಿಮೀ ಉದ್ದದಲ್ಲಿ ಕಾವಲು ಕಾಯುತ್ತಿದ್ದಾರೆ. ಈ ನಡುವೆ ಪ್ರವಾಸಿ ತಾಣಗಳ ಮೇಲೂ ನಿಗಾ ಇಡುವ ಜವಾಬ್ದಾರಿ ಸಿಎಸ್‌ಪಿ ಮೇಲೆ ಇದೆ. ಮಲ್ಪೆ ಕಡಲತೀರ, ಮರವಂತೆ, ಪಡುಬಿದ್ರೆ -ಕಾಪು ಭಾಗದಲ್ಲಿ ಸಿಎಸ್‌ಪಿ ಪಡೆ ಕಣ್ಗಾವಲು ಇಟ್ಟಿದೆ. ಕರಾವಳಿ ಭಾಗದ ರಕ್ಷಣೆ ಜೊತೆ ಪ್ರವಾಸಿಗರ ರಕ್ಷಣೆಯ ಜವಾಬ್ದಾರಿಯೆಂದು ಭಾವಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

  • ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ

    ಅವೈಜ್ಞಾನಿಕ ಮೀನುಗಾರಿಕೆ – ಕಡಲ ಜೀವಿಗಳಿಗೆ ತಂದ ಆತಂಕ

    – ಕಡಲತೀರಕ್ಕೆ ತೇಲಿಬರುತ್ತಿದೆ ಜಲಚರಗಳ ಕಳೆಬರ!
    – ಉರುಳಾಗ್ತಿದೆಯಾ ಮೀನುಗಾರರ ಬಲೆ?

    ಕಾರವಾರ: ಭೂಮಿಯ ಮೇಲೆ ಅದೆಷ್ಟೋ ಜೀವಿಗಳು ಬದುಕುತ್ತಿವೆಯೋ ಅದೇ ರೀತಿ ಸಾಗರದಾಳದಲ್ಲೂ ಕೂಡ ಸಾಕಷ್ಟು ಜಲಚರಗಳು ಸ್ವಚ್ಛಂದವಾಗಿ ಜೀವಿಸುತ್ತಿದೆ. ಕೋವಿಡ್ ಮತ್ತು ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ನಿರ್ಭಿತಿಯಿಂದ ಓಡಾಡಿಕೊಂಡಿದ್ದ ಡಾಲ್ಫಿನ್ ಗಳು ಮತ್ತು ಆಮೆಗಳಿಗೆ ಈಗ ಆತಂಕ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸುತ್ತಮುತ್ತಲ ಕಡಲತೀರಗಳಲ್ಲಿ ಅವುಗಳು ಸಾವನ್ನಪ್ಪುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.

    ಡಾಲ್ಫಿನ್ ಸಂಖ್ಯೆ ಕಡಿಮೆ ಆಗ್ತಿದೆಯಾ?
    ರಾಜ್ಯದ ಕರಾವಳಿ ಭಾಗದಲ್ಲಿನ ಕಡಲತೀರಗಳು ಎಷ್ಟು ಸುಂದರವೋ, ಅಷ್ಟೆ ಸಾಗರದಾಳದಲ್ಲಿ ಬದುಕುವ ಜಲಚರಗಳು ಕೂಡ ನೋಡುಗರನ್ನ ಆಕರ್ಷಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಕಾಣಸಿಗುವ ಡಾಲ್ಫಿನ್ ಗಳು ಒಂದು ಅದ್ಬುತ ಪ್ರಪಂಚವನ್ನ ಸೃಷ್ಟಿಸಿಕೊಂಡಿದೆ. ಇಲ್ಲಿನ ದೇವಭಾಗ, ಮಾಜಾಳಿ, ಕೂರ್ಮಗಡ ಸೇರಿದಂತೆ ವಿವಿದೆಡೆ ಜೀವಿಸಿರುವ ಇಂಡೋ ಫೆಸಿಪಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುಕೂಡ ಆಗಿದೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆಯಾ ಎಂಬ ಆತಂಕ ವನ್ನು ಕಡಲವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

    ಜಲಮಾಲಿನ್ಯದಿಂದ ಹಿಂದೆ ಆಗಾಗ ಕಾರವಾರ ಕಡಲತೀರಕ್ಕೆ ಬಂದು ಡಾಲ್ಫಿನ್ ಕಳೇಬರ ಬೀಳುತ್ತಿದ್ದವು. ಇದೀಗ ಮಾಜಾಳಿ ಕಡಲತೀರದಲ್ಲಿ ಹವಾಕ್ಸ್ ಬುಲ್ ಟರ್ಟಲ್ ಜಾತಿಯ ಆಮೆಗಳು ಮತ್ತು ಹಂಪ್ ಬ್ಯಾಕ್ ಡಾಲ್ಪಿನ್ ಒಂದರ ಹಿಂದೆ ಒಂದರಂತೆ ಸಾವನ್ನಪ್ಪಿದೆ.

    ಜಲಚರಗಳ ಸಾವಿಗೆ ಕಾರಣವೇನು?:
    ಕಳೆದೊಂದು ತಿಂಗಳಿಂದ ಮೀನುಗಾರಿಕೆ ಪ್ರಾರಂಭವಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ಕಾರಣ ಮತ್ತು ಮೀನುಗಾರಿಕಾ ನಿಷೇಧ ಅವಧಿ ಇದ್ದಿದರಿಂದ ಸಮುದ್ರದಲ್ಲಿ ಫಿಶಿಂಗ್ ನಡೆಯದೆ ಇದ್ದಿದ್ದರಿಂದ ಕಡಲು ಶಾಂತವಾಗಿತ್ತು. ಜಲಚರಗಳು ಯಾವುದೇ ಭೀತಿಯಿಲ್ಲದೇ ನಿರ್ಭಿಡೆಯಿಂದ ಓಡಾಡಿಕೊಂಡಿದ್ದವು. ಈಗ ಮೀನುಗಾರಿಕಾ ಯಾಂತ್ರಿಕ ದೋಣಿಗಳಿಂದ ಮೀನು ಬೇಟೆ ನಡೆಯುತ್ತಿರುವುದರಿಂದ ಬಲೆಗೆ ಸಿಲುಕಿ ಉಸುರುಕಟ್ಟಿ ಸಾವನ್ನಪ್ಪುತ್ತಿದೆ ಎಂದು ಇವುಗಳ ಮರಣೋತ್ತರ ಪರೀಕ್ಷೆ ನಂತರ ಕಡಲವಿಜ್ಞಾನಿಗಳು ಹೇಳಿದ್ದಾರೆ.

    ತಜ್ಞರು ಅಭಿಪ್ರಾಯವೇನು?
    ಈ ಕುರಿತು ಅಧ್ಯಯನ ನಡೆಸಿರುವ ಕಾರವಾರದ ಧಾರವಾಡ ಕಡಲಜೀವಶಾಸ್ತ್ರ ವಿಭಾಗದ ವಿಜ್ಞಾನಿಯಾದ ಶಿವಕುಮಾರ್ ಹರಿಗಿಯವರು ಹೇಳುವಂತೆ ಸಾಮಾನ್ಯವಾಗಿ ಡಾಲ್ಫಿನ್ ಗಳು ಮತ್ತು ಆಮೆಗಳು ಪರಿಸರದ ಗಾಳಿ ಸೇವನೆಗಾಗಿ ಸಮುದ್ರದ ಮೇಲಕ್ಕೆ ಬಂದು ಹೋಗುತ್ತವೆ. ಅವುಗಳಿಗೆ ಉಸಿರಾಟದ ಸಮಸ್ಯೆಯಾದಲ್ಲಿ ಮಾತ್ರ ಮೇಲಕ್ಕೆ ಬರಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

    ಉರುಳಾಗ್ತಿದೆಯಾ ಮೀನುಗಾರರ ಬಲೆ?
    ಕರ್ನಾಟಕ ಮತ್ತು ಕಾರವಾರ ಕರಾವಳಿಯಲ್ಲಿ ಹೆಚ್ಚಾಗಿ ಕಾಣಿಸುವ ಡಾಲ್ಫಿನ್ ಗಳು 20 ಮೀಟರ್ ಆಳದವರೆಗೆ ಮಾತ್ರ ಜೀವಿಸುತ್ತವೆ. ಇವುಗಳಿಗೆ ಇಲ್ಲಿ ಭರಪೂರ ಆಹಾರ ಸಿಗುತ್ತವೆ. ಯಾವಾಗಲೂ ಕೂಡ ಮೀನುಗಾರಿಕೆ ಬಲೆಯ ಜೊತೆ ಇಂಟರ್ ಆಕ್ಟ್ ಮಾಡುವುದರಿಂದ ಒಮ್ಮೊಮ್ಮೆ ಬಲೆಗೆ ಸಿಲುಕಿ ಸಾವನ್ನಪ್ಪುತ್ತವೆ. ಸಮುದ್ರದಲ್ಲಿ ಬಲ್ ಟ್ರಾಲ್ ಫಿಷಿಂಗ್ ಸೆರಿದಂತೆ ನಿಷೇಧಿತ ಮೀನುಗಾರಿಕೆ ಹಾಗೂ ಮೀನುಗಾರಿಕೆಯಲ್ಲಿ ಬಳಸಿ ಹಾಳಾದ ಬಲೆಗಳನ್ನು ಸಮುದ್ರದಲ್ಲಿಯೇ ಬಿಟ್ಟು ಹೋಗುತ್ತಿರುವುದು ಸಹ ಜಲಚರಗಳಿಗೆ ಕಂಟಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

    ಕಾರವಾರ ಸಮೀಪದ ಕಡಲಿನಲ್ಲಿ ವಾಸವಾಗಿರುವ ಡಾಲ್ಫಿನ್ ಗಳು ಆಗಾಗ ಸಮುದ್ರದ ಮೇಲಕ್ಕೆ ಬಂದು ಆಕರ್ಷಣೆ ಉಂಟುಮಾಡುತ್ತಿವೆ. ಆಮೆಗಳು ಕೂಡ ಆಗಾಗ ತೀರದಲ್ಲಿ ಪ್ರತ್ಯಕ್ಷವಾಗಿ ವಾಪಾಸ್ಸಾಗುತ್ತವೆ. ಆದ್ರೆ ಮೀನುಗಾರಿಕೆಯ ತ್ಯಾಜ್ಯದಿಂದ ಅವುಗಳು ಸಾವನ್ನಪ್ಪುತ್ತಿರುವುದು ಮಾತ್ರ ಕಳವಳಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ಕಾರವಾರದವರೆಗೆ ಸಂಚರಿಸಲಿದೆ ವಿಸ್ಟಾಡೋಮ್ ರೈಲು

  • ಕಾವೇರಿ ನದಿಯಲ್ಲಿ ಅಕ್ರಮ ಮೀನುಗಾರಿಕೆಗೆ ಪ್ರಯತ್ನ – 8 ಜನರ ಬಂಧನ

    ಕಾವೇರಿ ನದಿಯಲ್ಲಿ ಅಕ್ರಮ ಮೀನುಗಾರಿಕೆಗೆ ಪ್ರಯತ್ನ – 8 ಜನರ ಬಂಧನ

    ಚಾಮರಾಜನಗರ: ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನುಗಾರಿಕೆಗೆ ತೆರಳುತ್ತಿದ್ದ 8 ಮಂದಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

    ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಜಾಗೇರಿ ಚಿನ್ನಪ್ಪ(42), ಅಮಲ್ ಅರ್ಪುದ್ ಜಯರಾಜ್(32), ಪೀಟರ್ ಪೇರಿಯನಾಯಗಂ (35), ಸ್ಟ್ಯಾನ್ಯಿ ಜಾನ್ ಬೋಸ್ಕೊ(35), ಅರುಳ್ ರಾಜ್ (35), ಪೆರಿಯನಾಯಗಮ್ಮ(34), ಜ್ಯೋತಿಪ್ರಿಯಾ(28) ಹಾಗೂ ಸುನೀತಾ(28) ಬಂಧಿತ ಆರೋಪಿಗಳು. ಕಾವೇರಿ ವನ್ಯಜೀವಿ ವ್ಯಾಪ್ತಿಯ ಅರಣ್ಯದ ಚಿಕ್ಕಲ್ಲೂರು ಬೀಟ್ ಗೆ ಸೇರಿದ ಅರಣ್ಯದ ಎಣ್ಣೆಹೊಳೆಯ ಬಳಿ ಅಕ್ರಮವಾಗಿ ಮೀನು ಹಿಡಿಯಲು ಪರಿಕರಗಳೊಂದಿಗೆ ಆರೋಪಿಗಳು ಹೊರಟಿದ್ದರು.

    ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾವೇರಿ ವನ್ಯಜೀವಿ ಡಿಸಿಎಫ್ ಎಸ್.ರಮೇಶ್ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಇಲ್ಲಿನ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಐದು ಬೋಟ್, ಐದು ಬಲೆ, ಐದು ಹುಟ್ಟು, ಮೀನು ಬೇಟೆಯ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಮೀನುಗಾರಿಕೆ ದೋಣಿ ಮುಳುಗಡೆ- ಅಚ್ಚರಿ ರೀತಿಯಲ್ಲಿ 7 ಮೀನುಗಾರರು ಪಾರು

    ಕಾರವಾರ: ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ಘಟನೆ ನಡೆದಿದ್ದು, ಅಚ್ಚರಿ ರೀತಿಯಲ್ಲಿ 7 ಮೀನುಗಾರರನ್ನು ರಕ್ಷಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಘಟನೆ ನಡೆದಿದೆ. ತಾಲೂಕಿನ ಮಾನೀರ್ ಗ್ರಾಮದ ಸಮೀಪ ಅಘನಾಶಿನಿ ನದಿಯಲ್ಲಿ ಈ ಅವಘಡ ಸಂಭವಿಸಿದ್ದು, ದೋಣಿಯಲ್ಲಿದ್ದ 7 ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರರ ಮೀನುಗಾರರೇ ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದ್ದಾರೆ. ಸದ್ಯ ಯಾವುದೇ ದುರ್ಘಟನೆ ನಡೆಯದಂತೆ ಪಾರಾಗಿದ್ದಾರೆ.

    ತಾಲೂಕಿನ ದೀವಗಿಯ ನಿತ್ಯ ಅಂಬಿಗ ಅವರಿಗೆ ಸೇರಿದ ದೋಣಿ ಇದಾಗಿದ್ದು, ಬೆಳಗ್ಗೆ ಎಂದಿನಂತೆ ಮರಳುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯ ಮೇಲೆ ಭಾರ ಹೆಚ್ಚಾದ ಪರಿಣಾಮ ನದಿಯಲ್ಲಿ ಮಗುಚಿದೆ. ಈ ವೇಳೆ ದೋಣಿಯಲ್ಲಿದ್ದ 7 ಜನ ನದಿಯಲ್ಲಿ ಬಿದ್ದಿದ್ದಾರೆ. ಇದನ್ನು ಕಂಡ ಹತ್ತಿರದ ಮತ್ತೊಂದು ದೋಣಿಯ ಮೀನುಗಾರರು ತಕ್ಷಣವೇ ಎಚ್ಚೆತ್ತುಕೊಂಡು ದೋಣಿಯಲ್ಲಿ ಒಟ್ಟು 7 ಜನ ಮೀನುಗಾರರನ್ನು ರಕ್ಷಿಸಿದ್ದಾರೆ. ಇದರಿಂದಾಗಿ ದೋಣಿಯಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಕೊರೊನಾ ಆತಂಕ- ಮೀನುಗಾರಿಕೆ ಆರಂಭದ ದಿನವೇ ಬಿಕೋ ಎನ್ನುತ್ತಿದೆ ಬಂದರು

    ಕೊರೊನಾ ಆತಂಕ- ಮೀನುಗಾರಿಕೆ ಆರಂಭದ ದಿನವೇ ಬಿಕೋ ಎನ್ನುತ್ತಿದೆ ಬಂದರು

    ಕಾರವಾರ: ರಾಜ್ಯದ ಕರಾವಳಿಯಲ್ಲಿ ಅಗಸ್ಟ್ ತಿಂಗಳ ಮೊದಲ ದಿನ ಮೀನುಗಾರಿಕೆ ಪ್ರಾರಂಭಕ್ಕೆ ವಿದ್ಯುಕ್ತ ಚಾಲನೆ ಸಿಗುತ್ತದೆ. ಮಳೆಗಾಲದ ಎರಡು ತಿಂಗಳು ಬಂದ್ ಆಗುವ ಮೀನುಗಾರಿಕೆ, ಸರ್ಕಾರದ ಆದೇಶದಂತೆ ಇಂದಿನಿಂದ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಪ್ರತಿ ವರ್ಷ ಅಗಸ್ಟ್ ನಲ್ಲಿ ಮೀನುಗಾರಿಕೆಯನ್ನು ಹಬ್ಬದಂತೆ ಆಚರಿಸುತ್ತಿದ್ದ ಉತ್ತರ ಕನ್ನಡ ಮೀನುಗಾರರ ಸಂಭ್ರಮ ಕಳೆಗುಂದಿದೆ.

    ಸರ್ಕಾರದ ಆದೇಶದಂತೆ ಜೂನ್, ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ ಬಳಿಕ ಅಗಸ್ಟ್ 1 ರಿಂದ ಪುನಃ ಪ್ರಾರಂಭ ಮಾಡಲಾಗುತ್ತದೆ. 61 ದಿನಗಳ ಬಳಿಕ ಮೀನುಗಾರಿಕೆ ಪ್ರಾರಂಭವನ್ನು ಮೀನುಗಾರರು ಹಬ್ಬದಂತೆ ಆಚರಣೆ ಮಾಡೋದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ. ಅದರಂತೆ ಇಂದು ಕರಾವಳಿಯಲ್ಲಿ ಮೀನುಗಾರಿಕೆ ಮತ್ತೆ ಪ್ರಾರಂಭಗೊಂಡಿದ್ದು, ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಲ್ಲಿ ಯಾವುದೇ ಸಂಭ್ರಮಾಚರಣೆ ಕಂಡುಬಂದಿಲ್ಲ. ಬೋಟುಗಳಿಗೆ ಮಾವಿನ ತೋರಣ, ಹೂವಿನ ಹಾರ ಹಾಕಿ ಸಿಂಗರಿಸಿ ಪೂಜೆ ಮಾಡಿ ಖುಷಿಯಿಂದ ಸಮುದ್ರಕ್ಕಿಳಿಯುತ್ತಿದ್ದ ಮೀನುಗಾರರ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿದೆ.

    ಕಾರವಾರ ತಾಲೂಕಿನ ಬೈತಖೋಲ ಬಂದರಿನಲ್ಲಿ ಮೀನುಗಾರಿಕೆ ಪ್ರಾರಂಭದ ದಿನ ಕಾಣುತ್ತಿದ್ದ ಹಬ್ಬದ ಸಂಭ್ರಮ ಈ ಬಾರಿ ಕಾಣೆಯಾಗಿದೆ. ಕೆಲವೇ ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿದ್ದು, ಸಾಕಷ್ಟು ಬೋಟುಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿವೆ. ಕೊರೊನಾ ಅಟ್ಟಹಾಸ ಹಿನ್ನೆಲೆ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು, ಇನ್ನೂ ಮರಳಿಲ್ಲ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ಕಾರ್ಮಿಕರೇ ಇಲ್ಲದಂತಾಗಿದ್ದು, ಸ್ಥಳೀಯರು ಕೆಲವೇ ಬೋಟುಗಳನ್ನು ಮೀನುಗಾರಿಕೆಗೆ ಕೊಂಡೊಯ್ದಿದ್ದಾರೆ.

    ಸಮುದ್ರಕ್ಕಿಳಿದ ಬೋಟುಗಳು ಮರಳಿ ದಡಕ್ಕೆ
    ಕಾರವಾರ ನಗರದ ಬೈತಖೋಲ್ ಮೀನುಗಾರಿಕಾ ಬಂದರಿನಿಂದ ಇಂದು ಬೆಳಗ್ಗೆ ಸುಮಾರು 50 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ಆದರೆ ಇಡೀ ದಿನ ಸಮುದ್ರದಲ್ಲಿ ಶ್ರಮಿಸಿದರೂ ಕೆಲವು ದೋಣಿಗಳಿಗೆ ಮಾತ್ರ ಒಂದೆರಡು ಬುಟ್ಟಿಗಳಷ್ಟೇ ಸೆಟ್ಲೆ (ಸೀಗಡಿ) ಮೀನುಗಳು ಸಿಕ್ಕಿವೆ. ಮುದಗಾ ಬಂದರಿನಿಂದಲೂ ಸುಮಾರು 60 ದೋಣಿಗಳು ಸಮುದ್ರಕ್ಕೆ ತೆರಳಿದ್ದವು. ಅವೂ ಖಾಲಿಯಾಗಿಯೇ ಬಂದರಿಗೆ ಮರಳಿವೆ.

    ಇಂದು ಅಂದಾಜು ಒಂದು ಕ್ವಿಂಟಲ್ ಮಾತ್ರ ಮೀನು ಸಿಕ್ಕಿವೆ. ದೋಣಿಗಳಿಗೆ ದಿನವೊಂದಕ್ಕೆ 70ರಿಂದ 80 ಲೀಟರ್‍ಗಳಷ್ಟು ಡೀಸೆಲ್ ಬೇಕು. ಮೀನು ವ್ಯಾಪಾರಿಗಳು ಸೆಟ್ಲೆಯನ್ನು ಕೆ.ಜಿ.ಗೆ 105ರೂ.ಗೆ ಖರೀದಿಸುವುದಾಗಿ ಹೇಳಿದ್ದಾರೆ. ಕಾರ್ಮಿಕರ ವೇತನ, ನಿತ್ಯದ ಆದಾಯವನ್ನೆಲ್ಲ ಒಟ್ಟುಗೂಡಿಸಿದರೆ ಮೊದಲ ದಿನ ನಷ್ಟವೇ ಆಗಿದೆ. ಈ ಅಂದಾಜಿನ ಪ್ರಕಾರ ದೋಣಿಗಳ ಡೀಸೆಲ್ ಖರ್ಚೂ ಸಿಗುವುದಿಲ್ಲ ಎಂದು ಮೀನುಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಭಯ, ಬಂದರು ಖಾಲಿ ಖಾಲಿ
    ಕರಾವಳಿ ಭಾಗದ ಮಂಗಳೂರಿನ ಬಂದರು, ಮಹರಾಷ್ಟ್ರದ ಬಂದರುಗಳಲ್ಲಿ ಮೀನುಗಾರರಿಗೆ ಕೊರೊನಾ ವಕ್ಕರಿಸಿದೆ. ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಸಹ ಹಲವು ಮೀನುಗಾರರಿಗೆ ಕೊರೊನಾ ತಗುಲಿದೆ. ಹೀಗಾಗಿ ಹಲವು ಮೀನುಗಾರರು ಸಮುದ್ರಕ್ಕೆ ಇಳಿಯಲು ಹೆದರುತಿದ್ದಾರೆ. ಇದರಿಂದಾಗಿ ಬೋಟ್ ಮಾಲೀಕರು ಕೆಲಸಗಾರರಿಲ್ಲದೆ ಬೋಟುಗಳನ್ನು ಲಂಗುರು ಹಾಕುವಂತಾಗಿದೆ.

    ಕಳೆದ ಬಾರಿ ಅಗಸ್ಟ್ ಮೊದಲವಾರದಲ್ಲಿ ನೆರೆ ಪರಿಸ್ಥಿತಿ ಉಂಟಾದ ಬಳಿಕ ಸಮುದ್ರದಲ್ಲಿ ಚಂಡಮಾರುತ ಉಂಟಾಗಿದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಅದಾದ ಬಳಿಕ ಎರಡು ತಿಂಗಳು ನಡೆದ ಮೀನುಗಾರಿಕೆ, ಬಳಿಕ ಈ ವರ್ಷದ ಪ್ರಾರಂಭದಲ್ಲಿ ಮತ್ಸ್ಯಕ್ಷಾಮ ಹಿನ್ನೆಲೆ ಹಂತ ಹಂತವಾಗಿ ಸ್ಥಗಿತಗೊಳ್ಳುವಂತಾಗಿದ್ದು, ಅಷ್ಟರಲ್ಲೇ ಕೊರೊನಾ ವಕ್ಕರಿಸಿದ ಪರಿಣಾಮ ಮೀನುಗಾರಿಕೆ ಸಂಪೂರ್ಣ ನಿಂತುಹೋಗಿತ್ತು. ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಪ್ರಾರಂಭವಾಗಬೇಕಿತ್ತು. ಕೊರೊನಾ ಅವಾಂತರದಿಂದಾಗಿ ಅದಕ್ಕೂ ಅಡ್ಡಿಯಾಗಿದೆ.

    ಸದ್ಯ ಹೊರರಾಜ್ಯದ ಮೀನುಗಾರರು ಬರುವುದು ಸಾಧ್ಯವಿಲ್ಲದ ಹಿನ್ನೆಲೆ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಮೀನುಗಾರಿಕೆ ಪ್ರಾರಂಭಿಸಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದಾರೆ. ಸದ್ಯ ಮೀನುಗಾರಿಕೆ ಪ್ರಾರಂಭಿಸಿರುವವರಿಗೆ ಮೀನಿನ ಲಭ್ಯತೆಯನ್ನು ಪರಿಶೀಲಿಸಿದ ಬಳಿಕ ಮೀನುಗಾರಿಕೆಗೆ ಇಳಿಯಲು ಪರ್ಸಿನ್ ಬೋಟು ಮೀನುಗಾರರು ನಿರ್ಧರಿಸಿದ್ದು , ಇದೇ ತಿಂಗಳ 5ನೇ ತಾರೀಖಿನಿಂದ ಪ್ರಾರಂಭಿಸುವ ಸಾಧ್ಯತೆಗಳಿವೆ.

  • ಕಾರವಾರದಲ್ಲಿ ದಿಢೀರ್ ಬಂದ್- ನೂರಕ್ಕೂ ಹೆಚ್ಚು ಮೀನುಗಾರರ ಬಂಧನ

    ಕಾರವಾರದಲ್ಲಿ ದಿಢೀರ್ ಬಂದ್- ನೂರಕ್ಕೂ ಹೆಚ್ಚು ಮೀನುಗಾರರ ಬಂಧನ

    ಕಾರವಾರ: ಬಹು ನಿರೀಕ್ಷಿತ ಸಾಗರ ಮಾಲಾ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಕಾರವಾರ ವಾಣಿಜ್ಯ ಬಂದರಿನಲ್ಲಿ ಪ್ರಾರಭಿಸಿರುವುದನ್ನು ವಿರೋಧಿಸಿ ಇಂದು ಮೀನುಗಾರ ಮುಖಂಡರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ನಿರತ ಮೀನುಗಾರ ಮುಖಂಡರು ಸೇರಿ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದರು. ಪೊಲೀಸರು ಪ್ರತಿಭಟನಾ ನಿರತ ಮೀನುಗಾರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮೀನುಗಾರರು ಕಾರವಾರ ನಗರದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

    ಮುತ್ತಿಗೆ ಹಾಕಿದ ಮಹಿಳಾ ಮೀನುಗಾರರು: ಪ್ರತಿಭಟನಾ ನಿರತ ಮೀನುಗಾರರನ್ನು ಬಂಧಿಸುತ್ತಿದಂತೆ ನೂರಾರು ಮಹಿಳಾ ಮೀನುಗಾರರು ಕಾರವಾರ ವಾಣಿಜ್ಯ ಬಂದರಿನ ಕಾಮಗಾರಿ ನಡೆಸುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಎಲ್ಲಾ ಮಹಿಳಾ ಮೀನುಗಾರರನ್ನು ಬಂಧಿಸಲಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ಬಂದೋಬಸ್ತ್ ನಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಯ್ತು.

    ತೀವ್ರ ವಿರೋಧದ ನಡುವೆಯೇ ಬಂದರು ವಿಸ್ತರಣೆಯ 126 ಕೋಟಿ ರೂ ನ ಜಟ್ಟಿ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಮೀನುಗಾರರು ಇದಕ್ಕೆ ಅಡ್ಡಿಪಡಿಸುವ ಕಾರಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಹೋರಾಟ ಯಾಕೆ? ಮುಂದಿನ ನಡೆ ಏನು?
    ಕಳೆದ ನಾಲ್ಕು ತಿಂಗಳಿಂದ ಮೀನುಗಾರರು ಸಾಗರ ಮಾಲಾ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಯೋಜನೆಯಿಂದಾಗಿ ಮೀನುಗಾರರು ತಮ್ಮ ಸ್ಥಳ ಕಳೆದುಕೊಳ್ಳುವ ಜೊತೆ ಸಂಪ್ರದಾಯಿಕ ಮೀನುಗಾರಿಕೆಗೆ ಹಿನ್ನಡೆ ಆಗಲಿದೆ. ಮೀನುಗಾರರು ತಮ್ಮ ಮೂಲ ಸ್ಥಳವನ್ನು ಕಳೆದುಕೊಳ್ಳಲಿದ್ದು ಕಾರವಾರದ ಕಡಲತೀರ ಸಂಪೂರ್ಣ ಬದಲಾಗಿ ಮೂಲ ರೂಪ ಕಳೆದುಕೊಳ್ಳಲಿದೆ. ಯೋಜನೆಯಿಂದ ಪರಿಸರಕ್ಕೆ ಹಾನಿ, ಈ ಯೋಜನೆಯಿಂದ ಮೀನುಗಾರರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂಬುವುದು ಮೀನುಗಾರರ ಆತಂಕವಾಗಿದೆ.

    ಹೀಗಾಗಿ ಹಲವು ಬಾರಿ ಬಂದರು ಇಲಾಖೆ ಹಾಗೂ ಬಂದರು ಸಚಿವರಿಗೆ ಮನವಿ ಸಲ್ಲಿಸುವ ಜೊತೆಗೆ ಮಾತೂಕತೆ ಸಹ ನಡೆದಿತ್ತು. ಆದರೇ ಹಣ ಮಂಜೂರಾದ್ದರಿಂದ ಕಾಮಗಾರಿ ಪ್ರಾರಂಭಿಸಲು ಬಂದರು ಇಲಾಖೆ ಪೊಲೀಸ್ ಇಲಾಖೆಯ ಬಂದೋಬಸ್ತಿನಲ್ಲಿ ಕೆಲಸ ಪ್ರಾರಂಭಿಸಿದೆ.

    ಇನ್ನು ಹಲವು ತಿಂಗಳಿಂದ ಮೀನುಗಾರಿಕಾ ಇಲಾಖೆಗೆ ಮನವಿ ನೀಡಿ ಹೋರಾಟ ನೆಡಸಿದರೂ ಕಾಮಗಾರಿ ಪ್ರಾರಂಭಿಸಿ, ಹೋರಾಟಗಾರರನ್ನು ಬಂಧಿಸಲಾಗಿದೆ. ಈಗ ಚಿಕ್ಕದಾಗಿ ಹೋರಾಟ ಮಾಡಿದ್ದೇವೆ. ಮುಂದೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಇಂದಿನಿಂದಲೇ ನಿರಂತರ ಹೋರಾಟ ಮುಂದುವರಿಯಲಿದೆ. ಕಾಮಗಾರಿ ಸ್ಥಗಿತಗೊಳಿಸಿ ಯೋಜನೆ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಮೀನುಗಾರ ಸಂಘಟನೆ ನೀಡಿದ್ದು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದೆ.

    ಏನಿದು ಸಾಗರ ಮಾಲ ? ಯೋಜನೆ ರೂಪರೇಷೆ ಏನು?
    ಸಾಗರ ಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆಯಡಿ ಹಣ ಬಿಡುಗಡೆ ಮಾಡಿದೆ. ಸಾಗರ ಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

    5 ಹೆಚ್ಚುವರಿ ಹಡಗು ನಿಲ್ಲುವ ಹಡಗುಕಟ್ಟೆ:
    ಎರಡನೇ ಹಂತದ ಕಾಮಗಾರಿಯಿಂದ ಐದು ಹೆಚ್ಚುವರಿ ಹಡಗುಗಳನ್ನು ನಿಲ್ಲಿಸಲು ಅನುಕೂಲವಾಗಲಿದೆ. ಎರಡನೇ ಹಂತದ ವಿಸ್ತರಣೆ ಯೋಜನೆಯಂತೆ ಒಟ್ಟು 1,508 ಮೀಟರ್ ಉದ್ದದಷ್ಟು ಹಡಗುಕಟ್ಟೆ ನಿರ್ಮಿಸಲು ನೀಲ ನಕ್ಷೆ ತಯಾರಿಸಲಾಗಿದೆ. ಇದಕ್ಕಾಗಿ ಕಡಲತೀರದ ಮೇಲಿನ ಉದ್ಯಾನದ ಸಮೀಪದಿಂದ ಪೂರ್ವದೆಡೆಗೆ 1160 ಮೀಟರ್‍ನಷ್ಟು ತಡೆಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

     

    ಈಗಾಗಲೇ ಮಣ್ಣು ಪರೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಸದ್ಯ 2017-18 ನೇ ಸಾಲಿನ ಬಜೆಟ್‍ನಲ್ಲಿ ಬಿಡುಗಡೆಯಾದ 125 ಕೋಟಿ ರೂ. ಹಣದಲ್ಲಿ 820 ಮೀಟರ್ ಉದ್ದದ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಉಳಿದ ಹಣ ಬಿಡುಗಡೆಯಾದ ನಂತರ ಬಾಕಿ ಕಾಮಗಾರಿ ನಡೆಸಲಾಗುತ್ತದೆ. ತಡೆಗೋಡೆ ಸುಮಾರು 17 ರಿಂದ 10 ಮೀಟರ್ ಅಗಲಕ್ಕೆ ಸಮುದ್ರ ಮಟ್ಟದಿಂದ ನಾಲ್ಕೈದು ಮೀಟರ್‍ನಷ್ಟು ಎತ್ತರಕ್ಕೆ ನಿರ್ಮಾಣವಾಗಲಿದೆ.

    ವಾಣಿಜ್ಯ ಬಂದರಿನ ವಿಸ್ತರಣೆಗಾಗಿ ಕಡಲ ತೀರದ ಉದ್ಯಾನದಲ್ಲಿರುವ ಪ್ಯಾರಾಗೋಲಾದ ಸಮೀಪದಿಂದ 840 ಮೀಟರ್‍ನಷ್ಟು ಉದ್ದದ ತಡೆಗೋಡೆ ನಿರ್ಮಾಣಕ್ಕೆ 126 ಕೋಟಿ ಹಣ ಬಿಡುಗಡೆಯಾಗಿದೆ.ಬಂದರು ವಿಸ್ತರಣೆ ಆದರೇ ರಾಜ್ಯದ ಮೊದಲ ಅತೀ ದೊಡ್ಡ ಬಂದರಾಗಿ ಕಾರವಾರದ ವಾಣಿಜ್ಯ ಬಂದರು ರೂಪಗೊಳ್ಳಲಿದ್ದು, ವಾಣಿಜ್ಯ ವಹಿವಾಟು, ಆದಾಯ ಸರ್ಕಾರಕ್ಕೆ ಹೆಚ್ಚಾಗಲಿದೆ. ಪ್ರವಾಸೋದ್ಯಮ, ಉದ್ಯೋಗ ದೊರೆಯುವ ಜೊತೆ ಕಾರವಾರ ನಗರಿ ಆರ್ಥಿಕ ಪ್ರಗತಿ ಕಾಣಲಿದೆ ಎಂಬುದು ಸರ್ಕಾರದ ವಾದವಾಗಿದೆ.

    ಒಟ್ಟಿನಲ್ಲಿ ಸಾಗರಮಾಲಾ ಯೋಜನೆ ವಿರೋಧದ ಕಿಡಿ ಇಡೀ ಕಾರವಾರ ನಗರವನ್ನು ಸ್ತಬ್ಧಗೊಳಿಸಿದ್ದು ಮುಂದಿನ ದಿನಗಳಲ್ಲಿ ಯಾವ ಮಟ್ಟ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಐದು ದಿನಗಳಿಂದ ಸುರಿಯುತ್ತಿದೆ ಮಳೆ – ಉಡುಪಿಯಲ್ಲಿ ಕೃತಕ ನೆರೆ ಸೃಷ್ಟಿ

    ಐದು ದಿನಗಳಿಂದ ಸುರಿಯುತ್ತಿದೆ ಮಳೆ – ಉಡುಪಿಯಲ್ಲಿ ಕೃತಕ ನೆರೆ ಸೃಷ್ಟಿ

    ಉಡುಪಿ: ಎಡೆಬಿಡದೆ ಮಳೆಯಾಗುತ್ತಿದ್ದು, ಐದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಕೃತಕ ನೆರೆ ಸಂಭವಿಸಿದೆ.

    ಐದು ದಿನಗಳಿಂದ ನಿರಂತರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕಾಲುವೆ ಸಮೀಪದ ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಕಲ್ಸಂಕ, ಅಂಬಾಗಿಲು ವ್ಯಾಪ್ತಿಯಲ್ಲಿ ಕೃತಕ ನೆರೆ ಸಂಭವಿಸಿದೆ. ಭಾರೀ ಮಳೆಯಿಂದ ಕಾಲುವೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳಲ್ಲಿಯೂ ನೀರು ತುಂಬಿಕೊಂಡಿದೆ. ಹೀಗಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸುತ್ತಿದ್ದಾರೆ.

    24 ಗಂಟೆಯ ಅವಧಿಯಲ್ಲಿ ಒಟ್ಟು 135 ಮಿಲಿಮೀಟರ್ ಸರಾಸರಿ ಮಳೆ ದಾಖಲಾಗಿದೆ. ಕುಂದಾಪುರದಲ್ಲಿ ಅತೀ ಹೆಚ್ಚು ದಾಖಲಾಗಿದ್ದು, 155 ಮಿಲಿಮೀಟರ್ ಮಳೆ ಸುರಿದಿದೆ. ಇನ್ನು ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿಮೀಟರ್ ಮಳೆಯಾಗಿದೆ ಎಂದು ಉಡುಪಿ ಹವಾಮಾನ ಇಲಾಖೆ ತಿಳಿಸಿದ್ದು, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಹಾಗೂ ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

    ನಿರಂತರ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜಿಗೆ ಘೋಷಿಸಿರುವ ರಜೆಯನ್ನು ವಿಸ್ತರಿಸುವಂತೆ ಪಿಯುಸಿ, ಪದವಿ ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿದ ಹಿನ್ನೆಲೆ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಪದವಿ ಕಾಲೇಜುಗಳಿಗೂ ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಈವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಭಾರೀ ಗಾಳಿ, ಮಳೆ ಹಾಗೂ ಪೋಷಕರ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಕ್ಷಣ ಮೌಖಿಕ ರಜೆ ಘೋಷಿಸಿದ್ದಾರೆ.

  • ಮೀನುಗಾರರಿಗೆ ಸಿಹಿ ಸುದ್ದಿ: ಇನ್ನ್ಮುಂದೆ ಈ ಆ್ಯಪ್ ಸಹಾಯದಿಂದ ಸುಲಭವಾಗಿ ಮೀನು ಹಿಡಿಯಬಹುದು

    ಮೀನುಗಾರರಿಗೆ ಸಿಹಿ ಸುದ್ದಿ: ಇನ್ನ್ಮುಂದೆ ಈ ಆ್ಯಪ್ ಸಹಾಯದಿಂದ ಸುಲಭವಾಗಿ ಮೀನು ಹಿಡಿಯಬಹುದು

    ಮಂಗಳೂರು: ಸಮುದ್ರಕ್ಕೆ ಮೀನು ಹಿಡಿಯಲು ಹೋದವರಿಗೇ ಮೀನು ಎಲ್ಲಿದೆ ಅಂತ ಗೊತ್ತಿರಲ್ಲ. ಹಾಗಾಗಿ ಮೀನುಗಾರಿಕೆಗಾಗಿ ಹೊಸ ಮೊಬೈಲ್ ಆ್ಯಪ್ ರೆಡಿಯಾಗಿದೆ. ಮೀನು ಇಂಥ ಜಾಗದಲ್ಲೇ ಇದೆಯೆಂಬ ಖಚಿತ ಮಾಹಿತಿಯನ್ನ ಈ ಮೊಬೈಲ್ ಆ್ಯಪ್ ತಿಳಿಸಿಕೊಡುತ್ತದೆ.

    ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರತಂದಿದ್ದು, ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಲಭ್ಯವಿದ್ದು ಗೂಗಲ್ ಪ್ಲೇಸ್ಟೋರ್‍ನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಬಹುದಾಗಿದೆ.

    ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಯ ಮೀನುಗಾರರ ಮೊಬೈಲ್‍ಗಳಿಗೆ ಪ್ರಾಯೋಗಿಕವಾಗಿ ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮೊಬೈಲ್ ಆ್ಯಪ್ ಅಳವಡಿಸುತ್ತಿದೆ.

    ವಿಶೇಷ ಅಂದ್ರೆ ಈ ಮೊಬೈಲ್ ಆ್ಯಪ್ ಸಮುದ್ರ ಮೇಲ್ಮಟ್ಟದಲ್ಲಿ ಮೀನುಗಳ ಲಭ್ಯತೆ ಇರುವುದನ್ನು ಗುರುತಿಸಿ ಅಪ್ಡೇಟ್ ಮಾಡುತ್ತದೆ. ಮೀನು ಲಭ್ಯವಿರುವ ಪ್ರದೇಶಕ್ಕೆ ಮೀನುಗಾರರು ನೇರವಾಗಿ ತೆರಳಿ ಬೇಟೆಯಾಡಬಹುದಾಗಿದ್ದು, ಸಮಯ, ಇಂಧನ ವ್ಯರ್ಥವಾಗುವುದು ತಪ್ಪುತ್ತದೆ. ಇದಲ್ಲದೆ ಸಮುದ್ರದಲ್ಲಿನ ಬದಲಾವಣೆಗಳು, ಚಂಡಮಾರುತ, ಸುನಾಮಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆಯನ್ನೂ ಜಿಪಿಎಸ್ ಮೂಲಕ ಕೊಡುತ್ತದೆ.

    ಜೀವದ ಹಂಗು ತೊರೆದು ಕಡಲಿಗಿಳಿಯುವ ಕಡಲ ಮಕ್ಕಳಿಗಾಗಿಯೇ ಮೊಬೈಲ್ ಆ್ಯಪ್ ಬಂದಿರುವುದು ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದೆ.