Tag: first rank

  • ಬಿಕಾಂನಲ್ಲಿ ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿಗೆ ಪ್ರಥಮ ರ‌್ಯಾಂಕ್ – ಆಯುಕ್ತರಿಂದ ಸನ್ಮಾನ

    ಬಿಕಾಂನಲ್ಲಿ ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿಗೆ ಪ್ರಥಮ ರ‌್ಯಾಂಕ್ – ಆಯುಕ್ತರಿಂದ ಸನ್ಮಾನ

    ಬೆಂಗಳೂರು: ಬಿಬಿಎಂಪಿ ವತಿಯಿಂದ ನಡೆಸುತ್ತಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರಹಮತುನ್ನೀಸಾ ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಈ ಸಂಬಂಧ ಇಂದು ಪಾಲಿಕೆ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ಪಾಲಿಕೆ ಕೇಂದ್ರ ಕಚೇರಿಯಲ್ಲಿ ರಹಮತುನ್ನೀಸಾ ರವರನ್ನು ಸನ್ಮಾನಿಸಿದರು.

    ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಅಡಿಯಲ್ಲಿನ 475 ಪದವಿ ಕಾಲೇಜುಗಳಲ್ಲಿ 7 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ಪೈಕಿ ಬಿಬಿಎಂಪಿ ವ್ಯಾಪ್ತಿಗೊಳಪಡುವ 4 ಪದವಿ ಕಾಲೇಜುಗಳಲ್ಲಿ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎ, ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ಬಿಕಾಂ ಪರೀಕ್ಷೆಯಲ್ಲಿ ರೆಹಮತುನ್ನೀಸಾ 4,600 ಅಂಕಗಳಿಗೆ 4,226 (ಶೇ.91.87) ಅಂಕ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ.

    ಬಡತನದ ಹಿನ್ನೆಲೆ ಹೊಂದಿರುವ ರಹಮಾತುನ್ನೀಸಾ ಐಎಎಸ್ ಆಗುವ ಕನಸನ್ನು ಕಂಡಿದ್ದು, ಅವರ ಕನಸಿನ ಸಾಧನೆಗೆ ಪಾಲಿಕೆ ವತಿಯಿಂದ ಶುಭವನ್ನು ಕೋರುತ್ತಾ, ಅವಶ್ಯಕ ಸೌಲಭ್ಯಗಳನ್ನು ಪಾಲಿಕೆಯಿಂದ ಒದಗಿಸುವ ಭರವಸೆಯೂ ಇಂದು ನೀಡಲಾಯಿತು.

    ರೆಹಮತುನ್ನೀಸಾ 4,600 ಅಂಕಗಳಿಗೆ 4,226 (ಶೇ.91.87) ಅಂಕ ಪಡೆದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಅದಲ್ಲದೆ ಹರಿಜ ಸುಲ್ತಾನ (ಶೇ.91.8), ಉಮ್ಮೆ ಹನಿ(ಶೇ.89.7), ಉಮ್ಮೆ ಕುಲ್ಸಮ್(ಶೇ.84.8), ಅರ್ಷಿಯಾ ತಾಜ್(ಶೇ.83.8), ಅನೀಸ (ಶೇ.83.4), ಪಾಥಿಮುನ್ನೀಸಾ (ಶೇ.82.5), ಸಮ್ರೀನ್ ಬಾನು (ಶೇ.82.1), ಉಮ್ಮೆ ಅಸ್ಮಾ(ಶೇ.80.4), ಅಲ್ಮಸ್ ತಾಜ್ (ಶೇ.80.1) ಅಂಕ ಪಡೆದು ತೆರ್ಗಡೆಯಾಗಿದ್ದಾರೆ.

  • ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್

    ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್

    ಉಡುಪಿ: ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ರಾಧಿಕಾ ಪೈ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ಪ್ಲೇಸ್ ಬಂದಿದ್ದಾಳೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಈಕೆ, ಕೋಚಿಂಗ್ ಇಲ್ಲದೆ- ಟ್ಯೂಷನ್‍ಗೆ ಹೋಗದೆ ರಾಜ್ಯಕ್ಕೆ ಫಸ್ಟ್ ಬಂದಿದ್ದಾಳೆ. ರಾಧಿಕಾ ಮನಬಿಚ್ಚಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾಳೆ.

    ರಿಸಲ್ಟ್ ಬಂತು ಫಸ್ಟ್ ರಿಯಾಕ್ಷನ್ ಏನು?
    ನನಗೆ ಈ ಸುದ್ದಿ ತಿಳಿದು ತುಂಬಾ ಖುಷಿಯಾಯ್ತು. ಎಲ್ಲರೂ ನನಗೆ ಸಪೋರ್ಟ್ ಮಾಡಿದ್ದಾರೆ. ಮನೆಯಲ್ಲಿ ಮತ್ತು ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳು ಬಂದಾಗ ಅದನ್ನು ಪರಿಹಾರ ಮಾಡಿಕೊಟ್ಟಿದ್ದಾರೆ. ದೇವರ ಆಶೀರ್ವಾದ ನನ್ನ ಮೇಲೆ ಇತ್ತು. ನನ್ನ ಹೆತ್ತವರು ಯಾವುದೇ ಒತ್ತಡ ಹಾಕಿಲ್ಲ. ಫ್ರೆಂಡ್ಸ್ ಸಪೋರ್ಟ್- ಟೀಚರ್ಸ್ ಸಂಪೂರ್ಣ ಬೆಂಬಲ ನನ್ನ ಈ ಸಾಧನೆಗೆ ಕಾರಣ.

    ಕೋಚಿಂಗ್ ಇಲ್ಲದೆ ಈ ಸಾಧನೆ ಸಾಧ್ಯನಾ?
    ಶಾಲೆಯಲ್ಲಿ ಉತ್ತಮ ಗುಣಮಟ್ಟದ ಟೀಚಿಂಗ್ ಇದೆ. ಕೋಚಿಂಗ್ ಹೋಗುವ ಅವಶ್ಯಕತೆಯೇ ಬೇಕಾಗಿಲ್ಲ ಅಂತ ಅನ್ನಿಸಿತು. ಲೆಕ್ಚರರ್ಸ್ ಎಲ್ಲಾ ಕಾನ್ಸೆಪ್ಟ್ ನೀಟಾಗಿ ಟೀಚ್ ಮಾಡ್ತಾರೆ. ಟೀಚಿಂಗಲ್ಲಿ ಸಮಸ್ಯೆಯಿದ್ದರೆ- ಅರ್ಥಾಗದೆ ಇದ್ದರೆ ಕೋಚಿಂಗ್ ಟ್ಯೂಷನ್ ಬೇಕು. ಆದ್ರೆ ನಮ್ಮ ಸರಸ್ವತಿ ವಿದ್ಯಾಲಯದಲ್ಲಿ ಎಲ್ಲಾ ರೀತಿಯಲ್ಲಿ ಅರ್ಥಮಾಡಿಸಿ ಬೋಧನೆ ಮಾಡುತ್ತಾರೆ. ಹೀಗಾಗಿ ಟ್ಯೂಷನ್ ಗೋಜಿಗೆ ನಾನು ಹೋಗಿಲ್ಲ.

    ರಾಧಿಕಾ ಓದಿ ಓದಿ ಸಣ್ಣಾಗಿದ್ದಾ?
    ನಾನು ಓದಿ ಓದಿ ಸಣ್ಣ ಆಗಿದ್ದಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಸಣ್ಣವೇ. ನಮ್ಮ ಹೆರಿಡೇಟರಿ ಪ್ರಕಾರ ನಾನು ಸಣ್ಣ. ಬಯಾಲಜಿ ಸ್ಟೂಡೆಂಟಲ್ಲ ನಾನು. ಕರೆಕ್ಟ್ ಗೊತ್ತು ಇದ್ರ ಬಗ್ಗೆ.

    ಮುಂದೇನು?
    ಮುಂದೆ ನಾನು ಇಂಜಿನಿಯರಿಂಗ್ ಮಾಡ್ಬೇಕು. ಇನ್ಪಾರ್ಮೇಶನ್ ಸಾಯನ್ಸ್ ಬ್ರಾಂಚ್‍ನಲ್ಲಿ ನಾನು ಇಂಜಿನಿಯರಿಂಗ್ ಮಾಡುತ್ತೇನೆ.

    ಈ ಪ್ಲೇಸನ್ನು ನೀವು ನಿರೀಕ್ಷೆ ಮಾಡಿದ್ರಾ?
    10ನೇ ತರಗತಿಯಲ್ಲಿ ನಾನು ದೊಡ್ಡ ಮಾರ್ಕ್ ನಿರೀಕ್ಷೆ ಮಾಡಿದ್ದೆ. ಆದ್ರೆ ಅಷ್ಟು ಮಾರ್ಕು ಸಿಕ್ಕಿಲ್ಲ. ಹಾಗಾಗಿ ಈ ಬಾರಿ ನಿರೀಕ್ಷೆ ಇಡದೆ ಓದಿದೆ. ಒಳ್ಳೆ ಮಾರ್ಕ್ ಬರುತ್ತೆ ಅನ್ನೋ ಭರವಸೆ ಇತ್ತು. ನಿರೀಕ್ಷೆಗೆ ಮೀರಿ ಪರ್ಸಂಟೇಜ್ ಬಂದಿದೆ.

    ಇದನ್ನೂ ಓದಿ: ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಹಳ್ಳಿ ಪ್ರದೇಶ ಕಡೆಗಣಿಸಬೇಡಿ!
    ಮಹಾ ನಗರಗಳಿಗೆ ರ್ಯಾಂಕ್ ಬರ್ತಾ ಇತ್ತು. ಆದ್ರೆ ಈ ಬಾರಿ ಹಳ್ಳಿಗೆ- ಗ್ರಾಮೀಣ ಪ್ರದೇಶಕ್ಕೆ ಮೊದಲ ಸ್ಥಾನ ಬಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೆಂದು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಸಿಟಿಗೆ ಕೊಡುವ ಸಪೋರ್ಟ್ ಹಳ್ಳಿಗೂ ಕೊಡಿ ಎಂದು ರಾಧಿಕಾ ಪೈ ಹೇಳಿದ್ದಾರೆ.

    ರಾಧಿಕಾ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಸ್ಥಳೀಯರು- ಸಂಬಂಧಿಕರು- ಶಿಕ್ಷಕರು- ಕ್ಲಾಸ್ ಮೇಟ್ಸ್- ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಬಂದು ಬಂದು ಶುಭ ಹಾರೈಸುತ್ತಿದ್ದಾರೆ. ಬರ್ತಾ ಸಿಹಿತಿಂಡಿಗಳನ್ನು ತರುತ್ತಿದ್ದಾರೆ. ಒಟ್ಟಿನಲ್ಲಿ ಗಂಗೊಳ್ಳಿಗೆ ಗಂಗೊಳ್ಳಿಯೇ ರಾಧಿಕಾ ಪೈ ಸಾಧನೆಯನ್ನು ಕೊಂಡಾಡುತ್ತಿದೆ.