Tag: First Class Cricket

  • ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌!

    ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌!

    ಮುಂಬೈ: ಸದ್ಯ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಸರ್ಫರಾಜ್‌ ಖಾನ್‌ (Sarfaraz Khan) ಅವರ ಕಿರಿಯ ಸಹೋದರ ರಣಜಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

    ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ಬರೋಡಾ ವಿರುದ್ಧ ನಡೆದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ (Musheer Khan) ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ 18 ಓವರ್‌ಗಳಲ್ಲಿ 99 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಮುಂಬೈ ತಂಡಕ್ಕೆ ಮುಶೀರ್ ಆಸರೆಯಾಗಿದ್ದಾರೆ.

    3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಭದ್ರವಾಗಿ ನೆಲೆಯೂರಿದ ಮುಶೀರ್ 350 ಎಸೆತಗಳಲ್ಲಿ 18 ಬೌಂಡರಿಗಳೊಂದಿಗೆ ಅಜೇಯ ದ್ವಿಶತಕ ಬಾರಿಸಿದ್ದಾರೆ. ಒಟ್ಟು 357 ಎಸೆತಗಳಲ್ಲಿ 203 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಇದರಿಂದಾಗಿ ಮುಂಬೈ ತಂಡವು 384 ರನ್‌ಗಳ ಬೃಹತ್‌ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 96 ರನ್‌ ಗಳಿಸಿದ್ದ ಮುಶೀರ್‌ ದ್ವಿಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

    ರಣಜಿಯಲ್ಲಿ ಸರ್ಫರಾಜ್‌ ಸಹೋದರ ಶೈನ್‌:
    ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ (Maiden Double Hundred) ಪರಿವರ್ತಿಸಿದ ಮುಶೀರ್ ಖಾನ್‌, ರಣಜಿ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೇ (18 ವರ್ಷ 362 ದಿನಗಳು) ದ್ವಿಶತಕ ಸಿಡಿಸಿದ ಮುಂಬೈನ 2ನೇ ಬ್ಯಾಟರ್‌ ಸಹ ಎನಿಸಿಕೊಂಡಿದ್ದಾರೆ. 1996-97ರಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ರಣಜಿ ಟ್ರೋಫಿಯಲ್ಲಿ ವಾಸಿಂ ಜಾಫರ್ 18 ವರ್ಷ 262 ದಿನಗಳು ವಯಸ್ಸಿನವರಿದ್ದಾಗ ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದರು.

    ಸದ್ಯ ಮುಂಬೈ ನೀಡಿದ 385 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿರುವ ಬರೋಡಾ ತಂಡ 8 ಓವರ್‌ಗಳಲ್ಲಿ 33 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದೆ.

  • ಕ್ರಿಕೆಟ್‍ಗೆ ವಿದಾಯ ಹೇಳಿದ ರಜತ್ ಭಾಟಿಯಾ – 2 ದಶಕಗಳ ಆಟಕ್ಕೆ ಬ್ರೇಕ್

    ಕ್ರಿಕೆಟ್‍ಗೆ ವಿದಾಯ ಹೇಳಿದ ರಜತ್ ಭಾಟಿಯಾ – 2 ದಶಕಗಳ ಆಟಕ್ಕೆ ಬ್ರೇಕ್

    – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಸ್ಟಾರ್ ಆಲ್‍ರೌಂಡರ್ ಆಗಿದ್ದ ಭಾಟಿಯಾ

    ನವದೆಹಲಿ: ಭಾರತದ ಪ್ರಥಮ ದರ್ಜೆ ಕ್ರಿಕೆಟ್‍ನ ಸ್ಟಾರ್ ಆಲ್‍ರೌಂಡರ್ ರಜತ್ ಭಾಟಿಯಾ ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ತನ್ನ ನಿವೃತ್ತಿ ವಿಚಾರವಾಗಿ ಬುಧವಾರ ಮಾತನಾಡಿರುವ 40 ವರ್ಷದ ರಜತ್ ಭಾಟಿಯಾ ಅವರು, ಎಲ್ಲ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಎರಡು ದಶಕಗಳ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಜೀವನಕ್ಕೆ ಭಾಟಿಯಾ ಬ್ರೇಕ್ ಹಾಕಿದ್ದಾರೆ. ಭಾಟಿಯಾ ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಿದ್ದರು.

    ಮಧ್ಯಮ ವೇಗದ ಬೌಲರ್ ಆಗಿದ್ದ ಭಾಟಿಯಾ ಅವರು, ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 137 ವಿಕೆಟ್ ಮತ್ತು 6,482 ರನ್ ಗಳಿಸಿದ್ದಾರೆ. 112 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಭಾಟಿಯಾ 17 ಶತಕ ಮತ್ತು 50 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು 2019ರ ಜನವರಿಯಲ್ಲಿ ಮಿಜೋರಾಂ ವಿರುದ್ಧ ಆಡಿದ್ದರು. ಈ ಪಂದ್ಯದಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉತ್ತರಾಖಂಡ ತಂಡ ಇನ್ನಿಂಗ್ಸ್ ಮತ್ತು 56 ರನ್‍ಗಳಿಂದ ಜಯಗಳಿಸಿತ್ತು.

    ರಜತ್ ಭಾಟಿಯಾ 2000ದಲ್ಲಿ ತಮಿಳುನಾಡು ತಂಡದ ಪರವಾಗಿ ದೇಶೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ನಂತರ 2003ರಲ್ಲಿ ತನ್ನ ತವರು ತಂಡವಾದ ದೆಹಲಿ ತಂಡದಲ್ಲಿ ಸ್ಥಾನ ಪಡೆದರು. 2007-08ರಲ್ಲಿ ದೆಹಲಿ ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಭಾಟಿಯಾ ಅದ್ಭುತವಾಗಿ ಆಡಿ ಆ ಆವೃತ್ತಿಯಲ್ಲಿ 525 ರನ್ ಮತ್ತು 26 ವಿಕೆಟ್‍ಗಳು ಗಬಳಿಸಿದ್ದರು. ಜೊತೆಗೆ ಉತ್ತರ ಪ್ರದೇಶ ವಿರುದ್ಧದ ಫೈನಲ್‍ನಲ್ಲಿ 139 ರನ್ ಗಳಿಸಿ ದೆಹಲಿ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ದೆಹಲಿ ತಂಡದಲ್ಲಿ 81 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ರಜತ್ ಭಾಟಿಯ ನಂತರ, ರಾಜಸ್ಥಾನ ಮತ್ತು ಉತ್ತರಾಖಂಡ ತಂಡಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೆಹಲಿ ಡೇರ್ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕಾತ್ತ ನೈಟ್ ರೈಡರ್ಸ್ ತಂಡಗಳ ಪರ ಆಡಿದ್ದರು. 2012ರ ಐಪಿಎಲ್‍ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕಾತ್ತ ತಂಡ ಟ್ರೋಫಿ ಗೆದ್ದ ಸಮಯದಲ್ಲಿ ಭಾಟಿಯಾ ತಂಡದಲ್ಲಿ ಇದ್ದರು.