Tag: Fire and Safety

  • ವಸತಿ ಕಟ್ಟಡದ ಸ್ಲ್ಯಾಬ್ ಕುಸಿದು ಆರು ಮಂದಿ ದಾರುಣ ಸಾವು

    ವಸತಿ ಕಟ್ಟಡದ ಸ್ಲ್ಯಾಬ್ ಕುಸಿದು ಆರು ಮಂದಿ ದಾರುಣ ಸಾವು

    – ಮುಂದುವರಿದ ರಕ್ಷಣಾ ಕಾರ್ಯ

    ಮುಂಬೈ: ವಸತಿ ಕಟ್ಟಡದ ಸ್ಲ್ಯಾಬ್ ಕುಸಿತಗೊಂಡು ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ. ಕಟ್ಟಡದಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಉಲ್ಹಾಸ್ ನಗರದ ಮಹಾನಗರ ಪಾಲಿಕೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ನೆಹರೂ ಚೌಕ್ ಪ್ರದೇಶದ ಸಾಯಿ ಸಿದ್ಧಿ ಕಟ್ಟಡದ ಐದನೇ ಮಹಡಿಯ ಸ್ಲ್ಯಾಬ್ ಕುಸಿದ ಪರಿಣಾಮ ದುರಂತ ಸಂಭವಿಸಿದೆ. ಕಟ್ಟಡದ ಅವಶೇಷಗಳಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮತ್ತಷ್ಟು ಮಂದಿ ಸಿಲುಕಿರುವುದಾಗಿ ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

    ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಮೃತಪಟ್ಟ ಆರು ಮಂದಿಯನ್ನು ಪುನೀತ್ ಚಂದ್ವಾನಿ, ದಿನೇಶ್ ಚಂದ್ವಾನಿ, ದೀಪಕ್ ಚಂದ್ವಾನಿ, ಮೋಹಿನಿ ಚಂದ್ವಾನಿ, ಕೃಷ್ಣ ಬಜಾಜ್ ಮತ್ತು ಅಮೃತ ಬಜಾಜ್ ಎಂದು ಗುರುತಿಸಲಾಗಿದೆ.

    ಈ ಕಟ್ಟಡವನ್ನು 1995ರಲ್ಲಿ ಕಟ್ಟಡಲಾಗಿದೆ. ಕಟ್ಟಡದ 5ನೇ ಅಂತಸ್ತಿನ ಸ್ಲ್ಯಾಬ್ ಏಕಾಏಕಿ ಕುಸಿತಗೊಂಡಿದೆ. ಈ ಮೂಲಕ ಒಂದೇ ತಿಂಗಳಲ್ಲಿ ನಗರದಲ್ಲಿ ಎರಡನೇ ದುರಂತ ಸಂಭವಿಸಿದೆ. ಮೇ 15ರಂದು ಉಲ್ಹಾಸ್‍ನಗರದಲ್ಲಿ ವಸತಿ ಕಟ್ಟಡ ಕುಸಿತಗೊಂಡು 5 ಮಂದಿ ಮರಣ ಹೊಂದಿದ್ದರು.

  • ದೆಹಲಿಯಲ್ಲಿ ಕಟ್ಟಡ ಕುಸಿತ –  ಅವಶೇಷದಡಿಯಲ್ಲಿ ಸಿಲುಕಿದ್ದಾರೆ ಹಲವು ಮಂದಿ

    ದೆಹಲಿಯಲ್ಲಿ ಕಟ್ಟಡ ಕುಸಿತ – ಅವಶೇಷದಡಿಯಲ್ಲಿ ಸಿಲುಕಿದ್ದಾರೆ ಹಲವು ಮಂದಿ

    ನವದೆಹಲಿ: ಸರ್ದಾರ್ ಬಜಾರ್‌ನಲ್ಲಿ ವಸತಿ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದು, ಹಲವಾರು ಜನ ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವುದು ವರದಿಯಾಗಿದೆ.

    ಸದರ್ ಬಜಾರ್‍ ಚಾರ್ಖಿವಾಲಿ ಗಲಿ ಖುರೇಷಿ ನಗರದ ಬಳಿ ವಸತಿ ಕಟ್ಟಡ ಇಂದು ಕುಸಿತಕ್ಕೊಳಗಾಗಿದೆ. ಈಗಾಗಲೇ ಕಟ್ಟಡದ ಅವಶೇಷಗಳಿಂದ ಐದು ಜನರನ್ನು ರಕ್ಷಣೆ ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಹಲವು ಜನ ಕಟ್ಟಡದ ಅವಶೇಷದಡಿಯಲ್ಲಿರುವ ಶಂಕೆ ವ್ಯಕ್ತವಾಗಿದೆ.

    ಘಟನಾ ಸ್ಥಳದಲ್ಲಿ 6 ಅಗ್ನಿಶಾಮಕದಳ ತಂಡ ಕಾರ್ಯಚರಣೆಯಲ್ಲಿ ತೊಡಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ತುರ್ತುಚಿಕಿತ್ಸೆಗಾಗಿ ತಂಡವನ್ನ ನಿಯೋಜಿಸಲಾಗಿದೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಈ ಘಟನೆಯಿಂದ ತೀವ್ರ ನೋವಾಗಿದೆ. ಕಟ್ಟಡ ದುರಂತದಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ, ನಾನು ಘಟನೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಲೋಡ್ ಹುಲ್ಲಿನ ರಾಶಿ ಭಸ್ಮ

    ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಲೋಡ್ ಹುಲ್ಲಿನ ರಾಶಿ ಭಸ್ಮ

    ಚಿಕ್ಕಬಳ್ಳಾಪುರ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ನಾಲ್ಕು ಲೋಡ್ ರಾಗಿ ಹುಲ್ಲಿನ ರಾಶಿ ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.

    ಗ್ರಾಮದ ಚೌಡಣ್ಣ ಎಂಬವರಿಗೆ ಸೇರಿದ ರಾಗಿ ಹುಲ್ಲಿನ ರಾಶಿಗೆ ಬೆಂಕಿ ತಗುಲಿದ್ದು, ಘಟನೆಯಲ್ಲಿ ಸಾವಿರಾರು ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಪೂರ್ತಿ ಹುಲ್ಲು ಸುಟ್ಟು ಭಸ್ಮವಾಗಿರುವ ಕಾರಣ ರೈತ ಚೌಡಣ್ಣ ಅವರು ಸಾಕಿರುವ ಹಸುಗಳಿಗೆ ಬೇರೆ ಹುಲ್ಲನ್ನು ಖರೀದಿ ಮಾಡಬೇಕಾದ ಅನಿರ್ವಾರ್ಯತೆ ಎದುರಾಗಿದೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸೇರಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಕಿ ತಗುಲಲು ಕಾರಣ ಏನೆಂದು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.