Tag: fines

  • ಅಮೆರಿಕದಲ್ಲಿ 17.02 ಕೋಟಿ ದಂಡ ಪಾವತಿಸಿದ ನಿತ್ಯಾನಂದ

    ಅಮೆರಿಕದಲ್ಲಿ 17.02 ಕೋಟಿ ದಂಡ ಪಾವತಿಸಿದ ನಿತ್ಯಾನಂದ

    ಬೆಂಗಳೂರು: ನಾನು ಹಿಂದೂ ಧರ್ಮದ ಹರಿಕಾರ, ಪ್ರಪಂಚದ ಯಾವುದೇ ಮೂಲೆ ಸಿಕ್ಕಿದ್ರೂ ಕೂಡ ನಾನು ಹಿಂದೂ ಧರ್ಮದ ಪ್ರಚಾರಕ್ಕೆ ಶ್ರಮಿಸುತ್ತೇನೆ. ನಾನು ಯಾರಿಗೂ ಮೋಸ ಮಾಡುವ ವ್ಯಕ್ತಿಯಲ್ಲ ಎಂದು ಬೊಬ್ಬೆ ಹೊಡೆಯುತ್ತಾ ಇದ್ದ ನಿತ್ಯಾನಂದನ ಮೇಲೆ ವಂಚನೆ ಮತ್ತು ಮನಿಲ್ಯಾಂಡ್ರಿಂಗ್ ಪ್ರಕರಣ ದಾಖಲಾಗಿದೆ. ಅದು ಭಾರತ ದೇಶದಲ್ಲಿ ಅಲ್ಲ ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ.

    ನಿತ್ಯಾನಂದ ಈಗ ಮಾತ್ರ ಅಲ್ಲ 2013ರಲ್ಲಿಯೇ ಈ ರೀತಿಯ ಮೋಸ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಮೂಲದ ಮನೋಹರ್ ಶಿಂಧೆ ಎಂಬುವವರಿಗೂ ಇದೇ ರೀತಿ ಮೋಸ ಮಾಡಿದ್ದಾನೆ. ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಭಾರತದ ಸಂಸ್ಕೃತಿ ಸಾರುವ ವಿಶ್ವವಿದ್ಯಾನಿಲಯವನ್ನು ತೆರೆಯುತ್ತೇನೆ ಎಂದು ಮೋಸ ಮಾಡಿದ್ದಾನೆ. ಈ ಬಗ್ಗೆ ಅಲ್ಲಿನ ನ್ಯಾಯಾಲಯಕ್ಕೆ ದೂರು ನೀಡಿದಾಗ ನಿತ್ಯಾನಂದನ ಮತ್ತೊಂದು ದೋಖಾ ಕೂಡ ಬೆಳಕಿಗೆ ಬಂದಿದೆ.

    ಕ್ಯಾಲಿಫೋರ್ನಿಯಾ ಒಂದರಲ್ಲೇ 20 ಸಂಸ್ಥೆಗಳನ್ನು ನಡೆಸುತ್ತಾ ಇದ್ದ ನಿತ್ಯಾನಂದ ಈ ಸಂಸ್ಥೆಗಳನ್ನೆಲ್ಲಾ ಮನಿಲ್ಯಾಂಡ್ರಿಂಗ್ ಮಾಡೋದಕ್ಕೆ ಬಳಸಿಕೊಳ್ಳುತ್ತಾ ಇದ್ದ ಅನ್ನೋದು ಗೊತ್ತಾಗಿದೆ. ಬಳಿಕ ನ್ಯಾಯಾಲಯ ಕೂಡ ನಿತ್ಯಾನಂದನಿಗೆ ಮೂರು ಮೂರು ಬಾರಿ ದಂಡವನ್ನು ಕಟ್ಟುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದ ಪ್ರಕಾರ 2.4 ಮಿಲಿಯನ್ ಡಾಲರ್(ಅಂದಾಜು 17.02 ಕೋಟಿ ರೂ.) ಹಣವನ್ನು ದಂಡವಾಗಿ ಕಟ್ಟಿದ್ದಾನೆ. ಮುಂದಿನ ವಿಚಾರಣೆ ವೇಳೆ ದಂಡ ಮತ್ತಷ್ಟು ಹೆಚ್ಚಾಗಬಹುದು ಎಂದು ಶಿಂಧೆಯ ಬಳಿ ರಾಜಿ ಪಂಚಾಯ್ತಿಯನ್ನು ನಿತ್ಯಾನಂದ ಮಾಡಿಕೊಂಡಿದ್ದ.

  • ಬಿಲ್ ನೀಡದಿದ್ರೆ ಕೋಟಿಗಟ್ಟಲೆ ದಂಡ ಬೀಳುತ್ತೆ ಜೋಕೆ!

    ಬಿಲ್ ನೀಡದಿದ್ರೆ ಕೋಟಿಗಟ್ಟಲೆ ದಂಡ ಬೀಳುತ್ತೆ ಜೋಕೆ!

    ಬೆಂಗಳೂರು: ವಸ್ತು ಖರೀದಿಸಿದ ಗ್ರಾಹಕರಿಗೆ ಬಿಲ್ ಕೊಡದೆ ಸರ್ಕಾರಕ್ಕೆ ಯಾಮಾರಿಸ್ತಿದ್ದ ಗ್ಯಾಂಗ್‍ಗಳಿಗೆ ತೆರಿಗೆ ಇಲಾಖೆ ಜಿಎಸ್‍ಟಿ ಶಾಕ್ ನೀಡಿದೆ.

    ಸಿಲಿಕಾನ್ ಸಿಟಿಯ ಚಿಕ್ಕಪೇಟೆಯಲ್ಲಿ ದಾಳಿ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ವರ್ತಕರು ಮತ್ತು ವ್ಯಾಪಾರಿಗಳಿಗೆ 1.42 ಕೋಟಿ ರೂಪಾಯಿ ತೆರಿಗೆ ದಂಡ ವಿಧಿಸಿದ್ದಾರೆ. ದಾಳಿಯ ವೇಳೆಯಲ್ಲಿ ಬಚ್ಚಿಟ್ಟಿದ್ದ ವಹಿವಾಟನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರ ಜೊತೆಗೆ 3 ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ತೆರಿಗೆ ಅಧಿಕಾರಿಗಳು ಮತ್ತೊಂದು ಅಕ್ರಮವನ್ನೂ ಬಯಲು ಮಾಡಿದ್ದಾರೆ. ಬೆಳ್ಳಿ ವ್ಯಾಪಾರಸ್ಥರಿಗೆ ಸೇರಿದ ಮೂರು ಗೋದಾಮಿನ ಮೇಲೆ ದಾಳಿ ಮಾಡಿ, ಬರೋಬ್ಬರಿ 8 ಕೋಟಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ನಗರದ ಬೇರೆ ಭಾಗಗಳಲ್ಲಿಯೂ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆಯಲಿದ್ದಾರೆ.

  • ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು ಶುಕ್ರವಾರ ಇದನ್ನು ಪರಿಶೀಲಿಸಿದ್ದಾರೆ ಎಂದು ಬಸ್ ಮಾಲೀಕ ನಿರಂಕರ್ ಸಿಂಗ್ ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಂಡ ಪಾವತಿಸುವುದಾಗಿಯೂ ಸಿಂಗ್ ತಿಳಿಸಿದ್ದಾರೆ.

    ನಮ್ಮ ಬಸ್‍ಗಳು ನಗರ ಸಾರಿಗೆಯಾಗಿದ್ದು, ಬಸ್ ವ್ಯವಹಾರವನ್ನು ನಮ್ಮ ಮಗ ನೋಡಿಕೊಳ್ಳುತ್ತಾನೆ. ನಮ್ಮ ಬಳಿ 40-50 ಬಸ್‍ಗಳಿವೆ, ಶಾಲೆಗಳಿಗೆ ಹಾಗೂ ವಿವಿಧ ಕಂಪನಿಗಳಿಗೆ ಬಸ್‍ಗಳನ್ನು ಬಾಡಿಗೆಗೆ ನೀಡಲಾಗಿದೆ. ಇವು ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾದಲ್ಲಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

    ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತ ಇಲಾಖೆ ಇಂತಹ ಸಣ್ಣ ತಪ್ಪುಗಳನ್ನು ಮಾಡಿದರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ನಿತ್ಯ ಸಾರಿಗೆ ಇಲಾಖೆ ಇಂತಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಹೊಸ ಮೋಟಾರ್ ವಾಹನ ಕಾಯ್ದೆಯ ನಿಯಮದಂತೆ ಚಲನ್ ನೀಡಲಾಗಿದೆ.

    ಈ ಚಲನ್‍ನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ನೀಡಿಲ್ಲ. ಬದಲಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಈ ಹಿಂದೇ ಅದೇ ಬಸ್‍ಗೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು. ಈ ಬಾರಿಯೂ ಸೀಟ್ ಬೆಲ್ಟ್ ಅಪರಾಧವಾಗಿದ್ದರೆ ಚಲನ್‍ನಲ್ಲಿ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಉಲ್ಲೇಖಿಸಬೇಕು, ಹೆಲ್ಮೆಟ್ ಧರಿಸದ್ದಕ್ಕೆ ಎಂದಲ್ಲ ಎಂದು ನಿರಂಕರ್ ಸಿಂಗ್ ವಾದಿಸಿದ್ದಾರೆ. ನಮ್ಮ ಕಡೆಯಿಂದ ಏನಾದರೂ ದೋಷವಿದ್ದರೆ, ನಾವು ದಂಡವನ್ನು ಪಾವತಿಸುತ್ತೇವೆ. ಆದರೆ ಅದು ನಿಜವಾಗಿರಬೇಕು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

  • ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಬಿತ್ತು ದಂಡ

    ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಬಿತ್ತು ದಂಡ

    ನವದೆಹಲಿ: ಬೈಕ್‍ನಲ್ಲಿ ಮ್ಯೂಸಿಕ್ ಹಾಕಿದ್ದಕ್ಕೆ ಸವಾರನಿಗೆ ದೆಹಲಿಯ ತಿಲಕ್ ನಗರ ಸಂಚಾರಿ ಪೊಲೀಸರು ದಂಡ ಹಾಕಿದ್ದಾರೆ.

    ರಾಘವ್ ಸ್ವಾತಿ ಪ್ರುತಿ ಎಂಬವರ ತಮ್ಮ ಹೊಸ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಹಾಕಿಕೊಂಡು ಬೈಕ್ ಚಲಾಯಿಸಿದ್ದಾರೆ ಎಂದು ಅವರನ್ನು ಬೈಕ್ ಸಮೇತ ಠಾಣೆಗೆ ಕರೆದುಕೊಂಡು ಹೋಗಿ ದಂಡ ವಿಧಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಾಘವ್, ನಾನು ನನ್ನ ಹೊಸ ಬೈಕಿನಲ್ಲಿ ತಿಲಕ್ ನಗರದಲ್ಲಿ ಬರುತ್ತಿದ್ದೆ. ಆಗ ಸಂಚಾರಿ ಪೊಲೀಸರು ನನ್ನನ್ನು ಆಡ್ಡ ಹಾಕಿದರು. ನಂತರ ದಾಖಲೆ ತೋರಿಸಲು ಹೇಳಿದರು ನಾನು ತೋರಿಸಿದೆ. ಆದರೆ ಅವರು ನೀನು ಬೈಕ್‍ಗೆ ಮ್ಯೂಸಿಕ್ ಪ್ಲೇಯರ್ ಹಾಕಿಸಿದ್ದೀಯ ಇದು ಕಾನೂನುಬಾಹಿರ ನೀನು ಪೊಲೀಸ್ ಠಾಣೆ ಬಾ ಎಂದು ಕರೆದುಕೊಂಡು ಹೋದರು.

    https://www.facebook.com/raghavinder.pruthi/posts/2706060389417603

    ನಾನು ಪೊಲೀಸರ ಮಾತಿನಂತೆ ಠಾಣೆಗೆ ಹೋದೆ ಅಲ್ಲಿ ನಾನು ಮ್ಯೂಸಿಕ್ ಪ್ಲೇಯರ್ ಅನ್ನು ಬೈಕ್ ಕಂಪನಿಯವರೆ ಹಾಕಿದ್ದಾರೆ. ನಾನು ಹಾಕಿಸಿಲ್ಲ ಎಂದು ಹೇಳಿದರು ಕೇಳದ ತಿಲಕ್ ನಗರ ಠಾಣೆಯ ಎಸಿಪಿ ಮತ್ತು ಎಸ್‍ಐ ನೀನು ಅಕ್ರಮವಾಗಿ ಬೈಕ್ ಓಡಿಸುತ್ತಿದ್ದೀಯ ಎಂದು ನನ್ನ ಮೇಲೆ ಕಿರುಚಾಡಿದರು. ನಾನು ಬೈಕ್ ಓಡಿಸುವಾಗ ಕಡಿಮೆ ಸೌಂಡ್ ಇಟ್ಟು ಓಡಿಸುತ್ತಿದ್ದೆ. ಆದರೆ ಪೊಲೀಸರು ಜಾಸ್ತಿ ಸೌಂಡ್ ಕೊಡಲು ಹೇಳಿ ಅದನ್ನು ವಿಡಿಯೋ ಮಾಡಿದರು. ನೀನು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದೀಯ ಎಂದು ದಂಡ ಹಾಕಿದರು ಎಂದು ಬರೆದುಕೊಂಡಿದ್ದಾರೆ.

    ತಮ್ಮ ಹಾರ್ಲೆ ಡೇವಿಡ್‍ಸನ್ ಬೈಕಿನಲ್ಲಿ ಮ್ಯೂಸಿಕ್ ಪ್ಲೇ ಮಾಡಿದಕ್ಕೆ ರಾಘವ್ ಅವರಿಗೆ ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯಡಿ ದೆಹಲಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

  • ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಭುವನೇಶ್ವರ: ಟ್ರಕ್ ಮಾಲೀಕನೊಬ್ಬ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ಕಟ್ಟಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.

    ನಾಗಾಲ್ಯಾಂಡ್ ನೋಂದಾಯಿತ ಟ್ರಕ್ಕೊಂದು ಏಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 6.53 ಲಕ್ಷ ದಂಡವನ್ನು ಮಾಲೀಕ ಕಟ್ಟಿದ್ದಾರೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಲಾರಿಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ (ಒಎಂವಿಟಿ) ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

    ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ನಂತರ ರಸ್ತೆ ತೆರಿಗೆಯನ್ನು ಪಾವತಿಸಿರಲಿಲ್ಲ. ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

    ಮಾಲೀಕನಿಗೆ ನೀಡಿರುವ ಚಲನ್ ಪ್ರತಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

  • 5 ದಿನದಲ್ಲಿ 72 ಲಕ್ಷ ದಂಡ ಸಂಗ್ರಹ – ಹೆಲ್ಮೆಟ್ ಹಾಕದ್ದಕ್ಕೆ ಬಿತ್ತು ಅತಿ ಹೆಚ್ಚು ಕೇಸ್

    5 ದಿನದಲ್ಲಿ 72 ಲಕ್ಷ ದಂಡ ಸಂಗ್ರಹ – ಹೆಲ್ಮೆಟ್ ಹಾಕದ್ದಕ್ಕೆ ಬಿತ್ತು ಅತಿ ಹೆಚ್ಚು ಕೇಸ್

    ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು ಹೊಸ ತಿದ್ದುಪಡಿ ಕಾಯ್ದೆ ಜಾರಿಯಾದ ಐದೇ ದಿನದಲ್ಲಿ ಬರೋಬ್ಬರಿ 72.49 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ನಿರ್ದೇಶನದಂತೆ ಸೆ.4 ರಿಂದ ಇಂದು(ಸೆ.9) ಬೆಳಗ್ಗೆ 10 ಗಂಟೆಯವರೆಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಒಟ್ಟು 6,813 ಪ್ರಕರಣ ದಾಖಲಿಸಿ 72,49,900 ದಂಡವನ್ನು ವಸೂಲಿ ಮಾಡಿದ್ದಾರೆ.

     

    ಹಿಂಬದಿಯ ಸವಾರ ಹೆಲ್ಮಟ್ ಹಾಕದ್ದಕ್ಕೆ ಅತಿ ಹೆಚ್ಚು ದಂಡ ಬಿದ್ದಿದ್ದು, ಬರೋಬ್ಬರಿ 2,645 ಪ್ರಕರಣಗಳು ದಾಖಲಾಗಿದ್ದು, ಸುಮಾರು 26,45,000 ದಂಡವನ್ನು ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಚಾಲನೆ ಮಾಡುವಾಗ ಹೆಲ್ಮಟ್ ಹಾಕದ 1,968 ಪ್ರಕರಣಗಳು ದಾಖಲಾಗಿದ್ದು 19,68,000 ದಂಡ ವಸೂಲಿ ಮಾಡಲಾಗಿದೆ.

    ವಾಹನ ಚಾಲಿಸುವ ಮೊಬೈಲ್ ಬಳಕೆ ಮಾಡಿದ ಒಟ್ಟು 695 ಪ್ರಕರಣ ದಾಖಲಾಗಿದ್ದು, 13,90,000 ದಂಡ ವಸೂಲಿ ಮಾಡಲಾಗಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಕ್ಕೆ 708 ಪ್ರಕರಣಗಳು ದಾಖಲಾಗಿದ್ದು, 7,08,000 ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಒನ್ ವೇಯಲ್ಲಿ ವಾಹನ ಚಾಲನೆ ಮಾಡಿದ 425 ಪ್ರಕರಣ ದಾಖಲಾಗಿದ್ದು, ಒಟ್ಟು 2,12,500 ದಂಡ ವಸೂಲಿ ಮಾಡಲಾಗಿದೆ.

  • ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗಳೂರು: ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ, ಭಾರೀ ಪ್ರಾಮಾಣದ ದಂಡ ಕಟ್ಟಿ ಸುತ್ತಾಗಿದ್ದಾರೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    ಇದರ ನಡುವೆ, ದುಬಾರಿ ದಂಡ ತಪ್ಪಿಸಿಕೊಳ್ಳಲು ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಗುರುಗ್ರಾಮದಲ್ಲಿ ಬೈಕ್ ಸವಾರರು ಪೊಲೀಸರ ಪರಿಶೀಲನೆ ಕಂಡು ಬೈಕ್‍ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಈ ಕುರಿತ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಶೇರ್ ಮಾಡಿಕೊಂಡಿದ್ದಾರೆ.

  • ಕಂಡಕಂಡಲ್ಲಿ ಕಸ ಎಸೆದ್ರೆ  ಬೀಳುತ್ತೆ ಬಿಬಿಎಂಪಿಯಿಂದ ಭಾರೀ ದಂಡ

    ಕಂಡಕಂಡಲ್ಲಿ ಕಸ ಎಸೆದ್ರೆ ಬೀಳುತ್ತೆ ಬಿಬಿಎಂಪಿಯಿಂದ ಭಾರೀ ದಂಡ

    ಬೆಂಗಳೂರು: ಕಸ ಸಂಸ್ಕರಣೆ ಹಾಗೂ ವಿಂಗಡಣೆ ಉಲ್ಲಂಘಿಸಿದರೆ ಭಾರೀ ದಂಡ ಹಾಕಲು ಬಿಬಿಎಂಪಿ ಸಜ್ಜಾಗಿದೆ. ಬಿಬಿಎಂಪಿ ಕಸ ನಿರ್ವಹಣೆ ಬೈಲಾ 2019ರ ಕರಡು ಸಿದ್ಧಗೊಂಡಿದೆ.

    ಇದರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ಮಾಡಿದರೆ, ಉಗುಳಿದರೆ 500 ರಿಂದ 1000 ರೂ. ದಂಡ ಬೀಳಲಿದೆ. ಕಸ ವಿಂಗಡಣೆ ಮಾಡದಿದ್ದರೆ 500 ರೂ ನಿಂದ 1 ಸಾವಿರ ರೂ. ದಂಡ ಬೀಳಲಿದೆ. ಜುಲೈ ತಿಂಗಳ ಕೌನ್ಸಿಲ್ ಸಭೆಯಲ್ಲಿ ಕರಡು ಪ್ರಸ್ತಾವನೆ ಮಾಡಿದೆ.

    ಮುಂದಿನ ವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಆಕ್ಷೇಪಕ್ಕೆ ಅವಕಾಶವನ್ನು ಪಾಲಿಕೆ ನೀಡಲಿದೆ.

    ಎಷ್ಟು ದಂಡ?
    ಕಸ ಸುಟ್ಟರೆ – 25 ಸಾವಿರ ರೂ ದಂಡ
    ಕಸ ವಿಂಗಡಣೆ ತಪ್ಪಿದ್ರೆ 500 – 1 ಸಾವಿರ ರೂ ದಂಡ
    ಕಟ್ಟಡ ತ್ಯಾಜ್ಯ ನಿರ್ವಹಣೆ ಉಲ್ಲಂಘಿಸಿದರೆ -5 ರಿಂದ 10 ಸಾವಿರ ದಂಡ
    ಮಾಂಸ ತ್ಯಾಜ್ಯ ನಿರ್ವಹಣೆ ವೈಫಲ್ಯವಾದರೆ -1 ರಿಂದ 2 ಸಾವಿರ ರೂ ದಂಡ
    ಕಸ ಉತ್ಪಾದನೆ ಸುಳ್ಳು ಮಾಹಿತಿ ಕೊಟ್ಟರೆ -10 ಸಾವಿರ ರೂ ದಂಡ

  • ಕರು ಕೊಂದಿದ್ದಕ್ಕೆ 10 ವರ್ಷ ಜೈಲು, 1 ಲಕ್ಷ ರೂ. ದಂಡ

    ಕರು ಕೊಂದಿದ್ದಕ್ಕೆ 10 ವರ್ಷ ಜೈಲು, 1 ಲಕ್ಷ ರೂ. ದಂಡ

    ಗಾಂಧಿನಗರ: ಕರು ಕೊಂದಿದ್ದಕ್ಕೆ ಗುಜರಾತ್‍ನ ರಾಜ್‍ಕೋಟ್ ಜಿಲ್ಲಾ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

    ಜಿಲ್ಲ ನ್ಯಾಯಾಲಯದ ನ್ಯಾ.ಎಚ್.ಕೆ.ದವೆ ಅವರು ಗುಜರಾತ್ ಪ್ರಾಣಿ ಸಂರಕ್ಷಣೆ(ತಿದ್ದುಪಡಿ) ಕಾಯ್ದೆ 2017ರ ಅನ್ವಯ ಆರೋಪಿ ಸಲೀಂಗೆ ಶಿಕ್ಷೆ ವಿಧಿಸಿದ್ದಾರೆ.

    ಜನವರಿಯಲ್ಲಿ ಸತ್ತರ್ ಕೋಲಿಯಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿತ್ತು. ಆರೋಪಿ ಮಕ್ರಾನಿ ತನ್ನ ಮಗಳ ಮದುವೆ ಹಿನ್ನೆಲೆ ಮನೆಯಲ್ಲಿದ್ದ ಕರುವನ್ನು ಯಾರಿಗೂ ಗೊತ್ತಾಗದಂತೆ ಕೊಂದು ಬಾಡೂಟ ಮಾಡಿಸಿ, ಮದುವೆ ಊಟವನ್ನಾಗಿ ಬಡಿಸಿದ್ದ ಎಂದು ದೂರುದಾರರು ಆರೋಪಿಸಿದ್ದರು.

    ಎಫ್‍ಐಆರ್ ದಾಖಲಾದ ನಂತರ ತನಿಖೆ ನಡೆಸಲಾಗಿದ್ದು, ಸಾಕ್ಷಿಗಳು ಹಾಗೂ ವಿಧಿವಿಜ್ಞಾನ ವರದಿಯನ್ನು ಆಧಾರಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಿದ್ದುಪಡಿಯಾದ ಕಾಯ್ದೆಯನ್ವಯ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡದ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.

    ತಿದ್ದುಪಡಿ ಮಾಡಿದ ಹೊಸ ಕಾಯ್ದೆಯನ್ವಯ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ. ಈ ಕಾಯ್ದೆಯ ಪ್ರಕಾರ ಗೋಮಾಂಸ ಸಾಗಣೆ, ಮಾರಾಟ ಮತ್ತು ಸಂಗ್ರಹಣೆಗಾಗಿ 7-10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಈ ಹಿಂದೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಕಾಯ್ದೆಯ ತಿದ್ದುಪಡಿ ನಂತರ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಹೆಚ್ಚಿಸಲಾಗಿತ್ತು.

  • ಮದುವೆ ವೇಳೆ ಬಯಲು ಮಲ ವಿಸರ್ಜನೆ, ಕಸ ಹಾಕಿದ್ದಕ್ಕೆ 2.5 ಲಕ್ಷ ರೂ. ದಂಡ

    ಮದುವೆ ವೇಳೆ ಬಯಲು ಮಲ ವಿಸರ್ಜನೆ, ಕಸ ಹಾಕಿದ್ದಕ್ಕೆ 2.5 ಲಕ್ಷ ರೂ. ದಂಡ

    ಡೆಹ್ರಾಡೂನ್: ಉತ್ತರಾಖಂಡ್‍ನ ಔಲಿಯ ದಿ ಸ್ಕೀ ರೆಸಾರ್ಟ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಗುಪ್ತಾ ಸಹೋದರರ ಮದುವೆ ವೇಳೆ ಎಲ್ಲೆಂದರಲ್ಲಿ ಕಸ ಎಸೆದಿರುವುದು ಹಾಗೂ ಬಯಲು ಮಲ ವಿಸರ್ಜನೆ ಮಾಡಿರುವುದಕ್ಕೆ ಜೋಶಿಮಠ್ ನಗರ ಪಾಲಿಕೆ 2.5 ಲಕ್ಷ ದಂಡ ವಿಧಿಸಿದೆ.

    ಬಯಲು ಮಲ ವಿಸರ್ಜನೆ ಮಾಡಿದ್ದಕ್ಕೆ 1 ಲಕ್ಷ ರೂ., ಎಲ್ಲೆಂದರಲ್ಲಿ ಕಸ ಹಾಕಿದ್ದಕ್ಕೆ 1.5 ಲಕ್ಷ ರೂ. ದಂಡ ವಿಧಿಸಿದೆ. ಗುಪ್ತಾ ಸಹೋದರರ ಮದುವೆಯನ್ನು ಉತ್ತರಾಖಂಡ್‍ನ ಪ್ರವಾಸಿ ತಾಣವಾದ ಔಲಿಯ ಪರ್ವತ ಪ್ರದೇಶದ ಸುಂದರ ತಾಣದಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭದ ಎಲ್ಲ ಕಸವನ್ನು ನೇರವಾಗಿ ನಗರಪಾಲಿಕೆ ಸಿಬ್ಬಂದಿಯವರೇ ಸ್ವಚ್ಛಗೊಳಿಸುವುದು ನಿಯಮ, ಇದಕ್ಕೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಗರಪಾಲಿಕೆ ಕಸ ವಿಲೇವಾರಿಗೆ ಬಿಲ್ ಸಹ ನೀಡಿತ್ತು. ಆದರೂ ಸಹ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಲಾಗಿದೆ, ಅಲ್ಲದೆ, ಬಯಲು ಮಲ ವಿಸರ್ಜನೆ ಮಾಡಲಾಗಿದೆ ಎಂದು ಪಾಲಿಕೆ 2,5 ಲಕ್ಷ ರೂ. ದಂಡ ವಿಧಿಸಿದೆ.

    ಅಲ್ಲದೆ, ರೆಸಾರ್ಟ್ ಬಳಿಯ ಕಸವನ್ನು ತೆರವುಗೊಳಿಸಲು ಈಗಾಗಲೇ ಪಾಲಿಕೆ 8.14 ಲಕ್ಷ ರೂ. ಬಿಲ್ ಮಾಡಿದ್ದು, ಗುಪ್ತಾ ಸಹೋದರರು ಈಗಾಗಲೇ 5.54 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಉಳಿದ ಹಣವನ್ನು ನೀಡುವಂತೆ ಗುಪ್ತಾ ಸಹೋದರರಿಗೆ ತಿಳಿಸಲಾಗಿದೆ. ಅಲ್ಲದೆ 54 ಸಾವಿರ ರೂ.ಗಳನ್ನು ಬಳಕೆದಾರರ ಶುಲ್ಕ ಎಂದು ವಿಧಿಸಲಾಗಿದೆ.

    ಪಾಲಿಕೆಯ ಬಿಲ್ ಹಾಗೂ ದಂಡವನ್ನು ಶೀಘ್ರವೇ ಪಾವತಿಸುವುದಾಗಿ ಗುಪ್ತಾ ಸಹೋದರರು ತಿಳಿಸಿದ್ದಾರೆ. ಈ ಮದುವೆಯೊಂದರಲ್ಲೇ ಜೋಶಿಮಠ್ ನಗರ ಪಾಲಿಕೆ 321 ಕ್ವಿಂಟಾಲ್ ಕಸವನ್ನು ಸಂಗ್ರಹಿಸಿದೆ. ಆದರೂ ಸಹ ಸಮಾರಂಭದ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗಿದೆ.

    ಈ ಮಧ್ಯೆ ಭದ್ರತಾ ಠೇವಣಿಯಾಗಿ ಉತ್ತರಾಖಂಡ್‍ನ ಚಮೋಲಿ ಜಿಲ್ಲಾಡಳಿತದಲ್ಲಿ ಗುಪ್ತಾ ಸಹೋದರರು ಇಟ್ಟ 3 ಕೋಟಿ ರೂ. ಹಣದ ಕುರಿತು ಜುಲೈ 8 ರಂದು ನೈನಿತಾಲ್ ಹೈ ಕೋರ್ಟ್ ವಿಚಾರಣೆಯ ಮರುದಿನ ನಿರ್ಧರಿಸಲಾಗುವುದು. ನೈನಿತಾಲ್ ಹೈ ಕೋರ್ಟ್ ಆದೇಶದ ಮೇರೆಗೆ 13 ಅಧಿಕಾರಿಗಳ ತಂಡ ಔಲಿಯಲ್ಲಿ ನಡೆಯುವ ಸಮಾರಂಭಗಳ ಮೇಲೆ ಕಣ್ಣಿಟ್ಟಿದ್ದು, ಎಲ್ಲ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡುತ್ತದೆ.

    ಅರಣ್ಯ, ಉತ್ತರಾಖಂಡ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಮೋಲಿ ಜಿಲ್ಲಾಡಳಿತ, ಉತ್ತರಾಖಂಡ್ ಜಲ್ ಸಂಸ್ಥಾನ್, ಆದಾಯ, ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 13 ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅಲ್ಲದೆ, ಔಲಿ ಪ್ರದೇಶದಲ್ಲಿ ಹೆಲಿಕಾಪ್ಟ್‍ರ್ ಲ್ಯಾಂಡಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಪರ್‍ಗಳು ಗಣ್ಯರನ್ನು ಕರೆ ತರಲು ಅವಕಾಶ ನೀಡಲಾಗಿದೆ. ಅಲ್ಲಿಂದ ಕಾರ್ ಮೂಲಕ ಗಣ್ಯರು ಮದುವೆ ಸಮಾರಂಭವಕ್ಕೆ ತೆರಳಬಹುದಾಗಿದೆ.

    ಹೈ ಕೋರ್ಟ್ ಆದೇಶದನ್ವಯ ಕೇವಲ 150 ಗಣ್ಯರಿಗೆ ಮಾತ್ರ ಅವಕಾಶವಿತ್ತು. ಇದರಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಬಾಬಾ ರಾಮ್‍ದೇವ್ ಹಾಗೂ ಇತರ ಗಣ್ಯರು ನವ ಜೋಡಿಗಳನ್ನು ಹಾರೈಸಿದ್ದರು. ಕತ್ರಿನಾ ಕೈಫ್ ಸೇರಿದಂತೆ ಇತರ ಬಾಲಿವುಡ್ ನಟ, ನಟಿಯರೂ ಸಹ ಭಾಗವಹಿಸಿದ್ದರು.

    ಮುಖ್ಯಮಂತ್ರಿ ರಾವತ್ ಅವರು ಈ ಹಿಂದೆಯೇ ಸೂಚಿಸಿದ್ದು, ಪರಿಸರಕ್ಕೆ ಹಾನಿಯುಂಟು ಮಾಡುವ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ. ಔಲಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಔಲಿಯ ಸ್ಕೀ ರೆಸಾರ್ಟ್‍ನ್ನು ಇದೀಗ ಸ್ವಚ್ಛಗೊಳಿಸಲಾಗಿದ್ದು, ಎಲ್ಲ ಕಸವನ್ನು ತೆರವುಗೊಳಿಸಲಾಗಿದೆ. ಜೂ. 30ರೊಳಗೆ ಸ್ವಚ್ಛಗೊಳಿಸುವುದಾಗಿ ಜೋಶಿಮಠ್ ಪಾಲಿಕೆ ತಿಳಿಸಿತ್ತು. ಅದರಂತೆ ಎಲ್ಲ ಕಸವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ನೌತಿಯಾಲ್ ತಿಳಿಸಿದ್ದಾರೆ.