Tag: fines

  • ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

    ನವದೆಹಲಿ: ಪ್ರತಿಭಟನೆ (Protest ), ಹೆದ್ದಾರಿ ತಡೆ, ಬಂದ್‌ ಇನ್ನಿತರ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ರೆ, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾನೂನು ತಿದ್ದುಪಡಿ ಮಾಡಬೇಕು. ಪ್ರತಿಭಟನೆ ವೇಳೆ ಹಾನಿಯಾದ ಆಸ್ತಿಯ ಮೌಲ್ಯವನ್ನು ಹಾನಿಕೋರರಿಂದಲೇ ಸಂಪೂರ್ಣವಾಗಿ ವಸೂಲಿ ಮಾಡಬೇಕು. ನಂತರ ಮಾತ್ರವೇ ಜಾಮೀನು ನೀಡಬೇಕು ಎಂದು ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ (Law Commission) ಶಿಫಾರಸು ಮಾಡಿದೆ.

    ಪ್ರತಿಭಟನೆಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾದ (Public Property Damage) ಸಂದರ್ಭದಲ್ಲಿ, ಯಾರು ಪ್ರತಿಭಟನೆಯ ನೇತೃತ್ವ ವಹಿಸಿರುತ್ತಾರೋ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಅವರಿಂದಲೇ ಹಾನಿಗೊಳಗಾದ ಆಸ್ತಿ ಮೌಲ್ಯವನ್ನು ವಸೂಲಿ ಮಾಡಬೇಕು. ನಂತರ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಪ್ರಕರಣಗಳಲ್ಲಿ ಜಾಮೀನು ನೀಡುವುದಕ್ಕೂ ಮುನ್ನ ಆಸ್ತಿಯ ಮೌಲ್ಯವನ್ನು ವಸೂಲಿ ಮಾಡಬೇಕು ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

    ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದಾಗ ಪ್ರತಿಭಟನಾಕಾರರಿಗೆ ಅಲ್ಪ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಆದರೆ, ಕಾನೂನು ಆಯೋಗವು ಜಾಮೀನು ನೀಡುವಾಗಲೇ ದಂಡದ ಮೊತ್ತ ವಸೂಲಿ ಮಾಡಬೇಕು ಎಂದು ಹೇಳಿದೆ. ಅದೂ ಕೂಡಾ ಸಾರ್ವಜನಿಕ ಆಸ್ತಿ ಪಾಸ್ತಿಯ ಮಾರುಕಟ್ಟೆ ಮೌಲ್ಯದಷ್ಟೇ ಹಣವನ್ನು ದಂಡದ ರೂಪದಲ್ಲಿ ಭರಿಸಬೇಕಾಗುತ್ತದೆ. ಕೆಲವು ಸ್ವತ್ತುಗಳ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸಲು ಸಾಧ್ಯ ಆಗೋದಿಲ್ಲ. ಆಗ ನ್ಯಾಯಾಲಯವೇ ಸೂಕ್ತ ಮೊತ್ತ ನಿರ್ಧರಿಸಬೇಕಾಗುತ್ತದೆ ಎಂದು ಕಾನೂನು ಆಯೋಗ ಹೇಳಿದೆ.

    ಇದಕ್ಕಾಗಿ ಸರ್ಕಾರ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಾನೂನು ಆಯೋಗ ಹೇಳಿದೆ. ಕೇರಳ ರಾಜ್ಯದಲ್ಲಿ ಸದ್ಯ ಜಾರಿಯಲ್ಲಿ ಇರುವ ಕಾನೂನನ್ನೂ ಉಲ್ಲೇಖಿಸಿದೆ. ಕೇರಳ ರಾಜ್ಯದಲ್ಲಿ ಖಾಸಗಿ ಸ್ವತ್ತುಗಳ ಹಾನಿ ತಡೆ ಕಾಯ್ದೆ ಜಾರಿಯಲ್ಲಿದೆ. ಜೊತೆಯಲ್ಲೇ ಪರಿಹಾರ ಕಾಯ್ದೆ ಕೂಡಾ ಇದೆ. ಇಂಥದ್ದೇ ಕಾನೂನನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ತರಬೇಕು ಎಂದು ಕಾನೂನು ಆಯೋಗ ಹೇಳಿದೆ. ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕೆ ಶುಕ್ರವಾರ ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ: ಮುತಾಲಿಕ್ ಆರೋಪ

    ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಇಂತಹ ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಒಲವು ತೋರಿತ್ತು. ಆದ್ರೆ ಸಾಧ್ಯವಾಗಿರಲಿಲ್ಲ. ನಂತರ ಕೆಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಕೆಲ ಹೈಕೋರ್ಟ್‌ಗಳು ಇಂತಹ ಘಟನೆ ತಡೆಯಲು ಇಂತಹ ನಿದರ್ಶನಗಳನ್ನು ನೀಡಿದ್ದವು. ಇದೀಗ ಕಾನೂನು ಆಯೋಗವೇ ಕಾಯ್ದೆ ಬಗ್ಗೆ ಶಿಫಾರಸು ಮಾಡಿದೆ.

  • ಅನುಮತಿ ಇಲ್ಲದೆ ವಿವಾಹ ಆಯೋಜನೆ- 25 ಸಾವಿರ ದಂಡ

    ಅನುಮತಿ ಇಲ್ಲದೆ ವಿವಾಹ ಆಯೋಜನೆ- 25 ಸಾವಿರ ದಂಡ

    ಚಿಕ್ಕೋಡಿ/ಬೆಳಗಾವಿ: ಅನುಮತಿ ಪಡೆಯದೇ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಮದುವೆ ಸಮಾರಂಭದ ಆಯೋಜಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಕುಟಂಬಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ.

    ಕಮತನೂರು ಗ್ರಾಮದ ವರ ಕಾಶಿನಾಥ ಕಾಡಿ ಹಾಗೂ ಅವರಗೋಳ ಗ್ರಾಮದ ವಧು ಕಾಂಚನಾ ಬಾಳಾಜಿ ಅವರ ಮದುವೆಯನ್ನು ಶುಕ್ರವಾರ ಕಮತನೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿರಲಿಲ್ಲ. ಸಮಾರಂಭದಲ್ಲಿ 510ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಯಡವನ್ನವರ್ ದಾಳಿ ನಡೆಸಿದ್ದು, ಕೋವಿಡ್-19 ನಿಯಮ ಉಲ್ಲಂಘನೆ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ವಧು-ವರರ ಪೋಷಕರಿಂದ ದಂಡ ವಸೂಲಿ ಮಾಡಲಾಗಿದೆ. ದಾಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಫಕ್ಕಿರೇಶ್, ಸಿಬ್ಬಂದಿ ಸತೀಶ ಮಗದುಮ್ಮ, ಸಂಜು ನಿಕ್ಕಂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದು, ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ತಿರುಗಾಟ- ಎಸ್‍ಐಗೆ ಎಸಿ, ತಹಶೀಲ್ದಾರ್ ಅವಾಜ್

    ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ತಿರುಗಾಟ- ಎಸ್‍ಐಗೆ ಎಸಿ, ತಹಶೀಲ್ದಾರ್ ಅವಾಜ್

    – ಇನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ವಾರ್ನ್

    ಮಂಡ್ಯ: ಹೆಲ್ಮೆಟ್ ಹಾಕದೆ ಕಂದಾಯ ಇಲಾಖೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ತಿರುಗಾಡಿದ್ದು, ದಂಡ ಹಾಕಿದ್ದಕ್ಕೆ ಎಸ್‍ಐಗೆ ಎಸಿ ಹಾಗೂ ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ಜಿಲ್ಲೆಯ ನಾಗಮಂಗಲದಲ್ಲಿ ಘಟನೆ ನಡೆದಿದ್ದು, ಹೆಲ್ಮೆಟ್ ಹಾಕದೆ ತಿರುಗಾಡಿದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ್ದಕ್ಕೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಅಹಮದ್ ಅವರು ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‍ಐ ರವಿಶಂಕರ್ ಅವರಿಗೆ ಅವಾಜ್ ಹಾಕಿದ್ದಾರೆ. ಇನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ವಾರ್ನ್ ಮಾಡಿದ್ದಾರೆ.

    ವಾಹನ ತಪಾಸಣೆ ವೇಳೆ ಹೆಲ್ಮೆಟ್ ಹಾಕದೆ ಬೈಕ್ ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ಎಸ್‍ಐ ದಂಡ ಹಾಕಿದ್ದರು. ದಂಡ ಹಾಕಿದ ವಿಷಯ ತಿಳಿದು ಸ್ಥಳಕ್ಕಾಗಮಿಸಿ, ಎಸಿ, ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

    ನಾನು ಮ್ಯಾಜಿಸ್ಟ್ರೆಟ್ ಹೇಳುತ್ತಿದ್ದೇನೆ ಇನ್ನು ದಂಡ ಹಾಕಬೇಡಿ ಎಂದು ತಹಸೀಲ್ದಾರ್ ವಾರ್ನಿಂಗ್ ಮಾಡಿದ್ದಾರೆ. ಇದೇ ಫಸ್ಟ್ ಆ್ಯಂಡ್ ಲಾಸ್ಟ್ ಕಂದಾಯ ಇಲಾಖೆ ಸಿಬ್ಬಂದಿಯನ್ನು ಪರಿಶೀಲನೆ ಮಾಡಬೇಡಿ ಎಂದು ಬೆದರಿಸಿದ್ದಾರೆ. ಈ ಮೂಲಕ ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆ. ಎಸ್‍ಐ ಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು, ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನಿದೆಯೇ ಎಂದು ಪ್ರಶ್ನಿಸಿದ್ದಾರೆ.

  • ಉತ್ತರ ಪ್ರದೇಶದಲ್ಲಿ ಭಾನುವಾರ ಲಾಕ್‍ಡೌನ್ – ಮಾಸ್ಕ್ ಧರಿಸದಿದ್ದರೆ 10,000 ದಂಡ

    ಉತ್ತರ ಪ್ರದೇಶದಲ್ಲಿ ಭಾನುವಾರ ಲಾಕ್‍ಡೌನ್ – ಮಾಸ್ಕ್ ಧರಿಸದಿದ್ದರೆ 10,000 ದಂಡ

    ಲಕ್ನೋ: ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಲು ಉತ್ತರಪ್ರದೇಶದಲ್ಲಿ ಹಲವಾರು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಮಧ್ಯೆ ಇಂದಿನಿಂದ ಮಾಸ್ಕ್ ಧರಿಸದೇ ಇರುವವರಿಗೆ 10,000 ರೂ. ದಂಡ ವಿಧಿಸಬಹುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಸಾರ್ವಜನಿಕರು ಮೊದಲ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿಬಿದ್ದರೆ 1,000ರೂ ದಂಡ ಹಾಗೂ ಎರಡನೇ ಬಾರಿಗೆ ಮಾಸ್ಕ್ ಧರಿಸಿದಿದ್ದರೆ 10,000 ರೂ ದಂಡ ವಿಧಿಸಲಾಗುತ್ತದೆ. ಜೊತೆಗೆ ರಾಜ್ಯದಲ್ಲಿ ಭಾನುವಾರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಸೇವೆಗಳು ಬಂದ್ ಆಗಿರಲಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮೇ 15 ರವರೆಗೂ ಶಾಲೆಗಳನ್ನು ಮುಚ್ಚುವುದಾಗಿ ನಿನ್ನೆ ಘೋಷಿಸಲಾಗಿದೆ.

    ಗುರುವಾರ ಉತ್ತರ ಪ್ರದೇಶದಲ್ಲಿ 22,439 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 104 ಮಂದಿ ಮೃತಪಟ್ಟಿದ್ದಾರೆ.

  • ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಗೋವಾದಲ್ಲಿ ಮದ್ಯಪಾನ ಮಾಡೋ ಮುನ್ನ ಹುಷಾರ್ – ಬೀಳುತ್ತೆ ಬಾರೀ ದಂಡ

    ಪಣಜಿ: ರಜೆ ಸಮಯದಲ್ಲಿ ಗೋವಾ ಪ್ರವಾಸಕ್ಕೆ ತೆರಳಿ ಅಲ್ಲಿನ ಕಡಲ ತೀರದಲ್ಲಿ ಮದ್ಯಪಾನ ಮಾಡುವ ಯೋಚನೆ ನಿಮಗೇನಾದರೂ ಇದ್ದರೆ ಈಗಲೇ ಜಾಗೃತರಾಗಿರಿ. ಇದರಿಂದ ನೀವೇ ತೊಂದರೆಗೆ ಸಿಲುಕಿ ಹಾಕಿಕೊಳ್ಳಬಹುದು. ಯಾಕಂದ್ರೆ ಇನ್ನು ಮುಂದೆ ಗೋವಾ ಕಡಲ ತೀರಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲು ಗೋವಾ ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ.

    ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಹಲವು ಪ್ರದೇಶಗಳು ಬಾಟಲಿಗಳ ಕಸದ ರಾಶಿಯಿಂದ ತುಂಬಿದ್ದನ್ನು ಗಮನಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ, ಇನ್ನು ಮುಂದೆ ಕಡಲ ತೀರದಲ್ಲಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ಜನರಿಗೆ 10,000 ರೂ. ದಂಡ ವಿಧಿಸಲು ಮುಂದಾಗಿದೆ. ಅಲ್ಲದೇ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಸಲುವಾಗಿ ಕೆಲವು ಮಂಡಳಿ(ಬೋರ್ಡ್)ಗಳನ್ನು ಸ್ಥಾಪಿಸಲಾಗಿದೆ ಎಂದು ಗೋವಾ ಪ್ರವಾಸೋದ್ಯಮ ನಿರ್ದೇಶಕ ಮೆನಿನೊ ಡಿಸೋಜಾ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

    ರಾಜ್ಯದ ಪ್ರವಾಸೋದ್ಯಮ ಇಲಾಖೆ ತಿದ್ದುಪಡಿ ಕಾಯ್ದೆಯನ್ನು ಪೊಲೀಸರ ಮೂಲಕ ಜಾರಿಗೊಳಿಸಿದ್ದು, ಪ್ರವಾಸಿ ಪೊಲೀಸ್ ಪಡೆ ಇದ್ದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ 2019ರ ಜನವರಿಯಲ್ಲಿ ರಾಜ್ಯ ಸರ್ಕಾರವು ಪ್ರವಾಸಿ ವ್ಯಾಪಾರ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಿ ಅದರ ಅನ್ವಯ ಕಡಲ ತೀರದಲ್ಲಿ ಕುಡಿಯುವ ಒಬ್ಬ ವ್ಯಕ್ತಿಗೆ 2,000 ರೂ. ಮತ್ತು ಗುಂಪುಗಳಲ್ಲಿ ಕುಡಿಯುವವರಿಗೆ 10,000 ರೂ. ದಂಡ ವಿಧಿಸಲಾಗಿತ್ತು.

    ಅಲ್ಲದೆ ಶುಕ್ರವಾರ ಗೋವಾದಲ್ಲಿ ನಡೆಸಿದ ಕೊರೊನಾ ವೈರಸ್ ಪರೀಕ್ಷೆಯಲ್ಲಿ 83 ಜನರಿಗೆ ಪಾಸಿಟಿವ್ ಬಂದಿದ್ದು, ಸೋಂಕಿನಿಂದ 105 ಜನ ಚೇತರಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಇಲ್ಲಿಯವರೆಗೂ ಗೋವಾದಲ್ಲಿ ಸೋಂಕಿತರ ಸಂಖ್ಯೆ 51,709ಕ್ಕೆ ತಲುಪಿದ್ದು, ಈ ಪೈಕಿ 50,088 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಹಾಗೂ 744 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ರಾಜ್ಯದಲ್ಲಿ 877 ಸಕ್ರಿಯ ಪ್ರಕರಣಗಳು ಉಳಿದಿದೆ.

  • ಎರಡು ಗಂಟೆಗಳಲ್ಲಿ 26.26 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

    ಎರಡು ಗಂಟೆಗಳಲ್ಲಿ 26.26 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

    ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಗಂಟೆಯಲ್ಲಿ ಬರೋಬ್ಬರಿ 26.26 ಲಕ್ಷ ರೂ. ದಂಡವನ್ನು ಸಂಗ್ರಹಿಸಿದ್ದಾರೆ.

    ಕೇವಲ ಎರಡು ಗಂಟೆಯಲ್ಲಿ ಬರೋಬ್ಬರಿ 5,672 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಎರಡು ಗಂಟೆ ಅವಧಿಯಲ್ಲಿ 26,26,800 ರೂಪಾಯಿ ದಂಡ ಸಂಗ್ರಹಿಸಿದ್ದಾರೆ. ನಗರದ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ 5,672 ಪ್ರಕರಣ ದಾಖಲಾಗಿವೆ. ನಿತ್ಯ ಇರುವ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಲ್ಲಿ ನಿಂತು. ವಾಹನ ಸವಾರರಿಗೆ ಬಲೆ ಬೀಸಿದ್ದಾರೆ.

    ಈ ಸ್ಥಳಗಳಲ್ಲಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದಾರೆ. ಈ ರಸ್ತೆಗಳಲ್ಲಿ ಪೊಲೀಸರು ಇರುವುದಿಲ್ಲ ಎಂದು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುತ್ತಾರೆ ಎಂದು ಸಾರ್ವಜನಿಕರಿಂದ ದೂರಿದ್ದರು. ಈ ಹಿನ್ನಲೆ ಇಂದು ಪೀಕ್ ಹವರ್ಸ್ ಅಲ್ಲದೆ ಸಮಯದಲ್ಲಿ ಕಾರ್ಯಚಾರಣೆ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ಈ ಕುರಿತು ಸಂಚಾರ ವಿಭಾಗದ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

  • ಮಾಸ್ಕ್ ಧರಿಸದ್ದಕ್ಕೆ ದಂಡ- ಮಾರ್ಷಲ್ಸ್ ಮೇಲೆ ಹಣ ಬಿಸಾಕಿಸಿದ ಮಹಿಳೆ

    ಮಾಸ್ಕ್ ಧರಿಸದ್ದಕ್ಕೆ ದಂಡ- ಮಾರ್ಷಲ್ಸ್ ಮೇಲೆ ಹಣ ಬಿಸಾಕಿಸಿದ ಮಹಿಳೆ

    ಬೆಂಗಳೂರು: ಮಾಸ್ಕ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ದಂಡ ವಿಧಿಸಿದ್ದ ಮಾರ್ಷಲ್ ವಿರುದ್ಧವೇ ಮಹಿಳೆಯೊಬ್ಬರು ನಿಂದಿಸಿ, ಹಣವನ್ನು ಬಿಸಾಕಿರುವ ಘಟನೆ ನಗರದಲ್ಲಿ ನಡೆದಿದೆ.

    ಮಾರ್ಷಲ್‍ಗಳನ್ನ ನಿಂದಿಸಿದ ಮಹಿಳೆ ವಿಡಿಯೋವನ್ನು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಆದೇಶದಂತೆ ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಧರಿಸದೆ ಓಡಾಡುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದಾರೆ. ಮಾರ್ಷಲ್‍ಗಳ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಅವರನ್ನು ನಿಂದಿಸುವುದು ಅಪರಾಧವಾಗಿದೆ. ಇಂತಹವರ ವಿರುದ್ಧ ಬೆಂಗಳೂರು ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ರಂದೀಪ್ ಬರೆದುಕೊಂಡಿದ್ದಾರೆ.

    ವಿಡಿಯೋಗಳನ್ನು ನಿಂದಿಸಿರುವ ಮಹಿಳೆ, ಸುಮ್ಮನೆ ನಮ್ಮ ಪಾಡಿಗೆ ನಾವು ಹೋಗುತ್ತಿದ್ದರೆ ತೊಂದರೆ ಕೊಡುತ್ತೀರಾ? ನಿಮ್ಮಂತವರಿಗೆ ಕೊರೊನಾ ಬಂದು ಸಾಯುತ್ತಾರೆ ಎಂದು ಮಹಿಳೆ ನಿಂದಿಸಿದ್ದಾರೆ. ಇದಕ್ಕೆ ತಾಳ್ಮೆಯಾಗಿಯೆ ಉತ್ತರಿಸಿರುವ ಮಾರ್ಷಲ್, ನಿಮ್ಮ ಮಾತನ್ನೇ ಆರ್ಶೀವಾದವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಸಾಮಾಜಿಕ ಅಂತರ ನಿಯಮ ಪಾಲಿಸದಿದ್ದರೆ, ಮಾಸ್ಕ್ ಧರಿಸದಿದ್ದರೆ ಮಾರ್ಷಲ್ಸ್ ಕೇಳುತ್ತಾರೆ. ಸರ್ಕಾರದ ಸೂಚನೆಯ ಪ್ರಕಾರ ಮಾರ್ಷಲ್‍ಗಳು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಅತಿರೇಕದ ವರ್ತನೆ ತೋರಬಾರದು ಎಂದು ವಿಶೇಷ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ – ಬಿಬಿಎಂಪಿ ಕಮಿಷನರ್ ಸ್ಪಷ್ಟನೆ

    – ಕೊರೊನಾ ನಿಯಂತ್ರಿಸಲು ದಂಡವೇ ಕೊನೆಯ ಅಸ್ತ್ರ

    ಬೆಂಗಳೂರು: ಮಾಸ್ಕ್ ಧರಿಸಿಲ್ಲ ಅಂದರೆ ದುಬಾರಿ ದಂಡ ಹಾಕುತ್ತಿರುವುದಕ್ಕೆ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದಂಡ ಕಡಿಮೆ ಮಾಡಲ್ಲ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಂಜುನಾಥ್ ಪ್ರಸಾದ್, ಯಾವುದೇ ಕಾರಣಕ್ಕೂ ದಂಡದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಸ್ತಾಪನೂ ಇಲ್ಲ. ಕಡಿಮೆ ಮಾಡುವುದಿಲ್ಲ. ಕೊರೊನಾ ನಿಯಂತ್ರಿಸಲು ದಂಡ ಅನ್ನೋದು ಕೊನೆಯ ಅಸ್ತ್ರ. ಹೀಗಾಗಿ ಜನರೇ ಪಾಲನೆ ಮಾಡಬೇಕಾಗುತ್ತದೆ. ಮನೆಯಲ್ಲೇ ತಯಾರಿಸಿಕೊಂಡು ಮಾಸ್ಕ್ ಧರಿಸಬಹುದು. ಆದರೂ ಮಾಸ್ಕ್ ಧರಿಸದೇ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಾರೆ. ಅಂತಹವರು ದಂಡ ಕಟ್ಟಲಿ ಎಂದರು.

    ಕೊರೊನಾ ವ್ಯಕ್ತಿಯನ್ನ ಹಿಂಸಿಸುತ್ತದೆ. ಅಲ್ಲದೇ ಇದು ಜನರ ಸುತ್ತಮುತ್ತಲಿನವರಿಗೂ ಹರಡುತ್ತದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಅಡಿಯಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ದಂಡ ಇಳಿಸಲು ಸಾಧ್ಯವಾಗಲ್ಲ. 200 ರೂಪಾಯಿ ಇದ್ದಾಗ ಸಾಕಷ್ಟು ಜನ ನಿಯಮ ಉಲ್ಲಂಘಿಸುತ್ತಿದ್ದರು. ಇಂತಹ ಕೊರೊನಾ ಕಾಲದಲ್ಲಿ ಜನರು ಕೂಡ ಸಹಕಾರ ನೀಡಲೇಬೇಕು ಎಂದು ಬಿಬಿಎಂಪಿ ಕಮಿಷನರ್ ಹೇಳಿದರು.

    ಕೊರೊನಾ ಟೆಸ್ಟ್‌ಗೆ ಸ್ಯಾಂಪಲ್ ಕೊಡುತ್ತಾರೆ, ನಂತರ ಅವರೇ ನಾಪತ್ತೆಯಾಗುತ್ತಾರೆ. ಪೂರ್ವ ವಲಯದಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ಬರೋಬ್ಬರಿ 874 ಜನರು ನಾಪತ್ತೆಯಾಗಿದ್ದಾರೆ. ಇವರಿಂದಲೇ ಕೊರೊನಾ ಚೈನ್ ಲಿಂಕ್ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ತಪ್ಪು ವಿಳಾಸ ಕೊಟ್ಟು ಮೊಬೈಲ್ ನಂಬರ್ ಸ್ವಿಚ್ ಆಪ್ ಮಾಡಿಕೊಳ್ಳುತ್ತಾರೆ. ಈ ಕೇಸ್‍ಗಳ ಮಾಹಿತಿ ಈಗ ಪೊಲೀಸ್ ಇಲಾಖೆಗೆ ಹೋಗಲಿದೆ. ಪೊಲೀಸ್ ಇಲಾಖೆ ವತಿಯಿಂದ ಪಾಸಿಟಿವ್ ಕೇಸ್ ಜಾಲ ಪತ್ತೆ ಮಾಡಲಾಗುತ್ತದೆ ಎಂದರು.

    ಕೊರೊನಾ ಟೆಸ್ಟ್ ನಲ್ಲಿ ಬದಲಾವಣೆ ಮಾಡಲಾಗಿದೆ. ಈಗ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಬೇಕಾಗಿಲ್ಲ. ಬೀದಿ ಬೀದಿಗೆ ಟೆಸ್ಟ್ ಮಾಡಿಸಲಾಗುತ್ತದೆ. ಪ್ರತಿದಿನ ಕೇಸ್‍ಗಳ ಸಂಖ್ಯೆ ಹೆಚ್ಚಾದರೂ ಕೊರೊನಾ ಟೆಸ್ಟ್ ಮಾತ್ರ ಕಡಿಮೆ ಮಾಡಲ್ಲ. ನಮ್ಮ ಟೆಸ್ಟ್ ನಿತ್ಯ ಏರಿಕೆಯಾಗುತ್ತಲೇ ಇದೆ. ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ 40 ಸಾವಿರಕ್ಕೆ ಕೋವಿಡ್ ಸೋಂಕು ಪರೀಕ್ಷೆ ಹೆಚ್ಚಳ ಮಾಡಲಾಗುತ್ತಿದೆ.

    ರಾಟ್ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‍ಗಳಿಗೆ ಕೊರತೆ ಇಲ್ಲ. ರಾಜ್ಯ ಸರ್ಕಾರವೂ ಕೊಡುತ್ತಿದೆ, ಬಿಬಿಎಂಪಿಯೂ ಟೆಂಡರ್ ಕರೆದಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿನ್ನೂ ನೇಮಕ ಮಾಡಲು ಅವಕಾಶ ಇದೆ. ಯಾರ‍್ಯಾರಿಗೆ ಟೆಸ್ಟ್ ಮಾಡಬೇಕು ಎಂಬ ಟಾರ್ಗೆಟ್ ಇದೆ. ಬೇರೆ ಬೇರೆ ಖಾಯಿಲೆ ಇರುವವರು, ಉಸಿರಾಟದ ಸಮಸ್ಯೆ, ಕಂಟೈನ್‍ಮೆಂಟ್ ಪ್ರದೇಶದ ಜನ, ವಯಸ್ಸಾದವರನ್ನು ಟೆಸ್ಟ್ ಮಾಡಿದರೆ ದಿನಕ್ಕೆ 40 ಸಾವಿರ ಆಗಲಿದೆ. ಪೂರ್ವ ವಲಯದಲ್ಲಿ ಶೇ.13.11 ಪಾಸಿಟಿವ್ ರೇಟ್ ಇದೆ. ಶೇ.13.11 ನಿಂದ ಶೇ.5ಕ್ಕೆ ಇಳಿಸಬೇಕಿದೆ. ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

  • ದಂಡ ಪಾವತಿಸಿ ಖೈದಿಗಳನ್ನು ಬಿಡಿಸಿದ ಡಾ. ವಿಷ್ಣುವರ್ಧನ್ ಅಭಿಮಾನಿಗಳು

    ದಂಡ ಪಾವತಿಸಿ ಖೈದಿಗಳನ್ನು ಬಿಡಿಸಿದ ಡಾ. ವಿಷ್ಣುವರ್ಧನ್ ಅಭಿಮಾನಿಗಳು

    – ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ವಿಷ್ಣುಸೇನಾದಿಂದ ಮಾನವೀಯ ಕಾರ್ಯ

    ಧಾರವಾಡ: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ವಿಷ್ಣುಸೇನಾ ಧಾರವಾಡ ಜಿಲ್ಲಾ ಘಟಕದ ಸದಸ್ಯರು, ಇಬ್ಬರು ಕೈದಿಗಳ ದಂಡದ ಹಣ ಪಾವತಿಸಿ ಜೈಲಿನಿಂದ ಬಿಡಿಸುವ ಮಾನವೀಯ ಕಾರ್ಯ ಮಾಡಿದ್ದಾರೆ.

    ಧಾರವಾಡ ಕೇಂದ್ರ ಕಾರಾಗೃಹದಲ್ಲಿ ತಮ್ಮ ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಸಹ ಇಬ್ಬರು ಖೈದಿಗಳು ಜೈಲಿನಲ್ಲೆ ಇದ್ದರು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಮಹಾದೇವಪ್ಪ ಉದಗಟ್ಟಿ ಮತ್ತು ಹುಬ್ಬಳ್ಳಿಯ ವಾಸು ಕಾಟೀಗರ ಎಂಬಿಬ್ಬರು ತಮಗೆ ವಿಧಿಸಿದ್ದ ದಂಡದ ಹಣ ಹತ್ತು ಸಾವಿರ ರೂಪಾಯಿ ತುಂಬಲಾಗದೇ ಜೈಲು ಶಿಕ್ಷೆಯಲ್ಲಿಯೇ ಮುಂದುವರೆದಿದ್ದರು.

    ಆದರೆ ವಿಷ್ಣುವರ್ಧನ್‍ರ ಜನ್ಮದಿನದ ಪ್ರಯುಕ್ತ ಇವರಿಬ್ಬರ ದಂಡದ ಹಣ ತಲಾ ಹತ್ತು ಸಾವಿರ ರೂಪಾಯಿ ಪಾವತಿ ಮಾಡಿದ ವಿಷ್ಣು ಸೇನಾ ಜಿಲ್ಲಾ ಘಟಕದ ಸದಸ್ಯರು, ಇಬ್ಬರನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಿದರು. ವಿಷ್ಣು ಸೇನಾ ಧಾರವಾಡ ಘಟಕದ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ನೇತೃತ್ವದಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಿಸುವ ಮೂಲಕ ವಿಷ್ಣುವರ್ಧನ್ ಅವರ ಜನ್ಮದಿನ ಆಚರಿಸಲಾಯಿತು. ಜೈಲಿನಿಂದ ಬಿಡುಗಡೆಗೊಂಡ ಇಬ್ಬರು ಕೈದಿಗಳು ವಿಷ್ಣು ಸೇನೆಗೆ ಕೃತಜ್ಞತೆ ಸಲ್ಲಿಸಿದರು.

  • 1 ರೂ. ಪಾವತಿಸಿ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವೆ: ಪ್ರಶಾಂತ್ ಭೂಷಣ್

    1 ರೂ. ಪಾವತಿಸಿ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವೆ: ಪ್ರಶಾಂತ್ ಭೂಷಣ್

    ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ದಂಡ ವಿಧಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸಿ ದಂಡ ಪಾವತಿಸುತ್ತೇನೆ. ಜೊತೆಗೆ ಈ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

    ಇಂದು ಸುಪ್ರೀಂಕೋರ್ಟ್ ಆದೇಶದ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಮುಂದಿನ ನಿಲುವು ಸ್ಪಷ್ಟಪಡಿಸಿದರು. ನಾನು ಮಾಡಿದ ಟ್ವೀಟ್‍ಗಳು ಸುಪ್ರೀಂಕೋರ್ಟ್‍ನ್ನು ಅಗೌರವಕ್ಕೆ ಒಳಪಡಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಮತ್ತೆ ಸಮರ್ಥಿಸಿಕೊಂಡರು.

    ನ್ಯಾಯಾಲಯಗಳು ದುರ್ಬಲಗೊಂಡರೆ, ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಹಾನಿ ಮಾಡುತ್ತದೆ. ಹೀಗಾಗಿ ಕಾನೂನು ವ್ಯವಸ್ಥೆ ಬಲಿಷ್ಠವಾಗಿರಬೇಕು. ಸುಪ್ರೀಂ ಕೋರ್ಟ್ ಗೆದ್ದಾಗಲೆಲ್ಲಾ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ. ಸತ್ಯವು ಹೆಚ್ಚು ಮೇಲುಗೈ ಸಾಧಿಸಿದೆ ಎಂದು ನನಗೆ ಈಗ ವಿಶ್ವಾಸ ಮೂಡಿಸಿದೆ. ಈ ಪ್ರಕರಣದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ನ್ಯಾಯ ಸಿಕ್ಕಿದೆ. ಅನ್ಯಾಯದ ವಿರುದ್ಧ ಸಮಾಜದಲ್ಲಿ ಅನೇಕರು ಧ್ವನಿ ಎತ್ತಲು ಇದು ಪ್ರೇರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸುಪ್ರೀಂಕೋರ್ಟ್ ಮತ್ತು ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಯ ಟ್ವೀಟ್ ಹಿನ್ನೆಲೆ ನ್ಯಾಯಾಂಗ ನಿಂದನೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಇಂದು ಒಂದು ರೂಪಾಯಿ ದಂಡ ಅಥವಾ ಮೂರು ತಿಂಗಳು ಜೈಲು ಮತ್ತು ಕಲಾಪದಿಂದ ನಿರ್ಬಂಧಿಸುವ ಆದೇಶ ನೀಡಿತ್ತು. ಕೋರ್ಟ್ ಆದೇಶದ ಬಳಿಕ ಪ್ರಶಾಂತ್ ಭೂಷಣ್ ಅವರು ತಮ್ಮ ವಕೀಲ ರಾಜೀವ್ ಧವನ್ ಭೇಟಿ ಮಾಡಿ ಅವರಿಗೆ ದಂಡದ ಮೊತ್ತಕ್ಕೆ ಒಂದು ರೂಪಾಯಿ ನೀಡಿ ಟ್ವೀಟ್ ಮಾಡಿದ್ದರು. ಇದು ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು.

    ಟ್ವೀಟ್‍ನಲ್ಲಿ ಏನಿತ್ತು?
    ಮೊದಲ ಟ್ವೀಟ್ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಕಳೆದ 6 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂಬುದನ್ನು ಇತಿಹಾಸಕಾರರು ಹಿಂದಿರುಗಿ ನೋಡಿದರೆ, ಈ ನಾಶದಲ್ಲಿ ಸುಪ್ರೀಂ ಕೋರ್ಟ್ ಪಾತ್ರವನ್ನು ನೋಡಬಹುದು. ಅದರಲ್ಲೂ ವಿಶೇಷವಾಗಿ ಕಳೆದ 4 ಜಡ್ಜ್ ಗಳ ಪಾತ್ರವನ್ನು ಸ್ಪಷ್ಟವಾಗಿ ಗಮನಿಸಬಹುದು.

    ಎರಡನೇ ಟ್ವೀಟ್: ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್‍ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ಕೊರೊನಾ ಲಾಕ್‍ಡೌನ್ ಎಂದು ರಜೆ ಹಾಕಿ ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗದ ಸಮಯದಲ್ಲಿ ಬೈಕ್ ಸವಾರಿ ಮಾಡಿದ್ದಾರೆ.

    ಈ ಎರಡು ಟ್ವೀಟ್ ಅಲ್ಲದೇ 2009ರಲ್ಲಿ ತೆಹಲ್ಕಾ ಮ್ಯಾಗಜಿನ್‍ಗೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು.