Tag: fined

  • ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

    ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

    ಭುವನೇಶ್ವರ: ಲಾರಿ ಚಾಲಕನೊಬ್ಬ ಸಂಚಾರ ನಿಯಮ ಉಲ್ಲಂಘಿಸಿ ಬರೋಬ್ಬರಿ 86,500 ರೂ. ದಂಡ ಪಾವತಿಸಿದ ಪ್ರಸಂಗ ಒಡಿಶಾದ ಸಂಬಲ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಲಾರಿ ಜಾಲಕ ಅಶೋಕ್ ಜಾದವ್ ಅವರಿಗೆ ಸಂಚಾರ ಪೊಲೀಸರು ಸೆಪ್ಟೆಂಬರ್ 3ರಂದು ದಂಡ ವಿಧಿಸಿದ್ದರು. ಆದರೆ ಶನಿವಾರ ಸಂಜೆಯಿಂದ ಅಶೋಕ್ ಜಾದವ್ ಅವರಿಗೆ ಪೊಲೀಸರು ನೀಡಿದ್ದ ಚಲನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ನೂತನ ಮೋಟಾರು ಕಾಯ್ದೆ ಜಾರಿಯಾದ ಬಳಿಕ ಅಶೋಕ್ ಜಾದವ್ ಅತ್ಯಧಿಕ ದಂಡ ಪಾವತಿಸಿದ ದೇಶದ ಚಾಲಕ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಬಲ್‍ಪುರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹೆರಾ ಅವರು, ಸೆಪ್ಟೆಂಬರ್ 3ರಂದು ಅಧಿಕ ಸರಕು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ಮಾಡಲಾಯಿತು. ಈ ವೇಳೆ ಅನೇಕ ಸಂಚಾರ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ.

    ಅಶೋಕ್ ಜಾದವ್ ತನ್ನ ಲಾರಿಯನ್ನು ತಾನು ಚಾಲನೆ ಮಾಡದೆ ಅನಧಿಕೃತ ವ್ಯಕ್ತಿಗೆ ನೀಡಿರುವುದಕ್ಕೆ 5,000 ರೂ., ಲೈಸೆನ್ಸ್ ಇಲ್ಲದೆ ವಾಹನ ಚಾಲನೆ 5,000 ರೂ., 18 ಟನ್ ಅಧಿಕ ಸರಕು ಸಾಗಣೆಗೆ 56,000 ರೂ., ನಿಯಮ ಬಾಹಿರವಾಗಿ ಸರಕು ಹೊತ್ತೊಯ್ಯುವುದಕ್ಕೆ 20,000 ರೂ. ಹಾಗೂ ಸಾಮಾನ್ಯ ಅಪರಾಧಕ್ಕೆ 500 ರೂ. ದಂಡ ವಿಧಿಸಲಾಗಿದೆ. ದಂಡದ ಒಟ್ಟು ಮೊತ್ತವು 86,500 ರೂ. ಆಗಿದೆ ಎಂದು ಲಲಿತ್ ಮೋಹನ್ ಬೆಹೆರಾ ಹೇಳಿದ್ದಾರೆ.

    ಈ ಹಿಂದೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಸವಾರನೊಬ್ಬನಿಗೆ 23 ಸಾವಿರ ರೂ. ದಂಡ ವಿಧಿಸಿದ್ದರು. ಇದರ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘಿಸಿದ್ದ ದೆಹಲಿಯ ಆಟೋ ಚಾಲಕನಿಗೆ ಟ್ರಾಫಿಕ್ ಪೊಲೀಸರು ಬರೋಬ್ಬರಿ 32,500 ರೂ. ದಂಡ ವಿಧಿಸಿದ್ದರು.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in