Tag: Financial Hardship

  • ಉದ್ಯೋಗವಿಲ್ಲದೇ ದಿನಗೂಲಿ ಕುರಿಗಾಯಿಯಾದ ಉಪನ್ಯಾಸಕ

    ಉದ್ಯೋಗವಿಲ್ಲದೇ ದಿನಗೂಲಿ ಕುರಿಗಾಯಿಯಾದ ಉಪನ್ಯಾಸಕ

    ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಾಗಿಲು ಮುಚ್ಚಿರುವುದರಿಂದ ಜಿಲ್ಲೆಯ ಅತಿಥಿ ಉಪನ್ಯಾಸಕರೊಬ್ಬರು ದಿನಗೂಲಿ ಕುರಿಗಾಯಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ನಿಭಾಯಿಸಲು ನಿತ್ಯ 200ರೂ ಕೂಲಿಯಂತೆ ಕುರಿ ಮೇಯಿಸಲು ಹೋಗುತ್ತಿದ್ದಾರೆ.

    ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿ ಕುರಿ ಮೇಯಿಸುತ್ತಿದ್ದಾರೆ. ಎಂಎ, ಬಿಎಡ್ ಪದವೀಧರ ವೀರನಗೌಡ ಸರ್ಕಾರಿ ಪದವಿ ಕಾಲೇಜು ಮಸ್ಕಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

    ಇಬ್ಬರು ಮಕ್ಕಳಿರುವ, ಕೂಡು ಕುಟುಂಬದ ವೀರನಗೌಡ ಸಿಇಟಿ ಹಾಗೂ ಕೆಸೆಟ್ ಸಹ ಮಾಡಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿಂದ ವೇತನ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ವೀರನಗೌಡ ಆರ್ಥಿಕ ಸಂಕಷ್ಟ ನಿಭಾಯಿಸಲು ಕಾಡು, ಮೇಡು ಅಲೆದು ಕುರಿ ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಕಡೆ ಗಮನಹರಿಸಬೇಕು ಅಂತ ವೀರನಗೌಡ ಮನವಿ ಮಾಡಿದ್ದಾರೆ.

  • ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಆರ್ಥಿಕ ಸಂಕಷ್ಟ – ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡ ಅಮ್ಮ, ಮಗ

    ಚಂಡೀಗಢ: ಲಾಕ್‍ಡೌನ್ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಅಮ್ಮ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    ಮೃತರನ್ನು ಕೃಷ್ಣದೇವಿ (65) ಮತ್ತು ಆಕೆಯ ಮಗ ಮನೀಶ್ ವರ್ಮಾ (35) ಎಂದು ಗುರುತಿಸಲಾಗಿದೆ. ಇಬ್ಬರೂ ದಾಬಾದ ಸದ್ಗುರ ನಗರದ ತಮ್ಮ ನಿವಾಸದಲ್ಲಿ ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಮೃತ ಮನೀಶ್ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.

    ಮನೀಶ್‍ಗೆ ಮನೆ ಬಾಡಿಗೆ ಕೊಟ್ಟ ಮಾಲೀಕರು ಕಿಟಕಿ ತೆಗೆದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಬಾಗಿಲೂ ತೆರೆದಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡ ಮನೆಯ ಮಾಲೀಕ ಮನೆಯ ಕಿಟಕಿಯನ್ನು ತೆರೆದು ನೋಡಿದ್ದಾರೆ. ಈ ವೇಳೆ ಅಮ್ಮ ಮತ್ತು ಮಗ ಇಬ್ಬರು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡಿದೆ. ಆಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಪವಿತರ್ ಸಿಂಗ್, ಆತ್ಯಹತ್ಯೆ ಮಾಡಿಕೊಂಡ ಜಾಗದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಮೃತ ಅಮ್ಮ-ಮಗ ಕಳೆದ ಎರಡು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದು ಬಂದಿದೆ. ಮನೀಶ್ ಅವರ ಪತಿ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಂತರ ಅವರು ತಮ್ಮ ಪೋಷಕರ ಮನೆಗೆ ಹೋಗಿ ಅಲ್ಲೇ ತೀರಿಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

    ಲಾಕ್‍ಡೌನ್ ವೇಳೆ ಕೆಲಸವನ್ನು ಕಳೆದುಕೊಂಡ ಮನೀಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಜೊತೆಗೆ ಇತ್ತೀಚೆಗೆ ಹೆಂಡತಿ ಕೂಡ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದರಿಂದ ಮನೀಶ್ ಖಿನ್ನತೆಗೆ ಒಳಾಗಿದ್ದ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ದೇಶಾದ್ಯಂತ ಕೊರೊನಾ ಆವರಿಸಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.

    ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡ್ತೇವೆ. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಅವರು, ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.

    ಸಮಾಜದ ಕಟ್ಟ ಕಡೆಯ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತೇವೆ. ಕೆಲ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಶಿಕ್ಷಣ ಗುಣಮಟ್ಟ ವಿಚಾರದಲ್ಲಿ ರಾಜಿ ಇಲ್ಲ. ಒತ್ತಡ ಹೇರಿ, ಬಲವಂತವಾಗಿ ಫೀಸ್ ಕಿತ್ತುಕೊಳ್ಳುವ ಪರಿಪಾಠ ಹಿಂದಿನಿಂದಲೇ ಇಲ್ಲ. ಮುಂದೆಯೂ ಮಾಡದಂತೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಾಸಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಈ ಬಾರಿ ಕೊರೊನಾ ಎಲ್ಲರನ್ನು ಜರ್ಜರಿತ ಮಾಡಿದೆ. ಪೋಷಕರ ಕೈಯಲ್ಲಿ ಕಾಸಿಲ್ಲ, ಹಾಗಂತ ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಾವಶ್ಯಕ ಎಂದು ಸುಕುಮಾರ್ ತಿಳಿಸಿದ್ದಾರೆ.

    ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಇದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.