ನವದೆಹೆಲಿ: ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ ಮಾಡಿದೆ.
ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಕೇಂದ್ರ ಸರ್ಕಾರ ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿ ಅರ್ಥಿಕ ನೆರವು ನೀಡಬೇಕು ಮತ್ತು ರಾಜ್ಯಗಳಿಂದ ಬಂದ ಜಿಎಸ್‍ಟಿ ತೆರಿಗೆಯನ್ನು ಸಂಪೂರ್ಣವಾಗಿ ಅವುಗಳಿಗೇ ವಾಪಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರವು ಸಾಕಷ್ಟು ಆರ್ಥಿಕ ನೆರವು ನೀಡಬೇಕು. ಇದನ್ನು ಜಿಎಸ್‍ಟಿಯ ಸಂಪೂರ್ಣ ಮೊತ್ತವನ್ನು ರಾಜ್ಯಗಳಿಗೆ ಹಿಂದಿರುಗಿಸುವ ಮೂಲಕ ಮತ್ತು ಸಾಲ ತೆಗೆದುಕೊಳ್ಳಲು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡುವ ಮೂಲಕ ಪ್ರಾರಂಭಿಸಬಹುದು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ತಿಳಿಸಿದ್ದಾರೆ.

ಇದೇ ವೇಳೆ ದೇಶವೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಪಕ್ಷ ಮಾತ್ರ ಕೋಮುವಾದಲ್ಲಿ ಮುಳುಗಿ ಹೋಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆಸಿ ವೇಣುಗೋಪಾಲ್, ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಕೋಮು ವಿಭಜನೆಯನ್ನು ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ ಈ ವೈರಸ್ ಜಾತಿ ಧರ್ಮ ಮತ್ತು ಲಿಂಗದ ಅಧಾರದ ಮೇಲೆ ತಾರತಮ್ಮ ಮಾಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕೊರೊನಾ ದೇಶದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿ ನಾವು ಇನ್ನು ದೃಢವಾದ ಮತ್ತು ನಿಖರವಾದ ಟೆಸ್ಟಿಂಗ್ ಮಾಡುವಲ್ಲಿ ವಿಫಲವಾಗಿರುವುದು ದುರಂತ. ಈ ಸೋಂಕನ್ನು ತಡೆಯಲು ಟೆಸ್ಟ್ ಮಾಡುವುದು, ಸೋಂಕಿತರನ್ನು ಪತ್ತೆಹಚ್ಚುವುದು ಅವರನ್ನು ಕ್ವಾರಂಟೈನ್ ಮಾಡುವುದು ಇದರ ಜೊತಗೆ ಸೋಂಕಿತರಿಗೆ ಸೂಕ್ತವಾದ ಚಿಕಿತ್ಸೆ ನೀಡುವುದು ನಿರ್ಣಾಯಕವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಪ್ರಿಲ್ 16ರಂದು ಇಬ್ಬರು ಸಾಧುಗಳು ಮತ್ತು ಅವರ ಚಾಲಕನ ಮೇಲೆ 200 ಜನರು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಸಾಯಿಸಿ ಹಾಕಿದ್ದರು. ಇದರ ಬಗ್ಗೆ ಬೇಗ ತನಿಖೆ ನಡೆಸುವಂತೆ ಬಿಜೆಪಿ ಮಹಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇದನ್ನು ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.

ಈ ವಿಚಾರವಾಗಿ ನೆನ್ನೆ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್, ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದರು.