Tag: finance

  • ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್

    ಸತ್ತವನ ಕಾರಿನಲ್ಲೇ ಕೊಲೆಗಾರ ಎಸ್ಕೇಪ್- ಆರೋಪಿ ಅನೂಪ್ ಶೆಟ್ಟಿ ಗೋವಾದಲ್ಲಿ ಅಂದರ್

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಡ್ರೀಮ್ ಫೈನಾನ್ಸ್ ಮಾಲೀಕ ಅಜೆಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಲುದಾರ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕುಂದಾಪುರ ಪೊಲೀಸರು 24 ಗಂಟೆಯೊಳಗೆ ಬೇಧಿಸಿದ್ದಾರೆ. ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಸೆರೆಹಿಡಿದು ಉಡುಪಿಗೆ ಕರೆತರುತ್ತಿದ್ದಾರೆ. ಪಾಲುದಾರನೇ ಕೊಲೆಗಾರ ಎಂಬ ಸಂಶಯದಿಂದ ಅನುಪ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಶುಕ್ರವಾರ ರಾತ್ರಿ, ಕಾಳಾವರದ ಡ್ರೀಮ್ ಫೈನಾನ್ಸ್ ನ ಮಾಲಕ ಅಜೆಂದ್ರ ಶೆಟ್ಟಿಯನ್ನು, ಡ್ರಾಗರ್ ನಿಂದ ಇರಿದು ಕೊಲೆಗೈಯಲಾಗಿತ್ತು. ಕತ್ತುಸೀಳಿ ಕೊಂದು ಪರಾರಿಯಾದ ಕೊಲೆಗಾರ ಬೇರೆ ಯಾರು ಅಲ್ಲ, ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾರ್ಟ್ನರ್ ಅನೂಪ್ ಶೆಟ್ಟಿ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಮೃತನ ಮನೆಯವರು ಈ ಬಗ್ಗೆ ನೇರ ಆರೋಪವನ್ನು ಕೂಡ ಮಾಡಿದ್ದರು. ಕೊಲೆಗೈದ ಅನೂಪ್ ಶೆಟ್ಟಿ ಅಜೇಂದ್ರ ಶೆಟ್ಟಿಯ ಕಾರನ್ನು ಬಳಸಿ ಪರಾರಿಯಾಗಲು ಯತ್ನಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾಕ್ಕೆ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದ. ಕುಂದಾಪುರ ಪೊಲೀಸರು ಕೊಲೆ ನಡೆದು 24 ಗಂಟೆಯೊಳಗೆ ಅನೂಪ್ ಶೆಟ್ಟಿ ಯನ್ನು ವಶಕ್ಕೆ ಪಡೆದಿದ್ದಾರೆ.

    ಸತ್ತವನ ಕಾರಿನಲ್ಲೇ ಆರೋಪಿ ಎಸ್ಕೇಪ್..!

    ಡ್ರೀಮ್ ಫೈನಾನ್ಸ್ ವ್ಯವಹಾರದಲ್ಲಿ ಪಾಲುದಾರ ಅನೂಪ್ ಶೆಟ್ಟಿ ಈ ಕೃತ್ಯ ಎಸಗೋದಕ್ಕೆ ಐಶಾರಾಮಿ ಕಾರು ಕಾರಣ ಎನ್ನಲಾಗಿದೆ. ಸಮಯ ಕಳೆಯುತ್ತಿದ್ದಂತೆ ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಮತ ಬಂತು. ಬಡ್ಡಿ ವ್ಯವಹಾರದ ಲಾಭಾಂಶದ ಹಣವನ್ನು ಅನೂಪ್ ಶೆಟ್ಟಿಗೆ ಅಜೇಂದ್ರ ಶೆಟ್ಟಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ತಗಾದೆ ಉಂಟಾಗಿತ್ತು. ಇಬ್ಬರ ನಡುವಿನ ಪಟ್ರ್ನರ್‍ಶಿಪ್ ಡೀಲ್ ಮೂರು ತಿಂಗಳ ಹಿಂದೆ ರದ್ದಾಗಿತ್ತು. ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಅಜೇಂದ್ರ ಶೆಟ್ಟಿ ಮೂರು ತಿಂಗಳ ಅವಧಿಯಲ್ಲಿ ಎರಡು ಐಶಾರಾಮಿ ಕಾರು ಖರೀದಿಸಿದ್ದರು. ಹೊಸದಾಗಿ ಖರೀದಿಸಿದ ಈ ಕಾರು ಅನೂಪ್ ಶೆಟ್ಟಿಯ ಕಣ್ಣು ಕುಕ್ಕುತ್ತಿತ್ತು. ಕೊಲೆಯಾದ ದಿನ ಇಪ್ಪತ್ತು ಸಾವಿರ ಕೇಳಿದ್ದ ಅನೂಪ್, ಹಣ ಕೊಡದಿದ್ದರೆ ಕೊಲ್ಲೋದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೇ ಬಂದಿದ್ದ. ಅಜೇಂದ್ರ ಶೆಟ್ಟಿ ಹಣ ಕೊಡಲು ನಿರಾಕರಿಸಿದಾಗ, ಡ್ರಾಗರ್ ನಿಂದ ಕತ್ತುಸೀಳಿ ಕೊಂದು ಅದೇ ಐಶಾರಾಮಿ ಕಾರಿನಲ್ಲಿ ಪರಾರಿಯಾಗಿದ್ದ.

    ಅನೂಪ್ ಶೆಟ್ಟಿ ಕುಡಿದ ಅಮಲಿನಲ್ಲಿ, ಗಾಂಜಾ ಸೇವಿಸಿ ಗೆಳೆಯನನ್ನು ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಘಟನೆ ಹಿಂದೆ ಇತರೆ ಆರೋಪಿಗಳ ಕೈವಾಡ ಇದೆಯೇ ಎಂಬ ದೃಷ್ಟಿಯಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬ್ಯುಸಿನೆಸ್ ಪಾರ್ಟ್ನರ್ ಅನೂಪ್ ಶೆಟ್ಟಿ ಮೇಲೆ ಕೃತ್ಯದ ಆರೋಪವಿದೆ.

    ಕಾಳಾವಾರದ ಡ್ರೀಮ್ ಫೈನಾನ್ಸ್ ಅನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಅನೂಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ 2017ರಿಂದ ನಡೆಸುತ್ತಿದ್ದರು. ಇಬ್ಬರ ನಡುವೆ ಕಳೆದ ನಾಲ್ಕು ವರ್ಷಗಳಿಂದ ಸಂಬಂಧ ಅನ್ಯೋನ್ಯ ಇತ್ತು. ಹಣಕಾಸಿನ ಮತ್ತು ಬಡ್ಡಿ ವಿಚಾರದಲ್ಲಿ ಕೆಲ ಅಭಿಪ್ರಾಯ ಬೇಧಗಳು ಇದ್ದರೂ ಚೆನ್ನಾಗಿ ನಡೆಸಿಕೊಂಡು ಬಂದಿದ್ದರು. ಇತ್ತೀಚಿನ ದಿನದಲ್ಲಿ ಇಬ್ಬರ ನಡುವೆ ಕೊಂಚ ವೈಷಮ್ಯ ಏರ್ಪಟ್ಟಿತ್ತು ಎಂಬ ಮಾಹಿತಿಯನ್ನು ಪೊಲೀಸರು ಹೇಳಿದ್ದಾರೆ.

    ಅಜೇಂದ್ರ ಕಳೆದ ರಾತ್ರಿ ಮನೆಗೆ ಬರದಿದ್ದಾಗ ನಾನು ಮತ್ತು ಗೆಳೆಯರಾದ ರಕ್ಷಿತ್, ಜಯಕರ, ಪ್ರಥ್ವೀಶ್ ಹುಡುಕಾಡುತ್ತಾ ಫೈನಾನ್ಸ್ ಗೆ ಬಂದೆವು. ಈ ವೇಳೆ ಫೈನಾನ್ಸ್ ಗೆ ಶಟರ್ ಹಾಕಲಾಗಿತ್ತು, ಆದರೆ ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲಿ ಕುಳಿತ ಭಂಗಿಯಲ್ಲಿ ಇದ್ದ. ಕೊಲೆಯಾದ ಸ್ಥಿತಿಯಲ್ಲಿ ನಾವು ನೋಡಿದೆವು. ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರನ ಕೆನ್ನೆ, ಕತ್ತು, ಕಾಲಿನ ಭಾಗದಲ್ಲಿ ಇರಿದಿರುವ ಗಾಯಗಳಾಗಿದೆ. ಹರಿತವಾದ ಆಯುಧದಿಂದ ಕತ್ತು ಸೀಳಲಾಗಿದೆ ಎಂದೆನಿಸುತ್ತದೆ.

    ಶುಕ್ರವಾರ ರಾತ್ರಿ ಕಚೇರಿಯಲ್ಲಿ ಇಬ್ಬರು ಒಟ್ಟಿಗೆ ಇದ್ದರು. ನೋಡಿದ ಸ್ಥಳೀಯರು ಇದನ್ನು ಹೇಳುತ್ತಾರೆ ಎಂದರು. ಹರಿತವಾದ ಆಯುಧ ಬಳಸಿರುವುದು ಪುಷ್ಟಿ ನೀಡುತ್ತಿದೆ. ಹಣಕಾಸಿನ ವಿಚಾರದ ಬಗ್ಗೆ ಹೇಳಿದ್ದ, ಆದರೆ ಮನಸ್ತಾಪದ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಆತನ ಪಾರ್ಟ್ನರ್ ನನ್ನ ತಮ್ಮನನ್ನು ಕೊಲೆ ಮಾಡಿದ್ದಾನೆ. ಕೊಲೆಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಜೇಂದ್ರ ಸಹೋದರ ಮಾಧ್ಯಮದ ಮುಂದೆ ಕಣ್ಣೀರಿಟ್ಟರು. ಇದನ್ನೂ ಓದಿ: ಕುಂದಾಪುರದಲ್ಲಿ ಡ್ರೀಮ್ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ

    ಅನೂಪ್ ಶೆಟ್ಟಿ ಬುಲೆಟ್ ಬೈಕ್ ಫೈನಾನ್ಸ್ ಎದುರುಗಡೆ ಇದ್ದು, ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಅನೂಪ್ ಎಸ್ಕೇಪ್ ಆಗಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯಾಗುತ್ತಿದೆ. ಅನೂಪ್ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಗೆಳೆಯರು, ಪೊಲೀಸರು ಹೇಳಿದ್ದಾರೆ.

    ಉಡುಪಿ ಎಸ್‍ಪಿ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಫೋರೆನ್ಸಿಕ್ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗಾರನ ಪತ್ತೆ, ಬಂಧನ ಇನ್ನೂ ಆಗಿಲ್ಲ.

  • ಕುಂದಾಪುರದಲ್ಲಿ ಡ್ರೀಮ್ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ

    ಕುಂದಾಪುರದಲ್ಲಿ ಡ್ರೀಮ್ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ

    ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಸಲ್ವಾಡಿ ಎಂಬಲ್ಲಿ ಫಿನಾನ್ಶಿಯರ್ ಕೊಲೆಯಾಗಿದೆ. ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಅಜೇಂದ್ರ ಶೆಟ್ಟಿ (33) ಕೊಲೆಗೀಡಾದ ಫೈನಾನ್ಸ್ ಮಾಲೀಕ.

    ಕುಂದಾಪುರದ ತಾಲೂಕಿನ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಳ್ವಾಡಿಯಲ್ಲಿ ತಡರಾತ್ರಿ ಡ್ರೀಮ್ ಫೈನಾನ್ಸ್ ನ ಫೈನಾನ್ಶಿಯರ್ ಕೊಲೆಯಾಗಿದೆ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿರುವ ಅಜೇಂದ್ರ ಶೆಟ್ಟಿ ತಡರಾತ್ರಿಯವರೆಗೆ ಮನೆಗೆ ವಾಪಾಸ್ಸಾಗಿರಲಿಲ್ಲ. ಮನೆಯವರು ಹುಡುಕಾಟ ಪ್ರಾರಂಭಿಸಿದರು. ಎಲ್ಲೂ ಕೂಡ ಕಾಣಿಸದಿದ್ದಾಗ ಆತನ ಸ್ನೇಹಿತರು ಫೈನಾನ್ಸ್ ಗೆ ಹೋಗಿದ್ದಾರೆ.

    ಫೈನಾನ್ಸ್ ಒಳಗೆ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ ಎಂಬ ಮಾಹಿತಿಯಿದೆ. ಕಳೆದ ಏಳು ವರ್ಷಗಳಿಂದ ಸಳ್ವಾಡಿಯಲ್ಲಿ ಅಜೇಂದ್ರ ಫೈನಾನ್ಸ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ವ್ಯವಹಾರ ವಿಚಾರದಲ್ಲಿ ನಡೆದಿರುವ ಕೊಲೆಯೆಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಕೊಲೆಯ ಹಿಂದಿನ ಕಾರಣ ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬರಬೇಕಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸರಣಿ ಕಳ್ಳತನ – ಮೂರು ಮನೆಗೆ ಕನ್ನ ಹಾಕಿದ ಖದೀಮರು

    ಉಡುಪಿ ಜಿಲ್ಲೆಯಾದ್ಯಂತ ಇತ್ತೀಚಿಗೆ ಒಂದಾದ ಮೇಲೆ ಒಂದು ಕೊಲೆ ಪ್ರಕರಣಗಳು ನಡೆಯುತ್ತಿದೆ. ಅಪರಾಧ ಕೃತ್ಯ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ. ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಉಡುಪಿಯ ವಿಶಾಲಾ ಮರ್ಡರ್- ಯುಪಿಯಲ್ಲಿ ತಲೆಮರೆಸಿಕೊಂಡಿರುವ ಕಾಂಟ್ರ್ಯಾಕ್ಟ್ ಕಿಲ್ಲರ್

  • ಫೈನಾನ್ಸ್ ಕಂಪನಿ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮನ – ಸಿಎಂ ಮಾಡಿ ಎಂದ ಜಮೀರ್

    ಫೈನಾನ್ಸ್ ಕಂಪನಿ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮನ – ಸಿಎಂ ಮಾಡಿ ಎಂದ ಜಮೀರ್

    ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಚಿಕ್ಕದೊಂದು ಖಾಸಗಿ ಫೈನಾನ್ಸ್ ಕಂಪನಿ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಸಿಎಂ ಆಗಬೇಕು ಎಂಬ ಕೂಗು ಇಂದು ಮತ್ತೊಮ್ಮೆ ಕೇಳಿ ಬಂತು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರೇ ಮತ್ತೊಮ್ಮೆ ಇಂಥದ್ದೊಂದು ಕೂಗು ಕೇಳಿ ಬರಲು ಕಾರಣರಾದರು.

    ಸುರಾನಾ ಫೈನಾನ್ಸ್ ಹೆಸರಿನ ಕಂಪನಿಯ ಉದ್ಘಾಟನೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಆಗಮಿಸಿದ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದರೆ ನೀವು ಅವರಿಗೆ ಮತ ಹಾಕಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ಸಮಾರಂಭವನ್ನು ಸಿದ್ದರಾಮಯ್ಯ ದೀಪ ಬೆಳಗಿ ಉದ್ಘಾಟನೆ ಮಾಡಿದ ಸಂದರ್ಭ ವ್ಯಕ್ತಿಯೊಬ್ಬರು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಂದು ಕೂಗಿದಾಗ ಅಲ್ಲಿದ್ದವರೆಲ್ಲ ಜೈಕಾರ ಹಾಕಿದರು. ಆಗ ಮಾತನಾಡಿದ ಜಮೀರ್ ಕೇವಲ ಜೈಕಾರ ಕೂಗುವುದರಿಂದ ಪ್ರಯೋಜನವಿಲ್ಲ ನೀವು ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದರೆ ನೀವೆಲ್ಲ ಮತ ಹಾಕಬೇಕು ಎಂದರು.

    ಮತ್ತಷ್ಟು ಅನುಮಾನ:
    ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತಿಗೆ ಜಮೀರ್ ಈ ಮೇಲೆ ಆಡಿದ ಈ ಮಾತು ಇನ್ನಷ್ಟು ಪುಷ್ಠಿ ನೀಡಿತು. ಅಲ್ಲದೆ ಸಣ್ಣ ಫೈನಾನ್ಸ್ ಕಂಪನಿಯೊಂದರ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿತು. ಇತ್ತೀಚಿನ ದಿನಗಳಲ್ಲಿ ಚಾಮರಾಜಪೇಟೆಯಲ್ಲಿ ಹಮ್ಮಿಕೊಳ್ಳುವ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರಿಂದ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬಾದಾಮಿ ಬಿಟ್ಟು ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಇತ್ತೀಚೆಗೆ ಸಮಾರಂಭವೊಂದರಲ್ಲಿ ನಮ್ಮ ಮಾವ ಇಲ್ಲಿ ಇದ್ದರು. ಇದರಿಂದ ಚಾಮರಾಜಪೇಟೆ ಕ್ಷೇತ್ರದ ಜೊತೆಗೆ ನನಗೆ ತುಂಬಾ ಬಾಂಧವ್ಯ ಇದೆ ಎಂದು ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಅಲ್ಲಿ ಮುಂದಿನ ಸಿಎಂ ಎಂಬ ದನಿ ಕೇಳಿ ಬರುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಜಾತಿಗಣತಿ ಕಾಂಗ್ರೆಸ್ ಪಕ್ಷ ಯಾಕೆ ಬಿಡುಗಡೆ ಮಾಡಿಲ್ಲ: ಅಶ್ವಥ್ ನಾರಾಯಣ

    ಕ್ರಮದ ಭಯವಿಲ್ಲ:
    ಮುಂದಿನ ಸಿಎಂ ವಿಚಾರವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಶಿಸ್ತು ಸಮಿತಿ ಮೇಲಿಂದಮೇಲೆ ಹೇಳುತ್ತಿದ್ದರು ಸಿದ್ದರಾಮಯ್ಯ ವಿಚಾರದಲ್ಲಿ ಜಮೀರ್ ನಿಲುವು ಬದಲಾಗುತ್ತಿಲ್ಲ. ಸಿದ್ದರಾಮಯ್ಯರಂಥ ನಾಯಕರ ಬೆಂಬಲ ಇರುವ ಹಿನ್ನೆಲೆ ತಮ್ಮ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸದಿಂದ ಜಮೀರ್ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಸಮಾರಂಭದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಜುಲೈ ತಿಂಗಳಲ್ಲೇ ಈ ಅಧಿವೇಶನ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರ ಅಧಿವೇಶನ ನಡೆಸಿಲ್ಲ, ಹೀಗಾಗಿ ಅಧಿವೇಶನ ನಡೆಸಿ ಎಂದು ಪತ್ರ ಬರೆದಿರುವೆ. ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು, ಆದರೆ ಈ ಸರ್ಕಾರ ನಡೆಸುತ್ತಿಲ್ಲ. ಭ್ರಷ್ಟಾಚಾರ, ಕೊರೊನಾ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.

    ಡಿಕೆಶಿ ನಿವಾಸಕ್ಕೆ ತೆರಳುತ್ತೇನೆ
    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಮನೆಯಲ್ಲಿ ಸಭೆ ಕರೆದಿದ್ದಾರೆ. ಬೆಂಗಳೂರು ಶಾಸಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ನನ್ನನ್ನು ಆಹ್ವಾನಿಸಿದ್ದು ನಾನು ತೆರಳುತ್ತಿದ್ದೇನೆ. ರಾಕೇಶ್ ಪಾಪಣ್ಣ ಸಿದ್ದರಾಮಯ್ಯ ಆಪ್ತ ಎಂಬ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಯಾರು ಏನು ಬೇಕಾದರು ಹೇಳಿ ಕೊಳ್ಳಬಹುದು.ನೀನು ಹೇಳಿಕೊಳ್ಳಬಹುದು ಸಿದ್ದರಾಮಯ್ಯ ನನಗೆ ಆಪ್ತ ಅಂತ. ಆದರೆ ಅದೆಲ್ಲ ನಡೆಯಲ್ಲ ಎಂದು ಹೇಳಿದರು.

  • ಮಾರ್ಚ್‌ ಮಧ್ಯದಲ್ಲಿ ತೈಲ ಬೆಲೆ ಇಳಿಕೆ ಸಾಧ್ಯತೆ

    ಮಾರ್ಚ್‌ ಮಧ್ಯದಲ್ಲಿ ತೈಲ ಬೆಲೆ ಇಳಿಕೆ ಸಾಧ್ಯತೆ

    ನವದೆಹಲಿ: ತೈಲ ಬೆಲೆ ದಿನೇ ದಿನೇ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವಾಲಯವು ಚಿಂತನೆ ನಡೆಸಿದ್ದು, ಮಾರ್ಚ್‌ ಮಧ್ಯದಲ್ಲಿ ಬೆಲೆ ಇಳಿಕೆಯ ಸಿಹಿ ಸುದ್ದಿ ಸಿಗಬಹುದು ಎಂದು ವರದಿಯಾಗಿದೆ.

    ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರತೊಡಗಿದೆ. ಹೀಗಾಗಿ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮೂವರು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ದೇಶವಾಗಿರುವ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ಶೇ.60 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ತೈಲ ಬೆಲೆ ವಿಶ್ವಾದ್ಯಂತ ಇಳಿಕೆಯಾಗಿತ್ತು. ಆದರೆ ಭಾರತದಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ತೈಲದ ಮೇಲಿನ ತೆರಿಗೆ ಕಡಿತ – ಯಾವ ರಾಜ್ಯಗಳಲ್ಲಿ ಎಷ್ಟು ರೂ. ಇಳಿಕೆಯಾಗಿದೆ?

    ಈಗ ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತ ಮಾಡಿರುವ ಕಾರಣ ಬೇಡಿಕೆ ಹೆಚ್ಚಾಗಿದ್ದರೂ ಪೊರೈಕೆ ಕಡಿಮೆಯಾಗಿದೆ. ಈ ಕಾರಣದಿಂದ ತೈಲಗಳ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ದೇಶದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಈಗ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು, ತೈಲ ಕಂಪನಿಗಳು ಮತ್ತು ತೈಲ ಸಚಿವಾಲಯದೊಂದಿಗೆ ಸಮಾಲೋಚನೆ ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

    ತೈಲ ಬೆಲೆಗಳನ್ನು ಸ್ಥಿರವಾಗಿ ಇರಿಸಬಹುದಾದ ಮಾರ್ಗಗಳನ್ನು ನಾವು ಚರ್ಚಿಸುತ್ತಿದ್ದೇವೆ. ಮಾರ್ಚ್ ಮಧ್ಯದ ವೇಳೆಗೆ ಈ ಸಮಸ್ಯೆಯನ್ನು ಪರಿಹಾರವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ತೆರಿಗೆಗಳನ್ನು ಕಡಿತಗೊಳಿಸುವ ಮೊದಲು ತೈಲ ಬೆಲೆಗಳು ಸ್ಥಿರವಾಗಬೇಕು ಎಂದು ಸರ್ಕಾರ ಬಯಸಿದೆ. ಯಾಕೆಂದರೆ ಒಂದು ಬಾರಿ ಕಡಿತ ಮಾಡಿದ ಬಳಿಕ ಮತ್ತೆ ತೈಲ ಬೆಲೆ ಹೆಚ್ಚಾದರೆ ಮತ್ತೆ ತೆರಿಗೆ ಏರಿಕೆ ಮಾಡಲು ಸಾಧ್ಯವಿಲ್ಲ.

    ತೈಲ ಉತ್ಪಾದನೆ ಮಾಡುತ್ತಿರುವ ದೇಶಗಳ ಸಂಘಟನೆಯಾದ ಓಪೆಕ್‌ ಸಭೆ ಮಾರ್ಚ್‌ 4 ರಂದು ನಡೆಯಲಿದೆ. ಈ ವೇಳೆ ತೈಲ ಉತ್ಪಾದನೆ ಕುರಿತಂತೆ ಮಹತ್ವದ ನಿರ್ಧಾರ ಪ್ರಕಟವಾಗಲಿದೆ. ಒಪೆಕ್‌ ರಾಷ್ಟ್ರಗಳು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಸರ್ಕಾರ ತೆರಿಗೆ ಕಡಿತ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ.

    ಸರ್ಕಾರ ಮತ್ತು ರಾಜ್ಯಗಳು ಒಟ್ಟಾಗಿ ಸರ್ಕಾರದ ಅಂಕಿಅಂಶಗಳ ಪ್ರಕಾರ 2020 ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ವಲಯದಿಂದ ಸುಮಾರು 5.56 ಟ್ರಿಲಿಯನ್ ರೂ. ಆದಾಯವನ್ನು ಸಂಗ್ರಹಿಸಿವೆ.

    ಈ ಹಣಕಾಸು ವರ್ಷದ ಒಂಬತ್ತು ತಿಂಗಳು (ಏಪ್ರಿಲ್-ಡಿಸೆಂಬರ್ 2020) ಇಂಧನ ಬೇಡಿಕೆಯಲ್ಲಿ ಗಮನಾರ್ಹ ಕುಸಿತದ ಹೊರತಾಗಿಯೂ, ಸುಮಾರು 4.21 ಟ್ರಿಲಿಯನ್ ರೂ. ಆದಾಯ ಪೆಟ್ರೋಲಿಯಂ ವಲಯದಿಂದ ಸರ್ಕಾರಕ್ಕೆ ಬಂದಿದೆ.

    ಕೃಷಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈಗ ತೈಲ ಬೆಲೆ ಏರಿಕೆ ವಿಚಾರದಲ್ಲೂ ಪ್ರತಿಭಟನೆ ಜೋರಾಗಿದೆ. ಈ ನಡುವೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ತೈಲದ ಮೇಲಿನ ತೆರಿಗೆ ಇಳಿಕೆ ಮಾಡದೇ ಇದ್ದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಿನ್ನಡೆಯಾಗುವ ಸಾಧ್ಯತೆಯಿದೆ.

    ಬೆಲೆ ಏರಿಕೆ ಯಾಕೆ?
    ಕೋವಿಡ್ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ವಿವಿಧ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.

     

    ರಾಜ್ಯ ಕೇಂದ್ರದ ಪಾಲು ಎಷ್ಟು?
    ತೈಲದಿಂದಲೇ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ. ಈ ಕಾರಣಕ್ಕೆ ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಪೆಟ್ರೋಲ್‌-ಡೀಸೆಲ್‌ನ ತೆರಿಗೆ ಪಾಲಿನಲ್ಲಿ ಅಧಿಕ ಪಾಲು ರಾಜ್ಯಗಳಿಗೆ ಹೋಗುತ್ತದೆ.

    ಉದಾಹರಣೆಗೆ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 90 ರೂ. ಇದ್ದರೆ ಇದರಲ್ಲಿ ಕೇಂದ್ರ ಸರಕಾರಕ್ಕೆ 32 ರೂ. ಅಬಕಾರಿ ಸುಂಕದ ರೂಪದಲ್ಲಿ ಸಿಗುತ್ತದೆ. ಸಿಕ್ಕಿದ ಹಣದಲ್ಲಿ ಶೇ.70ರಷ್ಟು ರಾಜ್ಯಗಳಿಗೆ ಮರು ಹಂಚಿಕೆಯಾಗುತ್ತದೆ. ಇದರಿಂದಾಗಿ ಕೇಂದ್ರ ಕೇಂದ್ರ ಸರ್ಕಾರಕ್ಕೆ 10 ರಿಂದ 13 ರೂ. ಮಾತ್ರ ಸಿಗುತ್ತದೆ. ರಾಜ್ಯಗಳಿಗೆ ವ್ಯಾಟ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕದ ಪಾಲು ಸೇರಿ ಒಟ್ಟು 40-42 ರೂ. ತೆರಿಗೆ ಆದಾಯ ಸಿಗುತ್ತದೆ.

  • ತಂದೆಯ ರುಂಡ ಕಡಿದು ಶವವನ್ನ ನಿರ್ಜನ ಪ್ರದೇಶದಲ್ಲಿ ಎಸೆದ ಮಗ

    ತಂದೆಯ ರುಂಡ ಕಡಿದು ಶವವನ್ನ ನಿರ್ಜನ ಪ್ರದೇಶದಲ್ಲಿ ಎಸೆದ ಮಗ

    – ಹಣಕ್ಕಾಗಿ ಅಪ್ಪನ ಕೊಲೆ

    ಪಾಟ್ನಾ: ಕೈಮೂರ್ ಡುಮರ್ಕೋನ್ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನ ಪೊಲೀಸರು ಭೇದಿಸಿದ್ದು, ತಂದೆಯನ್ನ ಕೊಂದ ಮಗನನ್ನ ಬಂಧಿಸಿದ್ದಾರೆ. ಅಕ್ಟೋಬರ್ 19ರಂದು ಈ ಕೊಲೆ ನಡೆದಿತ್ತು.

    ಅಕ್ಟೋಬರ್ 19ರಂದು ರುಂಡ- ಮುಂಡ ಬೇರ್ಪಡೆಯಾದ ಶವ ಪತ್ತೆಯಾಗಿತ್ತು. ಚೈನಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದರು. ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದರು. ಮೊದಲಿಗೆ ಮೃತ ಯಾರೊಂದಿಗಾದ್ರೂ ಜಗಳ ಮಾಡಿಕೊಂಡಿರುವ ಕುರಿತು ಮಾಹಿತಿ ಕಲೆ ಹಾಕಲಾರಂಭಿಸಿದ್ದರು. ಮೃತ ಅಪರಾಧ ಹಿನ್ನೆಲೆಯುಳ್ಳವನಾಗಿದ್ದರಿಂದ ಗ್ರಾಮದಲ್ಲಿ ಬಹುತೇಕರೊಂದಿಗೆ ಶತೃತ್ವ ಹೊಂದಿದ್ದನು.

    ಪೊಲೀಸರು ಅನುಮಾನದ ಮೇರೆಗೆ ಮೃತನ ಪುತ್ರನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಪುತ್ರ ಮೊದಲಿಗೆ ಸುಳ್ಳು ಹೇಳಿ ಬಚಾವ್ ಆಗಲು ಪ್ರಯತ್ನಿಸಿದ್ದಾನೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

    ತಂದೆ ಮತ್ತು ಮಗನ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರಕ್ಕೆ ಅಕ್ಟೋಬರ್ 19ರಂದು ಜಗಳ ನಡೆದಿದ್ದು, ಕೋಪದಲ್ಲಿ ಕೊಡಲಿಯಿಂದ ತಂದೆಯ ರುಂಡವನ್ನ ಕಡಿದಿದ್ದಾನೆ. ನಂತರ ಶವವನ್ನ ನಿರ್ಜನ ಪ್ರದೇಶದಲ್ಲಿ ಎಸೆದಿದ್ದನು ಎಂದು ಎಸ್.ಪಿ. ದಿಲನ್‍ವಾಜ್ ಅಹ್ಮದ್ ಹೇಳಿದ್ದಾರೆ.

  • ಸಣ್ಣ ವ್ಯಾಪಾರಿಗಳಿಗೆ 50 ಸಾವಿರ ಸಾಲ – ಶೇ.2ರಷ್ಟು ಬಡ್ಡಿ ಕೇಂದ್ರದಿಂದ ಪಾವತಿ

    ಸಣ್ಣ ವ್ಯಾಪಾರಿಗಳಿಗೆ 50 ಸಾವಿರ ಸಾಲ – ಶೇ.2ರಷ್ಟು ಬಡ್ಡಿ ಕೇಂದ್ರದಿಂದ ಪಾವತಿ

    ನವದೆಹಲಿ: ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ರಿಲೀಫ್ ನೀಡಿದಂತೆ ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ ಚಾಚಿದೆ.

    ಮುದ್ರಾ ಶಿಶು ಯೋಜನೆಯ ಅಡಿಯಲ್ಲಿ ಗರಿಷ್ಟ 50 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದವರಿಗೆ 12 ಅವಧಿಗೆ ಶೇ.2 ರಷ್ಟು ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

     

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಸಾಲಕ್ಕೆ ಅನುಮತಿ ನೀಡಿದೆ. ಪ್ರಧಾನಿ ಮೋದಿ ಪ್ರಕಟಿಸಿದ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜಿನಲ್ಲಿ ಈ ಯೋಜನೆಗೆ ಒಟ್ಟು 1,500 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

    ಏನಿದು ಮುದ್ರಾ ಸಾಲ?
    ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡಲು ಮುದ್ರಾ ಬ್ಯಾಂಕ್ ಸ್ಥಾಪನೆಯಾಗಿದ್ದು, ಈ ಯೋಜನೆಯ ಅಡಿ ಶಿಶು ಸಾಲ(50 ಸಾವಿರ ರೂ.), ಕಿಶೋರ್ ಸಾಲ(50 ಸಾವಿರ ರೂ. ನಿಂದ 5 ಲಕ್ಷ ರೂ.), ತರುಣ್ ಸಾಲ(5 ಲಕ್ಷ ರೂ. ನಿಂದ 10 ಲಕ್ಷ ರೂ.) ನೀಡಲಾಗುತ್ತದೆ.

    ಮುದ್ರಾ ವ್ಯಾಪ್ತಿಯಲ್ಲಿ ಯಾರೆಲ್ಲ ಬರುತ್ತಾರೆ?
    3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಆಟೋ ರಿಕ್ಷಾ ಓಡಿಸುವವರು, ಜೆರಾಕ್ಸ್ ಅಂಗಡಿ, ಮೆಡಿಕಲ್ ಸ್ಟೋರ್, ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ ಸೇರಿದಂತೆ ಸಣ್ಣ ಪ್ರಮಾಣದ ಉದ್ಯೋಗ ನಡೆಸುವವರು ಸೇರುತ್ತಾರೆ.

  • ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ನವದೆಹಲಿ: ಏಪ್ರಿಲ್ 14ರ ಬಳಿಕ ಕುಸಿದಿರುವ ಅರ್ಥವ್ಯವಸ್ಥೆಯನ್ನು ಹೇಗೆ ಪುನರ್ ಆರಂಭಿಸಬೇಕು ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

    ಕೊರೊನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ, ದೇಶವನ್ನು 21 ದಿನ ಲಾಕ್‍ಡೌನ್ ಮಾಡಿದೆ. ಲಾಕ್‍ಡೌನ್ ನಿಂದಾಗಿ ಇಡೀ ದೇಶದ ಅರ್ಥವ್ಯವಸ್ಥೆಯೇ ಸ್ತಬ್ಧಗೊಂಡಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿವೆ. ಲಾಕ್‍ಡೌನ್ ಬಳಿಕ ಅರ್ಥವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳಬೇಕಿದೆ. ಹಾಗಾಗಿ ಅರ್ಥವ್ಯವಸ್ಥೆಯನ್ನು ರೀಸ್ಟಾರ್ಟ್ ಮಾಡಲು ಸರ್ಕಾರ ಸಹ ಕೆಲವೊಂದು ಯೋಜನೆಗಳನ್ನು ರೂಪಿಸಬೇಕಿದೆ ಎಂಬುವುದು ರಘುರಾಮ್ ರಾಜನ್ ಅಭಿಪ್ರಾಯ.

    ಸೂಕ್ಷ್ಮವಾಗಿದೆ ದೇಶದ ಅರ್ಥವ್ಯವಸ್ಥೆ: 2008-09ನೇ ಸಾಲಿನ ಆರ್ಥಿಕ ಹಿಂಜರಿತಗಿಂತಲೂ ಇಂದಿನ ಸ್ಥಿತಿ ಅಪಾಯಕಾರಿಯಾಗಿದೆ. 2008-09ರಲ್ಲಿ ಅರ್ಥಿಕ ಹಿಂಜರಿತದ ನಡುವೆ ವಾಣಿಜ್ಯ ಚಟುವಟಿಕೆಗಳು ನಡೆದಿದ್ದವು. ಆದರೆ ಇಂದು ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. 2008-09ರಲ್ಲಿ ಕಂಪನಿಗಳು ತಮ್ಮ ವ್ಯವಹಾರ ನಡೆಸುತ್ತಿರೋದರಿಂದ ದೇಶವೂ ನಡೆಯುತ್ತಿತ್ತು. ಹಾಗಾಗಿ ಹಣಕಾಸಿನ ವ್ಯವಸ್ಥೆ ಆರೋಗ್ಯಕರವಾಗಿತ್ತು. ಆದ್ರೆ ಇಂದಿನ ಹಣಕಾಸಿನ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿದ್ದು, ಜಾಗೂರಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇರಿಸಬೇಕಿದೆ.

    ಬಂದ್ ಮಾಡಲು ಸಾಧ್ಯವಿಲ್ಲ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಮಯವಕಾಶ ಸಿಕ್ಕಿದೆ. 21 ದಿನಗಳ ಲಾಕ್‍ಡೌನ್ ವೇಳೆಯಲ್ಲಿ ಕೊರೊನಾ ತಡೆಗೆ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಈ ಲಾಕ್‍ಡೌನ್ ಅವಧಿಯಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರಕ್ಕೆ ಅಂತ್ಯ ಹಾಡಬೇಕಿದೆ. 21 ದಿನಗಳ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಸಿಗದಿದ್ದರೆ, ಎಲ್ಲವನ್ನು ಬಂದ್ ಮಾಡಲು ಸಾಧ್ಯವಿಲ್ಲ.

    21 ದಿನಗಳ ನಂತರ ಲಾಕ್‍ಡೌನ್ ನಿಯಮವನ್ನು ಸರ್ಕಾರ ಸಡಿಲಿಸಬೇಕು. ಇದರಿಂದ ಕೆಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಾಣುತ್ತದೆ. 21 ದಿನಗಳ ನಂತರ ಆರಂಭಿಸುವ ಕಂಪನಿಗಳು ಕಡ್ಡಾಯವಾಗಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಬೇಕು. ಹಾಗೆ ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿ ಹಿತದೃಷ್ಟಿಯಿಂದ ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ರಾಜನ್ ಹೇಳುತ್ತಾರೆ.

    ಆರ್ಥಿಕ ಸಹಾಯ: ದೀರ್ಘ ಕಾಲಾವಧಿಯವರೆಗೆ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಸರ್ಕಾರ ಸೂಚಿಸಬೇಕು. ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು. ಲಾಕ್‍ಡೌನ್ ನಿಂದಾಗಿ ದುಡಿಮೆ ಇಲ್ಲದೇ ಕೆಳ ವರ್ಗದ ಜೀವನಸ್ಥಿತಿ ಮತ್ತಷ್ಟು ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಎಲ್ಲರ ಸಹಾಯ ಪಡೆದುಕೊಳ್ಳಲಿ: ಸರ್ಕಾರ ಕೇವಲ ತಾನೇ ಕೆಲಸ ಮಾಡದೇ ಎಲ್ಲರ ಸಹಾಯ ಪಡೆದು ಒಗ್ಗಟ್ಟಿನಿಂದ ಕೊರೊನಾ ತಡೆಗೆ ಹೋರಾಟ ನಡೆಸಬೇಕಿದೆ. ವಿಪಕ್ಷದಲ್ಲಿರುವ ಅನುಭವಿ ನಾಯಕರನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪ್ರಧಾನ ಮಂತ್ರಿ ಕಾರ್ಯಾಲಯವೊಂದೇ ಎಲ್ಲ ಕೆಲಸಗಳನ್ನು ಮಾಡಲಾರದು. ಎಲ್ಲ ರಾಜ್ಯಗಳ ಜೊತೆ ಸೇರಿ ಹಿರಿಯ ನಾಯಕರಿಂದ ಉತ್ತಮ ಸಲಹೆ ಪಡೆದು ಕೆಲಸ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು.

    ದೊಡ್ಡ ಕಂಪನಿಗಳಿಂದ ಸಹಾಯ: ಕೇವಲ ಸರ್ಕಾರವೊಂದೇ ಶ್ರಮಪಟ್ಟರೇ ಅರ್ಥವ್ಯವಸ್ಥೆ ಚೇತರಿಕೆ ಕಾಣಲಾರದು. ಹಾಗಾಗಿ ಸುಸ್ಥಿತಿಯಲ್ಲಿರು ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಸಣ್ಣ ವ್ಯವಹಾರಸ್ಥರ ಸಹಾಯಕ್ಕೆ ಮುಂದೆ ಬರಬೇಕಿದೆ. ಸಣ್ಣ ಪ್ರಮಾಣದ ವಿತರಕರಿಗೆ ದೊಡ್ಡ ಕಂಪನಿಗಳು ನರೆವು ನೀಡಬೇಕು. ಒಂದು ವೇಳೆ ಅವಶ್ಯವಿದ್ದಲ್ಲಿ ಬಾಂಡ್ ಮಾರ್ಕೆಟ್ ನಿಂದ ದೊಡ್ಡ ಗಾತ್ರದ ಕಂಪನಿಗಳು ಹಣ ಪಡೆಯಲು ಅವಕಾಶಗಳಿವೆ ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

  • ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಸಿದ್ಧಾರ್ಥ್ ಆತ್ಮಹತ್ಯೆ?

    ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಸಿದ್ಧಾರ್ಥ್ ಆತ್ಮಹತ್ಯೆ?

    ಮುಂಬೈ: ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡರೇ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಹೌದು, ಸಿದ್ದಾರ್ಥ್ ಅವರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಹಲವು ಕಡೆ ಸಾಲವನ್ನು ಪಡೆದುಕೊಂಡಿದ್ದರು. ಸದ್ಯ ವೈರಲ್ ಆಗಿರುವ ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಖಾಸಗಿ ಸಂಸ್ಥೆಯೊಂದು ಒತ್ತಡ ಹಾಕುತ್ತಿದೆ ಇದರ ಜೊತೆಗೆ ಖಾಸಗಿ ಇಕ್ವಿಟಿ ಪಾಲುದಾರರು ಷೇರುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎನ್ನುವ ಅಂಶ ಪ್ರಸ್ತಾಪವಾಗಿತ್ತು.

    ಸಿಸಿಡಿ ಮೂಲಗಳನ್ನು ಆಧಾರಿಸಿ ವರದಿ ಮಾಡಿದ ಡಿಎನ್‍ಎ, ಸಿಸಿಡಿಯಲ್ಲಿ ಹೂಡಿಕೆ ಮಾಡಿದ ಖಾಸಗಿ ಇಕ್ವಿಟಿ ಸಂಸ್ಥೆ ಕೆಕೆಆರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ.8 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದಿತ್ತು. ಈ ಕೆಕೆಆರ್ ಸಿದ್ದಾರ್ಥ್ ಅವರ ಬಳಿ ಶೇ.25 ರಷ್ಟು ಬಡ್ಡಿ ಬೇಡಿಕೆಯನ್ನು ಇಟ್ಟಿತ್ತು ಎಂದು ವರದಿ ಮಾಡಿದೆ.

    ಕಾಫಿ ಡೇ ಕಂಪನಿಯಲ್ಲಿ 4 ವಿದೇಶಿ ಕಾರ್ಪೋರೇಟ್ ಸಂಸ್ಥೆಗಳು ಶೇ.22.35 ರಷ್ಟು ಪಾಲನ್ನು ಹೊಂದಿವೆ. ಎನ್‍ಎಲ್‍ಎಸ್ ಮಾರಿಷಸ್ ಶೇ.10.61 ಪಾಲನ್ನು ಹೊಂದಿದ್ದರೆ, ಕೆಕೆಆರ್ ಮಾರಿಷಸ್ ಪ್ರೈವೆಟ್ ಈಕ್ವಿಟಿ ಲಿಮಿಟೆಡ್ ಶೇ.6.07 ರಷ್ಟು (1.28 ಕೋಟಿ ಷೇರು) ಪಾಲನ್ನು ಹೊಂದಿದೆ.

    ವಿದೇಶಿ ಬ್ಯಾಂಕಿಂಗ್‍ಯೇತರ ಹಣಕಾಸು ಸಂಸ್ಥೆಗಳು (ಎನ್‍ಬಿಎಫ್‍ಸಿ) ಕಡಿಮೆ ದರದಲ್ಲಿ ಸಾಲವನ್ನು ಪಡೆದು ಹೆಚ್ಚಿನ ಬಡ್ಡಿಗೆ ಸಾಲವನ್ನು ನೀಡುತ್ತದೆ. ಭಾರತದ ಬ್ಯಾಂಕ್ ಗಳಿಂದ ಶೇ.8-9 ರ ಬಡ್ಡಿ ದರದಲ್ಲಿ ಸಾಲವನ್ನು ಪಡೆದು ಆ ಹಣವನ್ನು ಭಾರತದ ಉದ್ಯಮಿಗಳಿಗೆ ಶೇ.22.25 ಬಡ್ಡಿ ದರದಲ್ಲಿ ಎನ್‍ಬಿಎಫ್‍ಸಿಗಳು ಸಾಲವನ್ನು ನೀಡುತ್ತವೆ. ಸಂಸ್ಥೆ ಲಾಭದಲ್ಲಿದ್ದರೆ ಈ ಬಡ್ಡಿ ದರದಲ್ಲಿ ಹಣವನ್ನು ತೀರಿಸುತ್ತದೆ. ಆದರೆ ನಷ್ಟದಲ್ಲಿದ್ದರೆ ಇಷ್ಟೊಂದು ಮೊತ್ತವನ್ನು ತೀರಿಸುವುದು ಅಸಾಧ್ಯವಾಗುತ್ತದೆ. ಎನ್‍ಬಿಎಫ್‍ಸಿಯ ಈ ಮೊಡಸ್ ಅಪರೆಂಡಿಗೆ ಈಗ ಸಿದ್ದಾರ್ಥ್ ಬಲಿಯಾಗಿರಬಹುದೇ ಎನ್ನುವ ಅನುಮಾನ ಹುಟ್ಟಿದೆ.

    ಹೂಡಿಕೆದಾರರೊಬ್ಬರು ಪ್ರತಿಕ್ರಿಯಿಸಿ, ಸಾಲ ನೀಡಿದ ಖಾಸಗಿ ಇಕ್ವಿಟಿಗಳು ಮಾಲೀಕರಿಂದ ಹೆಚ್ಚಿನ ಲಾಭವವನ್ನು ನಿರೀಕ್ಷಿಸುತ್ತವೆ. ಈ ಕಾರಣಕ್ಕೆ ಉದ್ಯಮಿಗಳ ಮೇಲೆ ಒತ್ತಡವನ್ನು ಹಾಕುತ್ತಲೇ ಇರುತ್ತದೆ. ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ಅನಿವಾರ್ಯವಾಗಿ ಸಂಸ್ಥೆಯನ್ನು ಮಾರಾಟ ಮಾಡಬೇಕಾಗುತ್ತದೆ. ಒತ್ತಡ ಹಾಕುವ ಮೂಲಕ ವಿದೇಶಿ ಬ್ರ್ಯಾಂಡ್ ಗಳಿಗೆ ಪ್ರತಿ ಸ್ಪರ್ಧಿಯಾಗಿ ಬೆಳೆಯುತ್ತಿರುವ ದೇಶದ ಉದ್ಯಮಗಳನ್ನು ನಿರ್ನಾಮ ಮಾಡುತ್ತವೆ ಎಂದು ಹೇಳಿದ್ದಾರೆ.

    ಭಾರತದ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಸಿದ್ದಾರ್ಥ್ ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.

    ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ `ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.

    ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.

    ಮೈಂಡ್ ಟ್ರೀ ಷೇರು ಎಷ್ಟಿತ್ತು?
    2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.

    2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.

    https://www.youtube.com/watch?v=-V5nfhPjxb8

    ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.

    ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್‍ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.