Tag: Finance Company

  • ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಶೆಡ್‌ಗೆ (Pattanagere Shed) ಬೀಗ ಬಿದ್ದಿದೆ. ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನ (Seized Vehicles) ಬಿಡಿಸಿಕೊಳ್ಳಲು ನಿತ್ಯ ಜನ ಶೆಡ್‌ಗೆ ಬರ್ತಿದ್ದಾರೆ. ಆದ್ರೆ ವಾಹನಗಳನ್ನ ಬಿಡಿಸಿಕೊಳ್ಳಲಾಗದೇ ವಾಪಾಸ್ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನ್ರನ್ನ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಆರ್‌ಆರ್ ನಗರದ (Bengaluru RR Nagar) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಈ ಶೆಡ್‌ನ ಬಾಡಿಗೆಗೆ ಫೈನಾನ್ಸ್ ಕಂಪನಿಯ (Finance Company) ನಿರ್ವಹಣೆ ಮಾಡ್ತಿದ್ದು, ಫೈನಾನ್ಸ್ ನಲ್ಲಿ ವಾಹನಗಳನ್ನ ಖರೀದಿಸಿ, ಕಟ್ಟೋಕೆ ಆಗದಿದ್ದಾಗ, ಅಂತಹ ವಾಹನಗಳನ್ನ ಸೀಜ್ ಮಾಡಿ ಇದೇ ಶೆಡ್‌ನಲ್ಲಿ ತುಂಬಿಸಲಾಗುತ್ತೆ. ಇಲ್ಲಿ ಸೀಜ್ ಆಗಿರೋ ನೂರಾರು ಬೈಕ್‌ಗಳು, ಆಟೋ, ಕಾರು, ಲಾರಿ, ಇತರೆ ವಾಹನಗಳಿವೆ. ಇವುಗಳನ್ನ ಮಾಲೀಕರು ಹಣ ಕಟ್ಟಿ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಶೆಡ್‌ಗೆ ಬರ್ತಿದ್ದಾರೆ. ಆದ್ರೆ ರೇಣುಕಸ್ವಾಮಿ ಕೊಲೆ ವಿಚಾರಣೆ ಹಾಗೂ ಸಾಕ್ಷ್ಯ ನಾಶ ಆಗಬಾರದೆಂದು ಪೊಲೀಸರು ಶೆಡ್‌ಗೆ ಬೀಗ ಹಾಕಿದ್ದಾರೆ. ಹೀಗಾಗಿ ಫೈನಾನ್ಸ್ ಸಿಬ್ಬಂದಿ ಇತ್ತ ತಲೆ ಹಾಕಿಲ್ಲ. ನಿತ್ಯ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಬಂದ ಮಾಲೀಕರು ಖಾಲಿ ಕೈಯಲ್ಲಿ ವಾಪಾಸ್ ಹೋಗ್ತಿದ್ದಾರೆ.

    ಆಟೋ, ದ್ವಿಚಕ್ರ ವಾಹನಗಳಲ್ಲಿ ನಿತ್ಯ 15-20 ಜನ ಶೆಡ್‌ಗೆ ಬರ್ತಾರೆ. ಬ್ಯಾಂಕ್‌ನಲ್ಲಿ ಬಾಕಿಯಿರೋ ಹಣ ಕಟ್ಟಿ, ಇನ್ನೇನು ಬೈಕ್ ಬಿಡಿಸಿಕೊಂಡು ಬರೋಣ ಅಂತ ಎಲ್ಲ ದಾಖಲೆಗಳನ್ನ ಶೆಡ್ ಬಳಿ ತಂದ್ರೂ, ಸಿಬ್ಬಂದಿಯಿಲ್ಲದೇ ನಿರಾಸೆಯಿಂದ ವಾಪಾಸ್ ಆಗ್ತಿದ್ದಾರೆ.

    ನಾವು ನಮ್ಮ ವಸ್ತುವನ್ನ ಬಿಡಿಸಿಕೊಳ್ಳೊಕೆ ಹೀಗೆ ಎಷ್ಟು ದಿನ ಓಡಾಡಬೇಕು? ಅಂತ ವಾಹನದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ಸಂತ್ರಸ್ತನ ವಿರುದ್ಧವೇ ಕೇಸ್‌ ದಾಖಲು

  • ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು – ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ್ರು

    ರಾಂಚಿ: ಟ್ರ್ಯಾಕ್ಟರ್ ಹಿಂಪಡೆಯಲು ರೈತನ ಮನೆಗೆ ನುಗ್ಗಿದ ಫೈನಾನ್ಸ್ ಕಂಪನಿ ಅಧಿಕಾರಿಗಳು ಆತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ.

    ಶುಕ್ರವಾರ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ಈ ಘಟನೆ ನಡೆದಿದ್ದು, ಜನಪ್ರಿಯ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತರ ಮನೆಗೆ ತೆರಳಿ ಟ್ರ್ಯಾಕ್ಟರ್ ಹಿಂಪಡೆಯಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ರೈತನ ಮಗಳ ನಡುವೆ ವಾಗ್ವಾದ ನಡೆದಿದೆ. ನಂತರ ಗರ್ಭಿಣಿ ಮಹಿಳೆ ಟ್ರ್ಯಾಕ್ಟರ್‌ಗೆ ಅಡ್ಡ ಹಾಕಿ ನಿಂತಿದ್ದಾರೆ. ಈ ವೇಳೆ ಅಧಿಕಾರಿಗಳು ಆಕೆಯನ್ನು ಟ್ರಾಕ್ಟರ್‌ನಡಿ ತಳ್ಳಿ ಕೊಂದಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಂಬಂಧಿಕರು ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಹಜಾರಿಬಾಗ್ ಎಸ್‍ಪಿ ಮನೋಜ್ ರತನ್ ಚೋಥೆ ಫೈನಾನ್ಸ್ ಕಂಪನಿಯ ಅಧಿಕಾರಿಗಳು ರೈತನ ಮನೆಗೆ ನುಗ್ಗಿದ ಬಳಿಕ ಟ್ರ್ಯಾಕ್ಟರ್‌ಗಾಗಿ ವಾದ ವಿವಾದ ನಡೆದಿದೆ. ಈ ಮಧ್ಯೆ ರೈತನ ಮಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲು ರೈತರ ಮನೆಗೆ ಹೋಗುವ ಮುನ್ನ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೂ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಿನಲ್ಲಿ ಮತ್ತೊಂದು ದೋಖಾ ಕಂಪನಿ – ವಿಶ್ವಪ್ರಿಯ ಫೈನಾನ್ಸಿಯಲ್‍ನಿಂದ 100 ಕೋಟಿ ಗುಳುಂ

    ಬೆಂಗ್ಳೂರಿನಲ್ಲಿ ಮತ್ತೊಂದು ದೋಖಾ ಕಂಪನಿ – ವಿಶ್ವಪ್ರಿಯ ಫೈನಾನ್ಸಿಯಲ್‍ನಿಂದ 100 ಕೋಟಿ ಗುಳುಂ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಐಎಂಎ ರೀತಿಯ ಮತ್ತೊಂದು ದೋಖಾ ಕಂಪನಿಯ ಬಣ್ಣ ಬಯಲಾಗಿದೆ. ಅಧಿಕ ಬಡ್ಡಿ ಆಸೆ ತೋರಿಸಿದ ಫೈನಾನ್ಸ್ ಕಂಪನಿ ಬಾಗಿಲು ಮುಚ್ಕೊಂಡು ನಾಟ್ ರಿಚಬಲ್ ಆಗಿದೆ. ಲಕ್ಷ ಲಕ್ಷ ದುಡ್ಡು ಕಟ್ಟಿದವರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.

    ಐಎಂಎ, ಅಜ್ಮೀರಾ ಹಾಗೂ ಆಂಬಿಡೆಂಟ್ ದೋಖಾ ಕಂಪನಿಗಳ ನಂತರದ ಸರದಿ ವಿಶ್ವ ಪ್ರಿಯ ಫೈನಾನ್ಸ್ ಕಂಪನಿ ಆ ಸಾಲಿಗೆ ಸೇರಿಕೊಂಡಿದೆ. ತಮಿಳುನಾಡು ಮೂಲದ ಸುಬ್ರಮಣ್ಯಂ ರಾಮಸ್ವಾಮಿ ಎಂಬವರ ಒಡೆತನದ ವಿಶ್ವಪ್ರಿಯ ಫೈನಾನ್ಸಿಯಲ್ ಆಂಡ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯೇ ಫ್ರಾಡ್ ಮಾಡಿರುವ ಆರೋಪ ಹೊತ್ತಿದೆ. ತಮಿಳುನಾಡು, ಕರ್ನಾಟಕ ಸೇರಿ ದಕ್ಷಿಣ ಭಾರತದ ಹಲವೆಡೆ ಈ ವಿಶ್ವಪ್ರಿಯ ಕಂಪನಿ ತನ್ನ ಕಾರ್ಯನಿರ್ವಹಿಸಿತ್ತು. ಇದಾದ ಬಳಿಕ ಕೆಲವೇ ವರ್ಷಗಳಲ್ಲಿ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ತನ್ನ ನಂಬಿಕಸ್ಥ ಗ್ರಾಹಕರಿಗೆ ಕೋಟಿ-ಕೋಟಿ ವಂಚಿಸಿ ಬಾಗಿಲು ಮುಚ್ಚಿಕೊಂಡಿದೆ.

    2012 ರಲ್ಲಿ ಬೆಂಗಳೂರನಲ್ಲಿ ತನ್ನ ಬ್ರ್ಯಾಂಚ್ ಓಪನ್ ಮಾಡಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ನಿವೃತ್ತ ನೌಕರರನ್ನು ಹಾಗೂ ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿತ್ತು. ಬಳಿಕ ಮನೆ-ಮನೆಗೆ ತೆರಳುತ್ತಿದ್ದ ವಿಶ್ವಪ್ರಿಯ ಫೈನಾನ್ಸಿಯಲ್ ಕಂಪನಿ ಏಜೆಂಟ್ ಗಳು ವೃದ್ಧರ ಮನವೊಲಿಸಿ, ಶೇ.10.47 ರಷ್ಟು ಬಡ್ಡಿ ಆಸೆ ತೋರಿಸಿ ಏನಿಲ್ಲ ಅಂದ್ರು ಒಬ್ಬೊರಿಂದ ಕನಿಷ್ಠ 1 ಲಕ್ಷ ದಿಂದ 50 ಲಕ್ಷದ ವರೆಗೂ ಇನ್ವೆಸ್ಟ್ ಮಾಡಿಸಿಕೊಂಡಿದ್ದಾರೆ.

    ಬ್ರ್ಯಾಂಚ್ ಓಪನ್ ಆದ ನಂತರ ವರ್ಷಕ್ಕೆ ಒಮ್ಮೆ ಬಡ್ಡಿ ಹಣ ಹಾಕಲಾಗುವುದು ಅಂತಾ ನಂಬಿಸಿ ಒಂದೇ ಸಾರಿ ಕೈ ಎತ್ತಿದ್ದಾರೆ. ಸದ್ಯ ಅಸಲಿ ಹಣವೂ ಇಲ್ಲ, ಬಡ್ಡಿ ಇಲ್ಲದೇ ಹೂಡಿಕೆ ಮಾಡಿದ ಜನರು ಕೋರ್ಟ್ ಮೂಲಕ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ನಗರದ ಗಿರಿನಗರ, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಸದ್ಯಕ್ಕೆ ಕೇಸ್ ಗಳು ದಾಖಲಾಗುತ್ತಿದ್ದು, ಎರಡು ಠಾಣೆಗೆ ಬಂದಿರುವ ಕೇಸ್ ಅಧಾರದ ಮೇಲೆ ಎಂಟು ಕೋಟಿಗೂ ಅಧಿಕ ಎನ್ನಲಾಗಿದೆ. ಇನ್ನೂ ವಿಶ್ವಪ್ರಿಯ ಫೈನಾನ್ಸ್ ಕಂಪನಿ ಒಟ್ಟು ನೂರು ಕೋಟಿಗೂ ಅಧಿಕ ಹಣ ವಂಚನೆ ಮಾಡಿರಬಹುದು ಅಂತಾ ಪೊಲೀಸರು ಅಂದಾಜಿಸಿದ್ದಾರೆ.

  • ಅತ್ತ ಪ್ರವಾಹದ ಪರಿಹಾರ ಸಿಕ್ಕಿಲ್ಲ, ಇತ್ತ ರೈತರ ಟ್ರ್ಯಾಕ್ಟರ್ ಜಪ್ತಿ

    ಅತ್ತ ಪ್ರವಾಹದ ಪರಿಹಾರ ಸಿಕ್ಕಿಲ್ಲ, ಇತ್ತ ರೈತರ ಟ್ರ್ಯಾಕ್ಟರ್ ಜಪ್ತಿ

    ಬೆಳಗಾವಿ: ನೆರೆ ಪೀಡಿತ ಬೆಳಗಾವಿಯಲ್ಲಿ ರೈತರ ಕಷ್ಟ ಅವರಿಗಷ್ಟೇ ಗೊತ್ತು. ಒಂದೆಡೆ ಎಲ್ಲವನ್ನೂ ಕಳೆದುಕೊಂಡು ಬದುಕು ಬೀದಿಗೆ ಬಿದ್ದಿದೆ, ಇನ್ನೊಂದೆಡೆ ರಾಜ್ಯ ಸರ್ಕಾರದಿಂದ ಸರಿಯಾದ ಪರಿಹಾರ ಸಿಕ್ತಿಲ್ಲ. ಈ ನಡುವೆ ಸಾಲ ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಕಂಪನಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದೆ.

    ಹೌದು. ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ರೈತರಾದ ಬಾಳಪ್ಪ ಮತ್ತು ರಾಮಪ್ಪ ಅವರು ಹಿಂದೂಜಾ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಸಾಲ ಕಟ್ಟದ ಕಾರಣಕ್ಕೆ ಫೈನಾನ್ಸ್ ಅವರು ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ರೈತರಿಬ್ಬರು ಮೂರು ತಿಂಗಳಿಂದ ಲೋನ್ ಕಟ್ಟಿರಲಿಲ್ಲ. ಇತ್ತ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾಲ ವಸೂಲಾತಿಗೆ ಮೂರು ದಿನಗಳ ಹಿಂದೆಯಷ್ಟೇ ತಾತ್ಕಾಲಿಕ ತಡೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳಿಗೆ ಕ್ಯಾರೇ ಎನ್ನದೆ ಜಮೀನಿಗೆ ನುಗ್ಗಿ 2 ಟ್ರ್ಯಾಕ್ಟರ್‌ಗಳನ್ನ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

    ರಣ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿ ಮಂದಿ ಇನ್ನೂ ತಮ್ಮ ಬದುಕು ಕಟ್ಟಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಅತ್ತ ಸರ್ಕಾರ ಕೂಡ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಹೀಗಿರುವಾಗ ರೈತರು ಸಾಲ ಸೂಲ ಮಾಡಿ ಬೆಳೆದಿದ್ದ ಬೆಳೆಗಳು ಪ್ರವಾಹಕ್ಕೆ ಹಾನಿಯಾಗಿ ಹಣ ಕೊಟ್ಟವರಿಗೆ ಸಾಲ ಮರುಪಾವತಿ ಮಾಡಲು ಆಗದೆ ಕಂಗಾಲಾಗಿದ್ದಾರೆ. ಈ ನಡುವೆ ಸಾಲ ಕಟ್ಟಿ ಎಂದು ಮಾನವೀಯತೆ ಮರೆತ ಖಾಸಗಿ ಫೈನಾನ್ಸ್ ಕಂಪನಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ.

  • ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿ ನೇಣಿಗೆ ಶರಣು

    ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿ ನೇಣಿಗೆ ಶರಣು

    ಮಂಡ್ಯ: ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ.

    ಹೆಮ್ಮನಹಳ್ಳಿ ನಿವಾಸಿ ಪ್ರದೀಪ್(36) ನೇಣಿಗೆ ಶರಣಾದ ವ್ಯಕ್ತಿ. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವ್ಯವಹಾರ ನಡೆಸಲು ಖಾಸಗಿ ಫೈನಾನ್ಸ್ ಕಂಪನಿಯಿಂದ ಪ್ರದೀಪ್ ಸಾಲ ಪಡೆದಿದ್ದರು. ಆದರೆ ಆತನಿಗೆ ಸರಿಯಾಗಿ ಸಾಲ ಪಾವತಿಸಲು ಆಗುತ್ತಿರಲಿಲ್ಲ. ಈ ನಡುವೆ ಮಂಗಳವಾರ ಪ್ರದೀಪ್ ಪತ್ನಿ ರೇಣುಕಾ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದ್ದರಿಂದ ಪತ್ನಿಯ ಅಂತ್ಯ ಸಂಸ್ಕಾರಕ್ಕಾಗಿ ಪ್ರದೀಪ್ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರದೀಪ್ ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಖಾಸಗಿ ಫೈನಾನ್ಸ್ ಕಂಪನಿಯ ನೌಕರರು ಆತನನ್ನು ಕರೆದುಕೊಂಡು ಹೋಗಲು ಬಂದಿದ್ದರು.

    ಈ ವೇಳೆ ಪ್ರದೀಪ್ ತಾಯಿ, ನಾದಿನಿಯನ್ನು ಕೂಡ ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ್ದರು. ಇದರಿಂದ ಹೆದರಿಕೊಂಡು ಪ್ರದೀಪ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಫೈನಾನ್ಸ್ ಕಂಪನಿ ನೌಕರರನ್ನು ಕೆಸ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.