Tag: Film Team

  • ನೆರೆ ಸಂತ್ರಸ್ತರ ಗ್ರಾಮವನ್ನು ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರತಂಡ

    ನೆರೆ ಸಂತ್ರಸ್ತರ ಗ್ರಾಮವನ್ನು ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರತಂಡ

    ಬಾಗಲಕೋಟೆ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಚಲನಚಿತ್ರದ ತಂಡವೊಂದು ವಿನೂತನ ಹೆಜ್ಜೆ ಇಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ “ಥರ್ಡ್ ಕ್ಲಾಸ್” ಚಿತ್ರತಂಡ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗುತ್ತಿದೆ.

    ಈ ಚಿತ್ರತಂಡ ಆಡಿಯೋ ರಿಲೀಸ್ ಸಂದರ್ಭದಲ್ಲೇ ಆಟೋ ಚಾಲಕರು, ಅನಾಥ-ಅಂಧ ಮಕ್ಕಳಿಗೆ ಜೀವ ವಿಮೆ ಮಾಡಿಸುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಮತ್ತೆ ಚಿತ್ರದ ನಿರ್ಮಾಪಕ, ನಟ ಜಗದೀಶ್ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಗ್ರಾಮವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಿ ನಿಂತಿದ್ದು, ಅದರ ಪ್ರಯುಕ್ತ ಚಿತ್ರತಂಡ ಗ್ರಾಮದಲ್ಲೇ ಗ್ರಾಮ ವಾಸ್ತವ್ಯ ಹೂಡಿದೆ.

    ಚಿತ್ರತಂಡ ರಾತ್ರಿ ಶಾಲಾ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಹಾಡಿ, ಕುಣಿದು, ಅವರೊಂದಿಗೆ ಬೆರೆತು ಮಕ್ಕಳಿಗೆ ಊಟ ಬಡಿಸಿ ಸಾಮಾಜಿಕ ಕಳಕಳಿ ಮೆರೆದಿದೆ. ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ಮಕ್ಕಳೊಂದಿಗೆ ಹೆಜ್ಜೆ ಹಾಕಿ, ಅವರೊಂದಿಗೆ ಊಟ ಮಾಡಿ, ಊಟ ಬಡಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ಪ್ರವಾಹದಲ್ಲಿ ಮನೆ ಹಾಗೂ ಶಾಲೆ ಕಳೆದುಕೊಂಡ ಸಂತ್ರಸ್ತ ಶಾಲಾ ಮಕ್ಕಳ ಪರವಾಗಿ ನಿಂತಿರುವ ಚಿತ್ರತಂಡದ ಕಾರ್ಯ ಸದ್ಯ ಶ್ಲಾಘನೆಗೆ ಕಾರಣವಾಗಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯ ಕಟ್ಟಡ ಮಲಪ್ರಭೆ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆ ಶಾಲೆಯ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿ ಇಂದು (ಜನವರಿ 20) ಕಾಮಗಾರಿ ಆರಂಭಿಸಲಿದೆ. ಚಿತ್ರ ತಂಡದ ಈ ಕಾರ್ಯ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಈ ಚಿತ್ರ ಬರುವ ಫೆ. 2ರಂದು ತೆರೆ ಕಾಣಲಿದೆ. ಈ ಕುರಿತು ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ತಮ್ಮ ಸಾಮಾಜಿಕ ಕಳಕಳಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  • ರಶ್ಮಿಕಾ ಮಂದಣ್ಣ ಮೇಲೆ ತಮಿಳು ಚಿತ್ರರಂಗ ಗರಂ

    ರಶ್ಮಿಕಾ ಮಂದಣ್ಣ ಮೇಲೆ ತಮಿಳು ಚಿತ್ರರಂಗ ಗರಂ

    ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಂತರ ಈಗ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈಗ ಅವರ ವಿರುದ್ಧ ತಮಿಳು ಚಿತ್ರರಂಗ ಗರಂ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

    ರಶ್ಮಿಕಾ ಮಂದಣ್ಣ ಅವರು ನಟ ಕಾರ್ತಿ ಅವರ ಜೊತೆ ತಮ್ಮ ಮೊದಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಹೀಗಾಗಿ ತಮಿಳು ಚಿತ್ರರಂಗ ಅವರ ವಿರುದ್ಧ ಗರಂ ಆಗಿದೆ ಎಂಬ ವಿಷಯ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ನೋಡಿದ ನಂತರ ತಮಿಳುನಾಡಿನ ಜನತೆ ರಶ್ಮಿಕಾ ಅವರನ್ನು ಕಾಲಿವುಡ್‍ಗೆ ಸ್ವಾಗತಿಸಿ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ರಶ್ಮಿಕಾ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು, ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ಅಧಿಕೃತವಾಗಿ ಟೈಟಲ್ ಪ್ರಕಟಿಸಲು ನಿರ್ಧರಿಸಿತ್ತು ಎನ್ನಲಾಗಿದೆ.

    ಸಾಮಾನ್ಯವಾಗಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾದ ಟೈಟಲ್ ಫಸ್ಟ್ ಲುಕ್ ಪೋಸ್ಟರ್ ಮೂಲಕ ರಿವೀಲ್ ಮಾಡಲಾಗುತ್ತದೆ. ಸುಲ್ತಾನ್ ಚಿತ್ರತಂಡ ಕೂಡ ಇದೇ ರೀತಿ ಮಾಡುವುದಕ್ಕೆ ನಿರ್ಧರಿಸಿತ್ತು. ಆದರೆ ಅಷ್ಟರಲ್ಲಿ ರಶ್ಮಿಕಾ ಚಿತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ ಅವರ ಈ ವರ್ತನೆಯಿಂದ ಸುಲ್ತಾನ್ ಚಿತ್ರತಂಡ ಹಾಗೂ ಚಿತ್ರದ ನಾಯಕ ಕಾರ್ತಿ ಅವರ ಮೇಲೆ ಬೇಸರಗೊಂಡಿದ್ದಾರೆ. ಅಲ್ಲದೆ ತನ್ನ ತಪ್ಪಿಗೆ ರಶ್ಮಿಕಾ ಚಿತ್ರತಂಡದ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿದೆ.

    ಸುಲ್ತಾನ್ ಚಿತ್ರವನ್ನು ರೆಮೋ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ನಿರ್ದೇಶಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್.ಆರ್ ಪ್ರಭು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿವೇಕ್ ಮರ್ವೀನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

  • ರೀ- ರಿಲೀಸ್ ಆಗ್ತಿದೆ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ

    ರೀ- ರಿಲೀಸ್ ಆಗ್ತಿದೆ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ

    ಗಳಿಕೆಯಾದ ಹಣ ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮೀಸಲು

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.

    ಶನಿವಾರದಂದು ನಡೆದ ಮಂಡ್ಯ ಬಸ್ ದುರಂತದಿಂದ ಅಂಬರೀಶ್ ಅವರು ಆಘಾತಕ್ಕೊಳಗಾಗಿದ್ದರು. ಹಾಗೆಯೆ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದರು. ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಅಂಬರೀಶ್ ಅವರು ಬಯಸಿದ್ದರು. ಆದರೆ ವಿಪರ್ಯಾಸವೆಂದರೇ ಮಂಡ್ಯ ಬಸ್ ದುರಂತದ ದಿನವೇ ರೆಬೆಲ್ ಸ್ಟಾರ್ ನಿಧನರಾದರು.

    `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಉಸ್ತವಾರಿಯನ್ನು ಕಿಚ್ಚ ಸುದೀಪ್, ಜಾಕ್ ಮಂಜು ಹಾಗೂ ಗುರದತ್ತ್ ಗಾಣಿಗ ಅವರು ವಹಿಸಿಕೊಂಡಿದ್ದರು. ಅಂಬರೀಶ್ ಅವರ ಆಸೆಯನ್ನು ಪೂರ್ತಿಗೊಳಿಸಬೇಕು ಎಂದು `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ ಸಿನಿಮಾವನ್ನು ರೀ- ರಿಲೀಸ್ ಮಾಡಲು ಮುಂದಾಗಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ನೆರವು ನೀಡಲು ಚಿತ್ರತಂಡ ತೀರ್ಮಾನಿಸಿದೆ.

    ಹೀಗಾಗಿ ಇದೇ ಶುಕ್ರವಾರದಂದು ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ಅಮೇರಿಕದಲ್ಲಿ ರೆಬೆಲ್ ಸ್ಟಾರ್ ಅಭಿನಯದ ಕೊನೆಯ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾವನ್ನು ರೀ-ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಮೂಲಕ ಅಂಬರೀಶ್ ಅವರ ಆಸೆಯನ್ನು ತೀರಿಸಿ ಜನರಿಗೆ ಒಳ್ಳೆಯದನ್ನ ಮಾಡುವ ಚಿತ್ರತಂಡದ ಕೆಲಸವನ್ನು ಎಲ್ಲರು ಮೆಚ್ಚಲೇಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.

    ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.

    ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

    ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

    ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.