Tag: film news

  • ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

    ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್

    ಕೋವಿಡ್ ಆತಂಕದ ನಡುವೆಯೂ ಬಿಡುಗಡೆ ಆಗಿದ್ದ ನೆನಪಿರಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯ’ ಸಿನಿಮಾ ಶತದಿನೋತ್ಸವ ಆಚರಿಸಿದೆ. ಪ್ರೇಮ್ ಸಿನಿಮಾ ರಂಗಕ್ಕೆ ಬಂದು 20 ವರ್ಷಗಳು ಪೂರೈಸಿದ ಸಂಭ್ರಮದಲ್ಲಿರುವಾಗ ‘ಪ್ರೇಮಂ ಪೂಜ್ಯಂ’ ನೂರು ದಿನಗಳ ಪ್ರದರ್ಶನ ಕಂಡಿದ್ದು, ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. ಹಾಗಾಗಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಹಾಗೂ ಚಿತ್ರೋದ್ಯಮದ ಸರ್ವರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ : ಅಭಿಮಾನಿ ಕೊಟ್ಟ 10 ಗುಂಟೆ ಜಾಗದಲ್ಲಿ ರಾಜೇಶ್ ಅಂತ್ಯಕ್ರಿಯೆ


    ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಪ್ರೇಮ್, ಪ್ರಾಣ ಚಿತ್ರದ ಮೂಲಕ 2004ರಲ್ಲಿ ಹೀರೋ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದರು. ಇವರ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ಚಿತ್ರ ರತ್ನಜ ನಿರ್ದೇಶನದಲ್ಲಿ ಮೂಡಿ ಬಂದ ‘ನೆನಪಿರಲಿ’. ಎರಡನೇ ಸಿನಿಮಾದಲ್ಲಿಯೇ ಸ್ಟಾರ್ ಪಟ್ಟ ತಲುಪಿದ ನಟ ಇವರು. ಈ ಸಿನಿಮಾದ ಭರ್ಜರಿ ಗೆಲುವಿನಿಂದಾಗಿಯೇ ಅಭಿಮಾನಿ ಬಳಗ ಇವರನ್ನು ‘ನೆನಪಿರಲಿ ಪ್ರೇಮ್’ ಎಂಬ ಹೆಸರಿನಿಂದಲೇ ಕರೆಯುವುದಕ್ಕೆ ಶುರುಮಾಡಿತು. ಇದನ್ನೂ ಓದಿ : ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ


    ಎರಡು ದಶಕದ ವೃತ್ತಿ ಬದುಕಿನಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್, ದರ್ಶನ್, ಅನಂತ್ ನಾಗ್ ಮುಂತಾದ ಕಲಾವಿದರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದನ್ನೂ ಓದಿ : ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್


    ಈ ಸಂಭ್ರಮವನ್ನು ಅವರು ಪಬ್ಲಿಕ್ ಟಿವಿ ಜತೆ ಹಂಚಿಕೊಳ್ಳುತ್ತಾ, “ಒಳ್ಳೊಳ್ಳೆ ಪಾತ್ರಗಳ ಮೂಲಕ ಅಭಿಮಾನಿಗಳು ನನ್ನನ್ನು ಗುರುತಿಸಿದ್ದಾರೆ. ನನಗಾಗಿಯೇ ಅನೇಕ ನಿರ್ದೇಶಕರು ಕತೆ ಬರೆದಿದ್ದಾರೆ. ನನ್ನನ್ನು ನಂಬಿ ನಿರ್ಮಾಪಕರು ಹಣ ಹೂಡಿದ್ದಾರೆ. ನನ್ನೊಂದಿಗೆ ಕೆಲಸ ಮಾಡಿದ ಅಷ್ಟೂ ಕಲಾವಿದರು ಕೂಡ ನನಗೆ ಪ್ರೀತಿ ತೋರಿದ್ದಾರೆ. ನನ್ನ ಗೆಲುವಿಗೆ ಇವೆಲ್ಲವೂ ಕಾರಣವಾಗಿವೆ. ಸಿನಿಮಾ ರಂಗಕ್ಕೆ ಬಂದು 20 ವರ್ಷಗಳಾದರೂ, ನನ್ನ ಮೇಲೆ ಚಿತ್ರೋದ್ಯಮ ಅಷ್ಟೇ ಪ್ರೀತಿ ಇಟ್ಟುಕೊಂಡಿದೆ. ನನ್ನ ಗೆಲುವನ್ನು ಇವರೆಲ್ಲರಿಗೂ ಅರ್ಪಿಸುವೆ’ ಅಂತಾರೆ ಪ್ರೇಮ್. ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್


    ಪ್ರೇಮಂ ಪೂಜ್ಯಂ ನಂತರ ಸಾಕಷ್ಟು ಕಥೆಗಳನ್ನು ಅವರು ಕೇಳಿದ್ದಾರಂತೆ. ಎರಡು ಕಥೆಗಳು ಒಪ್ಪಿಗೆ ಕೂಡ ಆಗಿವೆ. ಪ್ರೇಮಂ ಪೂಜ್ಯಂ ಸಿನಿಮಾ ತಂಡದ ಜತೆಯೂ ಮತ್ತೊಂದು ಸಿನಿಮಾ ಮಾಡಬೇಕಿದೆ. ಸದಾ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತೇನೆ ಎನ್ನುವುದು ಪ್ರೇಮ್ ಮಾತು.

  • ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ

    ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ

    ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರು ಅತ್ಯಂತ ಪ್ರೌಢಿಮೆಯ ಅಭಿನಯವನ್ನು ಪ್ರದರ್ಶಿಸುತ್ತಿದ್ದ ಕಲಾವಿದರಾಗಿದ್ದರು. ಅವರ ಸಿನಿಮಾಗಳು ಮನದಾಳದಲ್ಲಿದೆ. ಯಾವುದೇ ಪಾತ್ರವನ್ನು ನೀಡಿದರೂ ಸುಲಲಿತವಾಗಿ ಅಭಿನಯಿಸುವ ಸಾಮರ್ಥ್ಯ ಅವರಲ್ಲಿತ್ತು.

    ಕಲಾಸೇವೆಯನ್ನು ಅವರು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ತಾನು ದೊಡ್ಡ ನಟನೆಂಬ ಆಡಂಬರವಿಲ್ಲದೇ ಬದುಕಿದ ಅತ್ಯಂತ ಸರಳಜೀವಿ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಭಗವಂತ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

    ಡಿ.ಕೆ. ಶಿವಕುಮಾರ್ ಸಂತಾಪ 
    ಹಿರಿಯ ನಟ ರಾಜೇಶ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ‘ರಾಜೇಶ್ ಅವರು ಹಿರಿಯ ನಟರು, ಅತ್ಯುತ್ತಮ ಕಲಾವಿದರು. ನಾವು ಅವರ ಚಿತ್ರಗಳನ್ನು ನೋಡಿ ಬೆಳೆದವರು. ಅವರ ಅಗಲಿಕೆ ನೋವು ತಂದಿದೆ. ರಾಜೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಅವರು ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ : ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್

    ಗಿರಿಜಾ ಲೋಕೇಶ್ ಕಂಬನಿ 
    ರಾಜೇಶ್ ಅವರ ಜೊತೆ ನಾಟಕಗಳಲ್ಲಿ ಅಭಿನಯಿಸಿದ್ದೇನೆ ಕಲೆಯಲ್ಲಿ ತುಂಬಾ ಶ್ರದ್ದೆ ಅವರಿಗೆ ಹದಿನಾರನೇ ವಯಸ್ಸಿನಲ್ಲಿ ನಾನು ‌ಅವರೊಟ್ಟಿಗೆ ನಾಟಕದಲ್ಲಿ ಅಭಿನಯಿಸಿದ್ದೇನೆ. ಕಾಸ್ಟ್ಯೂಮ್, ಹೇರ್ ಸ್ಟೈಲ್, ಬಾಡಿ ಲಾಂಗ್ವೇಜ್ ಯಾವುದೇ ಇರಲಿ ಅಲ್ಲಿ ಶಿಸ್ತು ಬಯಸುತ್ತಿದ್ದರು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು ಅವರಿಂದ ನೋಡಿ ತುಂಬಾ ಕಲಿತಿದ್ದೇವೆ. ಅವರು ಶಿಸ್ತುಬದ್ದ ಜೀವನ ನಡೆಸಿದ್ದರು. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು

    ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಕಲಾವಿದರು ಅಡ್ಡದಿಡ್ಡಿ ದೇಹ ಬೆಳೆಸಬಾರದು, ನೀಟಾಗಿರಬೇಕು. ಫಿಟ್ ಅಂಡ್ ಫೈನ್ ಆಗಿರಬೇಕು ಎನ್ನುತ್ತಿದ್ದರು. ಬೆಳುವಲದ‌ ಮಡಿಲಲ್ಲಿ ಚಿತ್ರದಲ್ಲಿ ರಾಜೇಶ್ ಅವರ ಮಗಳಾಗಿ ಅಭಿನಯಿಸಿದ್ದೇನೆ ಅವರು ಸಂತೃಪ್ತ ಜೀವನ ನಡೆಸಿ ಹೋಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಕಂಬನಿ ಮಿಡಿದಿದ್ದಾರೆ ಹಿರಿಯ ನಟಿ ಗಿರಿಜಾ ಲೋಕೇಶ್. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ

    ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಚಂದ್ರು 
    ರಾಜೇಶ್ ಅಂತಿಮ ದರ್ಶನ ಪಡೆದ ಮಾತನಾಡಿದ ಚಂದ್ರು, “ರಾಜೇಶ್ ಆತ್ಮೀಯರು ಹಾಗೂ ನನ್ನ ಮಾರ್ಗದರ್ಶಕರು. ರಾಜ್ ಕುಮಾರ್ , ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಸಾಲಿನವರು ಅಭಿನಯಕ್ಕೆ ನವರಸಗಳನ್ನು ತುಂಬಿದವರು. ರಂಗಭೂಮಿಯಲ್ಲಿ ಪಳಗಿದವರು, ಅದ್ಬುತ ಅಭಿನಯ ಮಾಡುತ್ತಿದ್ದರು. ಅವರ ಜೊತೆಗೆ ಬೇರೆಯವರು ಅದ್ಬುತವಾಗಿ ನಟಿಸಬೇಕು‌ ಎನ್ನುತ್ತಿದ್ದರು. ಇಂಗ್ಲಿಷ್ ಪಾಂಡಿತ್ಯವೂ ಇತ್ತು. ಕನ್ನಡ ಪಾಂಡಿತ್ಯವೂ ಇತ್ತುಅವರೊಟ್ಟಿಗೆ ಅಭಿನಯಿಸಿದ್ದೇನೆ. ತುಂಬು ಜೀವನ ಮಾಡಿ‌ ಹೋಗಿದ್ದಾರೆ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜೇಶ್ ಸೇರಿದಂತೆ ದಿಗ್ವಿಜರ ಪರಂಪರೆಯವರ ಜೊತೆ ಸಿನಿಮಾ ಮಾಡುವ ಭಾಗ್ಯ ನನ್ನದು” ಎಂದು ಚಂದ್ರು. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    ತಾರಾ ಅನುರಾಧ ಸಂತಾಪ 
    ನಮ್ಮ ಚಿತ್ರರಂಗದ ಹಿರಿಯರನ್ನ ಕಳೆದುಕೊಂಡಿದ್ದೇವೆ. ಅವರ ಕೆಲಸ, ಸಿನಿಮಾಗಳು ನಮಗೆ ಅವರ ನೆನಪು ಉಳಿಯುವಂತೆ ಮಾಡುತ್ತವೆ ಎಂದಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಅನುರಾಧ.

  • ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಇಂದು ಅಗಲಿರುವ ಹಿರಿಯ ನಟ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ಅವರನ್ನು ವಿದ್ಯಾಸಾಗರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇವರ ನಟನೆಯ ಮೊದಲ ಸಿನಿಮಾದ ಟೈಟಲ್ ಕಾರ್ಡ್ ನಲ್ಲೂ ವಿದ್ಯಾಸಾಗರ್ ಎಂದೇ ಇದೆ. ಈ ಸಿನಿಮಾದ ನಂತರ ಅವರ ಹೆಸರು ರಾಜೇಶ್ ಅಂತಾಯಿತು. ಹೀಗೆ ಹೆಸರು ಬದಲಾಯಿಸಿದವರು ಕನ್ನಡದ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


    ರಾಜೇಶ್ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಏನೂ ಅಲ್ಲ. ವಿದ್ಯಾಸಾಗರ್ ಹೆಸರಿನಲ್ಲಿ ಆಗಲೇ ಅವರು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗಕ್ಕೆ ಕರೆದು ತಂದಿತ್ತು. 1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ


    ರಾಜೇಶ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಸಿ.ವಿ.ಶಿವಶಂಕರ್ ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ. ಈ ಚಿತ್ರದಿಂದ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಸಿಕ್ಕಿದೆ. ಅಲ್ಲಿಂದ ಅವರು ಈವರೆಗೂ ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.

  • ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಇಂದು ತೆರೆ ಕಂಡ ‘ಬೈ ಟು ಲವ್’ ಚಿತ್ರದ ಹೀರೋ ಧನ್ವೀರ್ ಮತ್ತು ಅವರ ಬೌನ್ಸರ್ ಸೇರಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬಕ್ಕೆ ಬಿರಿಯಾನಿ ಊಟ, ಹೆಲಿಕಾಪ್ಟರ್ ನಿಂದ ಹೂಮಳೆ : ಇನ್ನೇನಿದೆ ವಿಶೇಷ?


    ಗುರುವಾರ (ಫೆ.17) ತಡರಾತ್ರಿ ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಚಿತ್ರಮಂದಿರದ ಬಳಿ ಧನ್ವೀರ್ ಮತ್ತು ಅವರ ಅಂಗರಕ್ಷರಿದ್ದರು. ತಡರಾತ್ರಿ ಊಟ ಮುಗಿಸಿಕೊಂಡು ಅದೇ ರಸ್ತೆಯಲ್ಲೇ ಹೊರಟಿದ್ದ ಚಂದ್ರಶೇಖರ್, ನೆಚ್ಚಿನ ನಟನನ್ನು ಕಂಡು ಒಂದು ಫೋಟೋ ಕೇಳಿದ್ದಾರೆ. ಸೆಲ್ಫಿ ಕೊಡಲು ಧನ್ವೀರ್ ನಿರಾಕರಿಸಿದರು ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಅಭಿಮಾನಿ ಮತ್ತೆ ಮತ್ತೆ ಫೋಟೋಗಾಗಿ ಪೀಡಿಸಿದ್ದಾನೆ. ಯಾವುದೇ ಕಾರಣಕ್ಕೂ ಅಭಿಮಾನಿಯ ಬೇಡಿಕೆಗೆ ಸ್ಪಂದಿಸದೇ ಇರುವ ಕಾರಣಕ್ಕಾಗಿ ಅಭಿಮಾನಿ ಮತ್ತು ಧನ್ವೀರ್ ಅವರ ಅಂಗರಕ್ಷಕರ ನಡುವೆ ಮಾತಿನ ಸಮರವೇ ನಡೆದು, ಆನಂತರ ಅಭಿಮಾನಿ ಮೇಲೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ : ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್


    ಈ ಕುರಿತು ಧನ್ವೀರ್ ಈವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದರಿಂದ, ಧನ್ವೀರ್ ಪೊಲೀಸ್ ಠಾಣೆಗೆ ಬರುವ ಅನಿವಾರ್ಯತೆ ಎದುರಾಗಿದೆ.

  • ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್

    ವೈರಲ್ ಆಯ್ತು ಕಿಚ್ಚನ ಮನೆಯ ಸ್ಕೂಟಿ ಟೇಬಲ್

    ನೆಚ್ಚಿನ ನಟನ ಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರ ಅಭಿಮಾನಿಗಳಿಗೆ ಯಾವತ್ತಿಗೂ ಕುತೂಹಲ. ಇವತ್ತು ಕಿಚ್ಚ ಸುದೀಪ್ ಅವರ ಮನೆಯ ವಿಶೇಷ ಟೇಬಲ್ ವೊಂದು ಫೋಟೋ ರೂಪದಲ್ಲಿ ಆಚೆ ಬಂದಿದೆ. ಸದ್ಯ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ : ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ


    ಅಷ್ಟಕ್ಕೂ ಈ ಟೇಬಲ್ ವಿಶೇಷ ಅಂದರೆ, ಸ್ಕೂಟರ್ ಮೇಲೆ ತಯಾರಾದ ಟೇಬಲ್ ಅದಾಗಿದ್ದು, ಸುಸಜ್ಜಿತ ಸ್ಕೂಟರ್ ನಲ್ಲಿ ಸೀಟ್ ಬದಲಾಗಿ ಟೇಬಲ್ ಅಳವಡಿಸಿದ್ದಾರೆ. ಸ್ಕೂಟರಿನ ವ್ಹೀಲ್ ಜತೆಗೆ ಟೇಬಲ್ ಗೂ ನಾಲ್ಕು ಚಕ್ರಗಳನ್ನು ಹಾಕಲಾಗಿದೆ. ಆರಾಮಾಗಿ ಕುಳಿತುಕೊಳ್ಳುವಂತೆ ಅದನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ಓದಿ : ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ


    ಸದ್ಯ ಹರಿದಾಡುತ್ತಿರುವ ಆ ಫೋಟೋದಲ್ಲಿ ಕಿಚ್ಚ ಸುದೀಪ್ ಕಾಫಿ ಕಪ್ ಜತೆ ಟೇಬಲ್ ಮೇಲೆ ಕೂತಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಟೇಬಲ್ ಗೆ ಒರಗಿಕೊಂಡು ಎದ್ದು ನಿಂತಿದ್ದಾರೆ. ಈ ಫೋಟೋವನ್ನು ಸುದೀಪ್ ಅವರ ಫೆವರೆಟ್ ಕಿಚನ್ ಮುಂದೆಯೇ ತಗೆಯಲಾಗಿದೆ.

  • ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ

    ಯದುವೀರನಿಗಾಗಿ ಕನ್ನಡಕ್ಕೆ ವಾಪಸ್ಸಾದ ನೇಹಾ ಶೆಟ್ಟಿ

    ಗಣೇಶ್ ನಟನೆಯ ‘ಮುಂಗಾರು ಮಳೆ 2’ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದ ಕರಾವಳಿ ಬೆಡಗಿ ನೇಹಾ ಶೆಟ್ಟಿ, ಆನಂತರ ಅವರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಮುಂಗಾರು ಮಳೆ 2 ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ ಎನ್ನುವ ಕಾರಣಕ್ಕೋ ಏನೋ, ಸ್ಯಾಂಡಲ್ ವುಡ್ ನೇಹಾ ಶೆಟ್ಟಿಗೆ ಮತ್ತೆ ಅವಕಾಶ ಕೊಡಲಿಲ್ಲ. ಹಾಗಾಗಿ ಅವರು ತೆಲುಗು ಸಿನಿಮಾ ರಂಗದತ್ತ ಮುಖ ಮಾಡಿದರು. ಇದನ್ನು ಓದಿ : ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ


    ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ‘ಮೆಹಬೂಬು’ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಈ ಸಿನಿಮಾ ತಕ್ಕಮಟ್ಟಿಗೆ ಹಿಟ್ ಆಯಿತು ಮತ್ತು ಪುರಿ ಜಗನ್ನಾಥ್ ಪರಿಚಯಿಸಿದ ನಟಿ ಅನ್ನುವ ಕಾರಣಕ್ಕೆ ಅಲ್ಲಿ ಅವರಿಗೆ ಅವಕಾಶ ಸಿಕ್ಕವು. ಹಾಗಾಗಿ ಒಂದರ ಮೇಲೊಂದು ಅವರು ಸಿನಿಮಾ ಮಾಡುತ್ತಲೇ ಹೋದರು. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ

    ಮೊನ್ನೆಯಷ್ಟೇ ನೇಹಾ ಶೆಟ್ಟಿ ನಟನೆಯ ‘ಡಿಜೆ ಟಿಲ್ಲು’ ಚಿತ್ರ ಬಿಡುಗಡೆ ಆಗಿದೆ. ಈ ಸಿನಿಮಾ ಭಾರೀ ಸದ್ದು ಕೂಡ ಮಾಡಿತು. ಅಲ್ಲಿಂದ ಅವರಿಗೆ ಅದೃಷ್ಟ ಖುಲಾಯಿಸಿದೆ. ಹಾಗಾಗಿ ಅವರನ್ನು ಮತ್ತೆ ಕನ್ನಡಕ್ಕ ತರುವ ಪ್ರಯತ್ನ ನಡೆದಿದೆ. ಇದನ್ನೂ ಓದಿ : ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ


    ಸದ್ಯ ನೇಹಾ ಶೆಟ್ಟಿ ಕನ್ನಡದತ್ತ ಮತ್ತೆ ಮುಖ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಟನೆಯ ‘ಯದುವೀರ’ ಚಿತ್ರಕ್ಕೆ ಇವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿಯಿದೆ. ಚಿತ್ರತಂಡ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಚಿತ್ರತಂಡದ ಸದಸ್ಯರ ಮಾಹಿತಿಯ ಪ್ರಕಾರ, ಭಾರೀ ಮೊತ್ತದ ಸಂಭಾವನೆಯನ್ನೇ ನೀಡಿ ನೇಹಾ ಅವರನ್ನು ಕರೆತರಲಾಗುತ್ತಿದೆಯಂತೆ. ಇದನ್ನೂ ಓದಿ : ರಕ್ತದಾನ ಮಾಡಿದ ಹೃತಿಕ್ ರೋಷನ್


    ಮೊನ್ನೆಯಷ್ಟೇ ಯದುವೀರ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿತ್ತು ಚಿತ್ರತಂಡ. ಸಿನಿಮಾದ ಚಿತ್ರೀಕರಣಕ್ಕೂ ಸಿದ್ಧತೆ ಮಾಡಿಕೊಂಡಿದೆ. ಕೆಲವೇ ದಿನಗಳಲ್ಲಿ ನಾಯಕಿಯ ಬಗ್ಗೆ ಚಿತ್ರತಂಡವೇ ಮಾಹಿತಿ ಕೊಡಬಹುದು.

  • ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    ಸಾಮಾನ್ಯವಾಗಿ ಕನ್ನಡದ ನಟಿಯರು ತೆಲುಗು, ತಮಿಳು ಸಿನಿಮಾ ರಂಗಕ್ಕೆ ಹಾರುವುದನ್ನು ಕಂಡಿದ್ದೇವೆ. ಕೆಲ ನಟಿಮಣಿಯರಂತೂ ಕನ್ನಡ ಸಿನಿಮಾ ರಂಗವನ್ನೂ ಮರೆತು ಕಾಲಿವುಡ್, ಟಾಲಿವುಡ್ ನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಆದರೆ, ಈ ನಟಿಯರು ಇನ್ನಷ್ಟು ದೂರ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುತ್ತಲೇ ಭೋಜಪುರಿ ಚಿತ್ರಗಳಿಗೂ ಸಹಿ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಚಿಟ್ಟೆ ಖ್ಯಾತಿಯ ಹರ್ಷಿಕಾ ಪೂಣಚ್ಚ ಮತ್ತು ಕಾರುಣ್ಯ ರಾಮ್. ಇದನ್ನು ಓದಿ :ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ


    ಹರ್ಷಿಕಾ ಅವರಿಗೆ ಭೋಜಪುರಿ ಸಿನಿಮಾ ಹೊಸದಲ್ಲ. ಈಗಾಗಲೇ ಅವರು ‘ಹಮ್ ಹೈನಾ ರಾಹಿ ಪ್ಯಾರ್ ಕೆ’ ಎಂಬ ಭೋಜಪುರಿ ಚಿತ್ರದಲ್ಲಿ ನಟಿಸಿ ಆಗಿದೆ. ಆ ಸಿನಿಮಾ ಬಿಡುಗಡೆ ಕೂಡ ಆಗಿದೆ. ಈಗ ಮತ್ತೊಂದು ಭೋಜಪುರಿ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಭೋಜಪುರಿ ವಿಮಾನ ಏರಿದ್ದಾರೆ. ಪ್ರೇಮಾಂಶು ಸಿಂಗ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದೆ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?


    ಸದ್ಯಕ್ಕೆ ಹರ್ಷಿಕಾ ಅವರು ಕನ್ನಡದಲ್ಲಿ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಸಾಕಷ್ಟು ಕಥೆಗಳನ್ನು ಕೇಳಿದ್ದಾರಂತೆ. ಜತೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ಅವರು ನಿರತರಾಗಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಪೆಟ್ರೋಮ್ಯಾಕ್ಸ್ ಸಿನಿಮಾದ ಬಿಡುಗಡೆಗಾಗಿ ಕಾದಿರುವ ಕಾರುಣ್ಯ ರಾಮ್ ಕೂಡ ಭೋಜಪುರಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಸಿನಿಮಾದ ಶೂಟಿಂಗ್ ಗೂ ಅವರು ತೆರಳಲಿದ್ದಾರೆ. “ಭೋಜಪುರಿ ಸಿನಿಮಾ ಒಪ್ಪಿಕೊಂಡಿದ್ದು ನಿಜ. ವಿದೇಶದಲ್ಲೂ ನನ್ನ ಭಾಗದ ಚಿತ್ರೀಕರಣ ಆಗಲಿದೆ. ಈ ಚಿತ್ರದ ಬಗ್ಗೆ ಸಿನಿಮಾ ತಂಡವೇ ಮಾಹಿತಿ ನೀಡಲಿದೆ” ಎನ್ನುತ್ತಾರೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಅಂದಹಾಗೆ ಈ ಇಬ್ಬರೂ ನಾಯಕಿಯರ ಚಿತ್ರಗಳನ್ನು ಒಂದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿರುವುದು ಮತ್ತೊಂದು ವಿಶೇಷ.

  • ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ

    ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ

    ಸಿದ್ಧಾರ್ಥ್, ರನ್ ಆಂಟನಿ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿನಯ್ ರಾಜ್ ಕುಮಾರ್ ಇದೀಗ ರಕ್ತ, ಲಾಂಗುಗಳಿಗೆ ಮೊರೆ ಹೋಗಿದ್ದಾರೆ. ಈಗಷ್ಟೇ ಪೆಪೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?

    ಈ ಹಿಂದಿನ ಸಿನಿಮಾಗಳಲ್ಲಿ ಕ್ಯೂಟ್ ಲವರ್ ಬಾಯ್ ಆಗಿದ್ದ ದೊಡ್ಮನೆ ಕುಡಿ, ಏಕಾಏಕಿ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಅವರದ್ದು ಯಾವ ರೀತಿಯ ಪಾತ್ರ ಎನ್ನುವ ಚರ್ಚೆ ಕೂಡ ನಡೆದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಸದ್ಯ ಬಿಡುಗಡೆ ಆಗಿರುವ ಟೀಸರ್ ನೋಡಿದರೆ, ವಿನಯ್ ರಾಜ್ ಕುಮಾರ್ ಲವರ್ ಬಾಯ್ ಇಮೇಜಿಂದ ಹೊರ ಬಂದಿದ್ದು ಖಚಿತ. ಅದೊಂದು ಗ್ಯಾಂಗ್ ಸ್ಟಾರ್ ಮಾದರಿಯ ಪಾತ್ರವಾಗಿದ್ದರಿಂದ ಇಂತಹ ಲುಕ್ ಕೊಟ್ಟಿದೆಯಂತೆ ಚಿತ್ರತಂಡ. “ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಅದೇ ಅಂತೆ ಜೀವ” ಹೀಗೆ ಮಾಸ್ ಪಂಚಿಂಗ್ ಡೈಲಾಗ್​​​​ಗಳಿಂದ ಕೂಡಿರುವ ಪೆಪೆ ಟೀಸರ್ ಪಾತ್ರದ ಹಲವು ಹಿನ್ನೆಲೆಗಳನ್ನು ಹೇಳುತ್ತದೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ಶ್ರೀಲೇಶ್ ಎಸ್. ನಾಯರ್ ನಿರ್ದೇಶನದಲ್ಲಿ ಪೆಪೆ ಸಿನಿಮಾ ಮೂಡಿ ಬಂದಿದ್ದು, ಸಮರ್ಥ ಉಪಾಧ್ಯ ಅವರ ಸಿನಿಮಾಟೋಗ್ರಫಿ ಇದೆ. ಉದಯಶಂಕರ. ಎಸ್ ಈ ಸಿನಿಮಾದ ನಿರ್ಮಾಪಕರು.

  • ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ಸಲಗದ ನಂತರ ಮತ್ತೆ ನಿರ್ದೇಶನಕ್ಕೆ ದುನಿಯಾ ವಿಜಯ್

    ದುನಿಯಾ ವಿಜಯ್ ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಯೊಂದಿಗೆ ಶುರುವಾದ ‘ಸಲಗ’ ಸಿನಿಮಾ, ಇದೀಗ ಯಶಸ್ಸಿನ ಕಿರೀಟ ತೊಟ್ಟುಕೊಂಡಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲಿಯೇ ಗೆದ್ದು ಬೀಗುತ್ತಿರುವ ದುನಿಯಾ ವಿಜಯ್, ಸದ್ಯದಲ್ಲೇ ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದುನಿಯಾ ಅಂಗಳದಿಂದ ಬಂದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಸಲಗ ಸೋತರೂ, ಗೆದ್ದರೂ ತಾವು ನಟನೆಯ ಜತೆಗೆ ನಿರ್ದೇಶನದಲ್ಲೂ ಮುಂದುವರೆಯುವುದಾಗಿ ದುನಿಯಾ ವಿಜಯ್ ಈ ಹಿಂದೆಯೇ ಹೇಳಿದ್ದರು. ಅಂದುಕೊಂಡ ಕನಸು ಅವರನ್ನು ಕೈ ಬಿಡಲಿಲ್ಲ. ಪ್ರೇಕ್ಷಕ ಸಲಗ ಗೆಲ್ಲಿಸಿಬಿಟ್ಟ. ಹಾಗಾಗಿ ನಿರ್ದೇಶಕನಾಗುವ ಹುರುಪು ಇಮ್ಮಡಿಯಾಗಿದೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಸದ್ಯ ಹೊಸ ಸಿನಿಮಾದ ಕಥೆ ಬರೆಯುವುದರಲ್ಲಿ ವಿಜಯ್ ತೊಡಗಿಕೊಂಡಿದ್ದಾರೆ. ಈ ಬಾರಿಯೂ ಅವರು ರಾ ಆಗಿರುವಂತಹ ಕಥೆಯನ್ನೇ ಸಿನಿಮಾ ಮಾಡಲಿದ್ದಾರಂತೆ. ಪಕ್ಕಾ ಮಾಸ್ ಸಿನಿಮಾ ಅದಾಗಿದ್ದು, ನಿರ್ದೇಶನದ ಜತೆಗೆ ನಟನೆಯನ್ನೂ ಮಾಡುತ್ತಾರಾ ಅಥವಾ ಬೇರೆ ಕಲಾವಿದರಿಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಅಂದುಕೊಂಡಂತೆ ಆದರೆ, ಶಿವರಾತ್ರಿ ಹೊತ್ತಿಗೆ ಈ ಸಿನಿಮಾದ ಮುಹೂರ್ತ ನಡೆಯಲಿದೆ. ಅಲ್ಲಿಯವರೆಗೂ ಸಂಭಾಷಣೆಕಾರ ಮಾಸ್ತಿ ಮತ್ತು ದುನಿಯಾ ವಿಜಯ್ ಸ್ಕ್ರಿಪ್ಟ್ ಬರೆಯುವುದರಲ್ಲಿ ಮಗ್ನರಾಗಿರುತ್ತಾರೆ. ಜತೆ ಜತೆಗೆ ಕಲಾವಿದರ ಆಯ್ಕೆ ಕೂಡ ನಡೆಯಲಿದೆಯಂತೆ. ಎರಡನೇ ಸಿನಿಮಾಗೆ ನಿರ್ದೇಶನ ಮಾಡುವುದು ಪಕ್ಕಾ ಆಗಿದ್ದು, ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?

    ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆ ಆಗದೇ ಉಳಿದಿದ್ದವು. ಸರಕಾರದ ನಿಯಮ, ದೊಡ್ಡ ಚಿತ್ರಗಳ ಹಾವಳಿ, ಪರಭಾಷಾ ಚಿತ್ರಗಳ ಬಿಡುಗಡೆಯಿಂದಾಗಿ ಸಣ್ಣ ಬಜೆಟ್ ಚಿತ್ರಗಳು ಥಿಯೇಟರ್ ಸಿಕ್ಕಿರಲಿಲ್ಲ. ಈಗ ಕೋವಿಡ್ ನಿಯಮಗಳು ಸಡಿಲವಾಗಿವೆ. ಭಾರೀ ಬಜೆಟ್ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿರುವ ಕಾರಣದಿಂದಾಗಿ ಈ ವಾರ ಸ್ಯಾಂಡಲ್ ವುಡ್ ನಲ್ಲಿ ಬರೋಬ್ಬರಿ 11 ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದನ್ನೂ ಓದಿ : ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?


    ಕೋವಿಡ್ ನಂತರ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿವೆ. ಪ್ರೇಕ್ಷಕರ ಕೊರತೆಯ ಕಾರಣದಿಂದಾಗಿ ಅನೇಕ ಚಿತ್ರಮಂದಿರಗಳನ್ನೂ ಈಗಲ ಮಾಲೀಕರ ತೆರೆದಿಲ್ಲ. 11 ಚಿತ್ರಗಳಿಗೆ ಥಿಯೇಟರ್ ಸಿಗುತ್ತಾ ಎನ್ನುವ ಗೊಂದಲ ಕೂಡ ಮೂಡಿದೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ


    ‘ಭಾವಚಿತ್ರ’, ‘ಬಹುಕೃತ ವೇಷಂ’, ‘ಬೈ ಟು ಲವ್’, ‘ಧೋಖಾ ದೋಸ್ತಿ’, ‘ಫ್ಯಾಮಿಲಿ ಪ್ಯಾಕ್’, ‘ಗರುಡಾಕ್ಷ’, ‘ಗಿಲ್ಕಿ’, ‘ಮಹಾ ರುದ್ರಂ’, ‘ವರದ’ ಹಾಗೂ ತುಳುವಿನ ‘ಭೋಜರಾಜ ಎಂಬಿಬಿಎಸ್’ ಈ ವಾರ ಬಿಡುಗಡೆ ಆಗುತ್ತಿರುವ ಚಿತ್ರಗಳು. ಇಷ್ಟು ಸಿನಿಮಾಗಳಲ್ಲಿ ‘ಫ್ಯಾಮಿಲಿ ಪ್ಯಾಕ್’ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆದರೆ, ಉಳಿದವುಗಳು ನೇರವಾಗಿ ಚಿತ್ರಮಂದಿರಗಳಲ್ಲೇ ತೆರೆ ಕಾಣುತ್ತಿವೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಈ ಸಿನಿಮಾಗಳಲ್ಲಿ ಸ್ಟಾರ್ ಸಿನಿಮಾಗಳು ಇರದೇ ಹೋದರು, ನಿರೀಕ್ಷಿತ ಚಿತ್ರಗಳಂತೂ ಇವೆ. ಅವುಗಳನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.


    ಒಂದು ಅಂದಾಜಿನ ಪ್ರಕಾರ ಈಗಾಗಲೇ ಸೆನ್ಸಾರ್ ಆಗಿ ಬಿಡುಗಡೆಗೆ ಕಾದಿರುವ ಚಿತ್ರಗಳ ಸಂಖ್ಯೆ 400ಕ್ಕೂ ಹೆಚ್ಚು. ಕಳೆದ ವರ್ಷ ರೆಡಿಯಾದ ಚಿತ್ರಗಳ ಪಟ್ಟಿಯೂ ಮತ್ತೊಂದಿದೆ. ಈ ನಡುವೆ ಪುನೀತ್ ನಟನೆಯ ‘ಜೇಮ್ಸ್’, ಸುದೀಪ್ ನಟನೆಯ ‘ವಿಕ್ರಾಂತ್ ರೋಣ, ಯಶ್ ನಟನೆಯ ‘ಕೆಜಿಎಫ್ 2’, ತೆಲುಗಿನ ‘ಆರ್.ಆರ್.ಆರ್’ ಸೇರಿದಂತೆ ಭಾರೀ ಬಜೆಟ್ ಚಿತ್ರಗಳು ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿವೆ. ಹಾಗಾಗಿ ಸಿಕ್ಕಿರುವ ಸಮಯದಲ್ಲೇ ಸಾಕಷ್ಟು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.