Tag: FIFA World Cup

  • ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

    ಮಾಸ್ಕೋ: ಇಂಜುರಿ ಟೈಂನ ಕೊನೆಯ ಕ್ಷಣದಲ್ಲಿ (90+4ನೇ ನಿಮಿಷ) ಮಿಡ್‍ಫೀಲ್ಡರ್ ನಾಸೆರ್ ಚಾಡ್ಲಿ ಗಳಿಸಿದ ಸುಂದರ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ರೋಚಕವಾಗಿ ಮಣಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ರೋಸ್ಟೋವ್ ಅರೆನಾದಲ್ಲಿ ನಡೆದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು 2 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್, ನಂತರದಲ್ಲಿ 3 ಗೋಲು ಬಿಟ್ಟುಕೊಟ್ಟು ಕೂಟದಿಂದಲೇ ಹೊರನಡೆಯಿತು.

    ಗೋಲು ರಹಿತ ಮೊದಲಾರ್ಧದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಪಾನ್, 48ನೇ ನಿಮಿಷದಲ್ಲಿ ಶಿಬಾಸ್ಕಿ ನೀಡಿದ ಪಾಸ್ ಮೂಲಕ ಮಿಡ್ ಫೀಲ್ಡರ್ ಜೆಂಕಿ ಹರಗುಚಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು. ಮೊದಲನೇ ಗೋಲು ದಾಖಲಿಸಿ ನಾಲ್ಕು ನಿಮಿಷ ಕಳೆಯುವಷ್ಟರಲ್ಲಿಯೇ ಎರಡನೇ ಗೋಲು ದಾಖಲಿಸಿದ ಜಪಾನ್, ಬೆಲ್ಜಿಯಂಗೆ ಡಬಲ್ ಶಾಕ್ ನೀಡಿತು.

    52ನೇ ನಿಮಿಷದಲ್ಲಿ ಕಗಾವಾ ಅಸಿಸ್ಟ್ ನೆರವಿನಿಂದ ಚೆಂಡನ್ನು ಪಡೆದ ತಕಾಶಿ ಇನೂಯ್, ಡಿ ಬಾಕ್ಸ್‍ನ ಹೊರಗಡೆಯಿಂದಲೇ ಗೋಲ್ ಪೋಸ್ಟ್ ನ ಬಲತುದಿಯನ್ನು ಗುರಿಯಾಗಿಸಿ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಗುರಿ ಸೇರಿತು. 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಜಪಾನ್ ಪಂದ್ಯ ಗೆದ್ದೇ ಬಿಟ್ಟಿತು ಎಂಬ ವಿಶ್ವಾಸದಲ್ಲಿರುವಾಗಲೇ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದ ಬೆಲ್ಜಿಯಂ, ಜಪಾನ್ ತಂಡ ಬೆಚ್ಚಿಬೀಳುವಂತೆ ಮಾಡಿತು.

    69ನೇ ನಿಮಿಷದಲ್ಲಿ ಡಿ ಬಾಕ್ಸ್‍ನಿಂದಲೇ ಆಕರ್ಷಕ ಹೆಡರ್ ಮೂಲಕ ಜಪಾನ್ ಗೋಲಿ ಕವಾಶಿಮಾರನ್ನು ವಂಚಿಸಿದ ಮಿಡ್ ಫೀಲ್ಡರ್ ವೇರೊಂಗನ್ ಮೊದಲ ಗೋಲು ದಾಖಲಿಸಿದರು. ಹಝಾರ್ಡ್ ಪಾಸ್ ಅನ್ನು ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದ ಅನುಭವಿ ಅಟಗಾರ ಮರೌನೆ ಫೆಲೈನಿ 74ನೇ ನಿಮಿಷದಲ್ಲಿ ಬೆಲ್ಜಿಯಂ ಸಮಬಲ ಸಾಧಿಸುವಂತೆ ಮಾಡಿದರು. ಮತ್ತಷ್ಟು ರೋಚಕತೆಯತ್ತ ತಿರುಗಿದ ಪಂದ್ಯ ನಿಗದಿತ ಅವಧಿ ಮುಗಿದು, ಇನ್ನೇನು ಇಂಜುರಿ ಟೈಂ ಮುಗಿಯಿತು ಎನ್ನುವಷ್ಟರಲ್ಲಿ ಮಿಂಚಿನ ಕೌಂಟರ್ ಅಟ್ಯಾಕ್ ನಡೆಸಿದ ಬೆಲ್ಜಿಯಂ, ಸ್ಟಾರ್ ಅಟಗಾರ ಕೆವಿನ್ ಡಿ ಬ್ರೂನೆ, ಮಿನ್ಯೂಯೆರ್ ಶರವೇಗದಲ್ಲಿ ನೀಡಿದ ಪಾಸ್‍ಗೆ ಅಂತಿಮ ಟಚ್ ಕೊಟ್ಟ ನಾಸೆರ್ ಚಾಡ್ಲಿ, ಬೆಲ್ಜಿಯಂಗೆ ಅವಿಸ್ಮರಣೀಯ ಜಯ ತಂದಿತ್ತರು.

    ಮುನ್ನಡೆ ಸಾಧಿಸಿದ ಬಳಿಕ ರಕ್ಷಣಾ ವಿಭಾಗವನ್ನು ಹೆಚ್ಚು ಬಲಪಡಿಸಿ ಪಂದ್ಯ ಉಳಿಸಿಕೊಳ್ಳುವ ಫುಟ್ಬಾಲ್‍ನ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಕೈಬಿಟ್ಟಿದ್ದೇ ಜಪಾನ್ ಸೋಲಿಗೆ ಕಾರಣವಾಯಿತು. ಈ ಗೆಲುವಿನ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಎರಡು ಗೋಲಿನಿಂದ ಹಿಂದಿದ್ದು, ಬಳಿಕ ನಿಗದಿತ ಅವಧಿಯಲ್ಲಿ ಪಂದ್ಯ ಗೆದ್ದ ಮೊದಲ ತಂಡವೆಂಬ ದಾಖಲೆ ಬೆಲ್ಜಿಯಂ ಪಾಲಾಯಿತು.

    ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 2-0 ಗೋಲಿನ ಅಂತರದಲ್ಲಿ ಗೆದ್ದ ಬ್ರಜಿಲ್ ತಂಡವನ್ನು ಕ್ವಾರ್ಟರ್ ಫೈನಲ್‍ನಲ್ಲಿ ಬೆಲ್ಜಿಯಂ ಎದುರಿಸಲಿದೆ.

  • ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

    ನವದೆಹಲಿ: ಫುಟ್‍ಬಾಲ್ ಯು- 17 ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುವ ಭಾರತದ ತಂಡದ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾರತ ತಂಡಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.

    ಭಾರತವು ಈ ಬಾರಿಯ ಫಿಫಾ ಯು-17 ಫುಟ್‍ಬಾಲ್ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಿದ್ದು. ತವರು ನೆಲದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತದ ತಂಡ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುತ್ತಿದೆ.

    ವಿಶ್ವಕಪ್‍ನಲ್ಲಿ ಭಾಗವಹಿಸುತ್ತಿರುವ ಆಟಗಾರರಿಗೆ ಶುಭಕೋರುವ ವಿಡಿಯೋ ಒಂದನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಭಾರತದ ಕ್ರಿಕೆಟ್ ತಂಡದಲ್ಲಿದ್ದ ಸಂದರ್ಭದಲ್ಲಿ ಯುವ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದ ಸಚಿನ್ ನಿವೃತ್ತಿಯ ನಂತರವು ಯುವ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಾರೆ. ಶುಕ್ರವಾರದಿಂದ ಭಾರತದಲ್ಲಿ ಫಿಫಾ ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಈ ಸಮಯ ಎಲ್ಲರಿಗೂ ಮುಖ್ಯವಾದದ್ದು. ಟೂರ್ನಿಗೆ ಅಭಿಮಾನಿಗಳಿಂದ ಲಭಿಸಿರುವ ಬೆಂಬಲ ಅಭೂತ ಪೂರ್ವವಾಗಿದ್ದು, ಹೆಚ್ಚು ಸಂತೋಷ ಉಂಟಾಗಿದೆ. ಆದರೆ ಭಾರತದ ತಂಡದ ಆಟಗಾರರಿಗೆ ಇದು ಉತ್ತಮ ಅವಕಾಶವಾಗಿದ್ದು, ಆಟಗಾರರು ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ ಎಂದು ತಿಳಿಸಿದ್ದಾರೆ.

    ಭಾರತ ತಂಡದ ಆಟಗಾರರ ಮೇಲೆ ನನಗೆ ಸಂಪೂರ್ಣ ಭರವಸೆ ಇದ್ದು, ಉತ್ತಮ ಪ್ರದರ್ಶನವನ್ನು ನೀಡುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ವಿಶ್ವಕಪ್ ಟೂರ್ನಿಯಲ್ಲಿ ಭಾರತವು ತನ್ನ ಮೊದಲ ಪಂದ್ಯವನ್ನು ಶುಕ್ರವಾರ ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ.