Tag: fierce

  • ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಕೋಲಂಬೊ: ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಕ್ತದೊಕುಳಿಯನ್ನ ಹರಿಸಿದ್ದ ಉಗ್ರರರು ತರಬೇತಿಗಾಗಿ ಭಾರತದ ಕೇರಳ, ಬೆಂಗಳೂರು ಹಾಗು ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಈಸ್ಟರ್ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ಶ್ರೀಲಂಕಾ ತನಿಖಾ ತಂಡ ಈ ಕುರಿತು ಮಾಹಿತಿ ಪಡೆದಿದ್ದರು. ದಾಳಿ ಮುಖ್ಯ ಸಂಚುಕೋರ ಅಬ್ದುಲ್ ಜಮೀಲ್ ಲತೀಫ್ ಸೇರಿದಂತೆ ದಾಳಿಕೋರರು ಕೇರಳದ ಕೆಲ ಪ್ರದೇಶಗಳು, ಕರ್ನಾಟಕದ ಬೆಂಗಳೂರು, ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ 2015ರಲ್ಲಿ ಸಿರಿಯಾಗೆ ತೆರಳಿ ಐಸಿಸ್ ಉಗ್ರ ಸಂಘಟನೆ ಸೇರ್ಪಡೆ ಆಗಿದ್ದರು. ಆ ಬಳಿಕ ಇತರೇ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದರು ಎಂದು ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಶ್ರೀಲಂಕಾ ಸೇನಾ ಮುಖ್ಯಸ್ಥರಾಗಿರುವ ಮಹೇಶ್ ಸೇನಾ ನಾಯಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿವುದು ಹಾಗೂ ದಾಳಿ ನಡೆಸಲು ಹೆಚ್ಚಿನ ತರಬೇತಿ ಪಡೆಯುವುದು ಅವರ ಉದ್ದೇಶವಾಗಿತ್ತು ಎಂಬುದು ಸದ್ಯಕ್ಕೆ ತಿಳಿದು ಬಂದಿದೆ ಎಂದಿದ್ದಾರೆ. ಅಲ್ಲದೇ ಸಂವಹನ ಕೊರತೆಯಿಂದಲೇ ದಾಳಿಗಳನ್ನು ತಡೆಯಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಈಸ್ಟರ್ ಭಾನುವಾರದ ದಿನ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 250 ಮಂದಿ ಬಲಿಯಾಗಿದ್ದರು. ಇದರಲ್ಲಿ ಕರ್ನಾಟಕದ 7 ಮಂದಿ ಕೂಡ ಪ್ರಾಣ ತೆತ್ತಿದ್ದರು. ಈ ದಾಳಿ ಬಗ್ಗೆ ಭಾರತ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಬಾರಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿತ್ತು. ಅಲ್ಲದೇ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಮಾಹಿತಿ ಅನ್ವಯ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ರವಾನೆ ಮಾಡಿತ್ತು. ಆದರೆ ಎಚ್ಚರಿಕೆಯ ಬಳಿಕವೂ ಶ್ರೀಲಂಕಾ ಪೊಲೀಸರು ದಾಳಿಯನ್ನ ತಡೆಯಲು ವಿಫಲರಾಗಿದ್ದರು. ಭದ್ರತೆ ವಿಫಲವಾದ ಕಾರಣ ಶ್ರೀಲಂಕಾ ಆಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

  • CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    CRPF ವಾಹನ ಸ್ಫೋಟಿಸಲು ಸಂಚು – ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

    – ಸ್ವರ್ಗದಲ್ಲಿ ಮಜಾ ಮಾಡುತ್ತೇನೆ
    – ಸ್ಫೋಟಗೊಳ್ಳುವ ಮುನ್ನವೇ ಓಡಿ ಹೋದ ಉಗ್ರ
    – ಭಾರತದ ಮೇಲೆ ಪ್ರತೀಕಾರಕ್ಕೆ ಪ್ಲಾನ್

    ಶ್ರೀನಗರ: ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಲು ಸಂಚು ರೂಪಿಸಲಾಗಿತ್ತು. ಸಿಆರ್ ಪಿಎಫ್ ವಾಹನದ ಅನತಿ ದೂರದಲ್ಲಿ ಕಾರ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇತ್ತ ಸ್ಫೋಟಕ್ಕೂ ಮುನ್ನ ಸ್ಯಾಂಟ್ರೋ ಕಾರು ಚಾಲಕನಾಗಿದ್ದ ಉಗ್ರ ಓಡಿ ಹೋಗಿದ್ದನು. ಕಾರು ಚಾಲಕ ಓರ್ವ ಆತ್ಮಾಹುತಿ ದಾಳಿಕೋರ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಪೊಲೀಸರಿಗೆ ಉಗ್ರನ ಬರೆದಿದ್ದ ಪತ್ರ(ಸೂಸೈಡ್ ನೋಟ್)ವೊಂದು ಲಭ್ಯವಾಗಿದೆ.

    ಆತ್ಮಾಹುತಿ ದಾಳಿಕೋರನನ್ನು ಓವೈಸ್ ಅಮೀನ್ ಎಂದು ಗುರುತಿಸಲಾಗಿದೆ. ಓವೈಸ್ ದಾಳಿಗೂ ಮುನ್ನವೇ ಸ್ಫೋಟಕಗಳಿಂದ ಕಾರ್ ಬಿಟ್ಟು ಓಡಿ ಹೋಗಿದ್ದಾನೆ. ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಪುಟಗಳ ಪತ್ರ ದೊರೆತಿದ್ದು, ಉಗ್ರ ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದನು ಎಂಬುವುದು ಬಯಲಾಗಿದೆ. ಹೀಗಾಗಿ ಸೈನಿಕರ ವಾಹನಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಆತ್ಮಾಹುತಿ ದಾಳಿ ನಡೆಸಲು ಉಗ್ರ ಓವೈಸ್ ಪ್ಲಾನ್ ಮಾಡಿದ್ದ. ಕೊನೆ ಕ್ಷಣದಲ್ಲಿ ತನ್ನ ಸಾವಿಗೆ ಹೆದರಿದ ಓವೈಸ್, ಸೈನಿಕರ ವಾಹನದ ಕೂಗಳತೆಯ ದೂರದಲ್ಲಿ ಕಾರ್ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಇದನ್ನೂ ಓದಿ: ಏರ್ ಸರ್ಜಿಕಲ್ ಸ್ಟ್ರೈಕ್-ಪಾಕ್ ಉಗ್ರ ನೆಲೆಯ ಮೇಲೆ ಸಾವಿರ ಕೆಜಿಯ ಬಾಂಬ್ ಸಿಡಿಸಿದ ಐಎಎಫ್

    ಪತ್ರದಲ್ಲಿ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ವಿರುದ್ಧ ಪ್ರಯೋಗಿಸುವ ಪೆಲೆಟ್ ಗನ್ ಬಗ್ಗೆ ಉಲ್ಲೇಖಿಸಲಾಗಿದೆ. ಪೆಲೆಟ್ ಗನ್ ಬಳಕೆಯಿಂದಾಗಿ 18 ತಿಂಗಳ ಹಿಬಾ ನಿಸಾರ್ ಎಂಬ ಕಂದಮ್ಮ ತನ್ನ ಎಡಗಣ್ಣು ಕಳೆದುಕೊಂಡಳು. ಹಿಬಾ ಮನೆಯ ಹತ್ತಿರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಪೊಲೀಸರು ಪ್ರಯೋಗಿಸಿದ ಪೆಲೆಟ್ ಗನ್ ನಿಂದ ಅಮಾಯಕ ಬಾಲಕಿ ತನ್ನ ಕಣ್ಣು ಕಳೆದುಕೊಂಡಳು. ಕಾಶ್ಮೀರದ ಶಿಕ್ಷಕ ರಿಜ್ವಾನ್ ಅಸದ್ ಎಂಬವರನ್ನು ಪೊಲೀಸರು ತಮ್ಮ ಕಸ್ಟಡಿಯಲ್ಲಿಯೇ ಹೊಡೆದು ಕೊಲೆ ಮಾಡಿದರು. ಹೀಗಾಗಿ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಓವೈಸ್ ತನ್ನ ಸೂಸೈಡ್ ಪತ್ರದಲ್ಲಿ ಬರೆದುಕೊಂಡಿದ್ದ. ಇದನ್ನೂ ಓದಿ: ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

    ಸ್ವರ್ಗದಲ್ಲಿ ಮಜಾ ಮಾಡ್ತೇನೆ:
    ಈ ಪತ್ರ ಸಿಗುವ ವೇಳೆಗೆ ನಾನು ಸ್ವರ್ಗ ತಲುಪಿರುತ್ತೇನೆ. ಈ ಎಲ್ಲ ದೃಶ್ಯಗಳನ್ನು ನೋಡಿ ನಾನು ಸ್ವರ್ಗದಲ್ಲಿ ಮಜಾ ಮಾಡುತ್ತಿರುತ್ತೇನೆ. ಈ ಮೊದಲು ಕಾಶ್ಮೀರವನ್ನು ಸ್ವತಂತ್ರ ಮಾಡಿದ್ದರೆ, ಭಾರತ ಈ ದಿನವನ್ನು ನೋಡುತ್ತಿರಲಿಲ್ಲ. ನಮ್ಮ ಸ್ವತಂತ್ರಕ್ಕಾಗಿ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಧುಮುಕಿದ್ದೇವೆ ಎಂದು ಪತ್ರ ಬರೆದಿದ್ದ.

    ಓವೈಸ್ ಅಮಿನ್ ಯಾರು?
    ಅರ್ವಾನಿ ನಿವಾಸಿ ಯೂಸೂಫ್ ಮಲೀಕ್ ಎಂಬವರ ಪುತ್ರನಾಗಿರುವ ಓವೈಸ್ ಅಹ್ಮದ್ ಮಲೀಕ್ ಅಮೀನ್ ಸಿ ಕೆಟಗರಿಯ ಉಗ್ರನಾಗಿದ್ದನು. 2018ರ ಏಪ್ರಿಲ್ 5 ರಂದು ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಸೇರಿಕೊಂಡು ಭಯೋತ್ಪಾನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಈತ ಜಬ್ಲಿಪೋರಾ, ಅರ್ವಾನಿ ಮತ್ತು ಬಿಜ್ಬೇಹರಾ ಪ್ರದೇಶಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!

    ಶನಿವಾರ ಸ್ಫೋಟಕ್ಕಾಗಿ ಓವೈಸ್ ಹುಂಡೈ ಸ್ಯಾಂಟ್ರೋ ಕಾರು ಬಳಸಿದ್ದನು. ಕಾರಿನ ಇಂಜಿನ್ ಮತ್ತು ಚಾಸಿ ನಂಬರ್ ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ. ದಾಳಿಗಾಗಿ ಕಾರನ್ನು ಕದ್ದಿದ್ದ ಓವೈಸ್ ಬಿಡಿ ಭಾಗಗಳನ್ನು ಬದಲಿಸಿದ್ದನು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‍ಐಎ ತಿಳಿಸಿದೆ. ಇದನ್ನೂ ಓದಿ: ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    ಇಂದು ಪುಲ್ವಾಮಾದ ಲಸ್ಸಿಪುರದ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಲಷ್ಕರ್-ಎ-ತೊಯ್ಬಾದ ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. 2 ಎಕೆ ರೈಫಲ್ಸ್, 1 ಎಸ್‍ಎಲ್ ಆರ್ ಹಾಗೂ ಪಿಸ್ತೂಲನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.

    ಪುಲ್ವಾಮಾ ದಾಳಿ:
    ಫೆ. 14ರಂದು ಗುರುವಾರ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಮಾರುತಿ ಇಕೋ ಕಾರನ್ನು ಉಗ್ರ ಅದಿಲ್ ದಾರ್ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು. ಆ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣವೇ ಏರ್ಪಟ್ಟಿತ್ತು. ಬಳಿಕ ಭಾರತೀಯ ವಾಯುಸೇನೆ ಪಾಕ್ ಗಡಿಯೊಳಗೆ ನುಗಿ ಉಗ್ರರ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಇದನ್ನೂ ಓದಿ: ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

  • ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ

    ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ

    ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧರೊಬ್ಬರನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ದಿಂದ ಅಪಹರಿಸಲಾಗಿದೆ.

    ಅಪಹರಣಗೊಂಡ ಯೋಧನನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು ಪೂಂಚ್ ನ ನಿವಾಸಿಯಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಪುಲ್ವಾಮಾದಲ್ಲಿ ಶಸ್ತ್ರ ಸಜ್ಜಿತ ಉಗ್ರರು ಸುತ್ತುವರಿದು ಅಪಹರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರಾಗಿರುವ ಔರಂಗಜೇಬ್ ಅಪಹರಣದ ತನಿಖೆಯನ್ನು ಜಮ್ಮು ಕಾಶ್ಮೀರದ ಪೊಲೀಸರು ಶುರುಮಾಡಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹಾಗೂ ಮತ್ತೋರ್ವ ಉಗ್ರನನ್ನು ಪುಲ್ವಾಮಾದಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು.

    ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಸಮೀರ್ ನ ಎನ್ ಕೌಂಟರ್ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಗೆ ಭಾರಿ ಹಿನ್ನೆಡೆಯಾಗಿತ್ತು.