Tag: festivals

  • ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

    ಹಬ್ಬಗಳನ್ನೂ ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿರೋದು ದುರ್ದೈವ: ಪ್ರಿಯಾಂಕ್ ಖರ್ಗೆ ವಿಷಾದ

    ಕಲಬುರಗಿ: ಇಂದಿನ ದಿನಗಳಲ್ಲಿ ಹಬ್ಬಗಳನ್ನೂ (Festivals) ಪೊಲೀಸರ ಬಂದೋಬಸ್ತ್‌ನಲ್ಲಿ ಆಚರಿಸಬೇಕಾದ ಸ್ಥಿತಿ ಬಂದಿರುವುದು ದುರ್ದೈವ. ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಷಾದ ವ್ಯಕ್ತಪಡಿಸಿದ್ದಾರೆ.

    ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಎಲ್ಲಾ ಧರ್ಮಗಳಲ್ಲೂ ಶಾಂತಿ ಕದಡುವವರು ಕೆಲವರು ಇರ್ತಾರೆ. ಕೆಲವರು ಅವರದ್ದೇ ಧರ್ಮ ಶ್ರೇಷ್ಠ ಅಂತಾ ಭಾವಿಸುತ್ತಾರೆ ಇದು ದುರ್ದೈವ. ನಾನು ಅದಮಾರ ಮಠದ ಶಾಲೆಯಲ್ಲಿ ಓದಿದ್ದೇನೆ. ಆಗ ನಮಗೆ ರಂಜಾನ್, ಗಣೇಶ್ ಹಬ್ಬ, ಕ್ರಿಸ್ಮಸ್, ರಾಮನವಮಿಗೆ ರಜೆ ಸಿಗ್ತಿತ್ತು. ರಂಜಾನ್, ರಾಮನವಮಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು ಎಂದು ಸ್ಮರಿಸಿದ್ದಾರೆ.

    ಈ ಹಿಂದೆ ರಂಜಾನ್ ಬಂದ್ರೆ ನಾವು ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬರ್ತಿದ್ವಿ, ಕ್ರಿಸ್ಮಸ್‌ಗೆ ಹೋಗಿ ಕೇಕ್ ತಿನ್ನುತ್ತಿದ್ವಿ. ಯುಗಾದಿ ಬಂದಾಗ ಅವರು ನಮ್ಮ ಮನೆಗೆ ಬಂದು ಹೋಳಿಗೆ ಊಟ ಮಾಡ್ತಿದ್ದರು. ಆದ್ರೆ ಈಗ ಎಲ್ಲ ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಣೆ ಮಾಡಬೇಕಿದೆ. 144 ಸೆಕ್ಷನ್ ವಿಧಿಸಿ ಹಬ್ಬ ಆಚರಣೆ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ. ಇದು ಯಾರಿಂದ ಮತ್ತು ಯಾಕೆ ಆಗಿದೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಆಚರಿಸಬೇಕಿದೆ. ಯಾರೋ ನಾಲ್ಕು ಜನ ಬಂದು ನಮ್ಮ ಧರ್ಮ ಶ್ರೇಷ್ಠ ಅಂತ ಹೇಳುವುದರಿಂದ ಪೊಲೀಸರು ಎಲ್ಲದಕ್ಕೂ ಭದ್ರತೆ ನೀಡಬೇಕಿದೆ. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 56 ಇಂಚಿನ ಎದೆ ಇರೋ ಮೋದಿ ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತಾಡಲಿಲ್ಲ: ಹರಿಪ್ರಸಾದ್

  • ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಸಾಮುದಾಯಿಕ ಆಚರಣೆಗಳ ಹಿಂದೆ ಆರೋಗ್ಯದ ಗುಟ್ಟು

    ಬೆಂಗಳೂರು: ವಿವಿಧ ಸಮುದಾಯಗಳು ನಿರ್ದಿಷ್ಟ ಹಬ್ಬ ಅಥವಾ ಋತುಮಾನಕ್ಕೆ ಅನುಗುಣವಾಗಿ ಆಚರಿಸುವ ಪಾರಂಪರಿಕ ಪದ್ಧತಿಗಳ ಹಿಂದೆ ಖಂಡಿತವಾಗಿಯೂ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಿರುತ್ತವೆ ಎಂದು ಯಲಹಂಕದ ಅಂತರ್ ಶಿಸ್ತೀಯ ಆರೋಗ್ಯವಿಜ್ಞಾನಗಳು ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಫುಲ್‍ಬ್ರೈಟ್ ಫೆಲೋ ಆಗಿರುವ ಹಿರಿಯ ವಿಜ್ಞಾನಿ ಡಾ.ಬಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

    ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಭಾರತೀಯ ವಿಜ್ಞಾನ ಮತ್ತು ಸಮೃದ್ಧ ಪರಂಪರೆ’ ಕುರಿತು ಸೋಮವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್ ನಲ್ಲಿ ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

    `ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಅನೇಕ ಹಳ್ಳಿಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಅನುಸರಿಸುವ ಧಾರ್ಮಿಕ ಆಚರಣೆ ಅಥವಾ ಅಡುಗೆ ವಿಧಾನಗಳ ಹಿಂದೆ ಆರೋಗ್ಯ ಕಾಪಾಡಿಕೊಳ್ಳುವಂತಹ ರಹಸ್ಯ ಅಡಗಿದೆ. ಕರಾವಳಿಯ ತುಳು ಜನಾಂಗದವರು ಆಷಾಢ ಅಮಾವಾಸ್ಯೆಯ ದಿನ ಮದ್ದಾಲೆ ಮರದ ಎಲೆಯ ಕಷಾಯವನ್ನು ಆಟಿ ಕಷಾಯ ಎಂದು ಸೇವಿಸುತ್ತಾರೆ. ಅತಿಹೆಚ್ಚು ಮಳೆ ಬೀಳುವ ಆ ಪ್ರದೇಶದಲ್ಲಿ ಆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಲೇರಿಯಾ ಜ್ವರಕ್ಕೆ ಅದನ್ನು ಔಷಧವಾಗಿ ಬಳಸಲಾಗುತ್ತಿತ್ತು. ಮಲೇರಿಯಾಕ್ಕೆ ನೀಡಲಾಗುವ ಅಲೋಪತಿ ಔಷಧದಲ್ಲಿ ಇರುವ ರಾಸಾಯನಿಕ ಅಂಶಗಳು ಆ ಎಲೆಯಲ್ಲಿಯೂ ಇವೆ. ಅದನ್ನು ಹೇಗೋ ಕಂಡುಕೊಂಡ ಆ ಪ್ರದೇಶದ ಹಿರಿಯರು ಅದನ್ನು ಹಬ್ಬದ ಆಚರಣೆಯ ರೀತಿಯಲ್ಲಿ ಅನುಸರಿಸಿದರು.

    ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ತಿಮ್ಮಪ್ಪನ ದೇವಾಲಯದಲ್ಲಿ ಪ್ರತಿವರ್ಷ ತಾವರೆ ಎಲೆಯಲ್ಲಿ ಪ್ರಸಾದ ಬಡಿಸಲಾಗುತ್ತಿದ್ದು, ನೂರಾರು ಜನ ಅಲ್ಲಿ ತಾವರೆ ಎಲೆಯಲ್ಲಿ ಪ್ರಸಾದ ಸೇವಿಸುತ್ತಾರೆ. ಸುಮಾರು ನೂರು ವರ್ಷಗಳ ಹಿಂದೆ ಆ ಹಳ್ಳಿಯಲ್ಲಿ ಕಾಲರಾ ಕಾಣಿಸಿಕೊಂಡಿತ್ತು ಅದಕ್ಕೆ ಮದ್ದಾಗಿ ಇದನ್ನು ಬಳಕೆಗೆ ತರಲಾಯಿತು. ಕಾಲರಾ ಇಲ್ಲದಿದ್ದರೂ ಪ್ರತಿವರ್ಷ ಅದನ್ನು ಪಾರಂಪರಿಕವಾಗಿ ಆಚರಿಸಲಾಗುತ್ತಿದೆ. ಏಕಾದಶಿ ಉಪವಾಸದ ಮಾರನೇ ದಿನ ಅಗಸೆ ಸೊಪ್ಪನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಉಪವಾಸದಿಂದ ದೇಹದಲ್ಲಿ ಉತ್ಪತ್ತಿಯಾದ ಅತಿಯಾದ ಪಿತ್ತವನ್ನು ಅದು ಕಡಿಮೆ ಮಾಡುತ್ತದೆ’ ಎಂದು ಸೋಮಶೇಖರ್ ಅವರು ವಿವರಿಸಿದರು.

    ಭಾರತದ ಪ್ರಸಿದ್ಧ ಗಣಿತಜ್ಞ `ಶ್ರೀನಿವಾಸ್ ರಾಮಾನುಜಮ್’ ಕುರಿತು ಮಾತನಾಡಿದ ಹಿರಿಯ ಡೇಟಾ ವಿಜ್ಞಾನಿ ಡಾ.ಉದಯ್ ಶಂಕರ್ ಪುರಾಣಿಕ್, ಈಗ ನಾವು ನಿತ್ಯ ಬಳಸುವ ಸ್ಕ್ಯಾನರ್, ಪ್ರಿಂಟರ್ ಹಾಗೂ ವೈದ್ಯಕೀಯ ಉಪಕರಣಗಳಲ್ಲಿ ಶ್ರೀನಿವಾಸ್ ರಾಮಾನುಜಮ್ ಕಳೆದ ಶತಮಾನದಲ್ಲೇ ಮಂಡಿಸಿದ್ದ ಗಣಿತ ಸೂತ್ರಗಳು ಬಳಕೆಯಾಗುತ್ತಿವೆ. ಮುಂದೊಂದು ದಿನ ಜಗತ್ತು ತಾಂತ್ರಿಕವಾಗಿ ಇಷ್ಟೊಂದು ಮುಂದುವರಿಯಲಿದೆ ಎಂಬ ಕಲ್ಪನೆ ರಾಮಾನುಜಮ್ ಅವರಿಗೆ ಇರಲಿಕ್ಕಿಲ್ಲ. ಆದರೆ ಅವರು ಮಂಡಿಸಿದ ಸೂತ್ರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಡಿಸೆಂಬರ್ 22 ಶ್ರೀನಿವಾಸ್ ರಾಮಾನುಜಮ್ ಹುಟ್ಟುಹಬ್ಬವಾಗಿರುವುದು ಒಂದು ವಿಶೇಷ.

    `ವಿಜ್ಞಾನದ ತಾತ್ವಿಕತೆ’ ಕುರಿತು ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ವಿಶ್ವೇಶ ಗುತ್ತಲ್, ವೈಜ್ಞಾನಿಕ ಸೂತ್ರವೊಂದನ್ನು ಅಂತಿಮವಾಗಿ ಮಂಡಿಸುವ ಮುನ್ನ ಹೇಗೆ ನಿಷ್ಕರ್ಷೆ ಮಾಡಲಾಗುತ್ತದೆ ಎಂದು ವಿವರಿಸಿದರು. ಪ್ರಯೋಗ ಹಾಗೂ ಸತತ ವೀಕ್ಷಣೆಯ ಮೂಲಕ ಒಪ್ಪಿಕೊಳ್ಳಲು ಸಾಧ್ಯವಾದರೆ ಮಾತ್ರ ಅಂತಹ ಸೂತ್ರವನ್ನು ವಿಜ್ಞಾನಿಗಳು, ವೈಜ್ಞಾನಿಕ ಸಂಸ್ಥೆಗಳು ಅಂಗೀಕರಿಸುತ್ತವೆ ಎಂದು ಗುತ್ತಲ್ ತಿಳಿಸಿದರು.

    ಹಿರಿಯ ಪತ್ರಕರ್ತೆಯರಾದ ಎಂ.ಪಿ.ಸುಶೀಲ, ಕೆ.ಎಚ್.ಸಾವಿತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಯಲಿಗಾರ್ ಸಂವಾದದಲ್ಲಿ ಭಾಗಿಯಾದರು. ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಅಧಿಕಾರಿ ಕೆ.ವೈ.ಜಯಂತಿ, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಕಾರ್ಯದರ್ಶಿ ಮಾಲತಿ ಭಟ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ಚಿಂತಾಮಣಿ, ಪತ್ರಕರ್ತೆಯರಾದ ಉಷಾ ಕಟ್ಟೆಮನೆ, ವಾಣಿಶ್ರೀ ಪತ್ರಿ, ಚಿತ್ರಾ ಫಾಲ್ಗುಣಿ, ಅಕ್ಷರಾ ಕುಮಾರ್ ಹಾಗೂ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

  • ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಹಬ್ಬಗಳ ಸೀಸನ್ ಬೆಂಗ್ಳೂರಿಗೆ ಟೆನ್ಶನ್- ಕೊರೊನಾ ಟೈಂನಲ್ಲಿ ಹೊಸ ಸವಾಲು

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್‍ಡೌನ್ ಇಂದು ಮುಗಿಯಲಿದೆ. ಇದೀಗ ಸಿಲಿಕಾನ್ ಸಿಟಿಗೆ ಕೊರೊನಾ ಸಂದರ್ಭದಲ್ಲಿ ಹೊಸ ಸವಾಲು ಎದುರಾಗಲಿದೆ.

    ಶ್ರಾವಣ ಮಾಸ ಆರಂಭದ ಬೆನ್ನಲ್ಲೆ ಹಬ್ಬಗಳ ಸೀಸನ್ ಆರಂಭವಾಗಲಿದೆ. ಈ ಹಬ್ಬಗಳ ಸೀಸನ್ ಬೆಂಗಳೂರಿಗೆ ಟೆನ್ಶನ್ ಆಗಿದೆ. ಈ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸಾಲಾಗಿ ಹಬ್ಬಗಳು ಶುರುವಾಗುತ್ತವೆ. ಇದರಿಂದ ಜನರ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಒಂದು ವಾರದ ಲಾಕ್‍ಡೌನ್ ತೆರವಿನ ಬಳಿಕ ಹೊಸ ಚಾಲೆಂಜ್ ಎದುರಾಗಲಿದೆ.

    ಹಬ್ಬಗಳ ಸಮಯದಲ್ಲಿ ಬೆಂಗಳೂರಿನಿಂದ ಅನೇಕರು ತಮ್ಮ ತಮ್ಮ ಊರಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತೆ. ಹೀಗಾಗಿ ಬೆಂಗಳೂರಿನಿಂದ ವೈರಸ್ ಹಳ್ಳಿಗಳ ಭಾಗಕ್ಕೆ ಶಿಫ್ಟ್ ಆಗುವ ಸಾಧ್ಯತೆಯ ಬಗ್ಗೆ ಆತಂಕ ಶುರುವಾಗಿದೆ.

    ಏಕಾಏಕಿ ಲಾಕ್‍ಡೌನ್ ತೆರವು ಇನ್ನೊಂದಿಷ್ಟು ಅವಾಂತರಕ್ಕೆ ಕಾರಣವಾಗಲಿದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ಆದಷ್ಟು ಬಿಗಿ ಕ್ರಮ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು, ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ.

    ಈಗಾಗಲೇ ಅಂತರ್ ಜಿಲ್ಲೆ ಓಡಾಟದಿಂದ ದೊಡ್ಡ ಕಂಟಕ ಎದುರಾಗಿದೆ. ಹಾಗಾಗಿ ಮುಂದಿನ ಹೆಜ್ಜೆ ಇಡೋವಾಗ ಎಚ್ವರಿಕೆಯಿಂದ ಇಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನಿಂದ ನಿರ್ಗಮನ/ ಆಗಮನದ ಬಗ್ಗೆ ನಿಗಾ ವಹಿಸಲು ಸೂಚನೆ ನೀಡುವ ಸಾಧ್ಯತೆ ಇದೆ.

  • ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಸಾಲದ ಹಣದಿಂದ ಸೀರೆ ಕೊಂಡು ಹಬ್ಬ ಮಾಡ್ತಾರೆ ಎಂದ ಮೇಲ್ವಿಚಾರಕನಿಗೆ ಶಾಸಕರಿಂದ ಕ್ಲಾಸ್

    ಮಂಡ್ಯ: ಸರ್ಕಾರ ನೀಡುವ ಎಮ್ಮೆ ಸಾಲ ಪಡೆದ ಮಹಿಳೆಯರು ಸೀರೆ ಉಟ್ಟು, ಮಾರ್ನಾಮಿ ಹಬ್ಬ ಮಾಡಿ ಸಾಲ ತೀರಿಸುತ್ತಿಲ್ಲ ಎಂದು ಮಾತಾಡಿದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೇಲ್ವಿಚಾರಕನಿಗೆ ಬಹಿರಂಗ ಸಭೆಯಲ್ಲೇ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

    ಕೃಷ್ಣರಾಜಪೇಟೆ ತಾಲ್ಲೂಕಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ, ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಚೆಕ್ ವಿತರಣಾ ಸಮಾರಂಭವನ್ನು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ತಾಲೂಕು ಮೇಲ್ವಿಚಾರಕ ನಂಜುಂಡಯ್ಯ ಎಂಬುವವರು, ಸರ್ಕಾರ ನೀಡುವ ಸಾಲ ಸೌಲಭ್ಯದ ಸಹಾಯ ಧನ ಯೋಜನೆ ದುರ್ಬಳಕೆಯಾಗುತ್ತಿದೆ. ಈ ಹಣವನ್ನು ಹಬ್ಬ ಹುಣ್ಣಿಮೆ ಮಾಡಲು, ಸೀರೆಕೊಳ್ಳಲು ಹೆಣ್ಣು ಮಕ್ಕಳು ಬಳಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.

    ಮೇಲ್ವಿಚಾರಕರ ಆರೋಪಕ್ಕೆ ಗರಂ ವೇದಿಕೆ ಮೇಲಿದ್ದ ಶಾಸಕ ನಾರಾಯಣಗೌಡ, ನನ್ನ ಸಹೋದರಿಯರನ್ನು ಅಪಮಾನ ಮಾಡುತ್ತೀದ್ದಿಯಾ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇನೆ ಲೋ…..ಎಂದು ಅವಾಚ್ಯ ಶಬ್ದ ಪ್ರಯೋಗಿಸಿದರು. ಅಲ್ಲದೇ ನಮ್ಮ ತಾಲ್ಲೂಕಿನ ಹೆಸರು ಹಾಳು ಮಾಡಲು ನೀನು ಬಂದಿದ್ದೀಯಾ. ನಮ್ಮಹೆಣ್ಣು ಮಕ್ಕಳು ನಿನ್ನ ದುಡ್ಡಲ್ಲಿ ಸೀರೆ ಉಡುತ್ತಿದ್ದಾರಾ? ನಿನ್ನ ನಂಬಿಕೊಂಡು ಹೆಣ್ಣು ಮಕ್ಕಳು ಜೀವನ ನಡೆಸುತ್ತಿಲ್ಲ. ಅವರನ್ನು ಕ್ಷಮೆ ಕೇಳು ಎಂದು ಆಕ್ರೋಶ ಹೊರಹಾಕಿದರು. ಶಾಸಕರ ಮಾತಿಗೆ ಮಣಿದು ನಂಜುಂಡಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಫಲಾನುಭವಿ ಮಹಿಳೆಯರ ಬಳಿ ಕ್ಷಮೆಯಾಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

    ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

    ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.

    ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತವರ 72 ಅನುಯಾಯಿಗಳು ಧರ್ಮದ ಉಳಿವಿಗಾಗಿ ವೀರ ಮರಣವಪ್ಪಿದ ದಿನ. ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿರುತ್ತಾರೆ.

    ಏನಿದು ಯುದ್ಧ..?
    ಇಸ್ಲಾಂ ಕೇವಲ ದೇವರ ಪ್ರಾರ್ಥನೆಯನ್ನು ಮಾತ್ರ ಹೇಳುತ್ತದೆ. ಪ್ರವಾದಿ ಮೊಹಮ್ಮದ್ ಅವರ ಉಪದೇಶಗಳನ್ನು ಅವರ ಮೊಮ್ಮಕಳು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಮೊಹಮ್ಮದ್ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿದ್ದರು.

    ಮೊಹಮ್ಮದ್ ರ ಕಾಲವಾದ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗಿದ್ದರು. ಬೀಬಿ ಫಾತಿಮಾ ಮತ್ತು ಹಜರತ್ ಅಲಿ ದಂಪತಿಯ ಮಕ್ಕಳೇ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್. ಹಜರತ್ ಅಲಿ ಅವರ ತರುವಾಯ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಸರ್ವ ದುರ್ಗುಣಗಳ ಸಂಪನ್ನನಾಗಿದ್ದ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.

    ಸಹಜವಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕವೂ ಇಮಾಮ್ ಹುಸೇನ್ ವಿರೋಧಿಸುತ್ತಾ ಬರುತ್ತಾರೆ. ಕೊನೆಗೆ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ.

    ಕರಬಲಾದತ್ತ ಪಯಣ:
    ಕೊನೆಗೆ ಇಮಾಮ್ ಹುಸೇನ್ ಅವರು ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

    ಯಾವುದೇ ಪ್ರಲೋಭಣೆಗೆ ಒಳಗಾಗದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ತಮ್ಮ ಜೀವನದ ಕೊನೆಯವರೆಗೂ ಇಮಾಮ್ ಹುಸೇನ್ ಇಸ್ಲಾಂ ಧರ್ಮದ ಉಳಿಯುವಿಕೆಗಾಗಿ ಹೋರಾಡಿದ್ದ ಧರ್ಮಗುರು.

    ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗಪಡೆದು ರಂಜಿಸುತ್ತಿದೆ. ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸುವ ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ. ಹಿಂದೂ-ಮುಸ್ಲಿಮರು ಒಂದಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತದೆ. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೇದ್ಯ ನೀಡುತ್ತಾರೆ.

    ಹಬ್ಬದ ಸಂದರ್ಭದಲ್ಲಿ ಪಿಂಜಾ ಅಥವಾ ದೇವರು ಹೊತ್ತವರಲ್ಲಿ ಭಯ, ಭಕ್ತಿ, ಹೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಭಕ್ತಾದಿಗಳು ಕೇಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಇನ್ನು ಜೀವಂತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಹುಲಿವೇಷಧಾರಿಗಳಿಗೆ ದೈವಾವೇಶ!

    ಉಡುಪಿಯಲ್ಲಿ ಹುಲಿವೇಷಧಾರಿಗಳಿಗೆ ದೈವಾವೇಶ!

    ಉಡುಪಿ: ನಿಮಗೆ ವಿಚಿತ್ರ ಅನ್ನಿಸಿದರು ನಾವೀಗ ಹೇಳುತ್ತಿರುವ ಇರುವ ಸುದ್ದಿ ಸತ್ಯ. ದೇವರು, ದೈವವೆಲ್ಲಾ ಸುಳ್ಳು ಅಂತ ಹೇಳುವ ಮಂದಿ ಕೂಡಾ ಈ ಸುದ್ದಿಯನ್ನು ಓದಬೇಕು.

    ಅಷ್ಟಮಿ, ಗಣೇಶೋತ್ಸವ ಹೀಗೆ ವಿಶೇಷ ಹಬ್ಬದ ವೇಳೆ ಕರಾವಳಿಯಲ್ಲಿ ಹುಲಿ ವೇಷದ ಕುಣಿತವಿರುತ್ತದೆ. ಯುವಕರ ಗುಂಪುಗಳು ಹುಲಿವೇಷ ಹಾಕಿ ಕುಣಿದು ಸೇವೆ ನೀಡುತ್ತಾರೆ, ಹಣ ಸಂಪಾದನೆ ಮಾಡುತ್ತಾರೆ. ಮೊನ್ನೆ ಆರಂಭವಾದ ಗಣೇಶೋತ್ಸವದ ಸಂಭ್ರಮ ಇನ್ನೂ ಮುಂದುವರಿದಿದ್ದು, ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದರು. ಈ ತಂಡ ಹಲವು ವರುಷಗಳಿಂದ ಹುಲಿವೇಷ ಧರಿಸಿ ಕುಣಿಯುವುದನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದೆ. ಕುಣಿಯುತ್ತಾ ಕುಣಿಯುತ್ತಾ ಈ ಬಾರಿ ಇಬ್ಬರು ಹುಲಿವೇಷ ಧಾರಿಗಳಿಗೆ ಏಕಾಯೇಕಿ ಆವೇಶ ಬಂದಿದೆ. ಸಂದೀಪ್ ಹಾಗೂ ಹರೀಶ್ ವಿಚಿತ್ರವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ಓಡಲು ಯತ್ನಿಸಿದ್ದಾರೆ. ಹುಲಿ ಬಿಡುವ ಮುಹೂರ್ತ ಪೂಜೆಯ ವೇಳೆ ಯಾವುದೇ ಶಕ್ತಿಯೊಂದು ಮೈಮೇಲೆ ಅವೇಶ ಗೊಂಡಂತೆ ಭಾಸವಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಈ ಕ್ಷಣಗಳು ವೈರಲ್ ಅಗಿದೆ. ಶ್ರದ್ಧೆ ಭಕ್ತಿ ಯಿಂದ ಹುಲಿವೇಷ ಧರಿಸಿದರೆ ಅವೇಶ ಬರುತ್ತೆ ಅನ್ನುವುದು ಜನ ಸಾಮಾನ್ಯರ ನಂಬಿಕೆ. ಹುಲಿವೇಷ ಹಾಕುವುದು ಕೇವಲ ಹೊಟ್ಟೆಪಾಡಿಗೆ ಅಥವಾ ಮನೋರಂಜನೆಗಲ್ಲ ಈ ವೀಷಯದ ಹಿಂದೆ ದೈವಿಕ ಆಚರಣೆ ಇದೆ. ಉಪವಾಸ ಮಾಡಿ, ಹರಕೆ ಹೊತ್ತು ಶೃದ್ಧೆಯಿಂದ ಹುಲಿವೇಷ ಧರಿಸಿದವರಿಗೆ ಆವೇಶ ಬರುತ್ತದೆ ಎಂದು ಹಿಂದಿನವರು ಹೇಳುತ್ತಾರೆ.

    ನಮಗೆ ಕೆಲವು ನಿಮಿಷ ಏನಾಗಿದೆ ಎಂಬೂದೇ ಗೊತ್ತಾಗಲಿಲ್ಲ. ವಿಚಿತ್ರ ಶಕ್ತಿ ಆವರಿಸಿದಂತಾಗಿದೆ. ಕೆಲ ಕಾಲದ ನಂತರ ಸಹಜ ಸ್ಥಿತಿಗೆ ಬಂದಿದ್ದೇವೆ. ಆಮೇಲೆ ಬಹಳ ಸುಸ್ತಾದಂತಾಗಿತ್ತು ಎಂದು ಯುವಕರಿಬ್ಬರು ಪತ್ರಿಕ್ರಿಯಿಸಿದ್ದಾರೆ.

    ತುಳುನಾಡಿನಲ್ಲಿ ವೇಷ ತೊಡುವುದು ಒಂದು ಸಂಪ್ರದಾಯ. ದೇವಿಗೆ ಹರಕೆ ಹೇಳಿ ಹುಲಿವೇಷವನ್ನು ಹಾಕುವವರಿದ್ದಾರೆ. ಮಾಂಸಾಹಾರ ತ್ಯಜಿಸಿ, ಬಹಳ ಶುದ್ಧತೆಯಲ್ಲಿ ಮಾನಸಿಕವಾಗಿ ಸಿದ್ಧವಾಗಿ ಹುಲಿವೇಷ ಹಾಕುವ ಯುವಕರನ್ನೂ ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಣುತ್ತೇವೆ. ಹುಲಿ ದೇವಿಯ ವಾಹನವಾಗಿರುವುದರಿಂದ ದೈವೀ ಶಕ್ತಿ ಆವಾಹನೆಯಾಗುತ್ತದೆ. ತೆಂಕ ನಿಡಿಯೂರಿನಲ್ಲಿ ಹುಲಿ ನರ್ತನ ಸೇವೆಗೆ ಮುನ್ನ ಧೂಪಹಾಕುವ ಸಂದರ್ಭ ಯುವಕರಲ್ಲಿ ಆವೇಶವಾಗಿದೆ. ಆಮೇಲೆ ತೀರ್ಥ ಪ್ರಸಾದ ಕೊಟ್ಟ ನಂತರ ಹುಲಿವೇಷಧಾರಿಗಳು ಆವೇಷ ಮುಕ್ತರಾಗಿದ್ದಾರೆ ಎಂದು ಧಾರ್ಮಿಕ ತಜ್ಞ ಶ್ರೀಕಾಂತ್ ಶೆಟ್ಟಿ ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿಯ ಈ ಗ್ರಾಮಗಳಲ್ಲಿ ಯುಗಾದಿ ಆಚರಣೆ ಮಾಡಿದ್ರೆ ಜೀವನವೇ ಅಂತ್ಯವಾಗುತ್ತಂತೆ!

    ಬಳ್ಳಾರಿಯ ಈ ಗ್ರಾಮಗಳಲ್ಲಿ ಯುಗಾದಿ ಆಚರಣೆ ಮಾಡಿದ್ರೆ ಜೀವನವೇ ಅಂತ್ಯವಾಗುತ್ತಂತೆ!

    ಬಳ್ಳಾರಿ: ಯುಗಾದಿ ಅಂದ್ರೆ ಹೊಸ ಸಂವತ್ಸರ, ಯುಗಾದಿಯಿಂದಲೇ ಹೊಸ ವರ್ಷದ ಆರಂಭವಾಗುತ್ತದೆ. ಪ್ರತಿ ವರ್ಷ ಯುಗಾದಿಯನ್ನು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಿ ಬೇವು ಬೆಲ್ಲ ಹಂಚಿ, ಒಬ್ಬಟ್ಟು ಹೋಳಿಗೆ ತಿಂದು ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳುತ್ತಾರೆ. ಆದ್ರೆ ಬಳ್ಳಾರಿ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಮಾತ್ರ ಯುಗಾದಿ ಆಚರಣೆ ಮಾಡಿದ್ರೆ ಮನೆಯ ಹಿರಿಯರು ಜೀವನೇ ಅಂತ್ಯವಾಗುತ್ತೆ ಅನ್ನೋ ನಂಬಿಕೆಯಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಜಾಪುರ, ಯಾಲ್ದಳ್ಳಿ, ತಿಮ್ಮಲಾಪುರ ಮತ್ತು ಹಗರಿಬೊಮ್ಮನಹಳ್ಳಿ ಹೀಗೆ ಹತ್ತಾರು ಹಳ್ಳಿಗಳಲ್ಲಿ ವಾಸಿಸುವ ಗಂಗಾಮತ, ನಾಯಕ್, ಉಪ್ಪಾರ ಜನಾಂಗದ ಜನರು ಇಂದಿಗೂ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಜೊತೆಗೆ ಯುಗಾದಿ ಹಬ್ಬದ ಮೂರು ದಿನಗಳ ವೇಳೆಯಲ್ಲಿ ಈ ಗ್ರಾಮದ ಜನರು ಹೊಸ ಬಟ್ಟೆ, ಸಿಹಿ ತಿಂಡಿ ಅಷ್ಟೇ ಅಲ್ಲ ದೇವರ ಪೂಜೆ ಸಹ ಮಾಡಲ್ಲ. ಹಿಂದೆ ಈ ಸಮಾಜದ ಹಿರಿಯರು ಯುಗಾದಿ ಹಬ್ಬದ ವೇಳೆಯಲ್ಲಿ ಬೇವು ತರಲು ಹೋಗಿ ಮೃತಪಟ್ಟ ಪರಿಣಾಮ ಈ ಗ್ರಾಮಸ್ಥರು ಇಂದಿಗೂ ಯುಗಾದಿ ಹಬ್ಬ ಅಂದ್ರೆ ಭಯ ಬಿಳುತ್ತಾರೆ.

    ಯುಗಾದಿ ಹಬ್ಬದಂದು ಸಾಕಷ್ಟು ಜನರು ಯುಗಾದಿ ಹಬ್ಬವನ್ನೆ ಹೊಸ ವರ್ಷದ ಮೊದಲ ದಿನವೆಂದು ಆಚರಣೆ ಮಾಡಿದ್ರೆ. ರೈತರು ಯುಗಾದಿ ಹಬ್ಬದಂದು ತಮ್ಮ ತಮ್ಮ ಜಮೀನುಗಳಿಗೆ ಪೂಜೆ ಸಲ್ಲಿಸಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡೋದು ರೂಡಿ. ಆದ್ರೆ ಈ ಹತ್ತಾರು ಹಳ್ಳಿಗಳಲ್ಲಿ ಯುಗಾದಿ ಆಚರಣೆ ಮಾಡಿದ್ರೆ ಕೆಡಕು ಉಂಟಾಗುತ್ತೆ ಅನ್ನೋ ಭಯ ಇಲ್ಲಿನ ಗ್ರಾಮಸ್ಥರಲ್ಲಿದೆ. ಹೀಗಾಗಿ ಇವರು ಯುಗಾದಿ ಹಬ್ಬದ ಸಂದರ್ಭದಲ್ಲಿನ ಮೂರು ದಿನಗಳ ಕಾಲ ಹೊಸ ಬಟ್ಟೆ, ಸಿಹಿ ತಿಂಡಿ, ಅಷ್ಟೇ ಅಲ್ಲ ದೇವರ ಪೂಜೆ ಸಹ ಮಾಡದೆ ಯುಗಾದಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕೆಲವರು ಗ್ರಾಮ, ಮನೆ ಕೂಡ ಬಿಟ್ಟು ಹೊರಹೋಗುವುದಿಲ್ಲ.

    ಯುಗಾದಿ ಹಬ್ಬದ ದಿನವನ್ನೆ ಹೊಸ ವರ್ಷದ ಮೊದಲ ದಿನವಾಗಿ ಆಚರಣೆ ಮಾಡೋದು ರೂಢಿ. ಅಲ್ಲದೇ ಯುಗಾದಿಯಂದು ಒಬ್ಬಟ್ಟು ಅಡುಗೆ ಮಾಡಿ, ಹೊಸ ಬಟ್ಟೆ ಧರಿಸಿ ಬೇವು ಬೆಲ್ಲ ಹಚ್ಚಿ ಸಂಭ್ರಮದಿಂದ ಹಬ್ಬ ಆಚರಿಸೋದು ಸಂಪ್ರದಾಯ. ಆದ್ರೆ ಸಂಭ್ರಮದಿಂದ ಆಚರಣೆ ಮಾಡೋ ಯುಗಾದಿ ಹಬ್ಬವನ್ನು ಹತ್ತಾರು ಹಳ್ಳಿಗಳ ಜನರು ಆಚರಣೆ ಮಾಡೋಕೆ ಭಯ ಬೀಳುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

     .

     

  • ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

    ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಚೂಢ, ಕುಷ್ಮಾಂದ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ದುರ್ಗಾಮಾತೆ, ಸಿದ್ಧಿಧತ್ರಿ ದೇವಿಗಳ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು ಖುಷಿಯ ಅಲೆಯಲ್ಲಿ ತೇಲಿದರು. ನಂತರ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ದಸರಾ ಹಬ್ಬಕ್ಕೆ ಮುನ್ನುಡಿ ಬರೆದ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಗಮನ ಸೆಳೆದರು. ಆವರಣದಲ್ಲಿ ವಿಶೇಷವಾಗಿ ರಚಿಸಿದ್ದ ಹೂವಿನ ಅಲಂಕಾರವುಳ್ಳ ರಂಗೋಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

    ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಹತ್ತು ಅವತಾರ ಬಿಂಬಿಸುವ ವೇಷದೊಂದಿಗೆ ನರ್ತಿಸಿ ಕೃಷ್ಣಾಷ್ಟಮಿ ನೆನಪಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ಕೊಡಗಿನ ಹುತ್ತರಿ ಹಬ್ಬ, ಕಾವೇರಮ್ಮ ಮತ್ತು ಈಶ್ವರನ ಪೂಜೆ, ಭತ್ತದ ಗದ್ದೆಯಲ್ಲಿ ಸುಗ್ಗಿಯೊಂದಿಗೆ ಕೊಡವರ ಸಾಂಪ್ರದಾಯಿಕ ಕುಣಿತವನ್ನ ಪ್ರದರ್ಶಿಸಿದ್ರು. ಅಂತಿಮ ಬಿ.ಕಾಂ ತಂಡ ಕುಡ್ಲದ ಪರ್ಬಕೋಲ ಪೂಜೆಯೊಂದಿಗೆ ಕೋಲ ಕಟ್ಟಿ ಕುಣಿದರು.

    ಗಾಯಕಿ ರೇಖಾ ಪ್ರೇಮ್‍ಕುಮಾರ್ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಕಾಲೇಜು ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಗೀತಾ, ಸುಷ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.