Tag: festival

  • ರಾಮನವಮಿಯ ಹಿನ್ನೆಲೆ ಏನು?- ಆಚರಣೆ ಹೇಗೆ?

    ರಾಮನವಮಿಯ ಹಿನ್ನೆಲೆ ಏನು?- ಆಚರಣೆ ಹೇಗೆ?

    ಚೈತ್ರಮಾಸದಲ್ಲಿ ಯುಗಾದಿಯ ನಂತರ ಬರುವ ಅತಿಮುಖ್ಯ ಹಬ್ಬವೆಂದರೆ ಅದು ಶ್ರೀರಾಮನವಮಿ. ಭಾರತ ದೇಶದಲ್ಲಿ ಆರ್ಯ ಸಂಸ್ಕೃತಿಗೆ ಸೇರಿದ ಎಲ್ಲಾ ಜನರು ಆತ್ಮೀಯತೆಯಿಂದ ಆಚರಿಸುವ ಹಬ್ಬ ಇದಾಗಿದೆ. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ (Ram Navami) ಹಬ್ಬವೆಂದು ಆಚರಣೆ ಮಾಡಲಾಗುತ್ತದೆ.

    ಪೌರಾಣಿಕ ಹಿನ್ನೆಲೆ:
    ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಎಂಬ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

    ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ ಎಂಬ ನಂಬಿಕೆಯಿದೆ.

    ಆಚರಣೆ ಹೇಗೆ?
    ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ. ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.

    ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ. ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ.

    ಅಯೋಧ್ಯೆಯಲ್ಲಿ ರಾಮನವಮಿ ಆಚರಣೆ:
    ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ.

    ಹಬ್ಬದ ದಿನದಂದು ಪ್ರತಿಯೊಬ್ಬರೂ ಜಾತಿ, ಧರ್ಮವೆಂಬ ಕಟ್ಟಳೆಗಳನ್ನು ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ.

  • ಗುಡಿ ಪಾಡ್ವಾ – ಮಹಾರಾಷ್ಟ್ರದಲ್ಲಿ ಆಚರಣೆ ಹೇಗೆ?

    ಗುಡಿ ಪಾಡ್ವಾ – ಮಹಾರಾಷ್ಟ್ರದಲ್ಲಿ ಆಚರಣೆ ಹೇಗೆ?

    ಹಿಂದೂಗಳ ಹಬ್ಬ ಯುಗಾದಿಯನ್ನು (Ugadi) ಮಹಾರಾಷ್ಟ್ರದಲ್ಲಿ ʼಗುಡಿ ಪಾಡ್ವಾʼ (Gudi Padwa) ಎಂದು ಆಚರಿಸಲಾಗುತ್ತದೆ. ಗುಡಿ ಎಂದರೆ ಗೊಂಬೆ ಎಂದರ್ಥ. ಇದು ಮಹಾರಾಷ್ಟ್ರದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಗುಡಿ ಪಾಡ್ವಾವನ್ನು ಮಹಾರಾಷ್ಟ್ರದ (Maharashtra) ಜನರು ಹೇಗೆ ಆಚರಿಸುತ್ತಾರೆ? ಈ ಹಬ್ಬದ ಹಿನ್ನೆಲೆ ಏನು ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.

    ಮರಾಠಿಯನ್ನರು ಗುಡಿ ಪಾಡ್ವಾದಂದು ಬೇವಿನ ಎಲೆ, ಬೆಲ್ಲವನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಅಕ್ಕಪಕ್ಕದ ಮನೆ ಮತ್ತು ನೆಂಟರಿಷ್ಟರಿಗೆ ಹಂಚುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಈ ದಿನ ವಸಂತ ಕಾಲದ ಆರಂಭ ಎಂದರ್ಥ.

    ಗುಡಿ ಪಾಡ್ವಾ ಹಬ್ಬದ ಹಿನ್ನೆಲೆ ಏನು?
    ಈ ದಿನ ಬ್ರಹ್ಮ ದೇವರು ಜಗತ್ತನ್ನು ಮರು ಸೃಷ್ಟಿಸಿದ ಎಂಬ ಮಾತಿದೆ. ನೆರೆ ಬಂದು ಜಗತ್ತೆಲ್ಲಾ ನಾಶವಾಗಿರುತ್ತದೆ. ಆ ನಂತರ ಬ್ರಹ್ಮ ಜಗತ್ತನ್ನು ಮರು ಸೃಷ್ಟಿಸುತ್ತಾನೆ. ಈ ದಿನ ರಾಮ ದೇವರು ವಾಲಿಯನ್ನು ಕೊಂದು ಜಯಶಾಲಿಯಾದ ದಿನ. ಹೀಗಾಗಿ ಯುಗಾದಿ ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷ ಹಬ್ಬವಾಗಿದೆ.

    ಚೈತ್ರ ಮಾಸದ ಆರಂಭದೊಂದಿಗೆ ಹೊಸ ವರ್ಷದ ಆರಂಭವನ್ನು ಘೋಷಿಸುವ ಗುಡಿ ಪಾಡ್ವಾ ಮಹಾರಾಷ್ಟ್ರದ ಪ್ರಮುಖ ಹಬ್ಬವಾಗಿದೆ. ಗುಡಿ ಪಾಡ್ವಾ ರಾಕ್ಷಸ ರಾಜ ರಾವಣನ ಮೇಲೆ ಶ್ರೀರಾಮನ ವಿಜಯದ ಆಚರಣೆಯನ್ನು ಸೂಚಿಸುತ್ತದೆ. ಆದರೆ ಹಿಂದೂ ಧರ್ಮದ ಮಹಾಕಾವ್ಯಗಳಲ್ಲಿ ಒಂದಾದ ಬ್ರಹ್ಮ ಪುರಾಣವು ಹೇಳುವಂತೆ ಗುಡಿ ಪಾಡ್ವಾವು ಇಡೀ ವಿಶ್ವವನ್ನು ಸೃಷ್ಟಿಸಿದ ದಿನವನ್ನು ಸೂಚಿಸುತ್ತದೆ.

    ಗುಡಿ ಪಾಡ್ವಾ ಹಬ್ಬವನ್ನು ಏಕೆ ಆಚರಿಸುತ್ತಾರೆ?
    ಜೋತಿಷ್ಯ ಮಹತ್ವ:
    ಚಂದ್ರನ ಪಂಚಾಂಗದ ಪ್ರಕಾರ ಸೂರ್ಯನು ರಾಶಿಚಕ್ರದ ಮೊದಲ ರಾಶಿಯಾದ ಮೇಷ ರಾಶಿಗೆ ಪ್ರವೇಶಿಸುವ ದಿನವನ್ನು ಗುಡಿ ಪಾಡ್ವಾ ಎಂದು ಕರೆಯುತ್ತಾರೆ. ಇದು ಹೊಸ ಆರಂಭಗಳಿಗೆ ಮಂಗಳಕರ ಸಮಯ ಎಂದು ಹೇಳಲಾಗುತ್ತದೆ.

    ಸಾಂಸ್ಕೃತಿಕ ಮಹತ್ವ:
    ಗುಡಿ ಪಾಡ್ವಾ ಹಬ್ಬ ವಸಂತ ಋತುವಿನ ಆರಂಭ ಮತ್ತು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ದಿನವೆಂದು ಪರಿಗಣಿಸಲಾಗುತ್ತದೆ.

    ಐತಿಹಾಸಿಕ ಮಹತ್ವ:
    ಗುಡಿ ಪಾಡ್ವಾ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಮೊಘಲರನ್ನು ಯಶಸ್ವಿಯಾಗಿ ಸೋಲಿಸಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಿಜಯದೊಂದಿಗೆ ಗುಡಿ ಪಾಡ್ವಾ ಕೂಡ ಸಂಬಂಧಿಸಿದೆ.

    ಈ ಹಬ್ಬದ ದಿನದಂದು ಬಿದಿರಿನ ಕೋಲಿನಿಂದ ಅಲಂಕರಿಸಲ್ಪಟ್ಟ ಕಂಬವನ್ನು ಹೂಗಳು ಹಾಗೂ ಬೇವಿನ ಎಲೆಗಳಿಂದ ಅಲಂಕರಿಸಿ ಬಟ್ಟೆ ಮತ್ತು ತಲೆಕೆಳಗಾದ ಕಲಶದಿಂದ ಗುಡಿಯನ್ನು ಎತ್ತುತ್ತಾರೆ. ಈ ಗುಡಿಯನ್ನು ಮನೆಯ ಹೊರಗೆ ಇರಿಸಲಾಗುತ್ತದೆ. ಇದು ವಿಜಯ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.

    ಗುಡಿ ಪಾಡ್ವಾದಂದು ಜನರು ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಈ ದಿನ ಮಹಾರಾಷ್ಟ್ರದ ಮಹಿಳೆಯರು ನೌವಾರಿ ಸೀರೆ ಮತ್ತು ಪುರುಷರು ಕುರ್ತಾ ಪೈಜಾಮ ಧರಿಸಿ ಕಂಗೊಳಿಸುತ್ತಾರೆ. ಈ ದಿನ ಮಹಾರಾಷ್ಟ್ರದ ರಸ್ತೆಗಳಲ್ಲಿ ರಂಗೋಲಿಗಳು ಕಣ್ಮನ ಸೆಳೆಯುತ್ತಿರುತ್ತವೆ. ಅಲ್ಲದೇ ಮಹಿಳೆಯರು ಹಾಗೂ ಪುರುಷರು ಮೆರವಣಿಗೆ ತೆರಳಿ ಹಾಡು ಕುಣಿತಗಳ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ.

  • ವಿವಿಧ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

    ವಿವಿಧ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

    ಣ್ಣಗಳ ಹಬ್ಬ ಹೋಳಿ (Holi) ಅಂದರೆ ಸಾಕು ಎಲ್ಲಿಲ್ಲದ ಸಡಗರ, ಸಂಭ್ರಮ. ಒಬ್ಬರ ಮೇಲೊಬ್ಬರು ಬಣ್ಣಗಳನ್ನು ಎರಚಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಬಣ್ಣಗಳೊಂದಿಗೆ ಸಂಬಂಧಗಳನ್ನು ಬೆಸೆಯುವ ಹಬ್ಬ ಇದಾಗಿದೆ. ಹೋಳಿ ಹಬ್ಬವನ್ನು ಹಿಂದೂ ತಿಂಗಳ ಫಾಲ್ಗುಣದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹೋಳಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುವುದು ಮಾತ್ರವಲ್ಲದೇ ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಹೋಳಿ ಕೇವಲ ಹಬ್ಬ ಮಾತ್ರವಲ್ಲದೇ ವಸಂತ ಮಾಸದ ಆಗಮನವನ್ನೂ ಸೂಚಿಸುತ್ತದೆ.

    ಪುರಾಣದ ಕಥೆ ಏನು?
    ದಕ್ಷಿಣ ಭಾರತದಲ್ಲಿ ವಿಭಿನ್ನ ಆಚರಣೆಯ ಮೂಲಕ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮದೇವನ ಕಥೆಯು ಬೆಸೆದುಕೊಂಡಿದೆ. ಶಿವನ ಮೂರನೇ ಕಣ್ಣಿನಿಂದ ಬಂದ ಬೆಂಕಿಯಿಂದ ಕಾಮದೇವ ಆಹುತಿಯಾದನು. ಜಗತ್ತನ್ನು ಉಳಿಸಲು ಶಿವನ ಕಣ್ಣಿನ ಬೆಂಕಿಗೆ ತಾನೇ ಆಹುತಿಯಾಗುವುದರ ಮೂಲಕ ಕಾಮದೇವ ತ್ಯಾಗ ಮಾಡಿದ ಎಂದು ಹೇಳಲಾಗುತ್ತದೆ. ಈ ಸನ್ನಿವೇಶದ ಹಿನ್ನೆಲೆ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಕಾಮ ದೇವನ ಪ್ರತಿರೂಪವನ್ನು ಸುಡುವ ಆಚರಣೆಯ ಮೂಲಕ ಹೋಳಿ ಆಚರಣೆ ಮಾಡುತ್ತಾರೆ.

    ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ. ಅದರಲ್ಲಿ ಪ್ರಹ್ಲಾದನ ಕಥೆಯೂ ಸೇರಿಕೊಂಡಿದೆ. ಪ್ರಹ್ಲಾದ ಹುಟ್ಟಿನಿಂದಲೇ ಮಹಾನ್ ವಿಷ್ಣುವಿನ ಭಕ್ತನಾಗಿದ್ದ. ನಿತ್ಯವೂ ವಿಷ್ಣು ದೇವರ ಆರಾಧನೆ ಹಾಗೂ ಪೂಜೆ ಮಾಡುವುದರ ಮೂಲಕವೇ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದ. ಆದರೆ ಅವನ ತಂದೆ ಹಿರಣ್ಯ ಕಶಿಪು ಬಹಳ ಅಹಂಕಾರಿ ಮತ್ತು ಕ್ರೂರ ರಾಜನಾಗಿದ್ದ. ಅವನು ತಾನೇ ದೈವಶಕ್ತಿಗಿಂತ ಶ್ರೇಷ್ಠ, ತನ್ನನ್ನೇ ಎಲ್ಲರೂ ಆರಾಧಿಸಬೇಕು ಎಂದು ತನ್ನ ಪ್ರಜೆಗೆ ಆದೇಶ ಹೊರಡಿಸಿದ್ದ. ಆದರೆ ಅವನ ಮಗ ಪ್ರಹ್ಲಾದ ಮಾತ್ರ ತಂದೆಯನ್ನು ಆರಾಧಿಸದೆ ವಿಷ್ಣು ದೇವರ ಆರಾಧನೆಯನ್ನು ಮಾಡುತ್ತಿದ್ದ. ಅದನ್ನು ಸಹಿಸದ ಹಿರಣ್ಯ ಕಶಿಪು ಮಗನಿಗೆ ಸರಿಯಾಗಿ ಪಾಠ ಕಲಿಸಬೇಕು, ಅವನ ಚಿಂತನೆಗಳನ್ನು ಬದಲಿಸಬೇಕು ಎಂದು ಬಯಸಿದ. ಅದರಂತೆಯೇ ಸಾಕಷ್ಟು ಕ್ರಮದಲ್ಲಿ ಅವನಿಗೆ ವಿಷ್ಣು ಆರಾಧನೆ ಮಾಡದಂತೆ ಹೇಳಿದನು. ಆದರೆ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದ ವಿಷ್ಣುವಿನ ಆರಾಧನೆಯನ್ನು ಬಿಟ್ಟರೆ ಬೇರಾವ ವ್ಯಕ್ತಿಯ ಆರಾಧನೆಯನ್ನು ಮಾಡೆನು ಎಂದು ಹೇಳಿದನು.

    ಪುಟ್ಟ ಹುಡುಗನಾದ ಈ ಪ್ರಹ್ಲಾದನಿಗೆ ಇನ್ಯಾವ ಬಗೆಯಲ್ಲೂ ಬುದ್ಧಿ ಹೇಳಲು ಸಾಧ್ಯವಿಲ್ಲ. ಏನಿದ್ದರೂ ಅವನನ್ನು ಸಾಯಿಸುವುದೊಂದೇ ಮಾರ್ಗ ಎಂದುಕೊಂಡ. ಅಂತೆಯೇ ಪ್ರಹ್ಲಾದನನ್ನು ಸಾಯಿಸಲು ಹಿರಣ್ಯ ಕಶಿಪು ಸಾಕಷ್ಟು ವಿಧಾನವನ್ನು ಅನುಸರಿಸಿದ. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಅವುಗಳನ್ನು ಕಂಡ ಹಿರಣ್ಯ ಕಶಿಪು ಅತ್ಯಂತ ಕೋಪಗೊಂಡ. ನಂತರ ತನ್ನ ತಂಗಿಯಾದ ಹೋಲಿಕಾಳನ್ನು ಕರೆಸಿದ. ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರು ಸುಟ್ಟು ಹೋಗಬೇಕು ಎನ್ನುವ ವರವನ್ನು ಪಡೆದುಕೊಂಡಿದ್ದಳು. ಹಾಗಾಗಿ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಹಿರಣ್ಯ ಕಶಿಪು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಳು. ಆ ಸಮಯದಲ್ಲಿ ಪ್ರಹ್ಲಾದನು ಹರಿಯನ್ನು ಧ್ಯಾನಿಸುತ್ತಲೇ ಕುಳಿತನು. ಆ ಸಮಯದಲ್ಲಿ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು. ಪ್ರಹ್ಲಾದನು ಬೆಂಕಿಯಿಂದ ಹೊರ ಬಂದನು. ಈ ಹಿನ್ನೆಲೆಯಲ್ಲಿಯೇ ಹೋಳಿಯ ಹಬ್ಬವನ್ನು ಆಚರಿಸಲಾಯಿತು ಎಂದು ಹೇಳಲಾಗುವುದು.

    ಹೀಗೆ ದೇಶದ ವಿವಿಧೆಡೆ ಹೋಳಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾಗಿ ಆಚರಿಸುವ ಕೆಲವು ರಾಜ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

    ಬಿಹಾರ:
    ಬಿಹಾರದಲ್ಲಿ ಜನರು ಹೋಳಿ ಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹೋಳಿ ಹಬ್ಬದ ಮೊದಲ ದಿನದಂದು ಬಣ್ಣದ ಥಾಲಿಗಳು ಮತ್ತು ಬಣ್ಣ ತುಂಬಿದ ಮಡಿಕೆಯನ್ನು ಜೋಡಿಸಲಾಗುತ್ತದೆ. ಬಿಹಾರದ ಹೋಳಿ ಆಚರಣೆಗಳು ಹಲವಾರು ದಿನಗಳವರೆಗೆ ಇರುತ್ತದೆ. ಹೋಳಿ ಆಚರಣೆ ಸಂದರ್ಭದಲ್ಲಿ ಜನರು ‘ಫಾಗುವಾ’ ಎಂಬ ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಹಾಡುತ್ತಾರೆ. ‘ಹೋಲಿಕಾ ದಹನ್’ ಹೋಳಿ ಆಚರಣೆಯ ಮಹತ್ವದ ಭಾಗವಾಗಿದೆ.

    ಉತ್ತರ ಪ್ರದೇಶ:
    ಹೋಳಿ ಹಬ್ಬದ ಸಂದರ್ಭದಲ್ಲಿ ಮಥುರಾ ಮತ್ತು ವೃಂದಾವನದಲ್ಲಿ ನಾನಾರೀತಿಯ ಜಾನಪದ ಹಾಡು ಹಾಗೂ ನೃತ್ಯಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೇ ಹೋಲಿಕಾ ಪ್ರತಿಕೃತಿ ದಹಿಸಲಾಗುತ್ತದೆ. ಹೋಳಿ ಹಬ್ಬದಂದು ಜನರು ಬೆಂಕಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉತ್ತಮ ಫಸಲುಗಾಗಿ ಪ್ರಾರ್ಥಿಸುತ್ತಾರೆ. ಈ ದಿನವನ್ನು ‘ಪುನೋ’ ಎಂದೂ ಕರೆಯುತ್ತಾರೆ. ಅವರು ಕೃತಜ್ಞತೆಯನ್ನು ಸಲ್ಲಿಸಲು ತೆಂಗಿನಕಾಯಿ ಮತ್ತು ಹೂವುಗಳ ಜೊತೆಗೆ ಸುಗ್ಗಿಯ ಕಾಳು ಮತ್ತು ಕಾಂಡಗಳನ್ನು ಅರ್ಪಿಸುತ್ತಾರೆ. ಬಳಿಕ ಸುಟ್ಟ ತೆಂಗಿನಕಾಯಿಯನ್ನು ಮನೆಗೆ ಪ್ರಸಾದವಾಗಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ಹೋಳಿ ಹಬ್ಬದ ದಿನ ‘ಗುಲಾಲ್’ ಎಂಬ ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಲತ್ಮಾರ್ ಹೋಳಿ ಈ ಹಬ್ಬಕ್ಕೆ ಇರುವ ಇನ್ನೊಂದು ಹೆಸರು.

    ಬಂಗಾಳ:
    ಬಂಗಾಳದಲ್ಲಿ ಹೋಳಿಯನ್ನು ‘ಡೋಲ್ ಜಾತ್ರೆ’ ಅಥವಾ ‘ಡೋಲ್ ಪೂರ್ಣಿಮಾ’ ಎಂದು ಕರೆಯಲಾಗುತ್ತದೆ. ಹೋಳಿಯಂದು ಇಲ್ಲಿನ ಜನರು ಹಳದಿ ಬಟ್ಟೆಗಳನ್ನು ಧರಿಸಿ ಜಾತ್ರೆಗೆ ಹಾಜರಾಗುತ್ತಾರೆ. ಇದು ಶಾಂತಿಯುತ ಸಮಾರಂಭವಾಗಿದೆ. ಇದನ್ನು ಮಹಾಪ್ರಭು ಚೈತನ್ಯರ ಜನ್ಮದಿನವೆಂದು ಆಚರಿಸಲಾಗುತ್ತದೆ. ಜನರು ಶ್ರೀಕೃಷ್ಣ ಮತ್ತು ರಾಧೆಯ ವಿಗ್ರಹವನ್ನು ಅಲಂಕರಿಸುತ್ತಾರೆ ಮತ್ತು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಅದನ್ನು ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ಹೋಳಿ ಆಚರಿಸುತ್ತಾರೆ.

    ಒಡಿಶಾ:
    ಒಡಿಶಾದ ಜನರು ಜಗನ್ನಾಥ ದೇವರನ್ನು ಪೂಜಿಸುವ ಮೂಲಕ ಹೋಳಿ ಆಚರಿಸುತ್ತಾರೆ ಮತ್ತು ಈ ದಿನ ಒಡಿಶಾದ ಪುರಿ ದೇವಸ್ಥಾನಕ್ಕೆ ಜನರು ಭೇಟಿ ನೀಡುತ್ತಾರೆ. ಅಲಂಕರಿಸಿದ ಪಲ್ಲಕ್ಕಿಯಲ್ಲಿ ಜಗನ್ನಾಥನ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭ ದಂಡಿ ಖೇಲಾ ಮುಂತಾದ ಆಟಗಳನ್ನು ಆಡುತ್ತಾರೆ. ರಾತ್ರಿಯ ವೇಳೆ ಜಗನ್ನಾಥನ ವಿಗ್ರಹವನ್ನು ಇರಿಸಲು ವಿಶೇಷ ಡೇರೆಗಳು, ಜೂಲನ್ ಮಂಟಪಗಳನ್ನು ಸ್ಥಾಪಿಸುತ್ತಾರೆ.

    ಈಶಾನ್ಯ ಭಾರತ:
    18ನೇ ಶತಮಾನದಲ್ಲಿ ವೈಷ್ಣವರೊಂದಿಗೆ ಪ್ರಾರಂಭವಾದ ಹೋಳಿಯನ್ನು ಮಣಿಪುರದಲ್ಲಿ ಆರು ದಿನಗಳ ಕಾಲ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ʼಯೋಸಾಂಗ್ʼ ಎಂಬ ಮತ್ತೊಂದು ಹಳೆಯ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಣಿನ ಮತ್ತು ಮಣ್ಣಿನ ಹುಲ್ಲಿನ ಗುಡಿಸಲು ಮಾಡಿ ಸಂಜೆ ಸುಡಲಾಗುತ್ತದೆ. ಮಣಿಪುರದಲ್ಲಿ ಹುಡುಗರು ತಮ್ಮೊಂದಿಗೆ ಹೋಳಿ ಆಡಲು ಹುಡುಗಿಯರಿಗೆ ಹಣ ನೀಡಬೇಕು. ದೇವಾಲಯಗಳಲ್ಲಿ ನೃತ್ಯಗಳು, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭಕ್ತರು ಬಿಳಿ ಉಡುಪುಗಳು ಮತ್ತು ಹಳದಿ ಪೇಟಗಳನ್ನು ಧರಿಸಿ ದೇವಸ್ಥಾನದ ಮುಂದೆ ಬಣ್ಣಗಳನ್ನು ಆಡುತ್ತಾರೆ. ಕೊನೆಯ ದಿನ ಇಂಫಾಲದ ಬಳಿಯ ಕೃಷ್ಣ ದೇವಸ್ಥಾನದಲ್ಲಿ ಮೆರವಣಿಗೆ ಇರುತ್ತದೆ.

    ವಾಯುವ್ಯ ಭಾರತದ ಇತರ ಬುಡಕಟ್ಟುಗಳು ಈ ವಸಂತ ಹಬ್ಬವನ್ನು ಆಚರಿಸಲು ತಮ್ಮದೇ ಆದ ವಿಧಾನಗಳನ್ನು ಹೊಂದಿವೆ. ಅವರು ಹೋಳಿಯ ಮುನ್ನಾದಿನದಂದು ಬೆಂಕಿಯನ್ನು ಹಚ್ಚುತ್ತಾರೆ ಮತ್ತು ದೇವಿಯನ್ನು ಪೂಜಿಸುತ್ತಾರೆ. ಬುಡಕಟ್ಟು ಜನರು ಹೋಳಿ ಆಚರಣೆ ವೇಳೆ ಕೆಸುಡೋ ಮತ್ತು ಮಾವಿನ ವಸಂತ ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸುತ್ತಾರೆ.

    ಹಿಮಾಚಲ ಪ್ರದೇಶ:
    ಹಿಮಾಚಲ ಪ್ರದೇಶದಲ್ಲಿ ಯಮುನಾ ನದಿಯ ದಡದಲ್ಲಿರುವ ಸಿರ್ಮೌರ್ ಜಿಲ್ಲೆಯ ಪಾಂಟಾ-ಸಾಹಿಬ್‌ನಲ್ಲಿ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಜನರು ಬಣ್ಣಗಳನ್ನು ಆಡುವುದರಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ಕುಲುವಿನಲ್ಲಿ ಆಕರ್ಷಕ ಐಸ್ ಹೋಳಿ ಆಡಲಾಗುತ್ತದೆ. ಜನರು ಬಣ್ಣ ಮತ್ತು ಹಿಮವನ್ನು ಬೆರೆಸುವ ಮೂಲಕ ವರ್ಣರಂಜಿತ ಸ್ನೋಬಾಲ್‌ಗಳನ್ನು ಮಾಡಿ ಒಬ್ಬರಮೇಲೋಬ್ಬರು ಎಸೆಯುತ್ತಾರೆ.

    ಪಂಜಾಬ್:
    ಹೋಲಾ ಮೊಹಲ್ಲಾ ಪಂಜಾಬ್‌ನ ಸಿಖ್ ಸಮುದಾಯದಲ್ಲಿ ವಾರ್ಷಿಕ ಹಬ್ಬವಾಗಿದೆ. ಇದನ್ನು ಗುರು ಗೋಬಿಂದ್ ಸಿಂಗ್ ಪ್ರಾರಂಭಿಸಿದರು. ಇದು ಪಂಜಾಬ್‌ನ ಅನಂತಪುರ ಸಾಹಿಬ್‌ನಲ್ಲಿ ಹೋಳಿ ಹಬ್ಬದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ಇದು ಮೂರು ದಿನಗಳ ಹಬ್ಬವಾಗಿದ್ದು, ಎರಡು ಓಡುವ ಕುದುರೆಗಳ ಮೇಲೆ ನಿಲ್ಲುವುದು, ಬೇರ್‌ಬ್ಯಾಕ್ ಕುದುರೆ ಸವಾರಿ, ಅಣಕು ಕಾದಾಟಗಳು ಮತ್ತು ಟೆಂಟ್ ಪೆಗ್ಗಿಂಗ್ ಅನ್ನು ಇದು ಒಳಗೊಂಡಿದೆ. ಶ್ರೀ ಗುರು ಗ್ರಂಥ ಸಾಹಿಬ್ ಅವರ ಉಪಸ್ಥಿತಿಯಲ್ಲಿ ಕೀರ್ತನೆ ಮತ್ತು ಧಾರ್ಮಿಕ ಉಪನ್ಯಾಸಗಳನ್ನು ಸಹ ದರ್ಬಾರ್‌ಗಳಲ್ಲಿ ಏರ್ಪಡಿಸಲಾಗುತ್ತದೆ. ಕೊನೆಯ ದಿನ ತಖ್ತ್ ಕೇಶ್ಗಢ ಸಾಹಿಬ್‌ನಿಂದ ಪಂಜ್ ಪ್ಯಾರಸ್ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತದೆ.

  • ದಸರಾ ವಿಶೇಷ – ವಾಯುವ್ಯ ಸಾರಿಗೆಯಿಂದ 500ಕ್ಕೂ ಹೆಚ್ಚು ಬಸ್ ವ್ಯವಸ್ಥೆ

    ದಸರಾ ವಿಶೇಷ – ವಾಯುವ್ಯ ಸಾರಿಗೆಯಿಂದ 500ಕ್ಕೂ ಹೆಚ್ಚು ಬಸ್ ವ್ಯವಸ್ಥೆ

    ಬೆಳಗಾವಿ: ದಸರಾ (Dasara) ಹಬ್ಬಕ್ಕೆ (Festival) ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಸ್ಥಳಗಳಿಂದ ಆಗಮಿಸುವ ಮತ್ತು ಹಬ್ಬ ಮುಗಿಸಿಕೊಂಡು ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (North West Transport) 500ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.

    ದಸರಾಕ್ಕೆ ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಭಾಗಗಳಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಹಬ್ಬಕ್ಕೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅ.20, 21 ಹಾಗೂ 22ರಂದು ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮುಂತಾದ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: 69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    ಅಲ್ಲದೇ ಸ್ಥಳೀಯ ಬಸ್ ನಿಲ್ದಾಣಗಳಿಂದ ಜಿಲ್ಲೆಯೊಳಗೆ ಹಾಗೂ ನೆರೆಯ ಜಿಲ್ಲೆಗಳಿಗೆ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚುವರಿ ಬಸ್‍ಗಳನ್ನು ಬಿಡಲಾಗುತ್ತದೆ. ಇದಕ್ಕಾಗಿ ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಐಷಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆಗಳು ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಬಿಡಲು ನಿರ್ಧರಿಸಲಾಗಿದೆ.

    ಅದೇ ರೀತಿ ಹಬ್ಬ ಮುಗಿಸಿಕೊಂಡು ಹಿಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಅ.24 ಹಾಗೂ 25ರಂದು ಸಂಸ್ಥೆಯ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಿಂದ ಬೆಂಗಳೂರು, ಮಂಗಳೂರು, ಗೋವಾ, ಮಹಾರಾಷ್ಟ್ರದ ಪುಣೆ ಸೇರಿದಂತೆ ರಾಜ್ಯದ ಮತ್ತು ನೆರೆಯ ರಾಜ್ಯಗಳ ವಿವಿಧ ಜನದಟ್ಟಣೆಗೆ ಅನುಗುಣವಾಗಿ 250ಕ್ಕೂ ಹೆಚ್ಚು ವಿಶೇಷ ಬಸ್ಸುಗಳು ಸಂಚರಿಸಲಿವೆ.

    ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇದ್ದು ಸಾರ್ವಜನಿಕರು ಉಪಯೋಗಿಸಿಕೊಳ್ಳುವಂತೆ ತಿಳಿಸಲಾಗಿದೆ. ನಾಲ್ಕು ಅಥವಾ ಹೆಚ್ಚು ಆಸನಗಳನ್ನು ಒಂದೇ ಟಿಕೆಟ್‍ನಲ್ಲಿ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ 5% ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಬರುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣ ದರದಲ್ಲಿ 10% ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಹೋರಾಟ: ಕಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವತೆಗಳ ತ್ಯಾಗವನ್ನು ಸ್ಮರಿಸುವ ದಸರಾ ಗೊಂಬೆ!

    ದೇವತೆಗಳ ತ್ಯಾಗವನ್ನು ಸ್ಮರಿಸುವ ದಸರಾ ಗೊಂಬೆ!

    ದುರ್ಗಾ ದೇವಿ ರಾಕ್ಷಸ ಮಹಿಷಾಸುರನ ವಿರುದ್ಧ ಯುದ್ಧ ಮಾಡುವಾಗ ಅವಳಿಗೆ ಎಲ್ಲಾ ದೇವತೆಗಳು ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾಗಿ ನಿಂತರು. ಬಳಿಕ ದಸರಾ (Dasara) ಎಂದು ಆಚರಿಸಲಾಗುವ ಯುದ್ಧದ 10ನೇ ದಿನದಂದು ದುರ್ಗಾದೇವಿ ಮಹಿಷಾಸುರನನ್ನು ಗೆದ್ದಳು ಎಂದು ಪುರಾಣದಲ್ಲಿ ಉಲ್ಲೇಖವಿದೆ. ದೇವತೆಗಳ ಶಕ್ತಿಯ ತ್ಯಾಗಕ್ಕೆ ಗೌರವ ಸಲ್ಲಿಸಲು ಗೊಂಬೆಗಳ ರೂಪದಲ್ಲಿ ದೇವರನ್ನು ಪೂಜಿಸುವ ಮೂಲಕ ದಸರಾ ಗೊಂಬೆ (Dasara Gombe) ಹಬ್ಬವನ್ನು ಆಚರಿಸಲಾಗುತ್ತದೆ.

    ನವರಾತ್ರಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ದೇಶದಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಆಚರಿಸುತ್ತವೆ. ಇದಕ್ಕಾಗಿ ವಿಶೇಷ ಶೈಲಿಯ ಪದ್ಧತಿಗಳನ್ನು ಹೊಂದಿವೆ.

    ದಕ್ಷಿಣ ಭಾರತದಲ್ಲಿ ಈ ಹಬ್ಬದ ಭಾಗವಾಗಿ ದಸರಾ ಗೊಂಬೆ ಎಂದು ಕರೆಯಲ್ಪಡುವ ವಿಶಿಷ್ಟ ಪೂಜೆಯ ಆಚರಣೆ ಒಂದಿದೆ. ಇದನ್ನು ಕರ್ನಾಟಕ (Karnataka) ಮತ್ತು ಆಂಧ್ರಪ್ರದೇಶದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ವಿಜಯದಶಮಿ ದಿನದಂದು ಈ ಆಚರಣೆ ಅಂತ್ಯಗೊಳ್ಳುತ್ತದೆ. 9 ದಿನಗಳ ಕಾಲ ಹೋರಾಡಿದ ನಂತರ ದುರ್ಗಾ ದೇವಿ ರಾಕ್ಷಸರ ವಿರುದ್ಧ ಯುದ್ಧವನ್ನು ಗೆದ್ದ ದಿನ ಕರ್ನಾಟಕದಲ್ಲಿ ದಸರಾ ಗೊಂಬೆ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.

    ಸಂಪ್ರದಾಯದಂತೆ ಜೋಡಿಸಲಾದ ವಿವಿಧ ಗೊಂಬೆಗಳು ಮತ್ತು ಪ್ರತಿಮೆಗಳ ಪ್ರದರ್ಶನದ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಗೊಂಬೆಗಳನ್ನು ಬೆಸ ಸಂಖ್ಯೆಯಲ್ಲಿ (7, 9 ಅಥವಾ 11) ಮೆಟ್ಟಿಲಿನಂತೆ ಜೋಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಗೊಂಬೆಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.

    ಗಂಡ ಮತ್ತು ಹೆಂಡತಿಯನ್ನು ಗೊಂಬೆಗಳು, ಅದನ್ನು ಪಟ್ಟದ ಗೊಂಬೆ ಎಂದು ಕರೆಯಲಾಗುತ್ತದೆ. ಈ ಮುಖ್ಯ ಗೊಂಬೆಗಳ ಗುಂಪನ್ನು ಮಗಳ ಮದುವೆ ಸಮಾರಂಭದಲ್ಲಿ ಆಕೆಯ ಪೋಷಕರು ಹಸ್ತಾಂತರಿಸುತ್ತಾರೆ. ಹೊಸ ವಧುವಿಗೆ ತನ್ನ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಮತ್ತು ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಅವುಗಳನ್ನು ನೀಡಲಾಗುತ್ತದೆ.

    ಪಟ್ಟದ ಗೊಂಬೆಗಳು ಸಾಂಪ್ರದಾಯಿಕವಾಗಿ ಮರದಿಂದ ಮಾಡಿದ ಗೊಂಬೆಗಳಾಗಿವೆ. ಈ ಗೊಂಬೆಗಳನ್ನು ರೇಷ್ಮೆ ಬಟ್ಟೆ ಬಳಸಿ ಸುಂದರವಾಗಿ ಅಲಂಕರಿಸಲಾಗುತ್ತದೆ. ಪೂಜೆಗೆ ಗೊಂಬೆಗಳನ್ನು ಜೋಡಿಸುವಾಗ ವೇದಿಕೆಯ ಮೊದಲ ಮೆಟ್ಟಿಲಲ್ಲಿ ದೇವತೆಗಳ ಗೊಂಬೆಗಳನ್ನು ಜೋಡಿಸುವ ಸಂಪ್ರದಾಯವಿದೆ. ಈ ಸಾಲಿನಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ದುರ್ಗಾ, ಲಕ್ಷ್ಮಿ, ಸರಸ್ವತಿ ಇಂತಹ ಮೂರ್ತಿಗಳನ್ನು ಇಡಲಾಗುತ್ತದೆ.

    ಗೊಂಬೆ ಹಬ್ಬವನ್ನು ಪ್ರಾರಂಭಿಸಲು ಸೂಕ್ತ ಮುಹೂರ್ತ ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಗೊಂಬೆಗಳನ್ನು ನಿರ್ದಿಷ್ಟ ಕ್ರಮದ ಪ್ರಕಾರ ಜೋಡಿಸಲಾಗುತ್ತದೆ. ದೇವರ ಗೊಂಬೆಗಳನ್ನು ಮೇಲಿನ ಹಂತದಲ್ಲಿ ಇರಿಸಲಾಗುತ್ತದೆ. ಮನುಷ್ಯರ ಹಾಗೂ ಇತರೆ ಗೊಂಬೆಗಳನ್ನು ಕೊನೆಯ ಸಾಲಿನಲ್ಲಿ ಇರಿಸಲಾಗುತ್ತದೆ.

    ಉಳಿದಂತೆ ರಾಜರು ಮತ್ತು ರಾಣಿಯರ ಗೊಂಬೆಗಳನ್ನು ಜೋಡಿಸಲಾಗುತ್ತದೆ. ಕರ್ನಾಟಕದಲ್ಲಿ ಮೈಸೂರು ರಾಜರ ಗೊಂಬೆಗಳನ್ನೂ ಇರಿಸುವ ವಾಡಿಕೆ ಇದೆ. ಅಲ್ಲದೇ ದಿನ ನಿತ್ಯದ ಜನಜೀವನವನ್ನು ಹೋಲುವ ಗೊಂಬೆಗಳನ್ನು ಸಹ ಇಲ್ಲಿ ಇರಿಸಲಾಗುತ್ತದೆ.

    ವರ್ಷದಿಂದ ವರ್ಷಕ್ಕೆ ಜನ ಗೊಂಬೆಗಳನ್ನು ಸಂಗ್ರಹಿಸುತ್ತಾ ಹೋಗುತ್ತಾರೆ. ಹೀಗೆ ಕೆಲವೆಡೆ ಶತಮಾನಗಳನ್ನು ಪೂರೈಸಿದ ಗೊಂಬೆಗಳು ಸಂಗ್ರಹದಲ್ಲಿವೆ. ಅಲ್ಲದೇ ಪೂಜೆಯ ದಿನ ಸ್ನೇಹಿತರನ್ನು ನೆರೆಹೊರೆಯವರನ್ನು ಕರೆದು ಪ್ರಸಾದ ವಿತರಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅಸ್ತಿತ್ವದಿಂದಲೂ ಈ ಪದ್ಧತಿಯು ಆಚರಣೆಯಲ್ಲಿದೆ ಎನ್ನಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

    ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

    ಮೈಸೂರು: ಈ ಬಾರಿ ದಸರಾ (Mysuru Dasara) ಜಂಬೂ ಸವಾರಿಯಲ್ಲಿ (Dasara Procession) ಗತಕಾಲದ ವೈಭವ ಮರುಕಳಿಸಲಿದೆ. ಈ ಬಾರಿ ದಸರಾದಲ್ಲಿ ರಾಜ ಪೋಷಾಕಿನಲ್ಲಿ ಪೊಲೀಸರು (Police) ಮಿಂಚಲಿದ್ದಾರೆ. ಇದೇ ವಸ್ತ್ರದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

    414 ವರ್ಷಗಳ ಇತಿಹಾಸವುಳ್ಳ ದಸರಾದಲ್ಲಿ ಈ ಬಾರಿ ರಾಜಪರಂಪರೆಯ ಜಂಬೂ ಸವಾರಿ ನಡೆಯಲಿದೆ. ಮರೆಯಾಗಿದ್ದ ಪರಂಪರೆಯ ಸೊಗಡು ಈ ಬಾರಿ ದಸರಾದಲ್ಲಿ ಮತ್ತೆ ಮರುಕಳಿಸಲಿದೆ. ಜಂಬೂ ಸವಾರಿ ವೇಳೆ ಅಂಬಾರಿ ಸುತ್ತ ರಾಜಪರಂಪರೆಯ ಪೋಷಾಕುಗಳಲ್ಲಿ ಪೊಲೀಸರು ಮಿಂಚಲಿದ್ದಾರೆ. ಕೇವಲ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ಜಂಬೂ ಸವಾರಿಯ ಗತವೈಭವವನ್ನು ಇದೀಗಾ ಅದೇ ಮಾದರಿಯಲ್ಲಿ ನಡೆಸಲು ತಯಾರಿ ನಡೆಸಲಾಗಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರಕ್ಕೆ ನಾಳೆ ಚಾಲನೆ – ಪಿಜಿ ಕಾಲೇಜ್‌, ಕೋರ್ಸ್‌ ವಿವರ ತಿಳಿದುಕೊಳ್ಳಿ

    ಅಂಬಾರಿ ಆನೆಯ ಸುತ್ತ ಭದ್ರತೆಗಾಗಿ ನಿಯೋಜಿಸುವ ಪೊಲೀಸ್ ಸಿಬ್ಬಂದಿ ಪಾರಂಪರಿಕ ಪೋಷಾಕು ತೊಟ್ಟುಕೊಂಡೆ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಪಾರಂಪರಿಕ ಪೋಷಾಕುಗಳು ಸಿದ್ಧವಾಗಿವೆ.

    ಅದೇ ರೀತಿ ರಾಜ ಬಿರುದುಗಳನ್ನು ಹಿಡಿದು ಕಲಾ ತಂಡಗಳು ಸಾಗಲಿವೆ. ಸುಮಾರು 200 ಜನರು ರಾಜರ ಕಾಲದಲ್ಲಿ ತೊಡುತ್ತಿದ್ದ ಉಡುಗೆಗಳನ್ನು ತೊಡಲಿದ್ದಾರೆ. ಈ ಹಿಂದೆ ಇದ್ದ ಹಸಿರು ಲ್ಯಾನ್ಸರ್, ಕೆಂಪು ಬಣ್ಣದ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್ ಹಾಗೂ ಅರಮನೆಯ ಜಿಲೋ ಪೋಷಾಕುಗಳು ಇದಕ್ಕಾಗಿ ತಯಾರಾಗಿವೆ. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    ಮೈಸೂರು: ವಿಶ್ವವಿಖ್ಯಾತ ಮೈಸೂರು (Mysuru) ದಸರಾ 2023ಕ್ಕೆ (Dussehra) ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಪರಂಪರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಮನೆಯಲ್ಲಿ ನಡೆಯುವ ದಸರಾ ಪೂಜಾ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

    ಅ.9 ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಆಗಲಿದೆ. ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಬಳಿಕ ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಆಗಲಿದೆ. ಬಳಿಕ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಅ.15 ರಂದು 6 ಗಂಟೆಯಿಂದ 6:25ರ ವರೆಗೆ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 07:05 ರಿಂದ 7:45ರ ಶುಭ ಲಗ್ನದಲ್ಲಿ ಕಂಕಣ ಧಾರಣೆ ನಡೆಯಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿಗೆ ಕಂಕಣ ಧಾರಣೆ ನಡೆಯಲಿದೆ.

    ಬಳಿಕ 9:45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 10:15ಕ್ಕೆ ಕಳಸ ಪೂಜೆ ಹಾಗೂ ಸಿಂಹಾಸನ ಪೂಜೆ ನೆರವೇರಲಿದೆ. ಇದಾದ ಬಳಿಕ ಬೆಳಗ್ಗೆ 11:30ರಿಂದ 11:50ಕ್ಕೆ ಖಾಸಗಿ ದರ್ಬಾರ್ ನಡೆಯಲಿದೆ. ಅಂದು ಮಧ್ಯಾಹ್ನ 1:45 ರಿಂದ 02:05ರ ಅವಧಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಾಗುತ್ತದೆ.

    ಅ.20 ರಂದು 10:05 ರಿಂದ 10:25ಕ್ಕೆ ಸರಸ್ವತಿ ಪೂಜೆ, ಅ.21 ರಂದು ಕಾಳರಾತ್ರಿ ಪೂಜೆ, ಅ.22 ರಂದು ದುರ್ಗಾಷ್ಠಮಿ ಪೂಜೆ, ಅ.23 ರಂದು ದುರ್ಗಾಷ್ಠಮಿ ಪೂಜೆ ನಡೆಯಲಿದೆ. ಅದೇ ದಿನ ಬೆಳಗ್ಗೆ 5:30ಕ್ಕೆ ಚಂಡಿಹೋಮದೊಂದಿಗೆ ಪೂಜೆ ಆರಂಭವಾಗಲಿದೆ. ಆ ಸಮಯದಲ್ಲಿ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.

    ಬಳಿಕ ಬೆಳಗ್ಗೆ 6:05 ರಿಂದ 06:15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಆಗಲಿವೆ. ಬೆಳಗ್ಗೆ 07:15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ ತರಲಾಗುತ್ತದೆ. ಬೆಳಗ್ಗೆ 9:30ಕ್ಕೆ ಚಂಡಿಹೋಮ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 11:45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಬರಲಿವೆ. ಬಳಿಕ ಮಧ್ಯಾಹ್ನ 12:20ಕ್ಕೆ ಆಯುಧಪೂಜೆ ಆರಂಭವಾಗಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನಡೆಯಲಿದೆ.

    ಬಳಿಕ ಸಂಜೆ ಖಾಸಗಿ ದರ್ಬಾರ್ ಇರಲಿದೆ. ನಂತರ ಸಿಂಹ ವಿಸರ್ಜನೆ, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಆಗಲಿದೆ. ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಮಾಡಿ, ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಮಲದೇವಿ ದರ್ಶನ ಪಡೆಯಲಿದ್ದಾರೆ.

    ಅ.24 ರಂದು ವಿಜಯದಶಮಿ ಆಚರಣೆ ನಡೆಯಲಿದೆ. ಬೆಳಗ್ಗೆ 9:45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 11 ರಿಂದ 11:40ರ ವೇಳೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ನಡೆಯಲಿದೆ. ಬಳಿಕ ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ಇದನ್ನೂ ಓದಿ: ಬಿಟ್‌ಕಾಯಿನ್‌ ಪ್ರಕರಣ – ಪಂಜಾಬ್‌ ಮೂಲದ ಅಂತಾರಾಷ್ಟ್ರೀಯ ಹ್ಯಾಕರ್‌ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?

    ವಿಘ್ನ ನಿವಾರಕ ಗಣೇಶ ಹಬ್ಬದ ಮಹತ್ವವೇನು?

    ಭಾದ್ರಪದ ಶುದ್ಧ ಚತುರ್ಥಿ ಹಿಂದೂಗಳಿಗೆ ಗಣಪತಿಯ ಹಬ್ಬದ ದಿನ. ವಿಘ್ನವಿನಾಶ ಹಾಗೂ ಸಿದ್ಧಿ ಬುದ್ಧಿಗಳ ಅಭೀಷ್ಟದಾಯಕ ಶಕ್ತಿಯ ಆದಿದೈವ ಶ್ರೀ ಗಣಪತಿ. ‘ಕಲೌ ದುರ್ಗಿ ವಿನಾಯಕ’ ಕಲಿಯುಗದಲ್ಲಿ ಗಣಪತಿ ಹಾಗೂ ದುರ್ಗಿಯರು ಶೀಘ್ರವರವನ್ನು ನೀಡುವ ದೇವತೆಗಳು. ಈ ತಾಯಿ (ಗೌರಿ) ಮಗನನ್ನು ಆರಾಧಿಸಿದರೆ ಸಕಲ ಕಾರ್ಯ ಸಿದ್ಧಿ ಖಚಿತ. ಯಾವ ಶುಭಕಾರ್ಯವೇ ಆಗಲಿ, ಅದು ಗಣೇಶನ ಪೂಜೆಯೊಂದಿಗೇ ಪ್ರಾರಂಭವಾಗುತ್ತದೆ.

    ಗಣೇಶನ ಪೂಜೆ ಮಾಡದೇ ಹೋದರೆ ಬೇರೆ ಯಾವ ದೇವತೆಗಳ ಪೂಜೆಯೂ ಸಫಲವಾಗುವುದಿಲ್ಲ. ಶ್ರೀ ಗಣೇಶನು ಪ್ರಸನ್ನನಾಗದಿದ್ದರೆ ಬೇರೆ ಯಾವ ದೇವತೆಯೂ ಪ್ರಸನ್ನನಾಗುವುದಿಲ್ಲ. ಈ ರೀತಿ ಗಣೇಶನು ಧಾರ್ಮಿಕ ಕ್ಷೇತ್ರದಲ್ಲಿ ಅಸಂಖ್ಯ ದೇವ ದೇವತೆಗಳ ಮಧ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ.

    ಗಣಪತಿಯ ಆಕಾರದಲ್ಲೇ ಅದ್ಭುತ ಕಲ್ಪನೆ ಅಡಗಿದೆ. ದೊಡ್ಡ ತಲೆಯುಳ್ಳ ಅವನನ್ನು ಆರಾಧಿಸುವವರೂ ‘ದೊಡ್ಡ ತಲೆಯುಳ್ಳವರು’ ಎಂದರೆ ಬುದ್ಧಿವಂತರು ಆಗುತ್ತಾರೆ. ಆನೆಯ ತಲೆಯಲ್ಲಿ ಜ್ಞಾನೇಂದ್ರಿಯಗಳೊಂದಿಗೆ ಕರ್ಮೆಂದ್ರಿಯವಾದ ಸೊಂಡಿಲೂ ಇದೆ. ಅವನ ‘ವಕ್ರತುಂಡ’ ಅಂದರೆ ಡೊಂಕಾದ ಸೊಂಡಿಲು ಓಂಕಾರದ ಪ್ರತೀಕ. ಅವನು ‘ಶೂರ್ಪಕಣ’ ಎಂದರೆ ಮೊರದಂತಹ ಕಿವಿಯುಳ್ಳವ. ಎಲ್ಲಾ ವಿಷಯಗಳನ್ನೂ ಕೇಳಿಸಿಕೊಂಡರೂ ಸತ್ಯಾಂಶವನ್ನು ಮಾತ್ರ ಗ್ರಹಿಸಬೇಕೆಂಬುದು ಅದರ ಸಂಕೇತ.

    ಗಣಪತಿ ‘ಮಹಾಕಾಯ’ ಅಂದರೆ ದೊಡ್ಡ ಹೊಟ್ಟೆಯವ. ಅವನ ಆ ದೊಡ್ಡ ಹೊಟ್ಟೆ ಬ್ರಹ್ಮಾಂಡದ ಸಂಕೇತ. ಅವನು ಧಾನ್ಯದೇವತೆಯೂ ಹೌದು. ‘ದವಸ’ ಎಂಬುದು ದವಸ ತುಂಬಿದ ಕಣಜದ ಸಂಕೇತ. ಅವನು ಹೊಟ್ಟೆಗೆ ಸುತ್ತಿಕೊಂಡಿರುವ ಸರ್ಪ, ಬ್ರಹ್ಮಾಂಡವನ್ನು ಹೊತ್ತಿರುವ ಆದಿಶೇಷ. ಅದು ಕುಂಡಲಿನೀ ಶಕ್ತಿಯ ಪ್ರತೀಕವೂ ಹೌದು. ಅವನ ಕೈಯಲ್ಲಿರುವ ಪಾಶ, ಅಂಕುಶಗಳು ನಮ್ಮಲ್ಲಿರುವ ರಾಗ ದ್ವೇಷಗಳನ್ನು ನಿಯಂತ್ರಿಸುವ ಸಾಧನಗಳು. ಅವನ ‘ಏಕದಂತ’, ಏಕಾಗ್ರತೆಯ ಹಾಗೂ ಅದ್ವೈತದ ಸೂಚನೆಯಾಗಿದೆ.

    ‘ಮೋದಕ’ ಗಣೇಶನಿಗೆ ಪ್ರಿಯ. ಮೋದ-ಪ್ರಮೋದ, ಆನಂದ ಇವು ಪರ್ಯಾಯ ಪದಗಳು. ಗಣೇಶನ ಪೂಜೆಯಿಂದ ನಮಗೆ ‘ಮೋದ’ ಎಂದರೆ ‘ಆನಂದ’ ದೊರೆಯುತ್ತದೆ. ಅವನ ವಾಹನವಾದ ಇಲಿ ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳ ಸಂಕೇತ. ಅದನ್ನು ಮೆಟ್ಟಿ ಮೇಲೆ ಕುಳಿತ ಗಣಪತಿಯು ಸತ್ವೋತ್ಕರ್ಷದ ಸಂಕೇತವಾಗಿದ್ದಾನೆ. ಅವನದು ಚಿಕ್ಕ ಕಣ್ಣು. ಸಮಾಜದಲ್ಲಿ ಬಾಳುವ ನಾವು ಪ್ರತಿಯೊಂದನ್ನೂ ಸೂಕ್ಷ್ಮ ದೃಷ್ಟಿಯಿಂದ ಪರಿಶೀಲಿಸಿ ಮುಂದುವರಿಯಬೇಕು ಎಂಬುದನ್ನು ಆ ಸೂಕ್ಷ್ಮ ದೃಷ್ಟಿಯ ಮೂಲಕ ಗಣೇಶ ಸೂಚಿಸುತ್ತಿದ್ದಾನೆ. ಅವನಿಗೆ ಸಿದ್ಧಿಬುದ್ಧಿ ಪತ್ನಿಯರು. ಲಾಭ, ಕ್ಷೇಮ ಮಕ್ಕಳು. ಬುದ್ಧಿ ಸರಿಯಾಗಿದ್ದರೆ ಎಲ್ಲ ಕ್ಷೇತ್ರದಲ್ಲೂ ಸಿದ್ಧಿ ಖಚಿತ. 

    ಶ್ರೀ ಗಣೇಶನಿಗೆ ಅನಂತರೂಪಗಳಿವೆ. ಯಕ್ಷ ಗಣಪತಿ, ಪಂಚಮುಖಿ ಗಣಪತಿ, ಶಕ್ತಿ ಗಣಪತಿ, ವಿದ್ಯಾಗಣಪತಿ, ಸಿದ್ಧಿವಿನಾಯಕ, ಸಂಕಷ್ಟಹರ ಗಣಪತಿ, ಹೇರಂಬ ಗಣಪತಿ, ದ್ವಿಜ ಗಣಪತಿ, ಸಿದ್ಧಿ ಗಣಪತಿ, ಬಾಲ ಗಣಪತಿ ಮುಂತಾದ ಪ್ರಸಿದ್ಧ ರೂಪಗಳನ್ನು ಹೊಂದಿರುವುದರಿಂದ ಇವನನ್ನು ವಿಶ್ವರೂಪೀ ಎನ್ನಲಾಗುತ್ತದೆ.

    ಗಣೇಶನನ್ನು ಮುಖ್ಯವಾಗಿ ಸುಖಾಸನ, ಪದ್ಮಾಸನ, ಉತ್ಕಟಾಸನ, ಸಮಭಂಗ, ತ್ರಿಭುಗಾದಿ ಆಸನಗಳಲ್ಲಿ ನಿರ್ದೇಶಿಸಲಾಗಿದೆ. ನಿರಾಕಾರನೂ ಸರ್ವಶಕ್ತನೂ ಆದ ದೇವನನ್ನು ಸಾಕಾರರೂಪದಲ್ಲಿ ಪಂಚಭೂತಗಳ ಪೂಜಾವಿಧಾನದಲ್ಲಿ ಆರಾಧಿಸುವುದು ನಮ್ಮವರ ಬಹುಪ್ರಾಚೀನ ಪದ್ಧತಿ. ವೇದಗಳಲ್ಲಿಯೇ ಗಣಪತಿ ಪೂಜಾ ನಿರೂಪಣೆಯುಂಟು. ಇದು ಉಪನಿಷತ್ತುಗಳ ಕಾಲದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಮಹಾಭಾರತದ ಕಾಲ ಕ್ರಿ.ಪೂ. 400 ರಿಂದ ಕ್ರಿ.ಶ. 400 ಎಂದು ಇತಿಹಾಸ ತಜ್ಞ ವಿಂಟರ್‌ನಿಟ್ಸ್ ಹೇಳಿದರೆ, ಮಹಾಭಾರತದಲ್ಲಿ ಗಣಪತಿಯು ವ್ಯಾಸರಿಗೆ ಲಿಪಿಕಾರನಾಗಿದ್ದ ಎನ್ನಲಾಗಿದೆ.

    ಪುರಾಣಗಳಲ್ಲಿ ಗಣಪತಿಯನ್ನು ಕುರಿತು ಸಾಕಷ್ಟು ಕಥೆಗಳಿವೆ. ಗಣಪತಿ ಜನ್ಮಕಥೆಯ ವಿವರಗಳನ್ನು ತಿಳಿಯಬೇಕಾದರೆ ಬ್ರಹ್ಮ ವೈವರ್ತ ಪುರಾಣ, ಮತ್ಸ್ಯ ಪುರಾಣ, ಶಿವಪುರಾಣ, ವರಾಹಪುರಾಣ, ಸ್ಕಂದಪುರಾಣ, ಶ್ರೀಗಣೇಶಪುರಾಣಗಳನ್ನು ಓದಬೇಕು. 

    ಒಟ್ಟಿನಲ್ಲಿ ದೇಶಾದ್ಯಂತ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವೃತವೆಂದು ಆಚರಿಸಲಾಗುತ್ತದೆ. ಈ ದಿನ ಮೋದಕ, ಕಡುಬು ಮೊದಲಾದ ಸಿಹಿತಿಂಡಿ ಮಾಡಿ ಗಣಪತಿಗೆ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

    
    

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಆಚರಣೆಗೆ (Celebration) ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಗಣೇಶೋತ್ಸವ (Ganesh Chaturthi) ಎರಡೆರಡು ದಿನದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 18 ಅಂತಾ ಕೆಲವೆಡೆ ಇದ್ದರೆ ಇನ್ನೂ ಕೆಲವು ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 19 ಅಂತಾ ಇದೆ. ಹಾಗಿದ್ದರೆ ಪಂಚಾಂಗದ ಪ್ರಕಾರ ಯಾವಾಗ ಗಣೇಶ ಹಬ್ಬ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಸಾಮಾನ್ಯವಾಗಿ ಗೌರಿ ಹಬ್ಬದ ಬಳಿಕ ಗಣೇಶನ ಮೆರವಣಿಗೆ ಹಬ್ಬ ಆಚರಿಸುವುದು ರೂಢಿ. ಆದರೆ ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದೆ. ಹೀಗಾಗಿ ಹಬ್ಬ ಸೆಪ್ಟೆಂಬರ್ 18ಕ್ಕಾ ಅಥವಾ 19ಕ್ಕಾ ಎಂಬ ಗೊಂದಲ ಇದೆ. ಕ್ಯಾಲೆಂಡರ್‌ನಲ್ಲಿಯೂ ಈ ಬಗ್ಗೆ ಗೊಂದಲ ಇದೆ. ಸೆಪ್ಟೆಂಬರ್ 18ರಂದು ತದಿಗೆ ಚತುರ್ಥಿ ಹಾಗೂ ಸೆಪ್ಟೆಂಬರ್ 19ರಂದು ಪಂಚಮಿ ಚತುರ್ಥಿ ಇದೆ. ತದಿಗೆ ಚತುರ್ಥಿಯಂದೇ ಗೌರಿ ಗಣೇಶ ಹಬ್ಬ ಆಚರಣೆಗೆ ಸೂಕ್ತ. ಒಟ್ಟಿಗೆ ಗೌರಿ ಗಣೇಶ ಪ್ರತಿಷ್ಟಾಪನೆ ಮಾಡಬಹುದು ಎಂಬುದು ಕೆಲವರ ವಾದ. ಇದನ್ನೂ ಓದಿ: ವರ್ಗಾವಣೆ ಮಾಡಿದರೂ ಜಾಗ ಖಾಲಿ ಮಾಡದ ಮುಕ್ತ ವಿವಿ ಹಣಕಾಸು ಅಧಿಕಾರಿ!

    ಜೋತಿಷ್ಯರ (Astrologer) ಪ್ರಕಾರ ಚಂದ್ರಮಾನವನ್ನು ಉತ್ತರ ಕರ್ನಾಟಕ, ಆಂಧ್ರದವರು ಚಂದ್ರಮಾನ ರೀತಿ ಆಚರಿಸುತ್ತಾರೆ. ಚಂದ್ರಮಾನ ರೀತಿ ಆಚರಣೆ ಮಾಡುವವರು ಗೌರಿ ಗಣೇಶ ಒಂದೇ ದಿನ ಆಚರಣೆ ಮಾಡುತ್ತಾರೆ. ಸೆಪ್ಟೆಂಬರ್ 18ರ ಸೋಮವಾರವೇ ಗೌರಿ, ಗಣೇಶ ಹಬ್ಬ ಆಚರಣೆ ಮಾಡುವುದು ಸೂಕ್ತ. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

    ಸೋಮವಾರ ಬೆಳಗ್ಗೆ 9:56ರಿಂದ ಮಂಗಳವಾರ ಬೆಳಗ್ಗೆ 10:20 ನಿಮಿಷದವರಿಗೆ ಹಬ್ಬ ಆಚರಿಸಬಹುದು. ಸೌರಮಾನ ಪದ್ಧತಿ ಪ್ರಕಾರ ಹಬ್ಬ ಆಚರಿಸುವವರು ಮಂಗಳವಾರ ಆಚರಣೆ ಮಾಡುವುದು ಸೂಕ್ತ. ಚಂದ್ರಮಾನ ಪದ್ಧತಿಯಲ್ಲಿ ಆಚರಿಸುವವರು ಸೋಮವಾರವೇ ಗೌರಿ ಗಣೇಶ ಹಬ್ಬ ಮಾಡಬಹುದು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವವೇನು?

    ಕೃಷ್ಣ ಜನ್ಮಾಷ್ಟಮಿ ಹಬ್ಬದ ಮಹತ್ವವೇನು?

    ಕೃಷ್ಣ ಜನ್ಮಾಷ್ಟಮಿ ದೇಶಾದ್ಯಂತ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ ಹಾಗೂ ಇದನ್ನು ವೈಭವದಿಂದ ಆಚರಿಸಲಾಗುತ್ತದೆ.

    ಆಚರಣೆ ಎಲ್ಲಿ, ಹೇಗೆ?
    ಈ ದಿನ ಕೃಷ್ಣಜನ್ಮಾಷ್ಟಮಿ ಹಬ್ಬವಾಗಿದ್ದು, ಇದನ್ನು ಎಲ್ಲೆಡೆ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ಅತ್ಯಂತ ಅದ್ದೂರಿಯಿಂದ ಕೃಷ್ಣನ ಅಷ್ಟಮಿಯನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಎಲ್ಲಾ ಕೃಷ್ಣನ ಮಂದಿರದಲ್ಲಿ ಕೂಡ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಎಲ್ಲಾ ಕಡೆ ಸಾಂಪ್ರದಾಯಿಕ ಆಟಗಳು, ಚಿಕ್ಕ ಮಕ್ಕಳಿಗೆ ರಾಧಾ ಕೃಷ್ಣನ ಅಲಂಕಾರ ಮಾಡಿ ನೋಡುವುದೇ ಈ ಒಂದು ಹಬ್ಬದ ವಿಶೇಷ.

    ಪುರಾಣದಲ್ಲೇನಿದೆ?
    ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

    ಕೃಷ್ಣ ತ್ಯಾಗಮಯಿ:
    ಶ್ರೀಕೃಷ್ಣನ ಬಗ್ಗೆ ಎಲ್ಲರಿಗೂ ಗೌರವ ಹೆಚ್ಚು ಏಕೆಂದರೆ ಆತನ ತ್ಯಾಗ ಮನೋಭಾವದಿಂದ. ಎಷ್ಟೇ ರಾಜರನ್ನು ಗದ್ದರೂ ಗದ್ದುಗೆ ಏರಲಿಲ್ಲ. ಉದಾ-ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ. ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟಕಟ್ಟಿದ. ಸತ್ಯ ಧರ್ಮಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ.

    ಇಷ್ಟೆಲ್ಲಾ ಆದರೂ ಶ್ರೀಕೃಷ್ಣನ ನಯ-ವಿನಯ ಅನುಕರಣೀಯ. ರಾಜ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲು ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಅವನಿಗೆ ಆ ಯಾಗದ ದೊಡ್ಡ ಸ್ಥಾನವಾದ ‘ಅಗ್ರಪೂಜೆ’ ಲಭಿಸಿತು. ನಂಬಿ ಕರೆದರೆ ‘ಓ’ ಎಂದು ಓಡಿ ಬಂದು ಉದ್ಧರಿಸುವುದು ಅವನ ವೈಶಿಷ್ಟ್ಯ.

    ಸುಧಾಮನ ಪ್ರಸಂಗ, ದೌಪದಿಯ ವಸ್ತ್ರಾಪಹರಣ ಸಂದರ್ಭ, ದೂರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಮುದ್ದಾಗಿ ಮಾಡಿದ್ದು, ಧೃತರಾಷ್ಟ್ರನಿಗೆ ದಿವ್ಯದೃಷ್ಟಿ ನೀಡಿದ್ದು ಮುಂತಾದ ಸಂದರ್ಭಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ.

    ಇಂತಹ ಮಹಾಮಹಿಮನ ಜನ್ಮಸ್ಮರಣೆ ನಿಜಕ್ಕೂ ಅರ್ಥಪೂರ್ಣ. ಶ್ರೀಕೃಷ್ಣನು ನಮ್ಮ ಜೀವನದ ಕಲುಷಿತ ಕಾಳ ರಾತ್ರಿಯಲ್ಲಿ ಜನಿಸಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವ ಶುಭದಿನ ಇದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]