Tag: festival

  • Bengaluru | ಹಬ್ಬದ ದಿನ ಮನೆಯಲ್ಲಿ ನಾನ್‌ವೆಜ್ ತಿಂದಿದ್ದಕ್ಕೆ ಸ್ನೇಹಿತನ ಕೊಲೆ

    Bengaluru | ಹಬ್ಬದ ದಿನ ಮನೆಯಲ್ಲಿ ನಾನ್‌ವೆಜ್ ತಿಂದಿದ್ದಕ್ಕೆ ಸ್ನೇಹಿತನ ಕೊಲೆ

    ಬೆಂಗಳೂರು: ಹಬ್ಬದ (Festival) ದಿನ ಮನೆಯಲ್ಲಿ ನಾನ್‌ವೆಜ್ (Nonveg) ತಿಂದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಚಿಕ್ಕಜಾಲದಲ್ಲಿ (Chikkajala) ನಡೆದಿದೆ.

    ಅಸ್ಸಾಂ ಮೂಲದ ರಾಜೇಶ್ ಕೊಲೆಯಾದ ಯುವಕ. ಬಿಹಾರ ಮೂಲದ ಶಂಭೂ ಎಂಬಾತನಿಂದ ಕೃತ್ಯ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಕೂಡ ಗಾರೇ ಕೆಲಸ ಮಾಡಿಕೊಂಡಿದ್ದರು. ಬಿಹಾರದಲ್ಲಿ ದೀಪಾವಳಿ ಹಬ್ಬದ ಮುಗಿದ ತಕ್ಷಣ ಛತ್ ಪೂಜೆ ಹಬ್ಬ ಮಾಡುತ್ತಾರೆ. ಈ ವೇಳೆ ಯಾವುದೇ ನಾನ್‌ವೆಜ್ ತಿನ್ನುವಂತಿಲ್ಲ. ಅದರಂತೆ ಶಂಭೂ ಕೂಡ ಎರಡು ದಿನದಿಂದ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದ. ಇದನ್ನೂ ಓದಿ: ಯೋಗೀಶ್‌ಗೌಡ ಕೊಲೆ ಸಾಕ್ಷ್ಯನಾಶ ಕೇಸ್- ಸುಪ್ರೀಂನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆ

    ಸೋಮವಾರ ಹಬ್ಬದ ಪ್ರಮುಖ ದಿನವಾಗಿದೆ. ಆದರೆ ಶಂಭೂ ಪೂಜೆ ಮಾಡಿ ಹೊರಗೆ ಹೋಗಿದ್ದ ವೇಳೆ ಜೊತೆಗೆ ವಾಸವಿದ್ದ ರಾಜೇಶ್, ಹೊರಗಿನಿಂದ ನಾನ್‌ವೆಜ್ ತಂದು ಮನೆಯಲ್ಲೇ ತಿಂದಿದ್ದಾನೆ. ಈ ವಿಚಾರ ತಿಳಿದ ಶಂಭೂ ಜೊತೆಗೆ ವಾಸವಿದ್ದ ರಾಜೇಶ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು, ಈ ಗಲಾಟೆಯಲ್ಲಿ ರಾಜೇಶ್‌ಗೆ ಗಂಭೀರ ಸ್ವರೂಪದ ಗಾಯವಾಗಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಜಾಲ ಪೊಲೀಸರು, ಆರೋಪಿ ಶಂಭೂವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್

  • ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿ ಆಚರಣೆ ಬಲು ಜೋರು!

    ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿ ಆಚರಣೆ ಬಲು ಜೋರು!

    ಭಾರತದಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಜೋರಾಗಿದೆ. ಮಾರುಕಟ್ಟೆಗಳಲ್ಲಿ ದೀಪಗಳು, ಹಣತೆಗಳು, ಪಟಾಕಿಗಳು ಗಮನ ಸೆಳೆಯುತ್ತಿವೆ. ಜನರು ಕೂಡ ಹಬ್ಬದ ಮೂಡ್‌ನಲ್ಲಿದ್ದಾರೆ. ಆದರೆ ದೀಪಾವಳಿ ಸಂಭ್ರಮ ಭಾರತದಲ್ಲಷ್ಟೇ ಅಲ್ಲ, ಪ್ರಪಂಚದ ಬೇರೆಬೇರೆ ದೇಶಗಳಲ್ಲಿಯೂ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಾಗಿದ್ರೆ ಯಾವೆಲ್ಲಾ ದೇಶಗಳು ದೀಪಾವಳಿ ಆಚರಿಸುತ್ತದೆ ಎಂದು ತಿಳಿಯಲು ಮುಂದೆ ಓದಿ.

    ಅಮೆರಿಕ:
    ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ದೀಪಾವಳಿ ದಿನವನ್ನು ರಾಜ್ಯದಲ್ಲಿ ಅಧಿಕೃತ ರಜಾದಿನವನ್ನಾಗಿ ಘೋಷಿಸಲಾಗಿದೆ. ಈ ರಾಜ್ಯದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ರಜಾದಿನವನ್ನಾಗಿ ಘೋಷಿಸಲು ಸ್ಥಳಿಯಾಡಳಿತ ನಿರ್ಧರಿಸಿದೆ. ಈ ಮೂಲಕ ದೀಪಾವಳಿಗೆ ಸಾರ್ವಜನಿಕ ರಜೆ ಘೋಷಿಸಿದ ಮೂರನೇ ರಾಜ್ಯ ಇದಾಗಿದೆ. ದೀಪಾವಳಿ ಸಮಯದಲ್ಲಿ ಅಮೆರಿಕದ ಹಿಂದೂ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಅನಿವಾಸಿ ಭಾರತೀಯರು ಸೇರಿದಂತೆ ಅನೇಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಲ್ಲದೇ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ.

    ನೇಪಾಳ:
    ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು ತಿಹಾರ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇದು ದೀಪಾವಳಿಯನ್ನೇ ಹೋಲುವ ಹಬ್ಬವಾಗಿದೆ. ಇದನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ವಿವಿಧ ದೇವತೆಗಳು ಮತ್ತು ಸದ್ಗುಣಗಳನ್ನು ಪ್ರತಿನಿಧಿಸುವ ಕಾಗೆಗಳು, ನಾಯಿಗಳು ಮತ್ತು ಹಸುಗಳಂತಹ ಪ್ರಾಣಿ ಈ ಹಬ್ಬದ ಸಮಯದಲ್ಲಿ ಗೌರವಿಸಲಾಗುತ್ತದೆ. ತಿಹಾರ್‌ನ ಕೊನೆಯ ದಿನ ಸಹೋದರ ಸಹೋದರಿಯರಿಗೆ ಮೀಸಲಿಡುವ ಭಾಯಿ ಧೂಜ್ ಹಬ್ಬವನ್ನೂ ಆಚರಿಸಲಾಗುತ್ತದೆ.

    ಶ್ರೀಲಂಕಾ:
    ಶ್ರೀಲಂಕಾದಲ್ಲಿ ತಮಿಳರು ದೀಪಾವಳಿ ಹಬ್ಬ ಆಚರಿಸುತ್ತಾರೆ. ಇಲ್ಲಿ ದೀಪಾವಳಿಯು ರಾವಣನ ಮೇಲೆ ರಾಮನ ವಿಜಯವನ್ನು ಸೂಚಿಸುತ್ತದೆ. ರಾಮಾಯಣದಲ್ಲಿ ಶ್ರೀಲಂಕಾವನ್ನು ರಾವಣನ ರಾಜ್ಯವೆಂದು ನಂಬಿರುವುದರಿಂದ, ದುಷ್ಟರ ಮೇಲೆ ಒಳ್ಳೆಯದ ವಿಜಯದ ಆಚರಣೆಯಾಗಿ ದೀಪಾವಳಿಯು ಇಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.

    ಮಲೇಷ್ಯಾ:
    ಮಲೇಷ್ಯಾದಲ್ಲಿ ದೀಪಾವಳಿಯನ್ನು ಹರಿ ದೀವಾಳಿ ಎಂದು ಕರೆಯಲಾಗುತ್ತದೆ. ಇಲ್ಲಿರುವ ಭಾರತೀಯರ ವಲಸಿಗರು ದೀಪ ಬೆಳಗುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ. ಅಲ್ಲಿ ವಿಶೇಷ ಅಡುಗೆಗಳನ್ನು ಮಾಡಿ ಸ್ನೇಹಿತರು, ಕುಟುಂಬಸ್ಥರು ಹಂಚಿ ತಿನ್ನುತ್ತಾರೆ.

    ಮಾರಿಷಸ್:
    ಮಾರಿಷಸ್‌ನಲ್ಲಿ ಭಾರತೀಯ ಮೂಲದ ಹಲವರು ಇರುವ ಕಾರಣ ಇಲ್ಲಿ ಭಾರತದ ರೀತಿಯಲ್ಲೇ ದೀಪಾವಳಿ ಆಚರಿಸಲಾಗುತ್ತದೆ. ಈ ದೇಶದಲ್ಲಿ ಕೂಡ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸುವುದು, ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಮಾಡಲಾಗುತ್ತದೆ.

    ಸಿಂಗಾಪುರ:
    ಸಿಂಗಾಪುರದಲ್ಲೂ ದೀಪಾವಳಿ ಸಂಭ್ರಮ ಜೋರಿರುತ್ತದೆ. ಇಲ್ಲಿನ ಬೀದಿಗಳು ವಿಶಿಷ್ಟ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಜನರು ಪ್ರಾರ್ಥನೆ ಸಲ್ಲಿಸಲು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸರ್ಕಾರವು ದೀಪಾವಳಿಯನ್ನು ರಜಾದಿನ ಎಂದು ಗುರುತಿಸುತ್ತದೆ.

    ಫಿಜಿ:
    ಫಿಜಿ ದೇಶದಲ್ಲೂ ಕೂಡ ಭಾರತೀಯರು ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಅನೇಕ ಫಿಜಿಗಳು ಭಾರತೀಯ ಮೂಲದವರಾಗಿರುವ ಕಾರಣ ದೀಪ ಹಚ್ಚುವುದು, ಪಟಾಕಿ ಹೊಡೆಸುವುದು ಮುಂತಾದ ಆಚರಣೆಯ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

    ಟ್ರಿನಿಡಾಡ್ ಮತ್ತು ಟೊಬಾಗೊ:
    ವೆನೆಜುವೆಲಾ ಬಳಿ ಕೆರೆಬಿಯನ್ ದ್ವೀಪರಾಷ್ಟ್ರಗಳಾದ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ದೀಪಾವಳಿಯು ಒಂದು ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿದೆ. ಅಲ್ಲಿ ಕೂಡ ಬಹುತೇಕರು ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ. ಇಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಬಣ್ಣ ಬಣ್ಣದ ದೀಪಗಳನ್ನು ಬೆಳಗುವುದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪಟಾಕಿ ಸಿಡಿಸುವುದು ಮಾಡುತ್ತಾರೆ.

    ಗಯಾನಾ:
    ದಕ್ಷಿಣ ಅಮೆರಿಕ ಪ್ರಾಂತ್ಯಕ್ಕೆ ಸೇರುವ ಗಯಾನಾದಲ್ಲೂ ದೀಪಾವಳಿ ಹಬ್ಬದ ಆಚರಣೆ ಬಲು ಜೋರಿದೆ. ಇಲ್ಲಿ ಇಂಡೋ-ಗಯಾನೀಸ್ ಸಮುದಾಯದಿಂದ ದೀಪಾವಳಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಇಲ್ಲಿ ಭಾರತೀಯ ಸಂಪ್ರದಾಯವನ್ನು ಸ್ಥಳೀಯ ಪದ್ಧತಿಗಳೊಂದಿಗೆ ಸಂಯೋಜಿಸಲಾಗುತ್ತದೆ.

    ದಕ್ಷಿಣ ಆಫ್ರಿಕಾ:
    ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಬಹುದೊಡ್ಡ ಸಮುದಾಯವಿದೆ. ವಿಶೇಷವಾಗಿ ಇಲ್ಲಿನ ಡರ್ಬನ್‌ನಲ್ಲಿ ದೀಪಾವಳಿಯನ್ನು ದೀಪಗಳನ್ನು ಬೆಳಗಿಸುವ ಮೂಲಕ, ಪಟಾಕಿಗಳನ್ನು ಸಿಡಿಸುವ ಮೂಲಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಚರಿಸುತ್ತಾರೆ.

  • ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ಹಬ್ಬದ ಅವಧಿಯಲ್ಲಿ ಹೆಚ್ಚುವರಿ ವಿಮಾನದ ವ್ಯವಸ್ಥೆ, ದರ ನಿಯಂತ್ರಣಕ್ಕೆ ಡಿಜಿಸಿಎ ಸೂಚನೆ

    ನವದೆಹಲಿ: ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಒತ್ತಡವನ್ನು ನಿರ್ವಹಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚಿನ ವಿಮಾನಗಳ ವ್ಯವಸ್ಥೆ ಮಾಡಲು ಮತ್ತು ಟಿಕೆಟ್ ದರಗಳನ್ನು ಸೀಮಿತಗೊಳಿಸಲು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸೂಚಿಸಿದೆ.

    ದೀಪಾವಳಿ, ಛತ್ ಮತ್ತು ಇತರ ಹಬ್ಬಗಳ ಸಮಯದಲ್ಲಿ ವಿಮಾನಯಾನದ ಬೇಡಿಕೆಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್‌ಗಳು ಲಭ್ಯವಾಗುವಂತೆ ಮತ್ತು ಪ್ರಯಾಣದ ಅವಕಾಶಗಳು ಹೆಚ್ಚಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ಡಿಜಿಸಿಎ ತನ್ನ ಆದೇಶದಲ್ಲಿ, ವಿಮಾನಯಾನ ಸಂಸ್ಥೆಗಳು (MoCA) ತಮ್ಮ ಟಿಕೆಟ್ ದರಗಳನ್ನು ಸಮಂಜಸವಾಗಿಡಲು ಮತ್ತು ದರಗಳ ಏರಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕ್ರಿಮಿನಾಶಕ ಸಿಂಪಡಿಸಿದ್ದ ಆಹಾರ ಸೇವನೆ ಶಂಕೆ – 60ಕ್ಕೂ ಹೆಚ್ಚು ಕುರಿಗಳು ಸಾವು

    ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳು ದೊರೆತು, ಟಿಕೆಟ್ ದರಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಕ್ರಮವು ಪ್ರಯಾಣಿಕರಿಗೆ ಹಬ್ಬದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಲು ತವರಿಗೆ ತೆರಳುವವರಿಗೆ ಸಹಾಯಕವಾಗಲಿದೆ. ಡಿಜಿಸಿಎ ಈ ಆದೇಶದ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದ್ದು, ವಿಮಾನಯಾನ ಸಂಸ್ಥೆಗಳು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದೆ . ಇದನ್ನೂ ಓದಿ: ಒಂದು ತಿಂಗಳ ಒಳಗೆ ಫ್ರೆಂಚ್‌ ಪ್ರಧಾನಿ ಪಟ್ಟದಿಂದ ಇಳಿದ ಲೆಕೋರ್ನು – 3 ವರ್ಷದಲ್ಲಿ 7 ಮಂದಿ ರಾಜೀನಾಮೆ

  • ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಅಂತೂ ಇಂತೂ ಗಣೇಶ ಹಬ್ಬವೂ ಬಂತು. ಮಕ್ಕಳಿಗೆ, ಪುರುಷರಿಗೆ ವಿಘ್ನ ವಿನಾಯಕನಿಗೆ ಬಪ್ಪ ಮೋರೆಯಾ ಎಂದು ಜಯಘೋಷ ಕೂಗುತ್ತಾ ಆತನನ್ನು ಮೂರ್ತಿಯನ್ನು ಮನೆಗೆ ತರೋದು ಒಂದು ಖುಷಿಯಾದರೆ, ಹೆಣ್ಮಕ್ಕಳಿಗೆ ಗಣೇಶ ಹಬ್ಬದ ಮುಂದಿನ ಆಚರಿಸುವ ಗೌರಿ ಹಬ್ಬ ತುಂಬಾ ವಿಶೇಷವಾಗಿರುತ್ತದೆ.

    ಹೌದು, ಆ.27 ಗಣೇಶ ಹಬ್ಬ ಆದ್ರೆ, ಅದರ ಮುಂದಿನ ದಿನ ಅಂದ್ರೆ ಆ.26 ಮಂಗಳವಾರ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ದಾಂಪತ್ಯ ಜೀವನವು ಸದಾ ಸಂತೋಷದಿಂದ, ಸುಖ ನೆಮ್ಮದಿಯಿಂದ ಕೂಡಿರಲ್ಲಿ ಎಂದು ಮಹಿಳೆಯರು ಗೌರಿಯನ್ನು ಪೂಜಿಸುತ್ತಾರೆ.

    ಗೌರಿ ಹಬ್ಬದ ಇತಿಹಾಸವೇನು?
    ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸು ಮಾಡುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ.

    ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆ. ಅಂತೆಯೇ ಪಾರ್ವತಿ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವಿಕೆಯನ್ನು ಆಚರಿಸಲಾಗುತ್ತದೆ. ಮರುದಿನ ಪಾರ್ವತಿ ಸುತ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾಗಿ, ಪಾರ್ವತಿ ದೇವಿಯ ತವರು ಮನೆಗೆ ಆಗಮಿಸುವುದನ್ನು ಗೌರಿ ಹಬ್ಬವಾಗಿ ಆಚರಿಸಲಾಗುತ್ತದೆ.

    ಏಕೆ ಆಚರಿಸುತ್ತಾರೆ?
    ಗೌರಿ ಹಬ್ಬದ ಆಚರಣೆಯ ಹಿಂದೆಯೂ ಪುರಾಣ ಕಥೆಯಿದೆ. ಹಿಂದೆ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡುವ ಮೂಲಕ ಮಹಾಶಿವನನ್ನು ಒಲಿಸಿಕೊಂಡಳು. ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಗೌರಿಯನ್ನು ಪ್ರಾರ್ಥಿಸುತ್ತಾರೆ. ಇನ್ನು ಅವಿವಾಹಿತರು ಒಳ್ಳೆಯ ಬಾಳ ಸಂಗಾತಿ ಸಿಗಲೆಂದು ಪ್ರಾರ್ಥಿಸುತ್ತಾರೆ.

     

    ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಗಳನ್ನು ಮಾಡುವುದರಿಂದ ತಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಮನೆಮಾಡುತ್ತದೆ ಎಂಬುದು ನಂಬಿಕೆ. ಮುಖ್ಯವಾಗಿ ದಾಂಪತ್ಯ ಜೀವನವು ಚೆನ್ನಾಗಿರಲು ಗೌರಿ ಹಬ್ಬವನ್ನು ಮಹಿಳೆಯರು ಆಚರಿಸುತ್ತಾರೆ.

    ಗೌರಿ ಪೂಜೆ ಮಾಡುವ ವಿಧಾನ
    ಮೊದಲಿಗೆ ಹೆಣ್ಣುಮಕ್ಕಳು ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ, ಹೂವುಗಳು, ರಂಗೋಲಿ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ, ಕುಂಕುಮ, ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಪೂಜೆಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
    ಗೌರಿ ಹಬ್ಬದ ದಿನದಂದು ಗೌರಿ ದೇವಿಯ ವಿಗ್ರಹ ಹೂವಿನಿಂದ ಅಲಂಕರಿಸಲಾಗುತ್ತದೆ. ತಾಯಿ ಗೌರಿಗೆ ಹೊಸ ಸೀರೆ, ಆಭರಣ ಹಾಕಿ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ಕಲಶವನ್ನ ಸಿದ್ಧ ಮಾಡಬೇಕು. ಬಳಿಕ ತಾಯಿ ಗೌರಿಗೆ ಭಕ್ತಿಯಿಂದ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ಸುಮಂಗಲಿಯರಿಗೆ ಬಾಗಿನ ನೀಡುವುದು ಕೂಡ ಗೌರಿ ಹಬ್ಬದ ವಿಶೇಷವಾಗಿದೆ.

  • ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ

    ಹಿಂದೂಗಳ ವರ್ಷಾರಂಭ ಎಂದೇ ಪರಿಗಣಿಸಲ್ಪಡುವ ಯುಗಾದಿ (Ugadi Festival), ಪ್ರಕೃತಿಯಲ್ಲೂ ಹೊಸ ಚಿಗುರು ಸೃಷ್ಟಿಯ ಕಾಲ. ವಸಂತ ಮಾಸದ ಆರಂಭ. ಋತುಗಳ ರಾಜ ವಸಂತನ ಆಗಮನವನ್ನು ಸೂಚಿಸುವ ಹಬ್ಬ. ಗಿಡಮರಗಳೆಲ್ಲ ತನ್ನ ಹಣ್ಣೆಲೆ ಕಳಚಿಕೊಂಡು ಹೊಸ ಚಿಗುರಿನೊಂದಿಗೆ ಹಸಿರಿನಿಂದ ಕಂಗೊಳಿಸುವ ಸಮಯವಿದು. ಯುಗಾದಿ ಎಲ್ಲರ ಪಾಲಿಗೂ ಸ್ಪೂರ್ತಿ, ಚೈತನ್ಯದ ಚಿಲುಮೆಯಿದ್ದಂತೆ. ಯುಗಾದಿಯನ್ನು ಹಿಂದೂಗಳಷ್ಟೇ ಅಲ್ಲ, ಇಡೀ ಪ್ರಕೃತಿಯೇ ಸಂಭ್ರಮಿಸುತ್ತದೆ. ಯುಗಾದಿ ಬೇಸಾಯದ ಆರಂಭದ ಸೂಚಕವೂ ಹೌದು. ಹಬ್ಬದ ದಿನ ಹಾಗೂ ಮರುದಿನ ಹೊನ್ನಾರು ಹೂಡಿ ಜಮೀನುಗಳಲ್ಲಿ ಶಾಸ್ತ್ರೋಕ್ತವಾಗಿ ನೇಗಿಲು ಉಳುವ ಪದ್ಧತಿ ಇಂದಿಗೂ ನಾಡಿನೆಲ್ಲೆಡೆ ಜೀವಂತವಾಗಿದೆ. ಇದನ್ನು ರೈತರು ಶುಭಸೂಚಕ ಎಂದೇ ಪರಿಗಣಿಸುತ್ತಾರೆ.

    ಬೇವು-ಬೆಲ್ಲ
    ಒಂದೊಂದು ಹಬ್ಬಕ್ಕೂ ಒಂದೊಂದು ಸದಾಶಯದ ಸಂದೇಶವಿರುತ್ತದೆ. ಯುಗಾದಿ ಹಬ್ಬದ ಕೇಂದ್ರಬಿಂದು ಬೇವು-ಬೆಲ್ಲ. ಬಾಯಿಗೆ ಸಿಹಿ ಮತ್ತು ಕಹಿ ರುಚಿ. ಹಾಗೆಯೇ ಬಾಳಿಗೆ ಸುಖ-ದುಃಖದ ಊರಣ. ಬೇವು ನಾಲಿಗೆಗೆ ಕಹಿ ಇರಬಹುದು. ಆದರೆ, ಹಲವು ರೋಗಗಳಿಗೆ ಔಷಧ. ಜೀವನದಲ್ಲಿ ಸುಖದೊಂದಿಗೆ ಬರುವ ಕಷ್ಟಗಳು ಎಂತಹ ಸಂದರ್ಭದಲ್ಲೂ ದಿಟ್ಟವಾಗಿ ನಿಲ್ಲುವ ಛಲವನ್ನು ಕಲಿಸುತ್ತವೆ. ಯುಗಾದಿಯಲ್ಲಿ ನಾವು ಸವಿಯುವ ಬೇವು-ಬೆಲ್ಲ, ಬದುಕಿನ ಪಾಠದ ಸಂಕೇತ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?

    ಪಾನಕ-ಮಜ್ಜಿಗೆ
    ಯುಗಾದಿ ಹಬ್ಬದ ದಿನ ಹಳ್ಳಿಗಳಲ್ಲಿ ಪಾನಕ-ಮಜ್ಜಿಗೆಯದ್ದೇ ಗಮ್ಮತ್ತು. ಬಾಯಿಗೆ ರುಚಿ, ದೇಹಕ್ಕೆ ತಂಪು. ಯುಗಾದಿ ಬೇಸಿಗೆಯ ಆರಂಭದ ಸೂಚಕವಾದ್ದರಿಂದ ದೇಹವನ್ನು ತಂಪಾಗಿಡಬೇಕು. ಅದಕ್ಕಾಗಿ ಎಲ್ಲೆಲ್ಲೂ ಪಾನಕ-ಮಜ್ಜಿಗೆಯನ್ನು ವಿತರಿಸಲಾಗುತ್ತದೆ. ಹಬ್ಬದ ದಿನ ಈ ಪಾನೀಯಗಳ ರುಚಿಗೆ ಮಾರುಹೋಗದವರಿಲ್ಲ. ಯುಗಾದಿಗೆ ಹೋಳಿಗೆ ಊಟ ಮತ್ತೊಂದು ವಿಶೇಷ.

    ಜೂಜಾಟ
    ಗ್ರಾಮೀಣ ಕ್ರೀಡೆಗಳ ಮೆರುಗು ಯುಗಾದಿ ಹಬ್ಬದಲ್ಲಿರುತ್ತದೆ. ಯುಗಾದಿ ಅಂದಾಕ್ಷಣ ಥಟ್ಟನೆ ನೆನಪಾಗುವುದು ಜೂಜಾಟ. ‘ಅಪರಾಧ’ವೇ ಆಗಿರುವ ಈ ಕ್ರೀಡೆಗೆ ಅದೊಂದು ದಿನ ಮಾಫಿ ಇರುತ್ತದೆ. ಪೊಲೀಸರ ಭಯವಿಲ್ಲದೇ ನೂರು, ಇನ್ನೂರು, ಸಾವಿರ ಎನ್ನುತ್ತಾ ಬೆಟ್ಟು ಕಟ್ಟಿ ಜನ ಇಸ್ಪೀಟ್ ಆಡುತ್ತಾರೆ. ಮೂರೆಲೆ, ಅಂದರ್‌ಬಾಹರ್, ರಮ್ಮಿ, ಜಾಕ್‌ಪಟ್ ಇತ್ಯಾದಿ ಆಟಗಳನ್ನು ಆಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಿಂಬೆಹಣ್ಣನ್ನು ದೂರಕ್ಕೆ ಎಸೆಯುವ ವಿಶೇಷ ಆಟವನ್ನು ಆಡುತ್ತಾರೆ. ಹಿಂದೆಲ್ಲ ಪಚ್ಚೆಯಾಟ, ಚೌಕಾಭಾರ ಆಟಗಳನ್ನು ಆಡುತ್ತಿದ್ದರು. ಈಗ ಅವುಗಳ ಸ್ಥಾನವನ್ನು ಇಸ್ಪೀಟ್ ಆಟ ಅತಿಕ್ರಮಿಸಿಕೊಂಡಿದೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ‘ಯುಗ ಯುಗವೇ ಕಳೆದರೂ.. ಯುಗಾದಿ ಮರಳಿ ಬರುತಿದೆ..’ ಎಂಬ ಕವಿವಾಣಿಯಂತೆ ಯುಗಾದಿ ಮತ್ತೆ ಬಂದಿದೆ. ಹಿಂದೂಗಳ ಹೊಸವರುಷ, ಹೊಸ ಹರುಷದೊಂದಿಗೆ ಆಗಮಿಸಿದೆ. ಮನೆ ತೊಳೆದು, ಹೂವು-ತೋರಣಗಳಿಂದ ಅಲಂಕರಿಸಿ, ಹೊಸ ಉಡುಗೆ ತೊಟ್ಟು, ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಮನೆಯಲ್ಲಿ ವಿಶೇಷ ಅಡುಗೆ ಮಾಡಿ ಹಬ್ಬದೂಟ ಮಾಡುವ ಸಂಭ್ರಮಕ್ಕೆ ಎಣೆಯಿಲ್ಲ.

  • ವಯಸ್ಸಿನ ಅಂತರವಿಲ್ಲದೇ ಆಚರಿಸುವ ಹಬ್ಬ ದೀಪಾವಳಿ!

    ವಯಸ್ಸಿನ ಅಂತರವಿಲ್ಲದೇ ಆಚರಿಸುವ ಹಬ್ಬ ದೀಪಾವಳಿ!

    ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಹಬ್ಬಗಳನ್ನು ಹೊಂದಿದ ದೇಶ. ನಮ್ಮ ಸಮಾಜದಲ್ಲಿ ಪ್ರತಿಯೊಂದು ಹಬ್ಬವೂ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದರೂ, ‘ದೀಪಾವಳಿ’ ಎಂದೂ ಕರೆಯಲ್ಪಡುವ ದೀಪಾವಳಿಯು (Deepavali) ಸಂತೋಷ, ಉತ್ಸಾಹ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಕಟಿಸುವ ಹಬ್ಬವಾಗಿ ಗುರುತಿಸಲ್ಪಡುತ್ತದೆ.

    ಬೆಳಕಿನ ಹಬ್ಬದಂದು ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ದೀಪಗಳಿಂದ ಬೆಳಗಿಸುತ್ತೇವೆ. ಇದು ಕತ್ತಲೆಯ ವಿರುದ್ಧ ಬೆಳಗುವ ಬೆಳಕಿನ ಸಂಕೇತ, ಅಜ್ಞಾನದ ವಿರುದ್ಧ ಜ್ಞಾನದ ಜಯದ ಸಂಕೇತ, ದುಷ್ಟರ ವಿರುದ್ಧ ಶಿಷ್ಟರ ಜಯದ ಸಂಕೇತ. ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಜಯದ ಸಂಕೇತ ಎಂದು ಅರ್ಥೈಸಬಹುದು.

    DEEPA

    ವಯಸ್ಸಿನ ಅಂತರವಿಲ್ಲದೇ ದೀಪಾವಳಿ ಹಬ್ಬವನ್ನು ಆಚರಿಸುವುದು ವಿಶೇಷ. ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ದೀಪಾವಳಿ ಆರಂಭವಾಗುತ್ತದೆ. ಮಕ್ಕಳು ಮನೆ ಮುಂದೆ ತಳಿರು ತೋರಣ ಕಟ್ಟಿದ್ದರೆ ಹೆಣ್ಣು ಮಕ್ಕಳು ದೊಡ್ಡ ರಂಗೋಲಿ ಬಿಡಿಸಿ ಮನೆಯ ಅಂಗಳವನ್ನು ಅಲಂಕರಿಸುತ್ತಾರೆ. ನರಕ ಚತುದರ್ಶಿಯಂದು ಮನೆಯ ಪ್ರತಿಯೊಬ್ಬ ಸದಸ್ಯರೂ ಬೆಳಗ್ಗೆ ಅಭ್ಯಂಜನ ಸ್ನಾನ (Abhagyan Snan) ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಸ್ನಾನದ ಮನೆಯಲ್ಲಿ ಒಂದು ದೊಡ್ಡ ಹಂಡೆ ಇರುತ್ತಿತ್ತು. ಈ ಹಂಡೆಗೆ ನೀರನ್ನು ಸಂಗ್ರಹಿಸಿ ಇಡಲಾಗುತ್ತಿತ್ತು. ಅಂದು ಹೆಂಗಳೆಯರು ಸ್ನಾನಗೃಹಗಳಲ್ಲಿ ಇರುವ ಹಂಡೆ, ಕೊಳಗಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಅಲಂಕರಿಸಿದರೆ ಗಂಡು ಮಕ್ಕಳು ಸ್ನಾನಗೃಹದಲ್ಲಿ ಇರುವ ಎಲ್ಲಾ ಪಾತ್ರೆಗಳಿಗೂ ನೀರು ತುಂಬಿಸಿಡುತ್ತಾರೆ. ಇಂದು ಬಚ್ಚಲು ಮನೆಗಳಲ್ಲಿ ನೀರಿನ ಹಂಡೆಗಳೇ ಕಾಣೆಯಾಗಿದೆ. ಬದಲಾದ ಸಂದರ್ಭಗಳಲ್ಲಿ ಸಾಂಕೇತಿಕವಾಗಿ ಮನೆಯಲ್ಲಿ ಇರಬಹುದಾದ ಬಾಯ್ಲರ್ ಅಥವಾ ಗೀಸರ್‌ಗಳನ್ನು ಅಲಂಕರಿಸುವ ಮೂಲಕ ಆಚರಿಸಬಹುದು. ಇದನ್ನೂ ಓದಿ: 500 ವರ್ಷಗಳಲ್ಲಿ ಮೊದಲ ಬಾರಿಗೆ ರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾನೆ – ಧನ್‌ತೇರಾಸ್‌ಗೆ ಮೋದಿ ಶುಭಾಶಯ

    ದಸರಾ ಸಮಯದಲ್ಲಿ ಆಯುಧ ಪೂಜೆಯ ದಿನ ನಮ್ಮನ್ನು ರಕ್ಷಿಸುವ ಆಯುಧಗಳನ್ನು ಅಲಂಕರಿಸಿ ಪೂಜೆ ಮಾಡುತ್ತೇವೆ. ಅದೇ ರೀತಿಯಾಗಿ ನರಕ ಚತುದರ್ಶಿಯಂದು (Naraka Chaturdashi) ನಮ್ಮ ಮನೆ ಬಳಕೆಯ ವಸ್ತುಗಳನ್ನು ಅಲಂಕರಿಸುತ್ತೇವೆ. ಈ ಮೂಲಕ ವರ್ಷಕ್ಕೊಮ್ಮೆ ಮನೆ ಬಳಕೆಯ ವಸ್ತುಗಳನ್ನು ಚೆನ್ನಾಗಿ ನೋಡಿಕೊಳ್ಳುವ ಭಾವನೆಯನ್ನು ಹಿರಿಯರು ತಂದಿದ್ದಾರೆ.

     

    ದೀಪಾವಳಿಯಂದು ಮನೆಗೆ ನೆಂಟರು ಆಗಮಿಸಿ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಮಕ್ಕಳು ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಾರೆ. ಸಣ್ಣ ಮಕ್ಕಳೊಂದಿಗೆ ದೊಡ್ಡವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಹಬ್ಬದಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳು, ಮಠಗಳು ಮತ್ತು ಮಂದಿರಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ, ದೀಪಾಲಂಕಾರ ಮಾಡಿ ಲಕ್ಷ್ಮಿ, ಸರಸ್ವತಿ, ಕುಬೇರನನ್ನು ಪೂಜೆಸುತ್ತಾರೆ.

    ದೀಪಾವಳಿಯು ಕೇವಲ ಬೆಳಕಿನ ಹಬ್ಬವಲ್ಲ. ಇದು ಸಂತೋಷ, ಸದ್ಭಾವನೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಹಬ್ಬವಾಗಿದೆ. ಇದು ನಮ್ಮನ್ನು ಒಳಗಿರುವ ಬೆಳಕನ್ನು ಅಳವಡಿಸಿಕೊಳ್ಳಲು ಮತ್ತು ಕತ್ತಲೆಯೊಂದಿಗೆ ಹೆಚ್ಚಾಗಿ ಹಿಡಿಯುವ ಜಗತ್ತಿನಲ್ಲಿ ಸಕಾರಾತ್ಮಕತೆ ಮತ್ತು ದಯೆಯನ್ನು ಹರಡಲು ಪ್ರೋತ್ಸಾಹಿಸುತ್ತದೆ. ನಾವು ನಮ್ಮ ದೀಪಗಳನ್ನು ಬೆಳಗಿಸುತ್ತಿದ್ದಂತೆ ನಮ್ಮೊಳಗೆ ಜ್ಞಾನ ಮತ್ತು ಸಹಾನುಭೂತಿಯ ಬೆಳಕನ್ನು ಬೆಳಗಿಸಬೇಕಿದೆ.

  • ದೀಪಾವಳಿ ಹಿನ್ನೆಲೆ ಇಂದು 250ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರ- ರೈಲ್ವೆ ಇಲಾಖೆ

    ದೀಪಾವಳಿ ಹಿನ್ನೆಲೆ ಇಂದು 250ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರ- ರೈಲ್ವೆ ಇಲಾಖೆ

    ನವದೆಹಲಿ: ಭಾರತದಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗುತ್ತಿದ್ದಂತೆ, ಹಬ್ಬದ ಹಿನ್ನೆಲೆ 250ಕ್ಕೂ ಅಧಿಕ ವಿಶೇಷ ರೈಲುಗಳು ಇಂದು ಓಡಾಡಲಿವೆ ಎಂದು ಭಾರತೀಯ ರೈಲ್ವೆ ಇಲಾಖೆ (Indian Railway Department)  ತಿಳಿಸಿದೆ.

    ಪ್ರತೀ ವರ್ಷ ದೀಪಾವಳಿ, ಛತ್ ಪೂಜೆಯ ಸಂದರ್ಭದಲ್ಲಿ ಭಾರತೀಯ ರೈಲ್ವೆ ಹೆಚ್ಚಿನ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ತಮ್ಮ ಊರಿನಿಂದ ದೂರ ಇದ್ದು ಬೇರೆ, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಬ್ಬದ ಸಂದರ್ಭದಲ್ಲಿ ಊರಿಗೆ ಮರಳುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗೆ ಪ್ರಸ್ತುತ ಸಂಚರಿಸುತ್ತಿರುವ ರೈಲುಗಳಲ್ಲಿ ಸೀಟು ಸಿಗದೆ ಪ್ರಯಾಣಿಕರು ಸಾಕಷ್ಟು ಕಷ್ಟ ಅನುಭವಿಸುವ ಸ್ಥಿತಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಾರಿಯೂ 250ಕ್ಕೂ ಅಧಿಕ ವಿಶೇಷ ರೈಲುಗಳು ಹಲವು ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: MUDA Case; ಮುಡಾ ಮಾಜಿ ಆಯುಕ್ತ ನಟೇಶ್‌ ED ವಶಕ್ಕೆ

    ಸುಮಾರು 40 ರೈಲುಗಳನ್ನು ಮುಂಬೈ ವಿಭಾಗವು ನಿರ್ವಹಿಸುತ್ತದೆ. ಇದರಲ್ಲಿ 22 ರೈಲುಗಳು ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಜನಪ್ರಿಯ ಸ್ಥಳಗಳಿಗೆ ಪ್ರಯಾಣಿಸುತ್ತವೆ. ಪೂರ್ವ ರೈಲ್ವೆಯಿಂದ (ಇಆರ್) ಸೋಮವಾರ 50 ವಿಶೇಷ ರೈಲುಗಳು ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ 400 ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತಿದೆ ಎಂದು ಘೋಷಿಸಿತು. ಈ ವರ್ಷ ಪೂರ್ವ ರೈಲ್ವೆ ವಿಶೇಷ ರೈಲುಗಳ ಸಂಖ್ಯೆಯನ್ನು 33 ರಿಂದ 50 ಕ್ಕೆ ಹೆಚ್ಚಿಸಿದೆ ಎಂದು ಪೂರ್ವ ರೈಲ್ವೆಯ ಪಿಆರ್‌ಒ ಕೌಶಿಕ್ ಮಿತ್ರ ತಿಳಿಸಿದ್ದಾರೆ. ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಣೆ – ದೆಹಲಿ, ಪಶ್ಚಿಮ ಬಂಗಾಳ ಜನರಿಗೆ ಸಿಗಲ್ಲ ಸೌಲಭ್ಯ

    ಮುಂಬೈನ (Mumbai) ಬಾಂದ್ರಾ ನಿಲ್ದಾಣದಲ್ಲಿ ದುರಂತದ ಕಾಲ್ತುಳಿತದ ಘಟನೆಯ ನಂತರ, ಭಾರತೀಯ ರೈಲ್ವೆಯು ಬಾಂದ್ರಾ ಟರ್ಮಿನಸ್, ಸೂರತ್, ಉಧ್ನಾ, ವಡೋದರಾ ಮತ್ತು ಅಹಮದಾಬಾದ್‌ನಂತಹ ನಿರ್ಣಾಯಕ ಹೈ-ಟ್ರಾಫಿಕ್ ನಿಲ್ದಾಣಗಳಲ್ಲಿ ಗರಿಷ್ಠ ಸಿಬ್ಬಂದಿ ನಿಯೋಜನೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಘೋಷಿಸಿತು. ಮುಂಬೈ ಸೆಂಟ್ರಲ್, ದಾದರ್, ಬಾಂದ್ರಾ ಟರ್ಮಿನಸ್, ಬೊರಿವಲಿ, ವಸೈ ರೋಡ್, ವಾಪಿ, ವಲ್ಸಾದ್, ಉಧ್ನಾ ಮತ್ತು ಸೂರತ್ ಸೇರಿದಂತೆ ಪ್ರಮುಖ ಮುಂಬೈ ವಿಭಾಗದ ನಿಲ್ದಾಣಗಳಲ್ಲಿ ನ.8ರವರೆಗೆ ಪ್ಲಾಟ್‌ಫಾರ್ಮ್ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಈ ಕ್ರಮವು ಜನಸಂದಣಿಯನ್ನು ನಿಯಂತ್ರಿಸಲು ಮತ್ತು ನಿಲ್ದಾಣದ ಪ್ರದೇಶಗಳಲ್ಲಿ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಜನಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಪಶ್ಚಿಮ ರೈಲ್ವೆಯು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ಹೇಳಿದರು. ಇದನ್ನೂ ಓದಿ: ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಿದ್ರೆ ಹುಷಾರ್! – ದೇವೀರಮ್ಮನ ಭಕ್ತರಿಗೆ ಖಾಕಿ ಖಡಕ್ ಎಚ್ಚರಿಕೆ

  • ಪೂಜಾ ಕೈಂಕರ್ಯದೊಂದಿಗೆ ಹಾಸನಾಂಬೆ ಗರ್ಭಗುಡಿ ಓಪನ್ – ನ.3ಕ್ಕೆ ಜಾತ್ರಾ ಮಹೋತ್ಸವ

    ಪೂಜಾ ಕೈಂಕರ್ಯದೊಂದಿಗೆ ಹಾಸನಾಂಬೆ ಗರ್ಭಗುಡಿ ಓಪನ್ – ನ.3ಕ್ಕೆ ಜಾತ್ರಾ ಮಹೋತ್ಸವ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಅಧಿದೇವತೆ ಹಾಸನಾಂಬೆ (Hasanamba Temple) ದೇವಿ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ. ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಜೊತೆ, ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಬಾಗಿಲನ್ನು ತೆರೆಯಲಾಯಿತು.

    ಎರಡು ಕಡೆಯ ಪೂಜೆಗಾಗಿ ಪೂಜಾ ಸಾಮಾಗ್ರಿ, ಒಡವೆ, ದೇವಿಯ ಅಲಂಕಾರ ಸಾಮಾಗ್ರಿಗಳೊಂದಿಗೆ ಮುತ್ತೈದೆಯರ ಜೊತೆಗೆ ದೇಗುಲಕ್ಕೆ ಪ್ರವೇಶ ಮಾಡಲಾಯಿತು. ಗರ್ಭಗುಡಿ ಬಾಗಿಲು ತೆರೆಯುವ ಮೊದಲು ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡಲಾಯಿತು. ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

    ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಮಧ್ಯಾಹ್ನ 12:10ಕ್ಕೆ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಗೊನೆ ಇರುವ ಬಾಳೆಗೊನೆ ಕಡಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಗರ್ಭಗುಡಿ ಮುಚ್ಚುವ ವೇಳೆ ಹಚ್ಚಿದ್ದ ದೀಪ ಉರಿಯುತ್ತಿತ್ತು. ದೇವರಿಗೆ ಇರಿಸಿದ್ದ ಹೂವು ಕೂಡ ಬಾಡಿರಲಿಲ್ಲ. ಹಾಗೆಯೆ ದೇವರಿಗೆ ಅರ್ಪಿಸಿದ ನೈವೇದ್ಯ ಕೂಡ ಹಳಸಿರಲಿಲ್ಲ. ಇದನ್ನೂ ಓದಿ: ಬೆಂಗಳೂರು| ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕರುಗಳಾದ ಎಚ್.ಪಿ.ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

    ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಅನ್ನಭಾಗ್ಯ ಯೋಜನೆಗೆ ಕನ್ನ – ಅಂಗಡಿಯ ಡೀಲರ್‌ನಿಂದಲೇ ಅಕ್ರಮ ಸಾಗಾಟ

    ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ಇದನ್ನೂ ಓದಿ: Cyclone Dana – ಸರಪಳಿ ಬಳಸಿ ರೈಲನ್ನು ಕಟ್ಟಿದ ಅಧಿಕಾರಿಗಳು

  • ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

    ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ – ಇಂದು ಮಧ್ಯಾಹ್ನ ತೆರೆಯಲಿದೆ ಗರ್ಭಗುಡಿ ಬಾಗಿಲು

    ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನದ (Hassan) ಅಧಿದೇವತೆ, ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಶ್ವೀಜ ಮಾಸದ ಮೊದಲವಾದ ಇಂದು ಮಧ್ಯಾಹ್ನ 12 ಗಂಟೆ ನಂತರ ದೇವಿಯ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದೆ. ನ.3ರ ಬೆಳಿಗ್ಗೆವರೆಗೆ ದೇವಿಯ ದರ್ಶನೋತ್ಸವಕ್ಕೆ ಅವಕಾಶವಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

    ವರ್ಷಕ್ಕೊಮ್ಮೆ ದರ್ಶನ ನೀಡಲು ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಅಬ್ಬರ – ಮಕ್ಕಳು, ವಾಹನ ಸವಾರರು ಪರದಾಟ

    ಹಾಸನಾಂಬೆ ದೇವಾಲಯದ (Hasanamba Temple) ಒಳ-ಹೊರಗೆ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಹಾಸನಾಂಬೆಯ ಬಾಗಿಲ ಮುಂಭಾಗ ಕಲಶದ ರೀತಿಯ ಹೂವಿನ ಕುಂಡ ಎಲ್ಲರ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ದೇವಾಲಯದ ಬಳಿಗೆ ಬರುವ ಗಣ್ಯಾತಿಗಣ್ಯರಿಗೆ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಎರಡು ಮಾರ್ಗ ಮಾಡಲಾಗಿದೆ. ಹಾಗೆಯೇ ಲಡ್ಡು-ಪ್ರಸಾದ ವಿತರಣೆಗೆ 24 ಕೌಂಟರ್ ತೆರೆಯಲಾಗಿದೆ. ಹಾಸನ ನಗರವನ್ನು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ 1400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಯೋಗೇಶ್ವರ್‌, ಸಂಡೂರಿಗೆ ಅನ್ನಪೂರ್ಣ – ಉಪಚುನಾವಣೆಗೆ ‘ಕೈ’ ಅಭ್ಯರ್ಥಿಗಳ ಪಟ್ಟಿ ರಿಲೀಸ್‌

    ಇಂದಿನಿಂದ ನವೆಂಬರ್ 3ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ಕಟ್ಟಡ ದುರಂತ – ಮೂವರು ಅರೆಸ್ಟ್‌

  • ಮುತ್ತೈದೆಯರಿಗಾಗಿ ವರಮಹಾಲಕ್ಷ್ಮೀ ಹಬ್ಬ; ಮಹತ್ವ ಏನು? ಆಚರಣೆ ಹೇಗೆ?

    ಮುತ್ತೈದೆಯರಿಗಾಗಿ ವರಮಹಾಲಕ್ಷ್ಮೀ ಹಬ್ಬ; ಮಹತ್ವ ಏನು? ಆಚರಣೆ ಹೇಗೆ?

    ಶ್ರಾವಣವು ಹಬ್ಬಗಳ ಮಾಸವಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರಪಂಚಮಿ. ಇದರ ನಂತರ ಪೌರ್ಣಮಿಗಿಂತ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಮ್ಮೆ ಶುಕ್ರವಾರ ಹುಣ್ಣಿಮೆ ಬಂದರೆ ಅಂದೇ ವರಮಹಾಲಕ್ಷ್ಮೀ ವ್ರತ. ಈ ಶುಕ್ರವಾರಕ್ಕೆ ‘ಸಂಪತ್ ಶುಕ್ರವಾರ’ ಎಂಬ ಹೆಸರೂ ಇದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.

    ‘ಲಕ್ಷ್ಮೀ’ ಎಂದರೆ ಎಲ್ಲವನ್ನೂ ಯಾವಾಗಲೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾಗಿರುವ ಭಗವಂತನೊಡನೆ ನಿತ್ಯಯೋಗವನ್ನು ಹೊಂದಿ ಸರ್ವಜ್ಞಳಾಗಿರುವಾಕೆಯೇ ‘ಲಕ್ಷ್ಮೀ’. ಲಕ್ಷ್ಮೀ ಸಂಪತ್ತಿನ ಅಧಿದೇವತೆ, ಅವಳ ಅನುಗ್ರಹವಾದರೆ ಮನೆಯಲ್ಲಿ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮೀ, ಕೀರ್ತಿಲಕ್ಷ್ಮಿ, ಮೋಕ್ಷ ಲಕ್ಷ್ಮಿ ಎಲ್ಲವೂ ನೆಲೆಸುತ್ತವೆ. ಆದ್ದರಿಂದ ಸಿರಿ ಸೌಭಾಗ್ಯ ಸಂಪದಭಿವೃದ್ಧಿಗಾಗಿ ಸುಮಂಗಲಿಯರು, ಪುರುಷರು ಈ ವ್ರತವನ್ನು ಆಚರಿಸುತ್ತಾರೆ.

    ಮಹಾಲಕ್ಷ್ಮೀಯ ಜನನ:
    ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮೀ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮೀಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.

    ಪುರಾಣದ ಕಥೆ:
    ಒಮ್ಮೆ ಶಿವ ಪಾರ್ವತಿಯರು ಏಕಾಂತದಲ್ಲಿ ಮಾತನಾಡುತ್ತಿದ್ದಾಗ ಈ ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತಮಾಡಿದರೆ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿಯು ಕೇಳಿದಾಗ, ತಡಮಾಡದೇ ಸ್ವತಃ ಈಶ್ವರನು ವರಮಹಾಲಕ್ಷ್ಮೀ ವ್ರತವೇ ಅತ್ಯಂತ ಶ್ರೇಷ್ಠವಾದ ವ್ರತ ಎಂದು ತಿಳಿಸಿ ಆ ವ್ರತದ ಮಹಾತ್ಮೆಯನ್ನು ಪಾರ್ವರ್ತಿಗೆ ಕಥೆಯ ರೂಪದಲ್ಲಿ ಹೇಳುತ್ತಾನೆ.

    ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಬಡ ಮಹಿಳೆ ಇದ್ದಳು. ಬಡತನದಲ್ಲಿ ಆಕೆ ಖಾಯಿಲೆ ಪೀಡಿತ ತನ್ನ ವಯೋವೃಧ್ಧ ಅತ್ತೆ ಮಾವಂದಿರ ಸೇವೆಯನ್ನು ನಿಶ್ಕಲ್ಮಶವಾಗಿ ಅತ್ಯಂತ ಶ್ರಧ್ಧೆಯಿಂದ ಮಾಡುತ್ತಿದ್ದರೂ ಅವರ ಖಾಯಿಲೆಗಳು ವಾಸಿಯಾಗದೇ ಅವರು ನರಳುತ್ತಿದ್ದನ್ನು ನೋಡಿ, ದೇವರೇ, ದಯವಿಟ್ಟು ನಮ್ಮ ಅತ್ತೆ ಮಾವನವರ ಖಾಯಿಲೆಯನ್ನು ಗುಣಪಡಿಸು. ಅವರ ನರಳುವಿಕೆಯನ್ನು ನಾನು ನೋಡಲಾರೆ ಎಂದು ಪ್ರತೀ ದಿನವೂ ಕೇಳಿಕೊಳ್ಳುತ್ತಿದ್ದಳು. ಅದೊಂದು ದಿನ ಇದ್ದಕ್ಕಿದ್ದಂತೆಯೇ ಆಕೆಯ ಸ್ವಪ್ನದಲ್ಲಿ ಮಹಾಲಕ್ಷ್ಮೀ ಕಾಣಿಸಿಕೊಂಡು, ಚಾರುಮತಿ ನೀನು ಅತ್ತೆ- ಮಾವಂದಿರನ್ನು ಕಾಳಜಿಯಿಂದ ಸೇವೆ ಮತ್ತು ಶುಶ್ರೂಷೆ ಮಾಡುವುದನ್ನು ಕಂಡು ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನೆಲ್ಲಾ ನೆರವೇರಿಸುತ್ತೇನೆ ಎಂದು ಹೇಳಿ ಕಣ್ಮರೆಯಾದಳು.

    ಸಾಕ್ಷಾತ್ ಮಹಾಲಕ್ಷ್ಮೀಯೇ ತನ್ನ ಕನಸಿನಲ್ಲಿ ಬಂದು ಅನುಗ್ರಹಿಸಿದ್ದನ್ನು ನೋಡಿ ಸಂತೋಷಗೊಂಡ ಚಾರುಮತಿಗೆ ತನ್ನ ಕನಸಿನ ಬಗ್ಗೆ ತನ್ನೆಲ್ಲಾ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರ ಬಹಳ ಭಕ್ತಿ ಭಾವಗಳಿಂದ ಮಹಾಲಕ್ಷ್ಮೀಯನ್ನು ಆರಾಧನೆ ಮಾಡಿ ಆ ತಾಯಿಯ ಅನುಗ್ರಹ ಪಡೆಯುತ್ತಾಳೆ. ತದನಂತರ ಆಕೆಯ ಬಡತನವೂ ನೀಗುವುದಲ್ಲದೆ, ಆಕೆಯ ಅತ್ತೆ ಮತ್ತು ಮಾವನವರ ಖಾಯಿಲೆಗಳೂ ವಾಸಿಯಾಗುತ್ತದೆ. ಅಂದಿನಿಂದ ಪ್ರತೀ ವರ್ಷವೂ ಆಕೆ ತನ್ನ ಬಂಧು ಮಿತ್ರರೊಡನೆ ತಪ್ಪದೇ ಮಹಾಲಕ್ಷ್ಮಿಯ ವ್ರತಾಚರಣೆ ಮಾಡಿ ಸಕಲ ಆಯುರಾರೋಗ್ಯ ಐಶ್ವರ್ಯವಂತಳಾಗಿ ಹಲವಾರು ವರ್ಷ ಸುಖಃವಾದ ನೆಮ್ಮದಿಯಾದ ಜೀವನ ನಡೆಸುತ್ತಾಳೆ.

     

    ವ್ರತಾಚರಣೆ ಹೇಗೆ?
    ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.

    ಲಕ್ಷ್ಮೀಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮೀಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮೀ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನೂ ಇಡುತ್ತಾರೆ. ಬಿಲ್ವ ವೃಕ್ಷದಲ್ಲಿ ಲಕ್ಷ್ಮೀ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮೀ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮೀಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.

    ವರಮಹಾಲಕ್ಷ್ಮೀ ಹಬ್ಬದ ದಿನದಂದು ಸುಮಾರು ಎರಡು ಗೇಣಿನುದ್ದದ 12 ಹಸಿ ದಾರಗಳನ್ನು ತೆಗೆದುಕೊಂಡು ಅದಕ್ಕೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ಅದಕ್ಕೆ ಸೇವಂತಿಗೆ ಹೂವನ್ನು ಕಟ್ಟಿ ದೇವಿಯ ಪಕ್ಕದಲ್ಲಿರಿಸಿ ಪೂಜೆ ಮಾಡಬೇಕು. ಲಕ್ಷ್ಮೀ ಪೂಜೆ ಮಾಡಿದ ನಂತರ ಈ ದಾರವನ್ನು ಮನೆಯ ಎಲ್ಲಾ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಂಡು ಮುಂದೆ ಬರುವ ಗೌರೀ ಹಬ್ಬದವರೆಗೂ ಜನತದಿಂದ ಅದನ್ನು ಕಾಪಾಡಿಕೊಂಡು ಬಂದು ಗಣೇಶನ ವಿಸರ್ಜನೆಯ ದಿನ ಭೀಮನವಾಸ್ಯೆ, ಗೌರೀ ಹಬ್ಬದ ದಿನ ಕಟ್ಟಿಕೊಂಡ ದಾರದ ಸಮೇತ ಈ ದಾರವನ್ನು ವಿಸರ್ಜಿಸಬೇಕು.

    ಪೂಜೆ ಮುಗಿದ ನಂತರ ಮನೆಯ ನೆರೆಹೊರೆಯ ಮುತ್ತೈದೆಯರನ್ನೆಲ್ಲಾ ಕರೆದು ಅವರಿಗೆ ಅರಿಶಿನ, ಕುಂಕುಮ, ಇನ್ನೂ ಕೆಲ ಹಿರಿಯ ಮುತ್ತೈದೆಯರಿಗೆ ಈ ದಾರ ಸಹಿತ ಹಸಿ ಮೊರದಲ್ಲಿ ಅಕ್ಕಿ, ತೆಂಗಿನಕಾಯಿ, ತಾಂಬೂಲ ಸಹಿತ ದಕ್ಷಿಣೆ, ಬಳೆ, ರವಿಕೆ ಕಣ ಅಥವಾ ಸೀರೆ ಇಟ್ಟು ವಾಯನದಾನ ಕೊಡುವ ಮೂಲಕ ವರಮಹಾಲಕ್ಷ್ಮೀಯ ಪೂಜೆ ಸಂಪೂರ್ಣವಾಗುತ್ತದೆ. ಲಕ್ಷ್ಮೀಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ.