Tag: Fertilizer

  • ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್

    ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್

    ಮೈಸೂರು: ರಾಜ್ಯದಲ್ಲಿ ಯಾವುದೇ ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ. ಕೃತಕವಾಗಿ ಅಭಾವ ಸೃಷ್ಟಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೈಸೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿದವರ ಮೇಲೆ ಮೈಸೂರಿನಲ್ಲಿ ಈಗಾಗಲೇ ನಾಲ್ಕು ಕೇಸ್ ದಾಖಲಾಗಿದೆ. ಹಲವರು ಅಕ್ರಮವಾಗಿ ಗೋದಾಮಿನಲ್ಲಿ ಇಟ್ಟು ಅಭಾವ ಸೃಷ್ಟಿಸಿದ್ದಾರೆ. ಇದರಿಂದ ರೈತರು ಕ್ಯೂನಲ್ಲಿ ನಿಲ್ಲುವ ಸಮಸ್ಯೆ ಉಂಟಾಗುತ್ತಿದೆ ಎಂದರು. ಇದನ್ನೂ ಓದಿ:  ಕಾನೂನು ರಕ್ಷಣೆ ರದ್ದು – ಟ್ವಿಟ್ಟರ್ ವಿರುದ್ಧ ಬಿತ್ತು ಮೊದಲ ಕೇಸ್

    ರೈತರಿಗೆ ಬಿತ್ತನೆ ಬೀಜಗಳು ಸೂಕ್ತ ಬೆಲೆಯಲ್ಲಿ ನಿಗದಿತ ಸಮಯಕ್ಕೆ ಸಿಗಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಕೃತಕವಾಗಿ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಹಾಗೂ ಸಾಧ್ಯವಾದರೆ ಅಂತಹ ಅಂಗಡಿಗಳನ್ನು ಜಪ್ತಿ ಮಾಡಿ ಎಂದರು.

    ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಬಿತ್ತನೆ ಬೀಜಕ್ಕೆ 39798 ಕ್ವಿಂಟಾಲ್ ಬೇಡಿಕೆ ಇದ್ದು, 45275 ಕ್ವಿಂಟಾಲ್ ಲಭ್ಯತೆ ಇದೆ‌. ರಸಗೊಬ್ಬರ 44,209 ಮೆಟ್ರಿಕ್ ಟನ್ ದಾಸ್ತಾನು ಇತ್ತು. ಈಗಾಗಲೇ 26,459 ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. ಇನ್ನೂ 17,749 ಮೆಟ್ರಿಕ್ ಟನ್ ದಾಸ್ತಾನು ಉಳಿದಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

    ಶಾಸಕರಾದ ಕೆ.ಮಹದೇವ್, ಹರ್ಷವರ್ಧನ್, ಅನೀಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಧರ್ಮಸೇನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೀಶ್, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಇತರರು ಹಾಜರಿದ್ದರು.

  • NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    ಬೆಂಗಳೂರು: ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಮಿನಿಕಿಟ್ ರೂಪದಲ್ಲಿ “ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ”(ಎನ್.ಎಫ್.ಎಸ್.ಎಂ)ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 12.60 ಕೋ.ರೂ. ಮೌಲ್ಯದ ಮಿನಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಎನ್.ಎಫ್.ಎಸ್.ಎಂ ಯೋಜನೆಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಿಗೆ, 4 ಕೆ.ಜಿ.ಹೆಸರು 4 ಜಿಲ್ಲೆಗಳಿಗೆ 20 ಕೆ.ಜಿಯಂತೆ 8 ಜಿಲ್ಲೆಗಳಿಗೆ ಹಾಗೂ 8 ಕೆ.ಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆಗಳ ಮಿನಿಕಿಟ್ ಗಳನ್ನು ವಿತರಿಸಲಾಗಿದ್ದು, ಮಿಶ್ರಬೆಳೆಗಳನ್ನು ಬೆಳೆಯಲು ಸಹ ಈ ಅಭಿಯಾನದಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    2020-21 ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಲ್ಲಿ ಶೇ.2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಇದನ್ನು ಹೋಲಿಸಿದರೆ ಕರ್ನಾಟಕದಲ್ಲಿ ಶೇ.10 ರಷ್ಟು ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕೂಡ ಕಳೆದ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿರುವುದನ್ನು ನೋಡಿದರೆ ಕೃಷಿಯತ್ತ ಜನರ ಒಲವು ಹಾಗೂ ಕೋವಿಡ್ ಅವಧಿಯಲ್ಲಿಯೂ ಸಹ ರೈತರ ಶ್ರಮಕ್ಕೆ ಇದು ಸಾಧನೆಯಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಬಿತ್ತನೆ ಗುರಿ:
    ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಯಿದೆ.

    ರಸಗೊಬ್ಬರ ವಿವರ:
    ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
    2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

  • ಹಾವೇರಿಯಲ್ಲಿ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ, ವಾರಕ್ಕೊಮ್ಮೆ ಮಾನಿಟರ್: ಬೊಮ್ಮಾಯಿ

    ಹಾವೇರಿಯಲ್ಲಿ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ, ವಾರಕ್ಕೊಮ್ಮೆ ಮಾನಿಟರ್: ಬೊಮ್ಮಾಯಿ

    ಹಾವೇರಿ: ಹವಾಮಾನ ಇಲಾಖೆಯ ವರದಿಯಂತೆ ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮುಂಗಾರು ಬಿತ್ತನೆ ಕೃಷಿ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹವಾಮಾನ ಇಲಾಖೆಯ ಮಾಹಿತಿಯಂತೆ ಈ ವರ್ಷ ಮುಂಗಾರು ಮಳೆ ಶೇ.4ರಷ್ಟು ಕಡಿಮೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ. ಆದಾಗ್ಯೂ ವಾಡಿಕೆ ಮಳೆಯಂತೆ ಜಿಲ್ಲೆಯಲ್ಲಿ ಮುಂಗಾರಿಗೆ ಅಗತ್ಯವಾದ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಕುರಿತಂತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಬಿತ್ತನೆ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ 15 ರಿಂದ 18 ಸಾವಿರ ಮೆಟ್ರಿಕ್ ಡಿಎಪಿ ಗೊಬ್ಬರ ಬೇಡಿಕೆ ಇದೆ. ಈಗಾಗಲೇ ಅಂದಾಜು 15 ಸಾವಿರ ಮೆಟ್ರಿಕ್ ಟನ್‍ನಷ್ಟು ಗೊಬ್ಬರ ದಾಸ್ತಾನು ಇದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿಗದಿಯಾದ ಗೊಬ್ಬರ ಹಂಚಿಕೆಯನ್ನು ತಿಂಗಳ ಮೊದಲವಾರದಲ್ಲಿ ಪೂರೈಕೆ ಮಾಡಲು ಈಗಾಗಲೇ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಈ ವರ್ಷ ಡಿಎಪಿ ಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತು ಪ್ರತಿ ವಾರ ಮಾನಿಟರ್ ಮಾಡಲಾಗುವುದು ಎಂದು ತಿಳಿಸಿದರು.

    ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 2018ರಲ್ಲಿ 14,653, 2019ರಲ್ಲಿ 16,291, 2020ರಲ್ಲಿ 20,312 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಪ್ರಸಕ್ತ ಮುಂಗಾರು ಸಾಲಿನಲ್ಲಿ 26,635 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಈ ವರ್ಷ 6,323 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಮೇ ಕೊನೆಯವರೆಗೆ 10,450 ಮೆಟ್ರಿಕ್ ಟನ್ ಡಿಎಪಿ ಜಿಲ್ಲೆಗೆ ಪೂರೈಕೆಯಾಗಿದ್ದು, 5,960 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಸೇರಿದಂತೆ ಮೇ ತಿಂಗಳಲ್ಲಿ 9,200 ಮೆಟ್ರಿಕ್ ಟನ್ ಸೇರಿದಂತೆ 15,161 ಮೆಟ್ರಿಕ್ ಡಿಎಪಿ ಗೊಬ್ಬರ ಬಳಕೆಗೆ ಲಭ್ಯವಿದೆ ಎಂದು ವಿವರಿಸಿದರು.

    ಈಗಾಗಲೇ 5,745 ಮೆಟ್ರಿಕ್ ಟನ್ ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ. ಪ್ರಸ್ತುತ 9,416 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾ ಮಂಡಳ ನಿಯಮಿತ(ಕೆಎಸ್‍ಸಿಎಂಎಫ್)ನಲ್ಲಿ 2,626 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅಂದಾಜು 14,657 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಲಭ್ಯವಿದೆ. ಜೂನ್ ತಿಂಗಳಲ್ಲಿ ಜಿಲ್ಲೆಗೆ ನಿಗದಿಯಾದ 5,242 ಮೆಟ್ರಿಕ್ ಟನ್ ಹಾಗೂ ಜುಲೈ ತಿಂಗಳಿಗೆ ನಿಗದಿಯಾದ ಕೋಟವನ್ನು ತಿಂಗಳ ಆರಂಭದಲ್ಲಿ ನೀಡಿದರೆ ನಮಗೆ ಜುಲೈವರೆಗೆ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಲಭ್ಯವಾಗಲಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈ ವರ್ಷ ಡಿಎಪಿ ಹೊರತು ಕಾಂಪ್ಲೆಕ್ಸ್, ಎಂಒಪಿ ಹಾಗೂ ಯೂರಿಯಾ ಸೇರಿದಂತೆ 98,425 ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆಯಾಗಿದೆ. 33,635 ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆಯಾಗಿದೆ ಎಂದು ತಿಳಿಸಿದರು.

  • ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ- ಸರ್ಕಾರದಿಂದ ಘೋಷಣೆ

    ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ- ಸರ್ಕಾರದಿಂದ ಘೋಷಣೆ

    – ಮುಂಗಾರು ಚುರುಕು ಹಿನ್ನೆಲೆ ಕ್ರಮ

    ಬೆಂಗಳೂರು: ಕೇರಳಕ್ಕೆ ನಾಳೆ ಮಾನ್ಸೂನ್ ಮಾರುತಗಳು ಪ್ರವೇಶಿಸಲಿದ್ದು, ಈ ಹಿನ್ನೆಲೆ ಭಾರೀ ಮಳೆಯಾಗುತ್ತಿದೆ. ರಾಜ್ಯದಲ್ಲಿ ಸಹ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮುಂಗಾರು ಹಂಗಾಮಿಗೆ ರೈತರು ಭರ್ಜರಿ ಸಿದ್ಧತೆ ನಡೆಸಿದ್ದು, ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅಂಗಡಿಗಳ ಮುಂದೆರ ಸಾಲು ಹೆಚ್ಚುತ್ತಿದೆ. ಉದನ್ನು ಮನಗಂಡ ಸರ್ಕಾರ ರಸಗೊಬ್ಬರ ಸಾಗಣೆ ಹಾಗೂ ಮಾರಾಟಕ್ಕೆ ಅನುಮತಿ ನೀಡಿದೆ.

    ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಬೆ. 6 ರಿಂದ ಸಂಜೆ 6 ಗಂಟೆಯವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರೈತರು ಬೆಳಗ್ಗೆ ಬೇಗ ತೆರಳಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ತಪ್ಪಿದಂತಾಗುತ್ತದೆ. ಇದನ್ನೂ ಓದಿ: ಮುಂಗಾರು ಆರಂಭ- ಬೀಜ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

    ಮತ್ತೊಂದು ಮಹತ್ವದ ಘೋಷಣೆ ಮಾಡಿರುವ ಸರ್ಕಾರ, ರಫ್ತು ವಲಯದ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಗಳ ಕಾರ್ಯಾಚರಣೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಶೇ.50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಸಮ್ಮತಿಸಿದೆ. 1,000 ಕಾರ್ಮಿಕರ ಮೇಲಿರುವ ಕೈಗಾರಿಕೆಗಳಲ್ಲಿ ಶೇ.10ರಷ್ಟು ಕಾರ್ಮಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ವಾರಕ್ಕೆ ಎರಡು ಬಾರಿ ಟೆಸ್ಟ್ ಮಾಡಬೇಕು ಎಂದು ಷರತ್ತುಬದ್ಧ ಅನುಮತಿ ನೀಡಿದೆ.

  • 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

    1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

    ಹುಬ್ಬಳ್ಳಿ: ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿ ಬರಿಸುತ್ತದೆ.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ, ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸಲು ಆದೇಶಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಡಿಎಪಿ ರಸಗೊಬ್ಬರ ಒಟ್ಟು, 46474.15 ಮೆಟ್ರಿಕ್ ಟನ್ ಸಂಗ್ರಹವಿದೆ. ಕ್ಟಿಂಟಲ್ ಗೊಬ್ಬರಕ್ಕೆ 1413.25 ರೂಪಾಯಿ ರೈತರಿಗೆ ಹೊರೆಯಾಗಲಿದೆ. ಆದರೆ ಕೇಂದ್ರ ಸರ್ಕಾರ ಪ್ರಕಟಿಸಿದ ಸಬ್ಸಿಡಿಯಿಂದ ಡಿಪಿಎ ದರ ಪ್ರಸಕ್ತ ಮಾರುಕಟ್ಟೆಯಲ್ಲಿ 1200 ರೂಪಾಯಿಗೆ ದೊರೆಯುತ್ತಿದೆ.

    ಹೀಗಾಗಿ ಹಲವು ಜಿಲ್ಲೆಗಳಲ್ಲಿ ಗೊಬ್ಬರ ದಾಸ್ತಾನು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ರೈತರಿಗೂ ರಸಗೊಬ್ಬರ ಒಂದೇ ದರದಲ್ಲಿ ಸಿಗುತ್ತಿರಲಿಲ್ಲ. ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ದರವನ್ನ ತಕ್ಷಣ ಕಡಿಮೆ ದರಕ್ಕೆ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಮಾರಾಟ ಮಂಡಳಿಗೆ 213.25 ರೂಪಾಯಿ ಮೊತ್ತವನ್ನ ಪಾವತಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಿಎಸ್‍ವೈಗೆ ಫೋನ್ ಮೂಲಕ ಮನವಿ ಮಾಡಿದ್ದರು. ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

    ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್‍ವೈ ತಕ್ಷಣವೇ ಡಿಎಪಿ ಗೊಬ್ಬರದ ಬೆಲೆಯನ್ನ 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ಸಿಗುವಂತೆ ಆದೇಶ ಮಾಡಿದ್ದು, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸುವಂತೆ ಆದೇಶ ಮಾಡಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿ ಡಿಎಪಿ ರಸಗೊಬ್ಬರದ ಬೆಲೆಯನ್ನ ಕಡಿತಗೊಳಿಸಿದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಸಿಎಂ ಬಿಎಸ್ ವೈ ಹಾಗೂ ಕೃಷಿ ಸಚಿವ ಬಿಸಿ ಪಾಟೀಲಗೆ ಅಭಿನಂದನೆ ಸಲ್ಲಿಸಿದ್ದಾರೆ.

  • ಖಾಸಗಿ ಕಂಪನಿಯಲ್ಲಿ ಅಕ್ರಮವಾಗಿ 420 ಯೂರಿಯಾ ಗೊಬ್ಬರ ಮೂಟೆ ದಾಸ್ತಾನು

    ಖಾಸಗಿ ಕಂಪನಿಯಲ್ಲಿ ಅಕ್ರಮವಾಗಿ 420 ಯೂರಿಯಾ ಗೊಬ್ಬರ ಮೂಟೆ ದಾಸ್ತಾನು

    – ಅಧಿಕಾರಿಗಳ ಕುಮ್ಮಕ್ಕಿಗೆ ರೈತರ ಆಕ್ರೋಶ

    ಕೋಲಾರ: ಅಕ್ರಮವಾಗಿ ಸಂಗ್ರಹಿಸಿದ್ದ 420 ಮೂಟೆ ಯೂರಿಯಾ ಗೊಬ್ಬರವನ್ನು ಕೃಷಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

    ಜಿಲ್ಲೆಯ ಮಾಲೂರು ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರೈತರಿಗೆ ಸರಬರಾಜು ಮಾಡಬೇಕಿದ್ದ ಯೂರಿಯಾ ಗೊಬ್ಬರವನ್ನು ಖಾಸಗಿ ಕಾರ್ಖಾನೆ ಗೋಡೌನ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಅಧಿಕಾರಿಗಳು 420 ಮೂಟೆ ಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮಾಲೂರು ಸಹಾಯಕ ಕೃಷಿ ಅಧಿಕಾರಿ ಚಂದ್ರಪ್ಪ ಅವರ ತಂಡ ದಾಳಿ ನಡೆಸಿದ್ದು, ಮಾಲೂರು ತಾಲೂಕು ಕೊಡಗಿನಬೆಲೆ ಗ್ರಾಮದಲ್ಲಿರುವ ಮಕ್ರ್ಯುರಿ ಪಾಲಿಮರ್ ಕಂಪನಿಯಲ್ಲಿ ಸಂಗ್ರಹಿಸಿದ್ದ 420 ಮೂಟೆ ಯೂರಿಯಾ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ.

    ಇದೇ ರೀತಿ ಶ್ರೀನಿವಾಸಪುರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಯೂರಿಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಧಿಕಾರಿಗಳ ಕುಮ್ಮುಕ್ಕಿನಿಂದಲೆ ಅಕ್ರಮ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸಗೊಬ್ಬರ ಅಂಗಡಿ ಪರಿಶೀಲನೆ ಮಾಡಬೇಕು. ಹೆಚ್ಚಿನ ನಿಗಾ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

  • ರಾಜ್ಯದಲ್ಲಿ ಯೂರಿಯಾ ಕೊರತೆ – ರಸಗೊಬ್ಬರ ಒದಗಿಸುವಂತೆ ಡಿವಿಎಸ್‍ಗೆ ಬಿ.ಸಿ ಪಾಟೀಲ್ ಮನವಿ

    ರಾಜ್ಯದಲ್ಲಿ ಯೂರಿಯಾ ಕೊರತೆ – ರಸಗೊಬ್ಬರ ಒದಗಿಸುವಂತೆ ಡಿವಿಎಸ್‍ಗೆ ಬಿ.ಸಿ ಪಾಟೀಲ್ ಮನವಿ

    ನವದೆಹಲಿ: ರಾಜ್ಯಕ್ಕೆ ಅಗತ್ಯ ಪ್ರಮಾಣ ರಸಗೊಬ್ಬರ ಒದಗಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ ಹಿನ್ನೆಲೆ ದೆಹಲಿಯ ಶಾಸ್ತ್ರೀ ಭವನದಲ್ಲಿರುವ ಕಚೇರಿಯಲ್ಲಿ ಭೇಟಿಯಾದ ಬಿ.ಸಿ ಪಾಟೀಲ್, ರಾಜ್ಯದಲ್ಲಿ ಸೃಷ್ಟಿಯಾಗಿರುವ ಯೂರಿಯಾ ಗೊಬ್ಬರ ಅಭಾವದ ಬಗ್ಗೆ ಮಾಹಿತಿ ನೀಡಿದರು. ಮುಂಗಾರು ಮಳೆ ಉತ್ತಮವಾಗುತ್ತಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಹೀಗಾಗಿ ರಾಜ್ಯದಲ್ಲಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಕೇಂದ್ರ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

    ಬಿ.ಸಿ ಪಾಟೀಲ್ ಅವರಿಂದ ಮಾಹಿತಿ ಪಡೆದುಕೊಂಡ ಡಿ.ವಿ ಸದಾನಂದಗೌಡ ಅಧಿಕಾರಗಳ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಈಗಾಗಲೇ ರಾಜ್ಯ ಸರ್ಕಾರ ಅಗತ್ಯತೆಗೆ ಅನುಸಾರ ರಸಗೊಬ್ಬರ ಪೂರೈಕೆ ಮಾಡಿದ್ದು, ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

  • ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ

    ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ: ಎಚ್‍ಡಿಕೆ

    ಬೆಂಗಳೂರು: ರಾಜ್ಯ ಸರ್ಕಾರ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವುದಕ್ಕೆ ಏದುಸಿರು ಬಿಡುತ್ತಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

    ಕೊರೊನಾ ಹಾಟ್‍ಸ್ಪಾಟ್ ಆಗಿರುವ ಬೆಂಗಳೂರು ನಗರದಲ್ಲಿ ಆಮ್ಲಜನರ ಪೂರೈಕೆ ಸಮಸ್ಯೆ ಎದುರಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಎಚ್‍ಡಿಕೆ ಅವರು, ಆಮ್ಲಜನಕ ಪೂರೈಸುವುದಕ್ಕೆ ಸರ್ಕಾರ ಏದುಸಿರು ಬಿಡುತ್ತಿದೆ ಎಂದಿದ್ದಾರೆ. ಅಲ್ಲದೇ ಈಗ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಸರಣಿ ಟ್ವೀಟ್ ಮಾಡಿ ಸರ್ಕಾರದ ವೈಫಲ್ಯಗಳಿಗೆ ಸಲಹೆ ನೀಡಿರುವ ಎಚ್‍ಡಿಕೆ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು ಕಂಗಾಲಾಗಿದ್ದಾರೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಗೊಬ್ಬರ ಸಿಗದ ರೈತರು ಹಿಡಿಶಾಪ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.

    ರಾಜ್ಯದಲ್ಲಿ ವಾಡಿಕೆಗಿಂತ ಈ ಬಾರಿ ಶೇಕಡ 25 ರಷ್ಟು ಹೆಚ್ಚು ಬಿತ್ತನೆಯಾಗಿದೆ. ಕೃಷಿ ಇಲಾಖೆ ಇದನ್ನು ಅಂದಾಜಿಸುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬಾಯಿಮಾತಿನ ಅನುಕಂಪಕ್ಕಿಂತ ರಸಗೊಬ್ಬರ ಪೂರೈಕೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಹೀಗಾಗಿ ಅವರಿಗೆ ಗೊಬ್ಬರ ಕೊರತೆಯಿಂದ ಬಿತ್ತನೆ ಕಾರ್ಯ ನಿಲ್ಲಿಸದಂತೆ ತುರ್ತು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಹೊತ್ತಲ್ಲೇ ಬೆಂಗ್ಳೂರಲ್ಲಿ ಹೊಸ ಪ್ರಾಬ್ಲಂ – ಉಸಿರಾಟ ತೊಂದರೆ ಇರೋರಿಗೆ ಆಕ್ಸಿಜನ್ ಕೊರತೆ

    ಮತ್ತೊಂದು ಟ್ವೀಟ್‍ನಲ್ಲಿ ಎಚ್‍ಡಿಕೆ, ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮದಿನದ ಶುಭಕೋರಿದ್ದಾರೆ. ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭದಲ್ಲಿ ವಿನಮ್ರವಾಗಿ ಸ್ಮರಿಸಿಕೊಳ್ಳುತ್ತೇನೆ. ತಮಗೆ ದಕ್ಕಿದ ರಾಜಕೀಯ ಪರಮಾಧಿಕಾರವನ್ನು ತಳಸಮುದಾಯದ ಅಭಿವೃದ್ಧಿಗೆ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ ಅರಸು ಅವರ ಕಾರ್ಯ ವೈಖರಿ ಅನುಕರಣೀಯ. ಶೋಷಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಭರದಲ್ಲಿ ಇತರ ಸಮುದಾಯಗಳ ಮೇಲೆ ಸವಾರಿ ಮಾಡದ ರಾಜಕೀಯ ಸೂಕ್ಷ್ಮ ಪ್ರಜ್ಞೆ ಅರಸು ಅವರಲ್ಲಿ ನಾನು ಕಂಡಿದ್ದೇನೆ. ಸಾಮಾಜಿಕ, ಆರ್ಥಿಕ ಸುಧಾರಣೆಗಳ ಹರಿಕಾರ ಅರಸು ಸದಾ ಸ್ಮರಣೀಯರು ಎಂದು ಬರೆದುಕೊಂಡಿದ್ದಾರೆ.

     

    Share this

  • ರೈತರಿಗೆ ತೊಂದರೆ ಕೊಟ್ಟರೆ ಹುಷಾರ್- ಬಿ.ಸಿ.ಪಾಟೀಲ್ ಎಚ್ಚರಿಕೆ

    ರೈತರಿಗೆ ತೊಂದರೆ ಕೊಟ್ಟರೆ ಹುಷಾರ್- ಬಿ.ಸಿ.ಪಾಟೀಲ್ ಎಚ್ಚರಿಕೆ

    ಚಿಕ್ಕಬಳ್ಳಾಪುರ: ಕೊರೊನಾ ಸಂದರ್ಭದ ದುರ್ಲಾಭ ಪಡೆದು ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ತುಂಬಾ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಕೃಷಿ ಕ್ಷೇತ್ರ ಅನುಭವಿಸಿದ ನಷ್ಟದ ಪ್ರಮಾಣದಷ್ಟು ಮತ್ಯಾವ ಕ್ಷೇತ್ರವೂ ನಷ್ಟ ಅನುಭವಿಸಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಾದಷ್ಟೂ ರೈತರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.

    ಈ ಮಧ್ಯೆ ಕೆಲವು ರಸಗೊಬ್ಬರಗಳ ಅಂಗಡಿಯ ಮಾಲೀಕರು ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ರೀತಿ ಪರಿಸ್ಥಿತಿಯ ದುರ್ಲಾಭ ಪಡೆದು ಮೊದಲೇ ಕಷ್ಟನಷ್ಟಕ್ಕೆ ಸಿಲುಕಿರುವ ರೈತರನ್ನು ಶೋಷಿಸುವವರನ್ನು ಸರ್ಕಾರ ಸಹಿಸುವ ಪ್ರಶ್ನೆಯೇ ಇಲ್ಲ. ಅಂತವರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ಎಚ್ಚರಿಸಿದರು.

    ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಕೆಲಕಾಲ ಶೇಖರಿಸಿಡಲು ಅಗತ್ಯವಿರುವ ಶೀಥಲ ಗೃಹಗಳು ಹಾಗೂ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಶ್ಯಕತೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಈ ಸಲಹೆಗಳನ್ನು ಸಿಎಂ ಯಡಿಯೂರಪ್ಪ ಅವತಿಗೂ ಶಿಫಾರಸು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

    ರಾಜ್ಯ ಕೃಷಿ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿದ್ದು, ಇದರಿಂದ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಸಹಿಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಕೆಲವೆಡೆ ಕಳಪೆ ಕೀಟನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಿದ್ದು, ಈವರೆಗೆ 370 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 175 ಮಾದರಿಗಳು ಕಳಪೆ ಎಂದು ಖಚಿತ ಪಟ್ಟಿವೆ. 32 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರದ ಅಂಗಡಿಯೊಂದರಲ್ಲಿ 20 ಲಕ್ಷ ರೂ.ಗಳ ಕಳಪೆ ಸರಕನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದರು.

  • ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    ರಸಗೊಬ್ಬರ, ಔಷಧಿಗಳಿಗೆ ಯಾವುದೇ ತೊಂದರೆ ಇಲ್ಲ: ಡಿವಿಎಸ್

    – ಅವಶ್ಯಕತೆಗಿಂತ ಹೆಚ್ಚು ಪೂರೈಕೆ ಮಾಡ್ತಿದ್ದೇವೆ

    ನವದೆಹಲಿ: ದೆಹಲಿ, ಮಹಾರಾಷ್ಟ್ರ ತಮಿಳುನಾಡು ಸೇರಿ ಕೆಲವು ಪ್ರಮುಖ ರಾಜ್ಯಗಳಲ್ಲಿ ಹೆಚ್ಚು ಪ್ರಮಾಣದ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದು ಸಮಸ್ಯೆ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಡಿವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಮಳೆಗಾಲ ಶುರುವಾಗಿದ್ದು ಬಿತ್ತನೆಗೆ ಬೇಕಾದ ಅವಶ್ಯಕ ವಸ್ತುಗಳು ಮತ್ತು ರಸಗೊಬ್ಬರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಎಂದಿನಂತೆ ರಸಗೊಬ್ಬರ ದೊರೆಯಲಿದ್ದು ಯಾವುದು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸ್ಟಾಕ್ ನೀಡಲಾಗಿದೆ ಎಂದರು.

    ಔಷಧಿಗಳನ್ನು ಇಡಿ ದೇಶಕ್ಕೆ ನಾವು ಪೂರೈಕೆ ಮಾಡುತ್ತಿದ್ದೇವೆ. ದೇಶದ ಎಲ್ಲ ರಾಜ್ಯಗಳಲ್ಲೂ ಔಷಧಿ ಕಡಿಮೆಯಾಗದಂತೆ ನೋಡಿಕೊಳ್ಳಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಾಹನ ಸಂಚಾರ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಸಾಗಾಣಿಕೆಯಲ್ಲಿ ಸ್ವಲ್ಪ ಏರುಪೇರಾಗಿ ಔಷಧೀಯ ಕೊರತೆ ಸೃಷ್ಟಿಯಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಈಗ ಈ ಸಮಸ್ಯೆ ಬಗೆಹರಿದಿದೆ. ಈಗ ಗೂಡ್ಸ್ ಟ್ರೇನ್ ಗಳ ಮೂಲಕ ಔಷಧಿಗಳ ಸಪ್ಲೇ ಆರಂಭವಾಗಿದ್ದು ಯಾವುದಕ್ಕೂ ತೊಂದರೆ ಇಲ್ಲ. ಏಪ್ರಿಲ್ 20ರ ಬಳಿಕ ಪರಿಸ್ಥಿತಿ ಅವಲೋಕಿಸಿ ಪ್ರಧಾನ ಮಂತ್ರಿಗಳ ಸೂಕ್ತ ಕ್ರಮ ತೆಗೆದುಕೊಳ್ಳಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.