Tag: Fence

  • ಎಕ್ಸ್‌ಪ್ರೆಸ್‌ವೇ ಬದಿಗಳಲ್ಲಿ ಇರೋ ಬ್ರೇಸಿಂಗ್ ಕದ್ದು ಗುಜರಿಗೆ ಹಾಕಬೇಡಿ: ಪ್ರತಾಪ್ ಸಿಂಹ ಮನವಿ

    ಎಕ್ಸ್‌ಪ್ರೆಸ್‌ವೇ ಬದಿಗಳಲ್ಲಿ ಇರೋ ಬ್ರೇಸಿಂಗ್ ಕದ್ದು ಗುಜರಿಗೆ ಹಾಕಬೇಡಿ: ಪ್ರತಾಪ್ ಸಿಂಹ ಮನವಿ

    ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ (Bengaluru Mysuru Exprpessway) ಬದಿಗಳಲ್ಲಿ ಅಳವಡಿಸಲಾಗಿರುವ ಕಬ್ಬಿಣದ ಬೇಲಿ (Fence) ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ (Pratap Simha) ಬೇಲಿಗಳನ್ನು ಕದಿಯಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಸಂಸದ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ವಿದ್ಯುತ್ ಕಂಬಗಳ ಬ್ರೆಸಿಂಗ್ ಕದ್ದು ಗುಜರಿಗೆ ಹಾಕುತ್ತಿದ್ದಾರೆ ಎಂಬುದಕ್ಕೆ ತಾಜಾ ಉದಾಹರಣೆ ನೋಡಿ ಹಾಗೂ ವ್ಯತ್ಯಾಸವನ್ನು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

    ಕಳ್ಳತನಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪ್ರತಾಪ್ ಸಿಂಹ, ದಶಪಥ ಹೆದ್ದಾರಿಯ ಬದಿಗಳಲ್ಲಿ ಅಳವಡಿಸಿರುವ ಬೇಲಿಯನ್ನು ಕಳವು ಮಾಡಬೇಡಿ. ಇದು ನಿಮ್ಮದೇ ಹಣದಲ್ಲಿ ನಿರ್ಮಿಸಿರುವ ಯೋಜನೆ. ಇದರ ರಕ್ಷಣೆಯೂ ನಿಮ್ಮದೇ ಎಂದು ಜನರಲ್ಲಿ ವಿನಂತಿಸಿಕೊಂಡಿದ್ದರು. ಇದನ್ನೂ ಓದಿ: ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್‌ – ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?

    ದಕ್ಷಿಣ ಭಾರತದ ಮೊದಲನೇ ಪ್ರವೇಶ ಹಾಗೂ ನಿರ್ಗಮನ ನಿರ್ಬಂಧಿತ ಹೆದ್ದಾರಿಯಲ್ಲಿ ಯಾರೂ ಒಳ ಪ್ರವೇಶಿಸಬಾರದೆಂಬ ಉದ್ದೇಶದಿಂದ ಎರಡೂ ಕಡೆಗಳಲ್ಲಿ ಬೇಲಿ ಅಳವಡಿಸಿದ್ದೇವೆ. ಅವನ್ನು ತುಂಡರಿಸಿ ಕೊಂಡೊಯ್ಯುತ್ತಿರುವುದು ನಾಚಿಕೆಗೇಡಿನ ವಿಚಾರ. ಮನೆಯಲ್ಲಿರುವ ಅನಗತ್ಯ ವಸ್ತುಗಳನ್ನು ಗುಜರಿಗೆ ಹಾಕಿ. ಅದು ಬಿಟ್ಟು ಸಾರ್ವಜನಿಕರ ಆಸ್ತಿಗೆ ತೊಂದರೆ ನೀಡಬೇಡಿ ಎಂದಿದ್ದಾರೆ.

    ಮೈಸೂರು, ಮಂಡ್ಯ, ರಾಮನಗರ ಭಾಗದಲ್ಲಿ ಯಾರಾದರೂ ತಂತಿ ಬೇಲಿ ಕಳ್ಳತನ ಮಾಡುವುದು ಕಂಡುಬಂದರೆ ತಕ್ಷಣ ಮಾಹಿತಿ ನೀಡಿ. ರಾಜ್ಯ ಸರ್ಕಾರ ರಸ್ತೆ ಸುರಕ್ಷತೆ ಕಾಯ್ದೆಯಲ್ಲಿ ಬಿಡುಗಡೆ ಮಾಡುವ ಹಣದಲ್ಲಿ ಈ ಹೆದ್ದಾರಿಗೆ ಕೃತಕ ಬುದ್ದಿಮತ್ತೆ ಸಾಮರ್ಥ್ಯದ ಕ್ಯಾಮೆರಾಗಳನ್ನು ಅಳವಡಿಸಲು 80 ಕೋಟಿ ರೂ.ಯ ಅನುದಾನ ಕೋರಿದ್ದೇವೆ. ಅದನ್ನು ಅಳವಡಿಸುವವರೆಗೆ ಈ ಆಸ್ತಿಗಳನ್ನು ರಕ್ಷಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರತಾಪ್ ಸಿಂಹ ಕೋರಿದ್ದಾರೆ. ಇದನ್ನೂ ಓದಿ: ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

  • ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿಸಿದ ಆನೆ

    ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿಸಿದ ಆನೆ

    ಹಾಸನ: ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಳ್ಳುವ ಆನೆ ತನ್ನ ಸಂಚಾರಕ್ಕೆ ಅಡ್ಡಿಯಾಗಿದ್ದ ವಿದ್ಯುತ್ ಬೇಲಿಯನ್ನು ದಾಟಲು ಮರವನ್ನು ಉರುಳಿಸಲು ವಿಫಲ ಯತ್ನ ನಡೆಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.

    ಗುರುವಾರ ಮುಂಜಾನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಕೋಗರವಳ್ಳಿ ಗ್ರಾಮದ ಸಂತೋಷ ಎಂಬುವವರ ತೋಟಕ್ಕೆ ನುಗ್ಗಿದ ಆನೆ, ಅಲ್ಲಿಂದ ಮುಂದೆ ಹೊರಟಿದೆ. ಆದರೆ ತೋಟದಿಂದ ಹೊರಬರಲು ಸೋಲಾರ್ ವಿದ್ಯುತ್ ಬೇಲಿ ಅಡ್ಡಿಯಾಗಿತ್ತು.

    ಆಗ ಕಾಡಾನೆ ಬೇಲಿ ದಾಟಲು, ವಿದ್ಯುತ್ ಬೇಲಿಯ ಸಮೀಪವೇ ಇದ್ದ ಮರವನ್ನು ಉರುಳಿಸಲು ಪ್ರಯತ್ನಿಸಿತ್ತು. ಈ ಮರಕ್ಕೆ ವಿದ್ಯುತ್ ಪ್ರವಹಿಸಿದ್ದರಿಂದ ಮರ ಬೀಳಿಸುವ ತನ್ನ ಪ್ರಯತ್ನ ಕೈ ಬಿಟ್ಟು ತೋಟದ ಮತ್ತೊಂದೇಡೆ ಇದ್ದ ಗೇಟನ್ನು ದ್ವಂಸಗೊಳಿಸಿ ಹೊರ ಬಂದಿದೆ. ಆನೆ ಮರ ಉರುಳಿಸಲು ಯತ್ನಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸಂಚಾರಿ ಪೊಲೀಸ್ ಠಾಣೆಗೆ ಬೇಲಿ ಹಾಕಿದ ಸ್ವಾಮೀಜಿ..!

    ಸಂಚಾರಿ ಪೊಲೀಸ್ ಠಾಣೆಗೆ ಬೇಲಿ ಹಾಕಿದ ಸ್ವಾಮೀಜಿ..!

    ಬೆಂಗಳೂರು: ಅಕ್ರಮವಾಗಿ ಅತಿಪ್ರವೇಶ ಮಾಡಿ ಅಥವಾ ಬಡವರು ಕೈಲಾಗದವರ ಮೇಲೆ ದಬ್ಬಾಳಿಕೆ ಮಾಡಿ ಬಲಾಢ್ಯರು ಖಾಲಿ ನಿವೇಶನಗಳಿಗೆ ಬೇಲಿ ಹಾಕೋದನ್ನ ನೋಡಿದ್ದೇವೆ. ಆದರೆ ಇಲ್ಲಿ ಸ್ವಾಮೀಜಿಯೊಬ್ಬರಿಂದ ಪೊಲೀಸ್ ಠಾಣೆಗೆ ಬೇಲಿ ಬಿದ್ದಿದ್ದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ಜಾಗ ಮಠದ ಸ್ವತ್ತು ಎಂದು ಬೇಲಿ ಮಠದ ಶಿವರುದ್ರಸ್ವಾಮೀಜಿ ಕಾಂಪೌಂಡ್ ಹಾಕಿಸಲು ಮುಂದಾಗಿದ್ದಾರೆ. ಸಂಚಾರಿ ಠಾಣೆಗೆ ಸ್ವಂತ ಜಾಗ ಇಲ್ಲದ ಕಾರಣ ಕಳೆದ ಮೂರು ವರ್ಷಗಳ ಹಿಂದೆ ಬೇಲಿ ಮಠದ ಜಾಗವನ್ನು ಪಡೆದಿದ್ದರು. ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಜಾಗವನ್ನು ಸ್ವಚ್ಛಗೊಳಿಸಿ ಠಾಣೆಗೆ ಉಪಯೋಗಿಸಿಕೊಳ್ಳುತ್ತಿದ್ದರು. ಆದರೆ ಈಗ ಏಕಾಏಕಿ ಮಠದ ಕಡೆಯವರು ಠಾಣೆ ಜಾಗ ಖಾಲಿ ಮಾಡುವಂತೆ ಹೇಳಿ ಮಠದ ಜಾಗಕ್ಕೆ ಬೇಲಿ ಹಾಕುತ್ತಿದ್ದಾರೆ ಎಂದು ಸ್ಥಳೀಯ ಕುಮಾರ್ ಹೇಳಿದ್ದಾರೆ.

    ಮಠದವರೇ ಕಳೆದ ಮೂರು ವರ್ಷಗಳ ಹಿಂದೆ ಜಾಗವನ್ನು ಪೊಲೀಸ್ ಠಾಣೆಯ ಉಪಯೋಗಕ್ಕಾಗಿ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಸ್ವಾಮೀಜಿ ಸಹ ಪೊಲೀಸ್ ಇಲಾಖೆಯಿಂದ ಬಾಡಿಗೆ ಸಹ ಪಡೆದಿರಲಿಲ್ಲ. ಆದರೆ ಇದೀಗ ಜಾಗ ಖಾಲಿ ಮಾಡಿ ಎಂದು ಸೂಚನೆ ನೀಡಿದ್ದಾರೆ. ಇದರಿಂದಾಗಿ ಪೊಲೀಸ್ ಠಾಣೆಗೆ ಬೇಲಿ ಮಠದ ಸ್ವಾಮೀಜಿ ಬೇಲಿ ಹಾಕಿದಂತಾಗಿದೆ. ಸ್ವಾಮೀಜಿಯವರು ಕಾಲಾವಕಾಶ ನೀಡಿದರೆ ಚೆನ್ನಾಗಿತ್ತು, ಇದರಿಂದಾಗಿ ಪೊಲೀಸ್ ಇಲಾಖೆಯ ಮಾನ ಹೋಗಿದ್ದು, ಸಾರ್ವಜನಿಕರಿಗೂ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಎರಡು ರಾಷ್ಟ್ರೀಯ ಹೆದ್ದಾರಿ ಸಂದಿಸುವ ಜಾಗದಲ್ಲಿ ಈ ಸಂಚಾರಿ ಪೊಲೀಸ್ ಠಾಣೆ ಇದ್ದೂ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಜಾಗ ಗುರುತಿಸಿಕೊಂಡು ಪೊಲೀಸ್ ಠಾಣೆಗೆ ಒಂದು ವ್ಯವಸ್ಥೆ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv