Tag: fear

  • ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಬೆಂಗಳೂರು: ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ಕಳ್ಳರು ತಮ್ಮ ಕೈ ಚಳಕ ತೋರುತ್ತಲೇ ಇದ್ದಾರೆ. ಜೊತೆಗೆ ಕೊಲೆ ಬೇರೆ ನಡೆದಿದೆ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪಟ್ಟಣದ ಪೊಲೀಸರು ಮಾತ್ರ ಅಪರಾಧಿಗಳನ್ನ ಮಟ್ಟ ಹಾಕಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ಪಟ್ಟಣದಲ್ಲಿ ಅಪಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಲ್ಲಿನ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಯುವಕನೊರ್ವನ ಕೊಲೆ ನಡೆದಿತ್ತು. ಜೊತೆಗೆ ಕಳ್ಳರು ಹಾಡಹಗಲೇ ಮನೆಯೊಂದರ ಬೀಗ ಮುರಿದು ಹಣ ಒಡವೆ ಕದ್ದು ಪರಾರಿಯಾಗಿದ್ದರು. ಇದೆಲ್ಲ ನೋಡಿದ ಜನತೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆಯೇ ಅನ್ನೋ ಆತಂಕದಲ್ಲಿ ಇದ್ದಾರೆ.

    ಒಂದೆಡೆ ಕೊಲೆ ಪ್ರಕರಣ ನಡೆದಿದ್ದರೆ ಮತ್ತೊಂದೆಡೆ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಹಾಡಹಗಲೇ ರಮೇಶ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯವರು ಹೊರಹೋಗೋದನ್ನೇ ಗಮನಿಸಿ ಕೇವಲ 10 ನಿಮಿಷದಲ್ಲಿ ಮನೆ ಬೀಗ ಮುರಿದು ಮನೆಯಲ್ಲಿದ್ದ 400 ಗ್ರಾಂ ಚಿನ್ನ, 40 ಸಾವಿರ ನಗದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಅಕ್ಕಪಕ್ಕ ನೂರಾರು ಮನೆಗಳಿದ್ರೂ ಯಾರಿಗೂ ಅನುಮಾನ ಬರದಂತೆ ಕಳ್ಳರು ತಮ್ಮ ಚಲಾಕಿತನ ಮೆರೆದಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಇನ್ನೂ ಆನೇಕಲ್ ಪಟ್ಟಣದ ಮುಟ್ಟಕಟ್ಟಿ ಬಳಿ ರಾತ್ರಿ ಪಾರ್ಟಿ ಮಾಡಲು ಬಂದ ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಜೊತೆಯಲ್ಲಿ ಬಂದಿದ್ದ ಗುಮ್ಮಳಪುರದ ಲೋಕೆಶ್(30)ನನ್ನು ಮದ್ಯದ ಬಾಟಲಿಯಿಂದ ಹೊಡೆದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ಜಾಗದಲ್ಲಿ ಕೆಎ.51ಎಚ್.ಎಫ್.9207 ಹೋಂಡಾ ಡಿಯೋ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

    ಇತ್ತೀಚೆಗೆ ಆನೇಕಲ್ ಪಟ್ಟಣದ ಹೊರಭಾಗದಲ್ಲಿ ರಾತ್ರಿ ವೇಳೆ ತೋಪುಗಳ ಬಳಿ ಖಾಲಿ ಬಡಾವಣೆಗಳಲ್ಲಿ ಯುವಕರು ಪಾರ್ಟಿ ನಡೆಸುವುದು ಹೆಚ್ಚಾಗಿದ್ದು, ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವುದು ಕಡಿಮೆಯಾಗಿರುವುದೇ ಈ ರೀತಿಯ ಪ್ರಕರಣಗಳು ಹೆಚ್ಚಾಗಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸುಮಾರು 15 ದಿನಗಳಲ್ಲಿ ಅಂಗಡಿ ಮನೆಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದು, ಸುಮಾರು 20ಕ್ಕೂ ಹೆಚ್ಚು ಕಳ್ಳತನ ನಡೆದಿದೆ. ಕೆಲವೊಂದು ಕಡೆ ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದುವರೆಗೂ ಯಾವೊಬ್ಬ ಕಳ್ಳನನ್ನ ಆನೇಕಲ್ ಪೊಲೀಸರು ಬಂಧಿಸದಿರುವುದು ಪಟ್ಟಣದಲ್ಲಿ ಕಳ್ಳರು ಪುಂಡ ಪೋಕರಿಗಳಿಗೆ ಪೊಲೀಸರ ಭಯವಿಲ್ಲದಂತ ವಾತಾವರಣ ಉಂಟಾಗಿದೆ. ಇಷ್ಟೆಲ್ಲ ಪ್ರಕರಣ ವರದಿಯಾಗಿದ್ರು ಪೊಲೀಸರು ಇದೂವರೆಗೆ ಒಂದೇ ಒಂದು ಪ್ರಕರಣವನ್ನು ಪತ್ತೆಹಚ್ಚದಿರುವುದು ಪಟ್ಟಣದ ಜನತೆಯ ಸಿಟ್ಟು, ಆತಂಕಕ್ಕೆ ಕಾರಣವಾಗಿದೆ ಎಂದು ಮನೆಯ ಮಾಲೀಕರಾದ ಶುಭಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯು ಹಳದಿ ಬಣ್ಣದಿಂದ ಕೂಡಿದ್ದ ಬೆನ್ನಲ್ಲೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಪರಿಸರ ವಿಜ್ಞಾನಿಯಾದ ಎನ್.ಎ.ಮಧ್ಯಸ್ಥರವರು ಸ್ಪಷ್ಟನೆ ನೀಡಿದ್ದಾರೆ.

    ಹಳದಿ ಮಳೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಣ್ಣದ ಕೀಟಗಳು ಇದ್ದು, ಇವು ಆಗಸ್ಟ್ ತಿಂಗಳ ಸುಮಾರಿಗೆ ಹೆಚ್ಚಾಗಿ ಕಂಡುಬರುತ್ತವೆ. ಕೀಟಗಳು ಬೆಳೆದ ನಂತರ ಅವುಗಳು ಪುಡಿಪುಡಿಯಾಗಿ ವಾತಾವರದಲ್ಲಿ ಸೇರಿಕೊಂಡಿರುತ್ತವೆ. ಗಾಳೆ ಮಳೆ ಜೊತೆಯಾದರೆ ತೆಂಗಿನ ಗರಿಯಲ್ಲಿದ್ದ ಹಳದಿ ಮಿಶ್ರಿತ ಬಿಳಿ ಕೀಟಗಳು ಮಳೆ ಹನಿಗಳ ಜೊತೆ ನೆಲಕ್ಕೆ ಬೀಳುವುದರಿಂದ ಹಳದಿ ಮಿಶ್ರಿತ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

    ಕರಾವಳಿಯಲ್ಲಿ ಲಕ್ಷಾಂತರ ತೆಂಗಿನ ಮರಗಳಲ್ಲಿ ಈ ಬಿಳಿ ಕೀಟ ಕಾಣಿಸಿಕೊಳ್ಳುವುದರಿಂದ ವಾತಾವರಣದಲ್ಲಿ ಕೀಟಗಳು ಇರುವ ಸಂದರ್ಭದಲ್ಲೇ ಮಳೆಯಾಗಿದ್ದರಿಂದ ಹಳದಿ ಮಿಶ್ರಿತ ಬೂದಿ ಬಣ್ಣದ ಮಳೆಯಾಗಿದೆ. ಪರಿಸರದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಹಿರಿಯ ಪರಿಸರ ತಜ್ಞ ಎನ್.ಎ.ಮಧ್ಯಸ್ಥರವರು, ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳದಲ್ಲಿಯೂ ಇಂತಹುದೇ ಮಳೆಯಾಗಿತ್ತು ಎಂದು ಹೇಳಿದ್ದಾರೆ.

    ಈ ಹಳದಿ ಮಿಶ್ರಿತ ಬಿಳಿ ಮಳೆಯ ಬಗ್ಗೆಯೂ ಭಯ ಬೇಡ. ಕೃಷಿ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಲಿ, ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕೇಂದ್ರವಿದೆ. ಈಗಾಗಲೇ ತಜ್ಞರು ಮಳೆಯ ಸ್ಯಾಂಪಲನ್ನು ಸಂಗ್ರಹ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ, ಕುಂದಾಪುರದಲ್ಲಿ ಹಳದಿ ಮಳೆ!

    ವಿಯೆಟ್ನಾಂನಲ್ಲೊಮ್ಮೆ ಭಾರೀ ಪ್ರಮಾಣದಲ್ಲಿ ಹೂವುಗಳು ಬೆಳೆದಿತ್ತು. ಕಾಡು, ಊರಿನೊಳಗೆ ಭಾರೀ ಪ್ರಮಾಣದಲ್ಲಿ ಬೆಳೆದ ಹೂವುಗಳ ಪರಾಗ ಗಾಳಿಯಲ್ಲಿ ಬೆರೆತ ಸಂದರ್ಭ ಇದೇ ರೀತಿ ಹಳದಿ ಮಳೆಯಾಗಿತ್ತು. ಅಲ್ಲಿನ ಜನರು ಇದು ಹಳದಿ ರಾಸಾಯನಿಕ ಮಳೆ ಎಂದು ಭಯಗೊಂಡು, ವಿರೋಧಿ ದೇಶದವರು ರಾಸಾಯನಿಕ ದಾಳಿ ಮಾಡಿರಬಹುದು ಎಂಬ ಸಂಶಯವನ್ನು ಹೊರಹಾಕಿದ್ದರು. ಆದರೆ ಸಂಶೋಧನೆಯ ಬಳಿಕ ಅದು ಪರಾಗ ಮಳೆ ಅಂತ ಸಾಬೀತಾಯಿತು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರಾಯಚೂರು: ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತ ಒಂದೆಡೆ ಸಂತಸ ಪಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹದ ಭೀತಿ ಎದುರಿಸುತ್ತಿದ್ದಾನೆ.

    ಹೌದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದು ಒಂದೆಡೆ ರೈತರಿಗೆ ಸಂತಸ ತಂದರೆ, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ.

    ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಸಂಚಾರ, ವಿದ್ಯುತ್ ಸೇರಿದಂತೆ ಎಲ್ಲವೂ ಕಡಿತಗೊಂಡಿದೆ. ಜಾನುವಾರುಗಳನ್ನ ಕಟ್ಟಿಕೊಂಡು ಗಡ್ಡೆಯಲ್ಲೇ ಕುಟುಂಬಗಳು ಉಳಿದುಕೊಂಡಿವೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು, ಐದಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿದೆ.

    ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಪಂಪ್ ಸೆಟ್ ಗಳು ಸಹ ನೀರಿನಲ್ಲಿ ಮುಳುಗಿಹೋಗಿವೆ.

    ಈಗಾಗಲೇ ಜಿಲ್ಲಾಡಳಿತವು ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಿದೆ. ಅಲ್ಲದೇ ನದಿ ತಟದ ಬಳಿ ಯಾರೂ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

  • ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ವಿಡಿಯೋ: ಈ 2 ವರ್ಷದ ಪೋರಿಗೆ ಹಾವೇ ಆಟಿಕೆ, ಹಾವೇ ಫ್ರೆಂಡ್ಸ್!

    ಕಾರವಾರ: ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುವ ಬಾಲಕಿ. 2 ವರ್ಷ ಏಳು ತಿಂಗಳು ವಯಸ್ಸಿನ ಈ ಪುಟ್ಟ ಪೋರಿಗೆ ಸರಿಯಾಗಿ ನಡೆದಾಡಲೂ ಬರುವುದಿಲ್ಲ.

    ಹಾಲುಗೆನ್ನೆಯ ತೊದಲು ನುಡಿ ಮಾತನಾಡುವ ಈ ಪೋರಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ತಂದೆ ಸ್ವತಃ ಉರುಗ ತಜ್ಞರಾಗಿದ್ದು, 20 ವರ್ಷಗಳಿಂದ 12 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಈಕೆ ಚಿಕ್ಕ ಮಗುವಾಗಿದ್ದಾಗಿನಿಂದ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದ ಈಕೆಗೆ ತಂದೆಯೇ ಮೊದಲ ಗುರು. ಮನೆಯಲ್ಲಿ ಪ್ರತಿ ವರ್ಷ ನಾಗರಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ. ಚಿಕ್ಕ ಪೋರಿಯ ಈ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.

    https://www.youtube.com/watch?v=rFO2yLSCu2c

  • ಕರವೇ ಕಾರ್ಯಕರ್ತನ ಹತ್ಯೆಗೆ ಅನ್ಸಾರಿ ಬಂಟನ ಸುಪಾರಿ

    ಕರವೇ ಕಾರ್ಯಕರ್ತನ ಹತ್ಯೆಗೆ ಅನ್ಸಾರಿ ಬಂಟನ ಸುಪಾರಿ

    ಕೊಪ್ಪಳ: ಜೀವ ಭಯದಿಂದ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಬೂದಗುಂಪಾ ನಿವಾಸಿ ಮುದಿಯಪ್ಪ ಡಂಬಾಳ ಎಂಬ ಯುವಕ ಕಳೆದ ಮೂರು ದಿನದಿಂದ ಕಾಣೆಯಾಗಿದ್ದು, ಮುದಿಯಪ್ಪ ಕುಟುಂಬ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಮುದಿಯಪ್ಪ ಕುಟುಂಬ ಭಯಪಡಲು ಮುಖ್ಯ ಕಾರಣ ಅದೇ ಗ್ರಾಮದ ಪ್ರಭಾವಿ ಮುಖಂಡ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಬಂಟ ಫಕೀರಪ್ಪ ಎಮ್ಮಿ ಎನ್ನಲಾಗಿದೆ. ಈತ ಮುದಿಯಪ್ಪನನ್ನು ಕೊಲ್ಲಲು ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ.

    ಸುಪಾರಿ ತೆಗೆದುಕೊಂಡ ವ್ಯಕ್ತಿ ಬಾಯಿಬಿಟ್ಟ ವಿಡಿಯೋ ಕೂಡ ಲಭ್ಯವಾಗಿದ್ದು, ನನ್ನ ಗಂಡನಿಗೆ ಜೀವ ಭಯವಿದೆ. ಇದರಿಂದ ಕಳೆದ ಮೂರು ದಿನಗಳಿಂದ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಮುದಿಯಪ್ಪ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಮುದಿಯಪ್ಪ ಡಂಬಾಳ ಮತ್ತು ಫಕೀರಪ್ಪ ಎಮ್ಮಿ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಫಕೀರಪ್ಪ ಅನ್ಸಾರಿ ಬೆಂಬಲಿಗನಾಗಿದ್ದಾನೆ. ಮುದಿಯಪ್ಪ ಕರವೇ ಕಾರ್ಯಕರ್ತನಾಗಿದ್ದಾನೆ.

    ಗ್ರಾಮದಲ್ಲಾಗುತ್ತಿರುವ ಅಕ್ರಮದ ಬಗ್ಗೆ ಮುದಿಯಪ್ಪ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಬೇಸತ್ತ ಫಕೀರಪ್ಪ ಈತ ನಮಗೆ ಮುಳುವಾಗುತ್ತಾನೆ ಎಂದು ಅದೇ ಗ್ರಾಮದ ಯುವಕನಿಗೆ ಮುದಿಯಪ್ಪನನ್ನು ಹೊಡೀಬೇಕು, ಕೊಲೆ ಮಾಡಿ ಎಂದು 50 ಸಾವಿರ ರೂ. ನೀಡಿ ಸುಪಾರಿ ನೀಡಿದ್ದಾನೆ.

    ಇದಕ್ಕೆ ಸಾಕ್ಷಿ ಎಂಬಂತೆ ಸುಪಾರಿ ತೆಗೆದುಕೊಂಡ ವ್ಯಕ್ತಿಯೇ ಈ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇದರಿಂದ ಮುದಿಯಪ್ಪ ಕುಟುಂಬ ಜೀವ ಭಯದಲ್ಲಿದ್ದಾರೆ. ನನ್ನ ಪತಿಗೆ ಏನಾಗಿದೆ ಎಂದು ಭಯ ಪಡುವಂತಾಗಿದೆ. ನಮಗೆ ರಕ್ಷಣೆ ಬೇಕು ಎಂದು ಮುದಿಯಪ್ಪ ಪತ್ನಿ ಬೇಡಿಕೊಳ್ಳುತ್ತಿದ್ದಾರೆ.

  • ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೈದರಾಬಾದ್: ಹೆಣ್ಣು ದೆವ್ವಕ್ಕೆ ಭಯಗೊಂಡು ಗ್ರಾಮವನ್ನೇ ಖಾಲಿ ಮಾಡುತ್ತಿರುವ ವಿಚಿತ್ರ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಶಿಗುಡ್‍ನಲ್ಲಿ ನಡೆದಿದೆ.

    ಈ ಗ್ರಾಮದಲ್ಲಿ ಕತ್ತಲಾದ ಮೇಲೆ ಹೆಣ್ಣು ಪ್ರೇತಾತ್ಮಗಳು ಪುರುಷರ ಮೇಲೆ ದಾಳಿ ಮಾಡುತ್ತಿವೆಯಂತೆ. ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುಳಿಯುತ್ತಿದ್ದಾರೆ. ಆದ್ದರಿಂದ ಪುರುಷರು ಗ್ರಾಮದಲ್ಲಿ ಇರಲು ಭಯಬೀತರಾಗಿ ಜೀವ ಉಳಿದರೆ ಸಾಕು ಎಂದು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಕಾಶಿಗುಡ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು, ಗ್ರಾಮದ ಸಮೀಪದಲ್ಲಿ ಕಲ್ಲು ಕ್ವಾರಿಗಳಿವೆ. ಅಲ್ಲಿ ಕಲ್ಲುಗಳನ್ನು ಕತ್ತರಿಸುವುದು ಮತ್ತು ಪುಡಿಮಾಡುವ ಕೆಲಸವನ್ನು ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ ಈಗ ಕೆಲವು ದಿನಗಳಿಂದ ನಮ್ಮ ಮೇಲೆ ಯಾರೋ ದಾಳಿ ಮಾಡಿದಂತೆ ಭಾಸವಾಗುತ್ತಿದೆ. ಹೀಗಾಗಿ ಭಯಗೊಂಡು ನಾವು ಊರನ್ನು ತೊರೆಯುತ್ತಿದ್ದೇವೆ ಎಂದು ಈ ಗ್ರಾಮದ ಪುರುಷರು ಹೇಳಿದ್ದಾರೆ.

    ಗ್ರಾಮದಲ್ಲಿರುವ ಮನೆಗಳೆಲ್ಲಾ ಬೀಗ ಹಾಕಿದ್ದಾರೆ. ಹಚ್ಚ ಹಸಿರಿನಿಂದ ಕೂಡಿದ್ದ ಈ ಗ್ರಾಮ ಇಂದು ದೆವ್ವದ ಗ್ರಾಮವಾಗಿದೆ. ಇನ್ನೂ ಉಳಿದ ಸ್ವಲ್ಪ ಜನರು ಕತ್ತಲಾಗುವ ಮುನ್ನವೇ ಮನೆಗೆ ಬಂದು ಸೇರಿಕೊಳ್ಳುತ್ತಿದ್ದು, ಸೂರ್ಯ ಉದಯಿಸುವರೆಗೂ ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ.

    ಗ್ರಾಮ ದೊರೆದ ಜನರು ಸುರಕ್ಷಿತವಾದ ಜಾಗಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿದ್ರು ದಂಪತಿ

    ಚಿಕ್ಕಬಳ್ಳಾಪುರ: ಎಂತಹವರಿಗೂ ಸಾವು ಎಂದಾಕ್ಷಣ ಆವರಿಸೋದೆ ಭಯ. ಆದ್ರೆ ಈ ದಂಪತಿ ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿಕೊಂಡು ಸಾವಿಗಾಗಿ ಕಾಯುತ್ತಿದ್ದಾರೆ.

    ಹೌದು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಂಡಹಳ್ಳಿ ಗ್ರಾಮದಲ್ಲಿರುವ ವೆಂಕಟರೆಡ್ಡಿ ರಾಯಲು ಹಾಗೂ ಜಯಮ್ಮ ದಂಪತಿಯೇ ಇಂತಹ ವಿಚಿತ್ರ ಸಾಹಸಕ್ಕೆ ಮುಂದಾಗಿದ್ದಾರೆ. ಈ ದಂಪತಿ ತಾವು ಸಾಯೋಕು ಮುನ್ನವೇ ತಮ್ಮದೇ ಮನೆಯಲ್ಲೇ ಸಮಾಧಿಯನ್ನ ರೆಡಿ ಮಾಡಿಕೊಂಡಿದ್ದಾರೆ. ಮನೆಯ ಮಧ್ಯಭಾಗದಲ್ಲೇ ಕಲ್ಲು ಚಪ್ಪಡಿಗಳ ಮೂಲಕ ತಮ್ಮ ಸಮಾಧಿಗಳನ್ನ ತಾವೇ ನಿರ್ಮಾಣ ಮಾಡಿ ಕಟ್ಟಿಕೊಂಡಿದ್ದಾರೆ.

    ವೆಂಕಟರೆಡ್ಡಿ ರಾಯಲು ಅವರಿಗೆ 88 ವರ್ಷ ವಯಸ್ಸು. ಇವರ ಪತ್ನಿ ಜಯಮ್ಮಗೆ ಸರಿ ಸುಮಾರು 80 ವರ್ಷಗಳಾಗಿವೆ. ವೆಂಕಟರೆಡ್ಡಿ ರಾಯಲು ಅವರನ್ನ ಯಾಕೆ ಈ ತರ ಅಂತ ಕೇಳಿದರೆ ವೇದಗಳ ಮೂಲಕ ಆತ್ಮದ ರಹಸ್ಯ ತಿಳಿದು ಹೀಗೆ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.

    ಇನ್ನೂ ಇವರ ಸಾವು 2020 ರಲ್ಲಿ ಸಂಭವಿಸುತ್ತಂತೆ. ಸಾಯೋಕೆ ಒಂದು ತಿಂಗಳ ಮುಂಚೆಯೇ ಸಾವು ಹೇಗೆ ಬರುತ್ತೆ ಅನ್ನೋದು ಕೂಡ ಇವರಿಗೆ ತಿಳಿಯುತ್ತಂತೆ. ಹೀಗಾಗಿ ಸಮಾಧಿಯನ್ನ ಎರಡು ಭಾಗಗಳಾಗಿ ಮಾಡಿಕೊಂಡಿದ್ದು ಸಾಯೋಕು ಒಂದು ತಿಂಗಳ ಮುಂಚೆಯೇ ಅನ್ನ-ಆಹಾರ ತ್ಯಜಿಸಿ ಮೊದಲನೇ ಭಾಗದ ಸಮಾಧಿಯಲ್ಲಿ ಜೀವಂತವಾಗಿ ಸಮಾಧಿಯಾಗುತ್ತೇವೆ ಎಂದು ಹೇಳುತ್ತಾರೆ.

    ಪತ್ನಿ ಸತ್ತ ಅದೇ ತಿಂಗಳಲ್ಲಿ ನಾನು ಕೂಡ ಸಾಯುತ್ತೇನೆ. ಹಾಗೆ ಪ್ರತಿದಿನ ಇದೇ ಸಮಾಧಿಯಲ್ಲಿ ಕುಳಿತು ಧ್ಯಾನ ಪೂಜೆ ಕೂಡ ಮಾಡುತ್ತಿದ್ದೇವೆ ಎಂದು ವೆಂಕಟರೆಡ್ಡಿ ರಾಯಲು ತಿಳಿಸಿದ್ದಾರೆ.

    ಈ ದಂಪತಿ ಮನೆಯಲ್ಲಿಯೇ ಶಿವಲಿಂಗ ಪ್ರತಿಷ್ಟಾಪಿಸಿದ್ದು, ಮನೆಯನ್ನ ಶಿವನ ದೇವಾಲಯನ್ನಾಗಿ ಮಾಡಿಕೊಂಡಿದ್ದಾರೆ. ಬದುಕಿನ ಬಂಡಿಗೆ ಅಂತ ಹಸುವಿನ ಸಾಕಾಣಿಕೆ ಸೇರಿದಂತೆ ಕೃಷಿಕಾಯಕವನ್ನು ಮಾಡುತ್ತಾರೆ.

    ಈ ದಂಪತಿಗೆ 3 ಜನ ಹೆಣ್ಣು ಮಕ್ಕಳು 2 ಗಂಡು ಮಕ್ಕಳು ಇದ್ದು ಎಲ್ಲರು ಮದುವೆಯಾಗಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದಾರೆ. ಒಟ್ಟಿನಲ್ಲಿ ಇಂತಹ ತಂತ್ರಜ್ಞಾನ ಯುಗದಲ್ಲೂ ಸಾಯೋಕು ಮುನ್ನವೇ ಸಮಾಧಿ ಮಾಡಿಕೊಂಡಿರೋ ಇವರಿಗೆ ಮೌಢ್ಯ ಅನ್ನಬೇಕೋ ಅಥವಾ ಹುಚ್ಚಾಟ ಅನ್ನಬೇಕೋ ಇವರು ನಂಬಿರೋ ಆ ದೇವರೇ ಬಲ್ಲ.