Tag: fear

  • ಜ್ಯೂನಿಯರ್ ಹುಟ್ಟುಹಬ್ಬಕ್ಕೆ ‘ದೇವರ’ ಚಿತ್ರದ ಫಿಯರ್ ಸಾಂಗ್

    ಜ್ಯೂನಿಯರ್ ಹುಟ್ಟುಹಬ್ಬಕ್ಕೆ ‘ದೇವರ’ ಚಿತ್ರದ ಫಿಯರ್ ಸಾಂಗ್

    ಜ್ಯೂನಿಯರ್  ಎನ್‌ಟಿಆರ್‌ (Junior NTR) ಅಭಿನಯದ ‘ದೇವರ’ (Devara) ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಕ್ರಿಯೇಟ್‌ ಮಾಡಿದೆ. ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸಿದರೆ, ಸೈಫ್‌ ಅಲಿ ಖಾನ್‌ ವಿಲನ್‌ ಆಗಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಪಾರ್ಟ್‌ ಅಕ್ಟೋಬರ್ 10 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

    ಇದೀಗ NTR ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡು ಫಿಯರ್‌ ಸಾಂಗ್‌ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಸರಸ್ವತಿ ಪುತ್ರ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಷ್ಣು ಎಡವನ್, ಹಿಂದಿಯಲ್ಲಿ ಮನೋಜ್ ಮುಂತಶಿರ್, ಕನ್ನಡದಲ್ಲಿ ವರದರಾಜ್ ಮತ್ತು ಮಲಯಾಳಂನಲ್ಲಿ ಮಂಕೊಂಬು ಗೋಪಾಲಕೃಷ್ಣನ್ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅನಿರುದ್ಧ ಈ ಹಾಡಿಗೆ ಧ್ವನಿಯಾಗಿದ್ದಾರೆ.

    ಈ ಹಾಡು ಇತರ ಭಾಷೆಗಳಲ್ಲಿಯೂ ಅಷ್ಟೇ ಶಕ್ತಿಶಾಲಿ ಮತ್ತು ಅದ್ಭುತವಾಗಿದೆ. ಲಿರಿಕಲ್ ವೀಡಿಯೋದಲ್ಲಿ ಅನಿರುದ್ಧ್ ರವಿಚಂದರ್ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಹಾಡಿದ್ದರೆ, ಸಂತೋಷ್ ವೆಂಕಿ ಕನ್ನಡ ಮತ್ತು ಮಲಯಾಳಂನಲ್ಲಿ ಧ್ವನಿ ನೀಡಿದ್ದಾರೆ. ಈ ಮೂಲಕ ದೇವರ ಚಿತ್ರದ ಪ್ರಚಾರಕ್ಕೆ ಈ ಹಾಡಿನ ಮೂಲಕ ಆರಂಭ ಸಿಕ್ಕಿದೆ.

    ದೇವರ ಚಿತ್ರದಲ್ಲಿ ಶೀರ್ಷಿಕೆ ಪಾತ್ರದಲ್ಲಿ ಎನ್‌ಟಿಆರ್‌ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್‌ನ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.  ನಂದಮೂರಿ ಕಲ್ಯಾಣ್ ರಾಮ್ ಈ ಬಹು ನಿರೀಕ್ಷಿತ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ಈ ಚಿತ್ರದ ನಿರ್ಮಾಪಕರು. ಶ್ರೀಕರ್ ಪ್ರಸಾದ್ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.

  • ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ನಿನ್ನೆಯಷ್ಟೇ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಟಿ ನಿವೇದಿತಾ ಗೌಡ, ತಮ್ಮ ಖಾಸಗಿ ಬದುಕಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿ ಇರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಹೊತ್ತು ಪತಿ ಚಂದನ್ ಶೆಟ್ಟಿ ಮನೆಯಲ್ಲಿ ಇರದೇ ಇದ್ದರೆ, ಇಡೀ ರಾತ್ರಿ ನಿದ್ದೆಯೇ ಬರುವುದಿಲ್ಲ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.

    ರಾತ್ರಿ ಹೊತ್ತು ಒಬ್ಬಳೆ ಮನೆಯಲ್ಲಿ ಇದ್ದರೆ ತುಂಬಾ ಭಯವಾಗುತ್ತದೆ. ಹಾಗಾಗಿ ಇಡೀ ಮನೆ ಬೆಳಕಿನಿಂದ ತುಂಬಿರುತ್ತದೆ. ಅಷ್ಟೂ ಲೈಟ್ಸ್ ಆನ್ ಮಾಡಿಕೊಂಡೇ ಮನೆತುಂಬಾ ಓಡಾಡಿಕೊಂಡಿರುತ್ತೇನೆ. ನನ್ನಿಷ್ಟದ ವೆಬ್ ಸೀರಿಸ್ ನೋಡುತ್ತೇನೆ. ಒಂದೊಂದು ವೆಬ್ ಸೀರಿಸ್ ಅನ್ನು ಹತ್ತಿಪ್ಪತ್ತು ಬಾರಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸಲುವಾಗಿಯೇ ಆದಷ್ಟು ಒಂಟಿಯಾಗಿ ಇರದಂತೆ ಪತಿ ಎಚ್ಚರಿಕೆ ವಹಿಸುತ್ತಾರೆ ಎಂದೂ ಗಂಡನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಮಿಸೆಸ್ ಇಂಡಿಯಾ ತಯಾರಿ ಬಗ್ಗೆಯೂ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ ಆಗಬೇಕು ಎನ್ನುವುದು ಅವರ ಚಿಕ್ಕಂದಿನ ಕನಸಾಗಿತ್ತಂತೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಅವರು ತಾಯಿ ಎನ್ನುವುದನ್ನೂ ಹೇಳಿದ್ದಾರೆ. ಹಲವು ದಿನಗಳಿಂದ ಕಷ್ಟಪಟ್ಟು ಮಿಸೆಸ್‍ ಇಂಡಿಯಾ ಸ್ಪರ್ಧೆಗಾಗಿ ತಯಾರಿ ನಡೆಸಿದ್ದನ್ನೂ ಅವರು ಹಂಚಿಕೊಂಡಿದ್ದಾರೆ. ಕೊನೆಗೂ ಆ ಟೈಟಲ್ ಅನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಬಳಿ ರಸ್ತೆ ಪಕ್ಕದ ಮರದವೊಂದರ ಕೆಳಗಿರೋ ಪೂಜಾ ಸಾಮಗ್ರಿಗಳನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

    ಕರ್ಜಗಿ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಟ್ಟಿಗೆಯ ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ, ಎಳೆನೀರು, ನೂರಾರು ಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಇಟ್ಟು ಹೋಗಿದ್ದಾರೆ. ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

    ಗಡಿ ದುರಗಮ್ಮನೋ ಅಥವಾ ಯಾರಾದರೂ ವಾಮಾಚಾರವೋ ಮಾಡಿದ್ದರ ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಮಸ್ಥರಲ್ಲಿ ಆತಂಕವನ್ನ ಉಂಟುಮಾಡಿದೆ. ಊರಿನ ಹಿರಿಯರ ಜೊತೆ ಚರ್ಚಿಸಿ ವಸ್ತುಗಳನ್ನ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ. ಗಡಿ ದುರಗಮ್ಮದೇವಿ ಆಗಿದ್ದರೆ ಕಡಿಮೆ ವಸ್ತುಗಳನ್ನ ಇಟ್ಟು ಪೂಜೆ ಮಾಡುತ್ತಿದ್ದರು. ಈಗ ಹೆಚ್ಚು ಪೂಜಾ ಸಾಮಗ್ರಿಗಳನ್ನ ಇಟ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಗ್ರಾಮಸ್ಥರು.

    ಗ್ರಾಮದ ಹಿರಿಯ ಜೊತೆಗೆ ಮಾತನಾಡಿ ಪೂಜಾ ಹಾಗೂ ದೇವಿಯನ್ನ ನದಿಯಲ್ಲಿ ಬಿಡಬೇಕು. ಅಥವಾ ನಾವು ಗಡಿಯಲ್ಲಿ ಪೂಜೆ ಮಾಡಿ ಅಲ್ಲಿಯೇ ಮುಚ್ಚಬೇಕು ಅನ್ನೋದನ್ನ ತೀರ್ಮಾನ ಮಾಡುತ್ತೆವೆ ಅಂತಾರೆ ಗ್ರಾಮದ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು.

  • ಸೋಂಕಿತರ ಜೊತೆಯಿದ್ದು ಬಂದ್ರೂ ನನಗೆ ಕೊರೊನಾ ಬರಲ್ಲ: ಕಲ್ಯಾಣ ಸ್ವಾಮೀಜಿ

    ಸೋಂಕಿತರ ಜೊತೆಯಿದ್ದು ಬಂದ್ರೂ ನನಗೆ ಕೊರೊನಾ ಬರಲ್ಲ: ಕಲ್ಯಾಣ ಸ್ವಾಮೀಜಿ

    – ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಇಷ್ಟೊಂದು ಪ್ರಚಾರ ಏಕೆ

    ಬಳ್ಳಾರಿ: ಬಿಸಿ ನೀರಿನಿಂದ ಸಾಯೋ ಕೊರೊನಾ ರೋಗಕ್ಕೆ ಕೋಟ್ಯಂತರ ರೂ.ಗಳನ್ನು ವ್ಯಯಿಸಿ ಇಷ್ಟೊಂದು ಪ್ರಚಾರ ನೀಡಲಾಗುತ್ತೆ. ನಾನು ಬೇಕಾದರೆ ಚಾಲೆಂಜ್ ಮಾಡುತ್ತೇನೆ. ಕೋವಿಡ್ ಸೋಂಕಿತರೊಂದಿಗೆ ಕಾಲ ಕಳೆದು ಬರುತ್ತೇನೆ. ನನಗೆ ಕೋವಿಡ್ ಸೋಂಕು ಬರುತ್ತಾ ನೋಡುತ್ತೇನೆ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸವಾಲೆಸೆದಿದ್ದಾರೆ.

    ಬಳ್ಳಾರಿ ನಗರದ ಸ್ನೇಹ ಸಂಪುಟದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಭಯದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಜಿಲ್ಲಾಡಳಿತವಾಗಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವಾಗಲಿ ಕೊರೊನಾ ಸೋಂಕಿನ ಭಯವನ್ನು ಹೋಗಲಾಡಿಸಲು ಯಾವ ಪ್ರಯತ್ನವನ್ನು ನಡೆಸುತ್ತಿಲ್ಲ ಎಂದು ದೂರಿದರು.

    ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿ. ಅವರು ಸತ್ತಿರುವುದು ಈ ಕೋವಿಡ್ ಸೋಂಕಿನಿಂದ ಅಲ್ಲ. ಬದಲಾಗಿ ಭಯದಿಂದ ಅಥವಾ ಗಂಭೀರ ಸ್ವರೂಪದ ಕಾಯಿಲೆಯಿಂದ ಮಾತ್ರ ಸಾವನ್ನಪ್ಪಿರುವುದು. ನಾನು ಕೂಡ ಕೋವಿಡ್ ಸೋಂಕಿತರೊಂದಿಗೆ ಬೆರೆತು ಬರುವೆ. ನನಗೆ ಟೆಸ್ಟ್ ಮಾಡಿ ನೋಡಿ. ಇದೆಲ್ಲ ಶುದ್ಧ ಸುಳ್ಳು. ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಸಾವಿರಾರು ಕೋಟಿ ರೂ.ಗಳ ಹಣ ವ್ಯಯಿಸಿ ಜಾಹೀರಾತು ಪ್ರಸಾರ ಮಾಡಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದರು.

    ಈ ದೇಶದಲ್ಲಿ ದಿನದಿಂದ ದಿನಕ್ಕೆ ಈ ಕೋವಿಡ್ ಸೋಂಕಿನ ಭಯ ಹೆಚ್ಚುತ್ತಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸೇರಿದಂತೆ ಯಾರೊಬ್ಬರೂ ಕೂಡ ಈ ಸೋಂಕಿನಿಂದ ಸಾಯಲ್ಲ ಎಂದು ಧೈರ್ಯವಾಗಿ ಹೇಳೋಕೆ ತಯಾರಿಲ್ಲ. ಮಾಸ್ಕ್ ಧರಿಸಿದರೆ ಕೋವಿಡ್ ಸೋಂಕು ಹರಡಲ್ಲ ಎಂಬುವುದು ಶುದ್ಧ ಸುಳ್ಳು. ಮಾಸ್ಕ್ ಹಾಕಿದರೆ ಉಸಿರುಗಟ್ಟಿ ಸಾಯುತ್ತಾರೆ ಎಂದು ತಿಳಿಸಿದ್ದಾರೆ.

    ಗ್ರಾಮೀಣ ಭಾಗಕ್ಕೆ ಒಮ್ಮೆ ಹೋಗಿ ನೋಡಿ. ಅವರು ಯಾರೂ ಕೂಡ ಮಾಸ್ಕ್, ಸ್ಯಾನಿಟೈಸರ್ ಬಳಸಲ್ಲ. ಸಾಮೂಹಿಕವಾಗಿ ಊಟ ಮಾಡುತ್ತಾರೆ. ಅವರಿಗೆ ಏಕೆ ಕೋವಿಡ್ ಬರಲ್ಲ. ಯಥೇಚ್ಛವಾಗಿ ಈ ಕೋವಿಡ್ ಸೋಂಕು ಹರಡುವ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಹತ್ತು ಸಾವಿರ ಭಕ್ತರ ಮಧ್ಯೆ ಓಡಾಡಿಕೊಂಡು ಬಂದಿರುವೆ. ಕಲಬುರಗಿಯಲ್ಲೂ ಕೂಡ ಇಂಥದ್ದೇ ವಾತಾವರಣದಲ್ಲಿ ಓಡಾಡಿಕೊಂಡು ಬಂದಿರುವೆ. ಆದರೂ ಕೂಡ ಕೋವಿಡ್ ಸೋಂಕು ನನ್ನ ಹತ್ರ ಸುಳಿದಿಲ್ಲ ಎಂದರು.

  • ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ರಾಯಚೂರು: ಕೊರೊನಾ ಸೋಂಕಿತ ಶವವನ್ನು ಹೊತ್ತುತಂದ ಅಂಬುಲೆನ್ಸ್ ನೋಡಿ ಭಯಗೊಂಡ ಜನರು ಓಡಿಹೋಗಿರುವ ಘಟನೆ ರಾಯಚೂರು ತಾಲೂಕಿನ ಪೋತಗಲ್ ಗ್ರಾಮದಲ್ಲಿ ನಡೆದಿದೆ.

    ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಗುರುತು ಮಾಡಿದ್ದ ಸ್ಥಳಕ್ಕೆ ತರಲಾಗಿದೆ. ಈ ವೇಳೆ ಅಲ್ಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಅಂಬುಲೆನ್ಸ್ ಕಂಡು ಓಡಿ ಹೋಗಿದ್ದಾರೆ.

    ಪೋತಗಲ್ ಗ್ರಾಮದ ಸರ್ವೇ ನಂ.45ರಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿ ಜಿಲ್ಲಾಡಳಿತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿ ಸೋಂಕಿತರನ್ನು ಅಂತ್ಯಕ್ರಿಯೆ ಮಾಡಬೇಡಿ ಎಂದು ಪೋತಗಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಸೋಂಕಿತ ಅಂತ್ಯಕ್ರಿಯೆಯನ್ನು ಸರ್ಕಾರಿ ಜಾಗದಲ್ಲೇ ಮಾಡಿ ಮುಗಿಸಿದ್ದಾರೆ.

  • ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    – ಪೊಲೀಸರ ಲಾಠಿ ಏಟಿಗೆ ಸಾವು ಆರೋಪ

    ವಿಜಯಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಅಣ್ಣ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಸಾಗರ್ (19) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಸವನಬಾ ಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಸಾಗರ್ ತನ್ನ ತಂಗಿಯನ್ನು ಕರೆದುಕೊಂಡು ಬಂದಿದ್ದ. ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದ.

    ಈ ವೇಳೆ ಸಾಗರ್ ತಂಗಿಗೆ ನಕಲು ಪತ್ರ ಕೊಡಲು ಹೋದಾಗ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ಹೆದರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ ಈ ಹೇಳಿಕೆಯನ್ನು ಯುವಕನ ಕುಟುಂಬದವರು ತಳ್ಳಿ ಹಾಕಿದ್ದು, ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.

    ಜೊತೆ ಇದ್ದ ಪ್ರತ್ಯಕ್ಷದರ್ಶಿ ಈ ವಿಚಾರವಾಗಿ ಮಾಹಿತಿ ನೀಡಿದ್ದು, ನಾವು ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತಿದ್ದೆವು. ಆಗ ಅಲ್ಲಿಗೆ ಪೊಲೀಸ್ ಬಂದು ಪರೀಕ್ಷೆ ಮುಗಿಯುವವರೆಗೂ ಇಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳಿದರು. ಆಗ ನಾವು ಬೈಕ್ ಹತ್ತಿ ಹೊರಟಿದ್ದೆವು. ಆ ಸಂದರ್ಭದಲ್ಲಿ ಪೇದೆಯೊಬ್ಬರು ನನಗೂ ಕಾಲಿಗೆ ಒಂದು ಏಟು ಹೊಡೆದರು. ನಂತರ ಬೈಕ್‍ನಲ್ಲಿ ನನ್ನ ಹಿಂದೆ ಕುಳಿತಿದ್ದ ಸಾಗರ್ ಬೆನ್ನಿಗೆ ಹೊಡೆದರು. ಆಗ ಆತ ಕೆಳಗಡೆ ಬಿದ್ದ. ನಂತರ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಹೇಳಿದ್ದಾರೆ.

    ಸದ್ಯ ಸಾಗರ್ ಹೃದಯಾಘಾತದಿಂದ ಸಾವನ್ನಪ್ಪಿದನೋ ಅಥವಾ ಪೊಲೀಸ್‍ರ ಲಾಠಿ ಏಟಿಗೆ ಸಾವನ್ನಪ್ಪಿದನೋ ಎಂಬುದು ಸೂಕ್ತ ತನಿಖೆಯ ನಂತರ ತಿಳಿಯಬೇಕಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮೃತನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಹಿಂದೇಟು- ಗ್ರಾ.ಪಂ ಅಧ್ಯಕ್ಷ, ಪಿಡಿಒನಿಂದ ಶವಸಂಸ್ಕಾರ

    ಮೃತನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಹಿಂದೇಟು- ಗ್ರಾ.ಪಂ ಅಧ್ಯಕ್ಷ, ಪಿಡಿಒನಿಂದ ಶವಸಂಸ್ಕಾರ

    ಹಾವೇರಿ: ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಹಿಂದೇಟು ಹಾಕಿದ ಘಟನೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ, ಪಿಡಿಒ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶವಸಂಸ್ಕಾರ ನಡೆಸಿ ಮಾನವೀಯತೆ ಮೆರದಿದ್ದಾರೆ.

    ಕಿಡ್ನಿ ವೈಫಲ್ಯದಿಂದ ಹೆಡಿಗ್ಗೊಂಡದ ನಿವಾಸಿ ಹುಚ್ಚಪ್ಪ ಗೋಣಿ(50) ಮೃತಪಟ್ಟಿದ್ದರು. ಆದರೆ ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಮೃತನ ಶವಸಂಸ್ಕಾರ ನಡೆಸಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹಿಂದೇಟು ಹಾಕಿದ್ದರು. ಇಂದರಿಂದಾಗಿ ಪಿಪಿಇ ಕಿಟ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನ ಕೈಗೊಂಡು ಪಿಡಿಒ, ಅಧ್ಯಕ್ಷ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅಗ್ನಿಸ್ಪರ್ಶ ಮಾಡಿದರು.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹುಚ್ಚಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಹುಚ್ಚಪ್ಪ ಮೃತಪಟ್ಟಿದ್ದರು. ಇತ್ತ ಕೊರೊನಾ ಟೆಸ್ಟ್ ರಿಪೋರ್ಟ್ ಕೈ ಸೇರದ್ದರಿಂದ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಹ ಹಿಂದೇಟು ಹಾಕಿದರು. ಸ್ಮಶಾನಕ್ಕೆ ಬಂದರೂ ದೂರವೇ ನಿಂತು ಅಂತ್ಯಸಂಸ್ಕಾರವನ್ನು ನೋಡಿದರು.

    ಇಂದು ಬೆಳಗ್ಗೆ ಹುಚ್ಚಪ್ಪ ಅವರ ಕೊರೊನಾ ಟೆಸ್ಟ್ ರಿಪೋರ್ಟ್ ಬಂದಿದ್ದು, ಜಿಲ್ಲೆ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 22 ಮಂದಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ 11 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 11 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಗ್ರೀನ್ ಝೋನ್ ಚಿತ್ರದುರ್ಗಕ್ಕೆ ಬಂದ ತಬ್ಲಿಘಿಗಳು

    ಚಿತ್ರದುರ್ಗ: ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿರು ಚಿತ್ರದುರ್ಗಕ್ಕೆ ತಬ್ಲಿಘಿಗಳು ವಾಪಸ್ ಆಗಿದ್ದಾರೆ.

    ಭಾರತದಲ್ಲಿ ಕೊರೊನಾ ಶುರುವಾದಾಗ ವಿದೇಶಕ್ಕೆ ತೆರಳಿದ್ದ ಚಿತ್ರದುರ್ಗ ಮೂಲದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದ್ದದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಮಹಿಳೆ ಗುಣಮುಖರಾಗಿ ಮನೆ ಸೇರಿದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಾಣಿಸಿಕೊಳ್ಳದೆ ಗ್ರೀನ್ ಝೋನ್‍ನಲ್ಲಿದೆ. ಆದರೆ ಮಂಗಳವಾರ ಗುಜರಾತ್‍ನಿಂದ ಬಂದಿರುವ 33ಜನ ತಬ್ಲಿಘಿಗಳು ಬಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಡಿಎಚ್‍ಓ ಡಾ.ಪಾಲಾಕ್ಷ ಅವರು, ಅದೃಷ್ಟವಶಾತ್ ಅವರೆಲ್ಲರೂ ಸಹ ಈಗಾಗಲೇ ಗುಜರಾತ್‍ನಲ್ಲಿ ತಪಾಸಣೆಗೊಳಪಟ್ಟಿದ್ದು, 30 ದಿನಗಳ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಆದರೂ ಅವರನ್ನು ಮುಂಜಾಗ್ರತಾಕ್ರಮವಾಗಿ ಚಿತ್ರದುರ್ಗದ ಸರ್ಕಾರಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹಾಗೆಯೇ ಮತ್ತೊಮ್ಮೆ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವುದರ ಜೊತೆಗೆ ಅವರ ಮೇಲೆ ಒಂದು ವಾರಗಳ ಕಾಲ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಚಿತ್ರದುರ್ಗಕ್ಕೆ ವಾಪಸ್ ಆಗಿರುವ ತಬ್ಲಿಘಿಗಳೆಲ್ಲರೂ ಚಿತ್ರದುರ್ಗ, ತುಮಕೂರು ಮೂಲದವರಾಗಿದ್ದು, ಅವರಲ್ಲಿ ಚಿತ್ರದುರ್ಗದ 15 ಜನ ಹಾಗೂ ತುಮಕೂರಿನ 18 ಜನ ತಬ್ಲಿಗಿಗಳು ಒಂದೇ ಬಸ್‍ನಲ್ಲಿ ವಾಪಸ್ ಆಗಿದ್ದಾರೆ. ಅವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ಮಾರ್ಚ್ 8ರಂದು ನಡೆದ ತಬ್ಲಿಘಿ ಸಭೆಗೆ ತೆರಳಿದ್ದರು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಸೋಮವಾರ ಗುಜರಾತಿನಿಂದ ಪ್ರಯಾಣ ಬೆಳೆಸಿ ಇಂದು ಅವರ ಸ್ವಗ್ರಾಮಗಳಿಗೆ ತೆರಳಲು ಆಗಮಿಸಿದ್ದಾರೆ. ಆದರೆ ಎಚ್ಚೆತ್ತ ಜಿಲ್ಲೆಯ ಪೊಲೀಸರು ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ಚೆಕ್ ಪೋಸ್ಟ್ ಬಳಿ ಅವರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಕೋಟೆನಾಡಿನ ಮಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

    ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಚಿತ್ರದುರ್ಗದ 15 ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಿದ್ದು, 18 ಜನರನ್ನು ತುಮಕೂರಿಗೆ ಕಳಿಸಿದ್ದಾರೆ. ಆದರೆ ಈವರೆಗೆ ನಿರಾತಂಕವಾಗಿ ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಓಡಾಡುತ್ತಿದ್ದ ಚಿತ್ರದುರ್ಗದ ಜನರು ತಬ್ಲಿಘಿಗಳ ಆಗಮನದಿಂದ ಮತ್ತೆ ಚಿಂತಾಕ್ರಾಂತರಾಗಿದ್ದಾರೆ.

  • ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    – ಮಹಿಳೆಯರಿಗೆ ಸಲಹೆಯೊಂದನ್ನು ನೀಡಿದ ನಟಿ

    ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ.

    ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಹರಿಪ್ರಿಯಾ ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಹೆದರಿ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಭಯಪಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರೇ ಹೊಣೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.

    ಮಹಿಳೆಯರಿಗೆ ಎಲ್ಲವನ್ನು ಎದುರಿಸಬಲ್ಲ ಶಕ್ತಿ ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಭಯವಾಗುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಭಯಪಡುತ್ತೇನೆ. ಜಿರಳೆಗಳು ನೋಡಲು ಚಿಕ್ಕದಾಗಿದ್ದರೂ ದೊಡ್ಡ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರೂ ಕೂಡ ದೊಡ್ಡ ಗಾತ್ರದ ಡೈನೋಸರ್ಸ್ ಅನ್ನು ಬೇಕಾದರೂ ಪಳಗಿಸುತ್ತಾರೆ. ಆದರೆ ಜಿರಳೆಯನ್ನು ಕಂಡರೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಭಯಪಡುತ್ತೀರಾ ಎಂಬ ವಿಚಾರವನ್ನು ಪುರುಷರೊಂದಿಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಮುಂದೆ ಬಳಸಬಹುದು. ಈ ಹಿಂದೆ ಕೂಡ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯಪಡಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು. ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ ಎಂದು ಹರಿಪ್ರಿಯಾ ಅನುಭವವನ್ನು ಬರೆದಿದ್ದಾರೆ.

    ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು ಸಾವಿರ ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು. ಇಲ್ಲವೇ ಅದು ಬೇರೆ ಕಡೆ ಹೋಗಬೇಕು. ಸಿನಿಮಾದಲ್ಲಿನ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೆ ಈಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

  • ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕಾರವಾರ: ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆಯುತ್ತಿದ್ದ ಇಬ್ಬರು ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ನಡೆದಿದೆ.

    ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ಕೊರೊನಾ ಸೋಂಕಿತ ಆರು ಜನ ರೋಗಿಗಳಿದ್ದು ಇವರಿಗೆ ಚಿಕಿತ್ಸೆ ಕೊಡಲು ತರಬೇತಿ ನೀಡಿ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಕಾರ್ ಪಾರ್ಕ್ ಮಾಡಿ ಬರುವುದಾಗಿ ಹೇಳಿ ಹೋದ ಈ ವೈದರು ಮೊಬೈಲ್ ಸ್ವಿಚ್ ಆಫ್ ಮಾಡಿ ಪತಂಜಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

    ಕರ್ತವ್ಯ ಲೋಪ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಆರ್.ರೋಷನ್ ರಿಂದ ನೋಟಿಸ್ ನೀಡಿದ್ದು ಏಳು ದಿನದಲ್ಲಿ ಉತ್ತರ ನೀಡದಿದ್ದರೆ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯವರು ಸಹ ಕೊರೊನಾ ರೋಗಿಗಳನ್ನು ಹೊರತುಪಡಿಸಿ ಇತರ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ ನೀಡುತಿಲ್ಲ. ಹೀಗೆ ಮಾಡಿದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಇಂತವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.