Tag: FDI

  • ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಿದೇಶಿ ಬಂಡವಾಳ ಹೂಡಿಕೆ (FDI) ಅಡಿ ನಿರ್ಮಾಣವಾಗಲಿರುವ ಮೊದಲ ಯೋಜನೆಯ ನಿರ್ಮಾಣ ಕಾಮಗಾರಿ ಕೆಲಸ ಅಧಿಕೃತವಾಗಿ ಆರಂಭವಾಗಿದೆ.

    ಬುರ್ಜ್ ಖಲೀಫಾದ ಡೆವಲಪರ್ ಯುಎಇ ಮೂಲದ Emaar ಗ್ರೂಪ್ ಶ್ರೀನಗರದಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಕೈಹಾಕಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 10 ಲಕ್ಷ ಚದರ ಅಡಿ ನಿರ್ಮಾಣವಾಗಲಿರುವ “ಮಾಲ್ ಆಫ್ ಶ್ರೀನಗರ”ಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ

    ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್‌ ಸಿನ್ಹಾ, ಇದು 500 ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷವಾಗಿ ಶ್ರೀನಗರ ಮತ್ತು ಸುತ್ತಮುತ್ತಲಿನ ಜನರ ಬಹುಕಾಲದ ಕನಸು ಈಡೇರಲಿದೆ. ಜಮ್ಮುವಿನಲ್ಲಿ 150 ಕೋಟಿ ರೂ.ಗಳ ಐಟಿ ಟವರ್‌ ಸ್ಥಾಪಿಸಲಾಗುವುದು. ಅದಕ್ಕಾಗಿ ಭೂಮಿ ನೀಡಲಾಗಿದೆ ಎಂದು ತಿಳಿಸಿದರು.

    ಶ್ರೀನಗರ ಮತ್ತು ಜಮ್ಮುವಿನಲ್ಲಿ ಎಮಾರ್ ಯೋಜನೆಗಳಿಂದ ಉದ್ಯೋಗದ ಪರ್ವ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕೈಗಾರಿಕಾ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ಹಲವಾರು ಗಲ್ಫ್‌ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತೆ ಆಹ್ವಾನಿಸಿತ್ತು. ಕಳೆದ ವರ್ಷ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳ ಸುಮಾರು 36 ಸಿಇಒಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

  • ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    – 9 ಸುಧಾರಣೆಗೆ ಕ್ಯಾಬಿನೆಟ್ ಒಪ್ಪಿಗೆ
    – ಎಜಿಆರ್ ಶುಲ್ಕ ಪಾವತಿಗೆ 4 ವರ್ಷ ಕಾಲಾವಕಾಶ

    ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಟೆಲಿಕಾಂ ವಲಯದ ಒಟ್ಟು 9 ಸುಧಾರಣೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

    ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯವನ್ನು (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿಸಬೇಕಿದೆ. ಭಾರೀ ಮೊತ್ತವನ್ನು ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಸಮಸ್ಯೆ ಆಗಿತ್ತು. ಅದರಲ್ಲೂ ವೊಡಾಫೋನ್ ಕಂಪನಿ ದಿವಾಳಿಯ ಅಂಚಿಗೆ ತಲುಪಿತ್ತು. ಈಗ ಸರ್ಕಾರ ಪುನಶ್ಚೇತನ ಕ್ರಮಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಕಂಪನಿಗಳು ನಿಟ್ಟುಸಿರು ಬಿಟ್ಟಿದೆ.

    ಏನು ಕ್ರಮ?
    ಇಲ್ಲಿಯವರೆಗೆ ಟೆಲಿಕಾಂ ವಲಯಕ್ಕೆ ಅಟೋಮ್ಯಾಟಿಕ್(ಸ್ವಯಂಚಾಲಿತ) ಮಾರ್ಗದ ಮೂಲಕ ಶೇ.49 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ(ಎಫ್‍ಡಿಐ) ಅನುಮತಿ ಇತ್ತು. ಇದಕ್ಕೂ ಹೆಚ್ಚಿನ ಹೂಡಿಕೆಗೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಈಗ ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಲಾಗಿದೆ. ಆದರೆ ಚೀನಾ ಮತ್ತು ಪಾಕಿಸ್ತಾನ ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ : ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ಎಜಿಆರ್ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದ್ದ ಬಾಕಿ ಶುಲ್ಕ ಪಾವತಿ ಮಾಡಲು ಟೆಲಿಕಾಂ ಕಂಪನಿಗಳಿಗೆ 4 ವರ್ಷ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಣ್ಣ ಪ್ರಮಾಣ ಬಡ್ಡಿಯನ್ನು ವಿಧಿಸಲಿದೆ. ಎಜಿಆರ್ ವ್ಯಾಪ್ತಿಯಿಂದ ಟೆಲಿಕಾಮೇತರ ಆದಾಯ ಹೊರಗಿಡಲಾಗಿದೆ. ಇದರ ಜೊತೆ ತಡವಾಗಿ ಪಾವತಿ ಮಾಡಿದರೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನು ಕಡಿಮೆ ಮಾಡಲಾಗಿದ್ದು, ದಂಡವನ್ನು ರದ್ದು ಮಾಡಲಾಗಿದೆ.

    ಟೆಲಿಕಾಂ ಕಂಪನಿಗಳ ನಡುವೆ ಸ್ಪೆಕ್ಟ್ರಂ ವಿನಿಮಯಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರ ಜೊತೆ ಹಳೆ ಕಂಪನಿಗಳಿಂದ ತಿಂಗಳ ಬದಲು ವರ್ಷಕ್ಕೊಮ್ಮೆ ಸ್ಪೆಕ್ಟ್ರಂ ಶುಲ್ಕ ಪಾವತಿಗೆ ಒಪ್ಪಿಗೆ ನೀಡಿದ್ದು ಬಡ್ಡಿಯನ್ನು ಕಡಿಮೆ ಕಡಿಮೆ ಮಾಡಿದೆ. ಸ್ಪೆಕ್ಟ್ರಂ ಅವಧಿಯನ್ನು 20ರಿಂದ 30 ವರ್ಷಕ್ಕೆ ಹೆಚ್ಚಳ ಮಾಡುವುದರ ಜೊತೆ 10 ವರ್ಷದ ಬಳಿಕ ಸ್ಪೆಕ್ಟ್ರಂ ಮರಳಿಸಲು ಅವಕಾಶ ನೀಡಲಾಗಿದೆ. ಈ ಎಲ್ಲ ಕ್ರಮಗಳಿಂದ ಕಂಪನಿಗಳಿಗೆ ಹಣ ಉಳಿತಾಯವಾಗಲಿದ್ದು ಬೇರೆ ಹೂಡಿಕೆ ನೆರವಾಗಬಹದು ಎಂದು ಸರ್ಕಾರ ಹೇಳಿದೆ.

    ವಿದೇಶಿ ಸಲಕರಣೆ ಆಮದಿಗೆ ಲೈಸೆನ್ಸ್ ಪಡೆಯಬೇಕೆಂಬ ಷರತ್ತನ್ನು ರದ್ದುಗೊಳಿಸಲಾಗಿದೆ. ಆದರೆ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಸೇರಿದಂತೆ ಎಲ್ಲಾ ಭಾರತೀಯ ಸಂಸ್ಥೆಗಳು ಭಾರತ ನಿರ್ಮಿತ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳನ್ನು ಬಳಸಲಿದೆ. ನಾವು ದೇಶಿಯ ತಂತ್ರಜ್ಞಾನವನ್ನು ಬಳಸುವುದು ಮಾತ್ರ ಅಲ್ಲ ಈ ತಂತ್ರಜ್ಞಾನಗಳನ್ನು ರಫ್ತುದಾರ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇಲ್ಲಿಯವರೆಗೆ 3ಜಿ ಮತ್ತು 4ಜಿ ತಂತ್ರಜ್ಞಾನಗಳ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗಿದೆ.   ಇದನ್ನೂ ಓದಿ: ಸಾಲದಲ್ಲಿ ವಿಐಎಲ್ ಕಂಪನಿ – ಸರ್ಕಾರಕ್ಕೆ ಷೇರು ಮಾರಲು ಮುಂದಾದ ಬಿರ್ಲಾ 

    ಭಾರತದಲ್ಲಿ ಎಫ್‍ಡಿಐ ಹೇಗೆ?
    ಭಾರತದಲ್ಲಿ ಎರಡು ರೀತಿಯಲ್ಲಿ ಎಫ್‍ಡಿಐ ಹೂಡಿಕೆ ಮಾಡಬಹುದು. ಅಟೋಮ್ಯಾಟಿಕ್ ಮಾರ್ಗದಲ್ಲಿ ನೇರವಾಗಿ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರ್ಕಾರದ ಯಾವುದೇ ಅನುಮತಿ ಅಗತ್ಯವಿಲ್ಲ. ಸರ್ಕಾರದ ಮಾರ್ಗದಲ್ಲಿ ಅನುಮತಿ ಪಡೆಯಬೇಕಾದರೆ ಎಫ್‍ಡಿಐಗೂ ಮುನ್ನ ಕಂಪನಿಗಳು ಕೇಂದ್ರ ಸರ್ಕಾರ ಅನುಮತಿ ಪಡೆಯಬೇಕೆಂಬ ಷರತ್ತನ್ನು ವಿಧಿಸಲಾಗಿದೆ.   ಇದನ್ನೂ ಓದಿ : ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ಬಾಕಿ ಎಷ್ಟಿದೆ?
    ಟೆಲಿಕಾಂ ಸಂಸ್ಥೆಗಳಾದ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಕೇಂದ್ರಕ್ಕೆ ಪರವಾನಗಿ ಶುಲ್ಕವಾಗಿ ಸುಮಾರು 92 ಸಾವಿರ ಕೋಟಿ ರೂ., ಮತ್ತು ಸ್ಪೆಕ್ಟ್ರಂ ಬಳಕೆಯ ಶುಲ್ಕ 41 ಸಾವಿರ ಕೋಟಿಯನ್ನು ಬಾಕಿ ಉಳಿಸಿಕೊಂಡಿವೆ. 2020ರಲ್ಲಿ ಸುಪ್ರೀಂ ಕೋರ್ಟ್ ಟೆಲಿಕಾಂ ಕಂಪನಿಗಳಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕೆಂದು ಆದೇಶ ನೀಡಿತ್ತು.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ಆಂದೋಲನ ಜೀವಿಗಳು, ಎಫ್‌ಡಿಐಯಿಂದ ದೇಶವನ್ನು ರಕ್ಷಿಸಿಕೊಳ್ಳಬೇಕು – ಪ್ರಧಾನಿ ಮೋದಿ

    ಆಂದೋಲನ ಜೀವಿಗಳು, ಎಫ್‌ಡಿಐಯಿಂದ ದೇಶವನ್ನು ರಕ್ಷಿಸಿಕೊಳ್ಳಬೇಕು – ಪ್ರಧಾನಿ ಮೋದಿ

    ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ತಮ್ಮ ಸ್ವಾರ್ಥ ಲಾಭ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳ ವಿರುದ್ಧ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿ ʼಆಂದೋಲನ ಜೀವಿಗಳುʼ ಎಂದು ಕರೆದು ವ್ಯಂಗ್ಯವಾಡಿದ್ದಾರೆ.

    ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಭಾಗವಹಿಸಿ, ಶ್ರಮ ಜೀವಿ, ಬುದ್ಧಿ ಜೀವಿ ಈ ಪದಗಳೆಲ್ಲ ನಮಗೆ ತಿಳಿದಿದೆ. ಆದರೆ ಈಗ ದೇಶದಲ್ಲಿ ಹೊಸ ಸಮುದಾಯ ಹುಟ್ಟಿಕೊಂಡಿದೆ. ಇವರು ಆಂದೋಲನ್‌ ಜೀವಿಗಳು. ಪ್ರತಿಭಟನೆ ನಡೆದಲ್ಲೆಲ್ಲಾ ಇವರನ್ನು ಗುರುತಿಸಬಹುದು. ವಕೀಲರು, ವಿದ್ಯಾರ್ಥಿಗಳು ಅಥವಾ ಕಾರ್ಮಿಕರ ಆಂದೋಲನ ಯಾವುದೇ ಇರಲಿ. ಆಂದೋಲನ‌ ಇಲ್ಲದೇ ಇವರಿಗೆ ಬದುಕಲು ಸಾಧ್ಯವಿಲ್ಲ. ನಾವು ಆಂದೋಲನ ಜೀವಿಗಳನ್ನು ಗುರುತಿಸಬೇಕು ಮತ್ತು ಅವರಿಂದ ರಾಷ್ಟ್ರವನ್ನು ರಕ್ಷಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

    ರೈತರ ಹೋರಾಟಕ್ಕೆ ವಿದೇಶದ ಕೆಲ ವ್ಯಕ್ತಿಗಳು, ಸಂಘಟನೆಗಳು ಬೆಂಬಲ ನೀಡುತ್ತಿರುವುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ರಾಷ್ಟ್ರವು ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಎಫ್‌ಡಿಐ(ಫಾರಿನ್‌ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌- ವಿದೇಶಿ ನೇರ ಬಂಡವಾಳ) ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಈಗ ಹೊಸ ಎಫ್‌ಡಿಐ ಮುಂಚೂಣಿಗೆ ಬಂದಿದೆ. ಇದು ಫಾರಿನ್‌ ಡಿಸ್ಟ್ರಕ್ಟಿವ್‌ ಐಡಿಯಾಲಜಿ(ವಿದೇಶಿ ವಿನಾಶಕಾರಿ ಸಿದ್ಧಾಂತ). ಇದರಿಂದ ನಾವು ನಮ್ಮ ದೇಶವನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್.ಡಿ ದೇವೇಗೌಡ್ರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿನ ಆಂದೋಲನ ಜೀವಿ ಮತ್ತು ಹೊಸ ಎಫ್‌ಡಿಐ ಪದಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ.

    ತಮ್ಮ ಭಾಷಣದಲ್ಲಿ ಎಂಎಸ್‌ಪಿ(ಕನಿಷ್ಟ ಬೆಂಬಲ ಬೆಲೆ) ಬಗ್ಗೆ ಮಾತನಾಡಿ, ಎಂಎಸ್‌ಪಿ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಲು ನಮ್ಮ ಸರ್ಕಾರ ಬಿಡುವುದಿಲ್ಲ. ರೈತರ ರಕ್ಷಣೆ ನಮ್ಮ ಸರ್ಕಾರ ಬದ್ಧವಿದೆ ಎಂದು ಸ್ಪಷ್ಟಪಡಿಸಿದರು.

  • ಕೇಂದ್ರದ ನಿರ್ಧಾರ ಸ್ವಾಗತಿಸಿದ ಆಪಲ್ ಕಂಪನಿ

    ಕೇಂದ್ರದ ನಿರ್ಧಾರ ಸ್ವಾಗತಿಸಿದ ಆಪಲ್ ಕಂಪನಿ

    ನವದೆಹಲಿ: ಐಫೋನ್ ತಯಾರಕಾ ಕಂಪನಿ ಆಪಲ್ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ನಿಯಮ ಸಡಿಲಿಸಿದ ಭಾರತ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

    ಪ್ರಧಾನಿ ಮೋದಿ ಮತ್ತು ಅವರ ತಂಡದ ಕೆಲಸವನ್ನು ನಾವು ಶ್ಲಾಘಿಸುತ್ತೇವೆ. ಭಾರತದಲ್ಲಿನ ನಮ್ಮ ರಿಟೇಲ್ ಸ್ಟೋರ್ ಗೆ ಗ್ರಾಹಕರನ್ನು ಸ್ವಾಗತಿಸುತ್ತೇವೆ. ನಮ್ಮ ಯೋಜನೆಗಳು ಕಾರ್ಯಗತವಾಗಲು ಕೆಲ ಸಮಯ ಬೇಕಾಗಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳನ್ನು ಪ್ರಕಟಿಸುತ್ತೇವೆ ಎಂದು ಆಪಲ್ ಹೇಳಿದೆ.

    ನಾವು ಭಾರತೀಯ ಗ್ರಾಹಕರನ್ನು ಪ್ರೀತಿಸುತ್ತೇವೆ ಮತ್ತು ಭಾರ5ತೀಯರಿಗೆ ವಿಶ್ವದಲ್ಲಿರುವ ಆಪಲ್ ಗ್ರಾಹಕರು ಪಡೆಯುತ್ತಿರುವ ಸೇವೆ ನೀಡಲು ಉತ್ಸಾಹಗೊಂಡಿದ್ದೇವೆ ಎಂದು ತಿಳಿಸಿದೆ.

    ಬುಧವಾರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಲ್ಲಿದ್ದಲು, ಚಿಲ್ಲರೆ ಮಾರಾಟ ಮತ್ತು ಡಿಜಿಟಲ್ ಮಾಧ್ಯಮಗಳ ಮೇಲಿನ ವಿದೇಶಿ ನೇರ ಹೂಡಿಕೆ ಸಂಬಂಧ ನಿಯಮಗಳನ್ನು ಸಡಿಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು, ಒಂದೇ ಬ್ರಾಂಡ್ ಚಿಲ್ಲರೆ ಮಾರಾಟ ಕಂಪನಿಗಳು ಮಳಿಗೆ ಆರಂಭಿಸುವ ಮುನ್ನವೇ ಆನ್‍ಲೈನ್ ಮೂಲಕ ಮಾರಾಟಕ್ಕೆ ಅವಕಾಶಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಕಾರಣಕ್ಕೆ ಆಪಲ್ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸಿದೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಮುಂದಿನ 4-5 ತಿಂಗಳಿನಲ್ಲಿ ಮುಂಬೈನಲ್ಲಿ ಆಪಲ್ ತನ್ನ ರಿಟೇಲ್ ಸ್ಟೋರ್ ತೆರೆಯಲು ಸಿದ್ಧತೆ ಮಾಡುತ್ತಿದೆ. ಸದ್ಯಕ್ಕೆ ಆಪಲ್ ಆನ್‍ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್‍ಕಾರ್ಟ್, ಪೇಟಿಎಂ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

    ಇಲ್ಲಿಯವರೆಗೆ ಒಂದೇ ಬ್ರ್ಯಾಂಡ್ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪ್ರತಿ ವರ್ಷ ಶೇ.30 ರಷ್ಟು ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ಈಗ 5 ವರ್ಷದ ವ್ಯಾಪಾರದ ಅವಧಿಯಲ್ಲಿ ಸರಾಸರಿ ಶೇ.30 ರಷ್ಟು ದೇಶಿಯ ಉತ್ಪನ್ನ ಮಾರಾಟವಾದರೆ ಸಾಕು ಎನ್ನುವ ನಿಯಮವನ್ನು ಸರಳಗೊಳಿಸಲಾಗಿದೆ.

  • ಡಿಜಿಟಲ್ ಮೀಡಿಯಾದಲ್ಲಿ ಶೇ.26 ಎಫ್‍ಡಿಐ, 75 ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ

    ಡಿಜಿಟಲ್ ಮೀಡಿಯಾದಲ್ಲಿ ಶೇ.26 ಎಫ್‍ಡಿಐ, 75 ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ

    ನವದೆಹಲಿ: ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಶೇ.100 ಮತ್ತು ಡಿಜಿಟಲ್ ಮೀಡಿಯಾದಲ್ಲಿ ಶೇ.26 ವಿದೇಶಿ ನೇರ ಬಂಡವಾಳ(ಎಫ್‍ಡಿಐ) ಹೂಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.

    ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ವಿಶ್ವದೆಲ್ಲೆಡೆ ಎಫ್‍ಡಿಐ ಹೂಡಿಕೆ ಇಳಿಮುಖವಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಗಣಿಗಾರಿಕೆ ಮತ್ತು ಗುತ್ತಿಗೆ ಉತ್ಪಾದನೆ ಆಧಾರಿತ ಎಲ್ಲ ಕ್ಷೇತ್ರಗಳಲ್ಲಿ ಶೇ.100 ರಷ್ಟು ಎಫ್‍ಡಿಐ ಹೂಡಿಕೆ ಮಾಡಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

    24,375 ಕೋಟಿ ರೂ. ವೆಚ್ಚದಲ್ಲಿ 2021-22ರ ಒಳಗಡೆ 75 ಹೊಸ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇದರಿಂದಾಗಿ ದೇಶದಲ್ಲಿ 15,700 ಎಂಬಿಬಿಎಸ್ ಸೀಟ್‍ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

    60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತು ಸಂಬಂಧ 6,268 ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಸಬ್ಸಿಡಿ ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗಲಿದೆ ಎಂದು ತಿಳಿಸಿದರು.

    ಸಿಂಗಲ್ ಬ್ರ್ಯಾಂಡ್ ರಿಟೇಲಿಂಗ್ ಎಫ್‍ಡಿಐ ನಿಯಮವನ್ನು ಸಡಿಲಿಸಲಾಗಿದೆ. ರಿಟೇಲ್ ಮಳಿಗೆ ತೆರೆಯದೇ ಆನ್‍ಲೈನ್ ಶಾಪಿಂಗ್ ತಾಣಗಳ ಮೂಲಕವೇ ವಸ್ತುಗಳನ್ನು ಮಾರಾಟ ಮಾಡಬಹುದಾಗಿದೆ.

  • ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ನವದೆಹಲಿ: ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ವಿದೇಶಿ ಬಂಡಾವಣ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುವುದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    * ಪ್ರಧಾನಮಂತ್ರಿ ಕರ್ಮಯೋಗಿ ಮಾನ್‍ಧನ್ ಯೋಜನೆ ಅಡಿಯಲ್ಲಿ 1.5 ಕೋಟಿ ರೂ.ಗಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ವ್ಯಾಪಾರಸ್ಥರಿಗೆ ಪೆನ್ಷನ್ (ಪಿಂಚಣಿ) ಲಾಭ ಸಿಗಲಿದೆ.
    * ಸಣ್ಣ ಮಳಿಗೆದಾರರಿಗೆ ಕೇವಲ 59 ನಿಮಿಷದಲ್ಲಿ ಸಾಲ ಸಿಗಲಿದೆ. 3 ಕೋಟಿಗೂ ಅಧಿಕ ಸಣ್ಣಮಳಿಗೆದಾರರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

    * ಮಧ್ಯವರ್ತಿ ವಿಮಾ ಸಂಸ್ಥೆಗಳಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್‍ಡಿಐ)ಗೆ ಅವಕಾಶ
    * ಚಿಲ್ಲರೆ ವ್ಯಾಪಾರಕ್ಕೆ ಪ್ರೋತ್ಸಾಹ ಮತ್ತು ಸಿಂಗಲ್ ಬ್ರ್ಯಾಂಡ್ ರಿಟೇಲ್ ವ್ಯವಹಾರದಲ್ಲಿ ಸುಲಭ ಹೊಡಿಕೆಗೆ ಅವಕಾಶ
    * ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆಯಡಿ ಮಹಿಳೆಯರು ಮತ್ತು ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಸಹಾಯ

    * ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮದಾರರ ಸಾಲದ ಮೇಲೆ ಶೇ.2 ರಷ್ಟು ವಿನಾಯ್ತಿ. ಇದಕ್ಕಾಗಿ 350 ಕೋಟಿ ರೂಪಾಯಿ ಮೀಸಲು

    * ಶೇರು ಮಾರುಕಟ್ಟೆಯ ಲಿಸ್ಟೆಡ್ ಕಂಪನಿಗಳ ಸರ್ಕಾರಿ ಶೇರುದಾರರ ಸಂಖ್ಯೆ ಶೇ.25 ರಿಂದ ಶೇ.35ಕ್ಕೆ ಹೆಚ್ಚಿಸುವ ಪ್ರಸ್ತಾವ
    * ಸರ್ಕಾರಿ-ಖಾಸಗಿ ಸಹಭಾಗಿತ್ವದ ಪಿಪಿಪಿ (Public-Private Partnership) ಮೂಲಕ ರೈಲ್ವೇ ಇಲಾಖೆಯಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು. ಬಂಡವಾಳ ಹೂಡಿಕೆ ಬಳಿಕ ರೈಲ್ವೇ ಟ್ರ್ಯಾಕ್, ಮೂಲಭೂತ ಸೌಲಭ್ಯ ನೀಡುವುದು. ಇವುಗಳ ಜೊತೆಯಲ್ಲಿ ಪ್ರಯಾಣಿಕರ ಸರಕು ಸಾಗಣೆ (Passenger Freight Service) ಸೇವೆ ಆರಂಭಿಸುವುದು.

    * ಸ್ಟಾರ್ಟ್ ಅಪ್ ಯೋಜನೆಯ ಮಾಹಿತಿ ನೀಡಲು ವಿಶೇಷವಾಗಿ ಟಿವಿ ಚಾನೆಲ್ ಆರಂಭಿಸಲಾಗುವುದು. ಯುವ ಸಮುದಾಯ ಮತ್ತು ಉದ್ದಿಮೆದಾರರ ಸ್ಫೂರ್ತಿದಾಯಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸುವುದು.
    * ಭಾರತದಲ್ಲಿರುವ ಸೃಜನಶೀಲತೆ ಕೈಗಾರಿಕೆ ಮತ್ತು ಉದ್ಯಮದಾರರನ್ನು ಕೆಲಸವನ್ನು ಪ್ರೋತ್ಸಾಹಿಸಿ ಅವರನ್ನು ಅರ್ಥವ್ಯವಸ್ಥೆ ವ್ಯಾಪ್ತಿಗೆ ತರುವುದು. ನಮ್ಮ ಸೃಜನಶೀಲ ಕಲೆಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವುದು.
    * ಸ್ಟಾರ್ಟ್‍ಅಪ್ ಯೋಜನೆಯಡಿಯಲ್ಲಿ ಹೂಡಿಕೆ ಮೊತ್ತದ ಮೇಲೆ ತೆರಿಗೆ ವಿನಾಯ್ತಿ ನೀಡುವುದು.

    * 250 ಕೋಟಿ ರೂ. ವ್ಯವಹಾರ(turn over)ವನ್ನು ಹೊಂದಿರುವ ಕಾರ್ಪೋರೇಟ್ ಕಂಪನಿಗಳ ಮೇಲಿನ ಶೇ.25ರಷ್ಟಿದ್ದು, ಯಾವುದೇ ಬದಲಾವಣೆಗಳಿಲ್ಲ. 400 ಕೋಟಿ ರೂ. ವ್ಯವಹಾರವನ್ನು ಹೊಂದಿರುವ ಕಂಪನಿಗಳು ಸಹ ಶೇ.25 ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅಂದ್ರೆ ಶೇ.99.3ರಷ್ಟು ಕಂಪನಿಗಳು ಶೇ.25 ಕಾರ್ಪೋರೇಟ್ ಟ್ಯಾಕ್ಸ್ ವ್ಯಾಪ್ತಿಯಲ್ಲಿ ಒಳಪಡಲಿವೆ. ಕೇವಲ ಶೇ.0.7 ಕಂಪನಿಗಳು ಮಾತ್ರ ಶೇ.25ರ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರ ಇರಲಿವೆ.

  • ಹುಟ್ಟು ಅಂಧರಾದ್ರೂ ಓದಿನಲ್ಲಿ ಛಲದಂಕಮಲ್ಲ- ಒಂದೇ ವರ್ಷದಲ್ಲಿ 3 ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದ್ರು ಕೊಪ್ಪಳದ ಪ್ರಭುರಾಜ್

    ಹುಟ್ಟು ಅಂಧರಾದ್ರೂ ಓದಿನಲ್ಲಿ ಛಲದಂಕಮಲ್ಲ- ಒಂದೇ ವರ್ಷದಲ್ಲಿ 3 ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಿದ್ರು ಕೊಪ್ಪಳದ ಪ್ರಭುರಾಜ್

    ಕೊಪ್ಪಳ: ಸರ್ಕಾರಿ ಕೆಲಸ ಪಡೆಯೋದು ತುಂಬಾ ಕಷ್ಟ ಅಂತಾರೆ. ಆದ್ರೆ ಕೊಪ್ಪಳದ ಅಂಧ ವ್ಯಕ್ತಿ ಪ್ರಭುರಾಜ್ ಮಾತ್ರ ಒಂದೇ ವರ್ಷದಲ್ಲಿ 3 ಪರೀಕ್ಷೆಗಳಲ್ಲಿ ಪಾಸಾಗಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ.

    ಕೊಪ್ಪಳದ ಭಾಗ್ಯನಗರದ ನಿವಾಸಿಯಾಗಿರೋ ಪ್ರಭುರಾಜ್ ಎತ್ತಿನಮನಿ ಅವರು ಹುಟ್ಟಿನಿಂದಲೇ ಶೇಕಡ 80ರಷ್ಟು ಅಂಧತ್ವ ಹೊಂದಿದ್ದಾರೆ. ಆದ್ರೂ ಅವರು ಸಾಧನೆಯ ಛಲ ಬಿಡಲಿಲ್ಲ. ನಿರಂತರ ಅಧ್ಯಯನದ ಮೂಲಕ ಡಿ.ಎಡ್ ಓದಿರೋ ಪ್ರಭುರಾಜ್, 2013ರಲ್ಲಿ ನಡೆದ ಟಿಇಟಿ, ಎಫ್‍ಡಿಎ, ಎಸ್‍ಡಿಎ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇದೀಗ ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

    ಪ್ರಭುರಾಜ್ ಅವರ ಎಲ್ಲಾ ಪರೀಕ್ಷೆಗಳಲ್ಲಿ ಅಕ್ಕನ ಮಗಳು ಮಧುಶ್ರೀ ಸಹಾಯಕ್ಕೆ ನಿಂತರೆ, ಸಂಬಂಧಿ ಪ್ರಶಾಂತ್ ಎಂಬವರು ಸ್ಪರ್ಧಾತ್ಮಕ ಪರೀಕ್ಷೆ ಕಟ್ಟೋಕೆ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರಭುರಾಜ್ ಅವರಿಗೆ ಮದುವೆ ಆಗಿತ್ತು. ಆದ್ರೆ ಅಂಧ ಅಂತ ಪತ್ನಿ ಬಿಟ್ಟು ಹೋಗಿದ್ದಾರೆ.

    ಕಣ್ಣಿದ್ದವರೂ ಪರೀಕ್ಷೆಗಳಲ್ಲಿ ಪಾಸಾಗಲು ಕಷ್ಟಪಡುವಂತಿರುವಾಗ, ಒಂದಲ್ಲ ಎರಡಲ್ಲ ಮೂರು ಹುದ್ದೆಗೆ ಆಯ್ಕೆಯಾಗಿರೋ ಪ್ರಭುರಾಜ್ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

    https://www.youtube.com/watch?v=U09j4aZCkKs

  • ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನಿರಾಶಾವಾದಿಗಳಿಂದ ಅಪಪ್ರಚಾರ, ಆರ್ಥಿಕತೆ ಕುಸಿತವಾಗಿಲ್ಲ: ಮೋದಿಯಿಂದ ಅಂಕಿಸಂಖ್ಯೆಯ ಭಾಷಣ

    ನವದೆಹಲಿ: ದೇಶದ ಆರ್ಥಿಕತೆ ಕುಸಿದಿಲ್ಲ. ಆದರೆ ನಿರಾಶಾವಾದಿಗಳು ಹಿಂಜರಿತವಾಗಿದೆ ಎನ್ನುವ ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ವಿರೋಧಿ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

    ದೆಹಲಿಯ ವಿಜ್ಞಾನ ಭವನದಲ್ಲಿ ಇನ್ಸ್ ಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಅಂಕಿಸಂಖ್ಯೆಗಳಿಂದ ಕೂಡಿದ ಮಾಹಿತಿ ಇರುವ ಭಾಷಣವನ್ನು ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    500, 1ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ದೇಶಕ್ಕೆ ಒಳ್ಳೆದಾಗುತ್ತಿದೆ. ನೋಟ್ ಬ್ಯಾನ್ ಬಳಿಕ ನಗದು ಚಲಾವಣೆ ಪ್ರಮಾಣ ಶೇ.12ರಿಂದ ಶೇ.9ಕ್ಕೆ ಕುಸಿದಿದೆ ಎಂದು ಹೇಳಿದರು.

    ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಮೊದಲ ತ್ರೈಮಾಸಿಕದಲ್ಲಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿದ್ದನ್ನು ಒಪ್ಪಿಕೊಂಡ ಅವರು, ಯುಪಿಎ ಅವಧಿಯಲ್ಲಿ 8 ಬಾರಿ ಶೇ.5.7ಕ್ಕಿಂತ ಕಡಿಮೆ ಜಿಡಿಪಿ ಕುಸಿದಿತ್ತು ಎಂದು ಹೇಳಿದರು. ಆರಂಭದಲ್ಲಿ ಸಮಸ್ಯೆಯಾದರೂ ಭವಿಷ್ಯದಲ್ಲಿ ದೇಶಕ್ಕೆ ಲಾಭವಾಗಲಿದೆ ಎನ್ನುವ ದೃಷ್ಟಿಯನ್ನು ನೋಡಿಕೊಂಡೇ ನೋಟ್ ನಿಷೇಧ ಮಾಡಿ ಸರಕು ಮತ್ತು ಸೇವಾ ತೆರಿಗೆಯನ್ನು(ಜಿಎಸ್‍ಟಿ) ತಂದಿದ್ದೇವೆ. ನಮ್ಮ ಮೂರು ವರ್ಷದ ಅವಧಿಯಲ್ಲಿ ಜಿಡಿಪಿ ದರ ಶೇ.7.5 ಇತ್ತು ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು. ಮುಂದಿನ ತ್ರೈಮಾಸಿಕದಲ್ಲಿ ಶೇ.7.7 ಜಿಡಿಪಿ ದರ ಬೆಳವಣಿಗೆಯಾಗುವ ನಿರೀಕ್ಷೆಯಲ್ಲಿದೆ ಎಂದು ಹೇಳಿದರು.

    ಹೊಟ್ಟೆ ತುಂಬಿರುವವರು ನನ್ನನ್ನು ದುರ್ಬಲ ಮಾಡಲು ನೋಡುತ್ತಿದ್ದಾರೆ. ದೇಶದ ಭವಿಷ್ಯಕ್ಕಾಗಿ ನಮ್ಮ ಕೆಲಸ ಕಠಿಣವಾಗಿರಬಹುದು. ಆದ್ರೆ, ಹೃದಯ ಮೃದು, ಸಂವೇದನಾಶೀಲವಾಗಿದೆ. ಕಪ್ಪುಹಣವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ನೊಂದಣಿಯಾದ 3 ಲಕ್ಷ ಕಂಪೆನಿಗಳಲ್ಲಿ 2.1 ಲಕ್ಷಕ್ಕೂ ಅಧಿಕ ಕಂಪೆನಿಗಳು ನಕಲಿಯಾಗಿದೆ ಎನ್ನುವ ವಿಚಾರ ನೋಟ್ ಬ್ಯಾನ್ ಬಳಿಕ ತಿಳಿದು ಬಂದಿದೆ ಎಂದು ವಿವರಿಸಿದರು.

    ಎಫ್‍ಡಿಐನಲ್ಲಿ ದಾಖಲೆಯಾಗಿದ್ದು, 21 ಇಲಾಖೆಗಳಲ್ಲಿ 87 ಸುಧಾರಣೆಗಳನ್ನು ತಂದಿದ್ದೇವೆ. ಜಿಎಸ್‍ಟಿಯಲ್ಲಿ ಸಮಸ್ಯೆಯಾದರೆ ಅಗತ್ಯ ಬದಲಾವಣೆ ತರಲು ಸಿದ್ಧವಾಗಿದ್ದೇವೆ. ದೇಶದ ಆರ್ಥಿಕತೆಯ ಮೂಲ ಸದೃಢವಾಗಿದೆ. ಜನರು ಕಷ್ಟಪಟ್ಟು ದುಡಿದ ಹಣದ ಮಹತ್ವ ಸರ್ಕಾರಕ್ಕೆ ಗೊತ್ತಿದೆ. ನಮ್ಮ ಯೋಜನೆಗಳು ಬಡವರು ಮತ್ತು ಮಧ್ಯಮ ವರ್ಗದ ಜನರ ಉತ್ತಮ ಜೀವನವನ್ನು ಕೇಂದ್ರೀಕರಿಸಿವೆ. 2022ರಲ್ಲಿ ಹೊಸ ಭಾರತಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ ಎಂದು ಹೇಳಿದರು.