Tag: FB Post

  • ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

    ಬೆಂಗಳೂರು ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ – ಈ ಕಾಯ್ದೆಯ ವಿಶೇಷತೆ ಏನು?

    ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

    ಭಾರೀ ಪ್ರಮಾಣದ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿಲಾಗುತ್ತದೆ. ಈ ಕಾಯ್ದೆ ಬಿದ್ದರೆ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಗೂಂಡಾ ಕಾಯ್ದೆ ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ. ಹೀಗಾಗಿ ಇಲ್ಲಿ ಗೂಂಡಾ ಕಾಯ್ದೆ ಯಾವಾಗ ಬಂದಿತ್ತು? ವಿಶೇಷತೆ ಏನು ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

    ಏನಿದು ಗೂಂಡಾ ಕಾಯ್ದೆ?
    ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.

    ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
    ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್‍ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.

    ನೇರವಾಗಿ ಜೈಲಿಗೆ:
    ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಯಾವ ರಾಜ್ಯದಲ್ಲಿದೆ?
    ಸ್ವಾತಂತ್ರ್ಯಾ ನಂತರ ರಾಜಸ್ತಾನ (1975), ಉತ್ತರ ಪ್ರದೇಶ (1971), ತಮಿಳುನಾಡು (1982), ಕೇರಳ(2007) ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿವೆ. ಡಿಜಿಟಲ್ ಅಪರಾಧ, ಸೈಬರ್ ಅಪರಾಧಗಳನ್ನು ಗೂಂಡಾ ಕಾಯ್ದೆಯಡಿ ತಮಿಳುನಾಡು ಮೊದಲ ಬಾರಿಗೆ 2004ರಲ್ಲಿ ತಂದಿತ್ತು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

  • ಗೂಂಡಾ ಕಾಯ್ದೆ ಅಡಿ ಬಂಧಿಸಿ, ದಂಗೆಕೋರರಿಂದ ನಷ್ಟ ಭರ್ತಿ ಮಾಡಿ – ಸಿಎಂ ಸೂಚನೆ

    ಗೂಂಡಾ ಕಾಯ್ದೆ ಅಡಿ ಬಂಧಿಸಿ, ದಂಗೆಕೋರರಿಂದ ನಷ್ಟ ಭರ್ತಿ ಮಾಡಿ – ಸಿಎಂ ಸೂಚನೆ

    – ಗೃಹ ಇಲಾಖೆಯ ಜೊತೆ ಸಿಎಂ ಬಿಎಸ್‌ವೈ ಸಭೆ
    – 3 ಮಂದಿ ಸರ್ಕಾರಿ ಅಭಿಯೋಜಕರನ್ನು ನೇಮಿಸಿ

    ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಂಡಾ ಕಾಯ್ದೆಯ ಅಡಿ ಯಾರನ್ನು ಬಂಧಿಸಬಹುದು ಅವರನ್ನು ಬಂಧಿಸಿ ಎಂದು ಸಿಎಂ ಯಡಿಯೂರಪ್ಪ ಗೃಹ ಇಲಾಖೆಗೆ ಸೂಚಿಸಿದ್ದಾರೆ.

    ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಬೊಮ್ಮಾಯಿ, ಸಂಪೂರ್ಣ ಮಾಹಿತಿಯನ್ನು ಸಿಎಂಗೆ ನೀಡಿದ್ದೇವೆ. ದಂಗೆಯಲ್ಲಿ ಭಾಗವಹಿಸಿದವರಿಂದ ನಷ್ಟ ಭರ್ತಿಗೆ ಸಿಎಂ ಸೂಚಿಸಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡವರ ಹಿನ್ನೆಲೆ ಪರಿಶೀಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸುವುದಕ್ಕೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

    ಮೂರು ಜನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನು ನೇಮಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯ ಅಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು.

    ಗಲಭೆಯಲ್ಲಿ ಪಾಲ್ಗೊಂಡ ಆರೋಪಿಗಳ ಹಿನ್ನೆಲೆ, ಯಾವ ಸಂಘಟನೆಗಳ ಜೊತೆ ಸಂಪರ್ಕ ಇದೆ? ಆರೋಪಿಗಳು ಉಗ್ರ ಸಂಘಟನೆಗಳ ಜತೆಗೂ ಲಿಂಕ್ ಇಟ್ಕೊಂಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಗಲಭೆಕೋರರಿಗೆ ಉಗ್ರರ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಇನ್ನೂ ತನಿಖೆ ಹಂತದಲ್ಲಿ ಇದೆ. ಯಾವ ಸಂಘಟನೆಯ ಜೊತೆ ಸಂಪರ್ಕದಲ್ಲಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಇದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಉತ್ತರಿಸಿದರು.

    ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು.

    ಸಿಎಂ ಸಭೆಯ ಹೈಲೈಟ್ಸ್‌:
    1. ಆರೋಪಿಗಳ ತ್ವರಿತ ವಿಚಾರಣೆಗಾಗಿ, ಕಾನೂನು ಪ್ರಕ್ರಿಯೆಗಳಿಗಾಗಿ ಮೂವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ನೇಮಕ.
    2. ಗಲಭೆಯಡಿ ಬಂಧಿಸಿರುವ ಆರೋಪಿಗಳ ಜತೆ ಉಗ್ರ ಸಂಘಟನೆಗಳ ಲಿಂಕ್ ಇದ್ಯಾ ಅನ್ನೋ ಬಗ್ಗೆ ಬಗ್ಗೆ ಪರಿಶೀಲನೆಗೆ ನಿರ್ಧಾರ.
    3. ಘಟನೆಯಿಂದ ಆಗಿರುವ ಆಸ್ತಿಪಾಸ್ತಿ ನಷ್ಟ ವಸೂಲಿಗೆ ಕ್ಲೇಂ ಕಮೀಷನರ್ ನೇಮಕ ಮಾಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಕೆಗೆ ನಿರ್ಧಾರ.


    4. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಹಿಂದೆ ಕೇಸ್ ಇದ್ದರೆ ಪರಿಶೀಲಿಸಿ ಅಂತಹವರ ಮೇಲೆ ಗೂಂಡಾ ಕಾಯ್ದೆಯ ಅಡಿ ಹಾಕಲು ನಿರ್ಧಾರ.
    5. ಪ್ರಕರಣದಲ್ಲಿ ಭಾಗಿಯಾದವರು ಇತರೇ ಸಂಘಟನೆಗಳ ಜೊತೆ ಗುರ್ತಿಸಿಕೊಂಡಿರುವ ಬಗ್ಗೆ ಪರಿಶೀಲನೆ.
    6. ಪ್ರಕರಣದ ಹಿಂದಿರುವ ರಾಜಕೀಯ ಕಾರಣಗಳ ಬಗ್ಗೆಯೂ ಪರಿಶೀಲನೆ.


    7. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಒಂದೇ ತನಿಖಾ ತಂಡದಿಂದ ಮಾತ್ರ ಸದ್ಯಕ್ಕೆ ತನಿಖೆ. ಇದರಲ್ಲೂ ಸದ್ಯಕ್ಕೆ ಬದಲಾವಣೆ ಇಲ್ಲ.
    8. ಗೋಲಿಬಾರ್ ಪ್ರಕರಣವೂ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ. ಇದರಲ್ಲಿ ಬದಲಾವಣೆ ಇಲ್ಲ.
    9. ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

  • ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ನವೀನ್‌ ವಿರುದ್ಧ ದೂರು ನೀಡಿದ್ಧ ವ್ಯಕ್ತಿಯಿಂದ ಈಗ ಗಲಭೆಕೋರರ ವಿರುದ್ಧ ದೂರು

    ಬೆಂಗಳೂರು: ಆರೋಪಿ ನವೀನ್‌ ವಿರುದ್ಧ ದೂರು ನೀಡಿದ್ದ ವ್ಯಕ್ತಿಯೇ ಈಗ ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದಾರೆ.

    ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಕ್ಕೆ ನವೀನ್‌ ವಿರುದ್ಧ ಫಿರ್ದೋಸ್‌ ಪಾಶಾ ನೀಡಿದ್ದರು. ಆದರೆ ಈಗ ತನ್ನ ಸ್ಕೂಟರ್‌ ಅನ್ನು ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ 1981 ಮತ್ತು ಐಪಿಸಿ ಸೆಕ್ಷನ್‌ 143, 145, 144, 147, 148, 149, 435 ಅಡಿ ಪ್ರಕರಣ ದಾಖಲಾಗಿದೆ. 75 ಸಾವಿರ ರೂ. ಮೌಲ್ಯ ನಷ್ಟವಾಗಿದೆ ಎಂದು ಫಿರ್ದೋಶ್‌ ಪಾಶಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಕೇರಳ ಲಿಂಕ್

    ದೂರಿನಲ್ಲಿ ಏನಿದೆ?
    ಆಗಸ್ಟ್‌ 11 ರ ಸಂಜೆ 7:30ಕ್ಕೆ ನಾನು ನನ್ನ ಹೊಂಡಾ ಆಕ್ವೀವಾವನ್ನು ಡಿಜೆ ಹಳ್ಳಿ ಠಾಣೆಯಲ್ಲಿ ನಿಲ್ಲಿಸಿ ದೂರು ನೀಡಲು ಬಂದಿದ್ದೆ. ಈ ವೇಳೆ ಸುಮಾರು ಜನ ಠಾಣೆಯ ಒಳಗಡೆ ಬಂದು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಆಕ್ಟೀವಾವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ 9 ಗಂಟೆಗೆ ಜಮಾಯಿಸಿದ ಜನ ನನ್ನ ಸ್ಕೂಟರ್‌ ಅನ್ನು ಸುಟ್ಟು ಹಾಕಿದ್ದಾರೆ. ಗಲಭೆಯಾದ ದಿನದಂದು 144 ಸೆಕ್ಷನ್‌ ಜಾರಿಯಾದ ಕಾರಣ ನನಗೆ ಆ ದಿನವೇ ದೂರು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಈ ದಿನ ದೂರು ನೀಡುತ್ತಿದ್ದೇನೆ. ನನ್ನ ಸ್ಕೂಟರನ್ನು ಸುಟ್ಟು ಹಾಕಿ ನಾಶ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ.

    ಎಫ್‌ಬಿ ಪೋಸ್ಟ್‌ ನೆಪ?
    ನವೀನ್‌ ವಿರುದ್ಧವೇ ದೂರು ನೀಡಿದ ಫಿರ್ದೋಸ್ ಪಾಶಾ ಅವರೇ ಗಲಾಟೆ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು ಈ ಪ್ರಕರಣ ಮತ್ತಷ್ಟು ಟ್ವಿಸ್ಟ್‌ ಸಿಕ್ಕಿ ಹಲವು ಪ್ರಶ್ನೆಗಳು ಎದ್ದಿದೆ. ದೂರು ಕೊಟ್ಟವರು ಹಾಗೂ ಗಲಾಟೆ ಮಾಡಿದವರಿಗೂ ಸಂಬಂಧ ಇಲ್ಲವೇ? ನವೀನ್ ಪೋಸ್ಟ್‌ಗೂ ಗಲಾಟೆಗೂ ಸಂಬಂಧವೆ ಇಲ್ಲವೇ? ಫೇಸ್‌ಬುಕ್‌ ಪೋಸ್ಟ್‌ ಎಂಬುದು ನೆಪ ಮಾತ್ರವೇ ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.