Tag: Fatima Sana

  • Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    ದುಬೈ: ಮಹಿಳಾ ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಟೀಂ ಇಂಡಿಯಾ ಇಂದು (ಭಾನುವಾರ) ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.

    ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳೆಯರ ಟೀಂ ಇಂಡಿಯಾ, ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನವನ್ನು ಎದುರಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದ ವನಿತೆಯರು ಸೋಲನುಭವಿಸಿದ್ದರು. ನಂತರ ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

    ಶುಕ್ರವಾರ ಕೀವಿಸ್‌ ವಿರುದ್ಧ ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವೈಫಲ್ಯದಿಂದ 58 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡವು ಈಗ ಕಳಪೆ ನೆಟ್‌ ರನ್‌ರೇಟ್‌ ಹೊಂದಿದ್ದು, 5 ತಂಡಗಳಿರುವ ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ.

    ಪಾಕ್‌ ವಿರುದ್ಧ ಪಂದ್ಯ ಸೇರಿ ಇನ್ನೂ ಒಟ್ಟು 3 ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಈ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವ ಅಗತ್ಯ ಇದೆ. ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಕದನವಾಗಿದೆ. ಒಂದು ವೇಳೆ ಪಾಕ್‌ ವಿರುದ್ಧ ಸೋತರೆ ಭಾರತ ಸೆಮಿಫೈನಲ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

    ಭಾರತ-ಪಾಕಿಸ್ತಾನ ನಡುವೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇದು 8 ನೇ ಪಂದ್ಯ. ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ 5 ರಲ್ಲಿ ಜಯ ಸಾಧಿಸಿದ್ದು, 2ರಲ್ಲಿ ಸೋಲನುಭವಿಸಿದೆ. ಇಂದು ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.

    ಟೀಂ ಇಂಡಿಯಾ ಆಟಗಾರರು: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೇಟ್‌ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್‌.

    ಪಾಕ್‌ ಆಟಗಾರರು: ಮುನೀಬಾ ಅಲಿ (ವಿಕೇಟ್‌ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ಕ್ಯಾಪ್ಟನ್), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.‌

  • T20 World Cup | ಪಾಕ್ ತಂಡಕ್ಕೆ 22ರ ತರುಣಿ ಫಾತಿಮಾ ಸನಾ ನಾಯಕಿ!

    T20 World Cup | ಪಾಕ್ ತಂಡಕ್ಕೆ 22ರ ತರುಣಿ ಫಾತಿಮಾ ಸನಾ ನಾಯಕಿ!

    ಕರಾಚಿ: ಮುಂಬರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ( Womens T20 World Cup) ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿಯನ್ನಾಗಿ 22 ವರ್ಷದ ಫಾತಿಮಾ ಸನಾ (Fatima Sana) ಅವರನ್ನು ಪಿಸಿಬಿ (PCB) ನೇಮಿಸಿದೆ.

    ಅಕ್ಟೋಬರ್ 3 ರಿಂದ 20ರ ವರೆಗೆ ಯುಎಇಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಪಾಕ್ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ಈ ಹಿಂದೆ ತಂಡದ ನಾಯಕಿಯಾಗಿದ್ದ 37 ವರ್ಷದ ನಿದಾ ದಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ನಿದಾ ದಾರ್ ನಾಯಕತ್ವದಲ್ಲಿ ಕಳೆದ ತಿಂಗಳು ಮುಕ್ತಾಯಗೊಂಡ ಮಹಿಳೆಯರ ಏಷ್ಯಾ ಕಪ್‍ನಲ್ಲಿ ಪಾಕ್ ತಂಡ ಸೆಮಿಫೈನಲ್‍ನಲ್ಲಿ ಹೊರಬಿದ್ದಿತ್ತು. ಇದಕ್ಕೂ ಮುನ್ನ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಕ್ ತಂಡ ಸೋಲು ಕಂಡಿತ್ತು. ಹೀಗಾಗಿ ಅವರನ್ನು ತಂಡದ ನಾಯಕತ್ವದಿಂದ ಇಳಿಸಲಾಗಿದೆ. ಆದರೆ ಟಿ20 ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

    ಫಾತಿಮಾ ಪಾಕ್ ಪರ ಇದುವರೆಗೆ 41 ಏಕದಿನ ಮತ್ತು 40 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದೇಶೀಯ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಕ್ರೈಸ್ಟ್‌ಚರ್ಚ್‌ನಲ್ಲಿ ಕಿವೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ನಾಯಕತ್ವ ವಹಿಸಿದ್ದರು, ಆ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಿತ್ತು.

    ಟಿ20 ವಿಶ್ವಕಪ್‍ಗೆ ಪಾಕ್ ಮಹಿಳಾ ತಂಡ:
    ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ (ವಿಕೆಟ್ ಕೀಪರ್), ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‍ನೆಸ್‍ಗೆ ಒಳಪಟ್ಟಿರುತ್ತದೆ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ತಸ್ಮಿಯಾ ರುಬಾಬ್ ಮತ್ತು ತುಬಾ ಹಸನ್. ಟ್ರಾವೆಲಿಂಗ್ ಮೀಸಲು: ನಜಿಹಾ ಅಲ್ವಿ (ವಿಕೆಟ್-ಕೀಪರ್); ಮೀಸಲು ಆಟಗಾರ್ತಿ ರಮೀನ್ ಶಮೀಮ್ ಮತ್ತು ಉಮ್-ಎ-ಹನಿ.