Tag: Fastag

  • ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ವರ್ಷಕ್ಕೆ 5 ಸಾವಿರ ಉಳಿತಾಯ – ವಾರ್ಷಿಕ ಟೋಲ್‌ ಪಾಸ್‌ | ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಖಾಸಗಿ ಕಾರು, ಜೀಪ್‌, ವ್ಯಾನ್‌ ಹೊಂದ್ದಿದ್ದೀರಾ? ಹಾಗಾದ್ರೆ ನಿಮಗೆ ಸಿಹಿಸುದ್ದಿ. 3 ಸಾವಿರ ರೂ. ವಾರ್ಷಿಕ ಟೋಲ್‌ ಪಾಸ್‌ (Annual Toll Pass) ಬಿಡುಗಡೆಯಾಗಿದೆ. ಈ ಪಾಸ್‌ ಬಿಡುಗಡೆಯಾದ ಬೆನ್ನಲ್ಲೇ ಹಲವು ಪ್ರಶ್ನೆಗಳು ನಿಮಗೆ ಬರಬಹುದು. ಹೀಗಾಗಿ ನೀವು ಕೇಳಬಹುದಾದ ಎಲ್ಲಾ ಪ್ರಶ್ನೆ, ಅನುಮಾನಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.

    ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಎಂದರೇನು?
    ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪ್ರಿಪೇಯ್ಡ್ ಪಾಸ್ ಅನ್ವಯವಾಗುತ್ತದೆ. ಈಗ ಟೋಲ್‌ ಪಾವತಿಗಳಿಗಾಗಿ ಫಾಸ್ಟ್‌ಟ್ಯಾಗ್ ಕಾರ್ಡ್‌ಗಳಲ್ಲಿರುವ ಹಣ ಖಾಲಿಯಾದರೆ ಪದೇ ಪದೇ ರೀಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಪಾಸ್‌ ತಗೆದುಕೊಂಡರೆ ಪದೇ ಪದೇ ರಿಚಾರ್ಜ್‌ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಅನುಮತಿಸುತ್ತದೆ.

    ವಾರ್ಷಿಕ ಪಾಸ್ ಎಲ್ಲಿ ಬಳಸಬಹುದು?
    ಇದು ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE) ಟೋಲ್‌ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರದ ನಿರ್ಮಿಸಿದ ಎಕ್ಸ್‌ಪ್ರೆಸ್‌ವೇ ಅಥವಾ ಖಾಸಗಿಯಾಗಿ ನಿರ್ಮಿಸಿದ ರಸ್ತೆಯಲ್ಲಿ(ಉದಾಹರಣೆ ಬೆಂಗಳೂರಿನ ನೈಸ್‌ ರಸ್ತೆ) ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್‌ನೊಂದಿಗೆ ಉಚಿತ ಪ್ರವೇಶವನ್ನು ಪಡೆಯಲು ಸಾಧ್ಯವಿಲ್ಲ.

    ಎಲ್ಲಿ ಖರೀದಿಸಬಹುದು?
    ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲು ಮೀಸಲಾದ ಲಿಂಕ್ ರಾಜಮಾರ್ಗ್ ಯಾತ್ರಾ ಅಪ್ಲಿಕೇಶನ್‌ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವೆಬ್‌ಸೈಟ್‌ಗಳಲ್ಲಿಯೂ ಲಭ್ಯವಿದೆ.

    ಪಾಸ್ ಹೇಗೆ ಸಕ್ರಿಯವಾಗುತ್ತದೆ?
    ಪಾಸ್ ಅನ್ನು ಸಕ್ರಿಯಗೊಳಿಸಲು ವಾಹನ ಮತ್ತು FASTag ಅನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ 3,000 ರೂ. ಪಾವತಿಸಬಹುದು. ಪಾವತಿಯ ನಂತರ ಎರಡು ಗಂಟೆಗಳಲ್ಲಿ ಪಾಸ್‌ ಸಕ್ರಿಯವಾಗುತ್ತದೆ. ಒಂದು ವೇಳೆ ಫಾಸ್ಟ್‌ಟ್ಯಾಗ್‌ ಬ್ಲ್ಯಾಕ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದರೆ ವಾರ್ಷಿಕ ಪಾಸ್‌ ಸಿಗುವುದಿಲ್ಲ

    ಅಸ್ತಿತ್ವದಲ್ಲಿರುವ ಬಳಕೆದಾರರು ಹೊಸ FASTag ಅನ್ನು ಖರೀದಿಸಬೇಕೇ?
    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಈಗಾಗಲೇ ತಮ್ಮ ವಾಹನಗಳಲ್ಲಿ FASTag ಹೊಂದಿರುವವರು ಹೊಸ FASTag ಅನ್ನು ಖರೀದಿಸುವ ಅಗತ್ಯವಿಲ್ಲ. ಈ ಪಾಸ್ ಅನ್ನು ನಿಮ್ಮ ಅಸ್ತಿತ್ವದಲ್ಲಿರುವ ಒಂದರಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಹೀಗಿದ್ದರೂ ವಾರ್ಷಿಕ ಪಾಸ್ ಪಡೆಯಲು FASTag ನ KYC ಅತ್ಯಗತ್ಯ.

    ಎಷ್ಟು ಟ್ರಿಪ್‌ಗಳನ್ನು ಮಾಡಬಹುದು?
    FASTag ವಾರ್ಷಿಕ ಪಾಸ್ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಅಥವಾ 200 ಟ್ರಿಪ್‌ಗಳನ್ನು ಅನುಮತಿಸುತ್ತದೆ. ಒಂದು ವರ್ಷ ಅಥವಾ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅದು ಹಿಂದಿನಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.  ಇದನ್ನೂ ಓದಿ: ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

    ಹೇಗೆ ಲೆಕ್ಕ ಹಾಕಲಾಗುತ್ತದೆ?
    ಒಂದು ಟೋಲ್‌ ದಾಟಿದರೆ ಒಂದು ಟ್ರಿಪ್‌ ಎಂದು ಎಣಿಕೆ ಮಾಡಲಾಗುತ್ತದೆ. ಮತ್ತೊಮ್ಮೆ ಅದೇ ಟೋಲ್‌ ಬಳಸಿ ಮರಳಿದರೆ ಎರಡು ಟ್ರಿಪ್‌ ಎಂದು ಪರಿಗಣಿಸಲಾಗುತ್ತದೆ.

    ಯಾವ ವಾಹನಗಳಿಗೆ ಸಿಗುತ್ತೆ?
    VAHAN ಡೇಟಾಬೇಸ್ ಮೂಲಕ ಪರಿಶೀಲಿಸಿದ ಬಳಿಕ ಖಾಸಗಿ ವಾಣಿಜ್ಯೇತರ ಕಾರು/ಜೀಪ್/ವ್ಯಾನ್‌ಗಳಿಗೆ ಮಾತ್ರ ವಾರ್ಷಿಕ ಪಾಸ್ ಅನ್ವಯಿಸುತ್ತದೆ. ಯಾವುದೇ ವಾಣಿಜ್ಯ ವಾಹನದಲ್ಲಿ ಬಳಸಿದರೆ ಸೂಚನೆ ಇಲ್ಲದೆ ತಕ್ಷಣ ನಿಷ್ಕ್ರಿಯಗೊಳಿಸಲಾಗುತ್ತದೆ.

    ಪಾಸ್‌ಗೆ ಯಾರು ಅರ್ಹರಲ್ಲ?
    ಚಾಸಿಸ್ ಸಂಖ್ಯೆಯನ್ನು ಬಳಸಿಕೊಂಡು FASTag ನೋಂದಾಯಿಸಿದ್ದರೆ ನಿಮಗೆ ಪಾಸ್‌ ಸಿಗುವುದಿಲ್ಲ. ಇದಕ್ಕಾಗಿ ನೀವು ವಾಹನ ನೋಂದಣಿ ಸಂಖ್ಯೆಯನ್ನು (VRN) ನವೀಕರಿಸಬೇಕಾಗುತ್ತದೆ. ಅಲ್ಲದೇ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.

    ಪ್ರಯೋಜನಗಳೇನು?
    ಟೋಲ್ ತೆರಿಗೆಯಲ್ಲಿ ಒಬ್ಬರು 5,000 ರಿಂದ 7,000 ರೂ.ಗಳನ್ನು ಉಳಿಸಬಹುದು. ಇದಲ್ಲದೆ ಪ್ರಯಾಣದ ಮಧ್ಯದಲ್ಲಿ ರೀಚಾರ್ಜ್ ಖಾಲಿಯಾಗುವ ಚಿಂತೆ ಇರುವುದಿಲ್ಲ.

    ಮತ್ತೊಂದು ವಾಹನಕ್ಕೆ ವರ್ಗಾಯಿಸಬಹುದೇ?
    ಇಲ್ಲ. ಹಾಗೆ ಮಾಡಿದ್ದರೆ ನಿಮ್ಮ ಪಾಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

    ವಾರ್ಷಿಕ ಪಾಸ್‌ಗೆ ಸಂಬಂಧಿಸಿದಂತೆ ಎಸ್‌ಎಂಎಸ್‌ ಬರುತ್ತಾ?
    ಪಾಸ್ ಸಕ್ರಿಯಗೊಳಿಸಿದ ಕೂಡಲೇ ನೊಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುತ್ತದೆ.

    ವಾರ್ಷಿಕ ಪಾಸ್ ಕಡ್ಡಾಯವೇ?
    ವಾರ್ಷಿಕ ಪಾಸ್ ಕಡ್ಡಾಯವಿಲ್ಲ. ಒಂದು ವೇಳೆ ವಾರ್ಷಿಕ ಪಾಸ್‌ ಪಡೆಯದವರು ಈಗ ಇರುವಂತೆ ಫಾಸ್ಟ್‌ಟ್ಯಾಗ್‌ ಬಳಸಿ ಟೋಲ್‌ ದಾಟಬಹುದು.

  • ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌

    ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌

    – 3,000 ರೂ.ಗೆ ಒಂದು ವರ್ಷ or 200 ಸಲ ಸಂಚಾರಕ್ಕೆ ಅವಕಾಶ

    ನವದೆಹಲಿ: 3,000 ರೂ. ಪಾವತಿಸಿ ದೇಶದ ಯಾವುದೇ ಟೋಲ್‌ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ಗೆ ಅನುಮತಿಸುವ ವಾರ್ಷಿಕ ಫಾಸ್ಟ್ಯಾಗ್‌ ಪಾಸ್‌ (FASTag Annual Pass) ಆ.15ರಿಂದ ಲಭಿಸಲಿದೆ.

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಫಾಸ್ಟ್‌ಟ್ಯಾಗ್‌ಗಳಿಗಾಗಿ ಹೊಸ ವಾರ್ಷಿಕ ಪಾಸ್ ಅನ್ನು ಜೂನ್‌ ತಿಂಗಳಲ್ಲಿ ಘೋಷಿಸಿತ್ತು. ಪಾಸ್‌ಗಳ ವಿತರಣಾ ಕಾರ್ಯಕ್ಕೆ ಆ.15ರಂದು ಚಾಲನೆ ಸಿಗಲಿದೆ. ಈ ಪಾಸ್‌ ಇದ್ದವರು, ಖಾಸಗಿ ಕಾರುಗಳು/ಜೀಪ್‌ಗಳು/ವ್ಯಾನ್‌ಗಳನ್ನು ಗೊತ್ತುಪಡಿಸಿದ ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಮೋಟಾರುಮಾರ್ಗ (NE) ಶುಲ್ಕ ಪ್ಲಾಜಾಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ ಹೋಗಬಹುದು. ಪ್ರತಿ ಬಾರಿ ಟೋಲ್‌ ಶುಲ್ಕ ಕೊಡುವುದು ತಪ್ಪುತ್ತದೆ. ಇದನ್ನೂ ಓದಿ: FAStag ವ್ಯವಹಾರ – ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ

    ವಾರ್ಷಿಕ ಪಾಸ್ ಆ.15 ರಿಂದ ಜಾರಿಗೆ ಬರಲಿದ್ದು, ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ, ದಟ್ಟಣೆ ಮತ್ತು ಸಂಘರ್ಷಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರ ಪರಿಣಾಮವಾಗಿ ಲಕ್ಷಾಂತರ ಖಾಸಗಿ ಕಾರು ಮಾಲೀಕರಿಗೆ ಅನುಕೂಲಕರ ಪ್ರಯಾಣದ ಅನುಭವ ಸಿಗುತ್ತದೆ.

    ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್‌ಗಳನ್ನು 3,000 ರೂ.ಗಳಿಗೆ ನವೀಕರಿಸುವ ಮೂಲಕ ಮಾನ್ಯತೆಯ ಅವಧಿ ಮುಗಿಯುವವರೆಗೆ ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬಹುದು. ಈ ಪಾಸ್‌ಗಳ ಮಾನ್ಯತೆಯ ಅವಧಿ ಮುಗಿದಾಗ, ಬಳಕೆದಾರರು ಪ್ರಸ್ತುತ ಫಾಸ್ಟ್ಯಾಗ್ ವ್ಯವಸ್ಥೆಯಂತೆ ಅವುಗಳನ್ನು ರೀಚಾರ್ಜ್ ಮಾಡಬಹುದು.‌ ಇದನ್ನೂ ಓದಿ: PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಮೋಟಾರ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಪ್ರವೇಶಿಸಬಹುದು. ಮೋಟಾರು ಮಾರ್ಗಗಳು, ರಾಜ್ಯ ಹೆದ್ದಾರಿಗಳು (SH) ಮತ್ತು ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಅಧಿಕಾರಿಗಳು ನಿಯಂತ್ರಿಸುವ ಇತರ ಸ್ಥಳಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿನ ಶುಲ್ಕ ಪ್ಲಾಜಾಗಳಲ್ಲಿ ಇದು ಸಾಮಾನ್ಯ ಫಾಸ್ಟ್ಯಾಗ್‌ನಂತೆ ಕಾರ್ಯನಿರ್ವಹಿಸುತ್ತದೆ.

  • PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    PublicTV Explainer: ಫಾಸ್ಟ್ಯಾಗ್ 3,000 ರೂ. ವಾರ್ಷಿಕ ಪಾಸ್‌ – ನಿಮಗೆ ಲಾಭನಾ, ನಷ್ಟನಾ?

    – ಎಲ್ಲಾ ಟೋಲ್ ಪ್ಲಾಜಾಗಳು ವಾರ್ಷಿಕ ಪಾಸ್ ಅಡಿ ಬರುತ್ತವೆಯೇ?
    – ಈಗಾಗಲೇ ಫಾಸ್ಟ್ಯಾಗ್ ಇರುವವರು ಏನು ಮಾಡಬೇಕು?

    ಭಾರತ ಸರ್ಕಾರವು ಖಾಸಗಿ ವಾಹನಗಳಿಗಾಗಿ ಹೊಸ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದೆ. 3000 ರೂ. ಕೊಟ್ಟರೆ ಒಂದು ವರ್ಷದ ಅವಧಿಗೆ ನಿಮ್ಮ ಫಾಸ್ಟ್ಯಾಗ್ ಮಾನ್ಯವಾಗಿರುತ್ತದೆ. ಖಾಸಗಿ ವಾಹನ ಮಾಲೀಕರಿಗೆ ವೆಚ್ಚವನ್ನು ಕಡಿಮೆ ಮಾಡುವುದು, ಹೆದ್ದಾರಿಗಳಲ್ಲಿನ ದಟ್ಟಣೆಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ವಾಹನ ಮಾಲೀಕರಿಗೆ ಸಾಮಾನ್ಯವಾಗಿ ಫಾಸ್ಟ್ಯಾಗ್ ಬಗ್ಗೆ ತಿಳಿದೇ ಇರುತ್ತದೆ. ಆದರೆ, ಕೇಂದ್ರದ ವಾರ್ಷಿಕ ಪಾಸ್ ಪರಿಕಲ್ಪನೆ ಏನು? ಅದರಿಂದಾಗುವ ಪ್ರಯೋಜನವೇನು? ವಾರ್ಷಿಕ ಪಾಸ್‌ಗೆ ಇರುವ ನಿಯಮಗಳೇನು? ಮೊದಲಾದ ಪ್ರಶ್ನೆಗಳಿಗೆ ಪೂರ್ಣ ವಿವರ ಇಲ್ಲಿದೆ.

    ಫಾಸ್ಟ್ಯಾಗ್ ಎಂದರೇನು?
    ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ಟೋಲ್ ಶುಲ್ಕ ಪಾವತಿ ತ್ರಾಸದಾಯಕವಾಗಿತ್ತು. ಈ ಪ್ರಕ್ರಿಯೆಯಿಂದ ಟ್ರಾಫಿಕ್ ಜಾಮ್ ಕೂಡ ಹೆಚ್ಚಾಗುತ್ತಿತ್ತು. ಇದನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಸೌಲಭ್ಯವೊಂದನ್ನು ಪರಿಚಯಿಸಿತು. ಅದೇ ‘ಫಾಸ್ಟ್ಯಾಗ್’ ಸೌಲಭ್ಯ. ಇದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯ. ಇದನ್ನು ಕಾರು ಮುಂಭಾಗದ ಗಾಜಿಗೆ ಅಂಟಿಸಲಾಗುತ್ತದೆ. ನಗದು ರಹಿತ ಮತ್ತು ತ್ವರಿತವಾಗಿ ಟೋಲ್ ಶುಲ್ಕ ಪಾವತಿಸಲು ಇದು ಸಹಕಾರಿಯಾಯಿತು. ಟೋಲ್‌ನಲ್ಲಿ ಹೆಚ್ಚಿನ ಸಮಯ ನಿಂತು ಹಣ ಪಾವತಿಸುವ ಕಿರಿಕಿರಿ ತಪ್ಪಿದಂತಾಯಿತು. ಇದನ್ನೂ ಓದಿ: ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಹಣ ಪಾವತಿ ಹೇಗೆ?
    ವಾಹನ ಮುಂಭಾಗದ ಗಾಜಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಆಧಾರಿತ ಫಾಸ್ಟ್ಯಾಗ್ ಅಂಟಿಸಲಾಗುತ್ತದೆ. ರೇಡಿಯೋ ಫ್ರೀಕ್ವೆನ್ಸಿ ಮೂಲಕ ಈ ಟ್ಯಾಗ್ ಸ್ಕ್ಯಾನ್ ಆಗಲಿದೆ. ಬಳಿಕ ನಿಮ್ಮ ಖಾತೆಯಿಂದ ಹಣ ಕಡಿತವಾಗಲಿದೆ. ಇದಕ್ಕೆ ನಿಮ್ಮ ಖಾತೆಯಲ್ಲಿ ಮುಂಗಡ ಹಣ ಇರಬೇಕು. ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಈ ಫಾಸ್ಟಾö್ಯಗ್ ಸೌಲಭ್ಯ ನೀಡಲಾಗುತ್ತಿದೆ. ಫಾಸ್ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ. ಜೊತೆಗೆ ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಟ್ಯಾಗ್ ರೀಡ್ ಮಾಡುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ.

    ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತೆ?
    ಟೋಲ್ ಪ್ಲಾಜಾದೊಳಗೆ ಸೆನ್ಸಾರ್ ಸ್ಥಾಪಿಸಲಾಗಿರುತ್ತದೆ. ವಾಹನವು ಟೋಲ್ ಪ್ಲಾಜಾದೊಳಗೆ ಬಂದಾಗ, ಆ ಸೆನ್ಸಾರ್ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಿರುವ ಫಾಸ್ಟ್ಯಾಗ್ ಅನ್ನು ಟ್ರ್ಯಾಕ್ ಮಾಡುತ್ತದೆ. ನಿಮ್ಮ ಖಾತೆಯಿಂದ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಇದಕ್ಕಾಗಿ ನೀವು ಮುಂಚಿತವಾಗಿಯೇ ನಿಮ್ಮ ಪ್ರಿಪೇಯ್ಡ್ ಫಾಸ್ಟ್ಯಾಗ್ ಖಾತೆಯಲ್ಲಿ ಹಣ ಜಮೆ ಮಾಡಿರಬೇಕು.

    ಯಾವ್ಯಾವ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಸಿಗುತ್ತೆ?
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಐಸಿಐಸಿಐ, ಹೆಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಯೆಸ್ ಬ್ಯಾಂಕ್, ಪಂಜಾಬ್ & ಮಹಾರಾಷ್ಟ್ರ ಬ್ಯಾಂಕ್ ಸಹಕಾರಿ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರತ್ವತ್ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ವಾರ್ಷಿಕ ಪಾಸ್ ಯಾವಾಗಿನಿಂದ ಜಾರಿ?
    ಆಗಸ್ಟ್ 15ರಿಂದ ಜಾರಿಗೆ ಬರುತ್ತದೆ.

    ಯಾವ ವಾಹನಗಳಿಗೆ ಪಾಸ್ ಸಿಗುತ್ತೆ?
    ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಕಾರು, ಜೀಪ್, ವ್ಯಾನ್‌ಗಳು ಪಾಸ್ ಪಡೆದುಕೊಳ್ಳಬಹುದು.

    ನಿಯಮ ಏನು?
    ಫಾಸ್ಟ್ಯಾಗ್ ಆಧಾರಿತ ಪಾಸ್‌ಗಳು ಒಂದು ವರ್ಷ ಅವಧಿ ಅಥವಾ 200 ಟ್ರಿಪ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.

    ಫಾಸ್ಟ್ಯಾಗ್ ವಾರ್ಷಿಕ ಪಾಸ್ ಯೋಜನೆ ಎಂದರೇನು?
    ಫಾಸ್ಟ್ಟ್ಯಾಗ್ ಎನ್ನುವುದು ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ಸಾಮಾನ್ಯವಾಗಿ ಕಾರಿನ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ. ಇದನ್ನು 2014 ರಲ್ಲಿ ಪೈಲಟ್ ಯೋಜನೆಯಾಗಿ ಪ್ರಾರಂಭಿಸಲಾಯಿತು. 2021 ರಲ್ಲಿ ದೇಶದ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ಕಡ್ಡಾಯಗೊಳಿಸಲಾಯಿತು.

    ಈ ವಾರ್ಷಿಕ ಪಾಸ್ ಪಡೆದು ದೇಶದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿ (NH) ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ (NE) ಶುಲ್ಕ ಪ್ಲಾಜಾಗಳಲ್ಲಿ ನಿರ್ದಿಷ್ಟ ಅವಧಿಗೆ ಪ್ರತಿ ಟ್ರಿಪ್‌ಗೆ ಬಳಕೆದಾರ ಶುಲ್ಕವಿಲ್ಲದೆ ಖಾಸಗಿ ಕಾರು, ಜೀಪ್ ಅಥವಾ ವ್ಯಾನ್ ಅನ್ನು ಉಚಿತವಾಗಿ ಸಾಗಿಸಬಹುದು. ಇದನ್ನೂ ಓದಿ: FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ವಾರ್ಷಿಕ ಪಾಸ್ 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ ನಂತರ ಅಥವಾ ಒಂದು ವರ್ಷದ ಅವಧಿ ಮುಗಿದ ನಂತರ ಅದು ಸ್ವಯಂಚಾಲಿತವಾಗಿ ನಿಯಮಿತ FASTagಗೆ ಮರಳುತ್ತದೆ. ಒಂದು ವರ್ಷದ ಅವಧಿ ಮುಗಿಯದಿದ್ದರೂ, 200 ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಬಳಕೆದಾರ ಪಾಸ್‌ನ್ನು ಮತ್ತೆ ಖರೀದಿಸಬೇಕಾಗುತ್ತದೆ.

    delhi ncr toll plaza

    ಪಾಸನ್ನು ಬೇರೆಯವರು ಉಪಯೋಗಿಸಬಹುದೇ?
    ಪಾಸ್ ಅನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. FASTag ಅಂಟಿಸಿದ ಮತ್ತು ನೋಂದಾಯಿಸಿದ ವಾಹನಕ್ಕೆ ಮಾತ್ರ ಇದು ಮಾನ್ಯವಾಗಿರುತ್ತದೆ.

    ಟ್ರಿಪ್ ಲೆಕ್ಕಾಚಾರ ಹೇಗೆ?
    ಒಂದು ಟೋಲ್ ಪ್ಲಾಜಾವನ್ನು ದಾಟಿದರೆ ಅದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಹೋದ ಮಾರ್ಗದಲ್ಲೇ ಮತ್ತೆ ವಾಪಸ್ ಬರುವುದಾದರೆ ಎರಡು ಟ್ರಿಪ್‌ಗಳಾಗಿ ಕೌಂಟ್ ಮಾಡಲಾಗುತ್ತದೆ.

    ಪಾಸ್‌ನಿಂದ ನಿಮಗೆ ಲಾಭನಾ?
    ನೀವು ನಿಯಮಿತ ಪ್ರಯಾಣಿಕರಾಗಿದ್ದರೆ, ಮಾಸಿಕ ಟೋಲ್ ಪಾಸ್‌ಗೆ 340 ರೂ. (ಅದು ಕೂಡ ಕೇವಲ ಒಂದು ಟೋಲ್ ಪ್ಲಾಜಾಗೆ.) ಪಾವತಿಸುತ್ತೀರಿ. 12 ತಿಂಗಳಲ್ಲಿ, ನೀವು 4,080 ರೂ. ಪಾವತಿಸಬೇಕಾಗುತ್ತದೆ. ಆದರೆ, ನೀವು ವಾರ್ಷಿಕ ಪಾಸ್ ಅನ್ನು ತೆಗೆದುಕೊಂಡರೆ, ನೀವು 3,000 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಇದರಿಂದ ಉಳಿತಾಯವೂ ಸಾಧ್ಯವಾಗುತ್ತದೆ.

    FASTag ವಾರ್ಷಿಕ ಪಾಸ್ ಕಡ್ಡಾಯವೇ?
    ಇಲ್ಲ, ವಾರ್ಷಿಕ ಪಾಸ್ ಕಡ್ಡಾಯವಲ್ಲ. ಪಾಸ್ ಪಡೆಯದ ಬಳಕೆದಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಿ ಪ್ರಯಾಣಿಸಬಹುದು.

    ಪಾಸ್ ಪಡೆಯೋದು ಹೇಗೆ?
    ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್‌ಮಾರ್ಗ್ ಯಾತ್ರಾ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಎನ್‌ಹೆಚ್‌ಎಐ ಮತ್ತು ಎಂಒಆರ್‌ಟಿಹೆಚ್ ಅಂತರ್ಜಾಲ ಪುಟಗಳಲ್ಲೂ ಲಭ್ಯ.

    ಈಗಾಗಲೇ FASTag ಇರುವವರು ಏನು ಮಾಡಬೇಕು?
    ಈಗಾಗಲೇ FASTag ಹೊಂದಿರುವವರು ಹೊಸ ಪಾಸನ್ನು ಖರೀದಿಸುವ ಅಗತ್ಯವಿಲ್ಲ. ವಾರ್ಷಿಕ ಪಾಸ್ ಅನ್ನು ಅಸ್ತಿತ್ವದಲ್ಲಿರುವ FASTagನಲ್ಲಿ ಸಕ್ರಿಯಗೊಳಿಸಬಹುದು.

    ಎಲ್ಲಾ ಟೋಲ್ ಪ್ಲಾಜಾಗಳು ಪಾಸ್ ಅಡಿಯಲ್ಲಿ ಬರುತ್ತವೆಯೇ?
    ಇಲ್ಲ, ಇದು ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್‌ವೇ ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಎಕ್ಸ್‌ಪ್ರೆಸ್‌ವೇಗಳು, ರಾಜ್ಯ ಹೆದ್ದಾರಿಗಳಿಗೆ ಪಾಸ್ ಅನ್ವಯಿಸುವುದಿಲ್ಲ.

    ಪ್ರಯೋಜನ ಏನು?
    * 60 ಕಿಮೀ ವ್ಯಾಪ್ತಿಯಲ್ಲಿನ ಟೋಲ್ ಪ್ಲಾಜಾಗಳು ಮತ್ತು ಟೋಲ್ ಪಾವತಿ ಸರಳೀಕರಣ.
    * ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯ ತಗ್ಗಲಿದೆ.
    * ಒತ್ತಡ ಮತ್ತು ಟೋಲ್ ಸಿಬ್ಬಂದಿ ಜೊತೆಗಿನ ಅನಗತ್ಯ ವಿವಾದ ತಪ್ಪಿಸಬಹುದು.
    * ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆಯಲಿದೆ.
    * ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗುತ್ತದೆ.

  • ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    ಜನರಿಗೆ ಗುಡ್ ನ್ಯೂಸ್ – 3 ಸಾವಿರಕ್ಕೆ ವಾರ್ಷಿಕ ಟೋಲ್‌ ಪಾಸ್‌!

    – ಟೋಲ್ ಕಿರಿಕ್‌ಗೆ ಬ್ರೇಕ್ ಹಾಕಲು ಜಾರಿ
    – ಆಗಸ್ಟ್ 15 ರಿಂದ ಜಾರಿ ಎಂದ ಗಡ್ಕರಿ

    ನವದೆಹಲಿ: ಟೋಲ್ (Toll) ಕಿರಿ ಕಿರಿಗೆ ಬ್ರೇಕ್ ಹಾಕಲು ಫಾಸ್ಟ್ ಟ್ಯಾಗ್ (FASTag) ಆಧಾರಿತ ಪಾಸ್‌ ಅನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

    3 ಸಾವಿರ ರೂಪಾಯಿಗೆ ವಾರ್ಷಿಕ ಟೋಲ್‌ ಪಾಸ್‌ (Toll Pass) ನೀಡಲು ಸರ್ಕಾರ ಮುಂದಾಗಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ (Nitin Gadkari) ಘೋಷಿಸಿದ್ದಾರೆ.

    ನಿತಿನ್‌ ಗಡ್ಕರಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಫಾಸ್ಟ್‌ ಟ್ಯಾಗ್‌ ಆಧರಿತ ವಾರ್ಷಿಕ ಪಾಸ್‌ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಗಡ್ಕರಿ ಹೇಳಿದ್ದೇನು?
    ನಾವು 3 ಸಾವಿರ ರೂ.ಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಆಗಸ್ಟ್ 15, 2025 ರಿಂದ ಜಾರಿಗೆ ಬರುತ್ತದೆ. ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿರುತ್ತದೆ. ಇದನ್ನೂ ಓದಿ: ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಈ ಪಾಸ್ ಅನ್ನು ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ನವೀಕರಣಕ್ಕಾಗಿ ಮೀಸಲಾದ ಲಿಂಕ್ ಅನ್ನು ಶೀಘ್ರದಲ್ಲೇ ರಾಜ್‌ಮಾರ್ಗ್ ಯಾತ್ರಾ ಅಪ್ಲಿಕೇಶನ್‌ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

    ಈ ಪಾಸ್‌ನಿಂದ 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗಲಿದೆ. ಟೋಲ್‌ಗಳಲ್ಲಿ ಕಾಯುವ ಸಮಯ ಮತ್ತು ದಟ್ಟಣೆ ಕಡಿಮೆ ಯಾಗಲಿದೆ.

    ಟೋಲ್ ಪ್ಲಾಜಾಗಳಲ್ಲಿ ವಿವಾದಗಳು ಕಡಿಮೆಯಾಗಲಿದ್ದು ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ಸುಗಮ ಪ್ರಯಾಣದ ಅನುಭವವನ್ನು ವಾರ್ಷಿಕ ಪಾಸ್ ನೀಡಲಿದೆ.

  • FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    FASTag ಬ್ಯಾಲೆನ್ಸ್‌ ಇಲ್ಲದೇ ಇದ್ರೆ ದುಪ್ಪಟ್ಟು ದಂಡ: ಇಂದಿನಿಂದ ಏನೇನು ಬದಲಾವಣೆ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ನವದೆಹಲಿ: ಟೋಲ್‌ (Toll) ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್‌ಟ್ಯಾಗ್‌ (FASTag) ಸಕ್ರಿಯವಾಗಿದೆಯೋ ಇಲ್ವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.

    ಹೌದು. ಕಡಿಮೆ ಬ್ಯಾಲೆನ್ಸ್‌, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಕಪ್ಟುಪಟ್ಟಿಗೆ (Black List) ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಇಂದಿನಿಂದ(ಫೆ.17) ಜಾರಿಗೆ ಬಂದಿದೆ.

    ರಾಷ್ಟ್ರೀಯ ಪಾವತಿ ನಿಗಮ (NPCI) ಟೋಲ್ ಸಂಗ್ರಹಕ್ಕಾಗಿ ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಬಳಕೆದಾರರು ದುಪ್ಪಟ್ಟು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಶವ – ಪತ್ನಿ, ಮಕ್ಕಳಿಗೆ ವಿಷ ನೀಡಿ ನೇಣಿಗೆ ವ್ಯಕ್ತಿ ಶರಣು!

     

    ನಿಯಮ ಏನು ಬದಲಾವಣೆ?
    1. ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್‌ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು.
    2. ಕಡಿಮೆ ಬ್ಯಾಲೆನ್ಸ್ ಅಥವಾ ತಾಂತ್ರಿಕ ಸಮಸ್ಯೆಗಳಿಂದಾಗಿ ಕಪ್ಪುಪಟ್ಟಿಗೆ ಸೇರಿಸಿದ್ದರೆ ಬಳಕೆದಾರರು ತಮ್ಮ ಖಾತೆಯನ್ನು ರೀಚಾರ್ಜ್ ಮಾಡಲು 70 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
    3. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್‌ ಆಪರೇಟರ್‌ ಅವರನ್ನೇ ಹೊಣೆ ಮಾಡಲಾಗುತ್ತದೆ.

    ಪಾವತಿಗಳನ್ನು ಯಾವಾಗ ತಿರಸ್ಕರಿಸಲಾಗುತ್ತದೆ?
    ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್‌ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಆ ಫಾಸ್ಟ್‌ಟ್ಯಾಗ್‌ ವಹಿವಾಟು ನಿರಾಕರಿಸಲಾಗುತ್ತದೆ. ಸಕ್ರಿಯ ಆಗಿರದೇ ಇದ್ದರೆ ಟೋಲ್‌ ಸಿಸ್ಟಮ್‌ನಲ್ಲಿ ‘ಎರರ್‌ ಕೋಡ್‌ 176’ ಎಂದು ತೋರಿಸಲಾಗುತ್ತದೆ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕಪ್ಪುಪಟ್ಟಿಗೆ ಸೇರಿಸಿದ ಫಾಸ್ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.

     

    FASTag ಕಪ್ಪುಪಟ್ಟಿಗೆ ಹೇಗೆ ಹೋಗುತ್ತೆ?
    – ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು.
    – ಟೋಲ್ ತೆರಿಗೆ ಪಾವತಿಸದಿರುವುದು.
    – ಪಾವತಿ ವೈಫಲ್ಯಗಳು.
    – ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ವಿವರಗಳನ್ನು ಸರಿಯಾಗಿ ನವೀಕರಣ ಮಾಡದೇ ಇರುವುದು.
    – ವಾಹನದ ಚಾಸಿಸ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯಲ್ಲಿನ ವ್ಯತ್ಯಾಸ.

    ಹಣ ಇಲ್ಲದೇ ಇದ್ದರೂ ಪ್ರವೇಶ:
    ಒಂದು ವೇಳೆ ಫಾಸ್ಟ್‌ಟ್ಯಾಗ್‌ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಇದ್ದರೂ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುತ್ತದೆ. ಟೋಲ್‌ ಪ್ರವೇಶವಾದ ಕೂಡಲೇ ‘ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ, ಅದನ್ನು ಕೂಡಲೇ ಭರ್ತಿ ಮಾಡಿ’ ಎಂಬ ಮೆಸೇಜ್‌ ಮೊಬೈಲ್‌ಗೆ ಬರುತ್ತದೆ. ಮಸೇಜ್‌ ಬಂದ ಬಂದ 10 ನಿಮಿಷದ ಒಳಗಡೆ ಅಗತ್ಯ ಹಣ ಹಾಕಿಕೊಂಡರೆ ಯಾವುದೇ ದಂಡ ಇರುವುದಿಲ್ಲ. ಇಲ್ಲದೇ ಇದ್ದಲ್ಲಿ ಟೋಲ್‌ ಶುಲ್ಕದ ಎರಡು ಪಟ್ಟು ಹಣ ಕಟ್ಟಬೇಕಾಗುತ್ತದೆ. ನೆಗೆಟಿವ್‌ ಬ್ಯಾಲೆನ್ಸ್‌ ಇದ್ದಲ್ಲಿ ಟೋಲ್ ಶುಲ್ಕವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ.

    15 ದಿನದ ಬಳಿಕ ದೂರು:
    ಹೆಚ್ಚುವರಿ ಹಣ ಕಡಿತ ಅಥವಾ ತಪ್ಪು ಶುಲ್ಕಕ್ಕೆ ಸಂಬಂಧಿಸಿ ಸವಾರರು 15 ದಿನಗಳ ಕೂಲಿಂಗ್‌ ಅವಧಿಯ ನಂತರ ಬ್ಯಾಂಕ್‌ಗಳಲ್ಲಿ ದೂರು ಸಲ್ಲಿಸಬಹುದಾಗಿದೆ.

    FASTag ಬಳಕೆದಾರರಿಗೆ ಪ್ರಮುಖ ಸಲಹೆಗಳು
    – FASTag ವ್ಯಾಲೆಟ್‌ನಲ್ಲಿ ಸಾಕಷ್ಟು ಹಣ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ, ಕನಿಷ್ಠ 100 ರೂ. ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳಿ.
    – ಬ್ಯಾಂಕಿನಿಂದ ಬರುವ SMS ಎಚ್ಚರಿಕೆಗಳು ಮತ್ತು ಮೆಸೇಜ್‌ಗಳನ್ನು ಗಮನಿಸಿ.
    – MyFASTag ಅಪ್ಲಿಕೇಶನ್ ಮೂಲಕ FASTag ಬ್ಯಾಲೆನ್ಸ್ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
    – ವಾಹನದ ವಿಂಡ್‌ಶೀಲ್ಡ್‌ನಲ್ಲಿ FASTag ಸ್ಟಿಕ್ಕರ್ ಅನ್ನು ಸರಿಯಾಗಿ ಅಂಟಿಸಿ.
    – ಸಮಸ್ಯೆಗಳನ್ನು ತಡೆಗಟ್ಟಲು ಪ್ರತಿ ವಾಹನಕ್ಕೆ ಒಂದೇ FASTag ಮಾತ್ರ ಬಳಸಿ.

     

  • ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್’ ನಿಯಮ ಜಾರಿ ಏಕೆ?

    ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್’ ನಿಯಮ ಜಾರಿ ಏಕೆ?

    ಪ್ರಿಲ್ 1, 2024ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್’ (One Vehicle One Fastag) ಯೋಜನೆಯನ್ನು ಜಾರಿಗೆ ತಂದಿದೆ. ಜನರು ಅನೇಕ ವಾಹನಗಳಿಗೆ ಕೇವಲ ಒಂದು ಫಾಸ್ಟ್ ಟ್ಯಾಗ್ ಅನ್ನು ಬಳಸುವುದನ್ನು ಅಥವಾ ಕೇವಲ ಒಂದು ವಾಹನದೊಂದಿಗೆ ಅನೇಕ ಫಾಸ್ಟ್ ಟ್ಯಾಗಗ್‌ಗಳನ್ನು ಲಿಂಕ್ ಮಾಡುವುದನ್ನು ತಡೆಯಲು ಈ ನಿಯಮವನ್ನು ಜಾರಿ ಮಾಡಲಾಗಿದೆ. ಜನರು ಈ ನಿಯಮವನ್ನು ಅನುಸರಿಸಲು NHAI ಹೆಚ್ಚಿನ ಸಮಯವನ್ನು ನೀಡಿದೆ. ಏಕೆಂದರೆ ಪೇಟಿಯಂ ಫಾಸ್ಟ್ ಟ್ಯಾಗ್ ಬಳಕೆದಾರರು ಅದರಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್’ ನಿಯಮವು ಕೇವಲ ಒಂದು ವಾಹನಕ್ಕೆ ಅನೇಕ ಫಾಸ್ಟ್ ಟ್ಯಾಗ್‌ಗಳನ್ನು ಹೊಂದಿರುವ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ನಿಯಮಗಳನ್ನು ಉಲ್ಲಂಘಿಸುತ್ತದೆ. ಅಲ್ಲದೆ ಕೆಲವು ಚಾಲಕರು ಅಗತ್ಯವಿರುವ ನೋ ಯುವರ್ ಕಸ್ಟಮರ್ (ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಫಾಸ್ಟ್ ಟ್ಯಾಗ್ ಬಳಸುತ್ತಿದ್ದಾರೆ. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಈ ನಿಯಮವು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

    ಪ್ರತಿ ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್:
    ಈ ನಿಯಮದ ಪ್ರಕಾರ, ಜನರು ತಮ್ಮ ಮಾಲೀಕತ್ವದ ಪ್ರತಿ ವಾಹನಕ್ಕೆ ಒಂದು ಫಾಸ್ಟ್ ಟ್ಯಾಗ್ ಅನ್ನು ಮಾತ್ರ ಹೊಂದಬಹುದು. ಅವರು ತಮ್ಮ ಬಳಿ ಇರುವ ಯಾವುದೇ ಹಳೆಯ ಫಾಸ್ಟ್ ಟ್ಯಾಗ್ ಗ್‌ಗಳನ್ನು ತಮ್ಮ ಬ್ಯಾಂಕ್‌ಗಳಿಗೆ ಹಿಂತಿರುಗಿಸಬೇಕು ಮತ್ತು ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್’ ನಿಯಮವನ್ನು ಅನುಸರಿಸಬೇಕು.

    ಫಾಸ್ಟ್ ಟ್ಯಾಗ್‌ನ ಕೆವೈಸಿಗೆ ಅಂತಿಮ ದಿನಾಂಕ:
    ಫಾಸ್ಟ್ ಟ್ಯಾಗ್ ಕೆವೈಸಿಯನ್ನು ನವೀಕರಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಫಾಸ್ಟ್ ಟ್ಯಾಗ್ ಕೆವೈಸಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಆರ್‌ಬಿಐ ನಿಯಮಗಳ ಪ್ರಕಾರ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಎನ್‌ಹೆಚ್‌ಎಐ ಫಾಸ್ಟ್ ಟ್ಯಾಗ್ ಬಳಕೆದಾರರಿಗೆ ತಿಳಿಸಿದೆ.

    ಪ್ರತಿ ವಾಹನಕ್ಕೆ ಒಂದು ಫಾಸ್ಟ್ ಟ್ಯಾಗ್:
    ನಿಮ್ಮ ವಾಹನದ ನೋಂದಣಿ ಸಂಖ್ಯೆಗೆ ನೀವು ಒಂದು ಸಕ್ರಿಯ ಫಾಸ್ಟ್ ಟ್ಯಾಗ್ ಅನ್ನು ಮಾತ್ರ ಲಿಂಕ್ ಮಾಡಬಹುದು. ಅದೇ ವಾಹನಕ್ಕೆ ಲಿಂಕ್ ಮಾಡಲಾದ ಯಾವುದೇ ಹೆಚ್ಚುವರಿ ಫಾಸ್ಟ್ ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

    ಫಾಸ್ಟ್ ಟ್ಯಾಗ್ ರೀಚಾರ್ಜ್:
    ನಿಮ್ಮ ಫಾಸ್ಟ್ ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ನೀವು ಯಾವುದೇ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್, ನೆಟ್ ಬ್ಯಾಂಕಿಂಗ್, ಯುಪಿಐ ಅಥವಾ ಬಿಬಿಪಿಎಸ್ (ಭಾರತ್ ಬಿಲ್ ಪಾವತಿ ವ್ಯವಸ್ಥೆ) ಬಳಸಿಕೊಂಡು ರೀಚಾರ್ಜ್ ಮಾಡಬಹುದು. ನಿಮ್ಮ ವಾಹನಕ್ಕೆ ಎಷ್ಟು ಫಾಸ್ಟ್ ಟ್ಯಾಗ್‌ಗಳನ್ನು ಲಿಂಕ್ ಮಾಡಲಾಗಿದೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಎಟಿಸಿ) ವೆಬ್‌ಸೈಟ್ ಅಥವಾ ನಿಮ್ಮ ಫಾಸ್ಟ್ ಟ್ಯಾಗ್ ವಿತರಕರ ಬ್ಯಾಂಕ್‌ನ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

    ಸಕ್ರಿಯ ಫಾಸ್ಟ್ ಟ್ಯಾಗ್‌ಗಾಗಿ ಕೆವೈಸಿ:
    ನೀವು ಬಳಸುತ್ತಿರುವ ಫಾಸ್ಟ್ ಟ್ಯಾಗ್ ಕೆವೈಸಿ ಕಂಪ್ಲೀಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಅಪೂರ್ಣ ಕೆವೈಸಿಯಿಂದ ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೂ ಟೋಲ್ ಕಡಿತಕ್ಕೆ ಕಾರಣವಾಗಬಹುದು. ನಿಮ್ಮ ಫಾಸ್ಟ್ ಟ್ಯಾಗ್ ಕೆವೈಸಿ ಅಪೂರ್ಣವಾಗಿದ್ದರೆ, ಅದನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಅಥವಾ ಶಾಖೆಗೆ ಭೇಟಿ ನೀಡಿ ನವೀಕರಿಸಿಕೊಳ್ಳಿ.

    ಒಂದು ಫಾಸ್ಟ್ ಟ್ಯಾಗ್‌ನ ಪ್ರಯೋಜನಗಳು:
    ಈ ಹೊಸ ನಿಯಮವು ಟೋಲ್ ಬೂತ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಎಲ್ಲರಿಗೂ ಸುಗಮ ಪ್ರಯಾಣಕ್ಕೆ ಕಾರಣವಾಗುತ್ತದೆ.

    ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ನೀವು ಭಾರತದಾದ್ಯಂತ ಹೆದ್ದಾರಿಗಳಲ್ಲಿ ತೊಂದರೆ-ಮುಕ್ತ ಫಾಸ್ಟ್ ಟ್ಯಾಗ್ ಅನುಭವವನ್ನು ಪಡೆಯಬಹುದು. ನಿಮ್ಮ ಟೋಲ್‌ವೇ ಪ್ರಯಾಣವನ್ನು ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿಸಲು ‘ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್ʼ ನಿಯಮವನ್ನು ಅನುಸರಿಸಿ.

  • ಗರಿಷ್ಠ ಮಟ್ಟ ತಲುಪಿದ ಫಾಸ್ಟ್‌ಟ್ಯಾಗ್  ಟೋಲ್ – ಏಪ್ರಿಲ್‍ನಲ್ಲಿ 193.15 ಕೋಟಿ ಸಂಗ್ರಹ

    ಗರಿಷ್ಠ ಮಟ್ಟ ತಲುಪಿದ ಫಾಸ್ಟ್‌ಟ್ಯಾಗ್  ಟೋಲ್ – ಏಪ್ರಿಲ್‍ನಲ್ಲಿ 193.15 ಕೋಟಿ ಸಂಗ್ರಹ

    ನವದೆಹಲಿ: ಫಾಸ್ಟ್‌ಟ್ಯಾಗ್ (FASTag) ದೈನಂದಿನ ಟೋಲ್ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಮಂಗಳವಾರ ತಿಳಿಸಿದೆ.

    ಫಾಸ್ಟ್‌ಟ್ಯಾಗ್  ವ್ಯವಸ್ಥೆಯ ಮೂಲಕ ದೈನಂದಿನ ಟೋಲ್ ಸಂಗ್ರಹವು ಏ. 29 ರಂದು ಸಾರ್ವಕಾಲಿಕ ಗರಿಷ್ಠ 193.15 ಕೋಟಿ ರೂ. ತಲುಪಿದೆ. ಒಂದೇ ದಿನದಲ್ಲಿ 1.16 ಕೋಟಿ ವಹಿವಾಟುಗಳು ದಾಖಲಾಗಿದೆ. ಭಾರತದಲ್ಲಿ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಅನುಷ್ಠಾನ ಉತ್ತಮ ಬೆಳವಣಿಗೆಯೊಂದಿಗೆ ಯಶಸ್ಸನ್ನು ಕಂಡಿದೆ ಎಂದು ಪ್ರಾಧಿಕಾರ (NHAI) ಹೇಳಿಕೊಂಡಿದೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

    ದೇಶದಾದ್ಯಂತ 50 ಕ್ಕೂ ಹೆಚ್ಚು ನಗರಗಳಲ್ಲಿ 140 ಕ್ಕೂ ಹೆಚ್ಚು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್‍ಟ್ಯಾಗ್ ವ್ಯವಸ್ಥೆ ಮಾಡಿದೆ. ಅಲ್ಲದೆ ತಡೆರಹಿತ ಪ್ರಯಾಣ ಮತ್ತು ಸುರಕ್ಷಿತ ಪಾವತಿಯನ್ನು ಸುಗಮಗೊಳಿಸಿದೆ. ಫಾಸ್ಟ್‌ಟ್ಯಾಗ್ ಕಾರ್ಯಕ್ರಮದ ಅಡಿಯಲ್ಲಿ ಟೋಲ್ ಪ್ಲಾಜಾಗಳ (Toll Plazas) ಸಂಖ್ಯೆಯು 339 ರಾಜ್ಯ ಟೋಲ್ ಪ್ಲಾಜಾಗಳನ್ನು ಒಳಗೊಂಡಂತೆ 770 ರಿಂದ 1,228 ಕ್ಕೆ ಏರಿಕೆ ಮಾಡಲಾಗಿದೆ.

    ಹೆದ್ದಾರಿ‌ (Expressways) ಬಳಕೆದಾರರಿಂದ ಫಾಸ್ಟ್‌ಟ್ಯಾಗ್‌ನ ಅಳವಡಿಕೆ ಟೋಲ್ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಿದೆ. ಭಾರತದ ಹೆದ್ದಾರಿ ಮೂಲಸೌಕರ್ಯದಲ್ಲಿ ಮತ್ತಷ್ಟು ಹೂಡಿಕೆ ಅಗತ್ಯವಿದೆ ಎಂದು ಪ್ರಾಧಿಕಾರ ಹೇಳಿದೆ.

    ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣಾ ಬೂತ್‍ಗಳಲ್ಲಿ ವಾಹನ ಸವಾರಾರು ನಿಲ್ಲಿಸದೆಯೇ ಟೋಲ್ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಅನುಕೂಲವಾಗಿದೆ. ಫೆ.2021 ರಲ್ಲಿ ಸರ್ಕಾರ ಕಮರ್ಶಿಯಲ್ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿತು.

    ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಹೆಚ್ಚಾಗುತ್ತಿದೆ. 2019 ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗುತ್ತಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿತ್ತು.  ಇದನ್ನೂ ಓದಿ: ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

  • ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

    ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

    ರಾಮನಗರ: ವಾಹನ ಸವಾರನ ಮೇಲೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ (Bengaluru Mysuru Expressway) ಕಣಿಮಿಣಿಕೆ ಟೋಲ್ ಪ್ಲಾಜಾ (Kaniminike toll plaza) ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

    ತಣಿಸಂದ್ರ (Thanisandra) ನಿವಾಸಿ ವಿಶ್ವನಾಥ್ ಎಂಬವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಫಾಸ್ಟ್ ಟ್ಯಾಗ್‍ನಲ್ಲಿ (FASTag) ಹಣ ಕಡಿತವಾಗದ ವಿಚಾರಕ್ಕೆ ವಿಶ್ವನಾಥ್ ಹಾಗೂ ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿ ಒಟ್ಟಾಗಿ ಸೇರಿ ವಿಶ್ವನಾಥ್ ಅವರಿಗೆ ಥಳಿಸಿದ್ದಾರೆ. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?

    ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕುಂಬಳಗೂಡು (Kumbalagodu) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಿಳಾ ಸಮಾನತೆ ಸಾರಿದ ನೆಲದಲ್ಲಿ ಪುರುಷರದ್ದೇ ದರ್ಬಾರ್

  • FASTag ನಿಂದ ಹಣ ಕದಿಯುತ್ತಾರೆ – ಫೇಕ್‌ ವೀಡಿಯೋ ಶೇರ್‌ ಮಾಡಬೇಡಿ

    FASTag ನಿಂದ ಹಣ ಕದಿಯುತ್ತಾರೆ – ಫೇಕ್‌ ವೀಡಿಯೋ ಶೇರ್‌ ಮಾಡಬೇಡಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಫಾಸ್ಟ್‌ಟ್ಯಾಗ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಖಾತೆಯಿಂದ ಹಣವನ್ನು ವಂಚನೆ ಮಾಡಲಾಗುತ್ತದೆ ಎಂಬ ಸಂದೇಶವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ ಈ ವೀಡಿಯೋ ಫೇಕ್‌ ಆಗಿದ್ದು ಈ ರೀತಿಯ ಯಾವುದೇ ವಂಚನೆ ಆಗುವುದಿಲ್ಲ ಎಂದು FASTag NETC ತಿಳಿಸಿದೆ.

    https://twitter.com/Bikash63/status/1540285101598134273

    ವೀಡಿಯೋದಲ್ಲಿ ಏನಿದೆ?
    ಕಾರು ಸ್ವಚ್ಛ ಮಾಡುವ ನೆಪದಲ್ಲಿ ಬಾಲಕನೊಬ್ಬ ಮುಂದುಗಡೆಯ ಗ್ಲಾಸ್‌ ಕ್ಲೀನ್‌ ಮಾಡುತ್ತಿರುತ್ತಾನೆ. ಫಾಸ್ಟ್‌ ಟ್ಯಾಗ್‌ ಇರುವ ಜಾಗದಲ್ಲಿ ತನ್ನ ಬಲಕೈಯಲ್ಲಿರುವ ವಾಚ್ ಅನ್ನು ತಂದು ಸ್ಕ್ಯಾನ್‌ ಮಾಡುತ್ತಾನೆ. ಕೂಡಲೇ ಈ ಫಾಸ್ಟ್‌ ಟ್ಯಾಗ್ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತದೆ ಎಂದು ಕಾರಿನಲ್ಲಿರುವ ವ್ಯಕ್ತಿ ಹೇಳುತ್ತಾನೆ.

    ಸರ್ಕಾರ ಹೇಳಿದ್ದು ಏನು?
    ಆಯಾ ಭೌಗೋಳಿಕ ಸ್ಥಳಗಳಿಂದ ಮಾತ್ರ NPCI ಯಿಂದ ನೋಂದಾಯಿತರಾದವರು (ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು) ಮಾತ್ರ ಫಾಸ್ಟ್‌ಟ್ಯಾಗ್‌ ವಹಿವಾಟು ನಡೆಸುತ್ತಾರೆ. ಯಾವುದೇ ಅನಧಿಕೃತ ಸಾಧನ ಬಳಸಿ FASTag ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳ ನಡೆಸಲು ಸಾಧ್ಯವಿಲ್ಲ ಎಂದು NETC FASTag ಸ್ಪಷ್ಟಪಡಿಸಿದೆ.

    FASTag ನಲ್ಲಿ RFID( ರೇಡಿಯೋ ತರಂಗಾಂತರ ಗುರುತಿಸುವಿಕೆ ಅಥವಾ Radio-frequency identification) ಇರುತ್ತದೆ. ಬ್ಯಾಂಕ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಪ್ರತ್ಯೇಕ ಯುಪಿಐ ಐಡಿ ಇರುತ್ತದೆ.

    Live Tv

  • ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    – 100 ಮೀ.ಗೂ ಹೆಚ್ಚು ಸರದಿ ನಿಂತರೆ ಶುಲ್ಕ ಪಾವತಿಸುವಂತಿಲ್ಲ
    – ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಅನ್ವಯ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಪ್ರತಿ ವಾಹನದ ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರದಿರುವುದನ್ನು ಖಾತರಿಪಡಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ತಿಳಿಸಿದೆ.

    ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಪ್ರಾಧಿಕಾರ, ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರುವಂತಿಲ್ಲ. ಅಲ್ಲದೆ ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಗಿಂತ ಹೆಚ್ಚು ವಾಹನಗಳ ಸರದಿ ನಿಲ್ಲಲು ಅವಕಾಶವಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್ ಗಿಂತ ಹೆಚ್ಚಾದರೆ ಟೋಲ್ ಬೂತ್ ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗಿನ ವಾಹನಗಳು ಟೋಲ್ ಪಾವತಿಸದೆ ಸಂಚರಿಸಬಹುದು.

    ಟೋಲ್ ಬೂತ್ ನಲ್ಲಿ ಪ್ರತಿಯೊಂದು ಟೋಲ್ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗುತ್ತದೆ. ಒಂದು ವೇಳೆ 100 ಮೀಟರ್‍ಗೂ ಅಧಿಕ ಸರದಿ ನಿಂತರೆ ಈ ಹಳದಿ ಪಟ್ಟಿ ಒಳಗಿನ ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸಬಹುದಾಗಿದೆ. ಇದು ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಫಾಸ್ಟ್ಯಾಗ್ ಅಳವಡಿಸದ ವಾಹನಗಳಿಗೆ ವೇಟಿಂಗ್ ಪಿರಿಯಡ್ ನಿಯಮ ಅನ್ವಯವಾಗುವುದಿಲ್ಲ ಎಂದು ಎನ್‍ಎಚ್‍ಎಐ ಸ್ಪಷ್ಟಪಡಿಸಿದೆ.

    2021ರ ಫೆಬ್ರವರಿ ಮಧ್ಯದಿಂದೀಚೆಗೆ ಟೋಲ್ ಪ್ಲಾಜಾಗಳನ್ನು ಎನ್‍ಎಚ್‍ಎಐ ಶೇ.100ರಷ್ಟು ನಗದುರಹಿತ ವಹಿವಾಟನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಎನ್‍ಎಚ್‍ಎಐ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಪ್ರಮಾಣ ಶೇ.96ರಷ್ಟು ಮತ್ತು ಹಲವು ಪ್ಲಾಜಾಗಳಲ್ಲಿ ಶೇ.99ರಷ್ಟಿದೆ. ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಫ್ಲಾಜಾಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನಗಳ ಅಂದಾಜು ಮಾಡಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಪರಿಣಾಮಕಾರಿ ಟೋಲ್ ಸಂಗ್ರಹ ವ್ಯವಸ್ಥೆಗೆ ಒತ್ತು ನೀಡಲಾಗಿದೆ.